- ನಾಗರಾಜ್ ಸಿದ್ದೇಶ್ವರಯ್ಯ, ಬೆಂಗಳೂರು
ಒಮ್ಮೆ ಶಿವ ಪಾರ್ವತಿಯರು ಕೈಲಾಸದಲ್ಲಿ ಏಕಾಂತದಲ್ಲಿರುವಾಗ ತಾಯಿ ಕೇಳುತ್ತಾರಂತೆ, "ಕೇನೋಪಾಯೇನ ಲಘುನಾಂ ವಿಷ್ಣೋರ್ನಾಮಸಹಸ್ರಕಂ|
ಪಠ್ಯತೇ ಪಂಡಿತೈರ್ ನಿತ್ಯಾಂ ಶ್ರೋತುಮಿಛ್ಯಾಮ್ಯಹಂ ಪ್ರಭೋ || (ಓ ಪ್ರಭುವೇ ಅತ್ಯಂತ ಸಂಕ್ಷಿಪ್ತವಾಗಿ ವಿಷ್ಣು ಸಹಸ್ರನಾಮಕ್ಕೆ ಪೂರಕವಾದ ಸ್ತೋತ್ರವಿದೆಯೇ ದಯವಿಟ್ಟು ತಿಳಿಸಿ) ಎಂದಾಗ ಆ ಮಹಾದೇವನು, "ಶ್ರೀರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ|
ಸಹಸ್ರನಾಮ ತತ್ ತುಲ್ಯಮ್ ರಾಮನಾಮ ವರಾನನೆ||
(ರಾಮನಾಮವನ್ನ ಮೂರು ಬಾರಿ ಜಪಿಸಿದರಾಯಿತು, ವಿಷ್ಣು ಸಹಸ್ರನಾಮವನ್ನು ಜಪಿಸಿದಷ್ಟು ಪುಣ್ಯವು ಲಭಿಸುವುದು)" ಎಂದೆನ್ನುತ್ತಾರೆ. ರಾಮನಾಮ ಜಪದ ಮಹತ್ವವೇ ಅಂತಹದ್ದು. ಬನ್ನಿ ಪವಿತ್ರತಮವಾದ ಧರ್ಮಮೂರ್ತಿ ಶ್ರೀ ರಾಮಚಂದ್ರ ಪ್ರಭುವಿನ ಜನ್ಮವೃತ್ತಾಂತದ ಕೆಲವು ಉತ್ಕೃಷ್ಟ ಘಟನೆಗಳನ್ನ ಮೆಲುಕು ಹಾಕುತ್ತ ಪ್ರಸಕ್ತ ನಮ್ಮ ಆತ್ಮವಿಮರ್ಶೆಯನ್ನು ಮಾಡಿಕೊಳ್ಳೋಣ.
ಪ್ರಭು ಶ್ರೀ ರಾಮಚಂದ್ರನ ಜೀವನಚರಿತ್ರೆಯನ್ನು 300ಕ್ಕೂ ಹೆಚ್ಚಿನ ಮಹಾನ್ ಋಷಿಗಳು, ಕಾವ್ಯ ರಚನಕಾರರು, ಲೇಖಕರು ಬರೆದಿದ್ದಾರೆ, ಅವುಗಳಲ್ಲಿ ಮಹರ್ಷಿ ವಾಲ್ಮೀಕಿಯ ರಾಮಾಯಣ ದರ್ಶನವನ್ನು ಮಾಡೋಣ. ವಾಲ್ಮೀಕಿ ರಾಮಾಯಣವನ್ನು ಏಳು ಕಾಂಡಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಪ್ರತಿಯೊಂದರಲ್ಲಿ ಬರುವ ಆತ್ಮವಿಮರ್ಶೆಗೆ ಪೂರಕವಾದ ಅಂಶಗಳ ಬಗ್ಗೆ ತಿಳಿಯೋಣ...
1) ಮೊದಲಿಗೆ ಬಾಲಕಾಂಡ:
ಕೋಸಲ ದೇಶ ಪಾಲಕ ದಶರಥ ಚಕ್ರವರ್ತಿ ಮೊದಲ ಹೆಂಡತಿ ಕೌಸಲ್ಯಾದೇವಿಯ ಪುತ್ರನಾಗಿ ರಾಮರು ಜನಿಸುತ್ತಾರೆ. ಅರಸೊತ್ತಿಗೆಯ ಸುಪ್ಪತ್ತಿಗೆಯಲ್ಲಿ ಸಕಲವಿದ್ಯಾ ಪಾರಂಗತನಾಗಿ ಬೆಳೆಯುತ್ತಿರುವ ಸಮಯದಲ್ಲೇ ಮಹರ್ಷಿ ವಿಶ್ವಾಮಿತ್ರರು ಇನ್ನೂ ಎಳೆಯ ವಯಸ್ಸಿನ ರಾಮನನ್ನು ತನ್ನ ಜೊತೆಗೆ ಕಾಡಿಗೆ ರಕ್ಕಸರನ್ನು ಕೊಲ್ಲಲಿಕ್ಕೆ ಕಳುಹಿಸಿಕೊಡಲು ಕೇಳಿಕೊಂಡಾಗ, ಸ್ವತಃ ತಂದೆ ದಶರಥನೇ ಭಯ ಭೀತನಾದ ಸಂಧರ್ಭದಲ್ಲಿ ...
"ಶೋಕೋ ನಾಶ್ಯತೆ ಶ್ರುತಂ, ಧೈರ್ಯಂ| ಶೋಕೋ ನಾಶ್ಯತೇ ಸರ್ವಂ ನಾಸ್ತಿ ಶೋಕೋಸಮೋ ರಿಪು||
ಶೋಕವು ಧೈರ್ಯವನ್ನು, ಕಲಿಕೆಯ ಮನಸ್ಸನ್ನ ಸರ್ವವನ್ನೂ ನಾಶಮಾಡುತ್ತದೆ. ಶೋಕಕ್ಕಿಂತ ಬೇರೊಬ್ಬ ಶತ್ರುವಿಲ್ಲ". ಎನ್ನುತ್ತಾ ಗುರುವಿನಾಜ್ಞೆಗೆ ರಾಮರು ಸವಿನಯದಿಂದ ತಲೆಬಾಗಿ, ತಂದೆಯನ್ನ ಸಮಾಧಾನ ಪಡಿಸಿ ಹೊರಡುತ್ತಾರೆ. ಗುರುವಿನಲ್ಲಿ ಅಚಲವಾದ ನಂಬಿಕೆ, ಮುಂಬರುವ ಕಷ್ಟಗಳು ಕಲಿಕೆಯ ಅವಕಾಶಗಳೆಂದು ಧೈರ್ಯದಿಂದ ಎದೆಯೊಡ್ಡಿ ಜಯಿಸುವ ಈ ಮನೋವೃತ್ತಿ ಇಂದಿನ ಪೀಳಿಗೆಗೆ ಆದರ್ಶ.
2) ಅಯೋಧ್ಯಾ ಕಾಂಡ:
ಮುಂದೆ ವಿಶ್ವಾಮಿತ್ರರ ಯಜ್ಞಸಂರಕ್ಷಿಸಿ, ಸಂತುಷ್ಟ ಗುರುವಿನಾಜ್ಞೆಯಂತೆ ಶಿವಧನುಸ್ಸನ್ನ ಬೇಧಿಸಿ, ಸೀತಮಾತೆಯ ಪಾಣಿಗ್ರಹಣ ಮಾಡಿ ಅಯೋಧ್ಯೆಗೆ ಬರುತ್ತಾರೆ. ದಶರಥನು ಶ್ರೀರಾಮ ಪಟ್ಟಾಭಿಷೇಕಕ್ಕೆ ನಿರ್ಧರಿಸಿದಾಗ ಮಂಥರೆಯ ದುರಾಲೊಚನ ಪೀಡಿತ ಕೈಕೇಯಿಯ ಮಾತಿಗೆ ಕಟ್ಟು ಬಿದ್ದು, ದಶರಥರು ಶ್ರೀರಾಮರಿಗೆ 14 ವರ್ಷ ವನವಾಸದ ಆದೇಶ ನೀಡಬೇಕಾದ ದುಃಖಭರಿತ ಪರಿಸ್ಥಿತಿಯಲ್ಲಿದ್ದಾಗ,
"ಪಿತಾ ಹಿ ದೈವತಂ ತಥಾ ದೇವತಾಮಾಪಿ ಸ್ಮ್ರುತಾಂ"
ಅಂದರೆ ಮನುಜರಾದಿಯಾಗಿ ದೇವತೆಗಳಿಗೂ ತಂದೆಯೇ ದೈವ ಎಂಬ ಆದರ್ಶದ ಹಿನ್ನಲೆಯಲ್ಲಿ, ತಂದೆಗೆ ಕೊಟ್ಟ ಮಾತಿನಂತೆ ರಾಜಭೋಗ, ಸಿಂಹಾಸನ, ಅಧಿಕಾರಗಳನ್ನು ತೊರೆದು, 14 ವರ್ಷ ವನವಾಸಕ್ಕೆ ತೆರಳುತ್ತಾರೆ. ಸಂಬಂಧಗಳಿಗಿಂತ ಹಣ, ಅಂತಸ್ತುಗಳಿಗೇ ಪ್ರಾಮುಖ್ಯತೆ ಇರುವ ಈ ಕಾಲದಲ್ಲಿ ರಾಮನ ಆ ಆದರ್ಶ ಅಮೋಘವಲ್ಲವೇ?
3) ಅರಣ್ಯಕಾಂಡ:
ವನವಾಸಾರಂಭದಲ್ಲಿ ಸುದ್ದಿ ತಿಳಿದ ಭರತನು ತಾಯೊಂದಿರೊಡನೆ ಓಡೋಡಿ ಬಂದು ಎಷ್ಟೆಷ್ಟೋ ಪರಿಯಾಗಿ ಬೇಡಿಕೊಂಡರೂ, ಕೊಟ್ಟ ಮಾತಿನಂತೆ ಸತ್ಯಪಾಲ ಶ್ರೀ ರಾಮಚಂದ್ರರು ವನವಾಸಕ್ಕೆ ಮುನ್ನ ಅಯೋಧ್ಯೆಗೆ ಬರಲೊಪ್ಪಲಿಲ್ಲ.
"ಆಹುಃ ಸತ್ಯಂ ಹೀ ಪರಮಂ ಧರ್ಮಂ ಧರ್ಮವಿದೋ ಜ್ಞಾನಃ". ಅಂದರೆ ಸತ್ಯವೇ ಶ್ರೇಷ್ಠ ಧರ್ಮವೆಂಬ ಆದರ್ಶವನ್ನ ಶ್ರೀರಾಮರು ಇಲ್ಲಿ ಪ್ರತಿಪಾದಿಸುತ್ತಾರೆ. ವನವಾಸಕ್ಕಾಗಿ ಅರಮನೆಯನ್ನು ತೊರೆಯುವಾಗ ತನ್ನ ತಂದೆಯನ್ನ ಕಳೆದುಕೊಳ್ಳುವೆನೆಂಬ ಅರಿವಿದ್ದರೂ, ಯಾರಿಗಾಗಿ ತನಗೆ ಸಿಂಹಾಸನದ ಅಗಲಿಕೆಯಾಯಿತೋ ಸ್ವತಃ ಆ ಭರತನೇ ಬಂದು ಕೇಳಿಕೊಂಡರೂ, ಕೊಟ್ಟ ಮಾತಿನ ಸತ್ಯ ಪರಿಪಾಲನೆಗಾಗಿ ರಾಮರು ವನವಾಸ ಮುಗಿವವರೆಗೂ ಹಿಂದಿರುಗಲಿಲ್ಲ. ತಾನು ನಂಬಿದ ಆದರ್ಶಗಳನ್ನು ಯಾವುದೇ ಕಾರಣಕ್ಕೆ ಕೈಬಿಡದಿರುವ ಈ ಸೈದ್ದಾಂತಿಕ ಬದ್ಧತೆ ನಮ್ಮೊಳಗೂ ಆವೀರ್ಭಾವಗೊಂಡರೆ ಸಮಾಜ ಎಷ್ಟು ಸುಂದರವಲ್ಲವೇ?
4)ಕಿಷ್ಕಿಂಧಾ ಕಾಂಡ ಹಾಗೂ
5) ಸುಂದರ ಕಾಂಡಗಳು:
ದಂಡಕಾರಣ್ಯದಲ್ಲಿ ರಾವಣನಿಂದ ಸೀತಾಪಹರಣಗೊಂಡು, ದುಃಖಿತ ಶ್ರೀ ರಾಮ ಲಕ್ಷ್ಮಣರು ನಿಜಭಕ್ತ ಹನುಮಂತನಿಂದ ಸುಗ್ರೀವನ ಸ್ನೇಹಗಳಿಸಿ ಅವನಿಚ್ಛೆಯಂತೆ ವಾಲಿಯನು ಸಂಹರಿಸಿ, ಕಿಷ್ಕಿಂಧಾ ಸಾಮ್ರಾಜ್ಯದ ಪಟ್ಟಕಟ್ಟುತ್ತಾರೆ. ನಂತರ ಸೀತಾನ್ವೇಷಣೆಗೆ ಹೊರಟ ಜಾಂಬವರ ತಂಡ ಸಾಗರ ಲಂಘನಕ್ಕೆ ಅಂಜನೇಯರನ್ನ ಪ್ರೇರೇಪಿಸಿತು.
"ಉತ್ಸಾಹೋ ಬಲವಾನಾರ್ಯ ನಾಸ್ತ್ಯುತ್ಸಾಹಾತ್ ಪರಂ ಬಲಂ |
ಸೋತ್ಸಾಹಸ್ಯಹೀ ಲೋಕೇಷು ನ ಕಿಂಛಿದಪಿ ದುರ್ಲಭಂ||.
ಅಂದರೆ, ಉತ್ಸಾಹಕ್ಕಿಂತ ಬಲವಾದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಉತ್ಸಾಹದಿಂದ ಸಾಧಿಸಲಾಗದ್ದು ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ" ಎನ್ನುವಂತೆ, ಜಾಂಬವಂತನಿಂದ ಉತ್ಸಾಹ ಪ್ರೇರಿತರಾಗಿ ಅಂಜನೇಯರು ಸಾಗರವನ್ನೇ ಲಂಘಿಸಿ, ಸೀತಾ ಮಾತೆಯ ಇರುವಿಕೆಯನ್ನ ಪತ್ತೆಮಾಡಿ, ಶ್ರೀರಾಮರ ವೃತ್ತಾಂತವನ್ನು ತಿಳಿಸಿ, ನಂತರ ಏಕಾಂಗಿಯಾಗಿಯೇ ಅನೇಕ ರಾಕ್ಷಸವೀರರನ್ನು ಕೊಂದು ಹಿಂದಿರುಗಿ ಉತ್ಸಾಹದ ಬಲವನ್ನ ಪ್ರತಿಪಾದಿಸುತ್ತಾರೆ. ಇದೇ ಉತ್ಸಾಹವೇ ಮುಂದೆ ಸಾಗರಕ್ಕೇ ಸೇತುವೆಯನ್ನ ನಿರ್ಮಿಸುವ ಅಗಾಧ ಕಾರ್ಯಕ್ಕೆ ವಾನರರನ್ನೆಲ್ಲ ಪ್ರೇರೇಪಿಸುತ್ತದೆ.
6) ಯುದ್ಧಕಾಂಡ:
ಈ ಕಾಂಡವಂತೂ ಮಿಕ್ಕೆಲ್ಲ ಕಾಂಡಗಳಿಗೆ ಹೋಲಿಸಿದರೆ, ಅತ್ಯದ್ಭುತವಾದದ್ದು. ಮನುಷ್ಯ ವರ್ಗದ ಎಲ್ಲ ರೀತಿಯ ಜನರೂ ಅಳವಡಿಸಿಕೊಳ್ಳಬಹುದಾದ ಆದರ್ಶಗಳ, ತಂತ್ರ-ಪ್ರತ್ಯಂತ್ರಗಳ, ಸಮಯೋಚಿತ ನಿರ್ವಹಣೆಯ, ಹೊಣೆಗಾರಿಕೆಗಳ ಆಗರವೇ ಇವೆ. ಇಲ್ಲಿ ಬರುವ ಪ್ರತಿಯೊಬ್ಬರೂ ತಮ್ಮ ತಮ್ಮ ಆದರ್ಶಗಳ ಪ್ರತಿಪಾದನೆಯ ಸಮರ್ಥರು.
"ಅನಿರ್ವೇದಃ ಶ್ರಿಯೋ ಮೂಲಂ ಅನಿರ್ವೇದಃ ಪರಂ ಸುಖಂ (ಕುಗ್ಗದ, ಹತಾಶೆಗೊಳ್ಳದ, ನಿರುತ್ಸಾಹವಲ್ಲದ ಮನಸ್ಥಿತಿಯೇ ಯಶಸ್ಸು ಹಾಗೂ ಹರುಷಕ್ಕೆ ಮೂಲ)" ಎಂಬಂತೆ, ಸ್ವಾಮಿ ಭಕ್ತಿ, ಶೌರ್ಯ ಸಾಹಸಗಳನ್ನ ಮೆರೆದು ಅಧರ್ಮದ ವಿರುದ್ದ ಧರ್ಮದ ಗೆಲುವಿಗೆ ಕಾರಣರಾಗುತ್ತಾರೆ. ಶ್ರೀರಾಮರ ಧರ್ಮನಿಷ್ಠೆ, ಲಕ್ಷಮಣರ ತ್ಯಾಗ, ಅಂಜನೇಯರ ಸ್ವಾಮಿ ಭಕ್ತಿ, ಜಾಂಬವರ ದೂರದರ್ಶಿತ್ವ, ಸುಗ್ರೀವರ ಕಾರ್ಯಕ್ಷಮತೆ, ವಿಭೀಷಣರ ಸಮಯ ಸ್ಪೂರ್ತಿ, ಇವರೆಲ್ಲರ ವಿಶೇಷಣಗಳು ರಜೋಗುಣದ ರಾವಣನ ಪತನಕ್ಕೆ ಕಾರಣವಾಗುತ್ತವೆ.
7) ಉತ್ತರ ಕಾಂಡ:
ಈ ಅಂತಿಮ ಕಾಂಡದಲ್ಲಿ ಒಂದಾದ ಶ್ರೀರಾಮ ಸೀತೆಯರ ಅಯೋಧ್ಯೆಯ ಪಟ್ಟಾಭಿಷೇಕ, ತದನಂತರದ ರಾಮರಾಜ್ಯದ ವರ್ಣನೆಗಳಿವೆ.
"ಧರ್ಮಾದರ್ತಃ ಪ್ರಭವತಿ ಧರ್ಮಾತ್ ಪ್ರಭವತೇ ಸುಖಂ|
ಧರ್ಮೇನ ಲಭತೇ ಸರ್ವಂ ಧರ್ಮಸಾರಮಿದಂ ಜಗತ್||
(ಧರ್ಮದಿಂದ ಸಂಪದಾಭಿವೃದ್ದಿ, ಧರ್ಮದಿಂದ ಸುಖ ಸಂಭ್ರಮ ಎಲ್ಲವೂ ಲಭ್ಯ, ಧರ್ಮವೇ ಈ ಸೃಷ್ಟಿ, ಸಂಸಾರಗಳ ಜೀವಾಳ) ಎಂದು ಧರ್ಮವನ್ನೇ ಪ್ರತಿಪಾದಿಸಿ ಸಾವಿರಾರು ವರುಷಗಳ ಕಾಲ ಸುಭಿಕ್ಷವಾಗಿ ರಾಷ್ಟ್ರವನ್ನಾಳಿ ರಾಮರಾಜ್ಯವೆಂಬ ಮಾನದಂಡವನ್ನೇ ಸೃಷ್ಟಿಸಿ ಸತ್ಯಂ ಶಿವಂ ಸುಂದರಂ ಎಂದು ಇಹ-ಪರ ಲೋಕಗಳೆಲ್ಲೆಡೆಗೂ ಸಾರಿದ ಶ್ರೀ ರಾಮರ ಆದರ್ಶಗಳನ್ನ ನಮ್ಮ ಜೀವನದ ಪ್ರತಿಯೊಂದು ಘಟ್ಟಗಳೊಂದಿಗೆ ವಿಮರ್ಶಿಸಿಕೊಂಡು ಅವರ ಆದರ್ಶಗಳನ್ನು ಸ್ವಲ್ಪವಾದರೂ ಅಳವಡಿಸಿಕೊಳ್ಳುತ್ತಾ ಬಂದಾಗ ಮಾತ್ರ ಜೀವನದ ಸಾರ್ಥಕ್ಯ ಲಭ್ಯ.
ಜೈ ಶ್ರೀರಾಮ್
- ನಾಗರಾಜ್ ಸಿದ್ದೇಶ್ವರಯ್ಯ
80125 80932
ಲೇಖಕರ ಸಂಕ್ಷಿಪ್ತ ಪರಿಚಯ:
ಹುಟ್ಟಿದೂರು: ಹೆನ್ನಾಗರ ಗ್ರಾಮ. ಹತ್ತನೆಯ ತರಗತಿಯವರೆಗೆ ಚಂದಾಪುರದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಮೊದಲ ಏಳು ವರ್ಷಗಳು ಬಿ ಇ ಎಮ್ ಎಲ್ ಕಂಪೆನಿಯಲ್ಲಿ ಕೆಲಸ ಮಾಡಿ ಪ್ರಸ್ತುತ ಅಶೋಕ್ ಲೇಲ್ಯಾಂಡ್ ಕಂಪೆನಿಯಲ್ಲಿ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದಾರೆ. ಎಂಟು, ಒಂಬತ್ತು ಹಾಗೂ ಹತ್ತನೆಯ ತರಗತಿಗಳಲ್ಲಿ ಇವರ ಕನ್ನಡ ಉಪಾಧ್ಯಾಯರಾದ ದಾನದಪ್ಪನವರು ನನ್ನ ತಲೆಯಲ್ಲಿ ತುಂಬಿದ ಕನ್ನಡವೇ ಇಂದು ವರಿಗೆ ದಾರಿದೀಪವಾಗಿದೆ. ನಾನು ಏನಾದರೂ ಅಷ್ಟು ಇಷ್ಟು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಟ್ಟು ನಡೆಯುತ್ತಿದ್ದರೆ ಅದಕ್ಕೆ ಅವರ ಪ್ರೇರಣೆಯೇ ಕಾರಣ ಎಂದು ವಿನ್ರಮವಾಗಿ ನುಡಿಯುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ