ಏ.14ರಂದು ಮಂಗಳೂರಿನಲ್ಲಿ ಪ್ರಧಾನಿ ಮೋದಿ ರ್‍ಯಾಲಿ: ಬಿಜೆಪಿಯಲ್ಲಿ ಚಟುವಟಿಕೆ ಚುರುಕು

Upayuktha
0


ಮಂಗಳೂರು: ಬಿಸಿಲಿನ ಬೇಗೆಯ ಜತೆಗೆ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಏರಲಾರಂಭಿಸಿದ್ದು,. ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು  ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.


ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಚುನಾವಣಾ ಸಮಿತಿಯ ಪ್ರಧಾನ ಸಂಚಾಲಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಇಂದು (ಏ.8)  ಸಂಜೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.


ದ.ಕ ಜಿಲ್ಲೆಗೆ ಹಿಂದಿನ ಬಾರಿ ಮೋದಿ ಅವರು ಭೇಟಿ ನೀಡಿದಾಗ ಸೇರಿದ ಜನತೆಯ ದಾಖಲೆ ಮೀರಿಸುವಂತೆ ಈ ಬಾರಿ ಜನರು ಸಮಾವೇಶಗೊಳ್ಳಲಿದ್ದಾರೆ. ಪ್ರಧಾನಿ ಭೇಟಿಯಿಂದ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಲಿದೆ. ಅನಂತರ ಮೂರು ದಿನಗಳ ಕಾಲ ಅಂದರೆ ಏ.15,16, 17ರಂದು ಪಕ್ಷದ ರಾಜ್ಯಾಧ್ಯಕ್ಷರಿಂದ ತೊಡಗಿ ಎಲ್ಲ ಪ್ರಮುಖರು, ಅಭ್ಯರ್ಥಿಗಳು, ಕಾರ್ಯಕರ್ತರು ಮನೆ ಮನೆ ಸಂಪರ್ಕ ಹಾಗೂ ಪ್ರಚಾರ ನಡೆಸಲಿದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದರು.


ಏ.10, 11ರಂದು ಪಕ್ಷವು ಬೂತ್ ಮಟ್ಟದ ಮಹಾ ಪ್ರಚಾರ ಅಭಿಯಾನ ಕೈಗೊಳ್ಳಲಿದ್ದು,, ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ 15, 16, 17ರಂದು ಮನೆ ಮನೆ ಸಂಪರ್ಕ ಅಭಿಯಾನ ನಡೆಯುತ್ತದೆ. ಈ ಬಾರಿ ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ ಮತ್ತು ವಿಕಸಿತ ಭಾರತ ಎಂಬ ಮೂರು ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ ಎಂದು ಸುನಿಲ್ ಕುಮಾರ್ ವಿವರಿಸಿದರು.

 


ಶೌಚಾಲಯ ನಿರ್ಮಾಣದಿಂದ ತೊಡಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗೆ, ಮನೆ ಮನೆಗೆ ಎಲ್‌ಪಿಜಿ ಸಂಪರ್ಕದಿಂದ ಹಿಡಿದು ಚಂದ್ರಯಾನದ ತನಕ ಪ್ರಧಾನಿ ಮೋದಿ ಅವರ ಸರಕಾರ ಕೈಗೊಂಡ ಎಲ್ಲ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸುತ್ತೇವೆ. ಎಲ್ಲ ಹಂತಗಳಲ್ಲಿ ಮತದಾರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ ಎಂದು ಸುನಿಲ್‌ ಕುಮಾರ್ ಹೇಳಿದರು.


ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಿ ಮೊದಲ ಹಂತದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದೀಗ ಪ್ರಧಾನಿ ಮೋದಿ ಅವರ ಪ್ರವಾಸದ ಮೂಲಕ ಎರಡನೇ ಹಂತದ ಪ್ರಚಾರ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಏ.14ರಂದು ಮಂಗಳೂರಿನ ಸಮಾವೇಶ ಮುಗಿದ ಬಳಿಕ ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಬೃಹತ್ ರೋಡ್‌ಶೋ ನಡೆಸಲಿದ್ದಾರೆ.


ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರು ಅಸಹಕಾರ ತೋರುತ್ತಿರುವುದರಿಂದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸವಾಲು ಎದುರಾಗಿಲ್ಲವೇ ಎಂಬ ಪರ್ತಕರ್ತರ ಪ್ರಶ್ನೆಗೆ, ಹಾಗೇನೂ ಇಲ್ಲ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಚುನಾವಣೆಗೆ ಹೋಗುತ್ತೇವೆ. ಕಾಗೇರಿಯವರ ನಾಮಪತ್ರ ಸಲ್ಲಿಕೆ ಸಂದರ್ಭ ನಾನೂ ಹಾಜರಿರುತ್ತೇನೆ ಎಂದು ಸುನಿಲ್ ಹೇಳಿದರು.


ವಿಧ್ವಂಸಕ ಶಕ್ತಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು:

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ನಕ್ಸಲರು ಹಾಗೂ ಇತರ ವಿಧ್ವಂಸಕ ಶಕ್ತಿಗಳಿಗೆ ಹೆಚ್ಚಿನ ಹುಮ್ಮಸ್ಸು ಬಂದಿದೆ. ಕಾಂಗ್ರೆಸ್‌ ಸರಕಾರದ ಧೋರಣೆಯೂ ಈ ಶಕ್ತಿಗಳನ್ನು ಪೋಷಿಸುವಂತೆಯೇ ಇದ್ದು,, ಅವುಗಳನ್ನು ಮಟ್ಟಹಾಕುವ ದಿಟ್ಟತನವನ್ನು ಸಿದ್ದರಾಮಯ್ಯ ಸರಕಾರ ತೋರಬೇಕು. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ಕಲವು ಭಾಗಗಳಲ್ಲಿ ನಕ್ಸಲರು ಮತ್ತೆ ಚಿಗುರಿಕೊಂಡಿದ್ದಾರೆ. ಕೆಲವು ಹಳ್ಳಿಗಳಿಗೆ, ಮನೆಗಳಿಗೆ ಭೇಟಿ ನೀಡಿ ಸುಲಿಗೆ ಮಾಡುತ್ತಿದ್ದಾರೆ. ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಸರಕಾರ ಇದನ್ನು ಅರ್ಥ ಮಾಡಿಕೊಂಡು ಸಮಾಜ ದ್ರೋಹಿಗಳನ್ನು ಸದೆಬಡಿಯಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು..


ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಮತ್ತು ಯತೀಶ್ ಆರುವಾರ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top