ಶಂಕರ ಶ್ರೀ ವಸಂತ ವೇದಪಾಠ ಶಾಲೆ- ಮೊದಲ ಬ್ಯಾಚ್‌ಗೆ ಚಾಲನೆ

Upayuktha
0


ನಂತೂರು: ನಗರದ ನಂತೂರಿನ ಶ್ರೀ ಭಾರತಿ ಕಾಲೇಜು ಆವರಣದ ಶಂಕರಶ್ರೀ ಸಭಾಂಗಣದಲ್ಲಿ ಶಂಕರ ಶ್ರೀ ವಸಂತ ವೇದಪಾಠ ಶಾಲೆ ಮೊದಲ ಬ್ಯಾಚ್‌ನ ಉಚಿತ ವಸಂತ ವೇದ ಪಾಠ ಶಿಬಿರಕ್ಕೆ ಚಾಲನೆ ನೀಡಲಾಯಿತು.


ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಿರಿಯ ವಿದ್ವಾಂಸ ಡಾ|ಪಾದೆಕಲ್ಲು ವಿಷ್ಣು ಭಟ್ ಅವರು, ವೈದಿಕ ಪರಂಪರೆಯಿಂದ ಬಂದವರು ಬ್ರಾಹ್ಮಣರು, ಅವರಲ್ಲಿ ಮಂತ್ರಪಾಠದ ಕೊರತೆ ಕಂಡುಬರುತ್ತಿದೆ, ಹಾಗಾಗಿ ಸಮುದಾಯದ ಮಕ್ಕಳಿಗೆ ವೇದಪಾಠ ಬೋಧನೆ ಅತ್ಯಗತ್ಯ, ಆ ಮೂಲಕ ಇರುವ ಕೊರತೆ ನೀಗಬೇಕಾಗಿದೆ ಎಂದರು.


ಉಪನಯನವಾದ ಬಳಿಕ ಪರಂಪರೆಯ ಕ್ರಮದಲ್ಲಿ ಜೀವನ ಮಾಡಲು ಕಲಿಯುವುದೇ ವೇದಪಾಠದ ಉದ್ದೇಶ. ಕಾಮಚಾರ, ಕಾಮವಾದ ಹಾಗೂ ಕಾಮಭಕ್ಷಣ ಎಂದರೆ ಬೇಕಬೇಕಾದ್ದನ್ನು ಮಾಡುವುದು, ಬಯಸಿದ್ದೆಲ್ಲವನ್ನೂ ಮಾತನಾಡುವುದು, ಬೇಕುಬೇಕಾದ್ದೆಲ್ಲ ತಿನ್ನುವುದು, ಈ ತ್ರಿದೋಷ ಬಿಟ್ಟು ಸ್ವಯಂ ಬದುಕಿಗಾಗಿ ನಿಯಮಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ, ಅದಕ್ಕೆ ಗುರುಕುಲ ಮಾದರಿಯಲ್ಲಿ ನಡೆಯುವ ಈ ವೇದಪಾಠ ಶಾಲೆಯು ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಮೇಧೆ ಹಾಗೂ ಪ್ರಜ್ಞೆ ಯನ್ನು ಮೂಡಿಸಲಿ ಎಂದು ಹಾರೈಸಿದರು.


ಮಂಗಳೂರು ಕೆಎಂಸಿಯ ಮೆಡಿಸಿನ್ ವಿಭಾಗದ ಪ್ರೊಫೆಸರ್ ಡಾ|ಚಕ್ರಪಾಣಿ ಅವರು ಮಾತನಾಡಿ, ಶಾಲೆಯಲ್ಲಿ ಸಿಕ್ಕುವ ಪಾಠ ಕೇವಲ ವ್ಯಾವಹಾರಿಕ ಹಾಗೂ ಲೌಕಿಕವಾದದ್ದು. ಆದರೆ ಎಲ್ಲದಕ್ಕೂ ಮೂಲವಾದ ಆಧ್ಯಾತ್ಮಿಕ ಶಿಕ್ಷಣ ಅತ್ಯಗತ್ಯ. ಇಂತಹ ಶಾಲೆ ಬಹಳ ಅಗತ್ಯವಿದೆ. ವೇದಪಾಠ ಕೇವಲ ಕಂಠಪಾಠವಾಗದೆ ಜೀವನ ಪಾಠವಾಗಲಿ ಎಂದು ಹಾರೈಸಿದರು.


ವಿದ್ಯಾರ್ಥಿಯೊಬ್ಬ ಬದುಕಿನಲ್ಲಿ ಯಾವುದೇ ಹಾದಿ ಹಿಡಿದು ಮುಂದೆ ಹೋಗುವಾಗಲೂ ಅವನಿಗೆ ಅತ್ಯಂತ ಅಗತ್ಯವಿರುವುದು ಯಾವುದು ತಪ್ಪು ಯಾವುದು ಸರಿ ಎನ್ನುವ ವಿವೇಚನಾ ಶಕ್ತಿ, ಅದಕ್ಕಾಗಿ ವೇದಪಾಠಗಳು ಮಹತ್ವ ಪಡೆದಿವೆ ಎಂದರು.


ನಿವೃತ್ತ ಯೋಗ ಪ್ರಾಚಾರ್ಯ ಡಾ|ಗಣಪತಿ ಜೋಯಿಸ ಶುಭಾಶಂಸನೆ ನೆರವೇರಿಸಿದರು.

ಮಂಗಳೂರು ಹವ್ಯಕ ಸಭಾ ಅಧ್ಯಕ್ಷೆ ಗೀತಾದೇವಿ ಸಿ, ಸಾವಿತ್ರಿ ಎಂ.ಭಟ್ ಮುಳಿಯ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ, ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾ ಅಧ್ಯಕ್ಷ ಎನ್.ಕೃಷ್ಣ ಭಟ್, ಶ್ರೀ ಭಾರತೀ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ಕೆ.ಭಟ್ ಕೊಣಾಜೆ, ವೇದಪಾಠಶಾಲೆ ಗುರುಗಳಾದ ಅಮೈ ಶಿವಪ್ರಸಾದ ಭಟ್, ಶಂಕರಶ್ರೀ ವೇದಪಾಠಶಾಲೆ ಶಿಬಿರ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಕಾಶಿಮಠ ಉಪಸ್ಥಿತರಿದ್ದರು.


ವೇದ ಪಾಠಶಾಲೆ ಶಿಬಿರ ಸಮಿತಿ ಸಂಚಾಲಕ ಬಾಲಸುಬ್ರಹ್ಮಣ್ಯ ಭಟ್ ಕಬೆಕ್ಕೋಡು ಸ್ವಾಗತಿಸಿದರು. ಕೋಶಾಧಿಕಾರಿ ರಮೇಶ್ ಭಟ್ ನೂಜಿಬೈಲು ಪ್ರಸ್ತಾಪಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಭಟ್ ಬಾಯಾಡಿ ವಂದಿಸಿದರು. ಶ್ರೀಕೃಷ್ಣ ನೀರಮೂಲೆ ಕಾರ್ಯಕ್ರಮ ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top