ಆರ್ಥಿಕ ದುಸ್ಥಿತಿ, ಬರ ನಿರ್ವಹಣೆ ವೈಫಲ್ಯ, ರಾಜ್ಯದಲ್ಲಿ ಸಮಾಜ ಘಾತುಕ ಶಕ್ತಿಗಳ ವಿಜೃಂಭಣೆ: ಬಿಜೆಪಿ ಆರೋಪ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ದಿವಾಳಿಯಾಗಿದೆ. ತಾನೇ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನೂ ಸಮರ್ಪಕವಾಗಿ ಜಾರಿ ಮಾಡಲು ಆಗದ ಸರಕಾರ ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ ಸೇರಿದಂತೆ ತೆರಿಗೆಗಳನ್ನು ವಿಪರೀತವಾಗಿ ಹೆಚ್ಚಿಸಿದರೂ ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಒದ್ದಾಡುತ್ತಿದೆ ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ನ ಸ್ಟಾರ್ ಕ್ಯಾಂಪೇನರ್ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾರೆ. ಮಂಡ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಹೋದಲ್ಲೆಲ್ಲ ನಮ್ಮ ಸಾಂವಿಧಾನಿಕ ವ್ಯವಸ್ಥೆಗಳ ಬಗ್ಗೆ ಅಪ ಪ್ರಚಾರ ಮಾಡುತ್ತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಅವಮಾನಿಸುವ ರಾಹುಲ್ ಗಾಂಧಿಯವರು ಈಗ ಸಿದ್ದರಾಮಯ್ಯ ಸರಕಾರಕ್ಕೆ ಅರ್ಥಿಕ ವೈಫಲ್ಯದ ಕಾರಣ ಕೇಳಬೇಕು? ಏಕೆ ಹೀಗಾಗಿದೆ ಎಂದು ಪ್ರಶ್ನಿಸಬೇಕು ಎಂದು ಪ್ರತಾಪ್ ಸಿಂಹ ನಾಯಕ್ ಆಗ್ರಹಿಸಿದರು.
ದೇಶವಿಂದು 500 ವರ್ಷಗಳ ಹೋರಾಟದ ಬಳಿಕ ಪುನರ್ ನಿರ್ಮಾಣಗೊಂಡ ಭವ್ಯ ರಾಮ ಮಂದಿರದಲ್ಲಿ ರಾಮ ನವಮಿ ಆಚರಿಸುತ್ತಿದೆ. ಇಂತಹ ವಿಶೇಷ ಸಂದರ್ಭದಲ್ಲಿ ಈ ಪ್ರಶ್ನೆಗೂ ರಾಹುಲ್ ಗಾಂಧಿ ಉತ್ತರಿಸಬೇಕು. ದೇಶದ ಅಸ್ಮಿತೆಯಾಗಿರುವ ಶ್ರೀರಾಮನನ್ನು ಕಾಲ್ಪನಿಕ ವ್ಯಕ್ತಿ, ಎಂದಿದ್ದ, ಅವನ ಹುಟ್ಟಿಗೆ ದಾಖಲೆಗಳನ್ನು ಕೇಳಿದ್ದ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಹೋದಲ್ಲೆಲ್ಲ ನಾನೂ ಹಿಂದೂ ಎನ್ನುತ್ತ ತಮ್ಮ ಜಾತಿ, ಗೋತ್ರ ಪ್ರವರಗಳನ್ನೆಲ್ಲ ಹೇಳಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ರಾಮ ಮಂದಿರ ನಿರ್ಮಾಣ ಹೋರಾದ ಸಮಯದಲ್ಲಿ ಹೆಜ್ಜೆ ಹೆಜ್ಜೆಗೆ ನಿಮ್ಮದೇ ಪಕ್ಷದ ವಕೀಲರುಗಳಿಂದ ಅಡ್ಡಗಾಲು ಹಾಕಿಸಿದ್ದು ಏಕೆ? ಮತ್ತೆ ಈಗ ನಾನೂ ರಾಮ ಭಕ್ತ ಎಂದು ಹೇಳಿಕೊಳ್ಳುತ್ತಿರುವುದು ಏಕೆ? ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಬಾರದಿರುವುದು ಏಕೆ? ಉತ್ತರಿಸಿ ರಾಹುಲ್ ಗಾಂಧಿ ಎಂದು ನಾಯಕ್ ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು 11 ತಿಂಗಳಾಯ್ತು. ಒಂದೇ ಒಂದು ಅಭಿವೃದ್ಧಿ ಕಾರ್ಯ ಆಗದಿರುವುದಕ್ಕೆ ಕಾರಣ ಏನು ಎನ್ನುವ ಪ್ರಶ್ನೆಯನ್ನು ಮುಖ್ಯಮಂತ್ರಿಗೆ, ಸರಕಾರಕ್ಕೇ ಕೇಳ್ತೀರಾ? ಸರಕಾರ ದಿವಾಳಿ ಆಗಿದೆಯೇ ಎಂಬ ಬಗ್ಗೆ ವಿವರಣೆ ಕೇಳ್ತೀರಾ? ಸಣ್ಣ ಸಣ್ಣ ಸಂಗತಿಗಳಗೂ ಕೂಡ ಹಣ ಒದಗಿಸಲಾದೆ ಒದ್ದಾಡುತ್ತಿರುವುದನ್ನು ರಾಜ್ಯದ ಜನ ಗಮನಿಸಿದ್ದಾರೆ. ಕಳೆದ 6 ತಿಂಗಳಿಂದ ಹಾಲು ಉತ್ಪಾದಕರಿಗೆ ಕೊಡಬೇಕಾದ 600 ಕೋಟಿ ರೂ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲು ನಿಮಗೆ ಸಾಧ್ಯವಾಗುತ್ತಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ವಾರ್ಷಿಕವಾಗಿ 2 ಕೋಟಿ ರೂ ಕೊಡಲು ನಿಮ್ಮಿಂದ ಆಗುತ್ತಿಲ್ಲ. 1, 11,000 ಕೋಟಿ ರೂ ಸಾಲ ಮಾಡಿದ್ದೀರಿ. ಹಾಗಿದ್ದರೂ ಬರದ ಪರಿಸ್ತಿತಿಯಲ್ಲಿ ಮುಳುಗಿರುವ ರೈತರಿಗೆ ತಕ್ಷಣ ನೆರವು ನೀಡಲು ನಿಮ್ಮ ಬಳಿ ಹಣವಿಲ್ಲ. ತೆರಿಗೆಗಳನ್ನು ಹೆಚ್ಚಿಸಿ, ವಿದ್ಯುತ್, ಮುದ್ರಾಂಕ ಶುಲ್ಕ ಸೇರಿದಂತೆ ಎಲ್ಲವನ್ನೂ ಹೆಚ್ಚಳ ಮಾಡಿ ಪರೋಕ್ಷವಾಗಿ ಜನರ ಕಿಸೆಗೆ ಕನ್ನ ಹಾಕುತ್ತಿದ್ದರೂ ಅಭಿವೃದ್ಧಿ ಯೋಜನೆಗಳಿಗೆ, ಮೂಲಭೂತ ಸೌಕರ್ಯಗಳಿಗೆ ಹಣ ಬಿಡುಗಡೆ ಮಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಹಾಗಾದರೆ ಈ ಸರಕಾರ ದಿವಾಳಿ ಆಗಿದೆಯೇ ಎಂದು ಪ್ರಶ್ನಿಸಿ, ಮುಖ್ಯಮಂತ್ರಿಗಳಿಂದ ಉತ್ತರ ಪಡೆದುಕೊಳ್ಳಿ ಎಂದು ಪ್ರತಾಪ್ ಸಿಂಹ ನಾಯಕ್ ಒತ್ತಾಯಿಸಿದರು.
ಮಂಡ್ಯದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿಯವರು, ಕಾವೇರಿಯ ನೀರನ್ನು ನಿಮ್ಮ ಇಂಡಿ ಅಲಯೆನ್ಸ್ ಮಿತ್ರಪಕ್ಷದ ಒತ್ತಡಕ್ಕೆ ಮಣಿದು ಮುಂದಾಲೋಚನೆಯಿಲ್ಲದೆ ತಮಿಳುನಾಡಿ ಬಿಟ್ಟಿರುವ ಬಗ್ಗೆ ಮತ್ತು ಅದರಿಂದಾಗಿ ಈಗ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಬಗ್ಗೆ, ಸರಕಾರವನ್ನು ಪ್ರಶ್ನಿಸಿ. ರೈತರ ಬೆಳೆಗೆ ನೀರಿಲ್ಲದ ಹಾಗೆ ಕದ್ದು ಮುಚ್ಚಿ ನೀರು ಬಿಟ್ಟಿದ್ದೀರಿ. ರೈತರು ಮತ್ತು ಬೆಂಗಳೂರಿನ ಜನತೆಗೆ ಈಗ ಏನು ಉತ್ತರ ಕೊಡುತ್ತೀರಿ? ಎಂದು ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್ ಟೀಕಿಸಿದರು.
ರಾಜ್ಯದಲ್ಲಿ ಸರಕಾರವೇ ಒಪ್ಪಿಕೊಂಡಂತೆ, ಅವರೇ ವಿಧಾನ ಸೌಧದಲ್ಲಿ ಮಂಡಿಸಿದ ಅಂಕಿಅಂಶದಂತೆ ಈ ಸರಕಾರ ಬಂದ ಮೇಲೆ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ ಏನೆಲ್ಲ ಪ್ರಶ್ನೆ ಮಾಡುತ್ತೀರಿ... ಈ ವಿಷಯದಲ್ಲಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತೀರಾ?
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ವಿಧಾನ ಸೌಧವು ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ವರ್ಗಾವಣೆ ದಂಧೆಯ ಕೇಂದ್ರವಾಗಿದೆ. ನಕ್ಸಲರ ಚಟುವಟಿಕೆಗಳು, ಭಯೋತ್ಪಾದಕ ಚಟುವಟಿಕೆಗಳು ಯಾಕೆ ಮತ್ತೆ ತಲೆ ಎತ್ತುತ್ತಿದೆ.? ಬೆಳಗಾವಿ ಅಧಿವೇಶನದ ಅವಧಿಯಲ್ಲೇ ಮಹಿಳೆಯೊಬ್ಬಳನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಸಮಾಜಘಾತುಕ ಶಕ್ತಿಗಳ ಬಗ್ಗೆ ಕಾಂಗ್ರೆಸ್ಸಿನ ಮೆದು ಧೋರಣೆಯೇ ಇದಕ್ಕೆ ಕಾರಣವೆ? ಎಂದು ಅವರು ಪ್ರಶ್ನಿಸಿದರು.
ಸಮಾಜ ಘಾತುಕ ಶಕ್ತಿಗಳ ಬಗ್ಗೆ ತನಿಖೆಗೂ ಮೊದಲೇ ಹಗುರ ಹೇಳಿಕೆ ನೀಡಿ ಅಂತಹವರಿಗೆ ನೀವು ಪ್ರೋತ್ಸಾಹ ನೀಡುತ್ತಿದ್ದೀರಿ. ಮುಖ್ಯಮಂತ್ರಿಗಳಿಂದ ಈ ಬಗ್ಗೆಯೂ ವಿವರಣೆ ಕೇಳಿ. ಗುತ್ತಿಗೆದಾರ ಮುಖಂಡ ಕೆಂಪಣ್ಣರಿಂದ ಅಂದು ಆಧಾರವಿಲ್ಲದೆ ಬಿಜೆಪಿ ಸರಕಾರದ ಮೇಲೆ 40 ಶೇ ಕಮಿಷನ್ ಆರೋಪ ಹಾಕಿಸಿ ಅಪಪ್ರಚಾರ ಮಾಡಿದಿರಿ. ಇಂದು ಅದೇ ಕೆಂಪಣ್ಣ ಕಾಂಗ್ರೆಸ್ ಸರಕಾರದ ಮೇಲೆ 60 ಶೇ ಭ್ರಷ್ಟಾಚಾರದ ಆರೋಪ ಈಗ ಮಾಡುತ್ತಿದ್ದಾರೆ. ಅದರ ಬಗ್ಗೆ ವಿವರಣೆ ಕೇಳ್ತೀರಾ? ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್‌ನ 20 ಜನ ಶಾಸಕರು, ಈ ಸರಕಾರದಲ್ಲಿ ಯಾವುದೇ ರೀತಿಯ ಅಭಿವೃದ್ದಿ ಕಾರ್ಯ ಆಗುತ್ತಿಲ್ಲ ಶಾಸಕರ ಮಾತು ಕೇಳುತ್ತಿಲ್ಲ ಎನ್ನುವ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ವಿವರಣೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದು ನಾಯಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯದ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ್, ಜಿಲ್ಲಾ ವಕ್ತಾರರಾದ ರಾಜಗೋಪಾಲ ರೈ ಮತ್ತು ಅರುಣ್ ಶೇಟ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ