-ಪದ್ಮಾ ಅನಂತ್ ಭಾರದ್ವಾಜ್, ಬೆಂಗಳೂರು
ಶ್ರೀರಾಮನೇ ಪರಬ್ರಹ್ಮನೆಂದು ಮುಡುಪಿಟ್ಟ ಅನೇಕ ಉಪನಿಷತ್ತುಗಳಿವೆ. ಅವುಗಳನ್ನು ಒಟ್ಟಾರೆಯಾಗಿ ರಾಮೋಪನಿಷತ್ ಎನ್ನಲಾಗಿದೆ. ಅವುಗಳು ಯಾವುವೆಂದರೆ
1 ರಾಮಪೂರ್ವತಾಪಿನಿ ಉಪನಿಷತ್
2 ರಾಮ ಉತ್ತರತಾಪಿನಿ ಉಪನಿಷತ್
3 ರಾಮ ರಹಸ್ಯ ಉಪನಿಷತ್
4 ಮುಕ್ತ ಉಪನಿಷತ್
5 ಸೀತಾ ಉಪನಿಷತ್
6 ಮೈಥಿಲಿ ಮಹೋಪನಿಷತ್
ವಿಷ್ಣುವೇ ಪರಬ್ರಹ್ಮನೆಂದು ಹೇಳುವ 14 ವೈಷ್ಣವ ಉಪನಿಷತ್ತುಗಳಿವೆ. ಅವುಗಳಲ್ಲಿ ರಾಮೋಪನಿಷತ್ತುಗಳೂ ಸೇರಿವೆ.
ರಾಮರಹಸ್ಯ ಉಪನಿಷತ್- ಇದು ಅಥರ್ವ ವೇದದ ಒಂದು ಉಪನಿಷತ್ತು. ರಾಮನೇ ಪರಬ್ರಹ್ಮ ಇದರಲ್ಲಿ ಕಿಂಚಿತ್ತೂ ಅನುಮಾನವಿಲ್ಲ, ಅನುಮಾನ ಬೇಡ. ಈ ರಾಮರಹಸ್ಯೋಪನಿಷತ್ತಿಗೆ ಹನುಮಂತನೇ ಋಷಿ, ರಾಮನೇ ದೇವತೆ.
ಮಹಾನ್ ಋಷಿಗಳಾದ ಮುದ್ಗಲ, ಶಾಂಡಿಲ್ಯ, ಪಂಗಳ, ಭಿಕ್ಷು, ಸನಕ ಮತ್ತು ಪ್ರಹ್ಲಾದ ಇವರುಗಳು ಹನುಮಂತನನ್ನು ಸಮೀಪಿಸಿ ಅವನನ್ನು ಪ್ರಾರ್ಥಿಸಿದರು. ಹೇ ಜ್ಞಾನವಂತನೇ, ನೀನು ಸಕಲ ವೇದಗಳನ್ನೂ ಸಕಲ ಬೇದಗಳನ್ನೂ ಅರ್ಥೈಸಿಕೊಂಡಿದ್ದಿಯೇ ಆದುದರಿಂದ "ನಾಲ್ಕು ವೇದಗಳಲ್ಲಿಯೂ 18 ಪುರಾಣಗಳಲ್ಲಿಯೂ 18 ಸ್ಮೃತಿಗಳು ಶಾಸ್ತ್ರಗಳಲ್ಲಿ ಮತ್ತು ಎಲ್ಲಾ ವಿಷಯಗಳಲ್ಲೂ ಜ್ಞಾನಗಳಲ್ಲೂ ಎಲ್ಲಾ ಶಕ್ತಿಗಳಲ್ಲೂ ಇರುವ ಅತಿ ದೊಡ್ಡ ಶಕ್ತಿ ಯಾವುದು?
ಅದಕ್ಕೆ ಹನುಮಂತ ನಗುತ್ತಾ ನುಡಿದನು: ಎಲೈ ಮುನಿಗಳೇ ಮತ್ತು ಭಕ್ತರೇ, ಪ್ರಪಂಚದಲ್ಲಿ ಎಲ್ಲಕ್ಕಿಂತ ದೊಡ್ಡ ಶಕ್ತಿ ಶ್ರೀ ರಾಮನೇ! ಅವನೇ ಬ್ರಹ್ಮತಾರಕ! ಇದನ್ನು ಇನ್ನಷ್ಟು ವಿಸ್ತರಿಸು ಎಂದು ಮುನಿಗಳು ಕೇಳಲು, ಎಲ್ಲರೂ ಕೇಳಿರಿ, ಈ ರಾಮ ಮಂತ್ರಕ್ಕೆ ವಿಘ್ನೇಶ್ವರ, ಮಾತೆ ಸರಸ್ವತಿ, ತಾಯಿ ದುರ್ಗಾ, ಎಲ್ಲ ಕ್ಷೇತ್ರ ಪಾಲಕರು, ಸೂರ್ಯ, ಚಂದ್ರ, ನಕ್ಷತ್ರಗಳು, ಶ್ರೀಮನ್ನಾರಾಯಣ, ನರಸಿಂಹ, ವಾಸುದೇವ, ವರಾಹ, ಲಕ್ಷ್ಮಣ, ಶತ್ರುಘ್ನ, ಭರತ ವಿಭೀಷಣ, ಸುಗ್ರೀವ, ಅಂಗದ, ಜಾಂಬವಂತ ಮತ್ತು ಪ್ರಣವಗಳೇ ಮಂತ್ರದ ಅಂಗಗಳು.
ಯಾರು ಪ್ರಣವ ಮಂತ್ರವಾದ ಓಂ ಅನ್ನು ಉಚ್ಛರಿಸುವರು, ಕಷ್ಟಪಡುವರು ಅಥವಾ ಕನಿಷ್ಠರು ಎಂದು ಭಾವಿಸುವರು, ಅಥವಾ ನಾನು ಅರ್ಹನಲ್ಲ ಎಂದು ತೀರ್ಮಾನಿಸಿಕೊಂಡವರು, ಅವರು ಕೇವಲ ರಾಮ ಎಂದರೆ ಸಾಕು. ಎಲ್ಲ ದುರಿತಗಳು ನಾಶವಾಗುವು. ಬ್ರಹ್ಮ ಜ್ಞಾನದ ಕೀಲಿ ಕೈ ದೊರೆಯುವುದು. ಪಂಚಮಹಾ ಪಾತಕಗಳ ಪಾಪವನ್ನು ಕೂಡ ಇದು ನಾಶ ಮಾಡುವುದು ಮತ್ತು ಮೋಕ್ಷ ಕೊಡುವುದು. ಓಂ ಎಂದರೂ, ರಾಮ್ ಎಂದರು ಒಂದೇ! ವ್ಯತ್ಯಾಸವಿಲ್ಲ.
ಈ ರಾಮ 'ಬ್ರಹ್ಮ' ನನ್ನು ಹೊಂದಲು ಮತ್ತು ಅರ್ಥೈಸಿಕೊಳ್ಳುವುದು ಹೇಗೆ? ಹೇಗೆ ನಾವು ಕಾಯಾ ವಾಚಾ ಮನಸಾ ಸಿದ್ಧರಾಗಬೇಕು ಎಂದು ಕುತೂಹಲದಿಂದ ಕೇಳುತ್ತಿದ್ದ ಋಷಿಗಳು ಕೇಳಿದರು.
ರಾಮಾಯ ನಮಃ
ರಾಮಭದ್ರಾಯ ನಮಃ
ರಾಮಚಂದ್ರಾಯ ನಮಃ.
ಈ ಮಂತ್ರಗಳೇ ಸಾಕು! ನಿಧಿಧ್ಯಾಸನ ಮಾಡಿದರೆ ಸಾಕು!
ಈ ಬ್ರಹ್ಮಜ್ಞಾನವನ್ನು ಯಾರಾದರೂ ಯಾವ ಹಂತದಲ್ಲಾದರೂ, ಸಂಪಾದಿಸಿಕೊಳ್ಳಬಹುದು. ಎಲ್ಲಾ ಉಪನಿಷತ್ತುಗಳ ಆಶಯವೂ ಇದೇ ಅಲ್ಲವೆ! ಆದರೂ ಆ ಈಶ, ಕೇನ, ಕಥಾ, ಪ್ರಶ್ನ, ಮುಂಡಕ, ಐತರೇಯ, ಕೌಶೀತಕಿ, ತೈತ್ತಿರೀಯ, ಶ್ವೇತಾಶ್ವತರ, ಮಾಂಡೂಕ್ಯ, ಛಾಂದೋಗ್ಯ, ಬೃಹದಾರಣ್ಯಕ ಉಪನಿಷತ್ತುಗಳ ಗಹನತೆಯನ್ನು ರಹಸ್ಯಗಳನ್ನು ಅವಲೋಕಿಸಿದರೆ ಈ ಉಪನಿಷತ್ತು ಸುಲಭಗ್ರಾಹ್ಯವೂ ಆಚರಣೀಯವೂ ಆದರಣೀಯವೂ ಹೌದು.
ವ್ಯಕ್ತದಿಂದ ಅವ್ಯಕ್ತಕ್ಕೆ ಹೋಗಲು ಇದೇ ಸುಲಭದ ಮಾರ್ಗ! ಇವುಗಳ ಜೊತೆಗೆ ಕೆಲವು ಅಪರೂಪವಾದ ಬೀಜಮಂತ್ರಗಳನ್ನು ಅನುಷ್ಠಾನಗೊಳಿಸಿಕೊಳ್ಳಬೇಕು. ಒಂದಕ್ಷರದಿಂದ ಹಲವು ಅಕ್ಷರಗಳ ಬೀಜಮಂತ್ರಗಳಿವೆ. ಅವುಗಳು ಗುರುಮುಖೇನವೇ ಉಪದೇಶವಾಗಬೇಕು.
ಹನುಮಂತನು ಅವರಿಗೆ ಈ ಜ್ಞಾನಕ್ಕೆ ಕೆಳಕಂಡಂತೆ ನಿಯಮಗಳನ್ನು ತಿಳಿಸಿದನು.
ಉಪಾಸಕನಾದವನು
1 ಅವನು ದಿನಕ್ಕೆ ಮೂರು ಬಾರಿ ಸ್ನಾನ ಮಾಡಬೇಕು
2 ಅವನು ಹಾಲು ಬೇರುಗಳು ಹಣ್ಣುಗಳು ಅಥವಾ ನೈವೇದ್ಯದಂತಹ ಸಾತ್ವಿಕ ಆಹಾರಗಳನ್ನು ಮಾತ್ರ ಸೇವಿಸಬೇಕು
3 ಅವನು ತನ್ನ ಜೀವನದ ಹಂತದ ಕರ್ಮಗಳನ್ನು ಅನುಸರಿಸಬೇಕು ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ ಅಥವಾ ಸನ್ಯಾಸಿ
4 ಅವನು ಕೋಪ ಅಸೂಯೆ ಮುಂತಾದ ಆರು ನಕಾರಾತ್ಮಕ ಭಾವನೆಗಳನ್ನು ತ್ಯಜಿಸಬೇಕು
5 ಅವನು ಶುದ್ಧತೆಯನ್ನು ಗಮನಿಸಬೇಕು ಮತ್ತು ನಿರ್ಲಿಪ್ತ ಮಾತುಗಳನ್ನು ಅಭ್ಯಾಸ ಮಾಡಬೇಕು
6 ಅವನು ನಿರ್ಲಿಪ್ತ ಕ್ರಿಯೆಯನ್ನು ಸಹ ಆಚರಿಸಬೇಕು ಮತ್ತು ಎಲ್ಲಾ ಸ್ತ್ರೀಯರಿಗೆ ಗೌರವವನ್ನು ತೋರಿಸಬೇಕು
7 ಅವನು ಬ್ರಹ್ಮಚರ್ಯವನ್ನು ಆಚರಿಸಬೇಕು ಮತ್ತು ಬರಿಯ ನೆಲದ ಮೇಲೆ ಮಲಗಬೇಕು
8 ಅವನು ಯಾವುದೇ ಆಸೆಗಳನ್ನು ಹೊಂದಿರಬಾರದು.
9 ಅವನು ಕರ್ಮಫಲವನ್ನು ತನ್ನ ಗುರುವಿಗೆ ಸಮರ್ಪಿಸಬೇಕು
10 ಅವನು ಸ್ನಾನ ಪೂಜೆ ಪುನಸ್ಕಾರ ಮತ್ತು ಅಗ್ನಿವಿದ್ಯೆಯನ್ನು ಸೂಕ್ತವಾಗಿ ಆಚರಿಸಬೇಕು
11 ಅವನು ತನ್ನ ಗುರುವಿನ ಸೂಚನೆಯಂತೆ ರಾಮನನ್ನು ಅತ್ಯಂತ ಏಕಾಗ್ರತೆಯಿಂದ ಧ್ಯಾನಿಸಬೇಕು
12 ಅವನು ಸೂರ್ಯ ಚಂದ್ರ ಗುರು ದೀಪ ಗೋವು ಬ್ರಾಹ್ಮಣರನ್ನು ಆಹ್ವಾನಿಸಬೇಕು
13 ಈ ಜಪವನ್ನು ಮಾಡುವ ತಪಸ್ವಿಯು ಹುಲಿಯ ಚರ್ಮದ ಮೇಲೆ ಕುಳಿತು ತಿರುಗುವ ಕ್ರಮದಲ್ಲಿ ಸ್ವಸ್ತಿಕ ಆಸನದಂತಹ ಭಂಗಿಗಳನ್ನು ಅಳವಡಿಸಿಕೊಳ್ಳಬೇಕು.
14 ಅವನು ತುಳಸಿ ಗಿಡದಂತ ಗಿಡಗಳ ಕೆಳಗೆ ಅಥವಾ ಪಾರಿಜಾತ ಬಿಲ್ವ ಮುಂತಾದ ಮರಗಳ ಕೆಳಗೆ ಕುಳಿತುಕೊಳ್ಳಬೇಕು
15 ತುಳಸಿ ಗಿಡದಿಂದ ಮಾಡಲ್ಪಟ್ಟಿರುವ ಜಪಮಾಲೆಯನ್ನು ಬಳಸಿ ಅಥವಾ ರುದ್ರಾಕ್ಷಿವನ್ನು ಬಳಸಿ ಎಣಿಸಬೇಕು
16 ಎಣಿಕೆಯನ್ನು ಮಾನಸಿಕವಾಗಿ ಮಣಿಗಳನ್ನು ಬಳಸಿ ಮಾಡಬೇಕು ಮತ್ತು ಮಹಾವಿಷ್ಣುವಿನ ಬಲಿಪೀಠದಲ್ಲಿ ಬಲಿಹರಣವನ್ನು ಮಾಡಬೇಕು
17 ಪ್ರತಿ 10 ಎಣಿಕೆಯ ನಂತರ ತರ್ಪಣವನ್ನು ಅರ್ಪಿಸಬೇಕು. 10 ಎಣಿಕೆಗಳ ನಂತರ ಅಕ್ಕಿ ಹಿಟ್ಟನ್ನು ಅರ್ಪಿಸಿ ಅದರ ಮೇಲೆ ಹಸುವಿನ ಹಾಲಿನಿಂದ ತಯಾರಿಸಿದ ಬೆಣ್ಣೆಯ ತುಪ್ಪವನ್ನು ಹೋಮಿಸಬೇಕು ಮತ್ತು ಮುಂದೆ ಹತ್ತನೇ ಭಾಗದ ನಂತರ ಉಳಿಯುವುದನ್ನು ಸ್ವೀಕರಿಸಬೇಕು
18 ಇದರ ನಂತರ ಜಪಿಸುವ ಹೂವುಗಳ ಜೊತೆಗೆ ಮೂಲ ಮಂತ್ರದ ಪಠಣದೊಂದಿಗೆ ಅರ್ಪಿಸಬೇಕು.
ಈ ಜಪವನ್ನು ಮಾಡುವ ತಪಸ್ವಿಯು ಜೀವನದಲ್ಲಿ ಮುಕ್ತಿಯನ್ನು ಹೊಂದುತ್ತಾನೆ ಮತ್ತು ಹೇಗೆ ವಧು ತನ್ನ ವರನನ್ನು ಹಿಂಬಾಲಿಸುವಳೋ ಹಾಗೆ ಯಶಸ್ಸು ಅವನನ್ನು ಅನುಸರಿಸುತ್ತವೆ!
ಮನಸ್ಸಿನ ಅಂತಿಮ ಆಶ್ರಯವಾಗಿರುವ ರಾಮನನ್ನು ಸದಾ ಭಕ್ತಿಯಿಂದ ಸ್ಮರಿಸುವವನಿಗೆ ಅವರ ಎಲ್ಲ ಇಷ್ಟಾರ್ಥಗಳನ್ನು ಪೂರೈಸಲು ನಾನು ಅಧಿಕಾರ ಹೊಂದಿದ್ದೇನೆ ಎಂದು ಹನುಮಂತ ಆಶ್ವಾಸನೆ ನೀಡುತ್ತಾನೆ.
ಎಲ್ಲಾ ಸಾಕಾರ ಮಾನವರಿಗೆ, ಮುಕ್ತಿಯನ್ನು ಅಪೇಕ್ಷಿಸುವವರಿಗೆ, ನಿರ್ಲಿಪ್ತರಿಗೆ ಹಾಗೆಯೇ ಗೃಹಸ್ಥರಿಗೆ ಮತ್ತು ಜೀವನದ ಎಲ್ಲಾ ಹಂತಗಳಲ್ಲಿ 'ಓಂ' ನ ಅಥವಾ 'ರಾಮ್' ನ ನಿರಂತರ ಧ್ಯಾನ ಆದೇಶಿಸಿದೆ ಮತ್ತು ವಿಶೇಷವಾಗಿ ತಪಸ್ವಿಗಳಿಗೆ ಕಡ್ಡಾಯವಾಗಿದೆ.
'ರಾಮ' ಮಂತ್ರದ ಅರ್ಥವನ್ನು ತಿಳಿದಿರುವವರು ಜೀವಂತವಿರುವಾಗಲೇ ನಿಸ್ಸಂದೇಹವಾಗಿ ಮುಕ್ತರಾಗಿಯೇ ಇರುತ್ತಾರೆ! ಆ 'ರಾಮಬ್ರಹ್ಮ' ನಲ್ಲಿ ಐಕ್ಯವಾಗುವುದು ಸಹಜವಾಗುವುದು.
ಈ ಉಪನಿಷತ್ತನ್ನು ಅಧ್ಯಯನ ಮಾಡುವವನು ಅಗ್ನಿಯಿಂದ ಪವಿತ್ರನಾಗುತ್ತಾನೆ. ಗಾಳಿಯಿಂದ ಶುದ್ಧನಾಗುತ್ತಾನೆ. ಅಮಲು ಪದಾರ್ಥಗಳನ್ನು ಸೇವಿಸಿದ ಅಥವಾ ಚಿನ್ನದ ಕಳ್ಳತನದ ಅಥವಾ ಬ್ರಾಹ್ಮಣಹತ್ಯೆಯ ಪಾಪದಿಂದ ಮುಕ್ತನಾಗುತ್ತಾನೆ. ರಾಮ ಮಂತ್ರವನ್ನು ಪದೇ ಪದೇ ಪಠಿಸುವವನು ರಾಮಚಂದ್ರನಲ್ಲಿಯೇ ವಿಲೀನಾಗುತ್ತಾನೆ. ಆದ್ದರಿಂದ ಈ ಪವಿತ್ರ ಸ್ತೋತ್ರ ರಸಸಾರದಲ್ಲಿ ನಾನೇ ರಾಮ ಎಂದು ಹೇಳುವವರಿಗೆ ಈ ಜನ್ಮದಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಮತ್ತು ಅನುಮಾನವಿಲ್ಲದೆ ಅವನು/ಅವಳು ರಾಮನೇ ಆಗುತ್ತಾರೆ.
ಪದ್ಮಾ ಅನಂತ್ ಭಾರದ್ವಾಜ್, ಬೆಂಗಳೂರು
9844131306
ಲೇಖಕರ ಸಂಕ್ಷಿಪ್ತ ಪರಿಚಯ
ಪದ್ಮಾ ಅನಂತ್ ಭಾರದ್ವಾಜ್ ಎಂ ಎ ಪದವೀಧರೆ, ಸಾಹಿತ್ಯ, ಕಲೆ ಹಾಡುಗಾರಿಕೆ ಕ್ರೀಡೆ ಹೀಗೆ ಎಲ್ಲಾ ವಿಷಯಗಳಲ್ಲೂ ಆಸಕ್ತಿ ಹೆಚ್ಚು ಅನೇಕ ಸಾಹಿತ್ಯ ವಲಯದಲ್ಲಿ ಕಥೆ, ಕವನ ಲೇಖನ, ಹಾಸ್ಯ ಬರಹ ನಾಟಕ ಕಿರು ನಾಟಕ ರಚನೆ ಬರವಣಿಗೆ ಹಾಡುಗಾರಿಕೆ, ಸ್ಕಿಟ್ ಮಾಡೋದು. ಮಾಡಿಸೋದು ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಕೊಂಡು ಸಂತೋಷ ಪಡುತ್ತಾ ಸಂತೋಷ ಪಡಿಸುತ್ತಾ ಭಾಗಿಯಾಗುವುದು ಅವರ ಧ್ಯೇಯ. ಒಂದು ಫೇಸ್ಬುಕ್ ಗ್ರೂಪಿನ ಆಡ್ಮಿನ್ ಕೂಡ ಆಗಿದ್ದಾರೆ. ಎಲ್ಲರೊಂದಿಗೆ ಒಂದಾಗಿರು ಮಂಕುತಿಮ್ಮ ಎಂಬ ಡಿವಿಜಿ ಯವರ ವಾಕ್ಯದಂತೆ ಎಲ್ಲರೊಂದಿಗೆ ಒಂದಾಗಿ ಸ್ನೇಹ ಪ್ರೀತಿಯಿಂದ ಇರೋದೆ ಇವರ ಸ್ವಭಾವ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ