-ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು,
ಪೀಠಾಧಿಪತಿಗಳು,
ಪೇಜಾವರ ಅಧೋಕ್ಷಜ ಮಠ ಉಡುಪಿ ಮತ್ತು
ವಿಶ್ವಸ್ಥರು ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್, ಅಯೋಧ್ಯೆ
ನಮ್ಮ ಭಾರತದೇಶದಲ್ಲಿ ಎರಡು ಪ್ರಮುಖ ಇತಿಹಾಸ ಒಂದು ರಾಮಾಯಣ,ಅದರಲ್ಲಿ ಶ್ರೀರಾಮಚಂದ್ರ ದೊಡ್ಡ ಧೀಮಂತನಾದ ನಾಯಕನಾಗಿದ್ದಾನೆ. ಶ್ರೀರಾಮಚಂದ್ರ ನಮಗೆ ತೋರಿದ ಆದರ್ಶ ಇವತ್ತಿಗೂ ನಮಗೆ ಆದರ್ಶಪ್ರಾಯವಾಗಿದೆ. ಹಾಗಾಗಿ ಶ್ರೀರಾಮಚಂದ್ರನ ಉತ್ಸವವನ್ನು ಕೇವಲ ರಾಮನವಮಿಯಂದು ಮಾತ್ರವಲ್ಲದೇ ನಿತ್ಯವೂ ಆಚರಿಸಬೇಕು. ಮನೆ ಮನೆಗಳಲ್ಲಿ ಮಂದಿರಗಳಲ್ಲಿ ರಾಮನವಮಿ ಉತ್ಸವವು ಯಥಾ ಶಕ್ತಿ ನಡೆಯುತ್ತಲೇ ಇರುತ್ತದೆ. ಶ್ರೀರಾಮಚಂದ್ರ ಹಿಂದುಗಳ ಆರಾಧ್ಯದೈವವಾದರೂ ಸಕಲ ಮಾನವಕುಲಕ್ಕೆ ಅವನು ಆದರ್ಶಪ್ರಾಯ. ಅನೇಕ ಯುಗಗಳಿಂದಲೂ ಎಲ್ಲರಿಂದಲೂ ಪೂಜಿಸಿಕೊಂಡು ಬರುತ್ತಿರುವ ಶ್ರೀರಾಮಚಂದ್ರದೇವರು ಸರ್ವಗುಣ ಪರಿಪೂರ್ಣ ಶ್ರೀಮನ್ನಾರಾಯಣನ ಅವತಾರ.
ರಾಮ ಹುಟ್ಟಿದ್ದು ಮಾನವನ ಮನೆಯಲ್ಲಿ , ಹನುಮಂತ ಹುಟ್ಟಿದ್ದು ವಾನರನ ಮನೆಯಲ್ಲಿ ನಮಗೆ ವ್ಯಕ್ತಿಯ ಹುಟ್ಟು ಮುಖ್ಯವಾಗುವುದಿಲ್ಲ ಅವನ ಗುಣಗಳು ಮುಖ್ಯವಾಗುತ್ತದೆ. ನಾವು ಮಾನವ ಎಂದು ಆರಾಧಿಸಬೇಕು ಎಂಬ ನಿಯಮವಿಲ್ಲ.ನಾವು ಮತ್ಸ್ಯನನ್ನೂ ಆರಾಧಿಸುತ್ತೇವೆ, ಕೂರ್ಮನನ್ನೂ ಆರಾಧಿಸುತ್ತೇವೆ, ಹನುಮಂತನನ್ನು ಕೂಡ ಆರಾಧಿಸುತ್ತೇವೆ, ಇಲ್ಲಿ ಅವರ ಗುಣವನ್ನು ಆರಾಧಿಸುತ್ತೇವೆ.
ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮ 'ರಾಮ' ಎಂಬ ಶಬ್ದವೇ 'ರಮಂತೇ ಯೋಗಿನಃ ಅಸ್ತಿ ಇತಿ ರಾಮಃ 'ಯಾರಿಂದಾಗಿ ಸಮಸ್ತ ಲೋಕವೇ ಸುಖವನ್ನು ಸಂತೋಷವನ್ನು ಅನುಭವಿಸುತ್ತಾ ಇದೆಯೋ ಅವನು ರಾಮ, ಇದಕ್ಕೆ ವಿರುದ್ಧನಾಗಿರುವವನು ರಾವಣ. 'ರಾವಣ' ಶಬ್ದಕ್ಕೆ ಅರ್ಥವೇ ಯಾವನು ಮೂರು ಲೋಕವೂ ಅಳುವಂತೆ ಮಾಡುತ್ತಿರುವನೋ ಅವನು ರಾವಣ ಎಂಬುದಾಗಿ ಇದೆ. ನಮಗೆ ವಾಲ್ಮೀಕಿ ರಾಮಾಯಣ ಈರ್ವರು ಆದರ್ಶ ಪುರುಷರನ್ನು ಕಣ್ಣ ಮುಂದೆ ಇಟ್ಟಿದೆ. ಒಬ್ಬ ರಾಮ ಇನ್ನೊಬ್ಬ ರಾವಣ. ಹೇಗೆ ಬದುಕಬೇಕು ಎಂಬುದಕ್ಕೆ ಶ್ರೀರಾಮಚಂದ್ರನು ಆದರ್ಶನಾದರೆ, ಯಾವ ರೀತಿಯಲ್ಲಿ ಬದುಕಬಾರದು ಎಂಬುದಕ್ಕೆ ರಾವಣನೇ ಆದರ್ಶ. ರಾಮ ನಮಗೆ ಆದರ್ಶ ಪುರುಷ ಏಕೆಂದರೆ ಜೀವನದಲ್ಲಿ ಸಮಾಜದಲ್ಲಿ ನಾವು ಹೇಗೆ ಇರಬೇಕು ಎಂಬುದಕ್ಕೆ ರಾಮನೇ ಆದರ್ಶ ಪುರುಷ, ಅದೇ ಹೊತ್ತಿಗೆ ಸಮಾಜದಲ್ಲಿ ನಾವು ಹೇಗೆ ಇರಬಾರದು ಎಂಬುದಕ್ಕೆ ರಾವಣ ಆದರ್ಶ ಪುರುಷ.
ಶ್ರೀರಾಮಚಂದ್ರ ಎಲ್ಲವನ್ನೂ ಕೂಡ ಸಮಾಜಕ್ಕೆ ಮೀಸಲಾಗಿಟ್ಟು ತಾನು ಕಷ್ಟವನ್ನು ಅನುಭವಿಸುತ್ತಾ ಸಮಾಜದ ಸುಖದ ನೆಲೆಯಲ್ಲಿ ತನ್ನ ಬದುಕನ್ನೇ ಸಾಗಿಸಿದ, ಆದರೆ ರಾವಣ ಒಳ್ಳೆಯದೆಲ್ಲ ತನಗೇ ಬೇಕು ಯಾರಿಗೆ ಕಷ್ಟ ಆದರೂ ಚಿಂತೆಯಿಲ್ಲ ದುಃಖವಾದರೆ ಚಿಂತೆಯಿಲ್ಲ ಎಂದು ಕೊಂಡು ಪರರಿಗೆ ದುಃಖಕೊಟ್ಟು ತಾನು ಸುಖ ಪಡಲು ನೋಡಿದ. ಆದ್ದರಿಂದ ನಮಗೆ ರಾವಣ ಆದರ್ಶ ಪುರುಷನಾಗಬಾರದು, ರಾಮನಂತೆ ನಾವು ಇರಬೇಕು.
ವಾಲ್ಮೀಕಿ ರಾಮಾಯಣದಲ್ಲಿ ತೋರಿಸಿದ ಈರ್ವರು ಆದರ್ಶ ಪುರುಷರನ್ನು ನೋಡಿ ರಾಮನ ಆದರ್ಶವನ್ನು ಪಾಲಿಸೋಣ.
'ಶ್ರೀರಾಮಚಂದ್ರ ಸನಾತನಿ'
ಸನಾತನ ಧರ್ಮದಲ್ಲಿ ಎಲ್ಲರಿಗೂ ಮುಕ್ತವಾದ ಅವಕಾಶ. ಒಳ್ಳೆಯ ವಿಚಾರಗಳು ಎಲ್ಲ ಕಡೆಯಿಂದ ಬರಲಿ ಎಂದು ಸನಾತನ ಧರ್ಮ ಎಲ್ಲರನ್ನೂ ಸ್ವಾಗತಿಸುತ್ತದೆ.ಒಳ್ಳೆಯವರಾಗಿ ಇರುವವರು ಎಲ್ಲರಿಗೂ ಇಲ್ಲಿ ಸ್ವಾಗತವಿದೆ. ಶ್ರೀಕೃಷ್ಣ ಒಂದು ಮಾತನ್ನು ಹೇಳುತ್ತಾನೆ: ಶ್ರೀಕೃಷ್ಣ ಪರಮಾತ್ಮನು 'ಯೋಗಕ್ಷೇಮಮ್ ವಹಾಮ್ಯಹಮ್' ಎನ್ನುವಾಗ ಯಾವ ಜಾತಿ ಧರ್ಮ ಯಾವುದನ್ನು ಹೇಳಲಿಲ್ಲ ಇಂತಹದ್ದೇ ಮಾತು ಶ್ರೀರಾಮಚಂದ್ರನದ್ದೂ ಇದೇ ಮಾತನ್ನು ಹೇಳಿದ್ದಾನೆ, ಸಕಲ ಜೀವಿಗಳಿಗೆ ರಕ್ಷಣೆ ಕೊಟ್ಟು ಆಸರೆ ತಾನಾಗುತ್ತೇನೆ ಎಂದು ಎಂದು ಹೇಳಿದ್ದಾನೆ . ಕೇವಲ ಮನುಷ್ಯರಿಗೆಂದೂ ಹೇಳಲಿಲ್ಲ ಸಕಲ ಪ್ರಾಣಿಗಳಿಗೂ ನಾನು ಆಸರೆಯಾಗಿರುತ್ತೇನೆ. ಇದು ಸನಾತನ ಧರ್ಮದಲ್ಲಿರುವಂತಹ ಮಾತು ಶ್ರೀರಾಮಚಂದ್ರನು ಅದನ್ನೇ ಮಾಡಿದ್ದಾನೆ. 'ಪ್ರಜಾನಾಂ ಹಿತೇ ರತಃ' ಎಂದು ಹೇಳಿದ್ದಾನೆ ಇಂತಹ ಸನಾತನ ಧರ್ಮವನ್ನು ಸಾರಿದ ಸನಾತನಿ ಶ್ರೀರಾಮಚಂದ್ರ ನಮ್ಮ ಆರಾಧ್ಯ. ಅವನು ಸಂಪೂರ್ಣ ಮಾನವಕುಲಕ್ಕೆ ಆದರ್ಶಪ್ರಾಯ.
ಶ್ರೀರಾಮ ಬಾಲ್ಯದಿಂದಲೂ ತನ್ನ ಆದರ್ಶಗಳನ್ನು ನಮಗೆ ತೋರಿಸಿ ಅನುಸರಿಸಲು ಹೇಳಿದ ದೈವ. 500 ವರ್ಷಗಳ ಸತತ ಪ್ರಯತ್ನದಿಂದ ಹೋರಾಟದಿಂದ ಶ್ರೀರಾಮ ಲಲ್ಲಾನ ಮೂರ್ತಿಗಳು ಸ್ಥಾಪಿತವಾಗಿರುವುದು ನಮ್ಮೆಲ್ಲರ ಸೌಭಾಗ್ಯ. ರಾಮನ ಪೂಜೆ ಕೇವಲ ಮೂರ್ತಿಯ ಪೂಜೆ ಆಚರಣೆಗಳಿಂದ ಆಗದೇ ಶ್ರೀರಾಮಚಂದ್ರನ ಆದರ್ಶಗಳನ್ನು ಅನುಸರಿಸುವ ಮೂಲಕ ನಾವೆಲ್ಲರೂ ಮಾಡಬೇಕಾಗಿದೆ. ಶ್ರೀರಾಮಚಂದ್ರನ ಪಿತೃವಾಕ್ಯ ಪಾಲನೆ, ಭ್ರಾತೃಸ್ನೇಹ, ಸಹಧರ್ಮಿಣಿಯ ಪ್ರೇಮ, ಪ್ರಜಾ ಪರಿಪಾಲನೆ, ಸಕಲ ಜೀವಿಗೆ ಕೂಡುವ ಗೌರವ ಪ್ರೀತಿ ವಿಶ್ವಾಸಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಹಿರಿಯರ ಮಾತಿಗೆ ಎದುರು ಮಾತನಾಡದೇ ಗುರುಗಳ ವಚನವನ್ನು ಚಾಚೂ ತಪ್ಪದೇ ಅನುಸರಿಸುವ ಗುಣವನ್ನು ನಾವು ಅಳವಡಿಸಿಕೊಂಡು ನಮ್ಮ ಮಕ್ಕಳಿಗೂ ಕಲಿಸುವ ಕಾರ್ಯವನ್ನು ಮಾಡಬೇಕಾಗಿದೆ. ಎಲ್ಲ ಗುರುಗಳಿಗೂ ಗೌರವ ತೋರುವುದು ಅವರ ವಾಕ್ಯ ಪರಿಪಾಲನೆಯನ್ನು ಮಾಡುವುದನ್ನು ಅನುಸರಿಬೇಕಾಗಿದೆ.
ರಾಮರಾಜ್ಯದ ಪರಿಕಲ್ಪನೆ ಮತ್ತು ರಾಮರಾಜ್ಯದ ನೀತಿಗಳನ್ನು ಇಂದು ಅನುಸರಿಸುವುದು ಅತೀ ಅವಶ್ಯವಾಗಿದೆ. ರಾಮರಾಜ್ಯದಲ್ಲಿ ಎಲ್ಲರೂ ಸಂತಸದಿಂದ ಇದ್ದರು ಅದರಂತೆ ಇಂದು ದೇಶದಲ್ಲಿ ಎಲ್ಲರೂ ಆನಂದದಿಂದ ಇರುವಂತೆ ಶ್ರೀಮಂತ ಬಡವರ ಭೇದವು ಇಲ್ಲದಂತೆ ಎಲ್ಲರಿಗೂ ಇರಲು ಮನೆ, ಹೊಟ್ಟೆ ತುಂಬಾ ಊಟದ ವ್ಯವಸ್ಥೆಯ ಭಾರವನ್ನು ಅನುಕೂಲ ಇರುವವರು ಹೊರಬೇಕು. ಅವಶ್ಯಕತೆ ಇರುವವರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ನಮ್ಮ ಕೈಲಾದ ಪ್ರಯತ್ನ ಮಾಡಬೇಕು. ಸನಾತನ ಧರ್ಮದ ಉಳಿವಿಗಾಗಿ ನಮ್ಮ 'ಸ್ವಧರ್ಮೇ ನಿಧನಂ ಶ್ರೇಯಃ 'ಎಂಬ ಮಾತಿನ ಅರ್ಥವನ್ನು ಎಲ್ಲರಿಗೂ ತಿಳಿಸಿ ಅರ್ಥ ಮಾಡಿಸಿ ನಮ್ಮ ಧರ್ಮಾಚರಣೆಯ ಮಹತ್ವವನ್ನು ತಿಳಿಹೇಳಬೇಕು.
ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ನೆನಪಿಸುವ ದೇವತೆಗಳ, ಭಗವದ್ ಭಕ್ತರ ಋಷಿಮುನಿಗಳ ಹೆಸರನ್ನು ಮಕ್ಕಳಿಗೆ ಇಟ್ಟು ಅವರ ಗುಣಗಳ ಬಗೆಗೆ ತಿಳಿಸುತ್ತಾ ನಾವು ಕೂಡ ಅನುಸರಿಸಲು ಪ್ರಯತ್ನಿಸುತ್ತಾ ಮಕ್ಕಳಲ್ಲೂ ಒಳ್ಳೆಯ ಗುಣಗಳನ್ನು ಬೆಳಸಲು ಸಹಾಯಕರಾಗೋಣ. ಜೊತೆಗೆ ಭಗವಂತನ ನಾಮಸ್ಮರಣೆಯನ್ನು ಮಾಡಬೇಕು.
ಉಪಯುಕ್ತ ನ್ಯೂಸ್ ಡಿಜಿಟಲ್ ಮಾಧ್ಯಮ ಬಳಗದವರು ಕಳೆದ ವರ್ಷ ಡಿಸೆಂಬರ್ 15ರಿಂದ, ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಸಹಯೋಗದಲ್ಲಿ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸಂಚಾಲಕರಾಗಿ ಈ ಶ್ರೀ ರಾಮಕಥಾ ಲೇಖನ ಆಭಿಯಾನವನ್ನು ಆರಂಭಿಸಿದ್ದು ದಾಖಲೆಯ 125 ದಿನಗಳ ಶ್ರೀರಾಮಚಂದ್ರನ ಆದರ್ಶ ಮತ್ತು ಅವನ ಬಗೆಗೆ ತಿಳಿಸುವ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ರಾಮದೇವರ ಅನುಗ್ರಹ ಎಲ್ಲರಿಗೂ ದೊರೆಯಲಿ.
ಇತಿ ಸಪ್ರೇಮ
ಶ್ರೀ ನಾರಾಯಣ ಸ್ಮರಣೆಗಳು
ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು
ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ