ಭರವಸೆಯ ಭಾಗವತಿಕೆ: ಹೊಸತನದ ದಾಖಲೆ ಬರೆಯಲಿರುವ ಸಾಧಕಿ ಸಂಧ್ಯಾ ಪೂಜಾರಿ

Upayuktha
0

ಮಂತ್ರದೇವತೆಯ ಪ್ರಸಂಗ ಲೋಕಾರ್ಪಣೆ ನಾಳೆ (ಮೇ 20)




ಯಕ್ಷಗಾನ ರಂಗದಲ್ಲಿ ಮಹಿಳೆಯರೂ ಮುಖ್ಯವಾಹಿನಿಗೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿರುವ ನಡುವೆ ಇಲ್ಲೋರ್ವ ಯುವತಿ ತನ್ನ ಭರವಸೆಯ ಭಾಗವತಿಕೆಯಿಂದ ಸೈ ಎನಿಸಿಕೊಳ್ಳುತ್ತಿರುವಾಗಲೇ ತುಳು ಯಕ್ಷಗಾನ ಪ್ರಸಂಗವನ್ನೂ ರಚಿಸಿ ನಿರ್ದೇಶಿಸಿ ರಂಗಸ್ಥಳದಲ್ಲಿ ಲೋಕಾರ್ಪಣೆಯೊಂದಿಗೆ ಹೊಸತನದ ದಾಖಲೆಗೆ ಸಜ್ಜಾಗಿದ್ದಾರೆ.


ಬಂಟ್ವಾಳ ಕರ್ಪೆಯ ಭಾಗವತ ದಿ. ಚಂದಪ್ಪ ಪೂಜಾರಿ- ಜಯಂತಿ ದಂಪತಿಯ ಪುತ್ರಿ ಸಂಧ್ಯಾ ತುಳುನಾಡಿನ ಆರಾಧ್ಯ ದೈವ ಮಂತ್ರದೇವತೆಯ ಚರಿತ್ರೆಯ ಕಥಾನಕವನ್ನೇ ತನ್ನ ಚೊಚ್ಚಲ ಪ್ರಯತ್ನದಲ್ಲಿ ಯಕ್ಷರಂಗಕ್ಕೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ. ಭಾಗವತಿಕೆಯ ಯಶಸ್ಸಿನ ಜತೆಗೆ ಪ್ರಸಂಗ ಕರ್ತೆಯಾಗಿ, ನಿರ್ದೇಶನವನ್ನೂ ಕೈಗೆತ್ತಿಕೊಳ್ಳುವ ಉತ್ಸಾಹದಲ್ಲಿ ಸಂಧ್ಯಾ ಯಕ್ಷರಂಗದಲ್ಲಿ ಮಹಿಳಾ ಸಾಧಕಿಯರ ಹೊಸ ಅಧ್ಯಾಯ ಬರೆಯಲು ಮುಂದಾಗಿರುವುದು ವಿಶೇಷ.


ತಂದೆಯವರಿಂದ ಅರಳಿದ ಆಸಕ್ತಿ, ಭಾಗವತರ ಮಗಳು ಎಂದು ಗುರುತಿಸುವ ಜನ, ತಂದೆಯ ಹೆಸರಿಗೂ ಕೀರ್ತಿ ತರಬೇಕೆಂಬ ಅಪೇಕ್ಷೆ ಸಂಧ್ಯಾ ಅವರನ್ನು ಯಕ್ಷರಂಗಕ್ಕೆ ಸೆಳೆದಿದೆ. ಕೋವಿಡ್ ಕಾಲಾವಧಿಯಲ್ಲಿ ಬಜ್ಪೆ ದಯಾನಂದ ಕೋಡಿಕಲ್ ಅವರಿಂದ ಯಕ್ಷ ಶಿಕ್ಷಣ, ಮೋಹನ್ ಬೈಪಡಿತ್ತಾಯ ಅವರಿಂದ ಪ್ರಸಂಗ ಪಾಠ, ರವಿಚಂದ್ರ ಕನ್ನಡಿಕಟ್ಟೆ ಅವರ ಮಾರ್ಗದರ್ಶನ ಜತೆಗೆ ಉತ್ಸಾಹ, ಸಾಧಿಸುವ ಛಲ ಸಂಧ್ಯಾ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ಜತೆಗೆ ಸಂಜೀವ ಕಜೆಪದವು, ಸುಶಾಂತ್ ಕೈಕಂಬ ಇವರ ಸಹಕಾರವೂ ಸಿಕ್ಕಿದೆ. ಸಹೋದರ ಸುದೀಪ್ ತನ್ನ ಯಶಸ್ಸಿನ ಹಿಂದೆ ಇದ್ದಾರೆ ಎನ್ನುತ್ತಾರೆ ಸಂಧ್ಯಾ.


ಈಗಾಗಲೇ ಮಂಗಳಾದೇವಿ, ಸಸಿಹಿತ್ಲು ಮೇಳಗಳ ಸಹಿತ ಚಿಕ್ಕ ಮೇಳ, ಹವ್ಯಾಸೀ ತಾಳಮದ್ದಳೆ ಹೀಗೆ ನೂರಾರು ಕಾರ್ಯಕ್ರಮಗಳಲ್ಲಿ ಭಾಗವತಿಕೆಯಲ್ಲಿ "ಕರಾವಳಿಯ ಕೋಗಿಲೆ "ಯೆಂದೇ ಗುರುತಿಸಲ್ಪಟ್ಟಿದ್ಧಾರೆ. ಸ್ವರ ಮಾಧುರಿ ಎನ್ನುವ ಗೌರವದೊಂದಿಗೆ ತಂದೆಯವರ ಹೆಸರಲ್ಲೇ ಪ್ರತಿಷ್ಠಾನವೊಂದನ್ನು ನೊಂದಾಯಿಸಿ ಯಕ್ಷ ಕಾವ್ಯ ತರಂಗಿಣಿ ಸಂಘಟನೆಯನ್ನೂ ಉತ್ಸಾಹದಿಂದ ಮುನ್ನಡೆಸುತ್ತಿದ್ದಾರೆ.


ಮೂಡುಬಿದಿರೆಯ ಆಳ್ವಾಸ್ ನಿಂದ ಎಂ.ಎಸ್. ಡಬ್ಲ್ಯು ಸ್ನಾತಕೋತ್ತರ ಪದವಿ ಪಡೆದ ಬಳಿಕ ಆಪ್ತ ಸಮಾಲೋಚಕಿಯಾಗಿ ಸಂಧ್ಯಾ ಕರ್ತವ್ಯ ನಿರ್ವಹಿಸಿದ್ದರು. ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲೂ ಆಪ್ತ ಸಮಾಲೋಚಕಿಯ ಕರ್ತವ್ಯ ನಿರ್ವಹಣೆ ಜತೆಗೆ ಸಹಾಯಕ ಪ್ರಾಧ್ಯಾಪಕಿಯಾಗಿಯೂ ಅವರು ಸಕ್ರಿಯರು. ಯಕ್ಷರಂಗದಲ್ಲಿ ಇನ್ನಷ್ಟು ಬೆಳೆಯಬೇಕು. ತನ್ನಯಕ್ಷ ಸೇವೆಯನ್ನು ತುಳುವರ ಹೊರನಾಡ ನೆಲ ಮುಂಬೈ ಸಹಿತ ಹೊರರಾಜ್ಯಗಳಿಗೂ ವಿಸ್ತರಿಸಿ ಬೆಳಗುವ ಉತ್ಸಾಹ ಅವರದ್ದು.


ಇದೀಗ ಮೇ 20ರ ಸೋಮವಾರ ಶ್ರೀ ಕ್ಷೇತ್ರ ಉಲ್ಲಂಜೆಯ ಶ್ರೀ ಮಂತ್ರದೇವತೆ ಸಹಿತ ಪಂಚದೈವಗಳ ಸನ್ನಿಧಿಯಲ್ಲಿ ರಾತ್ರಿ 7ರಿಂದ ಸಭಾ ಕಾರ‍್ಯಕ್ರಮ, ರಾತ್ರಿ 8 ರಿಂದ ಸಂಧ್ಯಾ ಪೂಜಾರಿ ವಿರಚಿತ " ಅಬ್ಬರದ ಗಗ್ಗರ " ನೂತನ ಪ್ರಸಂಗ ಅವರ ಭಾಗವತಿಕೆಯೊಂದಿಗೆ ಮೊದಲ ಪ್ರದರ್ಶನ ಕಾಣಲಿದೆ.


-ಗಣೇಶ್ ಕಾಮತ್, ಮೂಡುಬಿದಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top