ಮಂಗಳೂರು: ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ (ದೇಶದಲ್ಲಿ ಇದು ಎರಡನೇ ಹಂತ) ಏ.26ರಂದು ನಡೆಯಲಿದೆ. ಈಗಾಗಲೇ ನಮ್ಮ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮತದಾರರನ್ನು, ವಿವಿಧ ಸ್ತರದ ಪ್ರಮುಖರನ್ನು, ಕಾರ್ಯಕರ್ತರನ್ನು ಭೇಟಿಯಾಗಿ ಮತಯಾಚನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಅಭೂತಪೂರ್ವ ಬಹುಮತದ ಸ್ಥಾನಗಳೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಐತಿಹಾಸಿಕ ಮಹತ್ವದ ಚುನಾವಣೆ ಇದಾಗಿದೆ. 2047ರ ವೇಳೆಗೆ ಭಾರತವನ್ನು ವಿಶ್ವದ ನಂ.1 ರಾಷ್ಟ್ರವಾಗಿ ರೂಪಿಸುವ ಅಮೃತ ಕಾಲದಲ್ಲಿ ಇಂದು ನಾವಿದ್ದೇವೆ. ಈ ಚುನಾವಣೆಯನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಿ ದೇಶ ಕಟ್ಟುವ ನಿಟ್ಟಿನಲ್ಲಿ ಮತದಾನ ಮಾಡುವ ಹೊಣೆ ನಮ್ಮೆಲ್ಲರದಾಗಿದೆ ಎಂದು ಮೂಡಾದ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಚುನಾವಣಾ ಪ್ರಭಾರಿ ರವಿಶಂಕರ ಮಿಜಾರ್ ಹೇಳಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ (ಇಂದು) ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಂಗಳೂರು ನಗರ ದಕ್ಷಿಣಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರೋಡ್ ಶೋದ ಮುಖಾಂತರ ಪ್ರಚಾರ ನಡೆಸಿರುವುದು ಮತದಾರರು ಹಾಗೂ ಪಕ್ಷದ ಅನನ್ಯ ಕಾರ್ಯಕರ್ತರಲ್ಲಿ ಬಹಳ ಉತ್ಸಾಹ ಮೂಡಿಸಿದೆ. ಚುನಾವಣಾ ಕಾರ್ಯದಲ್ಲಿ ಎಲ್ಲರೂ ಬಹಳ ಉತ್ಸಾಹದಿಂದ ತಾವು ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ಮೋದಿಯವರು ಸರ್ವವ್ಯಾಪಿ, ಸರ್ವಸ್ಪರ್ಶಿ ಎಂಬ ಧ್ಯೇಯವಾಕ್ಯದ ಮೂಲಕ ತಮ್ಮ ಸರಕಾರವನ್ನು ಜನರ ಬಳಿಗೆ ಕೊಂಡೊಯ್ದಿದ್ದಾರೆ. ಅವರ ಎಲ್ಲ ಯೋಜನೆಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ. ಭಾರತದ 135 ಕೋಟಿ ಜನರಿಗೆ ತಲುಪುವ ಕೆಲಸವನ್ನು ಅವರು ಮಾಡಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಂತೆ ಎಲ್ಲರಿಗೂ ತಲುಪುವಂತೆ ಕಳೆದ 10 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ರವಿಶಂಕರ ಮಿಜಾರ್ ಹೇಳಿದರು.
2014ರಿಂದ 2019ರ ವರೆಗೆ ಜನ್‌ಧನ್ ಯೋಜನೆ ಮತ್ತು ಇತರ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ಐದು ವರ್ಷದ ಅವಧಿಯ ಸಾಧನೆ ಆಧರಿಸಿ ಮತಯಾಚನೆ ಮಾಡಿದರು. ದೇಶದ ಜನರು ಅವರನ್ನು ಭರ್ಜರಿಯಾಗಿ ಗೆಲ್ಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ತಂದರು. 2019ರಿಂದ 2024ರ ವರೆಗೆ ಮೋದಿಯವರು ದೇಶವನ್ನು ಅಭಿವೃದ್ಧಿಯ ಮತ್ತೊಂದು ಸ್ತರಕ್ಕೆ ಮೇಲೆತ್ತಿದ್ದಾರೆ. ಆರ್ಟಿಕಲ್ 370 ರದ್ದು, ತ್ರಿವಳಿ ತಲಾಖ್ ರದ್ದು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಸೇರಿದಂತೆ ಹಲವು ಐತಿಹಾಸಿಕ ಕಾರ್ಯಗಳನ್ನು ಈ ಐದು ವರ್ಷದ ಅವಧಿಯಲ್ಲಿ ಮಾಡಿದ್ದಾರೆ. ಮಿಲಿಟರಿ ಯೋಜನೆ, ಹೆದ್ದಾರಿ, ರೈಲ್ವೇ ಸೇರಿದಂತೆ ಎಲ್ಲ ಕಡೆ 21ನೇ ಶತಮಾನದ ಯೋಜನೆಗಳನ್ನು ಹಾಕಿಕೊಂಡು ಭಾರತವನ್ನು ಇವತ್ತು ವಿಶ್ವದಲ್ಲೇ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಸಿದ್ದಾರೆ. ಈ ಕಾರ್ಯಕ್ರಮಗಳು ಅವರ 3ನೇ ಅವಧಿಯಲ್ಲೂ ಮುಂದುವರಿಯಲಿದೆ ಎಂದು ಮಿಜಾರ್ ತಿಳಿಸಿದರು.
ಪ್ರಧಾನಿ ಮೋದಿ ಎಲ್ಲ ಸಮುದಾಯಗಳನ್ನು ಜತೆಯಲ್ಲಿ ಕೂಡಿಸಿಕೊಂಡು ಸರಕಾರ ನಡೆಸಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆ ಮೂಲಕ ದೇಶದ ಹಿಂದುಳಿದ ಸಮಾಜದ ಎಲ್ಲ ವರ್ಗಗಗಳಿಗೆ ಆದ್ಯತೆ ಕೊಟ್ಟಿದ್ದಾರೆ. 50 ಕುಲಕಸುಬುಗಳ ಅವಲಂಬಿಗಳಿಗೆ ಈ ಯೋಜನೆಯ ಅನುಕೂಲ ದೊರೆತಿದೆ. ನುರಿತ ಕೆಲಸಗಾರರಿಗೆ ಆರ್ಥಿಕ ಶಕ್ತಿ ನಿಡುವ ಕಾರ್ಯ ಮಾಡಿದ್ದಾರೆ. ಮಡಿವಾಳರು, ಕ್ಷೌರಿಕರಂತಹ ಅತಿ ಕಡಿಮೆ ಸಂಖ್ಯೆಯ ಸಮುದಾಯದವರಿಗೂ ವಿಶ್ವಕರ್ಮ ಯೋಜನೆಯಡಿ ಆರ್ಥಿಕ ನೆರವು ನೀಡಿ ಪುನಶ್ಚೇತನಗೊಳಿಸುವ ಕಾರ್ಯ ಮಾಡಿದ್ದಾರೆ. ಹಿಂದುಳಿದ ವರ್ಗದ ಶೇ 50ರಷ್ಟು ಜನರಿಗೆ ಯೋಜನೆಯ ಲಾಭ ತಲುಪಿದೆ. ಕರಾವಳಿ ಭಾಗದ ಮೊಗವೀರ ಸಮುದಾಯಕ್ಕೆ ಮತ್ಸ್ಯ ಸಂಪದ ಯೋಜನೆಯ ಲಾಭ ದೊರೆತಿದೆ. ಮೀನುಗಾರಿಕಾ ಅಭಿವೃದ್ಧಿಗೆ 20,000 ಕೋಟಿ ರೂ.ಗಳ ಯೋಜನೆ ಹಾಕಿದ್ದಾರೆ. ಮೀನಿನ ರಫ್ತು ಯೋಜನೆ ಮೂಲಕ ಮೀನುಗಾರರಿಗೆ ಪುನಶ್ಚೇತನ ನೀಡುವ ಕಾರ್ಯ ಮಾಡಲಾಗಿದೆ ಎಂದು ರವಿಶಂಕರ ಮಿಜಾರ್ ವಿವರಿಸಿದರು.
ಕಳೆದ 2019ರ ಚುನಾವಣೆಯಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಒಬಿಸಿ ವರ್ಗಕ್ಕೆ ಸೇರಿದ 93 ಸಂಸದರನ್ನು ಲೋಕಸಭೆಗೆ ಗೆಲ್ಲಿಸಿಕೊಂಡಿದೆ. ಆ ಮೂಲಕ ಹಿಂದುಳಿದ ಸಮುದಾಯಕ್ಕೆ ಶಕ್ತಿ ತುಂಬುವ ದೊಡ್ಡ ಕೊಡುಗೆ ನೀಡಲಾಗಿದೆ. ಸ್ವತಃ ಹಿಂದುಳಿದ ಸಮುದಾಯದಿಂದ ಬಂದವರು ಮೋದಿ. ಹಿಂದುಳಿದ ಸಮಾಜಕ್ಕೆ ಆತ್ಮಸ್ಥೈರ್ಯ ಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಈ ಚುನಾವಣೆಯಲ್ಲೂ ಹೆಚ್ಚಿನ ಸಂಖ್ಯೆಯ ಹಿಂದುಳಿದ ಸಮುದಾಯದವರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವ ಯೋಜನೆ ಹಾಕಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನದಲ್ಲಿ ದೊಡ್ಡ ಪ್ರಮಾಣದ ಜಯ ಗಳಿಸಲು ಹಿಂದುಳಿದ ಸಮಾಜಕ್ಕೆ ಪ್ರಧಾನಿ ಮೋದಿಯವರು ಕೊಟ್ಟ ದೊಡ್ಡ ಪ್ರಮಾಣದ ಕೊಡುಗೆಯೇ ಕಾರಣ. ಮುಖ್ಯಮಂತ್ರಿ ಸ್ಥಾನದಲ್ಲೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗಿದೆ ಎಂದು ಮಿಜಾರ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಬಿಜೆಪಿ ಎನ್‌ಡಿಎ ಮೈತ್ರಿಕೂಟವನ್ನು ವಿರೋಧ ಮಾಡುವ ಕಾಂಗ್ರೆಸ್ ನೇತೃತ್ವದ ಇಂಡಿ ಅಲಯನ್ಸ್ ದೇಶದಲ್ಲಿ ಎಲ್ಲ ಕಡೆ ಪ್ರಬಲ ಸ್ಪರ್ಧೆ ಒಡ್ಡಲು ಮುಂದಾಗಿದೆ. ಆದರೆ ಯಾವುದೇ ಗೊತ್ತು ಗುರಿ ಇಲ್ಲದೆ ಸ್ಪರ್ಧೆ ಮಾಡುತ್ತಿರುವ ಇಂಡಿ ಒಕ್ಕೂಟ ಪರಸ್ಪರ ವಿರೋಧಾಭಾಸಗಳಿಂದಲೇ ಪತನ ಹೊಂದುವುದು ನಿಶ್ಚಿತ. ಕಳೆದ ಬಾರಿ ಕಾಂಗ್ರೆಸ್‌ಗೆ ವಿರೋಧವಾಗಿ ನಿಂತಿದ್ದ ಎಸ್‌ಡಿಪಿಐ ಇವತ್ತು ಚುನಾವಣೆಗೆ ನಿಲ್ಲದೆ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ. ಕಾಂಗ್ರೆಸ್ ಕೂಡ ದೇಶದ್ರೋಹಿ ಶಕ್ತಿಗಳ ಬೆಂಬಲ ಪಡೆದು ಚುನಾವಣೆಗೆ ಸ್ಪರ್ಧಿಸುತ್ತಿದೆ. ಕೇರಳದಲ್ಲಿ ಕಾಂಗ್ರೆಸ್- ಕಮ್ಯುನಿಸ್ಟ್ ವಿರೋಧ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್-ತೃಣಮೂಲ ವಿರೋಧ, ದಿಲ್ಲಿಯಲ್ಲಿ ಆಪ್ ಜತೆಗೆ ವಿರೋಧ- ಹಾಗಿದ್ದರೂ ದೇಶದಲ್ಲಿ ಬಿಜೆಪಿ ವಿರುದ್ಧ ನಾವೆಲ್ಲ ಒಟ್ಟಾಗಿದ್ದೇವೆ ಎನ್ನುವ ಸುಳ್ಳನ್ನು ಹೇಳುತ್ತಿದ್ದಾರೆ. ಮತದಾರರು ಕೂಲಂಕಶವಾಗಿ ಪರಿಶೀಲನೆ ಮಾಡಿ ಈ ಕೂಟ ದೇಶಕ್ಕೆ ಏನು ಕೊಡುತ್ತಿದೆ ಎಂಬುದನ್ನು ಗಮನಿಸಬೇಕು. ದೇಶಕ್ಕೆ ಅವರ ಕೊಡುಗೆ ಏನು ಎಂಬ ಬಗ್ಗೆ ಈ ಕೂಟ ಚಕಾರ ಎತ್ತಿಲ್ಲ. ಇವರ ಒಂದೇ ಉದ್ದೇಶ- ಮೋದಿಯವರು ಅಧಿಕಾರಕ್ಕೆ ಬರಬಾರದು, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ಮಾತ್ರ ಅವರ ಗುರಿ. ಆದರೆ ಮತದಾರರು ಬಹಳ ಬುದ್ಧಿವಂತರು. ಕರಾವಳಿಯ ಎಲ್ಲ ಮತದಾರರು ಜಾಗೃತರಾಗಿ ಮೋದಿಯವರ ಕಲ್ಪನೆಗಳಿಗೆ, ಅವರ ಸರಕಾರದ ರೀತಿನೀತಿಗಳಿಗೆ ಬೆಲೆ ಕೊಟ್ಟು ಅವರನ್ನು ಅಭೂತಪೂರ್ವ ಬೆಂಬಲದೊಂದಿಗೆ ಮತ್ತೆ ಅಧಿಕಾರಕ್ಕೆ ತರುವುದು ನಿಶ್ಚಿತ ಎಂದು ಮಿಜಾರ್ ಪ್ರತಿಪಾದಿಸಿದರು.
ದಕ್ಷಿಣ ಕನ್ನಡದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟರು ಹಾಗೂ ಉಡುಪಿ-ಚಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಜನರು ಆಶೀರ್ವಾದ ಮಾಡುವುದು ನಿಶ್ಚಿತ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ ಎಸ್.ಆರ್ ಹರೀಶ್ ಆಚಾರ್ಯ, ಪಕ್ಷದ ಹಿರಿಯರಾದ ನಾರಾಯಣ ಗಟ್ಟಿ, ಸೀತಾರಾಮ್ ಬಂಗೇರ, ಬಾಬು ಬಂಗೇರ ಉಳ್ಳಾಲ, ರುಕ್ಮಯ ನಾಯಕ್ ಹಾಗೂ ಸಂಜೀವ ಅಡ್ಯಾರ್, ಮಾಧ್ಯಮ ಸಹ ಸಂಚಾಲಕ ಮನೋಹರ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


