ಶ್ರೀರಾಮ ಕಥಾ ಲೇಖನ ಅಭಿಯಾನ-123: ರಾಮಾಯಣ- ವನವಾಸಕ್ಕೆ ಹೊರಟ ರಾಮನ ಸನ್ನಿವೇಶ

Upayuktha
0


ದಾಸರೇ ಮನ ದೈವ ದಾಸರೇ ಮನೆದೈವ

ದಾಸರಿಲ್ಲದೇ ಇಲ್ಲ ವಿಜಯವಿಠಲ ಬಲ್ಲ


ಶ್ರೀರಾಮಚಂದ್ರ ವನವಾಸಕ್ಕೆ ಹೊರಟು ನಿಂತ ಸಂದರ್ಭದಲ್ಲಿ ಕೆಲವರ ಮನೋಭೂಮಿಕೆಯ ವಿಶ್ಲೇಷಣೆ ಮಾಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ದಶರಥ ಮಹಾರಾಜರಿಗೆ ಮೂರು ಜನ ಧರ್ಮಪತ್ನಿಯರು, ಕೌಸಲ್ಯ, ಕೈಕೇಯಿ ಹಾಗೂ ಸೌಮಿತ್ರಿ. ನಾಲ್ಕು ಜನ ಮಕ್ಕಳು. ಹಿರಿಯವನು ಶ್ರೀರಾಮ. ಲಕ್ಷ್ಮಣ, ಭರತ ಮತ್ತು ಶತ್ರುಘ್ನರು. ಹಿಂದೊಮ್ಮೆ ಮಡದಿ ಯಾದ ಕೈಕೇಯಿಗೆ ನೀನು ಯಾವಾಗಲಾದರೂ ವರ ಕೇಳು, ಅದನ್ನು ನಡೆಸಿ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದ. ದಶರಥ ಮಹಾರಾಜರಿಗೆ ವಯಸ್ಸಾಗುತ್ತಾ ಬಂದಿತು. ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವುದಾಗಿ ನಿರ್ಧರಿಸಿದ. ಹಿರಿಯರ ಗುರುಗಳ ಸಮ್ಮುಖದಲ್ಲಿ ಪಟ್ಟಾಭಿಷೇಕದ ಉತ್ಸವದ ತಯಾರಿಯಾಯಿತು. ಇದೇ ಸಂದರ್ಭ ಎಂದರಿತ ಕೈಕೇಯಿ ರಾಜನಿಗೆ ತನಗೆ ನೀಡಿದ ಮಾತನ್ನು ಈಗಲೇ ನಡೆಸಿ ಕೊಡಿ ಎಂದು ಕೇಳಿಕೊಂಡಳು. ದಶರಥ ಮಹಾರಾಜ ಸರಿ, ಏನು ನಿನ್ನ ಕೋರಿಕೆಗಳು ಎಂದು ವಿಚಾರಿಸಿದ. ಕೈಕೇಯಿ ಹೇಳಿದಳು ನನ್ನ ಮಗನಾದ ಭರತನಿಗೆ ಪಟ್ಟಾಭಿಷೇಕವಾಗಬೇಕು; ಶ್ರೀರಾಮ 14 ವರ್ಷ ವನವಾಸಕ್ಕೆ ಹೋಗಬೇಕು ಎಂದಳು.


ದಶರಥ ಮಹಾರಾಜರಿಗೆ ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿ, ವಾತ್ಸಲ್ಯ, ಮಮತೆ ಇದ್ದಿತ್ತು. ಮಡದಿಯ ಮಾತನ್ನು ಕೇಳಿದ. ನಿರಾಕರಿಸದಾದ. ನಿಂತ ನೆಲವೇ ನಡುಗಿದ ಅನುಭವವಾಯಿತು. ಭೂಮಿ ಬಾಯಿ ತೆರೆಯಬಾರದೇ ಎನಿಸಿತು. ಮಾತೇ ಹೊರಡದಾಯಿತು. ಭಾರವಾದ ಹೆಜ್ಜೆಗಳ ನೀಡುತ್ತಾ, ನಾನಿದನ್ನು ಶ್ರೀರಾಮನಿಗೆ ಹೇಗೆ ಹೇಳುವುದು ಎಂದು ಯೋಚಿಸತೊಡಗಿದ. ಆಗ ಕೈಕೇಯಿ ಹೆದರಬೇಡಿ ನಾನೇ ಈ ವಿಷಯವನ್ನು ಶ್ರೀರಾಮನಿಗೆ ತಿಳಿಸುವೆ ಎಂದು ಹೇಳಿ ಶ್ರೀರಾಮನಿದ್ದಡೆಗೆ ಬಂದು ಎಲ್ಲರ ಎದುರಿನಲ್ಲಿ ಇದು ಮಹಾರಾಜರ ನಿರ್ಧಾರ ಎಂದು ತಿಳಿಸಿದಳು. ಎಲ್ಲರೂ ಅದನ್ನು ಕೇಳಿ ದಿಗ್ಬ್ರಾಂತರಾದರು. ತಾಯಿ ಕೌಸಲ್ಯ ಕರುಳು ಚರ‍್ರೆಂದಿತು. ಅವನ ಅಪರಾಧವಾದರೂ ಏನು ಎಂದು ಮನನೊಂದು ಹಾಸಿಗೆ ಹಿಡಿದಳು. ಇನ್ನೂ ಕೈಕೇಯಿ ತಾನೇ ಸ್ವತಃ ಶ್ರೀರಾಮಚಂದ್ರನ ವನವಾಸಕ್ಕೆ ಕಾರಣವಾದರೂ, ಮನಸ್ಸಿನಲ್ಲಿ ಆತನ ಬಗ್ಗೆ ದ್ವೇಷವಿರಲಿಲ್ಲ. ಬದಲಾಗಿ ಭರತನಿಗಾಗಿ ರಾಜ್ಯ ಬಿಟ್ಟುಕೊಡುವನಲ್ಲ ಎಂದು ಗೌರವ ಭಾವವೇ ಇತ್ತು. ಶ್ರೀರಾಮಚಂದ್ರನದು ಧೀಮಂತ ವ್ಯಕ್ತಿತ್ವ. ಆದರ್ಶ ಪುರುಷನಾಗಿದ್ದ. ಮರ್ಯಾದೆ ಪುರುಷೋತ್ತಮನಾಗಿದ್ದವ. ಸಾಮಾನ್ಯ ಮಾನವನಾಗಿ, ರಾಜ ಪುತ್ರನಾಗಿ ಸುಖ ಭೋಗಗಳಲ್ಲಿ ಬೆಳೆದರೂ ಪಿತೃವಾಕ್ಯ ಪರಿಪಾಲನೆಗಾಗಿ ಸಕಲ ಸುಖ ಭೋಗಗಳನ್ನು ರಾಜ್ಯವನ್ನು ತ್ಯಜಿಸಿದ ಮಹಾತ್ಯಾಗಿ. ಪಿತೃವಾಕ್ಯ ಪರಿಪಾಲನೆಗೆ ತನ್ನ ಧರ್ಮ ಎಂದು ಮರು ಮಾತನಾಡದೆ 14 ವರ್ಷ ವನವಾಸಕ್ಕೆ ಹೋಗುವುದಾಗಿ ದೃಢ ನಿರ್ಧಾರವನ್ನು ಮಾಡಿಬಿಟ್ಟ.


ಭಾರತೀಯ ನಾರಿತ್ವದ ಪೂರ್ಣ ಅಭಿವ್ಯಕ್ತಿಯೆಂದರೆ ಅದು ಸೀತಾಮಾತೆ. ಸಮಗ್ರ ಮಾನವ ಕುಲಕ್ಕೆ ಆದರ್ಶವೆನಿಸುವ ಮಹೋನ್ನತ ವ್ಯಕ್ತಿತ್ವದ ಮಹಿಳೆ ಸೀತಾಮಾತೆ. ಜನಕ ಮಹಾರಾಜನು ಸ್ವಯಂವರದಲ್ಲಿ ಶ್ರೀರಾಮಚಂದ್ರನಿಗೆ ಸೀತೆಯನ್ನು ನಿನ್ನ ಛಾಯಾನುವರ್ತಿಯಾಗಿ ಬಾಳುವಳು ಎಂದು ಪರಿಚಯಿಸಿರುತ್ತಾನೆ. ಅಂದರೆ ಶ್ರೀರಾಮ ಸೀತೆಯರ ವಿವಾಹದ ನಂತರ ಅವಳು ಪತಿಯ ನೆರಳನ್ನು ಹಿಂಬಾಲಿಸಿ ಅನುಸರಿಸಿ ನಡೆಯುವವಳು ಎಂದು ಹೇಳಿದರು. ಶ್ರೀರಾಮ ವನವಾಸಕ್ಕೆ ಹೋಗುವ ವಿಷಯ ತಿಳಿದು ಸ್ವಲ್ಪವೂ ವಿಚಲಿತಳಾಗಲಿಲ್ಲ. ಪತಿಯೇ ಪ್ರತ್ಯಕ್ಷ ಪರದೈವ. ಪತಿಯ ಸಾನಿಧ್ಯವೇ ನನಗೆ ಸ್ವರ್ಗ ಎನ್ನುತ್ತಾ ನಾರುಡುಗೆಯುಟ್ಟು ವನವಾಸಕ್ಕೆ ಹೊರಡಲು ಅಣಿಯಾದಳು. ಇನ್ನೂ ಲಕ್ಷ್ಮಣನಿಗೆ ಅಣ್ಣನ ಮಾತು ವೇದ ವಾಕ್ಯ. ಅಣ್ಣನಿಲ್ಲದ ರಾಜ್ಯ ನನಗೇಕೆ? ನಾನು ಆತನ ಯೋಗಕ್ಷೇಮ ನೋಡಿಕೊಳ್ಳಲು ಆತನೊಡನೆ ವನವಾಸಕ್ಕೆ ತೆರಳಲು ಸಿದ್ಧ ಎಂದು ನಿರ್ಧಾರ ತೆಗೆದುಕೊಂಡನು. ಆಗ ಲಕ್ಷ್ಮಣನ ಪತ್ನಿ ಊರ್ಮಿಳೆ ನಾನು ನಿಮ್ಮೊಡನೆ ಬರುವೆ ಎಂದು ತಿಳಿಸುವಳು. ಆಗ ಲಕ್ಷ್ಮಣನ ಮನಸ್ಸು ಸ್ವಲ್ಪ ವಿಚಲಿತವಾದರೂ ನಿರ್ಧಾರ ಬದಲಿಸಲಿಲ್ಲ. ಬದಲಿಗೆ ಹೆಂಡತಿಗೆ ತಿಳಿ ಹೇಳಿದ ನೀನು ನಿನ್ನ ಕರ್ತವ್ಯವನ್ನು ನಿರ್ವಹಿಸು ಅಂದರೆ ರಾಜಮಾತೆಯರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೋ. ನಾನು ಬರುವವರೆಗೂ ಅದರ ಜವಾಬ್ದಾರಿ ನಿನ್ನದು ಅಲ್ಲದೆ ನೀನು ನಮ್ಮೊಡನೆ ವನವಾಸಕ್ಕೆ ಬಂದರೆ ನನ್ನ ಕರ್ತವ್ಯ ನಿಷ್ಠೆಯಲ್ಲಿ ಲೋಪವಾಗಬಹುದು ಹಾಗಾಗಿ ನಿನ್ನ ನಿರ್ಧಾರವನ್ನು ಬದಲಿಸು ಎಂದು ಸಮಾಧಾನ ಪಡಿಸಿದನು. ಇನ್ನು ಅಯೋಧ್ಯ ನಗರ ಘೋರವಾದ ವಾತಾವರಣದಿಂದ ತುಂಬಿತ್ತು. ಗೃಹಸ್ಥರ ಮನೆಗಳಲ್ಲಿ ಬೆಂಕಿ ನಂದಿತು. ಕಾರ್ಯಾಲಯಗಳೆಲ್ಲ ಬೀಗ ಹಾಕಲ್ಪಟ್ಟವು. ಸೂರ್ಯನು ಕಳೆಗುಂದಿದ. ಸಹನೆಗೆ ಹೆಸರಾದ ಹಸುಗಳು ಕರುಗಳಿಗೆ ಹಾಲುಣಿಸುವುದನ್ನು ಮರೆತವು. ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು ಸಂತೋಷ ಪಡಲಿಲ್ಲವಂತೆ. ಆ ಕ್ಷಣದಲ್ಲಿ ಹುಟ್ಟಿದ ಮಕ್ಕಳನ್ನು ಶ್ರೀರಾಮ ಕಾಡಿಗೆ ಹೋಗುವ ವಿಷಗಳಿಗೆಯಲ್ಲಿ ಹುಟ್ಟಿರುವ ಮಕ್ಕಳು ಎಂದು ಶಪಿಸಿದರಂತೆ. ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು. ಪ್ರಕೃತಿ, ಮಾನವರು, ಪ್ರಾಣಿಗಳು ಎಲ್ಲವೂ ದುಃಖ ಭರಿತವಾಯಿತು. ಅಯೋಧ್ಯೆಯ ಪ್ರತಿ ಮನೆ ಮನೆಗಳಲ್ಲಿ ವಿಷಾದ ಛಾಯೆ ಮೂಡಿತು. 


ಇತ್ತ ಜನರೆಲ್ಲ ರಾಮನೆಡೆಗೆ ಆಕರ್ಷಿತರಾಗಿ ರಥವನ್ನು ಹಿಂಬಾಲಿಸಿ ಬರುತ್ತಿದ್ದರು. ರಾಮನ ಆದರ್ಶ, ಉದಾರ ಚರಿತೆ, ನೈತಿಕತೆಯಿಂದ ಆಕರ್ಷಿತರಾಗಿ ಕಾಡಿನಡೆ ಧಾವಿಸಿ ಹೊರಟರು. ಕಾಡಿಗೆ ಹೋದರೂ ಸರಿ ನೀತಿ ಬಿಡೆವು ಎಂದು ಅಚಲ ನಿರ್ಧಾರ ಹೊಂದಿದವರಾಗಿದ್ದರು. 


ಜನರೆಲ್ಲ ತನ್ನತ್ತ ಬರುವುದನ್ನು ಕಂಡ ಶ್ರೀರಾಮಚಂದ್ರ ಅವರನ್ನೆಲ್ಲ ಕುರಿತು ಕೈಜೋಡಿಸಿ ಕೇಳಿದ. ಪ್ರಜೆಗಳೇ, ನನ್ನಲ್ಲಿ ನೀವು ಯಾವ ಪ್ರೀತಿ, ಅಭಿಮಾನ, ಆದರಗಳನ್ನು ನನ್ನಲ್ಲಿ ಮಾಡುತ್ತಿದ್ದಿರೋ ಅದೇ ರೀತಿಯ ಪ್ರೀತಿ, ಅಭಿಮಾನವನ್ನು ದಯಮಾಡಿ ನನಗಾಗಿ ಭರತನಲ್ಲಿ ಮಾಡಿರಿ. ಇದರಿಂದ ನನಗೆ ಸಂತೋಷವಾಗುತ್ತದೆ. ನನಗಾಗಿ ಅನಿಗೆ ಸಹಕರಿಸಿ. ಅವನು ಮಂಗಳಶೀಲ ಮತ್ತು ಸಂಪನ್ನನಾಗಿದ್ದಾನೆ. ನಿಮಗೆ ರಾಜ್ಯ ನಡೆಸುತ್ತಾನೆ. ಎಂದು ಹೇಳುತ್ತಿದ್ದಂತೆ, ಪ್ರಜೆಗಳಿಗೆ ಶ್ರೀರಾಮಚಂದ್ರನ ಮೇಲೆ ಮತ್ತಷ್ಟು ಅಭಿಮಾನ ಅಧಿಕವಾಯಿತು. ಇಂತಹ ನಿಸ್ವಾರ್ಥ ಧೀರ ರಾಘವನನ್ನು ನಾವು ಬಿಡಲಾರೆವು ಎಂದು ಮತ್ತೆ ಹಿಂಬಾಲಿಸಿದರು. ಆಗ ಶ್ರೀರಾಮಚಂದ್ರ ರಥದಿಂದ ಕೆಳಗಿಳಿದು ಬಂದು, ಜ್ಞಾನವೃದ್ಧರೂ, ವಯೋವೃದ್ಧರೂ ಆದ ನೀವೆಲ್ಲ ನಡೆದು ಬರುತ್ತಿರುವಾಗ ನಾನು ಹೇಗೆ ರಥದಲ್ಲಿ ಸಾಗಲಿ ಎಂದು ಕೇಳಿದನು. 


ಪಿತೃವಿಯೋಗದ ನಂತರ ಭರತನಿಗೆ ಸುಮಂತನಿಂದ ಎಲ್ಲ ವಿಷಯ ತಿಳಿದು ತುಂಬ ದುಃಖದಿಂದ ಅಯೋಧ್ಯೆಗೆ ಬರುತ್ತಾನೆ. ತಾಯಿಯನ್ನು ಕುರಿತು ವಿಚಾರಿಸುತ್ತಾನೆ. ಯಾಕೆ ತಂದೆ ಶ್ರೀರಾಮನನ್ನು ವನವಾಸಕ್ಕೆ ಹೋಗಲು ಹೇಳಿದರು? ಅಂತಹ ಬಲವಾದ ಕಾರಣವಾದರೂ ಏನಿತ್ತು? ಅಮ್ಮ ನೀನು ತುಂಬಾ ಹಟವಾದಿ ಎಂದು ತಾಯಿಯನ್ನು ದೂಷಿಸುತ್ತಾನೆ. ಅಣ್ಣ ಶ್ರೀರಾಮಚಂದ್ರನಿಲ್ಲದ ರಾಜ್ಯ ನನಗೂ ಬೇಡ ಎಂದು ತಿಳಿಸಿ ತಾನು ಪಿತೃಕಾರ್ಯವನ್ನೆಲ್ಲ ಮುಗಿಸಿ ಅಣ್ಣನಿದ್ದಲ್ಲಿಗೆ ಬರುವನು. ಶ್ರೀರಾಮನನ್ನು ಕಂಡ ಕೂಡಲೇ ಬಿಕ್ಕಿಬಿಕ್ಕಿ ಅಳುತ್ತಾ ಅಪರಾಧೀ ಮನೋಭಾವದಿಂದ ಕ್ಷಮೆ ಯಾಚಿಸುತ್ತಾನೆ. ನಡೆಯಣ್ಣ ಮತ್ತೆ ಅಯೋಧ್ಯೆಗೆ ಎಂದು ಪರಿಪರಿಯಾಗಿ ವಿನಂತಿಸಿಕೊಳ್ಳುತ್ತಾನೆ. ಆದರೆ ಶ್ರೀರಾಮಚಂದ್ರ ತಾನು ತಂದೆಗೆ ಮಾತು ಕೊಟ್ಟಿದ್ದೇನೆ ಪಿತೃ ವಾಕ್ಯ ಪರಿಪಾಲನೆಯೇ ನನ್ನ ಧರ್ಮ ಎಂದು ಹೇಳುತ್ತಾನೆ. ನೀನು ನಿರಾತಂಕವಾಗಿ ತೆರಳಿ ಪಟ್ಟಾಭಿಷಿಕ್ತನಾಗಿ ರಾಜ್ಯವಾಳು. ಅವಧಿ ಮುಗಿದ ನಂತರ ನಾನು ಬರುವೆ ಎಂದು ಹೇಳುತ್ತಾನೆ. ನೀನು ಬರುವುದಿಲ್ಲವಾದರೆ ಸರಿ, ನನಗೆ ನಿನ್ನ ಪಾದುಕೆಗಳನ್ನು ಕೊಡು ಎಂದು ಕಾಡಿಬೇಡಿ ಪಾದುಕೆಗಳನ್ನು ತೆಗೆದುಕೊಂಡು ಹಿಂತಿರುಗುತ್ತಾನೆ. ಆದರೆ ಅಣ್ಣ ಹಿಂತಿರುಗಿ ಬರುವವರೆಗೂ ಅಯೋಧ್ಯೆಗೆ ಹೋಗುವುದಿಲ್ಲ ಎಂಬ ಧೃಢ ನಿರ್ಧಾರ ಮಾಡುತ್ತಾನೆ. ಪಾದುಕೆಗಳನ್ನು ಸಿಂಹಾಸನದಲ್ಲಿಟ್ಟು ಪೂಜಿಸಿ ತಾನು ನಂದಿಗ್ರಾಮದಲ್ಲಿ ಉಳಿದುಕೊಂಡು ಅಲ್ಲಿಂದಲೇ ರಾಜ್ಯಪಾರ ಮಾಡಿದ ಮಹಾನ್ ವ್ಯಕ್ತಿ ಭರತ. ಆತನ ಭ್ರಾತೃಪ್ರೇಮ ಅತಿ ಅದ್ಭುತವಾಗಿತ್ತು. 


ಈ ರೀತಿಯಾಗಿ ಕೆಲವರ ಮನಸ್ಥಿತಿ ಇದ್ದದ್ದು 14 ವರ್ಷ ಶ್ರೀರಾಮ ಸೀತೆ ಲಕ್ಷ್ಮಣರೊಡನೆ ವನವಾಸಕ್ಕೆ ಅನುಭವಿಸಿದ್ದು ಒಂದೆಡೆಯಾದರೆ ಅಯೋಧ್ಯೆಯ ಜನರಿಗೆ ಶ್ರೀರಾಮನಿಲ್ಲದ ನಾಡು ಕಾಡಾಗಿ ಪರಿವರ್ತನೆಯಾಗಿದ್ದಿತು ಎನ್ನುವುದರಲ್ಲಿ ಸಂದೇಹವಿಲ್ಲ.




-ಡಾ. ವಿದ್ಯಾ ಕಸ್ಬೆ, ಬೆಂಗಳೂರು

ಎಂ.ಎ ಪಿ.ಎಚ್.ಡಿ


ವಿಳಾಸ:

70-401 ಕೃಷ್ಣಾರಾವ್ ಪಾರ್ಕ ಅಪಾರ್ಟಮೆಂಟ್ಸ

ಕಾರಿಯಪ್ಪ ರಸ್ತೆ, ಬಸವನಗುಡಿ. ಬೆಂಗಳೂರು-560004

9449079111

kasbevidhya4@gmail.com


ಲೇಖಕರ ಸಂಕ್ಷಿಪ್ತ ಪರಿಚಯ:


ಮೂಲತಃ ರಾಯಚೂರು ಜಿಲ್ಲೆಯವರಾಗಿದ್ದು, ಹರಿದಾಸ ಮನೆತನದವರು. ಕನ್ನಡದಲ್ಲಿ ಎಂ.ಎ ಮನಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದು, ಯೋಗಸಂಸ್ಕೃತ ವಿಶ್ವವಿದ್ಯಾಲಯ ಫ್ಲೋರಿಡಾದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಲೇಖಕಿ, ಉಪನ್ಯಾಸಕಿಯಾಗಿ ಮತ್ತು ಆಪ್ತ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ವೈಚಾರಿಕ ಲೇಖನಗಳನ್ನು ಬರೆದಿರುತ್ತಾರೆ. ಅಲ್ಲದೇ ಅನೇಕ ಉಪನ್ಯಾಸಗಳನ್ನು ನೀಡಿರುತ್ತಾರೆ. ನಾಲ್ಕು ಪುಸ್ತಕಗಳನ್ನು, ಎರಡು ಸಂಪಾದಿತ ಕೃತಿಗಳನ್ನು ಪ್ರಕಟಣೆ ಮಾಡಿದ್ದಾರೆ. ಹತ್ತು ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು, ಗೌರವ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದು ವಿದ್ಯೆ ವಿನಯ ವಿವೇಕದ ತ್ರಿವೇಣಿ ಸಂಗಮದಂತಿದ್ದಾರೆ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಷಯ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top