ಆಳ್ವಾಸ್ ತಾಂತ್ರಿಕ ಕಾಲೇಜಿನ 2024ರ ವಾರ್ಷಿಕೋತ್ಸವ ಸಮಾರಂಭ
ವಿದ್ಯಾಗಿರಿ: ಇದು ಮಾಹಿತಿಯ ಯುಗ, ಇಲ್ಲಿ ಸುಳ್ಳು ಸುದ್ದಿಗಳು ಹೆಚ್ಚು ಆಕರ್ಷಣೆ ಪಡೆಯುತ್ತವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ವೇಣುಗೋಪಾಲ್. ಕೆ. ಆರ್ ಹೇಳಿದರು.
ಅವರು ಮುಂಡ್ರುದೆಗುತ್ತು ಕೆ. ಅಮರನಾಥ್ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ನಡೆದ ಆಳ್ವಾಸ್ ತಾಂತ್ರಿಕ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ಹಾಗೂ ಮಾನವನ ಬುದ್ದಿಮತ್ತೆಯ ವ್ಯತ್ಯಾಸ ತಿಳಿಯಲು ಕಷ್ಟವಾಗಲಿದೆ. ಇದರಿಂದಾಗಿ ಮುಂದಕ್ಕೆ ಅನೇಕ ರೀತಿಯ ಅಪರಾಧಗಳು ಹೆಚ್ಚಾಗಲಿದೆ. ದೇಹದ ಸಮತೋಲನಕ್ಕೆ ಯೋಗ, ಮೆದುಳಿನ ಸೃಜನಶೀಲತೆಗೆ ಧ್ಯಾನ, ಪ್ರಾಣಾಯಾಮ, ಸರಿಯಾದ ಪ್ರಮಾಣದಲ್ಲಿ ಊಟ, ಸರಿಯಾದ ಸಮಯಕ್ಕೆ ನಿದ್ದೆ ಹಾಗೂ ಮಾಡುವ ಕಾರ್ಯದಲ್ಲಿ ಸಂಪೂರ್ಣ ಶ್ರದ್ಧೆ ಪಾಲಿಸುತ್ತಾನೋ ಆತ ಸಾಧನೆಯ ಮೆಟ್ಟಿಲುಗಳನ್ನು ಏರುವುದು ನಿಶ್ಚಯ ಎಂದರು.
ಮನುಷ್ಯನ ಜೀವನದಲ್ಲಿ ಜನನ ಹಾಗೂ ಮರಣದ ನಡುವೆ ಅವನಿಗಿರುವುದು ಸಮಯ ಮಾತ್ರ. ಹಾಗಾಗಿ ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಜೀವನಕ್ಕೆ ನಿಜವಾದ ಅರ್ಥ ನಾವು ಇತರರಿಗಾಗಿ ಬದುಕಿದಾಗ ಬರುತ್ತದೆ. ಪರೋಪಕಾರದ ಗುಣವು ನಮ್ಮಲ್ಲಿ ಹೆಚ್ಚು ಧನಾತ್ಮಕ ಶಕ್ತಿ ಬೆಳೆಸಲು ಪ್ರೋತ್ಸಾಹಿಸುತ್ತದೆ. ಸಮಾಜಕ್ಕೆ ನಾವು ಏನು ಕೊಡುಗೆ ನೀಡಬಹುದು ಎಂಬ ಆಲೋಚನೆಯನ್ನು ನಾವು ವಿದ್ಯಾರ್ಥಿಯಾಗಿದ್ದಾಗಲೇ ಮಾಡಬೇಕು. ಇದುವೇ ಆ ಯೋಚನೆಗಳು ಮೂಡಲು ಸೂಕ್ತ ಸಮಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಳ್ವಾಸ್ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ಜರುಗಿತು. ಪ್ರೊ. ದೀಕ್ಷಾ ಎಂ ನಿರೂಪಿಸಿ, ಗಣಿತ ವಿಭಾಗದ ಮುಖ್ಯಸ್ಥೆ ಡಾ. ಪ್ರಮೀಳಾ ಕೊಳಕೆ ಸ್ವಾಗತಿಸಿ, ಡೀನ್ ಪ್ಲ್ಯಾನಿಂಗ್ ಡಾ.ದತ್ತಾತ್ರೇಯ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ