ಮಂಗಳೂರು: ಅಧಿಕ ರಕ್ತದೊತ್ತಡ ಎನ್ನುವುದು ರೋಗವಲ್ಲ. ಇದೊಂದು ಅನಾರೋಗ್ಯಕರ ಜೀವನಶೈಲಿಯ ಪಿಡುಗು ಆಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಕೂಡಾ ಈ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ದೋಷಪೂರಿತ ಕೊಬ್ಬು ಮಿಶ್ರಿತ ಆಹಾರ, ಕರಿದ ತಿಂಡಿಗಳ ಅತ್ಯಧಿಕ ಸೇವನೆ, ದೈಹಿಕ ಪರಿಶ್ರಮವಿಲ್ಲದ ಜೀವನಶೈಲಿ, ವಿಪರೀತ ಒತ್ತಡದ ಕೆಲಸದ ವಾತಾವರಣ ಮತ್ತು ಮೋಜು ಮಸ್ತಿಗೆಂದು ಧೂಮಪಾನ, ಮದ್ಯಪಾನದ ದುರ್ಬಳಕೆಗಳಿಂದಾಗಿ ಪ್ರತೀ ಹತ್ತರಲ್ಲಿ ಆರು ಮಂದಿ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ಖ್ಯಾತ ದಂತ ವೈದ್ಯರಾದ ಡಾ|| ಮುರಲೀಮೋಹನ್ ಚೂಂತಾರು ರವರು ಅಭಿಪ್ರಾಯಪಟ್ಟರು.
ಈಗಿಂದೀಗಲೇ ಜೀವನಶೈಲಿ ಮಾರ್ಪಾಡು, ಆಹಾರದ ಬದಲಾವಣೆ ಮತ್ತು ನಿರಂತರ ದೈಹಿಕ ಕಸರತ್ತು ಮಾಡಿದರೆ ಮಾತ್ರ ಈ ರೋಗಗಳಿಂದ ಶಾಶ್ವತ ಪರಿಹಾರ ಪಡೆಯಬಹುದು. ಇಲ್ಲವಾದಲ್ಲಿ ನಲ್ವತ್ತರ ಹರೆಯದಲ್ಲಿಯೇ ಸ್ಟ್ರೋಕ್, ಹೃದಯಾಘಾತ ಮುಂತಾದ ಮಾರಣಾಂತಿಕ ಸಮಸ್ಯೆಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ರಕ್ತದೊತ್ತಡವನ್ನು ನಲ್ವತ್ತು ವರ್ಷ ದಾಟಿದವರು ಪ್ರತೀ ಆರು ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳಬೇಕು. ತಮ್ಮ ರಕ್ತದೊತ್ತಡದ ಬಗ್ಗೆ ತೀವ್ರ ನಿಗಾ ಇಡಬೇಕು ಎಂದು ಅವರು ಹೇಳಿದರು.
ಶುಕ್ರವಾರದಂದು ವಿಶ್ವ ಅಧಿಕ ರಕ್ತದೊತ್ತಡ ಜಾಗೃತಿ ದಿನದ ಅಂಗವಾಗಿ ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಮಂಜೇಶ್ವರ ಇಲ್ಲಿ ಉಚಿತ ರಕ್ತದೊತ್ತಡ ತಪಾಸಣಾ ಶಿಬಿರ ಜರಗಿತು. ಬೆಳಿಗ್ಗೆ 9.00 ರಿಂದ ಸಂಜೆ 6.00 ರ ವರೆಗೆ ಶಿಬಿರ ಜರುಗಿತು. ಸುಮಾರು 50ಕ್ಕೂ ಹೆಚ್ಚು ಮಂದಿ ದಂತ ರೋಗಿಗಳ ರಕ್ತದೊತ್ತಡವನ್ನು ಉಚಿತವಾಗಿ ಪರೀಕ್ಷಿಸಲಾಯಿತು. ಸುಮಾರು 25ಕ್ಕೂ ಹೆಚ್ಚು ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಈ ಶಿಬಿರದಿಂದ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ದಂತ ವೈದ್ಯೆ ಡಾ|| ರಾಜಶ್ರೀ ಮೋಹನ್, ಹಾಗೂ ಶುಶ್ರೂಷಕರಾದ ರಮ್ಯ. ಚೈತ್ರ, ಸುಷ್ಮಿತಾ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಇವರ ಜಂಟಿ ಆಶ್ರಯದಲ್ಲಿ ಈ ಶಿಬಿರ ಯಶಸ್ವಿಯಾಗಿ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ