ಮಂಗಳೂರು: "ತುಳುವನ್ನು ಕಟ್ಟುವ ಮತ್ತು ಮುಟ್ಟಿಸುವ ಕೆಲಸವನ್ನು ಮಕ್ಕಳ ಹಂತದಿಂದಲೇ ಮಾಡುತ್ತಾ ಬಂದರೆ ಅದೇ ತುಳುವಿಗೆ ನಾವು ಕೊಡುವ ಮಾನ್ಯತೆ" ಎಂದು ತುಳುವೆರೆ ಕಲದ ಅಧ್ಯಕ್ಷೆ, ತುಳು ಶಿಕ್ಷಕಿ ಶ್ರೀಮತಿ ಗೀತಾ ಲಕ್ಷ್ಮೀಶ್ ಹೇಳಿದರು.
ಅವರು ನಗರದ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಸಭಾಭವನದಲ್ಲಿ "ಗುಬ್ಬಿದ ಗೂಡು" ಮಕ್ಕಳ ವಾದ್ಯಗೋಷ್ಠಿ ಗಾಯನ ತಂಡದವರು ಆಯೋಜಿಸಿದ ಪುಟಾಣಿ ಮಕ್ಕಳ ತುಳು ಪದ ಪ್ರಾಸ ಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತುಳುವನ್ನು ಉಳಿಸುವಲ್ಲಿ ಅಮ್ಮಂದಿರ ಪಾತ್ರ ಬಹಳ ಮುಖ್ಯವಾದದ್ದು. ತುಳುವನ್ನು ಮಕ್ಕಳ ಪದ ಪ್ರಾಸ ಗಳ ಮೂಲಕ ಹೇಳಿಕೊಟ್ಟರೆ ಮಕ್ಕಳಿಗೆ ಭಾಷೆ ಇಷ್ಟವಾಗುತ್ತದೆ ಎಂದವರು ನುಡಿದರು.
ತುಳು ಪದ ಪ್ರಾಸ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳನ್ನು ಹೆತ್ತವರು ಮತ್ತು ಅತಿಥಿಗಳ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ತುಳುನಾಡು ಟ್ರಸ್ಟ್ (ರಿ ) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ರೋಹಿತಾಶ್ವ ಅವರು ದೀಪ ಬೆಳಗಿ ಉದ್ಘಾಟಿಸಿದರು. ಅವರು ಮಾತನಾಡಿ" ತುಳುತನವನ್ನು ಮತ್ತು ತುಳು ಸಂಸ್ಕೃತಿಯನ್ನು ನಾವು ಬಹಳ ಹೆಮ್ಮೆಯಿಂದ ನಮ್ಮೊಳಗೆ ತುಂಬಿ ಕೊಂಡಾಗಲೇ ಇತರರೂ ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ತಾಳುತ್ತಾರೆ" ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ ಕೃಷ್ಣಮೂರ್ತಿ ಮತ್ತು ನಿವೃತ್ತ ಅಧ್ಯಾಪಕರು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರೂ ಆಗ ಪೇಜಾವರ ಸುಧಾಕರ ರಾವ್ ಪಾಲ್ಗೊಂಡಿದ್ದರು. ಗುಬ್ಬಿದ ಗೂಡು ತಂಡದ ನಿರ್ದೇಶಕ ಎಲ್ಲೂರು ಶ್ರೀನಿವಾಸರಾವ್, ಕಾರ್ಯಕಾರಿ ಸಮಿತಿಯ ಶ್ರೀಮತಿ ಕವಿತಾ ಮತ್ತು ಶ್ರೇಯಶ್ರೀ ಭಟ್, ತಂಡದ ಕಾರ್ಯದರ್ಶಿ ರಘು ಇಡ್ಕಿದು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿನಮ್ರ ಇಡ್ಕಿದು ಹಾಡಿದ ತುಳು ಮತ್ತು ಮಲಯಾಳಂ ಹಾಡುಗಳ ದೃಶ್ಯ ಗೀತೆಗಳನ್ನು ರೋಹಿತಾಶ್ವ ಮತ್ತು ಶ್ರೀಮತಿ ಗೀತಾ ಲಕ್ಷ್ಮೀಶ್ ಅವರು ಬಿಡುಗಡೆಗೊಳಿಸಿದರು.
ಎಲ್ಲೂರು ಶ್ರೀನಿವಾಸರಾವ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ