ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಬಿಜೆಪಿ ಶಾಸಕರು, ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಸರ್ಕಾರದ ದಬ್ಬಾಳಿಕೆಗೆ ಬಿಜೆಪಿ ಶಾಸಕರು ಹೆದರುವುದಿಲ್ಲ. ಅಲ್ಲದೆ ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ, ಗಡಿಪಾರು, ಕಿರುಕುಳ ನೀಡುವುದನ್ನು ಪೊಲೀಸ್ ಇಲಾಖೆ ಮೂಲಕ ಸರ್ಕಾರ ಮಾಡಿಸುತ್ತಿದೆ. ಈ ಜಿಲ್ಲೆಯಲ್ಲಿ ಬಿಜೆಪಿಯ ಏಳು ಶಾಸಕರಿದ್ದು, ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ ಎಂದರು.
ಶಾಲಾ ಸಮವಸ್ತ್ರ ವಿಚಾರದಲ್ಲಿ ಪೋಷಕರ ಪರವಾಗಿ ಮಾತನಾಡಿದ ಕಾರಣಕ್ಕೆ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ ವಿರುದ್ಧ ಕೇಸು ದಾಖಲಿಸಲಾಯಿತು. ಈಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೂ ವಿನಾ ಕಾರಣ ಕೇಸು ದಾಖಲಿಸಲಾಗಿದೆ. ಕಾನೂನು ಪ್ರಕಾರ ಹರೀಶ್ ಪೂಂಜಾಗೆ ನೋಟಿಸ್ ನೀಡಿ ತನಿಖೆ ಬರುವಂತೆ ಕರೆಯಬೇಕಿತ್ತು. ಅದು ಬಿಟ್ಟು ಅವರ ಮನೆಗೆ ಬಂಧಿಸಲು ಆಗಮಿಸಿದ್ದಲ್ಲದೆ, ಹೊರಗೆ ಅಪಾರ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಅವರೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತಂತೆ ವರ್ತಿಸಲಾಗಿದೆ ಎಂದರು.
ಗಣಿಗಾರಿಕೆ ವಿಚಾರದಲ್ಲಿ ಅಲ್ಲಿನ ಯುವ ಮೋರ್ಚಾ ಅಧ್ಯಕ್ಷರ ಪಾತ್ರ ಇಲ್ಲ, ಆದರೂ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದನ್ನು ಪ್ರಶ್ನಿಸಲು ಠಾಣೆಗೆ ತೆರಳಿದ ಶಾಸಕರನ್ನು ಜನಪ್ರತಿನಿಧಿ ನೆಲೆಯಲ್ಲಿ ಗೌರವಯುತವಾಗಿ ಪೊಲೀಸರು ನಡೆಸಿಕೊಳ್ಳಬೇಕಿತ್ತು. ಅದು ಬಿಟ್ಟು ಅವರು ಪ್ರಶ್ನಿಸಿದ್ದಕ್ಕೆ ಅವರ ವಿರುದ್ಧವೇ ಕೇಸು ದಾಖಲಿಸಲಾಗಿದೆ. ಮರುದಿನ ಪ್ರತಿಭಟನೆ ನಡೆಸಿ ಮಾತನಾಡಿದ್ದಕ್ಕೂ ಮತ್ತೆ ಕೇಸು ದಾಖಲಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಕುಮ್ಮಕ್ಕು ಇದೆ. ಜಿಲ್ಲೆಯ ಎಲ್ಲೇ ಆದರೂ ಅಕ್ರಮ ವ್ಯವಹಾರಕ್ಕೆ ಬಿಜೆಪಿಯ ವಿರೋಧ ಇದೆ ಎಂದರು.
ಮುಖಂಡರಾದ ಪೂಜಾ ಪೈ, ನಿತಿನ್ ಕುಮಾರ್, ಸಂಜಯ ಪ್ರಭು, ವಿಕಾಸ್ ಪಿ., ಯತೀಶ್ ಆರ್ವಾರ, ಪ್ರಶಾಂತ್ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ