- ಡಾ. ರೂಪಾ ರಾವ್
ಭಾವನೆಗಳು ಮನುಷ್ಯನ ಬದುಕಿನ ಅತ್ಯಂತ ಅವಿಭಾಜ್ಯ ಅಂಗ. ಭಾವನೆಗಳನ್ನು ನಾವು ನಿರ್ವಹಿಸಿದರೆ ಅದು ಸಾಧನೆ, ನಮ್ಮನ್ನು ಭಾವನೆಗಳು ನಿಯಂತ್ರಿಸಲಾರಂಭಿಸಿದರೆ ಅದು ವೇದನೆ. ಬಹಳಷ್ಟು ಜನ ಈ ಭಾವನೆಗಳ ಮಹಾಪೂರದಲ್ಲಿ ಮುಳುಗಿಹೋಗಿರುತ್ತಾರೆ, ಅದನ್ನು ಭಾವನಾತ್ಮಕ ದುರ್ಬಲತೆ ಎಂದು ಕರೆಯುತ್ತಾರೆ. ಆದರೂ ಅದು ಅವರಿಗೆ ಗೊತ್ತೇ ಅಗಿರುವುದಿಲ್ಲ. ಭಾವನಾತ್ಮಕ ದುರ್ಬಲತೆಯನ್ನು ಸೂಚಿಸುವ ಹತ್ತು ಅಂಶಗಳನ್ನು ನೋಡೋಣ.
ಪದೇ ಪದೇ ಮೂಡ್ ಸ್ವಿಂಗ್ಸ್:
ಭಾವನಾತ್ಮಕವಾಗಿ ದುರ್ಬಲವಾದ ವ್ಯಕ್ತಿಗಳು ಆಗಾಗ, ತೀವ್ರವಾದ ಮೂಡ್ ಸ್ವಿಂಗ್ಗಳನ್ನು (ಒಮ್ಮೆ ಕೋಪ, ಇದ್ದಕ್ಕಿದ್ದಂತೆ ಖುಷಿ) ಅನುಭವಿಸುತ್ತಾರೆ. ಸಣ್ಣ ಸಣ್ಣ ವಿಷಯಕ್ಕೂ ಖುಷಿ ಅಥವಾ ವೇದನೆಗಳನ್ನು ಅನುಭವಿಸುತ್ತಾರೆ.
ವಿಮರ್ಶೆ ಅಥವಾ ಟೀಕೆಗೆ ಹೆಚ್ಚು ಬೇಗ ರಿಯಾಕ್ಟ್ ಮಾಡುತ್ತಾರೆ.
ಯಾರಾದರೂ ಒಂದು ಸಣ್ಣ ಮಾತನ್ನು ಆಡಿದರೂ ವೈಯಕ್ತಿಕವಾಗಿ ತೆಗೆದುಕೊಂಡು ಸುಲಭವಾಗಿ ಅಸಮಾಧಾನಗೊಳ್ಳಬಹುದು ಅಥವಾ ರಕ್ಷಣಾತ್ಮಕವಾಗಿ ವರ್ತಿಸಬಹುದು.
ಮಾನಸಿಕವಾಗಿ ಒತ್ತಡ ನಿರ್ವಹಣೆ ಕಷ್ಟ:
ಭಾವನಾತ್ಮಕವಾಗಿ ದುರ್ಬಲವಾಗಿರುವವರು ಒತ್ತಡವನ್ನು ನಿಭಾಯಿಸಲು ಹೆಣಗಾಡುತ್ತಾರೆ. ಒಂದು ಚಿಕ್ಕ ಸವಾಲನ್ನು ಎದುರಿಸಲೂ ಬಹಳ ಕಷ್ಟಪಡಬಹುದು. ಅವರು ಸಣ್ಣ ಘರ್ಷಣೆಗಳು ಅಥವಾ ತಪ್ಪುಗ್ರಹಿಕೆಗೆ ಅಸಮಾನವಾಗಿ ಪ್ರತಿಕ್ರಿಯಿಸಬಹುದು, ಅನಗತ್ಯವಾಗಿ ಪರಿಸ್ಥಿತಿಯ ತೀವ್ರತೆಯನ್ನು ಹೆಚ್ಚಿಸಬಹುದು.
ಯಾವಾಗಲೂ ಅತಿಯಾದ ಚಿಂತೆ ಅಥವಾ ಆತಂಕ:
ಸಾಮಾನ್ಯವಾಗಿ ಜೀವನದ ವಿವಿಧ ವಿಷಯಗಳ ಬಗ್ಗೆ ಅತಿಯೇ ಅನ್ನುವಷ್ಟು ಚಿಂತಿಸುತ್ತಾರೆ, ಇದು ಆಂಕ್ಸೈಟಿಗೆ ಕಾರಣವಾಗುತ್ತದೆ.
ಅವರ ಭಾವನೆಗಳು ಸುಲಭವಾಗಿ ಘಾಸಿಗೊಳ್ಳುತ್ತವೆ ಮತ್ತು ಇತರರು ನಿರ್ಲಕ್ಷ್ಯಿಸಬಹುದಾದ ವಿಷಯಗಳನ್ನೂ ಅವರು ವೈಯಕ್ತಿಕವಾಗಿ ತೆಗೆದುಕೊಳ್ಳಬಹುದು. ಸಂಗಾತಿಯಲ್ಲಿನ ನಡುವಳಿಕೆಯಲ್ಲಿನ ಸಣ್ಣ ಬದಲಾವಣೆಗಳೂ ಇವರಲ್ಲಿ ಆತಂಕ ತರಬಹುದು. ಸಂಗಾತಿ ತನ್ನನ್ನು ಬಿಟ್ಟು ಹೋಗಬಹುದು ಎಂಬ ಭಯಪಡುತ್ತಾರೆ, ಇದು ಸಂಬಂಧಗಳಲ್ಲಿ ತೀವ್ರವಾದ ಅಟಾಚ್ಮೆಂಟ್ ಅಥವಾ ಸಂಗಾತಿಯನ್ನು ಕಂಟ್ರೋಲ್ ಮಾಡುವ ನಡವಳಿಕೆಗೆ ಕಾರಣವಾಗುತ್ತದೆ
ಕಡಿಮೆ ನಮ್ಯತೆ (ರೆಸಿಲಿಯೆನ್ಸ್):
ಅವರು ನಷ್ಟ, ಕಷ್ಟ ಅಥವಾ ದೊಡ್ಡ ಆಘಾತ ಅಥವಾ ನಿರಾಶೆಯಾಗಿಬಿಟ್ಟರೆ ಅದರಿಂದ ಮರಳಿ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.
ಭಾವನಾತ್ಮಕ ಬೆಂಬಲಕ್ಕಾಗಿ ಇತರರ ಮೇಲೆ ಅವಲಂಬನೆ:
ಇವರು ಭಾವನಾತ್ಮಕ ಬೆಂಬಲ ಮತ್ತು ಧೈರ್ಯಕ್ಕಾಗಿ ಇತರರ ಮೇಲೆ ಹೆಚ್ಚು ಡಿಪೆಂಡ್ ಆಗುತ್ತಾರೆ, ಅದು ಇಲ್ಲದೆ ಹೋದಾಗ ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಾರೆ. ಇವರು ಸಾಮಾನ್ಯವಾಗಿ ಬಂಧಗಳಲ್ಲಿ ಅತ್ಯಂತ ಆಳವಾದ ಎಮೋಷನಲ್ ಕನೆಕ್ಷನ್ ಹೊಂದಿರಲು ಬಯಸುತ್ತಾರೆ.
ಇದರಿಂದಾಗಿ ಜನರನ್ನು ಖುಷಿಗೊಳಿಸಲು ಪದೇ ಪದೇ ತಾವೇ ಶರಣಾಗುತ್ತಾರೆ. ಭಾವನಾತ್ಮಕ ಬೆಂಬಲ ಮತ್ತು ವ್ಯಾಲಿಡೇಶನ್ಗಾಗಿ ತಮ್ಮ ಎಮೋಷನಲ್ ಸಂಗಾತಿಯ ಮೇಲೆ ಅತಿಯಾಗಿ ಅವಲಂಬಿತರಾಗಬಹುದು.
ಭಾವನೆಗಳನ್ನು ನಿಯಂತ್ರಿಸುವಲ್ಲಿ ತೊಂದರೆ:
ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಕಷ್ಟಪಡುತ್ತಾರೆ, ಇದು ಭಾವನಾತ್ಮಕ ಗಲಾಟೆ ಅಥವಾ ತೊಂದರೆಗಳಿಗೆ ಕಾರಣವಾಗುತ್ತದೆ.
ಭಿನ್ನಾಭಿಪ್ರಾಯಗಳನ್ನು ತಪ್ಪಿಸುವುದು:
ಅವರು ಜಗಳಹಾಗು ಮನಸ್ತಾಪಗಳನ್ನು ತಪ್ಪಿಸಲು ಅದರಿಂದ ತಪ್ಪಿಸಿಕೊಂಡು ಹೋಗುವ ನಿರ್ಧಾರ ಮಾಡುತ್ತಾರೆ, ಸಮಸ್ಯೆಗಳನ್ನು ನೇರವಾಗಿ ಎದುರು ನಿಂತು ಪರಿಹರಿಸುವ ಬದಲು ಅದು ಉಂಟುಮಾಡುವ ಭಾವನಾತ್ಮಕ ಪ್ರಕ್ಷುಬ್ಧತೆಗೆ ಹೆದರಿ ಅದರಿಂದ ಆದಷ್ಟೂ ದೂರ ಓಡುತ್ತಾರೆ.
ನಕಾರಾತ್ಮಕ ಭಾವನೆಗಳು:
ಇವರನ್ನು ಸಾಮಾನ್ಯ ವಾಗಿ ದುಃಖ, ಕೋಪ ಅಥವಾ ಭಯದಂತಹ ನಕಾರಾತ್ಮಕ ಭಾವನೆಗಳು ಆವರಿಸಬಹುದು, ಇವುಗಳು ಯಾವಾಗಲೂ ಇರುವುದರಿಂದ ಸಹಜವಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ.
ಭಾವನೆಗಳನ್ನು ನಿರ್ವಹಿಸುವುದು ಹೇಗೆ?
ಭಾವನೆಗಳಲ್ಲಿ ಮುಳುಗಿಹೋಗದಂತೆ ಇರಲು ಈ ಕೆಳಗಿನ ಟಿಪ್ಸ್:
1. ಮೈಂಡ್ಫುಲ್ ಧ್ಯಾನ: ಮುಂದೇನಾಗುತ್ತದೆಯೋ ಎಂಬ ಆತಂಕ ಅಥವಾ ಹಿಂದೆ ಹೀಗಾಯಿತಲ್ಲ ಎಂಬ ವ್ಯಥೆ ಇವೆರಡೂ ಇಲ್ಲದೆ, ಒಂದಷ್ಟು ಹೊತ್ತು ವರ್ತಮಾನದಲ್ಲಿ ಮನಸನ್ನು ನೆಡುವುದು. ಧ್ಯಾನವೆಂದರೆ ಕಣ್ಣು ಮುಚ್ಚಿ ಕೂತು ಮಾಡುವುದೇ ಅಲ್ಲ, ಪ್ರಸ್ತುತ ಮಾಡುತ್ತಿರುವ ಕೆಲಸದಲ್ಲಿ ತನ್ಮಯನಾಗಿ ದೂರುವುದು.
2. ಆಲೋಚನೆಗಳಲ್ಲಿ ಬದಲಾವಣೆ: ಭಾವನೆಗಳ ಆಲೋಚನೆಗಳೊಂದಿಗೆ ಬದಲಾಗುತ್ತವೆ. ಹಾಗಾಗಿ ಆ ಆಲೋಚನೆಯ ಹಾದಿಯನ್ನು ಬದಲಿಸಿಕೊಳ್ಳುವುದರ ಮೂಲಕ ಭಾವನೆಯ ತೀವ್ರತೆಯನ್ನು ಕಡಿಮೆಗೊಳಿಸಿ ಕೊಳ್ಳಬಹುದು.
3. ಆಳವಾದ ಉಸಿರಾಟದ ಅಭ್ಯಾಸ:
ನಾವು ಸಾಮಾನ್ಯವಾಗಿ ಸಣ್ಣ ಸಣ್ಣ ಉಸಿರಾಟದ ಏರಿಳಿತಗಳನ್ನು ಮಾಡಲು ಅಭ್ಯಾಸಗೊಂಡಿರುತ್ತೇವೆ. ಆದರೆ ಆಳವಾದ ಉಸಿರಾಟ ನಮ್ಮ ಭಾವನೆ, ಆಲೋಚನೆಗಳನ್ನು ಗಮನಿಸಿ ಅದನ್ನು ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತದೆ.
4 ಸೆಲ್ಫ್ ಕಾನ್ಫಿಡೆನ್ಸ್ ಬೆಳೆಸಿಕೊಳ್ಳುವುದು.
ಸಾಮಾನ್ಯವಾಗಿ ಯಾವಾಗ ನಮ್ಮನ್ನು ಇತರರಿಗಿಂತ ಕಡಿಮೆ ಎಂದು ಭಾವಿಸುತ್ತೇವೋ ಆಗಿ ಭಾವನೆಗಳು ನಮ್ಮನ್ನು ದುರ್ಬಲವಾಗಿಸುತ್ತಾ ಹೋಗುತ್ತದೆ. ಇದನ್ನು ಸೋಲಿಸಲು ನಮ್ಮನ್ನು ನಾವು ಕಡಿಮೆ ಮಾಡಿಕೊಳ್ಳಬಾರದು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ