ರತ್ನವರ್ಮ ಹೆಗ್ಗಡೆ ವಿವಿ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆ
ಉಜಿರೆ: ವ್ಯಕ್ತಿಗತ ದೂರದರ್ಶಿತ್ವವು ಸುಧಾರಣಾವಾದಿ ನಿಲುವುಗಳೊಂದಿಗಿನ ಬೃಹತ್ ಸಂಸ್ಥೆಗಳ ಸ್ಥಾಪನೆಯೊಂದಿಗೆ ಸಾಮಾಜಿಕ ಬದಲಾವಣೆಯನ್ನೂ ನೆಲೆಗೊಳಿಸುತ್ತದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ನುಡಿದರು.
ಉಜಿರೆಯ ಎಸ್‌ಡಿಎಂ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 40ನೇ ವರ್ಷದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಡಿ. ರತ್ನವರ್ಮ ಹೆಗ್ಗಡೆ ಸ್ಮಾರಕ 'ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ ' ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ವಲಯವು ಸುಧಾರಣಾವಾದಿ ದೃಷ್ಟಿಕೋನದೊಂದಿಗೆ ಗುರುತಿಸಿಕೊಳ್ಳುತ್ತದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸಿಕೊಟ್ಟು ಅವರ ಬೆಳವಣಿಗೆಗೆ ಪೂರಕ ವಾತಾವರಣ ಒದಗಿಸಿಕೊಡುವ ದೂರದರ್ಶಿತ್ವದೊಂದಿಗೆ ಡಿ.ರತ್ನವರ್ಮ ಹೆಗ್ಗಡೆ ಅವರು ಉಜಿರೆಯಲ್ಲಿ ಎಸ್.ಡಿ.ಎಂ ಕಾಲೇಜನ್ನು ಆರಂಭಿಸಿದ್ದರು. ಅವರ ಕಾಳಜಿಯುತ ದೂರದಷ್ಟಿಯ ಫಲವಾಗಿ ಇಂದು ಎಸ್.ಡಿ.ಎಂ ವಿಶೇಷ ಮನ್ನಣೆ ಪಡೆದ ಸಂಸ್ಥೆಯಾಗಿ ಹೆಗ್ಗುರುತು ಮೂಡಿಸಿದೆ. ಇದು ದೂರದರ್ಶಿತ್ವದ ಸುಧಾರಣಾವಾದಿ ಆಶಯದ ಪ್ರಭಾವಕ್ಕೆ ನಿದರ್ಶನ ಎಂದು ಹೇಳಿದರು.
ಯಾವುದೇ ಅವಕಾಶವಿರಲಿ, ಅದನ್ನು ಸದುಪಯೋಗಪಡಿಸಿಕೊಳ್ಳುವ ಉತ್ಸಾಹವಿರಬೇಕು. ಹಾಗಾದಾಗ ಮಾತ್ರ ಪ್ರತಿಭೆ ಸಾಬೀತುಪಡಿಸುವುದಕ್ಕೆ ಸಾಧ್ಯವಾಗುತ್ತದೆ. ಆ ಮೂಲಕ ಉತ್ತಮ ಸಮಾಜ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಮಾತನಾಡಿದರು. ಕಳೆದ 40 ವರ್ಷಗಳಿಂದ ಡಿ. ರತ್ನವರ್ಮ ಹೆಗ್ಗಡೆ ಸ್ಮಾರಕ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ 'ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ ಜರುಗುತ್ತಿದೆ. ಪ್ರತಿಭೆಗಳನ್ನು ಗುರುತಿಸಲು ಈ ರೀತಿಯ ಕಾರ್ಯಕ್ರಮಗಳು ಸಹಾಯ ಮಾಡುತ್ತವೆ. ಜಾಗೃತ ಸಮಾಜದಲ್ಲಿ ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಗಳು ಸ್ಪರ್ಧೆಗಳಿಂದ ಕಲಿಯಬಹುದು ಎಂದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ.ಉಪಸ್ಥಿತರಿದ್ದರು. ಪ್ರಾಧ್ಯಾಪಕ ದಿವಾಕರ್ ಕೆ. ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಡಾ.ಸುಧೀರ್ ಕೆ.ವಿ. ವಂದಿಸಿದರು. ಪ್ರಾಧ್ಯಾಪಕ ಮಹೇಶ್ ನಿರೂಪಿಸಿದರು.
ಡಿ. ರತ್ನವರ್ಮ ಹೆಗ್ಗಡೆ ಕುರಿತು ಎಸ್‌ಡಿಎಂ ಮಲ್ಟಿಮೀಡಿಯಾ ಸ್ಟೂಡಿಯೋ ನಿರ್ಮಿಸಿದ ಸಾಕ್ಷ್ಯ ಚಿತ್ರ ಪ್ರದರ್ಶಿತವಾಯಿತು. ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಕಾಲೇಜುಗಳ 20 ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ