- ಬಿ.ಕೆ ಸುವರ್ಣ ಮೂರ್ತಿ, ಬೆಂಗಳೂರು
ದಾಸ ಸಾಹಿತ್ಯದಲ್ಲಿ ಸಂಗೀತ ಪಿತಾಮಹ ಎನಿಸಿಕೊಂಡಿರುವ ಶ್ರೀ ಪುರಂದರ ದಾಸರು ಶ್ರೀರಾಮನ ಬಗ್ಗೆ ಅಪಾರ ಮಹಿಮೆಗಳ ಬಗ್ಗೆ ಗುಣಗಳ ಬಗ್ಗೆ ಎಲ್ಲವನ್ನೂ ಕೀರ್ತನೆಗಳ ಮೂಲಕ ರಾಮನ ಬಗ್ಗೆ ಸಾಮಾನ್ಯರಿಗೂ ತಿಳಿಯುವಂತೆ ರಚಿಸಿದ್ದಾರೆ. ಮೊದಲಿಗೆ ಶ್ರೀ ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ ಈ ಕೃತಿಯಲ್ಲಿ 'ರಾ' ಎಂಬ ಅಕ್ಷರದಲ್ಲಿ ಅಸ್ಥಿಗತವಾದ ಪಾಪವನ್ನು ತೊಡೆದು ಹಾಕಿ 'ಮಾ' ಎಂದ ಮಾತ್ರಕ್ಕೆ ಎಲ್ಲರ ಕಾಯ (ದೇಹ) ಗಳನ್ನು ಪವಿತ್ರ ಮಾಡಿ ಎಲ್ಲ ವೇದಗಳು ಸಹ ರಾಮನನ್ನು ಕೊಂಡಾಡುತ್ತವೆ ಎಂದು ತಿಳಿಸಿದ್ದಾರೆ.
ಎರಡನೆಯದಾಗಿ ರಾಮನ ನುಡಿ: ರಾಮ ನಾಮವ ನುಡಿ ನುಡಿ, ಕಾಮಕ್ರೋಧಗಳ ಬಿಡಿ ಬಿಡಿ, ಈ ಕೀರ್ತನೆಯಲ್ಲಿ ಈ ನುಡಿಯಲ್ಲಿ ಮನಸ್ಸನ್ನು ನಿಲ್ಲಿಸಿ ಸದಾಕಾಲ ಪುರಂದರ ವಿಠಲನ ಸ್ಮರಣೆಯನ್ನು ಮಾಡಿದರೆ ಅತಿ ಶೀಘ್ರವಾಗಿ ಮುಕ್ತಿ ದೊರಕುವುದು ಎಂದು ತಿಳಿಸಿದ್ದಾರೆ.
ಮೂರನೆಯದಾಗಿ- ರಾಮ ಮಂತ್ರದ ಜಪಿಸೋ ಹೇ ಮನುಜ ನೀ, ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡ ಬೇಡ, ಸೋಮಶೇಖರ ತನ್ನ ಭಾಮಿನಿಗೆ ಹೇಳಿದ ಮಂತ್ರ ಎಂದು; ಕುಲ ಹೀನನಾದರೂ ಎಲ್ಲಿ ಬೇಕಾದರು ಅಲ್ಲಿ ಈ ನಾಮವನ್ನೂ ಜಪಿಸಬೇಕು ಸುಲಭದಲ್ಲಿ ಸ್ವರ್ಗ ಸಿಗುವಂತೆ ಮಾಡುತ್ತದೆ ಈ ರಾಮ ಮಂತ್ರ.
ಮನುಜರ ಅಂತ್ಯ ಕಾಲದಲ್ಲಿ ಸಹ ಈ ರಾಮನಾಮವನ್ನು ಜಪಿಸಿದರೆ ಮರಣದ ನೋವು ಉಂಟಾಗುವುದಿಲ್ಲ. ರಾಮನು ಜನ ಸಾಮಾನ್ಯರಲ್ಲಿ ಬೆರೆತು ಹೋದಂತಹ ಅಪಾರ ಮಹಿಮೆ ಉಳ್ಳ ಮರ್ಯಾದಾ ಪುರುಷೋತ್ತಮ.
ಇನ್ನೊಂದು ಕೀರ್ತನೆ- ಶರಣು ಸಕಲೋದ್ದಾರ ಅಸುರ ಕುಲ ಸಂಹಾರ, ಅರಸು ದಶರಥ ಬಾಲ ಜಾನಕಿ ಲೋಲ, ಭಾವಿಸು ಅಯೋಧ್ಯಾ ಪಟ್ಟಣದಲ್ಲಿ ವಾಸ ಮಾಡಿ ಬೇಡಿದಂತ ಭಕ್ತರ ಇಷ್ಟಾರ್ಥಗಳನ್ನು ಕೊಡುತ್ತಾನೆ. ಈ ರಾಮ ನಾಮವೆಂಬುದು ಪಾಯಸದಷ್ಟೇ ಸಿಹಿ. ಪುರಂದರದಾಸರು ಧನುಮುರಿದ ಶ್ರೀರಾಮ ಎಂದು ಸೀತಾ ಕಲ್ಯಾಣದ ಬಗ್ಗೆ ಕೃತಿ ರಚಿಸಿದ್ದಾರೆ. ರಾಮ ರಾಮ ರಾಮ ಎನ್ನಿರೋ ಇಂಥಾ ಸ್ವಾಮಿಯ ನಾಮವ ಮರೆಯದಿರೋ ಎಂಬ ವೈರಾಗ್ಯದ ಹಾಡನ್ನು ಸಹ ರಚಿಸಿದ್ದಾರೆ.
ವಿಜಯ ದಾಸರು: ರಾಮ ಎಂಬ ಎರಡಕ್ಷರ ಪ್ರೇಮದಿ ಸಲಹಿತು ಸುಜರನು ಎಂದು ಇದರಲ್ಲಿ ಅಹಲ್ಯೆಯ ಶಾಪವನ್ನು ವಿಮೋಚನೆ ಮಾಡಿದವನು, ಶಬರಿ ಎಂಜಲ ಉಂಡವನು, ಮೋಕ್ಷವನ್ನು ಕೊಡುವವನು ಶ್ರೀ ರಾಮ ಎಂದು ವರ್ಣಿಸಿದ್ದಾರೆ.
ವೆಂಕಟ ವಿಠಲದಾಸರು: ರಾಮ ನೀನೆ ಪಾಲಿಸೋ ರಘು ರಾಮನೀನೆ ಪಾಲಿಸೋ ದಶರಥನುದರದಿ ಹುಟ್ಟಿ, ಅಹಲ್ಯೆಯನ್ನು ಸಲಹಿದ ಮಾತೆಯ ವಾಕ್ಯ ಕೇಳಿ ಪಿತೃ ವಾಕ್ಯ ಪರಿಪಾಲಿಸಿದ ಇನ್ನೂ ಅನೇಕ ಪದಗಳಿಂದ ರಾಮಾವತಾರವನ್ನೂ ತಿಳಿಸಿದ್ದಾರೆ.
ರಾಮ ವಿಠಲ ದಾಸರು: ಕರೆದರೂ ಧ್ವನಿ ಕೇಳದೆ ರಘು ರಾಮಚಂದ್ರ ಮರುಕವಾಗದೆ ನಿನಗೆ ಕರಿರಾಜನನ್ನು ಸಲಹಿದ ಪ್ರಹ್ಲಾದನನ್ನು ಅನುಗ್ರಹಿಸಿದ ಎಲ್ಲನ್ನೂ ಸಹ ಸಲಹು ಎಂದು ದಾಸರು ವರ್ಣಿಸಿದ್ದಾರೆ.
ಶ್ರೀ ವಿಠಲ ದಾಸರು: ನೋಡು ನೋಡೆಂಥಾ ರಘುವೀರಾ | ದೀನೋದ್ಧಾರಾ|| ತನು ಮನ ದನಗಳ ತವಗೊಪ್ತಿಸದೇ ನೆನೆವ ಮನುಜರಿಗೆ ದೂರಾ ದೂರಾ || ಸೇರಿದ ಸುಜನರ ದೂರುವ ದುರಳರೇ ಬೇರಿಗೆರೆವ ಬಿಸಿ ನೀರಾ ನೀರಾ ಎಂದು ರಾಮನ ಬಗ್ಗೆ ಕೊಂಡಾಡಿದ್ದಾರೆ.
ಜಗನ್ನಾಥ ದಾಸರು: ರಾಮ ರಘುರಾಮ ರಾಮ ಸದ್ಗುಣ ಗಣ ಧಾಮ | ನಿರ್ಜರ ಸಾರ್ವಭೌಮ ದನುಜ ಕುಲಭೀಮ | ರಾಮ|| ದಶರಥನರಸಿ ಜಠರದಿ ಉದಿಸಿ ಮೆರೆದಿಹ ರಾಮ | ಮೇದಿನಿ ಜಾತೆಯೊಳನೊಲಿಸಲು ಮಾಧವನ ಧನು ಮುರಿದು ನೀಲ ಪಯೋಧರ ಶ್ಯಾಮಲ ಸುಮನಸ ವಿರೋಧಿ ಲೋಕಮಯನ ರಾಮ | ರಾವಣನ ಸಂತತಿಯನ್ನು ಮುರಿದು ವಿಭೀಷಣಗೆ ಪಟ್ಟಿ ಕಟ್ಟಿದಂತಹ ರಾಮನನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ.
ವರದೇಶ ವಿಠಲ ದಾಸರು: ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ||ಪ|| ರಾಮ ಹರೇ ಹರೇ ರಾಮ ಹರೇ ಕೃಷ್ಣ ಹರೇ ಹರೇ ಕೃಷ್ಣ ಹರೇ ಈ ಹಾಡಿನಲ್ಲಿ ರಾಮ ಕೃಷ್ಣ ಜನ್ಮ ಅವರ ಮಹಿಮೆಗಳನ್ನು ವರ್ಣಿಸಿದ್ದಾರೆ ದಾಸರು.
ಗೋಪಾಲ ದಾಸರು: ರಾಮ ನಾಮವ ಭಜಿಸಿದಗೆ ಉಂಟೇ ಭವದ ಬಂಧನ ಈ ಕಾಮರಸನ ಸತಿಯ ಸದಾ ನೇಮದಿಂದ ಭಜಿಸುವ; ಇದರಲ್ಲಿ ಶಿವನು ಧನ್ಯನಾದ, ಅಹಲ್ಯೆ ಪಾವನೆಯಾದಳು, ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆ ಆದಳು. ಈ ಭವ ಸಾಗರವನ್ನು ದಾಟಲು ರಾಮ ನಾಮವನ್ನು ಭಜಿಸಿ ಎಂದು ದಾಸರು ಹೇಳುತ್ತಾರೆ.
ಕನಕದಾಸರು: ರಾಮನ ಪೂಜಿಸಲಿಲ್ಲಾ, ಮೈ ಮರೆತೆನಲ್ಲ, ಬಾಲತ್ವದಲಿ ಬಲು ಲೀಲೆಯಿಂದ ನಾನು ಕಾಲವ ಕಳೆದೆನಲ್ಲ ಮೈ ಮರೆತೆನಲ್ಲ || ಸತಿ ಸುತರೇ ಎನಗೆ ಗತಿ ಎಂದು ತಿಳಿದು ನಾ ಮತಿ ಗೆಟ್ಟು ಭ್ರಾಂತನಾದೆನಲ್ಲ, ಹೊನ್ನು ಗಳಿಸಿ ನಾನು ಅನ್ನವನಿಕ್ಕಲಿಲ್ಲ ಆದಿಕೇಶವನ ನಂಬಲಿಲ್ಲ ಮೈಮರೆತೆನಲ್ಲ- ಎಂದು ದಾಸರು ನುಡಿಯುತ್ತಾರೆ.
ಗುರು ಗೋವಿಂದ ದಾಸರು: ರಾಮ ರಾಮ ಜಯರಾಮ ಪರಾತ್ಪರ | ಸಾಮಿಪದಾಂಬುಜ ಶ್ರೀ ರಾಮ ಸೋಮ ಕುಲೋದ್ಭವ ಭೂಮ ಗುಣಾರ್ಣವ ಕಾಮ ಪಿತನೆ ಶ್ರೀ ಕೃಷ್ಣ || ಈ ಹಾಡಿನಲ್ಲಿ ಸಂಪೂರ್ಣ ರಾಮಾಯಣದ ಕಥಾ ಪ್ರಸಂಗವೇ ಬರುತ್ತದೆ. ದಾಸರು ಬಹಳ ಚೆನ್ನಾಗಿ ರಚಿಸಿದ್ದಾರೆ.
ಶ್ರೀಪಾದ ರಾಜರು: ಶ್ರೀ ರಾಮ ನಿನ್ನ ಪಾದವ ತೋರೋ ಮೋಹನ ಗುಣಧಾಮ, ನಿನ್ನ ಮೋಹದ ಪಾದದ ನಿನ್ನ ಅಗಣಿತ ಗುಣಗಳಿಂದ ಎಲ್ಲರಿಗೂ ಮುಕ್ತಿಯನ್ನು ದಯಪಾಲಿಸುವವ ತ್ರಿಜಗವಂದಿತನಾದ ನೀನು | ಅಜಭವ ಪೂಜಿತ ತುಂಗ ವಿಕ್ರಮ ನೀನು | ಎಂದು ರಾಮನನ್ನು ಕೊಂಡಾಡಿದ್ದಾರೆ.
ವಾದಿರಾಜತೀರ್ಥರು: ಎಣಿಸಲೆನ್ನಳವೆ ನಿನ್ನ ಮಹಿಮೆಗಳ ಗುಣಗಣನುತನಾಮ ಕೋದಂಡರಾಮ- ಇದರಲ್ಲಿ ಭಗವಂತನ ಅವತಾರದ ಮಹಿಮೆಯನ್ನು ಕೊಂಡಾಡಿದ್ದಾರೆ.
ಶ್ರೀ ವಿದ್ಯಾ ಪ್ರಸನ್ನ ತೀರ್ಥರು: ಭಜೇ ಶ್ರೀ ರಾಮ ಚಂದ್ರಂ ಅಜಾದಿ ದೇವ ವಂದ್ಯಮ್ |ಪ| ಭಜೇ ಇ ನಾನ್ಯಯೇಂದ್ರ ಭಜೇ ಆನಂದ ಸಾಂದ್ರಮ್ಈ ಹಾಡಿನಲ್ಲಿ ಶ್ರೀರಾಮನನ್ನು ಭಜಿಸಿದರೆ ಆನಂದ ದಾಯಕನಾದ ಭಗವಂತ ಸುಂದರ ರೂಪದಿಂದ ರಘು ಭೂಪನನ್ನು ಚೆನ್ನಾಗಿ ವರ್ಣಿಸಿದ್ದಾರೆ. ಇನ್ನೊಂದು ಹಾಡಿನಲ್ಲಿ ಈ ರೀತಿ ರಚನೆ ಮಾಡಿದ್ದಾರೆ. ಗಾನಕೆ ಸುಲಭವು ರಾಮ ನಾಮವು ಗಾನಕೆ ಅತಿ ಸುಲಭ | ದೀನ ಜನಕೆ ಬಲು ಸಾನುರಾಗನಾದ | ಜಾನಕಿ ನಾಥನ ದಿವ್ಯ ನಾಮವು ಎಂದು ಇನ್ನೊಂದು ಹಾಡು. ರಾಮ ಭಜನೆ ಮಾಡೋ ಮನುಜ ರಾಮ ಭಜನೆ ಮಾಡೋ, ರಾಮ ರಾಮ ಜಯ ರಾಘವ ಸೀತಾ- ರಾಮನೆಂದು ಸುಸ್ಪರದಲ್ಲಿ ಪಾಡುತ |ಅ.ಪ|
ಹೀಗೆ ಸನಾತನ ಹಿಂದೂ ಧರ್ಮದಲ್ಲಿ ರಾಮನನ್ನು ಎಲ್ಲ ಹರಿದಾಸರು ಅನೇಕ ಗುರುಗಳು ಸಹ ಕೊಂಡಾಡಿದ್ದಾರೆ.
- ಸುವರ್ಣ ಮೂರ್ತಿ, ಬೆಂಗಳೂರು
B.K Suvarna Murthy
# 401,SGR Temple chaitanya,
3rd Main Road,Hosakerehalli ,
Banshankri 3rd Stage,
BANGALORE
PIN NO:560085
KARNATAKA
E-Mail ID: laxmibk80@gmail.com
Mobile Number: 9740083919/ 8618278166
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ