(ಒಂದು ಲಘು ಲಘು ಲಘು ಬರಹ)
(ಚಿತ್ರ: ಸಾಮಾಜಿಕ ಜಾಲತಾಣದಿಂದ)
ಹಾಗಂತ 'ಇದುವರೆಗೆ ಸದಾ ಯುವ ರಾಜರಾಗಿರುವ' ಯುವ ರಾಜರು ಹೇಳಿದಾಗ.... ಇದೇಕೆ ಹೀಗೆ ಮೂರು ಬಾರಿ 'ಟಕಾಟಕ್' ಅಂತ ಹೇಳಿದರು? ಒಂದೇ ಬಾರಿ ಟಕಾಟಕ್ ಅಂತ ಹೇಳಬಹುದಿತ್ತಲ್ಲ?
ಅಂತ ಮೂರು ಬಾರಿ ಯೋಚಿಸಿ, ಯೋಚಿಸಿ, ಯೋಚಿಸಿ...ತಲೆ ಕೆಟ್ಟು, ತ್ರಿಮೂರ್ತಿಗಳನ್ನು ನೆನೆದು, ಮುಕ್ಕೋಟಿ (ಅಥವಾ 33 ಕೋಟಿ!!?) ದೇವತೆಗಳನ್ನು ಸ್ಮರಿಸಿ, ಮೂರನೆ ದಿನ 'ಮೂರು' ಎಂಬ ಸಂಖ್ಯೆಯನ್ನು ಇಟ್ಟುಕೊಂಡು ಸಂಖ್ಯಾ ವಿಕ್ರಮಾದಿತ್ಯ, ಮೂರ್ಕಾಲ ಜ್ಞಾನಿ ಶ್ರೀ ಶ್ರೀ ಶ್ರೀ ಮೇಲುಕೊಪ್ಪ ಅನಾರ್ಯವರ್ದಿಯ ಬಳಿ ಹೋದೆ!!!
ಎರಡು ಬಾರಿ ಅಪಾಯಿಂಟ್‌ಮೆಂಟೆ ಸಿಗದೆ, ಮೂರನೆ ಬಾರಿ ಹೋದಾಗ ಭೇಟಿಯಾದರು.
ಹೋದ ಕೂಡಲೆ ಕೇಳಿದ ಪ್ರಶ್ನೆಗೆ ಅವರು ಹೇಳಿದ್ದು "ಆ ಮೂರು ಪದಗಳಲ್ಲಿನ ಕೊನೆ ಅಕ್ಷರದವನೆ..." ಅಂದರು!!!
ಸಡನ್ ಆಗಿ "ಅರ್ಥ ಆಗಲಿಲ್ಲ ಅಂದೆ"
"ಕೊನೆ ಅಕ್ಷರ ಯಾವುದು?" ಅಂದರು
"ಕ" ಅಂದೆ.
ಎಷ್ಟು ಕ ?
'ಮೂರು ಕ' ಅಂದೆ.
ಅದನ್ನೇ ನಿನಗೆ ಹೇಳಿದ್ದು ಅಂದ್ರು. (ಅಲ್ಪ ಪ್ರಾಣಿ ಅರ್ಥ ಆಗಿರಲಿಲ್ಲ!!)
ಮುಂದುವರೆದ ಮೇಲುಕೊಪ್ಪ ಅನಾರ್ಯವರ್ಧಿಯವರು ಮೂರರ ಬಗ್ಗೆ ಹೇಳಿದ್ದು ಹೀಗೆ!!!:
**"
ಅದು ಸಮುದ್ರ ಮಂಥನದ ಸಮಯ.
ಸಮುದ್ರದಲ್ಲಿ ಮುಳುಗಿದ ಸ್ವರ್ಗದ ಸಂಪತ್ತೆಲ್ಲವನ್ನು ತೆಗೆಯಬೇಕಾಗಿತ್ತು.
ಸುಮಾರು ಯುಗಗಳ ಹಿಂದೆ. ಆಗಿನ್ನು ಜೆಸಿಬಿ, ಇಟಾಚಿ, ಕ್ರೇನ್, ರೋಬೋ-'ಕೈ' ಗಳು ಇರಲಿಲ್ಲ!! ಇದ್ದಿದ್ರೆ... ಟಕಾಟಕ್, ಟಕಾಟಕ್, ಟಕಾಟಕ್ ಅಂತ ಮೂರು ಬಾರಿ ಬಟನ್ ಒತ್ತಿದ್ರೆ... ಅಥವಾ ಮೈಕ್ ಹಿಡ್ಕೊಂಡು ಟಕಾಟಕ್, ಟಕಾಟಕ್, ಟಕಾಟಕ್ ಅಂತ ಗಟ್ಟಿಯಾಗಿ ಹೇಳಿದ್ರೂ ಎಲ್ಲ ಸಂಪತ್ತುಗಳು ಮಜ್ಜಿಗೆಯಲ್ಲಿ ಬೆಣ್ಣೆ ಬಂದ ಹಾಗೆ ಬರ್ತಿತ್ತೇನೋ!!! ಬ್ಯಾಡ್ ಲಕ್. ಟೆಕ್ನಾಲಜಿ ಅವತ್ತು ಅಷ್ಟು ಡೆವಲಪ್ ಆಗಿರಲಿಲ್ಲ!!. ಆಗ ರಾಕ್ಷಸರೋ, ದೇವತೆಗಳೋ ಎಲ್ಲವನ್ನೂ ಕೈ ಗಳಿಂದಲೇ ಮಾಡಬೇಕಿತ್ತು!!!
ಕಡಗೋಲಿನಲ್ಲಿ ಮೊಸರು ಕಡೆದು ಬೆಣ್ಣೆ ತೆಗೆದ ಹಾಗೆ ಕ್ಷೀರ ಸಾಗರದಿಂದ ಕಡೆದು ಕಡೆದು ಕಡೆದು, ಸಂಪತ್ತನ್ನು ಹೊರ ತೆಗೆಯಬೇಕಿತ್ತು. ತೆಗೆದ ಸಂಪತ್ತನ್ನು ದೇವತೆಗಳಿಗೆ ಮತ್ತು ರಾಕ್ಷಸರಿಗೆ ಮರು ಹಂಚಿಕೆ ಮಾಡಬೇಕಿತ್ತು!!!
ಮಂದಾರ ಪರ್ವತವನ್ನು ಕಿತ್ತು, ಅದನ್ನು ಕಡಗೋಲು ಮಾಡಲಾಯಿತು. ವಾಸುಕಿಯನ್ನೇ ಹಗ್ಗವಾಗಿಸಿ ಕಡಗೋಲಿಗೆ ಸುತ್ತಿ, ಒಂದು ಕಡೆ ದೇವತೆಗಳು, ಒಂದು ಕಡೆ ರಾಕ್ಷಸರು ಹಿಡಿದು ನಿಂತರು.
ಕಡಗೋಲನ್ನು ಹಾಲಿನ ಸಾಗರಕ್ಕೆ ಇಳಿಸುವಾಗ, ಕಡಗೋಲು ಮುಳುಗುವುದಕ್ಕೆ ಪ್ರಾರಂಭವಾಯಿತು. ಆಗ ವಿಷ್ಣು ಆಮೆ ಅವತಾರ ತಾಳಿ ಕಡಗೋಲಿನ ಅಡಿಗೆ ಹೋಗೆ ತೇಲುವಂತೆ ಮಾಡಿದ.
ಸರಿ, ಮಂಥನ ಶುರುವಾಯಿತು.
ಟಕಾಟಕ್ ಟಕಾಟಕ್ ಟಕಾಟಕ್ ಅಂತ ಐಸ್ಸಾsss ಕೂಗಿದರು.
ಎಲ್ಲರಿಗೂ ಬರುತ್ತಿರುವ ಸಂಪತ್ತಿನ ಕಡೆಗೆ ಲಕ್ಷ್ಯ !!!
ಕೈ ಯಿಂದ ಕಡಗೋಲಿನ ಹಾವನ್ನು ಹಿಡಿದು ಜೋರಾಗಿ ಎಳೆದಾಡಿದಾಗ ಬಂದಿದ್ದು ಕಾಳಕೂಟ!!! ಎಂಬ ವಿಷ!!!
ಕೈ ಗೆ ಬಂದಿದ್ದು ವಿಷ!!!
ಲೋಕಗಳನ್ನು ಸುಟ್ಟು ನಾಶಮಾಡುವ ಬೆದರಿಕೆ ಹಾಕುತ್ತದೆ ವಿಷ!!!. ಯಾರ ಕೈ ಯಲ್ಲೂ ತಡೆಯಲಾರದಂತಹ ವಿಷ!!!
ಬೆಂಕಿ ಮತ್ತು ವಿಷಕಾರಿ ಹೊಗೆ ಬಹುತೇಕ ಆಕಾಶದವರೆಗೆ ಏರಿತು. ಎಲ್ಲಾ ದೇವತೆಗಳು ಶಿವನನ್ನು ದೇವರನ್ನು ಪ್ರಾರ್ಥಿಸಿದರು, ಎಲ್ಲರಿಗೂ ಯೋಗಕ್ಷೇಮವನ್ನು ದಯಪಾಲಿಸುವ ಶಿವನು ತಕ್ಷಣವೇ ಶ್ರೀ ಹರಿಯನ್ನು ಮಂತ್ರದೊಂದಿಗೆ ಮೂರು ಮೂರು ಬಾರಿ ಸ್ಮರಣೆ ಮಾಡಿದನು:
ಓಂ ಅಚ್ಯುತಾಯ ನಮಃ
ಓಂ ಅನಂತಾಯ ನಮಃ
ಓಂ ಗೋವಿಂದಾಯ ನಮಃ ......,
ಈ ಮಂತ್ರ ಶಿವನಿಗೆ ಮಾರಣಾಂತಿಕ ವಿಷವನ್ನು ಕುಡಿಯಲು ಮತ್ತು ನಿಭಾಯಿಸಲು ಅಧಿಕಾರ ನೀಡಿತು. ಅವನ ಗಂಟಲು ವಿಷವನ್ನು ಹೊಂದಿದ್ದರಿಂದ ಅದು ನೀಲಿ ಬಣ್ಣಕ್ಕೆ ತಿರುಗಿ ಅವನಿಗೆ "ನೀಲಕಂಠ" ಎಂಬ ಹೆಸರನ್ನು ನೀಡಿತು. ಭಗವಂತನ ಮೂರು ನಾಮಗಳು "ನಾಮ ತ್ರಯ ಮಂತ್ರ" ಎಂದು ಪ್ರಸಿದ್ಧವಾದವು,
ಮೂರು ಬಾರಿ ಶ್ರದ್ದೆ, ಭಕ್ತಿ, ನಂಬಿಕೆಯಿಂದ ಹೇಳಬೇಕು ಈ ಮಂತ್ರವನ್ನು ಪಠಿಸಿದರೆ, ದೈಹಿಕ, ಮಾನಸಿಕ ಅಥವಾ ಬೌದ್ಧಿಕವಾಗಿ ಯಾವುದೇ ಪ್ರತಿಕೂಲತೆಯನ್ನು ನಿಭಾಯಿಸಲು, ಪಾಪವನ್ನು ಕಳೆಯಲು ಸಹಾಯ ಮಾಡುತ್ತದೆ. ಸಂಚಿತ ಖಾತೆಗೆ ಪುಣ್ಯ ಎಂಬ ಹಣ ಬೀಳಬೇಕಾದರೆ
ಓಂ ಅಚ್ಯುತಾಯ ನಮಃ
ಓಂ ಅನಂತಾಯ ನಮಃ
ಓಂ ಗೋವಿಂದಾಯ ನಮಃ ......ಎಂದು ನಾಮ ತ್ರಯ ಮಂತ್ರವನ್ನು ಶ್ರದ್ದೆ, ಭಕ್ತಿ, ನಂಬಿಕೆಯಿಂದ ನಿತ್ಯ ಪಠಿಸಬೇಕು.
*
ರಾಮ ರಾಮ ರಾಮ ಅಂತ ಮೂರು ಬಾರಿ ಶ್ರದ್ದೆ, ಭಕ್ತಿ, ನಂಬಿಕೆಯಿಂದ ರಾಮ ನಾಮ ಪಠಿಸಿದರೆ ಅದು ವಿಷ್ಣು ಸಹಸ್ರ ನಾಮಕ್ಕೆ ಸಮ ಅಂತ ಅದೇ ನೀಲಕಂಠ ತನ್ನ ಮನೋರಮೆ ಪಾರ್ವತಿಗೆ ಹೇಳಿದ್ದಾನಂತೆ
ರಾಮ ರಾಮ ರಾಮೇತಿ
ರಮೇ ರಾಮೇ ಮನೋರಮೇ ।
ಸಹಸ್ರನಾಮ ತತ್ತುಲ್ಯಂ
ರಾಮನಾಮ ವರಾನನೇ ॥
**
ವಿಷಯ ಇಷ್ಟೆ, ಯಾವುದೇ ಮಂತ್ರ ಎಫೆಕ್ಟಿವ್ ಆಗಿ ಕೆಲಸ ಮಾಡಬೇಕಾದರೆ ಮೂರು ಬಾರಿ ಪಠಿಸಬೇಕಂತೆ. ನಾಮತ್ರಯ ಆಗಬೇಕಂತೆ.
ಟಕಾಟಕ್ ಅಂತ ಒಂದು ಬಾರಿ ಹೇಳಿದರೆ ಆಗಲ್ಲ!!! ಮೂರು ಬಾರಿ ಹೇಳಬೇಕು!!
ಟಕಾ ಟಕಾ ಟಕಾಯಿಸು,
ಲಗಾ ಲಗಾ ಲಗಾಯಿಸು ಅಂತ ಹ್ಯಾಟ್ರಿಕ್ ಹೀರೋ ಶಿವಣ್ಣ (ಶಿವ ರಾಜ್ ಕುಮಾರ್ -ಗಡಿಬಿಡಿ ಕೃಷ್ಣ ಸಿನಿಮಾ) ಮೂರು ಮೂರು ಬಾರಿ 'ಟಕಾ', 'ಲಗಾ' ಹೇಳಿದ್ದರಿಂದ ಹೀರೋಯಿನ್ ಲವ್ ಮಾಡೋಕೆ ಒಪ್ಪಿಕೊಂಡಿದ್ದು!! ಮದುವೆ ಆಗಿ ಮೂರು ಗಂಟಿನ, ಮೂರೆಳೆ ಕರಿಮಣಿ ಸರದ ಮಾಲಿಕ ಆಗಿದ್ದು.
ಜಾದೂಗಾರರು
"ಅಬ್ರಕದಬ್ರ, ಅಬ್ರಕದಬ್ರ, ಅಬ್ರಕದಬ್ರ,
ಗಿಲಿ-ಗಿಲಿ-ಗಿಲಿ, ಫೋಕಸ್,
ಫೋಕಸ್, ಫೋಕಸ್ ಅಂತ ಮೂರು ಮೂರು ಬಾರಿ ಜಾದುವಿನ ನಾಮ ತ್ರಯ ಮಹಾ ಮಂತ್ರ ಜಪ ಹೇಳಿದರೆ, ಸುಟ್ಟ ಕಾಗದದ ಬೂದಿಯಿಂದ ಹೊಸಾ ಗರಿ ಗರಿ ಗರಿ ನೋಟು ಜಾದುಗಾರನ ಕೈ ಯಿಂದ ಮುನ್ನೂರ ಮೊವತ್ತಮೂರು ನೋಟುಗಳಾಗಿ ಕೆಳಗೆ ಬೀಳುತ್ತವೆ. ಗೌರವ ಸಂಭಾವನೆಯಾಗಿ ಅಷ್ಟೇ ಹಣ ಅವರ ಅಕೌಂಟಿಗೂ ಹೋಗುತ್ತದೆ!!!
ಟಕಾಟಕ್
ಟಕಾಟಕ್
ಟಕಾಟಕ್
ಅಂತ ಹೇಳಬೇಕು!! ಹಾಗೆ ಹೇಳಿದರೆ ಮಾತ್ರ, "ಪ್ರತೀ ತಿಂಗಳು ಮೂರನೇ ತಾರೀಕು ₹.8333.33 ಪ್ರತೀ ಕುಟುಂಬದ ಓರ್ವ ಮಹಿಳೆಯ ಖಾತೆಗೆ ಬೀಳುತ್ತೆ". ಯುವರಾಜರು ಹೇಳಿದ್ದು ಹಾಗೆ.
(ಇಲ್ಲಿ ವರ್ಷಕ್ಕೆ 1,00,000 ಎಂದು ಹೇಳಿದ್ದು, ತಿಂಗಳಿಗೆ ₹.8,500 ಎಂದು ಹೇಳಿದ್ದಾರೆ. ತಿಂಗಳಿಗೆ ₹.8,500 ಆದರೆ ಹನ್ನೆರಡು ತಿಂಗಳಿಗೆ ಟೋಟಲ್ ₹.2,000 ಲೆಕ್ಕ ತಪ್ಪುತ್ತೆ!! ಹಾಗಾಗಿ ಅದು ₹.8,333.33 ಸರಿ. ಲೆಕ್ಕಾಚಾರದಲ್ಲಿ ಗ್ಯಾರಂಟಿ ಫಿಗರ್ ಇನ್ನೂ ಕ್ಲಿಯರ್ ಆಗಿಲ್ಲ!!)
ಶಾಪಿಂಗ್ ಹೋಗುವಾಗ ಗಂಡನ ಕೈಲಿ ಪಾಕೇಟ್ ಮನಿ ಒಂದು ಲಕ್ಷ ಬೇಕಾದರೂ
ಫಟಾಫಟ್
ಫಟಾಫಟ್
ಫಟಾಫಟ್
ಅಂತ ಮೂರು ಸರಿ ಹೇಳಬೇಕು!!!
ನಾಮ ತ್ರಯಕ್ಕೆ ಬೇರೆ ಅರ್ಥವೂ ಇದೆ, ಅದನ್ನಿಲ್ಲಿ ಮಾತಾಡುವುದು ಬೇಡ. !!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ