ಪಟ್ಟಾಂಗದ ಮಹಿಮೆ: ಮಾನವೀಯ ಬಂಧಗಳ ಗಟ್ಟಿಗೊಳಿಸುವ ಕುಶಿಕುಶಿಯ ಮಾತು

Upayuktha
0
ಕುಶಾಲಿನ ಓದಿಗೊಂದು ಮಸಾಲೆಯ ಹೂರಣ



     ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳ ರಚನೆಗೆ ಒಂದು ಮಾರ್ಗದರ್ಶನವಿದೆ. ಅದುವೇ ಕಾನ್ಸ್‌ಟಿಟ್ಯೂಶನ್... ಪ್ರಜಾಪ್ರಭುತ್ವದ ಮನ್ನಣೆ- ದಾರಿದೀಪವೆಂದೇ ಅದನ್ನು ಗೌರವಿಸಲಾಗಿದೆ. ಕೈಮುಗಿದು ಮುಂದಿನ ಮಾತು ಹೇಳುವಷ್ಟು ಮಹತ್ವ ಅದರದು. ಲೋಕಸಭೆ, ರಾಜ್ಯಸಭೆ, ವಿಧಾನ ಸಭೆ ಹಾಗೂ ವಿಧಾನ ಮಂಡಲವನ್ನು ನಡೆಸಲು ಅದುವೇ ಆಧಾರ. ಕೇಂದ್ರ, ರಾಜ್ಯ ಸರಕಾರಗಳಿಂದ ತೊಡಗಿ ತಳಮಟ್ಟದ ಪ್ರಜಾಪ್ರಭುತ್ಯದ ಮುನ್ನಡೆಗೆ ಅದುವೇ ಗೈಡ್. ಕೋರ್ಟ್‌-ಕಛೇರಿಗಳಲ್ಲೂ ಅದಕ್ಕೆ ನಮಿಸಿ ಕರ್ತವ್ಯ ಮುಂದುವರಿಸಬೇಕು. ಪ್ರಜೆಗಳ ಹಕ್ಕೇನು ದೇಶವನ್ನು ಆಡಳಿತ ನಡೆಸುವುದು ಹೇಗೆ ಎಂದೆಲ್ಲಾ ಸೂಕ್ಷ್ಮ ಮಾರ್ಗದರ್ಶನಗಳು ಅದರಲ್ಲಿವೆ. 


     ಅದಕ್ಕೆ ಗೌರವ ಸೂಚಿಸಿ, ನಾನು ಗಾಸಿಪ್‌ ಎಂಬ ಜನಸಮುದಾಯ ಕುಶಿಕುಶಿಯ ಮತ್ತು ಕೀಟಲೆಯ ಸುದ್ದಿ, ಗುದ್ದು, ಕುಶಾಲು. ಲೊಟ್ಟೆ ಪಟಾಕಿ, ಕೀಟಲೆ ಎಂಬೆಲ್ಲ ಮಾನವನ ಮನದಲ್ಲಿ ಕಿಟಿಕಿಟಿ ಮಾತನ್ನು ಉರುಳಿಸಿ ಕುಶಾಲು ಮಾಡಿ, ಕೈತಟ್ಟಿ ಕುಣಿದು ಮರೆಯುವ ಮತ್ತೊಂದು ಮಾಹಿತಿ, ಈ "ಪಟ್ಟಾಂಗ" ಎಂಬ- ಎಲ್ಲಿಯೂ ಆಧಾರ ಸಿಗದ ವಿಷಯಗಳನ್ನು ಹಾರಿ ಬಿಟ್ಟು ಖುಶಿ ಪಡುವ ಸಂಸ್ಕೃತಿ ನಮ್ಮಲ್ಲಿ  "ಅಂದಕಾಲತ್ತಿನಿಂದಲೂ" ಬೆಳೆದು ಏರುತ್ತಲೇ ಇರುತ್ತದೆ. 


    ಹಿಂದೆಲ್ಲಾ, ಎದುರು-ಬದುರು ಕೂತು ಹರಡುವ ಈ ಮಾಹಿತಿ ಹರಟೆಗೆ ತುದಿಬುಡಗಳಿಲ್ಲವೆಂದೇ ಹೇಳುತ್ತಿದ್ದರು. ನಾಲಗೆಗಳಿಂದ ಹೊರಬಂದು ಕಿವಿ ತೂತು ಮಾಡಿ ಉದ್ವೇಗ ಮತ್ತು ಖುಶಿ, ಗಾಬರಿ, ಅತಂಕ ಸೃಷ್ಟಿಮಾಡುವ ಶಕ್ತಿ ಇದಕ್ಕಿರುತ್ತದೆ– ಎಂದು ಅಂದಕಾಲತ್ತಿನಿಂದಲೇ ಹೇಳಲಾಗುತಿತ್ತು ಎನ್ನಲಾಗಿದೆ.


     ಪತ್ರಿಕೆ, ರೇಡಿಯೋ, ಟೆಲಿವಿಶನ್‌, ಕೈಹಿಡಿತದಲ್ಲೇ ಪ್ರಭಾವ ಬೀರುವ ಮೊಬೈಲ್‌ ಎಂದು ಜಗತ್ತಿನೆಲ್ಲೆಡೆಗಳಲ್ಲಿ ಅದು ಸುತ್ತು ಸುತ್ತಿ ಕಾಡುತ್ತಲೇ ಇದೆಯೆಂದು ಸಂಶೋಧನಗಳು ಹೇಳುತ್ತಾ ಬಂದಿವೆ. ಕೈ ಮುಷ್ಟಿಯೊಳಗಣ ಮೊಬೈಲ್‌ (ಚಲಿಸುವ) ಕಿವಿ ಕಾಯಿಸಿ, ಹಲ್ಲು ಬಿಡಿಸಿ, ಖುಶಿ ಕೊಟ್ಟು ನಲಿಸುವುದರೊಂದಿಗೆ ಆತಂಕ, ಭಯಾ ದುಃಖಗಳನ್ನೂ ಗುದ್ದಿ ಹೊರಡಿಸುವ ಶಕ್ತಿಯೂ ಅದಕ್ಕಿದೆಯಂತೆ!


    ಅದಕ್ಕೆ “ಕೀಪ್‌ಎವೇ ಫ್ರಮ್‌ ‌ಗಾಸಿಪ್ಸ್‌” ಎಂದು ಈಗಿನ ಶಿಷ್ಟ ಸಂಸ್ಕೃತಿ ಎಚ್ಚರಿಸುತ್ತಲೇ ಇರುತ್ತದೆ. ಆ ನೀತಿ ತತ್ವಗಳು ಮನುಷ್ಯರುಗಳಿಗೆ ಗೊತ್ತಿದ್ದರೂ, ಕಾಡು ಹರಟೆ ಅಥವಾ ಪಟ್ಟಾಂಗಗಳನ್ನು ಮಾನವರು ಅಷ್ಟು ಸುಲಭದಲ್ಲಿ ಬಿಟ್ಟು ಬಿಡಲು ಸಾಧ್ಯವೇ. ಪ್ರಾಣಿ, ಪಕ್ಷಿಗಳಿಗೂ ಈ ಗಾಸಿಪ್‌ ಗುಣ ಇದೆಯಂತೆ! ಆದರೆ, ಮನುಷ್ಯರಿಂದ ತೊಡಗಿ ಪ್ರಾಣಿ-ಪಕ್ಷಿಗಳ ವರೆಗೂ ಬಾಯ್ಗೂಡಿರುವುದರ ಬಗ್ಗೆ ವಿಜ್ಷಾನವೇ ಈ ಮಾಹಿತಿ ಸಂಗ್ರಹಿಸಿ ದಾಖಲಿಸಿ ಬಿಟ್ಟಿದೆ. 


ನಮ್ಮ ಅರಳೀ ಕಟ್ಟೆಗಳು ಚಾ-ಕಾಫಿಗಳೊಂದಿಗೆ ಮಾತುಕತೆಗಳಿಗೆ ತಂಪಾದ ವಾತಾವರಣ ಸೃಷ್ಟಿಸಿ ಕೊಟ್ಟಿವೆ. ಕೆಲಸ ಕಾರ್ಯಗಳೇನೇ ಇರಲಿ, ಒಂದಷ್ಟು ಹೊತ್ತಾದರೂ ಗಾಸಿಪ್‌ ಮಾಡದಿದ್ದರೆ ಮಜಾವೇ ಬರುವುದಿಲ್ಲವಲ್ಲ! ಅಂತೆ. 


    ನಮ್ಮಪ್ಪ ಆಯುರ್ವೇದ ವೈದ್ಯರಾಗಿ ನಮ್ಮ ತೋಟದ ಮನೆಗೆ ರೋಗಿಗಳ ಬಂದ ಉದ್ದೇಶ ತಿಳಿಯುವ ಮೊದಲೇ- ನಮ್ಮ ಅಜ್ಜಿ ಗುಟ್ಟಾಗಿ ಒಬ್ಬೊಬ್ಬರನ್ನು ಮಾತಿಗೆಳೆದು "ಮನೆಯೆಲ್ಲಿ? ಏನು ಬಂದ್ರಿ? ಮದುವೆ ಆಗಿದೆಯಾ, ಎಷ್ಟು ಮಕ್ಕಳೂ, ಗಂಡೆಷ್ಟು, ಹೆಣ್ಣೆಷ್ಟು” ಎಂದೆಲ್ಲಾ ವಿಚಾರಿಸಿಯೇ ಮನೆ ಸಂಪ್ರದಾಯದಂತೆ ಬಂದವರಿಗೆ ಆಸರಿಗೆ ಬೆಲ್ಲ- ನೀರು ಕೊಟ್ಟುಕೊಡುತ್ತಿದ್ದರು. ಹಾಗೂ ಯಾರಿಗೆ ಉಷಾರಿಲ್ಲ? ಎಂದೆಲ್ಲಾ ಮಾಹಿತಿ ಸಂಗ್ರಹಣೆ ಮಾಡಿ ತಮ್ಮದೇ ಗುಟ್ಟಿನ ಮದ್ದುಗಳ ಬಗ್ಗೆ ಕಿವಿಯೂದುತ್ತಲಿದ್ದರು. ಇವರು ಪರವಾಗಿಲ್ಲ ಎಂದು ಅವರಿಗೆ ಅನಿಸಿದರೆ ತಮ್ಮದೇ ಅಜ್ಜಿ ಮದ್ದನ್ನು ಹೇಳ ತೊಡಗುತ್ತಿದ್ದರು.


    ಅಜ್ಜಿಯ ಗುಟ್ಟಿನ ಮಾತುಗಳನ್ನು ಕೇಳಿ, ಕೇಳಿ ನನಗೂ ಈಗ ಅಲ್ಪಸ್ವಲ್ಪ ಗಿಡಮೂಲಿಕೆ ಮದ್ದು ಬಾಯ್ಪಾಟ ಬರುತ್ತದೆ. ಭಾಷಣ ಮಾಡುವಷ್ಟಲ್ಲದಿದ್ದರೂ, ಪಟ್ಟಾಂಗ ಹೊಡೆಯುವ ಜಾಣತನ ತಲೆಯಲ್ಲಿ ಸೇರಿದೆ. ಅಜ್ಜಂದಿರು ಕೇಳುತ್ತಲಿದ್ದ "ನೀವೆಲ್ಲಿಂದ ಬಂದಿರಿ,  ಮದುವೆಯಾಗಿದೆಯೋ, ಮಕ್ಕಳೆಷ್ಟು? ಅವರನ್ನೆಲ್ಲಿಗೆ ಮದುವೆ ಮಾಡಿದ್ದೀರಿ? ಮೊಮ್ಮಕ್ಕಳೆಷ್ಟು? ಅವರೇನು ಮಾಡುತ್ತಿದ್ದಾರೆ" ಎಂದವರು ಮದ್ದಿನಲ್ಲಿ ಶುರುವಾದ ಮಾತುಕತೆಯನ್ನು ವೈಯ್ಯಕ್ತಿಕ ಮಟ್ಟದವರೆಗೂ ಎಳೆಯುತ್ತಿದ್ದರು.


    ನನಗೆ ಆಗ ಕೋಪ ಬರುತ್ತಲಿತ್ತು. ಅವರಿಗೆ ಕೇಳುವಂತೆಯೇ ದೂರ ನಿತ್ತು "ನಮ್ಮಜ್ಜಿಗೆ ಬೇರೆ ಕೆಲಸವಿಲ್ಲ. ಸುಮ್ನೆ ಪಟ್ಟಾಂಗ ಮಾಡುತ್ತಿದ್ದಾರೆಂದು" ಕೋಪ ಬರುತ್ತಲಿತ್ತು. ಆದರೆ, ಈ ಸಾಂಪ್ರದಾಯಿಕ ಮದ್ದಿನ ಹೆಸರೇ ಅಜ್ಜಿಮದ್ದು ಎಂಬುದು ನೆನಪಾಗಿ ಬಾಯಿ ಮುಚ್ಚಿ ಕೂರುತ್ತಲಿದ್ದೆ. ಅವರಿಗೆ ಗೊತ್ತಾದರೆ ನಮ್ಮಪ್ಪನಿಗೆ ಹೋಗಿ ದೂರಿತ್ತು ನನ್ನ ಕಿವಿಹಿಂಡಿಸದೆ ಬಿಡುತ್ತಿರಲಿಲ್ಲ. "ಹೆಸರೇ ಅಜ್ಜಿಮದ್ದು ಅಲ್ಲವೇನೋ? ನೀನೆಂತ ದಡ್ಡ" ಎಂದವರು ಕುಶಾಲು ಮಾಡುತ್ತಿದ್ದರು.


    ಇತ್ತೀಚೆಗೆ ಪಟ್ಟಾಂಗದ ಬಗ್ಗೆ ನನಗೊಂದು ಸಂಶೋಧನೆ ಮಾಡಬೇಕೆಂದು ಕನಸು ಕಾಡತೊಡಗಿದೆ.

ನಾನೂ ನಮ್ಮಜ್ಜಿಯಂತೆ ಅಪರಿಚಿತರ ಬಳಿ ನಿಂತು "ನೀವ್ಯಾರು, ಎಲ್ಲಿಂದ ಬಂದಿರಿ ಮಕ್ಕಳು ಮೊಮ್ಮಕ್ಕಳು ಏನೇನು ಮಾಡುತ್ತಿದ್ದಾರೆ, ನಿಮಗೆ ಮದುವೆಯಾಗಿದೆಯೇ? ಅಳಿಯನಿಗೆ ಎಷ್ಟು ಸಂಬಳ ಬರುತ್ತಿದೆ. ಮೊಮ್ಮಕ್ಕಳೆಷ್ಟು, ಮರಿ ಮಕ್ಕಳಿದ್ದಾರೆಯೇ? ಅಳಿಯ ಎಲ್ಲಿದ್ದಾನೆ, ಎಷ್ಟು ಸಂಬಳ ಬರುತ್ತಿದೆ. ಎಷ್ಟು ಖಂಡಿ ಅಡಿಕೆಯಾಗುತ್ತಿದೆ. ಸ್ವಂತ ಕಾರು, ಲೋರಿ ಇದೆಯೇ? ಕುಲಗೋತ್ರಗಳೇನು, ಜಾತಕ ಇದೆಯೇ” ಎಂದೆಲ್ಲಾ ಪ್ರಶ್ನೆಗಳನ್ನು ಕೇಳುವುದಕ್ಕೆ ಇಂದಿಗೂ ಧೈರ್ಯ ಬರುವುದಿಲ್ಲ.

   ಏಕೆಂದರೆ ಸುದ್ದಿ -ಮೂಲ ಸಿಗದಿದ್ದರೆ ನನಗೆ ಮನಸ್ಸಿಗೆ ಖುಶಿ ಎನಿಸುವುದಿಲ್ಲವಲ್ಲಾ!

      

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

    


Post a Comment

0 Comments
Post a Comment (0)
Advt Slider:
To Top