ಪ್ರಥಮ ಪಾಕವಿದ್ಯಾಮಾನ್ಯ ಪ್ರಶಸ್ತಿಗೆ ಪೊದಮಲೆ ವೇಂಕಟ ಸುಬ್ರಾಯ ಭಟ್ ಆಯ್ಕೆ
ಉಡುಪಿ: ಕೃಷಿ, ಪೌರೋಹಿತ್ಯ ಮತ್ತು ಅಡುಗೆ ವೃತ್ತಿಗಳು ಬ್ರಾಹ್ಮಣ ಸಮಾಜದ ಮೂಲ ಕಸುಬುಗಳ ಪೈಕಿ ಆದ್ಯ ಸ್ಥಾನಗಳನ್ನು ಪಡೆದಿವೆ. ಇವತ್ತು ಇಂಜಿನಿಯರಿಂಗ್ ಮೆಡಿಕಲ್ ಹಾಗೂ ಆಧುನಿಕವಾದ ತಂತ್ರಜ್ಞಾನ ಕೌಶಲ್ಯದ ವಿದ್ಯೆಗಳಿಗೆ ಬ್ರಾಹ್ಮಣರ ಮನೆಯ ಮಕ್ಕಳು ಆದ್ಯತೆಗಳನ್ನು ಕೊಡುತ್ತಿದ್ದೇವೆ. ಆದರೆ ಯಾವುದೇ ಬ್ರಾಹ್ಮಣ ಕುಟುಂಬದ ಮೂಲವನ್ನು ಜಾಲಾಡಿದರೆ ಒಂದಲ್ಲ ಒಂದು ಬೇರು ಕೃಷಿ ಪೌರೋಹಿತ್ಯ ಮತ್ತು ಅಡುಗೆ ವೃತ್ತಿಯೊಂದಿಗೆ ಬೆಸೆದಿರುವುದನ್ನು ಕಂಡೇ ಕಾಣ್ತೇವೆ.
ಆ ನೆಲೆಯಲ್ಲಿ ಬ್ರಾಹ್ಮಣ ಸಂಘಟನೆಗಳು ಮತ್ತು ಬ್ರಾಹ್ಮಣ ಮಠ ಮಾನ್ಯರು ಈ ಮೂರೂ ಕ್ಷೇತ್ರಗಳಲ್ಲಿ ತಪಸ್ಸಿನಂತೆ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಸಂದರ್ಭಾನುಸಾರ ಸತ್ಕರಿಸುವ ಕೆಲಸ ಮಾಡಲೇ ಬೇಕು; ನಮ್ಮ ಮೂಲವೃತ್ತಿಯನ್ನು ನಾವು ಗೌರವಿಸುವ ಮಾನಿಸುವ ಒಂದು ಶ್ರೇಷ್ಠ ಕೆಲಸವೂ ಆಗ್ತದೆ. ಅನೇಕ ಕಡೆಗಳಲ್ಲಿ ಬ್ರಾಹ್ಮಣ ಸಂಘಟನೆಗಳು ವಿವಿಧ ಮಠಗಳಿಂದ ಈ ಕೆಲಸಗಳು ನಡೆಯುತ್ತಲೂ ಇವೆ.
ಇದೀಗ ಉಡುಪಿಯ ಅಷ್ಟಮಠಗಳ ಪೈಕಿ ಒಂದಾಗಿರುವ ಪ್ರಾತಃಸ್ಮರಣೀಯರಾದ ಶ್ರೀ ಹೃಷೀಕೇಶತೀರ್ಥ ಯತಿ ಪರಂಪರೆಯ ಧೀಮಂತ ಇತಿಹಾಸ ಹೊಂದಿರುವ ಶ್ರೀ ಪಲಿಮಾರು ಮಠದ ವತಿಯಿಂದಲೂ ಅಡುಗೆ ವೃತ್ತಿಯ ಸಾಹಸವನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿರುವ ಸಾಧಕರನ್ನು ಸಂಮಾನಿಸುವ ಶ್ರೇಷ್ಠ ಕಾರ್ಯಕ್ಕೆ ಮುಂದಾಗಿರುವುದು ಸಂತೋಷದ ಸಂಗತಿ.
ಶ್ರೀ ಮಠದ ಈಗಣ ಯತಿಗಳೂ ಜ್ಞಾನಿಶ್ರೇಷ್ಠರೂ ಆಗಿರುವ ಪರಮಪೂಜ್ಯ ಶ್ರಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಗುರುಗಳೂ ಮಹಾನ್ ತಪೋನಿಧಿಗಳೂ ಆಗಿದ್ದ ಕೀರ್ತಿಶೇಷ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಸಂಸ್ಮರಣೆಯಲ್ಲಿ ಪಾಕ ವಿದ್ಯಾಮಾನ್ಯ (ಪಾಕ ವಿದ್ಯಯಾ ಮಾನ್ಯಃ) ಎಂಬ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಪ್ರತೀ ವರ್ಷ ಗುರುಗಳ ಆರಾಧನೋತ್ಸವದ ಸದವಸರದಲ್ಲಿ ಯೋಗ್ಯ ಸಾಧಕ ಪಾಕತಜ್ಞರಿಗೆ ನೀಡಿ ಅನುಗ್ರಹಿಸುವ ಸಂಕಲ್ಪ ಮಾಡಿದ್ದಾರೆ.
ಶ್ರೀಗಳು ಈಗಾಗಲೇ ವೈದಿಕ, ಪೌರೋಹಿತ್ಯ, ಸಾಮಾಜಿಕ ಮೊದಲಾದ ಅನ್ಯಾನ್ಯ ಕ್ಷೇತ್ರಗಳ ಸಾಧಕರಿಗೆ ಅನೇಕ ವರ್ಷಗಳಿಂದ ತಮ್ಮ ಪೂರ್ವಸೂರಿಗಳ ಸಂಸ್ಮರಣೆಯಲ್ಲಿ ಪ್ರಶಸ್ತಿಗಳನ್ನು ವಿತರಿಸುವ ಸತ್ ಸಂಪ್ರದಾಯವನ್ನು ನಡೆಸಿಕೊಂಡು ಸಾಧಕರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಉತ್ತಮರೀತಿಯಲ್ಲಿ ಮಾಡುತ್ತಿದ್ದಾರೆ.
ಈ ಸಾಲಿಗೆ ಈ ವರ್ಷದಿಂದ ಪಾಕತಜ್ಞರನ್ನೂ ಗುರುತಿಸಿ ಸತ್ಕರಿಸಲು ತೀರ್ಮಾನಿಸಿರುವುದು ಅತ್ಯಂತ ಶ್ಲಾಘನೀಯ. ಅಡುಗೆ ವೃತ್ತಿಯ ಬಗ್ಗೆ ಬ್ರಾಹ್ಮಣರಲ್ಲೇ ಕ್ಲೀಷೆಯ ಭಾವನೆ ಇರುವ ಹೊತ್ತಲ್ಲಿ ಆ ವೃತ್ತಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಕರ್ತವ್ಯವನ್ನು ಒಂದು ಮಠವೂ ಮಾಡಲು ಮುಂದೆ ಬಂದಿರುವುದು ಅಡುಗೆ ವೃತ್ತಿಗೆ ಅದರಲ್ಲಿ ನಿರತರಾಗಿರುವ ಎಲ್ಲ ಬ್ರಾಹ್ಮಣ ಬಂಧುಗಳಿಗೆ ಅತ್ಯಂತ ಸಂತಸದ ವಿಚಾರವಾಗಿದೆ. ಈ ನಿಟ್ಟಿನಿಲ್ಲಿ ಶ್ರೀ ಪಲಿಮಾರು ಮಠದ ಉಭಯಶ್ರೀಗಳಿಗೆ ಅನಂತ ಅಭಿವಂದನೆಗಳು.
ಈ ವರ್ಷದಿಂದ ನೀಡಲಾಗುವ ಪಾಕ ವಿದ್ಯಾಮಾನ್ಯ ಪ್ರಶಸ್ತಿಗೆ ಪ್ರಥಮವಾಗಿ ಉಡುಪಿ ಜಿಲ್ಲೆಯ ಇನ್ನಂಜೆ ಗ್ರಾಮದ ಹಿರಿಯ ಪಾಕತಜ್ಞರಾದ ಶ್ರೀ ಪೊದಮಲೆ ವೇಂಕಟ ಸುಬ್ರಾಯ ಭಟ್ಟರು (ಸುಮಾರು 85 ವರ್ಷ ಪ್ರಾಯ) ಪಾತ್ರರಾಗಿದ್ದು ಅವರಿಗೂ ಸಮಸ್ತ ಬ್ರಾಹ್ಮಣ ಸಮಾಜದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ಅಡುಗೆ ವೃತ್ತಿಯನ್ನು ಗೌರವಿಸಲು ನಿರ್ಧರಿಸಿದ ಶ್ರೀ ಪಲಿಮಾರು ಶ್ರೀಗಳಿಗೆ ಉಡುಪಿಯ ಶಿವಳ್ಳಿ ಅಡುಗೆಯವರ ಸಂಘದವರು ಅತ್ಯಂತ ಕೃತಜ್ಞತೆಗಳನ್ನು ಮತ್ತು ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀ ವೇಂಕಟ ಸುಬ್ರಾಯ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.
ಉಡುಪಿಯ ಮಾಜಿ ಶಾಸಕ ಕೆ ರಘುಪತಿ ಭಟ್ಟರ ಪ್ರಯತ್ನ ವಿಶೇಷದಿಂದ ಉಡುಪಿ ಜಿಲ್ಲಾ ರಾಜ್ಯೋತ್ಸವದ ಸಂದರ್ಭದಲ್ಲಿ ಅಡುಗೆ ಕ್ಷೇತ್ರದ ಸಾಧಕರಿಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವ ಕೆಲಸವಾಗುತ್ತಿರುವುದನ್ನೂ ಈ ಹೊತ್ತು ಸ್ಮರಿಸಲು ಸಂತೋಷವಿದೆ.
-ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

