- ಶ್ರೀಮತಿ ಚೇತನಾ ಕುಲಕರ್ಣಿ
ರಾಷ್ಟ್ರ ಸುಖಸಮೃದ್ಧಿ ಸಂಪನ್ನವಾಗಬೇಕಾದರೆ ನಿಷ್ಕಳಂಕವಾದ ರಾಜನೀತಿ ಇರಬೇಕು. ದೇಶಭಕ್ತಿ ಇರಬೇಕು. ರಾಷ್ಟ್ರೀಯ ಮನೋಭಾವ ಎಲ್ಲರಲ್ಲಿಯೂ ಜಾಗೃತವಾಗಿರಬೇಕು. ಆಗ ಮಾತ್ರ ದೇಶದಲ್ಲಿ ಸಮಾನತೆ, ಜಾತಿ-ವರ್ಗದ್ವೇಷ ರಹಿತವಾಗಿ ಪ್ರತಿಯೊಬ್ಬರಲ್ಲಿಯೂ ಪರಸ್ಪರ ಪ್ರೇಮ ಆದರ, ನಿಷ್ಕಳಂಕ ಒಕ್ಕಟ್ಟು – ಬೆಳೆಯಲು ಸಾಧ್ಯವಾಗುತ್ತದೆ.ವನವಾಸದಲ್ಲಿದ್ದಾಗಲೂ ರಾಮನಿಗೆ ರಾಜ್ಯದ ಹಿತಚಿಂತನೆ ಇದ್ದಿತು.
ಯಾವ ಕಾಲಕ್ಕೂ ನಮ್ಮ ರಾಷ್ಟ್ರಕ್ಕೆ ಅವಶ್ಯವೆನಿಸುವ ರಾಜಕೀಯ, ಆರ್ಥಿಕ, ಧಾರ್ಮಿಕ, ಬೌದ್ಧಿಕ, ಸಾಮಾಜಿಕ, ನೈತಿಕ, ಶೈಕ್ಷಣಿಕ ಸಮಸ್ತ ವಿಷಯಗಳಿಗೆ ಮಾರ್ಗದರ್ಶಕವಾಗಿದೆ. ಅದಕ್ಕಾಗಿ ದೇಶದಲ್ಲಿ ರಾಜ್ಯ ಸೂತ್ರ ಹಿಡಿಯುವರು ಕಡ್ಡಾಯವಾಗಿ ರಾಮಾಯಣವನ್ನು ಓದಿ ಅರ್ಥೈಸಿಕೊಳ್ಳಬೇಕು.
ಶ್ರೀರಾಮ ಪುರುಷೋತ್ತಮನು ಎನ್ನಲು ವಾಲ್ಮೀಕಿ ಋಷಿಗಳು ರಚಿಸಿದ ಶ್ರೀಮದ್ರಾಮಾಯಣದಲ್ಲಿ ಕಾಣಬಹುದು. ರಾಮಾಯಣವ ಪರಮ ದಿವ್ಯ ಶ್ರೇಷ್ಠ ಗ್ರಂಥ. ಅನುಭವ ಮುಮುಕ್ಷುಗಳಿಗೂ ಅಗತ್ಯ. ಸರ್ವರಿಗೂ ಸೇವ್ಯವಾಗಿರುವ ಪಾವನಗಂಗೆ ಶ್ರೀರಾಮಾಯಣ.
ದೇಹದ ಕೊಳೆ ತಗೆಯಲು ಇದೇ ವಂಶದ ಭಗೀರಥನು ಗಂಗೆಯನ್ನು ಭೂಮಿಗೆ ತಂದರೆ ಇದೇ ವಂಶದ ಮು೦ದುವರಿದ ಕುಡಿಯಾದ ರಘುತಿಲಕ ಶ್ರೀ ರಾಮಚಂದ್ರರ ಜೀವನ ಚರಿತ್ರೆ ಆತ್ಮದ ಕೊಳೆ ತಗೆಯುತ್ತದೆ. ಸತ್ಕರ್ಮದ ಜಯವನ್ನು ಸಾರುವ ಮಹಾಕಾವ್ಯ ರಾಮಾಯಣ.
ರಾಜನಾಗಿದ್ದರೂ, ಪ್ರಭು ಶ್ರೀರಾಮನು ಸಾಮಾನ್ಯರಂತೆ ಜೀವನವು ಕಷ್ಟಗಳು, ನೋವು ಮತ್ತು ಸಂಕಟಗಳಿಂದ ತುಂಬಿತ್ತು. ಆದಾಗ್ಯೂ, ರಾಮನು ಅಸಾಧಾರಣ ಧೈರ್ಯ, ತಾಳ್ಮೆ, ಸದ್ಗುಣ, ಔದಾರ್ಯ ಮತ್ತು ಜೀವನದ ದೊಡ್ಡ ಸಂಕಟಗಳು ಇದ್ದರೂ ಸಂಯಮ ಮತ್ತು ಸ್ಥಿರಬುದ್ಧಿಯುಳ್ಳವನಾಗಿ, ಚಿತ್ತ ಚಾಂಚಲ್ಯವಿಲ್ಲದೆ ನಿರ್ಣಯದಾಯಕ ಧೀರಶೂರ ಕಾರ್ಯಶಾಲಿಯಾದವನು. ರಾಮಾಯಣದಿಂದ ಕಲಿಯಬಹುದಾದ ಕೆಲವು ಅತ್ಯಮೂಲ್ಯ ಜೀವನ ಪಾಠಗಳು ಇಲ್ಲಿವೆ.
ಸದ್ಗುಣಶೀಲ ರಾಜನಾಗಿ ತಮ್ಮ ನೈತಿಕ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ಪೂರೈಸಿದನು. ನಮ್ಮ ಜವಾಬ್ದಾರಿಗಳನ್ನು ಮತ್ತು ನೈತಿಕ ಕರ್ತವ್ಯಗಳನ್ನು ಅದೇ ಪ್ರಾಮಾಣಿಕತೆಯಿಂದ ಸಂಸಾರದಲ್ಲಿ ಕಾರ್ಯವನ್ನು ನಿಭಾಯಿಸಲು ಇದು ನಮಗೆ ಕಲಿಸುತ್ತದೆ.
ರಾಮನು ಸಂಬಂಧಗಳಲ್ಲಿ ಪ್ರಜೆಗಳಲ್ಲಿ ತೋರುವ ಪ್ರೀತಿ ಅಂತಃಕರಣ ನಮಗೆ ದಾರಿದಿಪವಾಗಿದೆ. ಹಾಗೇ ರೀತ ನೀತಿಯುಕ್ತ ಹಾದಿ ರಾಮಾಯಣದಲ್ಲಿ ರಾಮನ ಕಾರ್ಯಗಳು ನೈತಿಕ ಮೌಲ್ಯಗಳ ಮಹತ್ವವನ್ನು ಕಾಣಬಹುದು ಕಠಿಣ ಸಂದಿಗ್ಧತೆಗಳನ್ನು ಎದುರಿಸಿದಾಗಲೂ ಅವರು ಸದಾಚಾರದ ಆಧಾರದ ಮೇಲೆ ಆಯ್ಕೆಗಳನ್ನು ಪ್ರಭಾವ ಬಿರುತ್ತದೆ. ಪರಸ್ಪರರಲ್ಲಿ ಗೌರವ, ಸಮ್ಮಾನ ಸಮಾಜದಲ್ಲಿ ಬಾಳುವವುದಕ್ಕೆ ಕೈಕನ್ನಡಿಯಾಗಿದೆ ಶ್ರೀರಾಮರ ಜೀವನ ಚರಿತ್ರೆ.
ಎಂತಹ ಸ್ಥಿತಿ ಬಂದರೂ ಸತಿಪತಿಗಳಿಬ್ಬರು ಸಹಬಾಳ್ವೆಯಿಂದ ಇರಬೇಕು ಮತ್ತು ಒಡಹುಟ್ಟಿದವರು ದಾಯಾದಿಗಳಂತೆ ವರ್ತಿಸಬಾರದು ಎಂದು ತೋರಿಸಿಕೊಡುತ್ತದೆ. ರಾಮನು ಮಾತೆ ಸೀತೆಯನ್ನು ಹೆಚ್ಚು ಗೌರವಿಸಿದನು ಮತ್ತು ಅವಳ ಅಭಿಪ್ರಾಯಗಳು ಮತ್ತು ನಿರ್ಧಾರಗಳನ್ನು ಗೌರವಿಸಿದನು. ರಾಮ ಮತ್ತು ಸೀತೆ ಪರಸ್ಪರರು ತಮ್ಮ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಪೂರೈಸಿದರು. ಪತಿ ಮತ್ತು ರಾಜನಾಗಿ ತನ್ನ ಕರ್ತವ್ಯಕ್ಕೆ ಭಗವಾನ್ ರಾಮನ ಬದ್ಧತೆಯು ಗೌರವ ಮತ್ತು ಸಮಗ್ರತೆಯ ಜಗತ್ತಿಗೆ ಸಾರಿದರು.
ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ ಅವನ್ತಿಕಾ। ಪುರೀ ದ್ವಾರಾವತಿ ಚೈವ ಸಪ್ತೈತೇ ಮೋಕ್ಷದಾಯಕಾಃ ॥
ಸಪ್ತ ಮೋಕ್ಷ ಪ್ರದ ಕ್ಷೇತ್ರಗಳಲ್ಲಿ ಒಂದಾದ ಅಯೋಧ್ಯೆಯ ಪಾವನ ಭೂಮಿಯಲ್ಲಿ ಅವತರಿಸಿದ ಶ್ರೀ ರಾಮನ ಕಥೆಯೇ ರಾಮಾಯಣ ಎನಿಸಿದೆ. ಮೋಕ್ಷ ಸಂಸಾರಾಂತ್ಯದಲ್ಲಿ, ಸಂಸಾರದಲ್ಲಿ ಜೀವನೋತ್ಸಾಹ, ಸಾಧನೆಗೆ ಬರುವ ವಿಘ್ನಗಳನ್ನು ಕಳೆಯುವ ಶಕ್ತಿ ಈ ರಾಮಕಥೆಗಿದೆ. ಅದಕ್ಕೆ ನಿದರ್ಶನ ರಾಮಾಯಣ ಕಥೆಯ ಒಂದು ಪಾತ್ರ--ಸಂಪಾತಿ.
ಅರುಣನ ಮಗ ಸಂಪಾತಿ ಸೂರ್ಯನ ತಾಪದಿಂದ ರೆಕ್ಕೆ ಸುಟ್ಟು ಬಿದ್ದವ, ಕಪಿಗಳು ಹೇಳುತ್ತಿದ್ದ ರಾಮಕಥೆ ಕೇಳಿ ಸುಟ್ಟರೆಕ್ಕೆಗಳಿಗೆ ಬಲಪಡೆದನು. ಇದೇ ರಾಮನ, ಅವನ ನಾಮದ, ಅವನ ಕಥೆಯ ವೈಶಿಷ್ಟ್ಯ. ಇಂಥ ವಿಶಿಷ್ಟ ಪ್ರಭಾವವುಳ್ಳ ರಾಮಾಯಣದ ಕಥೆಗಿರುವ ಅಂತರಾರ್ಥವನ್ನು ಒಳಗಿಳಿದು ಅನುಭವಿಸಿ, ಆನಂದಿಸಿ ಇತರರಿಗೂ ಆ ಆನಂದಾನುಭವವನ್ನು ಹಂಚುವ ಆಶಯವೇ ಈ ಲೇಖನ.
ಅನುಭವ ಅವರವರ ಯೋಗ್ಯತೆ ಮತ್ತು ಸಾಧನೆಗನುಣವಾಗಿರುವಂತೆ,ಈ ಲೇಖನದ ವಿಷಯದ ಆಳ,ಹರವೂ ಕೂಡ ಯಥಾಮತಿಯಾಗಿರಲಿದೆ.
ವಾಲ್ಮಿಕಿಗಳ ಕಥಾ ನಾಯಕ ಜಗತ್ತಿನಲ್ಲಿರುವ ಎಲ್ಲ ಸದ್ಗುಣಗಳ ಗಣಿಯಾದ ಶ್ರೀ ರಾಮಚಂದ್ರ.
ಮರ್ತ್ಯ ಶಿಕ್ಷಣಕ್ಕಾಗಿ ಅವತರಿಸಿದ ಅಪ್ರಾಕೃತನಾದ, ಅಪ್ರಮೇಯನಾದ, ಮೋಕ್ಷಪ್ರದನಾದ ಸಾಕ್ಷಾತ್ ವಾಸುದೇವರೂಪಿ ಪರ ಬ್ರಹ್ಮನೇ ಅವನು ಎಂದು ಅಲ್ಲಲ್ಲಿ ವಾಲ್ಮಿಕಿಗಳು ಸ್ಪಷ್ಟ ಪಡಿಸುತ್ತಾರೆ.
ಅಧಿ ಆತ್ಮದ ಈ ಎಳೆಯನ್ನು ಕಥೆಯ ಎಲ್ಲಾ ಪ್ರಸಂಗಗಳಲ್ಲೂ ಒಳಹೆಣೆದುಕೊಂಡು ನೋಡಿದರೆ ಅದೇ ರಾಮಾಯಣದ ಅಂತರಾರ್ಥವನ್ನು ಬಿಚ್ಚಿಡುತ್ತದೆ.ಪ್ರತಿಯೊಂದು ಘಟನೆಯನ್ನೂ ವಿಮರ್ಷಿಸಿದಾಗ ಇದು ಗೋಚರಿಸದೇ ಇರದು.
ಕಥಾ ಪ್ರಸಂಗ-1
ದಶರಥ ಮಹಾರಾಜನಿಗೆ ಕೌಸಲ್ಯೆ, ಸುಮಿತ್ರೆ ಕೈಕೇಯಿ ಎಂಬ ಮೂವರು ಹೆಂಡತಿಯರಲ್ಲಿ ನಾಲ್ಕು ಜನ ಗಂಡು ಮಕ್ಕಳಾದರು. ತಂದೆಯಾದ ದಶರಥನು ರಾಮ, ಲಕ್ಷ್ಮಣ, ಶತ್ರುಘ್ನ, ಭರತ ಎಂಬ ನಾಲ್ವರು ಪುತ್ರರನ್ನು ನೋಡಿ ಸತತವಾಗಿ ಮಹಾ ಆನಂದವನ್ನು ಹೊಂದಿದ. ವಿಶೇಷವಾಗಿ ಶ್ರೀರಾಮನ ಮುಖವೆಂಬ ಚಂದ್ರಬಿಂಬವನ್ನು ಕಂಡು ಕೃತಕೃತ್ಯನಾದ.
ಮಹಾಭಾರತ ತಾತ್ಪರ್ಯ ನಿರ್ಣಯ:
" ತನ್ಮಾತರಃ ಪೌರಜನಾ ಅಮಾತ್ಯಾ ಅಂತಃಪುರಾ ವೈಷಯಿಕಾಶ್ಚ ಸರ್ವೇ/
ಅವೇಕ್ಷಮಾಣಾಃ ಪರಮಂ ಪುಮಾಂಸಂ ಸ್ವಾನಂದತೃಪ್ತಾ ಇವ ಸಂಬಭೂವುಃ//"
--ರಾಮನ ತಾಯಂದಿರು ಅಷ್ಟೇ ಏಕೆ ಅಯೋಧ್ಯೇಯ ಪುರಜನರು ಪರಮ ಪುರುಷನನ್ನು ನೋಡುತ್ತಾ ಸ್ವರೂಪಾನಂದದಿಂದ ತೃಪ್ತರಾದಂತಾದರು.
ಏಕೆಂದರೆ, ಆತ ಸಾಮಾನ್ಯ ಶಿಶುವಲ್ಲ. ರಮಾ ಮನೋಹರ. ಸಕಲ ಜೀವರಾಶಿಗಳ ಮನಸ್ಸಿನಲ್ಲಿದ್ದು ಅವರಿಗೆ ಪ್ರೇರಣೆ ಮಾಡುವವ ಆ ಶ್ರೀ ಹರಿಯೇ. ಸಜ್ಜನರಿಗೆ ತನ್ನಲ್ಲಿ ಆಸಕ್ತಿ ದುರ್ಜನರಿಗೆ ದ್ವೇಷ ಹುಟ್ಟಿಸುವ ಪರಮಾತ್ಮನೇ ಎಂಬ ತತ್ವವನ್ನಿಲ್ಲಿ ಚಿಂತಿಸಬೇಕು.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು- "ಬುದ್ಧಿರ್ಜ್ಞಾನಮಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ/ ಸುಖಂ ದುಃಖಂ ಭವೋ ಭಾವೋ ಭಯಂ ಚಾಭಯಮೇವ ಚ//" ಜೀವರಿಗೆ ಬುದ್ಧ್ಯಾದಿ ಪ್ರಧಾನಧರ್ಮಪ್ರದನು ಪರಮಾತ್ಮ ಎಂದು ತಿಳಿಸಿದ್ದಾನೆ.
ಅಯೋಧ್ಯೆಯ ಸಜ್ಜನ ಪ್ರಜೆಗಳಲ್ಲಿದ್ದು ತನ್ನೆಡೆಗೆ ಅವರ ಮನಸ್ಸನ್ನು ಸೆಳೆದವ ಶ್ರೀರಾಮನೇ. ದೇವರು ಪ್ರೀತನಾಗಲೆಂದು, ದೇಹದ ಮೇಲಿನ ಕಾಳಜಿ ಬಿಟ್ಟು ನೋವು ಸಹನೆ ಮಾಡಿಕೊಳ್ಳುವುದು. ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಕೊಂಡು ಏಕಾಗ್ರವಾಗಿಸುವುದು. ಅದಕ್ಕಾಗಿ ಸಂಸಾರಬಿಟ್ಟು ಅಡವಿ, ಗವಿಗಳಲ್ಲಿ ಹೋಗಿ ಕುಳಿತುಕೊಳ್ಳುವುದು ಒಂದು ರೀತಿಯ ತಪಸ್ಸು.
ಇದನ್ನೇ ಮಾಡಲು ಪ್ರಿಯವೃತ ಮಹಾರಾಜ ತಪಸ್ಸಿಗೆ ಹೋದಾಗ ಬ್ರಹ್ಮದೇವರು ಹೇಳಿದ್ದು:
"ನಿನ್ನ ಮನಸ್ಸು ನಿಯಂತ್ರಣ ದಲ್ಲಿರದಿದ್ದರೆ ನೀನು ಅಡವಿಯಲ್ಲಿ ಕುಳಿತರೂ ಉಪಯೋಗವಿಲ್ಲ. ಅದೇ ಸಂಸಾರದಲ್ಲಿದ್ದರೂ ಮನಸ್ಸು ಏಕಾಗ್ರವಾಗಿದ್ದು, ವ್ಯಗ್ರವಾಗದಿದ್ದರೇ ಅದೇ ತಪಸ್ಸು" ಎಂದು. ಅದಕ್ಕೇ ಪ್ರಿಯವೃತನ ರಾಜ್ಯಭಾರವೂ ತಪಸ್ಸು ಎನಿಸಿಕೊಂಡಿತು. ದೇವರನ್ನು ಪ್ರೀತಿಪಡಿಸಲು ಆರಿಸಿಕೊಂಡ ತಪಸ್ಸಿನ ಮಾರ್ಗದಲ್ಲಿ ದೈಹಿಕ ನೋವಿನ ಅಡೆತಡೆಗಳು ಬಂದಾಗ ತಡೆದುಕೊಂಡು ಮುಂದುವರೆದವರು ಅದರಲ್ಲಿ ಯಶಸ್ಸು ಗಳಿಸುವರು.
ಗ್ರಹಿಣಿಯರು ತಾವು ಮಾಡುವ ಗ್ರಹಕೃತ್ಯಗಳನ್ನು ಪತಿ,ಹಾಗೂ ಕುಟುಂಬದವರ ಸೇವೆಯನ್ನು ತಪಸ್ಸೆಂದು ತಿಳಿದು ನಡೆದರೆ ಅದೇ ಸಿದ್ಧಿಯನ್ನು ತಂದು ಕೊಡುತ್ತದೆ.ಅಲ್ಲವೆ.ಈ ವಿಷಯ ತಿಳಿಸುವ ಕೌಸಿಕ ಬ್ರಾಹ್ಮಣನ ಕಥೆಯಲ್ಲಿ ಬರುವ ಪತಿವೃತೆಯ ಸಿದ್ಧಿಯಿಂದ ಇದು ತಿಳಿದುಬರುತ್ತದೆ. ರಾಮಾಯಣದ ಒಂದು ಪಾತ್ರ ಲಕ್ಷ್ಮಣ.
ಲಕ್ಷ್ಮಣ ಯೋಗ್ಯತೆ ಮೀರಿ ಪುಣ್ಯಗಳಿಸಿದ ಎಂದು ಹೇಳುತ್ತಾರೆ. ಅಷ್ಟು ಪುಣ್ಯಬರಲು ಕಾರಣ 14 ವರ್ಷ ಸಾಮ್ರಾಜ್ಯ ಸುಖ, ಹೆಂಡತಿ ಮನೆ ಬಿಟ್ಟು, ಊಟ ನಿದ್ರೆ ಇಲ್ಲದೆ, ಶ್ರೀ ರಾಮಸೀತೆಯರ ಸೇವೆ ಮಾಡಿದ್ದು ಎನ್ನುವರು.
ಆದರೆ ನಮ್ಮ ದೊಡ್ಡಾಚಾರ್ಯರು ಲಕ್ಷ್ಮಣನ ಪಾತ್ರದ ವಿಮರ್ಶೆ ಮಾಡುವುದು ಹೀಗೆ- ಮನೆಬಿಟ್ಟು 14 ವರ್ಷ ವನವಾಸ ಚರಿಸಿದ್ದು ಒಂದು ತೂಕವಾದರೆ ಅವನ ಸಹನೆ ಇನ್ನೊಂದು ದೊಡ್ಡ ತಪಸ್ಸು. ಯಾರ ಸೇವೆಗಾಗಿ ಅವನು ಹಗಲಿರುಳು ಶ್ರಮಿಸುತ್ತಿದ್ದನೋ ಅವರಿಂದಲೇ ನಿಂದನೆಗೆ ಒಳಗಾದಾಗಲೂ ಅವಡುಗಚ್ಚಿ ಸಹಿಸಿದ್ದು ಅವನ ದೊಡ್ಡ ತಪಸ್ಸು.
ಸಂದರ್ಭ: ಮಾಯಾಜಿಂಕೆಯ ಬೆನ್ನಟ್ಟಿ ರಾಮ ಹೋದಾಗ ಸೀತೆಗೆ ಕಾವಲಾಗಿ ನಿಂತಾಗ. ಮಾರೀಚ ನ ಮೋಸದ ಧ್ವನಿಕೇಳಿ ರಾಮನ ರಕ್ಷಣೆಗೆ ಹೋಗು ಎಂದು ಸೀತೆ ಹೇಳಿದಾಗ ಅಣ್ಣನ ಆಜ್ಞೆಯಿದೆ, ಇಲ್ಲಿಂದ ಹೋಗಲಾರೆ ಎಂದಾಗ ಸೀತೆ ಆಡುವ ಮಾತುಗಳು ಅವನ ಮನಸ್ಸನ್ನು ಚುಚ್ಚಿ ಘಾಸಿಗೊಳಿಸಿದರೂ ತಾಳಿಕೊಂಡದ್ದು ಮತ್ತು ಅವಳ ಬಗ್ಗೆ ಇರುವ ಭಕ್ತಿ ಗೌರವ ಕಡಿಮೆ ಮಾಡಿಕೊಳ್ಳದೇ ಇರುವದು ಒಂದು ತಪಸ್ಸು. ಆಕಡೆ ಅಣ್ಣ ರಾಮನೂ ನನ್ನ ಆಜ್ಞೆ ಮೀರಿದೆ ಎಂದು ಬೈದದ್ದನ್ನೂ ಸಹಿಸಿಕೊಂಡು ಅಣ್ಣನ ಮೇಲಿನ ಶ್ರದ್ಧಾಭಕ್ತಿಯನ್ನು ಕಿಂಚಿತ್ತೂ ಕಡಿಮೆ ಮಾಡಿಕೊಳ್ಳಲಾರದೇ ಅದೇ ರೀತಿ ಸೇವೆಯನ್ನು ಅಷ್ಟೇ ಶ್ರದ್ಧೆ ಯಿಂದ ಮಾಡಿದ್ದು ಅವನ ಉತ್ತಮ ತಪಸ್ಸಿನ ಫಲವಾಗಿ ಹೆಚ್ಚಿನ ಪುಣ್ಯಗಳಿಸಿದ. ಹೌದಲ್ಲವೆ?
ಲಕ್ಷ್ಮಣನಿಂದ ನಾವು ಕಲಿಯುವುದು ಎಷ್ಟೊಂದಿದೆ, ಎನಿಸುತ್ತದೆ. ಮನೆಯಲ್ಲಿ ಯಾರಿಗಾಗಿ ದುಡಿದು ಹೈರಾಣಾಗುತ್ತಿರುತ್ತೇವೋ ಅವರಿಂದಲೇ ಅವಜ್ಞಗೆ ಒಳಗಾದಾಗ ಬರುವ ಸಿಟ್ಟು, ಅಸಹಾಯಕತೆಯನ್ನು ಸಹಿಸಿಕೊಂಡು ಬದುಕಿನ ನೊಗ ಇಳಿಸದೇ ಸಾಗುವುದು ತಪಸ್ಸೇ ಅಲ್ಲವೆ? ಯಾವ ಸಮಾಜಕ್ಕಾಗಿ ನಾವು ಏನೋ ಸೇವೆಯನ್ನು ಮಾಡುತ್ತಿರುವಾಗ ಅದೇ ಸಮಾಜ ನಮ್ಮನ್ನು ಘಾಸಿಗೊಳಾಸಿದಾಗ ನಾವೂ ಅವಡುಗಚ್ಚಿ ಸಹಿಸಿ ಅದೇ ಶ್ರದ್ದೆಯಿಂದ ಆ ಕಾರ್ಯ ಮುಂದುವರಿಸಲು ಲಕ್ಷ್ಮಣ ನಮಗೆ ಪ್ರೇರಣೆಯಾಗಬೇಕು ಅಲ್ಲವೆ? ನಾವು ಮಾಡಿದ ಕಾರ್ಯವನ್ನು ಇನ್ನಾರೋ ತಮ್ಮದೆಂದು ಹೇಳಿಕೊಂಡು ಹೆಸರು ಹಣ ಮಾಡಿದಾಗ, ದೇವರ ಇಚ್ಛೆ ಎಂದು ಅಳುನುಂಗಿ ಸಹಿಸಿಕೊಳ್ಳುವುದು ತಪಸ್ಸಾದೀತು ಅಲ್ಲವೆ?
ಹೀಗೆ ಇನ್ನೆಷ್ಟು ವಿಷಯಗಳಿವೆ. ರಾಮಾಯಣ ಇತಿಹಾಸವಷ್ಟೇ ಅಲ್ಲ ಎಲ್ಲರ ವರ್ತಮಾನವೂ ಆಗಿದೆ. ಅದರಿಂದ ಸಿಗುವ ಪಾಠಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮಗೇ ಬಿಟ್ಟಿದೆ. ಅರಿಯುವ ಅರಿವು, ಅರಿತು ಅಳವಡಿಸಿಕೊಳ್ಳುವ ಮನಸ್ಥಿತಿಯನ್ನು ರಾಮನೇ ಕೊಡಬೇಕು.
ಶ್ರೀ ಕೃಷ್ಣಾರ್ಪಣಮಸ್ತು.
- ಶ್ರೀಮತಿ ಚೇತನಾ ಕುಲಕರ್ಣಿ, ವಿಜಯಪುರ.
8951460747
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


