ವರ್ಷ 1976. ನನ್ನ ಜೀವನದಲ್ಲಿ ನನ್ನ ಬಲು ದಿನದ ಆಸೆಗಳು ಈಡೇರಿದವು.
ಅಕ್ಟೋಬರ್ ತಿಂಗಳಲ್ಲಿ ಕೃಷಿ ವಿಶ್ವ ವಿದ್ಯಾಲಯದ ನನ್ನ ಹುದ್ದೆಗೆ ರಾಜೀನಾಮೆ ಕೊಟ್ಟು ಪ್ಯಾರಿಸ್‌ಗೆ ಹೋಗಲು ವಿಮಾನ ಹತ್ತುವ ಸಡಗರ. ಅಲ್ಲೇನಾಗುವುದೋ ಎಂದು ಆತಂಕ ಎಲ್ಲದರ ಮಿಶ್ರಣ.
ನನ್ನ ಕೋರಿಕೆಯನ್ನು ಮನ್ನಿಸಿ ಮುಂಬಯಿ ವರೆಗೆ ಬಂದರು ಯಜಮಾನರು. ಅವರಿಗೆ ಚಿರಋಣಿ. ಮುಂದಕ್ಕೆ ಆ ಸಂಬಂಧ ಕಡಿದು ಹೋಗಬಹುದೆಂಬ ಅನುಮಾನವಿತ್ತು.
ಮಗಳು ಸಹನಾಗೆ ಒಂಬತ್ತು ವರ್ಷ. 67ರಲ್ಲಿ ಹುಟ್ಟಿ ಬೆಳೆದು 76ರಲ್ಲಿ ಕರುಳ ಬಳ್ಳಿ ಕತ್ತರಿಸಿ ಹೋಯಿತು.
ಅದನ್ನೆಲ್ಲ ಜಾತಕದಲ್ಲಿ ನಾನು ಹುಟ್ಟಿದಾಗಲೇ ಬರೆದು ಬಿಟ್ಟಿದ್ದರು ಅಜ್ಜಂಪುರದ ಜ್ಯೋತಿಷಿ ಮಹಾನುಭಾವರು. ಇದುವರೆಗೆ ಅವರು ಬರೆದದ್ದೆಲ್ಲ ನಿಜವಾಗಿತ್ತು. ಅದ್ಭುತ ಶಕ್ತಿ. ನಮ್ಮಜ್ಜ ಈಶ್ವರಯ್ಯವರೂ ಮೂರು ವರ್ಷದ ನನ್ನ ಕೈ ನೋಡಿ ಹೇಳಿದ್ದರು. ಪ್ರಪಂಚ ಎಲ್ಲ ಸುತ್ತಿ ಗೆದ್ದು ಬರುತ್ತಾಳೆ ಎಂದು. ಪದ್ಮರೇಖೆ ಎಂದು ತೋರಿಸಿದ್ದರು ರೊಟ್ಟಿ ತಟ್ಟುತ್ತಿದ್ದ ನನ್ನ ಅಮ್ಮನಿಗೆ.
ವಿಧಿ ಬರಹ ದಾಟದಂತೆ ಇದು ನಡೆಯುತ್ತಿತ್ತು. ಕೆಲವನ್ನು ಪಡೆಯಬೇಕಾದರೆ ಕೆಲವನ್ನು ಕಳೆದುಕೊಳ್ಳಲೇಬೇಕು.
ಮಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪನಿಗೆ ಅವಳು ದಕ್ಕಿಬಿಟ್ಟಿದ್ದಳು. ಅತ್ತು ಕರೆದು ವರ್ಷಗಳು ಕಳೆದಿವೆ. ಅವಳನ್ನು ಹಿಂತಿರುಗಿ ಪಡೆಯಲು ಆಗಲಿಲ್ಲ.
ಇತ್ತ ಪ್ಯಾರಿಸ್‌ಗೆ ಹೊರಟ ವಿಮಾನದಲ್ಲಿ ನಾನೊಬ್ಬಳೇ ಸೀರೆ ಉಟ್ಟುಕೊಂಡು ಕುಳಿತಿದ್ದನ್ನು ಕಂಡು ಆಂಟೋನಿಯಾಜ್ಜಿ ಎಂಬ ಸ್ಟೀವರ್ಡ್ ನನ್ನ ಬಳಿ ಬಂದು ನಿಮ್ಮ ಪಕ್ಕದ ಸೀಟಿನಲ್ಲಿ ಯಾರನ್ನೂ ಕೂರಲು ಬಿಡಬೇಡಿ ನಾನು ನಿಮ್ಮ ಹತ್ತಿರ ಮಾತನಾಡಬೇಕು ಎಂದು ಕೇಳಿದರು.
ನಾನು 'ಆಗಲಿ' ಎಂದು ಒಪ್ಪಿಕೊಂಡೆ. ಆಗೆಲ್ಲ ರಿಸರ್ವೇಶನ್ ಇರಲಿಲ್ಲ. ಅವರು ಎಲ್ಲರಿಗೂ ಪೆಪ್ಪರ್ ಮಿಂಟ್ ಕೊಟ್ಟು ವಿಮಾನ ಮೇಲೇರಿದಾಗ ಬಂದು ಪಕ್ಕದಲ್ಲಿ ಕುಳಿತು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಿದರು.
ಕೆಲಸ ಹುಡುಕಿ ಹೊರಟಿದ್ದೇನೆ ಎಂದಾಗ ಈಗಲೇ ಇಲ್ಲೇ ಕೆಲಸ ಕೊಡುತ್ತೇನೆ ಬನ್ನಿ ಸೀರೆ ಬದಲಾಯಿಸಿ ಯೂನಿಫಾರ್ಮ್ ಹಾಕಿಕೊಳ್ಳಿ ಎಂದರು. ನನಗೆ ನಗು ಬಂತು. ಅಷ್ಟು ಸುಲಭವಾಗಿ ಸೀರೆ ಬದಲಾಯಿಸು ವುದಿಲ್ಲ ಎಂದು ಅವರಿಗೆ ಅರ್ಥವಾಯಿತು. ಅನಂತರ ಇನ್ನೊಂದು ಪ್ರಸ್ತಾಪ ಎತ್ತಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ