ಮೈಸೂರಿನ ಸಂಗೀತ ಉತ್ಸವದಲ್ಲಿ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’ ಪ್ರದಾನ

Upayuktha
0

  • ಸಂಗೀತ ಕ್ಷೇತ್ರಕ್ಕೆ ವಾಸುದೇವಾಚಾರ್ಯರ ಕೊಡುಗೆ ಅನನ್ಯ
  • ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಶ್ಲಾಘನೆ
  • ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ಆಯೋಜನೆ





ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಹಾಮಹಿಮರಾದ ಮೈಸೂರು ವಾಸುದೇವಾಚಾರ್ಯರ ಕೊಡುಗೆ ಅನನ್ಯವಾಗಿದೆ ಎಂದು ಶಿವಮೊಗ್ಗದ ಖ್ಯಾತ ಗಾಯಕ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಹೇಳಿದರು.


ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ವಿದ್ವತ್ ಸಭೆಯಲ್ಲಿ ಅವರು ಪ್ರತಿಷ್ಠಿತ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.


ವಾಸುದೇವಾಚಾರ್ಯರು ತಮಿಳುನಾಡಿನಲ್ಲಿ ಜನಿಸಿದ್ದರೆ ಅವರ ಸಾಧನೆ ವಿಶ್ವಮಾನ್ಯವಾಗುತ್ತಿತ್ತು. ಅವರ ಕೃತಿಗಳು ಲೋಕ ವಿಖ್ಯಾತವಾಗುತ್ತಿದ್ದವು. ಆದರೆ ಕನ್ನಡಿಗರು ಆಚಾರ್ಯರ ವಿದ್ವತ್ತಿಗೆ ತೋರಿದ ಅನಾದರ ಹೆಚ್ಚಾದ ಕಾರಣ ಅವರ ಕೃತಿಗಳು ನಮ್ಮ ನಮ್ಮಲ್ಲೇ ಉಳಿದಿವೆ. ಈ ದಿಸೆಯಲ್ಲಿ ಸಾಕಷ್ಟು ರಚನಾತ್ಮಕ ಕಾರ್ಯ ನಡೆಯಬೇಕಿದೆ. ಅದಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ಮಹತ್ತರ ಸೇವೆ ಸಲ್ಲಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.


ಮೈಸೂರು ವಾಸುದೇವಾಚಾರ್ಯ ಮನೆ ಮೈಸೂರಿನಲ್ಲಿ ಸಂಗೀತಕ್ಕೆ ಮಹೋನ್ನತ ವೇದಿಕೆಯಾಗಿ ರೂಪುಗೊಂಡಿದೆ. ಅಲ್ಲಿ ಹಾಡಿದವರ ಧನ್ಯತೆಯೇ ವಿಶೇಷವಾಗಿದ್ದು ಎಂದು ಸ್ಮರಿಸಿದ ಅವರು ಭಾವುಕರಾಗಿ ವಾಸುದೇವಾಚಾರ್ಯರನ್ನು ನೆನೆದರು.  


ಪ್ರಶಸ್ತಿ ಪ್ರದಾನ:

ವಿದ್ವಾನ್ ಶೃಂಗೇರಿ ನಾಗರಾಜ್ ಅವರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ.ನರಸಿಂಹಮೂರ್ತಿ ಅವರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ಅವರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.

ಕಲಾಕ್ಷೇತ್ರದ ಹಿರಿಯ ಚೇತನ ವಿದ್ವಾನ್ ಡಾ.ರಾ.ವಿಶ್ವೇಶ್ವರನ್, ಲೇಖಕ ಮತ್ತು ಪತ್ರಕರ್ತ ಎ.ಆರ್.ರಘುರಾಮ, ಡಾ.ರಮಾ ಬೆಣ್ಣೂರು, ಭ್ರಮರಾ ಟ್ರಸ್ಟ್‌ನ ಸಂಸ್ಥಾಪಕಿ ಮಾಧುರಿ ತಾತಾಚಾರಿ, ವಿದ್ವಾನ್ ಡಾ.ರಾ.ಸ.ನಂದಕುಮಾರ್ ಮತ್ತು ವೀಣಾ ವಿದ್ವಾಂಸ ಪ್ರಶಾಂತ ಅಯ್ಯಂಗಾರ್, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ (ಶಿವು) ಮತ್ತು ಪುಸ್ತಕಂ ರಮಾ ಸಾಕ್ಷಿಯಾದರು. ಇದಕ್ಕೂ ಮುನ್ನ ವಾಸುದೇವಾಚಾರ್ಯರ ಕೃತಿಗಳ  ಗೋಷ್ಠಿ ಗಾಯನ, ವಿದುಷಿ ಮೈಸೂರು ರಾಜಲಕ್ಷ್ಮೀ ಅವರ ವೀಣಾವಾದನ ನೂರಾರು ಪ್ರೇಕ್ಷಕರನ್ನು ರಂಜಿಸಿತು.


ನರಸಿಂಹಮೂರ್ತಿ ದೊಡ್ಡ ಸಾಧಕರು:

ವಯೋಲಿನ್ ವಿದ್ವಾಂಸ ಎಚ್.ಕೆ. ನರಸಿಂಹ ಮೂರ್ತಿ ಅವರು ಕಲಾ ಲೋಕಕ್ಕೆ ಅಹರ್ನಿಷಿ ಸೇವೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಯುವಕರು ವಯಲಿನ್ ಹಿಡಿದು ಸಾಗುತ್ತಿದ್ದರೆ ಅವರು ಎಚ್.ಕೆ. ಎನ್. ಸ್ಟೂಡೆಂಟ್ ಎಂದು ಧೈರ್ಯವಾಗಿ ಹೇಳಬಹುದು. ಜೀವಮಾನದಲ್ಲಿ ಅವರು ಬಹುತೇಕ ಸಮಯವನ್ನು ಈ ವಾದ್ಯದ ನುಡಿಸಾಣಿಕೆ ಮತ್ತು ಪಾಠಕ್ಕಾಗಿ ಮೀಸಲಿಟ್ಟಿದ್ದಾರೆ. ಅವರಿಗೆ ಜೀವಮಾನದ ಪ್ರಶಸ್ತಿ ನೀಡಿ ಗೌರವಿಸಿರುವುದು ಮಹತ್ತರ ಕಾರ್ಯ ಎಂದು ಡಾ. ರಮಾ ಬೆಣ್ಣೂರು ಶ್ಲಾಘಿಸಿದರು.


ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ  

ಇದೇ ಸಂದರ್ಭದಲ್ಲಿ ಖ್ಯಾತ ವೀಣಾ ವಿದುಷಿ ರೇವತಿ ಕಾಮತ್  ಅವರ ‘ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್’ ಅನ್ನು ವಿದ್ವಾನ್ ಆರ್. ವಿಶ್ವೇಶ್ವರನ್ ಅವರು ಉದ್ಘಾಟಿಸಿದರು. ಪರಿಸರ ಸಂರಕ್ಷಣೆ, ಗ್ರಾಮೀಣ ಮಕ್ಕಳ ಶಿಕ್ಷಣ ಅಭಿವೃದ್ಧಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಪೋಷಣೆ ಮತ್ತು ಸಂವರ್ಧನೆಗೆ ಟ್ರಸ್ಟ್ ಸಂಕಲ್ಪ ಮಾಡಿದೆ ಎಂದು ರೇವತಿ ಕಾಮತ್ ತಿಳಿಸಿದರು.  



ಕನ್ನಡ ನಾಡಿನ ಖ್ಯಾತ, ವಿಖ್ಯಾತ ಸಂಗೀತ ವಿದ್ವಾಂಸರನ್ನು ಒಳಗೊಂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ (ಕೆಸಿಎಂಸಿ) ಕಳೆದ ಮೂರು ವರ್ಷಗಳಿಂದ ಕಲಾಕ್ಷೇತ್ರದ ಅಭ್ಯುದಯಕ್ಕೆ ಸೇವೆ ಸಲ್ಲಿಸುತ್ತಿದೆ. ಮುಂದೆ ನೂರಾರು ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಮ್ಮಿಕೊಂಡು ಯುವ ಸಂಗೀತಗಾರರ ಏಳಿಗೆಗೆ ಶ್ರಮಿಸಲು ಸಂಕಲ್ಪ ಮಾಡಿದೆ. ಸಂಗೀತ ಲೋಕದ ದಿಗ್ಗಜರನ್ನು ಗುರುತಿಸಿ, ಗೌರವಿಸುವ ಸೇವೆಯನ್ನೂ ಟ್ರಸ್ಟ್ ಮಾಡುತ್ತಿದೆ. ಒಟ್ಟಾರೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹತ್ವ ಕಾಪಾಡಲು ನಮ್ಮ ಕೆಸಿಎಂಸಿ ಟ್ರಸ್ಟ್ ದಿಟ್ಟ ಹೆಜ್ಜೆ ಇಟ್ಟಿದೆ. ಕಲಾರಸಿಕರ ಸಹಕಾರವೇ ನಮಗೆ ಶ್ರೀರಕ್ಷೆ.

-ಡಾ. ರಾ. ನಂದಕುಮಾರ್

ಖ್ಯಾತ ಸಂಗೀತ ವಿದ್ವಾಂಸ ಮತ್ತು ಟ್ರಸ್ಟಿ


ಸಂಗೀತ ಕ್ಷೇತ್ರದಲ್ಲಿ ಸಿದ್ಧಿ ಪಡೆದ ಅನೇಕರು ಪ್ರಸಿದ್ಧಿಗೆ ಬರಲೇ ಇಲ್ಲ. ಅವರ ಸಾಲಿನಲ್ಲಿ ಮೈಸೂರು ವಾಸುದೇವಾಚಾರ್ಯರೂ ಒಬ್ಬರು. ಮೈಸೂರಿನಲ್ಲಿ ಅವರಿಗೆ ರಾಜಾಶ್ರಯ ಮಾತ್ರ ಇತ್ತು. ಆದರೆ ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಇನ್ನಷ್ಟು ಮಾನ್ಯವಾಗಬೇಕಿತ್ತು. ಇಂದಿನ ಪೀಳಿಗೆ  ಇಂಥ ಮಹಾನ್ ಕಲಾವಿದರ ರಚನೆಗಳನ್ನು ಶ್ರದ್ಧೆಯಿಂದ ಕಲಿತು ಹಾಡಬೇಕು. ಕೆಸಿಎಂಸಿ ಟ್ರಸ್ಟ್ ಈ ನಿಟ್ಟಿನಲ್ಲಿ ಸಾವಿರಾರು ಕೆಲಸಗಳನ್ನು ಮಾಡಲಿ ಎಂದು ಹಾರೈಸುವೆ.

- ವಿದ್ವಾನ್  ಡಾ.ರಾ.ವಿಶ್ವೇಶ್ವರನ್

ಹಿರಿಯ ವೀಣಾ ವಿದ್ವಾಂಸರು



ವಾಸುದೇವಾಚಾರ್ಯರ ಹೆಸರಿನಲ್ಲಿ ನನಗೆ ಕೊಡಮಾಡಿದ ಪ್ರಶಸ್ತಿಯನ್ನು ನಾನು ಆಶೀರ್ವಾದ ಎಂದೇ ಭಾವಿಸಿದ್ದೇನೆ. ಈ ಮೂಲಕ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಸಂಗೀತ ಕ್ಷೇತ್ರಕ್ಕೆ ನಾನು ಇನ್ನಷ್ಟು ಸೇವೆ ಮಾಡಲು ಇದು ಶಕ್ತಿ ನೀಡಲಿ ಎಂದು ಆಶಿಸುವೆ.

- ವಿದ್ವಾನ್ ಎಚ್.ಎಸ್. ನಾಗರಾಜ್, ಶಿವಮೊಗ್ಗ  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top