ಪುತ್ತೂರು: ‘ಸುದಾನ ಬಣ್ಣದ ಹೆಜ್ಜೆ’- ಮಕ್ಕಳ ಬೇಸಿಗೆ ಶಿಬಿರ

Upayuktha
0


ಕಲಿಸು ಗುರುವೆ ಕಲಿಸು 

ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು

ಶತ್ರುಗಳಿಗು ಸನ್ಮಿತ್ರನಾಗಿರಲು ಕಲಿಸು

ಕಲಿಸು ಗುರುವೆ ಕಲಿಸು

‘ಸುದಾನ ಬಣ್ಣದ ಹೆಜ್ಜೆ’ ಎಂಬ ಮಕ್ಕಳ ಬೇಸಿಗೆ ಶಿಬಿರದ ಮಕ್ಕಳು ಈ ಹಾಡನ್ನು ಭಾವಪೂರ್ಣವಾಗಿ ಹಾಡುತ್ತಿದ್ದರು. ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಒಂದು ವಾರದ ಬೇಸಿಗೆ ಶಿಬಿರವು ಮಕ್ಕಳನ್ನು ರಂಜಿಸುವುದರೊಂದಿಗೆ ಅನೇಕ ಹೊಸವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿತ್ತು. ಹಿರಿಯ ಕಲಾವಿದರಾದ ಶಿವಗಿರಿ ಕಲ್ಲಡ್ಕರವರು ಈ ಶಿಬಿರದ ನೇತೃತ್ವವನ್ನು ವಹಿಸಿ ವ್ಯಕ್ತಿತ್ವ ವಿಕಸನಕ್ಕೆ ಅವಶ್ಯಕವಾಗಿರುವ ವಿಚಾರಗಳಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡಿದರು.


ಶಿಬಿರದಲ್ಲಿ ಅಭಿನಯ, ಚಿತ್ರಕಲೆ, ಪಪೆಟ್ ಶೋ, ಕರಕುಶಲ ವಸ್ತುಗಳ ತಯಾರಿ, ಸ್ಮರಣಶಕ್ತಿಯನ್ನು ಬಲಗೊಳಿಸುವ ಆಟಗಳು, ಮುಖವರ್ಣಿಕೆ, ಕೀ ಬೋರ್ಡ್ ತರಬೇತಿ, ಹಾಡುಗಳು, ಕಥೆ-ಕವನ ರಚನೆ ಮುಂತಾದ ಹಲವು ಕ್ರಿಯಾಶೀಲ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಶಿಬಿರದ ಕೊನೆಯಲ್ಲಿ ಶಿಬಿರಾರ್ಥಿ ಮಕ್ಕಳಿಂದ  ‘ಮನುಷ್ಯರಿಂದ ಪ್ರಾಣಿಗಳನ್ನು, ಪ್ರಕೃತಿಯನ್ನು ಕಾಪಾಡಬೇಕಿದೆ’ ಎಂಬ ಸಂದೇಶವನ್ನು ನೀಡುವ ‘ಮಂಗನ ಅವಾಂತರ’ ಎಂಬ ನಾಟಕವು ಮನೋಜ್ಞವಾಗಿ ಪ್ರದರ್ಶಿಸಲ್ಪಟ್ಟಿತು. ಕಥೆಯನ್ನು ಆಲಿಸಿದ ಮಕ್ಕಳು ತಮ್ಮ ಪಾತ್ರ ಚಿತ್ರಣವನ್ನು ತಾವೇ ಮಾಡುತ್ತಾ, ಸುಂದರ ಅಭಿನಯ, ಸರಳ ವಸ್ತ್ರ ಉಡುಪು  ಮತ್ತು ಅರ್ಥಪೂರ್ಣ ಮಾತುಗಳ ಮೂಲಕ ನಾಟಕವನ್ನು ರೂಪಿಸಿದುದು ವಿಶೇಷವಾಗಿತ್ತು. 


ಆರು ದಿನಗಳ ಕಾಲವೂ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹೇಳುತ್ತಾ “ಶಾಲೆಯೂ ಕೂಡಾ ಶಿಬಿರದ ಹಾಗೆಯೇ ಇರುತ್ತಿದ್ದರೆ ಎಷ್ಟು ಚಂದ” ಎಂದು ನುಡಿದರು. ಕೊನೆಯ ದಿನ ನಡೆದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಪೋಷಕರು “ಮಕ್ಕಳು ಶಿಬಿರ ಮುಗಿಸಿ ಮನೆಗೆ ಬಂದ ಮೇಲೆಯೂ ಅಷ್ಟೇ ಉತ್ಸಾಹದಿಂದ ಶಿಬಿರದಲ್ಲಿ ಹೇಳಿಕೊಟ್ಟ ಚಟುವಟಿಕೆಯನ್ನು ಮಾಡುತ್ತಿದ್ದಾರೆ. ಒಂದಿಷ್ಟು ಸುಸ್ತು, ನಿರಾಸಕ್ತಿ ಅವರಲ್ಲಿ ಇಲ್ಲ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂಥ ಅರ್ಥಪೂರ್ಣಶಿಬಿರಗಳು ಮತ್ತೆಮತ್ತೆ ನಡೆಯಬೇಕು” ಎಂದು ಅಭಿಪ್ರಾಯಪಟ್ಟರು.


ಸಾಹಿತಿ ಅಶ್ವಿಜಾ ಶ್ರೀಧರ್ ಅವರು ಶಿಬಿರದ ಉಸ್ತುವಾರಿಯನ್ನು ವಹಿಸಿಕೊಂಡು ಸಹಕರಿಸಿದರು. ಇವರು ಬರೆದ ಮೌನ ಮಾತಾದಾಗ ಎಂಬ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಸ್ಮರಣಿಕೆಯಾಗಿ ನೀಡಲಾಯಿತು. ಶಾಲಾ ಸಂಚಾಲಕರಾದ ವಿಜಯಹಾರ್ವಿನ್, ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾನಾಗರಾಜ್ ಮಕ್ಕಳಿಗೆ ಶುಭಹಾರೈಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top