ಉಡುಪಿ: ಶ್ರೀ ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ಸಂಕಲ್ಪದಂತೆ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶವು ಪಲಿಮಾರು ಮೂಲ ಮಠದಲ್ಲಿ ನಡೆಯಲಿದೆ.
ಪ್ರಾತಃ ಸ್ಮರಣೀಯರಾದ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೋತ್ಸವದ ಸಂದರ್ಭದಲ್ಲಿ ಈ ಸಮಾವೇಶ ಹಮ್ಮಿಕೊಂಡಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 18-40 ರ ವಯೋಮಿತಿಯ ತ್ರಿಮತಸ್ಥ ಬ್ರಾಹ್ಮಣ ಯುವಕರು ಈ ಸಮಾವೇಶದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಬ್ರಾಹ್ಮಣ ಸಮಾಜದ ಅನನ್ಯ ಜೀವನಕ್ರಮಗಳು ಮತ್ತು ಅದರ ಸಂರಕ್ಷಣೆಯ ಅನಿವಾರ್ಯತೆ ಮತ್ತು ಸಮುದಾಯವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಎದುರಿಸುತ್ತಿರುವ ಸವಾಲುಗಳ ಕುರಿತಾಗಿ ಯುವ ಮನಸ್ಸುಗಳ ನಡುವೆ ಚಿಂತನ ಮಂಥನ ನಡೆಯಬೇಕೆಂಬ ಆಶಯದಲ್ಲಿ ಇದೇ ಪ್ರಥಮ ಬಾರಿಗೆ ಇಂಥಹ ಯುವ ಸಮಾವೇಶ ಆಯೋಜಿಸಲಾಗುತ್ತಿದ್ದು ವಿಹಿತಮ್ ಎಂಬ ಶೀರ್ಷಿಕೆಯಲ್ಲಿ ನಡೆಯುತ್ತಿದೆ.
ಪಲಿಮಾರು ಮೂಲ ಮಠದ ಶ್ರೀ ವೇದವ್ಯಾಸ ದೇವರು ಶ್ರೀ ಅಂಜನೇಯ ಹಾಗೂ ಶ್ರೀ ವಿದ್ಯಾಮಾನ್ಯತೀರ್ಥರ ಮೂಲ ವೃಂದಾವನ ಸನ್ನಿಧಿಯಲ್ಲಿ ಮೇ 18 ಶನಿವಾರ ಬೆಳಿಗ್ಗೆಯಿಂದ ಸಂಜೆಯ ವರೆಗೆ ಧಾರ್ಮಿಕ ವಿಧಿಗಳು, ವಿಚಾರ ಗೋಷ್ಠಿಗಳು, ಮುಕ್ತ ಸಂವಾದವೇ ಮೊದಲಾಗಿ ಕಾರ್ಯಕ್ರಮಗಳು ನಡೆಯಲಿವೆ.
ಅನೇಕ ಮಠಾಧೀಶರು ಗಣ್ಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಸಮಾವೇಶದಲ್ಲಿ ಭಾಗವಹಿಸಲು ಅಪೇಕ್ಷಿಸುವ ಯುವಕರು ಮುಂಗಡವಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿ್ದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಬೇರೆಡೆಗಳಲ್ಲಿ ವಿದ್ಯಾರ್ಜನೆ, ಉದ್ಯೋಗ ವ್ಯವಹಾರ ಗಳನ್ನು ನಡೆಸುತ್ತಿರುವ ದಕ ಮತ್ತು ಉಡುಪಿ ಜಿಲ್ಲೆಗಳ ಮೂಲದ ವಿಪ್ರ ಯುವಕರೂ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಯತ್ನಿಸಲಾಗುತ್ತಿದೆ.
ಪೇಜಾವರ ಶ್ರೀಗಳಿಗೆ ಅಭಿನಂದನೆ:
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆ ಮತ್ತು ಮಂಡಲೋತ್ಸವಗಳನ್ನು ವೈಭವದಿಂದ ನೆರವೇರಿಸಿದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಶ್ರೀ ಸಂಸ್ಥಾನ ಪಲಿಮಾರು ಮಠದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ