ಸಂಪತ್ತನ್ನು ಕೂಡಿಡುವ ಬದಲು ಹಂಚಿದರೆ ಅದು ದುಪ್ಪಟ್ಟಾಗುತ್ತದೆ: ಕನ್ಯಾಡಿ ಶ್ರೀ

Upayuktha
0

 ಅಡ್ಯಾರ್ ಗಾರ್ಡನ್‌ನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ


ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ.) ಇದರ ವತಿಯಿಂದ ಯಕ್ಷಧ್ರುವ ಪಟ್ಲ ಸಂಭ್ರಮದ ಸಭಾ ಕಾರ್ಯಕ್ರಮ ಆದಿತ್ಯವಾರ ಮಧ್ಯಾಹ್ನ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. 


ಆಶೀರ್ವಚನಗೈದ ಕನ್ಯಾಡಿ ಶ್ರೀ ರಾಮ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು, "ನಮ್ಮಲ್ಲಿರುವ ಸಂಪತ್ತನ್ನು ಕೂಡಿಡುವ ಬದಲು ಯೋಗ್ಯರಿಗೆ ಹಂಚಿದರೆ ಅದು ದುಪ್ಪಟ್ಟಾಗುತ್ತದೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ನಾಣ್ಣುಡಿಯಂತೆ ನಾವು ಬದುಕಬೇಕು. ಮನುಷ್ಯ ಜನ್ಮವನ್ನು ನಮಗೆ ಭಗವಂತ ನೀಡಿದ್ದಾನೆ. ನಾವು ಜನ್ಮವನ್ನು ಸಾರ್ಥಕಗೊಳಿಸಬೇಕು. ಬದುಕಿನಲ್ಲಿ ಯಜ್ಞವನ್ನು ಭಗವಂತ ಸೃಷ್ಟಿ ಮಾಡುತ್ತಾನೆ. ಪಟ್ಲರದ್ದು ಕೂಡಾ ಸಾಮಾಜಿಕ ಯಜ್ಞ. ಈ ಮೂಲಕ ಜನರಿಗೆ ಪಟ್ಲ ನೆರವಾಗುತ್ತಿದ್ದಾರೆ. ಪಟ್ಲರಲ್ಲಿ ಸರಳತೆ, ಸಜ್ಜನಿಕೆ ಎರಡೂ ಇದೆ. ನಾವು ನಮ್ಮ ನಮ್ಮ ಕೆಲಸವನ್ನು ಸರಿಯಾಗಿ ಮಾಡಿದರೆ ಭಗವಂತನ ಕೃಪೆ ಇರುತ್ತದೆ. ಒಳ್ಳೆಯ ಕೆಲಸಗಳಿಗೆ ಸಂಪತ್ತನ್ನು ದಾನ ಮಾಡಿದರೆ ಅದು ವ್ಯರ್ಥವಾಗುವುದಿಲ್ಲ. ಪಟ್ಲ ಫೌಂಡೇಶನ್ ಕೈಗೊಂಡಿರುವ ಈ ಸಮಾಜಮುಖಿ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವ ಮೂಲಕ ಸಮಾಜದ ಅಶಕ್ತರಿಗೆ ನೆರವಾಗೋಣ" ಎಂದರು.


ಜಮ್ಮು ಕಾಶ್ಮೀರದ ಪ್ರಿನ್ಸಿಪಾಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ಮಾತನಾಡಿ, 'ಒಂದು ಕಾಲದಲ್ಲಿ ನಮ್ಮ ಕರಾವಳಿಯ ಕಲೆ ಯಕ್ಷಗಾನವು ನಶಿಸಿಹೋಗುವ ಸ್ಥಿತಿಯಲ್ಲಿತ್ತು. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಭಗೀರಥ ಪ್ರಯತ್ನವನ್ನು ಮಾಡುತ್ತಿದ್ದಾರೆ. 4000ಕ್ಕೂ ಹೆಚ್ಚು ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಮೂಲಕ ಕಲೆಯನ್ನು ರಾಜ್ಯಾದ್ಯಂತ ಪಸರಿಸುತ್ತಿದ್ದಾರೆ. ದೇಶದ ನಾನಾ ಭಾಗದಲ್ಲಿ ಯಕ್ಷಗಾನ ಆಯೋಜನೆ ಮಾಡುತ್ತಿದ್ದಾರೆ. ಕಲೆಯ ಅಭಿವೃದ್ಧಿಗೆ ಶ್ರಮ ಪಡುವ ಜೊತೆಗೆ ಕಲಾವಿದನ ಬದುಕಿನ ಅಭಿವೃದ್ಧಿಗೂ ಪಟ್ಲ ಶ್ರಮಿಸುತ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ. ಪ್ರಪಂಚದಲ್ಲಿ ಪುರಾತನವಾದ ನಮ್ಮ ನಾಗರೀಕತೆಯನ್ನು ಮುಂದೆಯೂ ಉಳಿಸಬೇಕು. ಯಕ್ಷಗಾನದಂತಹ ಕಲೆ ಮುಂದಿನ ಪೀಳಿಗೆಗೂ ಉಳಿಯಬೇಕು" ಎಂದರು.


ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, "ಯುವಜನತೆ ಯಕ್ಷಗಾನದಿಂದ ದೂರವಾಗುತ್ತಿರುವ ಈ  ಆಧುನಿಕ ಕಾಲಘಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲೂ ಯಕ್ಷಗಾನದ ವೈಭವ ಮರುಕಳಿಸುವಲ್ಲಿ ಯಕ್ಷಧ್ರುವ ಪಟ್ಲ ಟ್ರಸ್ಟ್ ಶ್ರಮ ಶ್ಲಾಘನೀಯವಾದುದು. ತುಳುನಾಡಿನ ಕಲೆಯನ್ನು ಮರಳಿ ಉಳಿಸುವಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ಯೋಜನೆ ಮತ್ತು ಯೋಚನೆ ಇದೇ ರೀತಿ ಮುಂದುವರಿಯಲಿ" ಎಂದು ಶುಭ ಹಾರೈಸಿದರು.


ಮುಂಬೈ ಉದ್ಯಮಿ ಕೆ.ಎಂ. ಶೆಟ್ಟಿ ಮಾತನಾಡಿ, "ಪಟ್ಲ ಸತೀಶ್ ಶೆಟ್ಟಿಯವರ ಸಾಧನೆಯನ್ನು ಎಷ್ಟು ಹೊಗಳಿದರೂ ಕಡಿಮೆ. ಸಾಮಾಜಿಕವಾಗಿ ಯಕ್ಷಗಾನ ಕಲಾವಿದರ ಸಂಕಷ್ಟಗಳಿಗೆ ನೆರವಾಗುತ್ತಿರುವ ಅವರ ಕಾರ್ಯವೈಖರಿ ಮೆಚ್ಚುವಂತದ್ದು" ಎಂದರು.


ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸೃಷ್ಟಿ ಶಶಿಧರ್ ಶೆಟ್ಟಿ, ಉದ್ಯಮಿ ಕೆ.ಡಿ. ಶೆಟ್ಟಿ, ವಿದ್ಯಾ ಹರ್ಬಲ್ ಗ್ರೂಫ್ ಆಫ್ ಕಂಪೆನಿ ಅಧ್ಯಕ್ಷ ಕೆ. ಶ್ಯಾಮ ಪ್ರಸಾದ್ ಉದ್ಯಮಿ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಪುರುಷೋತ್ತಮ್ ಶೆಟ್ಟಿ, ಕಿಮ್ಮನೆ ಆದಿತ್ಯ, ಭುವನೇಶ್ ಪಚ್ಚಿನಡ್ಕ, ರವಿನಾಥ್ ಶೆಟ್ಟಿ, ಮಹೇಶ್ ಶೆಟ್ಟಿ, ಸಂತೋಷ್ ಶೆಟ್ಟಿ ಪನ್ವೆಲ್, ಶಶಿಧರ್ ಶೆಟ್ಟಿ ಇನ್ನಂಜೆ, ಯುಎಸ್ಎ ಯೋಗೇಂದ್ರ ಭಟ್ ಉಳಿ, ಯುಎಸ್ಎ ವಾಸು ಐತಾಳ್ ಪಣಂಬೂರು, ಜಯಂತ್ ಕೋಟ್ಯಾನ್ ನಡುಬೈಲ್, ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಬಾಬು ಶೆಟ್ಟಿ ಪೆರಾರ, ರಾಜೀವ್ ಪೂಜಾರಿ ಕೈಕಂಬ, ಸತೀಶ್ ಶೆಟ್ಟಿ ಎಕ್ಕಾರ್, ಉಮೇಶ್ ಭಂಡಾರಿ, ಜಗದೀಶ್ ಶೆಟ್ಟಿ, ಗಣೇಶ್, ತಾರಾನಾಥ್ ಶೆಟ್ಟಿ ಬೋಳಾರ್, ಉಮೇಶ್ ಶೆಟ್ಟಿ, ಹೇಮಂತ್ ರೈ, ಯಶೋಧರ್, ಸತೀಶ್ ಶೆಟ್ಟಿ, ಪಿ.ಆರ್. ಶೆಟ್ಟಿ, ಕೇಂದ್ರೀಯ ಸಮಿತಿ ಉಪಾಧ್ಯಕ್ಷ ಡಾ. ಮನು ರಾವ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ , ಕೋಶಾಧಿಕಾರಿ CA ಸುದೇಶ್ ಕುಮಾರ್, ಸುಧಾಕರ್ ಎಸ್. ಪೂಂಜಾ, ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರಕಾಶ್ ರಾವ್, ಕೇಂದ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಜಗನ್ನಾಥ ಶೆಟ್ಟಿ ಬಾಳ, ರವಿಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕರ್ನೂರು ಮೋಹನ್ ರೈ, ನಿತೇಶ್ ಶೆಟ್ಟಿ ಎಕ್ಕಾರ್, ಶರತ್ ಶೆಟ್ಟಿ ಪಡುಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ದೇವದಾಸ್ ಶೆಟ್ಟಿ ತುಂಬೆ ಧನ್ಯವಾದ ಸಮರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top