ರಸ್ತೆಯಲ್ಲಿ ನಮಾಜ್- ಸಮಾಜದ ಸಾಮರಸ್ಯಕ್ಕೆ ಸರಕಾರದಿಂದಲೇ ವಿಷ: ಡಾ. ಭರತ್ ಶೆಟ್ಟಿ

Upayuktha
0


ಮಂಗಳೂರು: ನಡುರಸ್ತೆಯಲ್ಲೇ ನಮಾಜ್ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯುಂಟು ಮಾಡಿದವರ ಮೇಲೆ ಹಾಕಲಾದ ಕೇಸಿನ ತನಿಖೆ ನಡೆಸದೆ ಬಿ ರಿಪೋರ್ಟ್ ಹಾಕುವ ಮೂಲಕ ಕಾಂಗ್ರೆಸ್ ಸರಕಾರ ಸಮಾಜದ ಸಾಮರಸ್ಯೆ ಕೆಡಿಸಲು ವಿಷ ಬೀಜ ಬಿತ್ತಿದೆ ಎಂದು ಮಂಗಳೂರು ಉತ್ತರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.


ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು (ಮೇ31) ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಇಂತಹ ಬೇಜವಾಬ್ದಾರಿ ವರ್ತನೆಯಿಂದ ಮುಂದೆ ರಸ್ತೆಯಲ್ಲಿ ನಮಾಜ್ ಮಾಡುವುದು ಚಾಳಿಯಾಗಿ ಪರಿಣಮಿಸಲಿದೆ. ಇತರರು ಕೂಡ ಅನುಮತಿ ಪಡೆಯದೆ ರಸ್ತೆಯಲ್ಲಿಯೇ ಪ್ರಾರ್ಥನೆ, ಮತ್ತಿತರ ಕಾರ್ಯಕ್ರಮ ನಡೆಸಲು ಈ ಪ್ರಕರಣ ಪ್ರೇರಣೆಯಾಗಲಿದೆ. ಸಾಮರಸ್ಯವನ್ನು ಗುತ್ತಿಗೆ ಪಡೆದವರಂತೆ ಮಾತನಾಡುವ ಕಾಂಗ್ರೆಸಿಗರೇ ಇಂತಹ ಅವ್ಯವಸ್ಥೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.


ಮುಸ್ಲಿಮರ ತುಷ್ಟೀಕರಣವನ್ನು ಮಾಡುತ್ತಲೇ ಬಂದಿರುವ ಕಾಂಗ್ರೆಸ್‌, ಜನನಿಬಿಡ ಹಾಗೂ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ನಮಾಜ್ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರೆ ಉದ್ಧಟತನದ ಉತ್ತರ ನೀಡುತ್ತಾರೆ. ಯಕ್ಷಗಾನ ಅಥವಾ ವಿಶೇಷ ಹಬ್ಬದ ಸಂದರ್ಭದಲ್ಲಿ ರಸ್ತೆಯಲ್ಲಿ ಹಿಂದೂಗಳು ಕಾರ್ಯಕ್ರಮ ನಡೆಸುವುದಾದರೆ ಸಂಬಂಧಿತ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದುಕೊಳ್ಳಲಾಗುತ್ತದೆ. ಆದರೆ ಯಾವುದೇ ಅನುಮತಿ ಪಡೆಯದೆ ಏಕಾಏಕಿ ರಸ್ತೆಗೆ ನುಗ್ಗಿ ನಮಾಜ್ ಮಾಡುವುದು ಸರಿಯಲ್ಲ. ಆ ಬ್ಗಗೆ ಸ್ವಯಂಪ್ರೇರಿತ ಕೇಸ್ ದಾಖಲಿಸಿದ ಪೊಲೀಸ್ ಆಧಿಕಾರಿಯನ್ನು ರಜೆಯ ಮೇಲೆ ಕಳಿಸುತ್ತಾರೆ. ದೂರು ನೀಡಿದ ಹಿಂದೂ ಮುಖಂಡರ ಮೇಲೆ ಕೇಸು ಜಡಿಯುತ್ತಾರೆ. ಇದ್ಯಾವ ಬಗೆಯ ರಾಜಕೀಯ? ಎಂದು ಶಾಸಕ ಭರತ್ ಶೆಟ್ಟಿ ಪ್ರಶ್ನಿಸಿದರು.


ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌ ಮೇಲೆ ಕೇಸ್ ಹಾಕಿದ್ದಾರೆ. ಬಿಜೆಪಿಯ ಆರು ಮಂದಿ ಶಾಸಕರ ಪೈಕಿ ಮೂವರ ಮೇಲೆ ಈಗಾಗಲೇ ಸುಳ್ಳು ಕೇಸುಗಳನ್ನು ಹಾಕಿಸಿದ್ದಾರೆ. ಯಾರೂ ಪ್ರಶ್ನೆ ಮಾಡಬಾರದು ಎಂಬ ಮನಸ್ಥಿತಿ ಕಾಂಗ್ರೆಸ್ ಸರಕಾರದ್ದು. ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ಎಲ್ಲ ಕಡೆ ಫಿಕ್ಸಿಂಗ್ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಪತ್ರಿಕಾ ಗೋಷ್ಠಿಯಲ್ಲಿ ಪದವೀಧರ ಕ್ಷೇತ್ರದ ಚುನಾವಣಾ ಪ್ರಭಾರಿ ವಿಕಾಸ್ ಪುತ್ತೂರು, ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ರಮೇಶ್ ಕಂಡೆಟ್ಟು, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್ ಹಾಗೂ ಜಿಲ್ಲಾ ಮಾಧ್ಯಮ ಸಂಚಾಲಕ ಕದ್ರಿ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top