ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡ ಆಳ್ವಾಸ್ ಕಾಲೇಜು

Upayuktha
0

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಿಂದ ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ-ವಿವೇಕ್ ಚೇತನ 2024



ಪುತ್ತೂರು: ಇಂದು ಇಡೀ  ವಿಶ್ವದಲ್ಲಿಯೇ  ಭಾರತ ಅದ್ಭುತ  ಸ್ಥಾನಕ್ಕೆ ಏರುತಿದೆ. ಹೀಗಿರುವಾಗ  ಮಾಧ್ಯಮಗಳಿಗೆ  ದೇಶದಲ್ಲಿ ಕಂಡುಬರುವ  ಎಲ್ಲಾ ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಇದೆ. ಪತ್ರಕರ್ತರು ಯಾರ ಪರವಾಗಿಯೂ ನಿಲ್ಲದೆ, ಸತ್ಯದ ಪರ ಹಾಗೂ ರಾಷ್ಟ್ರದ ಪರ ನಿಲ್ಲಬೇಕು. ಸಮಾಜದಲ್ಲಿ ಕಂಡುಬರುವ ಒಳ್ಳೆತನವನ್ನು ಗಮನಿಸಿ ಅವುಗಳನ್ನು ಗುರುತಿಸುವ ಜವಾಬ್ದಾರಿ ಪತ್ರಕರ್ತರಿಗಿದೆ. ಇದರ ಜೊತೆಗೆ ಯುವ ಜನರಿಗೆ ಅಧಮ್ಯವಾದ ತಿಳುವಳಿಕೆ, ಬುದ್ಧಿವಂತಿಕೆ ಇರುತ್ತದೆ. ಅದನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ  ಹೇಳಿದರು


ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿಯ  ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ರಾಷ್ಟ್ರಮಟ್ಟದ ಫೆಸ್ಟ್ ‘ವಿವೇಕ ಚೇತನ್ 2024' ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ನಟ,ಹಿನ್ನೆಲೆ ಧ್ವನಿ ಕಲಾವಿದ, ಬಿಗ್ ಬಾಸ್ ಧ್ವನಿಯ ಖ್ಯಾತಿಯ ಬಡೆಕ್ಕಿಲ ಪ್ರದೀಪ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೊಸತನವನ್ನು ಹುಡುಕಿಕೊಂಡು ಹಾಗೂ ಮೈಗೂಡಿಸಿಕೊಂಡು ಬಾಳುವುದು ಬಹಳ ಮುಖ್ಯ ಹೊಸ ಅಲೆಯೊಂದಿಗೆ ಹಳೆಯ ವಿಚಾರಗಳನ್ನು ಜೋಡಿಸಿಕೊಂಡು ಅದಕ್ಕೆ ನಾವು ಹೇಗೆ ಹೊಂದಿಕೊಳ್ಳುತ್ತೇವೆ ಎನ್ನುವುದು ಮಹತ್ತರವಾದ ಸಂಗತಿ. ಬದುಕಿನಲ್ಲಿ ಕಹಿಯ ಸಂಗತಿಗಳು ಉಂಟಾದಾಗ ನಾವು ಕುಗ್ಗಿ ಹೋಗದೆ, ಅದನ್ನು ಧೈರ್ಯದಿಂದ ಎದುರಿಸಿ ಮುಂದುವರಿಯಬೇಕು ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಶುಭಾಶಯದ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ ಎನ್, ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ಪಿಜಿ ವಿಭಾಗದ ಡೀನ್ ಡಾ.ವಿಜಯ ಸರಸ್ವತಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರೀಪ್ರಿಯಾ  ಉಪಸ್ಥಿತರಿದ್ದರು 


ಕಾರ್ಯಕ್ರಮವನ್ನು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್ ನಿಡ್ಪಳ್ಳಿ ಸ್ವಾಗತಿಸಿ, ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯಕ್ರಮದ ಸಂಯೋಜಕ ಶರತ್ ಕೆ.ಎನ್ ವಂದಿಸಿ, ಹರಿಪ್ರಸಾದ್ ಈಶ್ವರಮಂಗಲ ಹಾಗೂ ಚೈತ್ರಾ ಭಟ್ ನಿರ್ವಹಿಸಿದರು


ಸಮಾರೋಪ ಸಮಾರಂಭ: 

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಆರ್‌ಜೆ ಕಾಜಲ್, ನಮ್ಮ ಬಾಳಿನಲ್ಲಿ ನೋವುಂಟು ಮಾಡುವವರು ಹಲವರಿದ್ದಾರೆ. ಆದರೆ ಅದಕ್ಕೆ  ಧೃತಿಗೆಡದೆ ನಮ್ಮ ಬದುಕಿನಲ್ಲಿ ಬರುವ ಸವಾಲನ್ನು ಸ್ವೀಕರಿಸಿ ಮುಂದುವರೆಯಬೇಕು ಹಾಗೂ ಸೋಲಾಗಲಿ ಗೆಲುವಾಗಲಿ ಎಲ್ಲವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ನಿಭಾಯಿಸಿಕೊಂಡು ಹೋಗಬೇಕು ಎಂದು ಅಭಿಪ್ರಾಯಪಟ್ಟರು. 

         

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕರ‍್ಯದರ್ಶಿ ಡಾ.ಕೃಷ್ಣ ಭಟ್ ಕೆ.ಎಂ ಮಾತನಾಡಿ, ಭಾರತ ವಿಶ್ವಗುರುವಾಗುತ್ತ ಹೆಜ್ಜೆ ಇಟ್ಟಿದೆ. ಈ ಸಂದರ್ಭದಲ್ಲಿ ಪತ್ರಕರ್ತರು ಅತ್ಯಂತ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಮಾಧ್ಯಮಕ್ಕೆ ಸಂಬಂಧಿಸಿದ ನೀತಿ ಸಂಹಿತೆಗಳನ್ನು ಚೆನ್ನಾಗಿ ಅರಿತುಕೊಂಡು ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಡಬೇಕು ಎಂದರು.


ಸಮಾರೋಪ ಸಮಾರಂಭದಲ್ಲಿ  ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಾಶ್ರೀ ಪಾಲ್ತಾಡಿ ಸ್ವಾಗತಿಸಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಸುತನ್ ಕೇವಳ ವಂದಿಸಿ, ಅಕ್ಷಯ್ ರೈ  ಸಹಕರಿಸಿದರು.


ವಿವೇಕ ಚೇತನ 2024 ಸ್ಪರ್ಧೆಯ ಸಮಗ್ರ ತಂಡ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು, ದ್ವಿತೀಯ ರನ್ನರ್ ಪ್ರಶಸ್ತಿಯನ್ನು ಎಸ್‌ಡಿಎಂ ಕಾಲೇಜು ಪಡೆದುಕೊಂಡಿತು.


ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ವಿನೂತನ ಪಾಕ್ಷಿಕ ಹಾಗೂ ವಿಕಸನ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

 

ಈ ಸಂದರ್ಭದಲ್ಲಿ ವಿಶೇಷವಾಗಿ ಸುಮಾರು 2500ಕ್ಕೂ ಅಧಿಕ ಹೆರಿಗೆಯನ್ನು ಮಾಡಿಸಿದ  ಸೂಲಗಿತ್ತಿ ವೆಂಕಮ್ಮ ಮತ್ತು ಸಮಾಜ ಸೇವಕ, ಶ್ವಾನಪ್ರಿಯ ರಾಜೇಶ್ ಬನ್ನೂರು ಅವರನ್ನು ಸನ್ಮಾನಿಸಲಾಯಿತು. 


ವಿಭಾಗದಲ್ಲಿ ಸಾಧನೆ ಮಾಡಿದ ಶರತ್ ಕೆ.ಎನ್, ದೀಪ್ತಿ ಅಡ್ಡಂತಡ್ಕ, ಜೀವನ್ ಕಲ್ಲೇಗ, ಲಾವಣ್ಯ ಇವರನ್ನು ಸನ್ಮಾನಿಸಲಾಯಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top