ಶ್ರೀರಾಮ ಕಥಾ ಲೇಖನ ಅಭಿಯಾನ-132: ರಾಮಾಯಣದಲ್ಲಿ ಶಕುನಗಳು ಮತ್ತು ಸ್ವಪ್ನಗಳು

Upayuktha
0

ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


- ಅಶ್ವಿನಿ ಕುಲಕರ್ಣಿ, ಹುಬ್ಬಳ್ಳಿ


ಭೂಮಿಯ ಮೇಲೆ ಮಾನವನ ಜೀವನ ಒಂದು ಅದ್ಭುತ ಕುತೂಹಲಕಾರಿ ಕಾದಂಬರಿ ಇದ್ದಂತೆ. ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದರೂ ಆಕಾಶಕ್ಕೆ ಏಣಿ ಹಾಕಿದರೂ, ಚಂದ್ರ ತಾರೆಗಳನ್ನೇ ಮುಟ್ಟಿಬಂದರೂ, ಎರಡು ದಿನಗಳಲ್ಲಿ ಬೀಳುವ ಮಳೆ, ವಾರದಲ್ಲಿ ಬರುವ ಚಂಡಮಾರುತ, ಹವಾಮಾನದ ವೈಪರೀತ್ಯಗಳು, ಬದಲಾವಣೆಗಳು ಗಾಳಿ ಬೀಸುವ ದಿಕ್ಕು ಏನೆಲ್ಲವನ್ನು ಊಹಿಸಿ ಅಂದಾಜಿಸಿ ನಿಖರವಾಗಿ ಭವಿಷ್ಯ ನುಡಿದರೂ ಜೀವನದ ಮುಂದಿನ ನಿಮಿಷ ಮಾತ್ರ ದೊಡ್ಡ ಒಗಟು. ಜ್ಯೋತಿಷಿಗಳು ಗ್ರಹ ತಾರೆ ಕಾಲ ಸಮಯ ಕೂಡಿಸಿ ಕಳೆದು ಅಂದಾಜಿಸಿ  ಭವಿಷ್ಯ ನುಡಿದರೂ, ವಿಜ್ಞಾನಿಗಳು ವೈಜ್ಞಾನಿಕ ಪ್ರಯೋಗಗಳನ್ನು ಕಂಡುಕೊಂಡು ಭವಿಷ್ಯದ ಗರ್ಭಕ್ಕೆ ಭೂತಗನ್ನಡಿ ಹಾಕಿ ನೋಡಿದರೂ ಜೀವನ ಯಾರು ಊಹಿಸದ ತಿರುವಿಗೆ  ಊಹಿಸದ ರೀತಿ ಒಯ್ದು ನಿಲ್ಲಿಸುವುದಂತು ಖಚಿತ. ಜೀವನದ ತಿರುವುಗಳು ಹಾವು ಏಣಿ ಆಟ ಅದೇನೇ ಇದ್ದರೂ ಪ್ರಕೃತಿ, ದೈವ, ಆರನೇ ಇಂದ್ರಿಯ, ವಿಧಿ ಅಥವಾ ಯುನಿವರ್ಸ್ ಅದ್ಯಾವ ಶಕ್ತಿಯೋ ಕೆಲವೊಮ್ಮೆ ಮುಂದಾಗುವ ಒಳಿತು ಕೆಡುಕುಗಳ ಸೂಚನೆಯನ್ನು ನಮಗೆ ಪರೋಕ್ಷವಾಗಿ ಕೊಡುತ್ತಲೇ ಇರುತ್ತದೆ. ಇಂತಹ ಅನುಭವಗಳು ಸೂಚನೆಗಳನ್ನೇ ನಮ್ಮ ಹಿರಿಯರು ಶಕುನಗಳು ಸ್ವಪ್ನ ಫಲಗಳ ಮೂಲಕ ಕಂಡುಕೊಳ್ಳುತ್ತಿದ್ದರು.


ಈ ಶಕುನಗಳು ಸ್ವಪ್ನಗಳು  ಕೇವಲ ಭಾರತೀಯರು ಅಥವಾ ಹಿಂದೂ ಧರ್ಮದವರು  ಮಾತ್ರ ನಂಬುವುದಲ್ಲ ಪ್ರಪಂಚದ ಅನೇಕ ನಾಗರಿಕತೆಗಳಲ್ಲಿ, ಬಹುತೇಕ ಎಲ್ಲ ಧರ್ಮಗಳಲ್ಲಿಯೂ ಒಂದಲ್ಲ ಒಂದು ರೀತಿಯ ಶಕುನಗಳು ಸ್ವಪ್ನಗಳನ್ನು ಶುಭ ಹಾಗೂ ಅಶುಭ ಎಂದು ಪರಿಗಣಿಸುತ್ತಾ ನಂಬಿಕೊಂಡು ಬಂದಿದ್ದಾರೆ. ಅಂತೆಯೇ ನಮ್ಮ ಸಂಸ್ಕೃತಿಯಲ್ಲಿಯೂ ಶಕುನಗಳು ಹಾಗೂ ಕೆಲವು ವಿಶಿಷ್ಟ ಸ್ವಪ್ನಗಳ ಸುತ್ತ ಅನೇಕ ನಂಬಿಕೆಗಳು ಫಲಾಫಲಗಳ ಇತಿಹಾಸವಿದೆ.


ಪ್ರಪಂಚದ ಕೆಲವೇ ಶ್ರೇಷ್ಠ ಗ್ರಂಥಗಳಲ್ಲಿ ಒಂದಾಗಿರುವ ನಮ್ಮ ಮಹಾ ಕಾವ್ಯ ರಾಮಾಯಣದಲ್ಲಿಯೂ ಅನೇಕ ಕಡೆ ನಾವು ಕುತೂಹಲಕಾರಿ  ಶಕುನಗಳು ಹಾಗೂ  ಸ್ವಪ್ನಗಳ ಉಲ್ಲೇಖಗಳನ್ನು ಕಾಣಬಹುದು.


ವಿಶೇಷವಾಗಿ ವಾಲ್ಮೀಕಿ ರಾಮಾಯಣದ ಸುಂದರಕಾಂಡದ ಯುದ್ಧಕಾಂಡ ಅರಣ್ಯ ಕಾಂಡ,ಕಿಷ್ಕಿಂದ ಕಾಂಡಗಳ ಅಧ್ಯಾಯಗಳಲ್ಲಿ ಈ ಶಕುನಗಳು ಹಾಗೂ ಸ್ವಪ್ನಗಳನ್ನು ವಿಶೇಷವಾಗಿ ಉಲ್ಲೇಖಿಸಬಹುದು. ಎಡಗಣ್ಣು ಹಾರುವುದು, ಬಲಗಣ್ಣು ಹಾರುವುದು, ಎಡ ಭುಜ, ಬಲ ಭುಜ, ತುಟಿಗಳ ಚಲನೆ, ಹುಬ್ಬುಗಳ ಚಲನೆ, ಕೆಲವೊಂದು ಪ್ರಾಣಿ ಪಕ್ಷಿಗಳ ಕೂಗು, ಅಳು, ಲೋಚಗುಟ್ಟುವಿಕೆ, ಆಕ್ರಂದನ, ಕೆಲವು ವಿಶಿಷ್ಟ ದಿಕ್ಕುಗಳಲ್ಲಿ ಅವುಗಳ ಚಲನವಲನ ಧೂಮಕೇತುಗಳು, ಬೀಳುವ ನಕ್ಷತ್ರಗಳು, ಎದುರಿಗೆ ಕಾಣಿಸಿಕೊಳ್ಳುವ  ಕೆಲವು ವಿಶಿಷ್ಟ ಪ್ರಾಣಿ ಪಕ್ಷಿ ವ್ಯಕ್ತಿಗಳ ಸಂಕೇತ, ಹಾಲು ಉಕ್ಕುವುದು, ಕೆಲ ವಸ್ತುಗಳು ಕೈಜಾರಿ ಬೀಳುವುದು, ಕೆಲವು ವಸ್ತುಗಳ ಕೈ ಸೇರುವುದು, ಹೀಗೆ ಸಾಕಷ್ಟು ಶುಭ ಅಥವಾ ಅಶುಭ ಸೂಚಕ ಎಂದು ಭಾವಿಸುವ ಶಕುನಗಳ ಹಾಗೂ ಸ್ವಪ್ನಗಳ ಸಂಕೇತಗಳನ್ನು ರಾಮಾಯಣದ ವಿವಿಧ ಸನ್ನಿವೇಶಗಳಲ್ಲಿ ಕಾಣಬಹುದಾಗಿದೆ.


ಮೊದಲಿಗೆ ಕುವೆಂಪುರವರ  ರಾಮಾಯಣ ದರ್ಶನಂನ ಕೆಲವು ಉದಾಹರಣೆಗಳನ್ನು ಹೇಳಬೇಕೆಂದರೆ, ಶ್ರೀರಾಮಚಂದ್ರನು ಜನಿಸುವ ಮುಂಚೆ ಕೌಸಲ್ಯಗೆ ಎದೆಹಾಲು ಮೂಡಿದ ಆ ರಾತ್ರಿ ಅವಳು ಕನಸಿನಲ್ಲಿ ಕ್ಷೀರಸಾಗರ ಆ ಸಾಗರದ ಅಲೆಗಳ ಮೇಲೆ  ತೇಲುತ್ತಾ ಬರುವ ಬಾಲಚಂದ್ರನಂತಹ ಸುಂದರ ಶಿಶುವನ್ನು ಕಂಡುಪುಳುಕಿದಳಾಗುತ್ತಾಳೆ. ಆ ಶುಭ ಸೂಚನೆಯ ಸುಂದರ ಸ್ವಪ್ನದ ಫಲವೇನೋ ಎಂಬಂತೆ ಮರುದಿನವೇ ಕ್ಷೀರ ಸಾಗರದ ಅಧಿಪತಿಯಾದ ಶ್ರೀ ಹರಿಯ ಅವತಾರ ಶ್ರೀರಾಮಚಂದ್ರನ ಜನನವಾಗುತ್ತದೆ.


ಅದೇ ರೀತಿ ಮಿಥಿಲೆಯ ಸೀತೆಗೆ ಸದಾ ಕಾಡುವ ವಿಚಿತ್ರ ಸ್ವಪ್ನ ಆಕಾಶ ಸಮುದ್ರಗಳು ಉಕ್ಕಿ ಅವಳನ್ನು ಲೀನ ಮಾಡಿಕೊಳ್ಳಲು ಬಂದು ಕಡೆಗೆ ಅವಳೆ ಅದರ ಒಡತಿಯಾದಂತೆ, ತಾನೆ ಮಹಾಲಕ್ಷ್ಮಿಯ ಸ್ವರೂಪದಂತೆ, ಕಡೆಗೆ ಅದುವರೆಗೂ ನೋಡದ ನೀಲ ಮೇಘವರ್ಣದ ಸುಂದರ ತರುಣ ದಿನವೂ ಕನಸಿನಲ್ಲಿ ಕಾಣಿಸಿಕೊಂಡು ಕೆಲವೇ ದಿನಗಳಲ್ಲಿ ಸ್ವಯಂವರದ ಸಂದರ್ಭದಲ್ಲಿಅವನು ಅಯೋಧ್ಯ ರಾಜಕುಮಾರ ಶ್ರೀರಾಮಚಂದ್ರ ಎಂಬ ಸತ್ಯ ಅವಳಿಗೆ ಗೊತ್ತಾಗುತ್ತದೆ ಮತ್ತೆ ತನ್ನ ಸ್ವಪ್ನದ ಅರ್ಥ ಹಾಗೂ ಭವಿಷ್ಯದ ದಿಕ್ಕು ಸಹ.


ಶ್ರೀರಾಮಚಂದ್ರ ಹಾಗೂ ಸೀತೆಯ ವಿವಾಹದ ನಂತರ ಶಾಂತವಾದ ಕೊಳದಂತಿದ್ದ ಅಯೋಧ್ಯೆಯ ಆಗಸದಲ್ಲಿ ಇದ್ದಕ್ಕಿದ್ದಂತೆ ಮುಂಬರುವ ಅಶುಭಗಳಿಗೆ ಮುನ್ನುಡಿಯೇನೊ ಎಂಬಂತೆ ಭಯಂಕರವಾದ ಧೂಮಕೇತು ಕಾಣಿಸಿಕೊಳ್ಳುತ್ತದೆ. ಅಶುಭ ಸೂಚಕ ಶಕುನವನ್ನು ಕಂಡ ಅಯೋಧ್ಯೆಯ ಜನತೆ ಹಾಹಾಕಾರವಿಡುತ್ತಾರೆ. ಧೂಮಕೇತು ಆಳುವ ರಾಜರ ಪ್ರಾಣ ಹರಣದ ಸಂಕೇತ ಎಂಬುದನ್ನರಿತ ದಶರಥ ಮಗ ಶ್ರೀರಾಮಚಂದ್ರನಿಗೆ ಪಟ್ಟ ಕಟ್ಟುವ ಸಿದ್ಧತೆ ಮಾಡುತ್ತಾನೆ. ಇತ್ತ ಅದೇ ದಿನ ಮಂಥರೆಗೆ ತನ್ನ ಪ್ರೀಯ ಕೈಕೆ ಹಾಗೂ ಭರತ ಕಪ್ಪು ಬಟ್ಟೆ ಧರಿಸಿ ಮರಭೂಮಿಯಲ್ಲಿ ನಡೆದು ಕಣ್ಮರೆಯಾಗುವಂತಹ ಕೆಟ್ಟ ಕನಸು. ಆ ಕನಸಿಗೆ ಬೆಚ್ಚಿದ ಮಂಥರೆ ಹೊರಗೆ ರಾಮನ ಪಟ್ಟಾಭಿಷೇಕದ ಸಿದ್ಧತೆಗಳನ್ನು ಕಂಡು ತನ್ನ ಕನಸಿನ  ಅರ್ಥವನ್ನು ಸ್ಪಷ್ಟವಾಗಿ ಕಂಡುಕೊಳ್ಳುತ್ತಾಳೆ. ಮುಂದೆ ಅದೇ ಮಂಥರೆ ಕೈಕೇಯಿಯ ಮೂಲಕ ರಾಮನ ವನ ವಾಸಕ್ಕೆ ಶರಾ ಬರಿಯುತ್ತಾಳೆ.


ಇತ್ತ ಅಯೋಧ್ಯೆಯ ಯಾವ ಆಗುಹೋಗುಗಳ ಅರಿವಿರದೆ ಕೇಕಯ ದೇಶದ ಸುಖದ ಸುಪ್ಪತ್ತಿಗೆಯಲ್ಲಿ ಮಲಗಿದ ಭರತನಿಗೆ ಅಯೋಧ್ಯೆಯಲ್ಲಿ ಸಂಭವಿಸಿದ ಅನಾಹುತವನ್ನು ಸೂಚಿಸುವಂತಹ ಭೀಕರವಾದ ಸ್ವಪ್ನ ಕಾಣಿಸಿಕೊಳ್ಳುತ್ತದೆ. ಯಾವುದೋ ಅಜ್ಞಾತ ಸ್ಥಳ ಜಗತ್ತನ್ನೇ ಬೆಳಗುವ ಸೂರ್ಯ ಮುಳುಗಿ  ಎಲ್ಲ ಕಡೆ ಕತ್ತಲು ದೊಡ್ಡ ಬೆಟ್ಟದ ಮೇಲೆ ಕೋಡುಬಂಡೆ, ಅಲ್ಲಿ ಒಂಟಿಯಾಗಿರುವ ಭರತ. ನೋಡನೋಡುತ್ತಿದ್ದಂತೆ ಆ ಕೊಡುಗಲ್ಲು ದಶರಥನ ಆಕಾರ ಪಡೆಯಿತು. ಎಲ್ಲ ಕಡೆ ಭಯಾನಕ ಕರ್ಕಶ ಸದ್ದು ಕರುಳನ್ನೇ ಭೇದಿಸುವ ರೋಧನ ಕಪ್ಪು ಬಟ್ಟೆ ಕೆದರಿದ ಬಿಳಿ ಕೂದಲು, ಕೊರಳಲ್ಲಿ ರಕ್ತವರ್ಣದ ಮಾಲೆ  ಅಸಹಾಯಕತೆ ಹಾಗೂ ಶೋಕವೇ ಮೈವೆತ್ತಂತೆ ಕತ್ತೆಯ ಮೇಲೆ ಕುಳಿತಿರೋಧಿಸುತ್ತ ದಕ್ಷಿಣ ದಿಕ್ಕಿಗೆ ಹೊರಟ ದಶರಥ ಇದ್ದಕ್ಕಿದ್ದಂತೆ ಅವನು ಪ್ರಪಾತಕ್ಕೆ ಜಾರುತ್ತಾನೆ, ಹೇಸಿಗೆಯ ಕಡಲಿಗೆ ಬೀಳುತ್ತಾನೆ. ಜೊತೆಗೆ ಬಾನ ಚಂದಿರ ಸಹ ಯಾವುದೋ ಶೋಕ ಸಾಗರದ ಪ್ರಪಾತಕ್ಕೆ ಬಿಳುತ್ತಾನೆ ಯಾವುದೋ ರಾಕ್ಷಸಿಯ ಅಟ್ಟಹಾಸದ ನಗು ಇಂತಹ ದುಸ್ವಪ್ನವನ್ನು ಕಂಡ ಭರತ ಶತೃಘ್ನನನ್ನು ಎಬ್ಬಿಸಿಕೊಂಡು ಅಯೋಧ್ಯಯತ್ತ ಪ್ರಯಾಣ ಬೆಳೆಸುತ್ತಾನೆ. ಮುಂದೆ ಅಯೋಧ್ಯೆಯಲ್ಲಿ ಸತ್ತ ಅರಸರ ಮೂರ್ತಿಗಳ ಜೊತೆಗೆ ದಶರಥನ ಪ್ರತಿಮೆಯನ್ನು ಕಂಡಾಗ ಭರತನಿಗೆ ತನ್ನ ಸ್ವಪ್ನದ ಸಂಕೇತ, ಅರ್ಥ ಸ್ಪಷ್ಟವಾಗುತ್ತದೆ.


ಇನ್ನೂ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಬಹಳಷ್ಟು ಕಡೆ ಅನೇಕ ಸಂದರ್ಭಗಳಲ್ಲಿ ಈ ಸ್ವಪ್ನಗಳು ಹಾಗೂ ಶಕುನಗಳನ್ನು ಕಾಣಬಹುದಾಗಿದೆ. ಸ್ವತಃ  ಶ್ರೀರಾಮಚಂದ್ರ, ಸೀತೆಯರೆ ತಮಗೆ ಎದುರಾಗುವ  ಶುಭ ಹಾಗೂ ಅಶುಭ  ಶಕುನಗಳ ಬಗ್ಗೆ ಕಳವಳವನ್ನು, ಸಂಭ್ರಮವನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸುತ್ತಾ ಮುಂದಿನ ಆಗು ಹೋಗುಗಳನ್ನು ಅಂದಾಜಿಸುತ್ತಾರೆ.


ವನವಾಸದಲ್ಲಿದ್ದ ಪತಿಯ ಸಾಂಗತ್ಯದಲ್ಲಿ ಸುಖದಿಂದ ಇದ್ದ ಸೀತೆಗೆ ಮುಂದೆ ಜೀವನದಲ್ಲಿ ಬೀಸುವ ಬಿರುಗಾಳಿಯ ಬಗ್ಗೆ ಸೂಚನೆಯೇನೋ ಎಂಬಂತೆ ಹಲವಾರು ಅಪ ಶಕುನಗಳು ಕಾಣಿಸಿಕೊಂಡು ಅವಳನ್ನು ಚಿಂತೆಗೆ ಈಡು ಮಾಡುತ್ತವೆ. ಆ ಕುರಿತು ಅವಳು ಶ್ರೀರಾಮನಲ್ಲಿಯೂ ಶಕುನಗಳ ಬಗ್ಗೆ ಚಿಂತಾಕ್ರಾಂತಳಾಗಿ ಹೇಳಿಕೊಳ್ಳುತ್ತಾಳೆ. ಅವಳ ಚಿಂತೆಯನ್ನು ನಿಜ ಮಾಡುವಂತಹ ಘಟನೆಗಳು ಕೆಲವೇ ದಿನಗಳಲ್ಲಿ ಜರುಗುತ್ತವೆ.


ಅದೇ ರೀತಿ ಬಂಗಾರದ ಜಿಂಕೆಯ ಬೆನ್ನಟ್ಟಿ ಹೊರಟ ರಾಮನ ಹಿಂದೆ ಲಕ್ಷ್ಮಣನು ರಾಮನಿಗೇನೊ ತೊಂದರೆಯಾಗಿರಬಹುದು ಎಂದು ಅನಿಸುವಂತೆ ಮಾಡಿದ ರಾಕ್ಷಸ ಮಾಯೆಯ ಬೆನ್ನಟ್ಟಿ ಸೀತೆಯನ್ನು ಕುಠೀರದಲ್ಲಿ ಬಿಟ್ಟು ಹೊರಡುತ್ತಾನೆ. ಕಾಡಿನಲ್ಲಿ ಸುವರ್ಣ ಜಿಂಕೆಯ ರೂಪದಲ್ಲಿದ್ದ ಮಾರಿಚನನ್ನು ರಾಮನು ಕೊಂದ ಮೇಲೂ ಅವನಿಗೇನೊ ತಳಮಳ, ಸಂಕಟ ಅತ್ಯಂತ ಪ್ರೀತಿ ಪಾತ್ರವಾದ ಜೀವ ಸದೃಶವಾದ ಅಮೂಲ್ಯ ವಸ್ತುವೊಂದನ್ನು ಕಳೆದುಕೊಳ್ಳುವ ಪೂರ್ವಾಭಾಸ.ವಿಪರೀತವಾಗಿ ಎಡಗಣ್ಣು ಅದರಲು ಪ್ರಾರಂಭವಾಗುತ್ತದೆ. ಅಷ್ಟರಲ್ಲೇ ತನ್ನನ್ನು ಹುಡುಕಿ ಬಂದ ಲಕ್ಷ್ಮಣನನ್ನು ಕಂಡಮೇಲಂತೂ ರಾಮನ ಸಂಕಟ ಕಳವಳ ಇನ್ನೂ ಅಧಿಕವಾಗುತ್ತದೆ.


"ಮನ್ಹ ಚಮೇ ಧೀನಂ ಇಹ ಅಪ್ರ ಅಪ್ರಹೃಷ್ಠಂ

ಚಕ್ಷುಃ ಚ ಸವ್ಯಂ ಕುರೂತೇ ವಿಕಾರಂ

ಅಸಂಶಯಂ ಲಕ್ಷ್ಮಣ ನ ಅಸ್ತಿ ಸೀತಾ 

ಹೃತಾ ಮೃತಾ ವಾ ಪತೀ ವರ್ಥತೆ ವಾ".


"ನನ್ನ ಹೃದಯವು ಅತ್ಯಂತ ದುಃಖಿತವಾಗಿದೆ. ಎಡಗಣ್ಣು ಒಂದೇ ಸಮನೆ ಅದುರುತ್ತಿದೆ ಹೇ ಲಕ್ಷ್ಮಣನೇ ನಿಸಂದೇಹವಾಗಿ ಸೀತೆಗೆ ತೊಂದರೆಯಾಗಿದೆ, ಅವಳು ಆಶ್ರಮದಲ್ಲಿಲ್ಲ" ಎಂದು ಶ್ರೀರಾಮಚಂದ್ರ  ಹೇಳುತ್ತಾನೆ. ತನಗೆ ದೊರೆತ ಶಕುನಗಳ ಮೂಲಕ ಸೀತೆಗೆ ಉಂಟಾದ ಕೇಡನ್ನು ಅವನು ಅನುಭಾವಿಸುತ್ತಾನೆ.


ಶಕುನಗಳು ಸ್ವಪ್ನಗಳು ಕೇವಲ ಅಶುಭವನ್ನೇ ಸೂಚಿಸದೆ  ಶುಭ ಸಮಯದ ಆಗಮನವನ್ನು ಸಹ ಮುನ್ಸೂಚಿಸುತ್ತವೆ. ಅಂತೆಯೇ  ರಾಮನಿಂದ ಸೀತೆಯ ಅಗಲಿಕೆಯ ಸೂಚನೆಗಳು ಶ್ರೀರಾಮಚಂದ್ರನಿಗೆ ಸಿಕ್ಕಂತೆ ಮತ್ತೆ ಅವಳನ್ನು ಕಾಣುವ ಸಮಯ ಹತ್ತಿರವಾದಂತೆ  ಅದನ್ನು ಸೂಚಿಸುವ  ಶುಭಶಕುನಗಳು ಸಹ ಶ್ರೀರಾಮಚಂದ್ರನಿಗೆ  ಕಾಣಿಸಿಕೊಳ್ಳುತ್ತವೆ.

"ತಾಂ ವಿನಾ ವಿಹಂಗೋ ಯಃಪಕ್ಷಿ ಪ್ರಾಣಾದಿಸ್ತದಾ ವಾಯಸಃ ಪಾದಪ್ರಗತಃ

ಪ್ರಹೃಷ್ಠಮಭಿನಿರ್ದತಿ".


"ವಿಹಂಗಗಳು ಆಗಸದಲ್ಲಿ ಹಾರುವ ಪಕ್ಷಿಗಳು ಕಲರವಿಸುತ್ತಿವೆ. ಸೀತೆಯ ಅಗಲಿಕೆಯನ್ನು ಸೂಚಿಸಿದ ಅದೇ ಕಾಗೆ ಇಂದು ಮರದ ಮೇಲಿದೆ.  ಗೂಡಿನಲ್ಲಿ ಸಂತೋಷವಾಗಿ ಹಾಡುತ್ತಿದೆ. ಇದು ನಾನು ಮತ್ತೆ ಸೀತೆಯನ್ನು ಸೇರಲಿರುವ ದಿನ ಹತ್ತಿರವಾಗುತ್ತಿರುವ ಶುಭ ಸೂಚಕ ಶಕುನ."

 "ಏಷ ವೈ ತತ್ರ ವೈದೇಹ್ಯ ವಿಹಗಃ ಪ್ರತಿಹಾರಕಃ ಪಕ್ಷಿಮಾಂ ತು ವಿಶಾಲಾಕ್ಷ್ಯ ಸಮೀಪಮುಪನೇಷ್ಯತಿ".


"ಇದೇ ಹಕ್ಕಿ ಪಕ್ಷಿಗಳು ನನ್ನ ದೊಡ್ಡ ಕಣ್ಣಿನ ಪ್ರಿಯತಮೆಯ ಬಳಿ ಸುದ್ದಿ ಒಯ್ಯುತ್ತವೆ ನನ್ನನ್ನು ಕರೆದೊಯುತ್ತವೆ" ಎಂದು ರಾಮಚಂದ್ರನು ಶುಭ ಶಕುನದಿಂದ ಸಂತೋಷಗೊಳ್ಳುತ್ತಾನೆ.


ಅಶೋಕವನದಲ್ಲಿ ಸೀತೆಯು ರಾಕ್ಷಸಿಯರ ನಡುವೆ ಭಯಗೊಂಡ ಜಿಂಕೆಯಂತೆ ಕುಳಿತಿರಲು ರಾಕ್ಷಸಿಯರು ಅವಳನ್ನು ಸದಾ ಹೆದರಿಸಿ ಬೆದರಿಸಿ ಪೀಡೆಯನ್ನು ಕೊಡುತ್ತಿರಬೇಕಾದರೆ ತ್ರಿಜಟೆಯು ತಾನು ಕಂಡ ಕನಸಿನಿಂದ ಭಯ ಭೀತಗೊಂಡು ಸೀತೆಯನ್ನು ಪೀಡಿಸದೇ ಇರುವಂತೆ ರಾಕ್ಷಸರಿಗೆ ಎಚ್ಚರಿಸುತ್ತಾಳೆ. ರಾಕ್ಷಸಿಯರು ಅವಳ ಸ್ವಪ್ನದ ಬಗ್ಗೆ ಕೇಳಲು ಸ್ವಪ್ನದಲ್ಲಿ ಸಾವಿರ ಹಂಸಗಳು ಮತ್ತು ನಾಲ್ಕು ದಂತಗಳ ಶ್ವೇತ ಪಲ್ಲಕ್ಕಿಯಲ್ಲಿ ಶ್ವೇತ  ವರ್ಣದ ರೇಷ್ಮೆ ವಸ್ತ್ರಧಾರಿಯಾದ ರಾಮ ಲಕ್ಷ್ಮಣರು ಪಲ್ಲಕ್ಕಿ ಇಂದ ಇಳಿದು ಆನೆ ಏರಿ ಪರ್ವತದ ಮೇಲಿದ್ದ ಸೀತೆಯ ಬಳಿ ಬಂದರು. ಸೀತೆಯು ಪರ್ವತದಿಂದ ಇಳಿದು ಆನೆಯನ್ನೇರಿ ರಾಮನ ಮಡಿಲಲ್ಲಿ ಕುಳಿತಳು. ರಾಮನ ಮಡಿಲಿನಿಂದ ಮೇಲೆದ್ದ ಸೀತೆ ಆಕಾಶ ಸೂರ್ಯ ಚಂದ್ರನ ನಕ್ಷತ್ರಗಳನ್ನು ಅಪ್ಪಿಕೊಂಡಂತೆ  ಕಂಡಳು. ನಂತರ ರಾಮ ಲಕ್ಷ್ಮಣ ಸೀತೆ ಲಂಕೆಗೆ ಬಂದರು. ಅವರು ಪುಷ್ಪಕ ವಿಮಾನವನ್ನೇರಿ ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸಿದರು. ರಾಮನು ಮಹಾ ವಿಷ್ಣುವಿನ ಅವತಾರದಲ್ಲಿ ಕಂಗೊಳಿಸಿದ.


ಇತ್ತ ರಾವಣ ದೇಹದ ತುಂಬಾ ಎಣ್ಣೆ ಬಳಿದುಕೊಂಡ, ತಲೆ ಬೋಳಿಸಿಕೊಂಡ, ಕಪ್ಪು ಬಟ್ಟೆ ಧರಿಸಿ ಕೆಂಪು ಹೂಗಳ ಮಾಲೆಯನ್ನು ಧರಿಸಿದವನಾಗಿ ಪುಷ್ಪಕ ವಿಮಾನದಿಂದ ಕೆಳಗುರುಳಿದ ಕತ್ತೆಯ ಮೇಲೆ ಕುಳಿತು ದಕ್ಷಿಣ ದಿಕ್ಕಿನತ್ತ ಪ್ರಯಾಣ ಬೆಳೆಸಿದ. ವಿಭೀಷಣನ ಹೊರತಾಗಿ ರಾವಣನ ಉಳಿದ  ಅಣ್ಣ-ತಮ್ಮಂದಿರು ಹಾಗೂ ಮಕ್ಕಳಿಗೂ ಇದೇ ಸ್ಥಿತಿ ಒದಗಿತ್ತು. ಕತ್ತೆಗಳ ರಥದಿಂದಲೂ ಕೆಳಗುರುಳಿದ ರಾವಣ ಕೆಸರಿನ ಮಡುವಿನಲ್ಲಿ ಬಿದ್ದು  ಕೊರಳಿಗೆ ಹಗ್ಗ ಬಿಗಿದುಕೊಂಡ.


ಇಡೀ ಸ್ವರ್ಣ ಲಂಕೆಯನ್ನು ರಾಮನ ವಾನರ ಸೈನ್ಯ ಸುಟ್ಟು ಹಾಕಿತು. ಗೋಪುರಗಳು ಧರೆಗೆ ಉರುಳಿದವು. ರಾಕ್ಷಸ ಕುಲ ಸರ್ವನಾಶವಾಗುವುದನನ್ನು ಸ್ವಪ್ನದಲ್ಲಿ ಕಂಡ ತ್ರಿಜ್ಯಟೆ ರಾಕ್ಷಸ ಸ್ತ್ರೀಯರನ್ನು ಎಚ್ಚರಿಸುತ್ತಾಳೆ. ಇಂತಹ ದುಸ್ವಪ್ನದ ಜೊತೆಗೆ ಸೀತೆಯ ಕುರಿತು ಒಳ್ಳೆಯ ಶುಭ ಶಕುನಗಳು ಗೋಚರಿಸುತ್ತಿದ್ದೂ ಆಕೆ ರಾವಣನ ಬಂಧನದಿಂದ ಮುಕ್ತವಾಗುವ ಸಮಯ ದೂರವಿಲ್ಲ. ಹೀಗಾಗಿ ಅವಳನ್ನು ಪೀಡಿಸಿ ಪಾಪದ ಹೊರೆಯನ್ನು ಹೆಚ್ಚು ಮಾಡಿಕೊಳ್ಳದಿರುವಂತೆ ರಾಕ್ಷಸಿಯರಿಗೆ ಎಚ್ಚರಿಸುತ್ತಾಳೆ.


ಹೀಗೆ ರಾಮಾಯಣದ  ಹಲವು ಸನ್ನಿವೇಶಗಳಲ್ಲಿ  ಮುಂದೆ ಸಂಭವಿಸಬಹುದಾದ  ಶುಭ ಹಾಗು ಅಶುಭಗಳ ಬಗ್ಗೆ ಸೂಚನೆಯನ್ನು ನೀಡುವ ಶಕುನಗಳು ಹಾಗೂ ಸ್ವಪ್ನಗಳನ್ನು ಕಾಣಬಹುದಾಗಿದೆ.




- ಅಶ್ವಿನಿ ಕುಲಕರ್ಣಿ, ಹುಬ್ಬಳ್ಳಿ

95919 66236


ಲೇಖಕರ ಸಂಕ್ಷಿಪ್ತ ಪರಿಚಯ


ಶ್ರೀಮತಿ ಅಶ್ವಿನಿ ಮಧುಸೂದನ್ ಕುಲಕರ್ಣಿ ಮೂಲತಃ ಬಾಗಲಕೋಟೆಯವರು  ಪ್ರಸ್ತುತ ಹುಬ್ಬಳ್ಳಿಯಲ್ಲಿ ವಾಸವಿರುತ್ತಾರೆ. ಕಲಾ ಹಾಗೂ ಶಿಕ್ಷಣ ಶಾಸ್ತ್ರದಲ್ಲಿ ಪದವೀಧರೆಯಾಗಿರುವ ಇವರು ಕೆಲವು ಸಮಯ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಬರವಣಿಗೆಯ ಪ್ರವೃತ್ತಿಯನ್ನು ಹೊಂದಿದ್ದಾರೆ.  ನಾಡಿನ ಹಲವಾರು ಪ್ರಮುಖ ದಿನ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಹಲವಾರು ಸ್ಪರ್ಧೆಗಳಲ್ಲಿ ಇವರ ಹಲವು ಕಥೆ ಹಾಗೂ ಲೇಖನಗಳು ಬಹುಮಾನವನ್ನು ಪಡೆದುಕೊಂಡಿವೆ. ಹಲವಾರು ಡಿಜಿಟಲ್ ಮಾಧ್ಯಮಗಳಲ್ಲಿ ಬರವಣಿಗೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಸಣ್ಣ ಕಥೆಗಳು, ನೀಳ್ಗತೆಗಳು, ವಿವಿಧ ವಿಷಯಗಳ ಕುರಿತಂತೆ ಲೇಖನಗಳು, ಕವನಗಳು ಹೀಗೆ ವಿವಿಧ ಪ್ರಕಾರದಲ್ಲಿ ಅನೇಕ ಬರಹಗಳನ್ನು ರಚಿಸಿದ್ದಾರೆ. ವಿಜಯ ಕರ್ನಾಟಕದವರು ಪ್ರಕಟಿಸಿದ  ಗೆಲುವು ಗ್ಯಾರಂಟಿ ಪುಸ್ತಕದಲ್ಲಿ ಹಾಗೂ ಲೇಖಿಕಾ ಪ್ರತಿಷ್ಠಾನದವರ ಓ ಮನಸೇ ಪುಸ್ತಕದಲ್ಲಿ ಇವರ ವಿಜೇತ ಲೇಖನ ಹಾಗೂ ಕಥೆ ಪುಸ್ತಕದಲ್ಲಿ ಪ್ರಕಟಗೊಂಡಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top