ಇವತ್ತು ಬೆಳಗ್ಗೆ ಚೊಂಬಿನಲ್ಲಿದ್ದ ನೀರಿನಿಂದ ಮುಖ ತೊಳೆದು, ಚೊಂಬನ್ನು ಅಂಗಳದ ತುದಿಯ ಕಲ್ಲಿನ ಮೇಲೆ ಇಡಬೇಕು ಅನ್ನುವಾಗ, ಕೈ ತಪ್ಪಿ ಕೆಳಗೆ ಬಿದ್ದು, AAPತಮಿತ್ರ ಸಿನಿಮಾದಲ್ಲಿ ಉರುಳಿ ಬಿದ್ದಂತೆ ಚೊಂಬು ಡಣ್ ಡಣ್ ಡಣ್ ಡಣ್.... ಅಂತ ತೋಟದ ತುದಿಗೆ ಹೋಗಿ ಬಿತ್ತು!!!
ತೋಟಕ್ಕೆ ಬಿದ್ದ ಚೊಂಬನ್ನು ಆಮೇಲೆ ತಂದ್ರಾಯ್ತು ಅಂತ ಮುಖ ಮಾರ್ಜನ ಮುಗಿಸಿ, ಕಾಫಿ ಕುಡಿಯಲು ಒಳಗೆ ಬಂದರೆ, ಟಿಪಾಯಿ ಮೇಲೆ ತೋಟಕ್ಕೆ ಉರುಳಿ ಹೋದ ನಾಗವಲ್ಲಿ ಚೊಂಬು ಪ್ರತ್ಯಕ್ಷ!!
ಒಂದು ಕ್ಷಣ ಅಪ್ತಮಿತ್ರ ಮೂವಿಯ ದ್ವಾರಕೀಶ್ ತರಹ ಹೆದರಿ "ಏ ಏ ಏ... ಇ ಇ ಇ ಇಲ್ಲಿ ಚೊ ಚೊ ಚೊ ಚೊಂಬು ಇ ಇ ಇ ಇಟ್ಟಿದ್ಯಾರು?" ಅಂದೆ "ಇಲ್ಲೊಂದು ಸಮಸ್ಯೆ ಖಂಡಿತಾ ಇದೆ" ಅಂತ ಮನಸ್ಸಿಗೆ ಗಾಬರಿಯಾಗಿ!!!!
ಮನೆಯ ಹಜಾರದ ಪೂರ್ವಕ್ಕೆ ಮುಖ ಮಾಡಿ ಹಾಕಿದ್ದ ಕುರ್ಚಿಯಲ್ಲಿ ಮೊಬೈಲ್ ಉಜ್ಜುತ್ತಿದ್ದ 'ಮನೆ ನಾಗವಲ್ಲಿ' "ಚೊಂಬು ನಿಮ್ತಲೆ, ಅದು ಚೊಂಬಲ್ಲ, ಚೊಂಬಿನ ಚಿತ್ರ. ಇವತ್ತಿನ ಪೇಪರ್ ಅದು. ಸರಿಯಾಗಿ ಕಣ್ಣು ಬಿಟ್ಟು ನೋಡಿ" ಅಂದಾಗಲೆ ಗೊತ್ತಾಗಿದ್ದು ನನ್ನ ಚೊಂಬಿಗೆ ಅದು ಒಂದು ಪಕ್ಷದವರು ಮತ್ತೊಂದು ಪಕ್ಷಕ್ಕೆ ಕಾಲೆಳೆದು, ಚೊಂಬು ಕೊಟ್ಟ ಚೊಂಬಿನ ಜಾಹೀರಾತು ಅಂತ!!
ಕಾಫಿ ಹೀರಿ, ಪೇಪರ್ ಓದಿ, ತೋಟದಿಂದ ಚೊಂಬನ್ನು ತಂದು, ಅಂಗಳದ ತುದಿಯ ಕಲ್ಲಿನ ಮೇಲಿಡುವಾಗ, ಉದುರಿದ ಕೂದಲಿನ ನನ್ನ ಶಿರೋ ಚೊಂಬಿಗೆ ಅನಿಸಿದ್ದನ್ನು ಹಾಗೆ ನಿಮ್ಮ ತಲೆ ಎಂಬ ಚೊಂಬಿಗೆ ವರ್ಗಾಯಿಸುತ್ತೇನೆ.
ಓದುವಾಗ, ನೆತ್ತಿಯ ಚೊಂಬು ಹಿಡ್ಕೊಂಡ್ ಹಾಗೆ ಆದ್ರೆ, ಒಂದು ಚೊಂಬು ನೀರು ಕುಡಿಯಿರಿ.
**
ಜಾಹೀರಾತಿನಲ್ಲಿ ಕಾಲೆಳಸಿಕೊಂಡ ಪಕ್ಷ, ಅದೇ ಚೊಂಬನ್ನು ಬಳಸಿ ಪ್ರತಿ ಜಾಹೀರಾತು ಕೊಟ್ಟರೆ.... ಜಾಹೀರಾತಿನ ಚೊಂಬಿನೊಳಗೆ ಏನೇನೆಲ್ಲ ಇರಬಹುದು!!?:
ಚೊಂಬನ್ನು ಯಾರ್ಯಾರಿಗೆ ಕೊಡಲಾಗಿದೆ, ಕಳಿಸಲಾಗಿದೆ? ಅಂತ ಕೊಡುವ ಡ್ರಾಫ್ಟ್ ಜಾಹಿರಾತು ಇಲ್ಲಿದೆ, ಚೊಂಬುಗಟ್ಟಳೆ ಸುದ್ದಿ ರಸದೊಂದಿಗೆ!!:
1) ಚೊಂಬನ್ನು ಮಾಲ್ಡಿವ್ಸ್‌ಗೆ ಲಕ್ಷದ್ವೀಪದ ಸಮುದ್ರದ ಮೂಲಕ ತೇಲಿ ಬಿಡಲಾಗಿದೆ!!!
2) ಭ್ರಷ್ಟಾಚಾರಿಗಳಿಗೆ ತಿಹಾರ್ ಜೈಲಿನಲ್ಲಿ ಮದ್ಯ ತುಂಬಿಸಿಟ್ಟುಕೊಳ್ಳಲು ಚೊಂಬು ಬಳಸಿಕೊಳ್ಳುವಂತೆ ಸಲಹೆ ನೀಡಿ ಚೊಂಬು ತಟ್ಟೆ ಕೊಡಲಾಗಿದೆ. ಜೂನ್ ಏಳರ ನಂತರ ದೇಶದ ಎಲ್ಲ ಜೈಲುಗಳಲ್ಲಿ ಸಾಕಷ್ಟು ಚೊಂಬುಗಳನ್ನು, 'ಕು'ಡಿಕೆ'ಗಳನ್ನು 'ಸಿದ್ದ'ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
3) ಉತ್ತರ ಪ್ರದೇಶದ ಅನೇಕ ಕಡೆ ಮನೆಗಳ ಶುದ್ದೀಕರಣಕ್ಕೆ ಬುಲ್ಡೋಜರ್ ಮೂಲಕ ಚೊಂಬು ಕಳಿಸಲಾಗಿದೆ.
4) ನಿರ್ದಿಷ್ಟ ಮೈತ್ರಿ ಕೂಟ ರಚನೆಗೆ, ಶುಕ್ಲ ಪಕ್ಷ ದಲ್ಲಿನ ಕಪ್ಪೆಗಳನ್ನು ತುಂಬಿಸಿಕೊಳ್ಳಲು ತೂತು ಬಿದ್ದ ಗುಜರಿ ಚೊಂಬನ್ನು ಉಡುಗೊರೆಯಾಗಿ ಕೊಡಲಾಗಿದೆ
5) ನೆರೆಯ ಪಾಪಿ ದೇಶಕ್ಕೆ ಪ್ರತಿಕಾರದ ಏರ್ ಸ್ಟ್ರೈಕ್ ಸಂದರ್ಭದಲ್ಲಿ ಪವಮಾನ ಶಾಂತಿ ಮಾಡಿಸಿ, ಚೊಂಬಿನಲ್ಲಿ ಅಹಂಕಾರಕ್ಕೆ ತಿಲಾಂಜಲಿ ಕೊಡಲಾಗಿದೆ.
6) IT ರೈಡ್‌ನಲ್ಲಿ ಸಿಕ್ಕ ಕೆಜಿಗಟ್ಟಳೆ ತೂಕದ ಬಂಗಾರದ ಚೊಂಬುಗಳನ್ನು ನೋಡಿ ಐಟಿ ಅಧಿಕಾರಗಳೇ ಶಾಕ್ ಆಗಿ ಬೆಚ್ಚಿ ಬಿದ್ದಿದ್ದಾರೆ!!!
7) "ಡೈವೋರ್ಸ್, ಡೈವೋರ್ಸ್, ಡೈವೋರ್ಸ್" ಅಂತ ಹೇಳಿ ಯಾರೇ ಆಗಲಿ, ಹೆಂಡತಿಯ ಕೈ ಗೆ ಚೊಂಬು ಕೊಟ್ಟರೆ, ಅದು ಕಾನೂನು ಮಾನ್ಯ ಆಗುವುದಿಲ್ಲ.
8) ವಿಶ್ವ ಆರ್ಥಿಕ ಓಟದ ಸಾಧನೆಯಲ್ಲಿ ಹತ್ತನೇ ಕ್ರಮಾಂಕದಿಂದ ಐದನೇ ಸ್ಥಾನಕ್ಕೆ ಬಂದು, ಪೂರ್ಣಕುಂಭದ ( ಬಂಗಾರದ ಚೊಂಬು ) ಅಭಿನಂದನೆಗಳನ್ನು ನಮ್ಮ ಪಕ್ಷ ಸ್ವೀಕರಿಸುತ್ತದೆ.
9) ಗೋಹತ್ಯೆ ನಿಶೇಧ ಮಾಡಿ, ದೇಶದ ತುಂಬ ಎಲ್ಲರೂ ಚೊಂಬು ತುಂಬ ಹಾಲು ಕುಡಿಯುವಂತಾಗಿದೆ!!!
10) ಇದಿಷ್ಟು ಚೊಂಬಿನ ಟ್ರೈಲರ್, ಚೊಂಬಿನ ಪಿಚ್ಚರ್ ಅಭಿ ಬಾಕಿ ಹೆ!!
ಇದಿಷ್ಟು ಓದಿ, ಅವಿನಾಶ್ ರೀತಿಯಲ್ಲಿ- "ಇವತ್ತು ಈ ಚೊಂಬಿನ ಮುಖದಲ್ಲಿ ಒಂದು ತೇಜಸ್ಸನ್ನು ನೋಡಿದೆ. ಏನನ್ನೋ ಸಾಧಿಸಿದ ಸಂತೋಷ ಚೊಂಬಿನ ಮುಖದಲ್ಲಿ ತೇಲಾಡುತ್ತಿರುವುದನ್ನು ಗಮನಿಸಿದೆ" ಅಂತ ನೀವು ಉದ್ಗಾರ ತೆಗೆಯುವುದು ಬೇಡ!!
(Disclaimer: ಇದು ಪೇಪರ್‌ನಲ್ಲಿ ಒಂದು ಪಕ್ಷ ಕೊಟ್ಟ ಚೊಂಬಿನ ಜಾಹಿರಾತನ್ನು ಕಂಡಾಗ, ಮತ್ತೊಂದು ಪಕ್ಷ ಮರು ಜಾಹೀರಾತನ್ನು ಹೀಗೆ ಕೊಡಬಹುದು ಎನ್ನುವ ಒಂದು ಹಾಸ್ಯ ಕಲ್ಪನೆ ಅಷ್ಟೆ. ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಬರೆದುದಲ್ಲ. ಯಾರೂ ಯಾವುದನ್ನೂ ತಿರುಚಿ ಅಪಾರ್ಥ ಮಾಡಿಕೊಳ್ಳುವುದು ಬೇಡ!!)
ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ