- ನಂ ನಾಗಲಕ್ಷ್ಮಿ
ಯೋಗವಾಸಿಷ್ಠ ತತ್ತ್ವಶಾಸ್ತ್ರ ಸಂಬಂಧಿತವಾದ ಗ್ರಂಥ.ಇದರ ನಿಜವಾದ ಕರ್ತೃ,ಕಾಲ ನಿಖರವಾಗಿ ತಿಳಿದಿಲ್ಲವಾದರೂ ವಾಲ್ಮೀಕಿ ಮಹರ್ಷಿಗಳೊಂದಿಗೆ ಇದರ ಜೋಡಣೆಯಾಗಿದೆ. ಬೃಹತ್ ಗ್ರಂಥವಾದ ಇದರಲ್ಲಿ 29,000 ಶ್ಲೋಕಗಳಿವೆಯೆಂದು ಒಂದು ಮಾಹಿತಿಯ ಪ್ರಕಾರ ತಿಳಿದುಬಂದರೆ ಮತ್ತೊಂದು ಮಾಹಿತಿಯಲ್ಲಿ 3,200 ಶ್ಲೋಕಗಳಿವೆಯೆಂದು ಹೇಳಲಾಗಿದೆ. ಇದನ್ನು ಮಹಾರಾಮಾಯಣ,ಆರ್ಷ ರಾಮಾಯಣ, ಯೋಗವಾಸಿಷ್ಠ ರಾಮಾಯಣ, ವಾಸಿಷ್ಠ ರಾಮಾಯಣ, ಜ್ಞಾನವಾಸಿಷ್ಠ ಎಂದು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಇದರ ಸಂಕ್ಷಿಪ್ತ ರೂಪದಲ್ಲಿ 6,000 ಶ್ಲೋಕಗಳಿದ್ದು ಅದನ್ನು ʻಲಘುವಾಸಿಷ್ಠʻ ವೆಂದು ಕರೆಯುತ್ತಾರೆ.ವಸಿಷ್ಠ ಮಹರ್ಷಿಗಳು ಮತ್ತು ಶ್ರೀರಾಮಚಂದ್ರನ ನಡುವೆ ನಡೆಯುವ ಸಂಭಾಷಣೆಯ ಮೂಲಕ ವಿಸ್ತಾರಗೊಂಡು ಮಾನವನ ಬದುಕಿನ ಪರಮಗುರಿಯನ್ನು ತಿಳಿಸುವ ವಸ್ತುವನ್ನು ಒಳಗೊಂಡಿರುವುದೇ ಈ ʻಯೋಗವಾಸಿಷ್ಠʻ.
ರಾಮಾಯಣವು ಶ್ರೀರಾಮನ ಭೌತಿಕ ಪ್ರಪಂಚದ ಪ್ರಯಾಣದ ಕಥೆಯನ್ನು ಹೊಂದಿದ್ದರೆ, ಯೋಗವಾಸಿಷ್ಠವು ಆತನ ಆಂತರಂಗಿಕ ಪ್ರಯಾಣದ ವಿವರಗಳಿಂದ ಕೂಡಿದ್ದು,ವಸಿಷ್ಠ ಮಹರ್ಷಿಗಳು ತಮ್ಮ ಬೋಧನೆಯಿಂದ ಆತನಲ್ಲಿ ಜ್ಞಾನದ ಜ್ಯೋತಿಯನ್ನು ಪ್ರಕಾಶಿಸಿದರೆಂದು ಹೇಳುತ್ತದೆ. ಅಂದರೆ ಇದು ಗುರು-ಶಿಷ್ಯರ ಸಂವಾದರೂಪದಲ್ಲಿರುವ ಕೃತಿ. ರಾಜ್ಯಾಭಿಷೇಕದ ಪ್ರಸ್ತಾಪದ ಸಂಗತಿಗೆ ಮೊದಲು ಚೈತ್ರಯಾತ್ರೆ ಮುಗಿಸಿ ಮರಳಿದ ಶ್ರೀರಾಮನು ಹಲವು ಸ್ಥಳಗಳಲ್ಲಿ ಪಡೆದ ಅನುಭವಗಳಿಂದ ಅಕಾಲ ವೈರಾಗ್ಯಕ್ಕೆ, ಖಿನ್ನತೆಗೆ ಒಳಗಾಗಿ ರಾಜ್ಯಾಧಿಕಾರಕ್ಕೆ ಸಂಬಂಧಿಸಿದಂತೆ ನಿರಾಸಕ್ತಿಯನ್ನು ತೋರಿದ್ದಾಗ, ದಶರಥನ ಕೋರಿಕೆಯಂತೆ ವಸಿಷ್ಠರು ಶ್ರೀರಾಮನಿಗೆ ಅಧ್ಯಾತ್ಮ ವಿಚಾರವನ್ನು, ಜೊತೆಗೆ ಲೌಕಿಕರು ಮಾಡಲೇಬೇಕಾದ ಕರ್ತವ್ಯಗಳನ್ನೂ ಸೇರಿಸಿ ಉಪದೇಶ ಮಾಡಿದ್ದೇ ಯೋಗವಾಸಿಷ್ಠದ ವಸ್ತು. ಅಂದರೆ ಇದು ರಾಮಾಯಣಕ್ಕಿಂತ ಮೊದಲಿನದು. ಇದರ ಧ್ಯೇಯ ಪರಮಾರ್ಥವನ್ನು ಲೌಕಿಕದ ಜೀವನದೊಂದಿಗೆ ಸಮೀಕರಿಸುವುದು. ಏಕೆಂದರೆ ಮಾನವ ತನ್ನ ಅಸ್ತಿತ್ತ್ವದ ಮೂಲ ಉದ್ದೇಶವನ್ನೇ ಅರಿಯದಿದ್ದರೆ ಕಡೆಯವರೆಗೆ ಅಪೂರ್ಣತೆಯ ಗೊಂದಲದಲ್ಲಿಯೇ ಮುಳುಗಿರಬೇಕಾಗುತ್ತದೆ.
ಭಗವದ್ಗೀತೆಯಂತೆಯೇ ಇದು ಕೂಡ ವಿಷಾದಯೋಗದಿಂದಲೇ ಆರಂಭವಾಗುತ್ತದೆ. ಅಲ್ಲಿ ಕೃಷ್ಣ ಅರ್ಜುನನಿಗೆ, ಇಲ್ಲಿ ವಸಿಷ್ಠರು ಶ್ರೀರಾಮನಿಗೆ ಮಾರ್ಗದರ್ಶಿಗಳಾಗುತ್ತಾರೆ. ʻನಿರುದ್ವಿಗ್ನರಾಗಿ ಕರ್ತವ್ಯನಿರ್ವಹಣೆ ಮಾಡುವುದು ಹೇಗೆ? ಪ್ರಶಾಂತ ಮನಃಸ್ಥಿತಿಯನ್ನು ಪಡೆದುಕೊಳ್ಳುವುದಾದರೂ ಹೇಗೆ? ಮೋಹ,ವ್ಯಾಮೋಹಗಳ ತಾಕಲಾಟದಿಂದ ಪಾರಾಗಿ, ಕರ್ಮಗಳನ್ನು ನಿರ್ವಹಿಸುವುದು ಸಾಧ್ಯವೆ? ʻಈ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿರುವುದೇ ಯೋಗವಾಸಿಷ್ಠದಲ್ಲಿನ ಸಾರ ಮತ್ತು ಸತ್ತ್ವ. ಇದು ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸಿ, ಸಮಸ್ತ ಸಂಕಲ್ಪಗಳನ್ನು ಬ್ರಹ್ಮಭಾವದಲ್ಲಿಯೇ ವಿಲೀನಗೊಳಿಸಲು ಆದೇಶ ನೀಡಿ ಸಹಕರಿಸುತ್ತದೆ.
ಇದರ ವಿಶೇಷವೆಂದರೆ, ಇಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ಪ್ರತಿಪಾದಿಸಲು ಅಂದರೆ, ಜ್ಞಾನಯೋಗವನ್ನು ತಿಳಿಸಲು ಶುಷ್ಕ ಶೈಲಿಯನ್ನು ಅನುಸರಿಸದೆ, ಎಲ್ಲರಿಗೂ ಅರ್ಥವಾಗುವಂತೆ, ಆಸಕ್ತಿ ಮೂಡಿಸುವಂತೆ ಕಥೆಗಳ ಮಾಧ್ಯಮವನ್ನು ಬಳಸಿಕೊಳ್ಳಲಾಗಿದೆ. ಕೆಲವು ಕಲ್ಪಿತ ಮತ್ತು ಕೆಲವು ಪೌರಾಣಿಕ ಕಥೆಗಳನ್ನು ಇದರಲ್ಲಿ ಕಾಣುತ್ತೇವೆ. ಸೃಷ್ಟಿ, ಜಗತ್ತು, ಮೋಕ್ಷದ ವಿಚಾರಗಳಿಂದ ಕೂಡಿದ ಬೋಧನೆಗಳು ತತ್ತ್ವಶಾಸ್ತ್ರದ ಆಧಾರವನ್ನು ಹೊಂದಿವೆ. ಅಯೋಧ್ಯೆಯ ದಶರಥನ ಆಸ್ಥಾನದಲ್ಲಿ, ಹಲವಾರು ಋಷಿಗಳ, ದೇವತೆಗಳ, ವಿಪ್ರೋತ್ತಮರ ಸಮಕ್ಷಮದಲ್ಲಿ ಶ್ರೀರಾಮನು ಇಪ್ಪತೆರಡು ದಿನಗಳ ಕಾಲ ಕೇಳಿದ ಹಲವು ಪ್ರಶ್ನೆಗಳಿಗೆ ಕಥೆಗಳ ಮೂಲಕ, ಉಪನ್ಯಾಸಗಳ, ಮೂಲಕ ವಸಿಷ್ಠ ಮಹರ್ಷಿಗಳು ಅಧ್ಯಾತ್ಮದ ವಿಷಯಗಳಿಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ತಿಳಿಸುತ್ತಾರೆ. ಲೌಕಿಕವಾಗಿ ಆತನ ಕರ್ತವ್ಯಗಳನ್ನು ನೆನಪಿಸುತ್ತಾರೆ.
ಇಲ್ಲಿ ಮಖ್ಯವಾಗಿ ವ್ಯಕ್ತಿಯು ತನ್ನ ಆತ್ಮೋದ್ಧಾರವನ್ನು ಸಾಧಿಸಲು ಏನು ಮಾಡಬೇಕೆಂಬುದನ್ನು ತಿಳಿಸುತ್ತ, ಅದಕ್ಕೆ ದಾರಿ ತೋರುವಂತಹ ಅನೇಕ ಕರ್ಮಯೋಗಿಗಳ ಕಥೆಗಳು ಬರುತ್ತವೆ. ಕರ್ಮ ಮತ್ತು ಜ್ಞಾನದ ಸಮನ್ವಯದಿಂದಲೇ ಜೀವನದ ಸಾಫಲ್ಯವೆಂದು ನಿರೂಪಿಸಲಾಗಿದೆ. ಮನುಷ್ಯನ ಮನಸ್ಸಿನಲ್ಲಿ ಐಹಿಕವಾದ ಲಾಲಸೆಗಳು ಉಂಟಾಗಿ ಅವನನ್ನು ಪಾಪಕಾರ್ಯಗಳತ್ತ ಹೇಗೆ ಆಕರ್ಷಿಸುತ್ತವೆಂಬುದನ್ನು ಯೋಗವಾಸಿಷ್ಠವು ತಿಳಿಸುತ್ತದೆ.ಅವನು ತನ್ನದೇ ಸಂಕಲ್ಪಗಳ ಮೂಲ ಕಾರಣವೆಂದೂ ಇಲ್ಲಿ ಹೇಳಿದೆ. ಇದಕ್ಕೆ ಅಗತ್ಯವಾದ ಕಥೆಗಳೂ ಇಲ್ಲಿ ಬರುತ್ತವೆ. ವೈರಾಗ್ಯ ಪ್ರಕರಣ, ಮುಮುಕ್ಷು ವ್ಯವಹಾರಪ್ರಕರಣ, ಉತ್ಪತ್ತಿಪ್ರಕರಣ, ಸ್ಥಿತಿಪ್ರಕರಣ, ಉಪಶಮಪ್ರಕರಣ ಮತ್ತು ನಿರ್ವಾಣಪ್ರಕರಣ ಎಂದು ಆರು ಪ್ರಕರಣಗಳು ಇದರಲ್ಲಿವೆ. ಈ ಎಲ್ಲ ಪ್ರಕರಣಗಳಲ್ಲಿ ಅನೇಕ ರಾಜ,ಮಹಾರಾಜರ,ಪುರಾಣಪುರುಷರ ಜೀವನದ ಘಟನೆಗಳನ್ನು ವಿವರಿಸುತ್ತಾ ಹೋಗಿದೆ. ಅವುಗಳಲ್ಲಿ ಕೆಲವರು ಧ್ಯಾನ, ಪೂಜೆ ಮುಂತಾದ ಕಾರ್ಯಗಳನ್ನು ಮಾಡುತ್ತಲೇ ಮನದಲ್ಲಿ ಮಾತ್ರ ಬೇರೆಬೇರೆ ಅಪೇಕ್ಷೆಗಳನ್ನು ಹೊಂದಿರುತ್ತಾರೆ. ಮತ್ತೆ ಕೆಲವರು ಅಂತರಂಗದಲ್ಲಿಯೇ ಎಲ್ಲರೀತಿಯ ತ್ಯಾಗವನ್ನು ಮಾಡಿ, ಎಲ್ಲ ಕರ್ಮಗಳನ್ನೂ ಮಾಡುತ್ತಾ, ತತ್ತ್ವಜ್ಞಾನಿಗಳ ಸಾಮರ್ಥ್ಯವನ್ನು ಹೊಂದಿಯೂ ತೋರ್ಪಡಿಸದೆ, ಅಜ್ಞಾನಿಗಳಂತೆಯೇ ಇರುತ್ತಾರೆ. ಹೀಗೆ ಸಮಚಿತ್ತರಾದವರು ರಾಗ, ದ್ವೇಷಾದಿಗಳನ್ನು ಹೋಗಲಾಡಿಸಲು ತಮ್ಮ ವಾಸಸ್ಥಳವನ್ನೇ ಬಿಟ್ಟು ಬೇರೆಬೇರೆ ಸ್ಥಳಗಳಲ್ಲಿರಲು ಬಯಸುತ್ತಾರೆ. ಅಂದರೆ, ಸಂಸಾರಸಾಗರದಿಂದ ದೂರವಾಗಲು ದೇಶದೇಶಗಳಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಅದೇ ಪ್ರಯತ್ನದಲ್ಲಿ ತೀರ್ಥಕ್ಷೇತ್ರಗಳನ್ನು, ಪುರಾಣಪ್ರಸಿದ್ಧ ಪವಿತ್ರ ಸ್ಥಳಗಳನ್ನು, ಹಲವಾರು ಗ್ರಾಮಗಳನ್ನು, ಅರಣ್ಯಗಳನ್ನು, ಪರ್ವತಪ್ರದೇಶಗಳನ್ನು ಸಂದರ್ಶಿಸುತ್ತಾರೆ. ಅಲ್ಲಿಯೇ ಕೆಲವು ಕಾಲ ನೆಲೆಸುತ್ತಾರೆ.
ಹೀಗೆ ಕೆಲವರು ಒಳಗೆ ಪರಿಪಕ್ವಮತಿಗಳಾಗಿದ್ದರೂ,ಹೊರಗಿನ ಪ್ರಪಂಚಕ್ಕೆ ಮಾತ್ರ ಭ್ರಮಾಧೀನರಾಗಿಯೇ ತೋರ್ಪಡಿಸಿಕೊಳ್ಳುತ್ತಾರೆ. ಇಂತಹ ಪ್ರಬುದ್ಧರನ್ನು ಗುರುತಿಸುವುದೂ ಸುಲಭವಲ್ಲ, ಏಕೆಂದರೆ ಇವರು ಸಾಮಾನ್ಯರ ನಡುವೆ ಸೇರಿಹೋಗಿರುತ್ತಾರೆ. ಸ್ವಂತ ಊರಿನ ಬಾಂಧವ್ಯವನ್ನು ಬಿಡಲಾರದೆ, ಅಲ್ಲಿಯೇ ಇರುವವರು, ಯಾವ ಊರಾದರೇನು ಎಂಬ ನಿರ್ಲಿಪ್ತಭಾವದಿಂದ ವಾಸಸ್ಥಳವನ್ನು ಬದಲಿಸುವವರು, ನಿರಂತರ ಸಂಚಾರಪ್ರಿಯರು, ಹೀಗೆ ಹಲವು ಪ್ರಕಾರಗಳಿಗೆ ಸೇರಿದ ಜನರ ನಡುವೆಯೇ ಪ್ರಬುದ್ಧರಾದವರು ಸೇರಿರುತ್ತಾರೆ.
ಹಾಗೆಯೇ ಅರ್ಧ ಪ್ರಬುದ್ಧರೆನಿಸಿಕೊಂಡವರು ತಮ್ಮ ಅರೆಜ್ಞಾನದ ಸೊಕ್ಕಿನಿಂದ ಯಾವ ಸಾಧನೆಯನ್ನೂ ಮಾಡುವುದಕ್ಕೆ ಅಸಮರ್ಥರಾಗಿರುತ್ತಾರೆ. ಆದರೆ ಸಂಪೂರ್ಣವಾಗಿ ಅಪ್ರಬುದ್ಧರಾದವರು ಸಜ್ಜನರನ್ನು, ಜ್ಞಾನಿಗಳನ್ನು ಅನುಸರಿಸುತ್ತಾರೆ. ಅವರಿಗೆ ಲೌಕಿಕ ಬಂಧನದಿಂದ ಬಿಡುಗಡೆ ಹೊಂದುವ ಆಸೆಯಿದ್ದರೂ ದಾರಿ ತಿಳಿದಿರುವುದಿಲ್ಲ. ಈ ರೀತಿ ಈ ಜನಸಮುದಾಯದಲ್ಲಿ ಹುಟ್ಟು-ಸಾವುಗಳನ್ನು ದಾಟಬೇಕೆನ್ನುವವರು ಹಲವು ಬಗೆಗಳಲ್ಲಿರುತ್ತಾರೆ. ಅದಕ್ಕಾಗಿ ಅನೇಕ ರೀತಿಗಳಲ್ಲಿ ಚಿಂತನೆ ಮಾಡುವವರಿರುತ್ತಾರೆ. ಆದರೆ, ನಿಜವಾಗಿ ಚಿಂತನೆ ಮಾಡಿದಾಗ ತಿಳಿಯುವುದೇನೆಂದರೆ ಸಂಸಾರಬಂಧನದಿಂದ ಮುಕ್ತರಾಗಬೇಕಾದರೆ ಅರಣ್ಯಕ್ಕೇ ಹೋಗಿ ತಪಸ್ಸು ಮಾಡಬೇಕೆಂದಿಲ್ಲ, ತನ್ನ ಊರಿನಲ್ಲಿಯೇ ಇದ್ದರೂ ಸಾಧ್ಯವಾಗುವುದಿಲ್ಲ, ಆಚಾರಗಳನ್ನು ಕಣ್ಣು ಮುಚ್ಚಿಕೊಂಡು ಪಾಲಿಸುವುದರಿಂದಲೂ ಆಗುವುದಿಲ್ಲ.
ಹಾಗಾದರೆ ಈ ಸಂಸಾರಬಂಧನದಿಂದ ʻಮುಕ್ತಿʻ ದೊರೆಯುವುದಾದರೂ ಹೇಗೆ? ಈ ಪ್ರಶ್ನೆಗೆ ಇದರಲ್ಲಿ ಉತ್ತರ ಹೀಗಿದೆ;ಬಂಧನಕ್ಕೆ ಒಳಗಾಗುವುದಾಗಲೀ, ಬಿಡುಗಡೆ ಹೊಂದುವುದಾಗಲೀ ಎಲ್ಲದಕ್ಕೂ ನಮ್ಮ ಮನಸ್ಸೇ ಕಾರಣ.ಅದು ಅನಾಸಕ್ತ ಭಾವ ಹೊಂದಿದರೆ ಮಾತ್ರ ಸಂಸಾರ ಸಾಗರದಿಂದ ಹೊರಬರಲು ಸಾಧ್ಯ. ಲೌಕಿಕದ ಆಕರ್ಷಣೆಗಳತ್ತ ಮನಸ್ಸು ಬಾಗಿದರೆ ಹೊರಬರಲು ಸಾಧ್ಯವೇ ಆಗುವುದಿಲ್ಲ. ಇಲ್ಲಿ ಒಂದು ಅಂಶ ಮುಖ್ಯವಾದದ್ದು. ಅನಾಸಕ್ತ ಮನಸ್ಸಿರುವ ವ್ಯಕ್ತಿ ತನ್ನ ಲೌಕಿಕ ಕರ್ತವ್ಯಗಳನ್ನು ಮಾಡುತ್ತಿದ್ದರೂ ಅವನ ಮನಸ್ಸು ತಾವರೆಯೆಲೆಯ ಮೇಲಿನ ನೀರಿನ ಹನಿಯಂತಿರುತ್ತದೆ. ಹಾಗಾಗಿ ಸಾಂಸಾರಿಕ ಬಂಧನದ ಜಂಜಾಟಗಳು ಅವನಿಗೆ ತೊಂದರೆಯೆನಿಸುವುದಿಲ್ಲ. ಆತ್ಮಾವಲೋಕನದ ಕಾರ್ಯವು ನಿರಂತರವಾಗಿ ನಡೆಯುತ್ತಿರುವುದರಿಂದ ಮನಸ್ಸು ತನ್ನ ಕಲ್ಮಶಗಳನ್ನೆಲ್ಲ ತೊಳೆದುಹಾಕಿ ನಿರ್ಮಲವಾಗಿರುತ್ತದೆ. ಅದು ವಿಕಾರರಹಿತವಾಗಿ, ಆಮಿಷಗಳಿಗೆ ಅನಾಸಕ್ತಭಾವ ತೋರುತ್ತ, ತನ್ನ ಉದ್ಧಾರದ ಕಡೆಗೆ ಮಾತ್ರ ಆಲೋಚಿಸುತ್ತಿರುತ್ತದೆ. ಅದು ಪರಮಾರ್ಥದ ಮಹತ್ತ್ವವನ್ನು ತಿಳಿದಿರುತ್ತದೆ. ಬ್ರಹ್ಮವೇ ಸತ್ಯ, ನಿತ್ಯ ಎಂಬುದನ್ನು ತಿಳಿದಿರುತ್ತದೆ.
ಲೌಕಿಕದತ್ತ ಈ ಅನಾಸಕ್ತಭಾವವನ್ನು ತಂದುಕೊಳ್ಳುವುದು ಹೇಗೆ? ಇದಕ್ಕೆ ಉತ್ತರವನ್ನು ವಸಿಷ್ಠರು ಶ್ರೀರಾಮನಿಗೆ ಹೇಳುತ್ತಾರೆ. ”ಮನಸ್ಸು ತನ್ನ ಚಾಂಚಲ್ಯಗುಣದಿಂದ ಮುಕ್ತವಾಗಬೇಕಾದರೆ ʻವಿಚಾರʻವನ್ನು ಅವಲಂಬಿಸಬೇಕು. ಅದರಿಂದ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಆದರೆ ಇದು ಸುಲಭವಲ್ಲ, ಮತ್ತೆಮತ್ತೆ ಪ್ರಯತ್ನಿಸುತ್ತಿದ್ದರೆ ಮಾತ್ರ ಸಂಸಾರದ ಮೋಹದಿಂದ ಬಿಡುಗಡೆ ಹೊಂದಲು ಸಾಧ್ಯ. ʻವಿಚಾರʻದ ಸ್ವರೂಪ ಹೇಗಿರಬೇಕೆಂಬುದನ್ನು ತಿಳಿಯುವುದೂ ಅಗತ್ಯ; ನಾನು ಎಂಬುದು ಕೇವಲ ಶರೀರವೇ? ಅಲ್ಲವಾದರೆ ʻಆತ್ಮʻಕ್ಕೂ ಅದಕ್ಕೂ ಯಾವ ರೀತಿಯಲ್ಲಿ ಸಂಬಂಧವಿರುತ್ತದೆ? ಶರೀರವು ಈ ಲೋಕಕ್ಕೆ ಬಂದದ್ದು ಹೇಗೆ? ತಾಯಿಯ ಉದರದಲ್ಲಿದ್ದು ಅತ್ಯಂತ ಕಷ್ಟದಿಂದ ಹೊರಬಂದ ನಂತರ ಅದರ ಪಯಣ ಯಾವ ಕಡೆಗೆ ಸಾಗುತ್ತದೆ? ಎಲ್ಲ ಜೀವಿಗಳೂ ಕಡೆಗೆ ಮರಣದ ಕಡೆಗೇ ಪಯಣಿಸುತ್ತವಲ್ಲವೇ? ನಂತರದ ಸ್ಥಿತಿಯೇನು? ಈ ಜನನ-ಮರಣಗಳ ಬಂಧನವೆನಿಸಿರುವ ಸಂಸಾರವೆಂಬುದು ಬಂಧನವಾಗಿರುವುದಾದರೂ ಹೇಗೆ? ಏಕೆ? ಪರಮಾತ್ಮನೆಂಬವನು ಇವೆಲ್ಲವನ್ನೂ ನಿಯಂತ್ರಿಸುವನೆಂದರೆ ಅವನಾರು? ಅವನೆಲ್ಲಿದ್ದಾನೆ? ಅವನ ಶಕ್ತಿಯೆಷ್ಟು? ಮನುಷ್ಯನಿಗೂ ಅವನಿಗೂ ಎಂತಹ ಸಂಬಂಧ? ಇವೆಲ್ಲ ವಿಚಾರಗಳನ್ನು ಶ್ರುತಿ, ಮುನಿವಿಚಾರ, ಆಚಾರ್ಯರ ಮಾರ್ಗದರ್ಶನ, ಪುರಾಣದ ಕಥೆಗಳು ಮುಂತಾದ ಅಂಶಗಳ ಮೂಲಕ ಆಲೋಚಿಸುತ್ತ ಅರಿತುಕೊಳ್ಳಲು ಪ್ರಯತ್ನಿಸಬೇಕು, ವಿಚಾರಶಕ್ತಿಯನ್ನು ಬಲಪಡಿಸಿಕೊಳ್ಳಬೇಕು. ಇದರಿಂದ ತತ್ತ್ವಜ್ಞಾನವುಂಟಾಗುತ್ತದೆ, ಮನಸ್ಸಿಗೆ ಶಾಂತಿ ಲಭಿಸುತ್ತದೆ. ವಿಚಾರವಿಲ್ಲದೆ ಮಾಡುವ ಯಾವುದೇ ಕರ್ಮದಿಂದ ಫಲವು ದೊರೆಯುವುದಿಲ್ಲ”.
ಯೋಗವಾಸಿಷ್ಠ ಗ್ರಂಥವನ್ನು ಆರು ಪುಸ್ತಕಗಳಾಗಿ ವಿಭಾಗಿಸಿ ಮುದ್ರಿಸಲಾಗಿದೆ. ಒಂದೊಂದು ಪುಸ್ತಕವೂ ಮಾನವನ ಬದುಕಿನ ಅಂತಿಮ ಗುರಿಯಾದ ಮೋಕ್ಷಪ್ರಾಪ್ತಿಯ ಕಡೆಗೆ ಹಂತ ಹಂತವಾಗಿ ಕರೆದೊಯ್ಯುವ ಮಾರ್ಗಕ್ಕೆ ಸಂಬಂಧಿಸಿದಂತೆ ವಿಚಾರಗಳನ್ನು ತೆರೆದಿಡುತ್ತಾ ಹೋಗುತ್ತದೆ. ಮೊದಲನೆಯ ಪುಸ್ತಕದಲ್ಲಿ ಜೀವನಶೈಲಿಯನ್ನು ಅಂದರೆ ಬದುಕಿನ ನೋವು, ಕಷ್ಟ, ಜಗತ್ತಿನ ಬಗ್ಗೆ ತಿರಸ್ಕಾರ ಮುಂತಾದುವು, ಎರಡನೆಯದರಲ್ಲಿ ಶ್ರೀರಾಮನ ಪಾತ್ರದ ಮೂಲಕ ಮುಕ್ತಿಗಾಗಿ ಹಂಬಲ, ಅದನ್ನು ಬಯಸುವವರ ರೀತಿಯನ್ನು, ಮೂರು ಮತ್ತು ನಾಲ್ಕನೆಯದರಲ್ಲಿ ಮುಕ್ತಿಯು ಆಧ್ಯಾತ್ಮಿಕ ಜೀವನದ ಮೂಲಕವೇ ಲಭಿಸುತ್ತದೆಂದೂ ಹೇಳುತ್ತದೆ. ಅದಕ್ಕಾಗಿ ಮನುಷ್ಯನ ಪ್ರಾಮಾಣಿಕ ಪ್ರಯತ್ನದ ಅಗತ್ಯವನ್ನೂ ಹೇಳಿದೆ. ಇವೆರಡೂ ಪುಸ್ತಕಗಳಲ್ಲಿ ಮನುಷ್ಯನ ಅಗಾಧವಾದ ಮನಶ್ಶಕ್ತಿ ಹಾಗೂ ಆತನ ಸರ್ಜನಶೀಲತೆಯನ್ನು ಒತ್ತಿ ಹೇಳಿದೆ. ಐದನೇ ಪುಸ್ತಕದಲ್ಲಿ ಧ್ಯಾನದ ಮಹತ್ತ್ವ ಮತ್ತು ಶಕ್ತಿಯನ್ನು, ಅದು ಮೋಕ್ಷಸಾಧನೆಗೆ ನೆರವಾಗುವುದೆಂಬ ಅಂಶವನ್ನೂ ತಿಳಿಸುತ್ತದೆ. ಆರನೆಯ ಕೊನೆಯ ಪುಸ್ತಕದಲ್ಲಿ ಎಲ್ಲದರ ಚರ್ಚೆಯಿಂದ ಜ್ಞಾನೋದಯ ಹೊಂದಿದ ಮತ್ತು ಪರಮಸುಖವನ್ನು ಪಡೆದ ಶ್ರೀರಾಮನ ಸ್ಥಿತಿಯನ್ನು ವಿವರಿಸುತ್ತದೆ.
ಯೋಗವಾಸಿಷ್ಠದಲ್ಲಿ ಬಂದಿರುವ ಕಥೆಗಳು: ಶುಕಮುನಿಯ ಕಥೆ, ಲೀಲಾಳ ಕಥೆ, ಕರ್ಕಟಿ ರಾಕ್ಷಸಿಯ ಕಥೆ, ಇಂದುವಿನ ಮಕ್ಕಳ ಕಥೆ, ಅಹಲ್ಯೆಯ ಕಥೆ, ಬೃಹದಾರಣ್ಯದ ಕಥೆ, ಲವಣನ ಕಥೆ, ಅಸ್ತಿತ್ವದಲ್ಲಿಲ್ಲದ ಮೂವರು ರಾಜಕುಮಾರರ ಕಥೆ,ಇವು ಮೊದಲ ಮೂರು ಭಾಗಗಳಲ್ಲಿವೆ. ನಾಲ್ಕನೇ ಭಾಗದಲ್ಲಿ ಶುಕ್ರ, ದಮ, ವ್ಯಾಲ ಮತ್ತು ಕಟ, ಭೀಮ, ಭಾಸ ಹಾಗೂ ದೃಧ, ದಸುರ, ಕಾಕ ಎಂಬ ಕಥೆಗಳನ್ನು ಹೊಂದಿವೆ. ಐದನೇ ಭಾಗದಲ್ಲಿ ಜನಕರಾಜ, ಪುಣ್ಯ ಮತ್ತು ಪಾವನ, ಬಲಿಚಕ್ರವರ್ತಿ, ಪ್ರಹ್ಲಾದ, ಗಾಧಿರಾಜ, ಉದ್ದಾಲಕ, ಸುರಘು, ಭಾಸ ಮತ್ತು ವಿಲಾಸ, ವೀತಹವ್ಯ ಕುಂದದಂತ ಎಂಬ ಕಥೆಗಳಿವೆ. ಕಡೆಯದಾದ ಆರನೇ ಭಾಗದಲ್ಲಿ ಬ್ರಹ್ಮನ ವ್ಯಾಖ್ಯಾನ, ಭುಶುಂಡ, ಭಗವಂತನ ವರ್ಣನೆ, ದೇವಪೂಜ, ಮರಸೇಬಿನ ಕಥೆ, ಬಂಡೆಯ ಕಥೆ, ಅರ್ಜುನ, ಶತರುದ್ರ, ಭಗೀರಥ, ಶಿಖಿಧ್ವಜ ಮತ್ತು ಚೂಡಾಲ, ತತ್ವಜ್ಞಾನಿಯ ಕಲ್ಲು, ಮೂರ್ಖ ಆನೆ, ಕಾಕನ ಕಥೆ, ಮೋಸಕ್ಕೊಳಗಾದ ಮನುಷ್ಯ, ವಿಪಶ್ಶಿತ, ಬೇಟೆಗಾರ ಮತ್ತು ಋಷಿ, ಬಂಡೆಯೊಳಗಿನ ಪ್ರಪಂಚ, ವಿಶ್ವದಾಚೆಯ ಋಷಿ, ಭೃಂಗೀಶ, ಇಕ್ಷ್ವಾಕು, ಬೇಟೆಗಾರ ಮತ್ತು ಜಿಂಕೆ, ಕುಂದದಂತ, ಯೋಗದ ಏಳು ಸ್ಥಿತಿಗಳು ಎಂದು ಇಪ್ಪತ್ಮೂರು ಕಥೆಗಳನ್ನು ಹೊಂದಿದೆ.
ಇವೆಲ್ಲದರಲ್ಲಿ ತಿಳಿಸುವ ಜೀವನಮೌಲ್ಯವೆಂದರೆ: ಈ ಜಗತ್ತಿನಲ್ಲಿ ಜನ್ಮ ತಳೆದ ಮೇಲೆ ಎಲ್ಲರಿಗೂ ಸೌಹಾರ್ದವನ್ನು ಉಂಟುಮಾಡುವ,ಸಮತೆಯನ್ನು ಅವಲಂಬಿಸಿ ಜೀವಿಸಬೇಕು. ಇದರಿಂದ ಎಲ್ಲರಿಗೂ ಅವರು ಬಯಸುವ ಉತ್ತಮವೂ, ಅವಿನಾಶಿಯೂ ಆದ ಸುಖವು ಲಭಿಸುತ್ತದೆ. ʻಈ ಸಮತೆʻ ಎಂಬ ಭಾವದಿಂದ ವ್ಯಕ್ತಿಯಲ್ಲಿರಬಹುದಾದ ಅಲ್ಪಸ್ವಲ್ಪ ದೋಷವೂ ಗುಣದಂತಾಗಿ ದುಃಖವೂ ಸದಾ ಸುಖದಂತಾಗುತ್ತದೆ. ಇಂತಹ ವ್ಯಕ್ತಿಯನ್ನು ಎಲ್ಲರೂ ಗೌರವಿಸುತ್ತಾರೆ. ಈತ ಯಾವಾಗಲೂ ಅಭಿವೃದ್ಧಿಯನ್ನು ಹೊಂದುತ್ತಾ ಚಿಂತಾರಹಿತನಾಗಿರುತ್ತಾನೆ. ಈತ ಸದಾಚಾರ ಸಂಪನ್ನನಾಗಿರುವ ತತ್ತ್ವಜ್ಞಾನಿಯಂತಾಗುತ್ತಾನೆ. ಸಮಸ್ತ ವಿದ್ವಾಂಸರಿಂದ ಪೂಜಿತನಾಗುತ್ತಾನೆ. ಈತ ಕಷ್ಟಗಳಿಂದ ದೂರ ಸರಿಯುವುದಿಲ್ಲ, ಅತಿ ಆಸೆಪಡುವುದಿಲ್ಲ, ಇವನು ಸುಖ, ದುಃಖಗಳನ್ನು ಒಂದೇ ಭಾವದಿಂದ ಸ್ವೀಕರಿಸುತ್ತಾನೆ, ಯಾವಾಗಲೂ ಉದ್ವೇಗಗೊಳ್ಳುವುದಿಲ್ಲ. ದೇವತೆಗಳಿಂದ ಪೂಜಿತರಾದ ಋಷಿಮುನಿಗಳು ಸಹ ಹೀಗೆ ಸಮದೃಷ್ಟಿಯನ್ನು ಹೊಂದಿರುವುದರಿಂದಲೇ ಎಂತಹ ವ್ರತೋಪವಾಸಗಳ ಆಚರಣೆಯ ಸಂದರ್ಭದಲ್ಲಿಯೂ ವಿಚಲಿತರಾಗುವುದಿಲ್ಲ.ಆದುದರಿಂದ ಗುಣ-ಅವಗುಣಗಳಲ್ಲಿ ಏಕತೆಯನ್ನು ಭಾವಿಸುತ್ತ ಸಮವಾಗಿ ತಿಳಿಯುವವನು, ಸುಖ-ದುಃಖ, ಮೇಲು-ಕೀಳುಗಳಲ್ಲಿ ಭೇದ ಎಣಿಸದವನು ಪವಿತ್ರಾತ್ಮನೆನಿಸಿಕೊಳ್ಳುತ್ತಾನೆ.
ʻಕುರು ಕಾರ್ಯಂ ಯಥಾಗತಮ್ʻ ಎಂಬ ವಾಕ್ಯದ ಮೂಲಕ ಯೋಗವಾಸಿಷ್ಠದ ಪ್ರಮುಖ ಸಂದೇಶವನ್ನು ತಿಳಿಯಬಹುದು. ಅಂದರೆ ಪ್ರತಿಯೊಬ್ಬರೂ ಪಾಲಿಗೆ ಬಂದ ಕರ್ತವ್ಯವನ್ನು ನಿರ್ಲಿಪ್ತವಾಗಿ ಮಾಡಲೇಬೇಕು. ಈ ಕರ್ಮದ ಜೊತೆಗೆ ಜ್ಞಾನದ ಅವಿನಾಭಾವ ಸಂಬಂಧದ ಅನಿವಾರ್ಯತೆಯನ್ನೂ ಇದು ತಿಳಿಸುತ್ತದೆ. ಗೀತೋಪದೇಶಕ್ಕೆ ಅರ್ಜುನನು ನಿಮಿತ್ತನಾದಂತೆ, ಶ್ರೀರಾಮನು ಈ ಯೋಗವಾಸಿಷ್ಠದಲ್ಲಿನ ಸಂದೇಶಕ್ಕೆ ನಿಮಿತ್ತನಾಗುತ್ತಾನೆ.
- ನಂ.ನಾಗಲಕ್ಷ್ಮಿ
ನಿವೃತ್ತ ಕನ್ನಡ ಉಪನ್ಯಾಸಕರು.
9880966499
ಲೇಖಕರ ಸಂಕ್ಷಿಪ್ತ ಪರಿಚಯ
ಹವ್ಯಾಸಿ ಪತ್ರಕರ್ತೆ, ಲೇಖಕಿ. ವ್ಯಕ್ತಿಚಿತ್ರಗಳು. ಪ್ರವಾಸ ಸಾಹಿತ್ಯ. ಅಭಿನಂದನಾ ಗ್ರಂಥ. ಜೀವನಚರಿತ್ರೆ ಅನುವಾದಗಳು ಎಂದು ಮೂವತ್ತು ಪುಸ್ತಕಗಳು ಪ್ರಕಟವಾಗಿವೆ. ಅಂಕಣಕಾರರು. ಪ್ರಸ್ತುತ ವಿವೇಕಾನಂದ ಕೇಂದ್ರ. ಕನ್ಯಾಕುಮಾರಿಯ ಕರ್ನಾಟಕ ವಿಭಾಗದಲ್ಲಿ ಸಾಹಿತ್ಯ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ. ಮತ್ತು ಕರ್ನಾಟಕ ಮಾಧ್ಯಮಿಕ ಶಿಕ್ಷಕ ಸಂಘದ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕಾರ್ಯನಿರತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ