ಬೆಂಗಳೂರು: 'ನಮ್ಮ ಯುವ ತಂತ್ರಜ್ಞರು ತಂತ್ರಜ್ಞಾನದ ಅನ್ವೇಷಣೆಗಳ ಪ್ರಜಾಪ್ರಭುತ್ವೀಕರಣಕ್ಕೆ ಬದ್ಧರಾಗಬೇಕು. ಪ್ರಜಾಪ್ರಭುತ್ವೀಕರಣ ಅಂದರೆ ಅತ್ಯಂತ ಸಾಮಾನ್ಯ ವ್ಯಕ್ತಿಯೂ ಒಂದಲ್ಲ ಒಂದು ವಿಧದಲ್ಲಿ ನವೀನ ತಂತ್ರಜ್ಞಾನದ ಲಾಭ ಪಡೆಯಬೇಕು ಹಾಗೂ ಅದರಿಂದ ಆ ವ್ಯಕ್ತಿಯ ಬಾಳು ಹಸನಾಗಬೇಕು. ಒಮ್ಮೆ ತಂತ್ರಜ್ಞಾನದ ನೆರವು ಸಿಕ್ಕರೆ ಇಡೀ ಸಮಾಜದ ಪ್ರಗತಿ ಸಾಧ್ಯ ಹಾಗೂ ದೇಶದ ಅಭಿವೃದ್ಧಿ ಶೀಘ್ರಗತಿಯಲ್ಲಿ ಆಗಲಿದೆ' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಟೆಲಿಕಾಂ ಕಾರ್ಯತಂತ್ರದ ಸಲಹೆಗಾರರಾದ ಪಮೇಲ ಕುಮಾರ್ ನುಡಿದರು.
ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ವಿದ್ಯುನ್ಮಾನ ಸಂವಹನ ವಿಭಾಗ ಹಾಗೂ ಐ.ಇ.ಇ.ಇ ಬೆಂಗಳೂರು ವಿಭಾಗ ಹಾಗೂ ಐ.ಇ.ಇ.ಇ ಸೇವಾಧಾರಿತ ತಂತ್ರಜ್ಞಾನ (ಎಸಿಸ್ಟ್12) ವಿದ್ಯಾರ್ಥಿ ವೇದಿಕೆಗಳ ಸಹಯೋಗದಲ್ಲಿ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ವಿವಿಧ ಅನ್ವೇಷಣಾ ಪ್ರಾಜೆಕ್ಟ್‌ಗಳ ಸ್ಪರ್ಧಾತ್ಮಕ ಉತ್ಸವ- 'ಕೌಶಲ್ಯ'ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
'ನಮ್ಮ ತಂತ್ರಜ್ಞಾನದ ವಿದ್ಯಾರ್ಥಿಗಳು ಸಮಾಜದ ಕಲ್ಯಾಣಕ್ಕಾಗಿ ಸಿದ್ಧಪಡಿಸಬಹುದಾದ ನವೀನ ಅನ್ವೇಷಣೆಗಳನ್ನೊಳಗೊಂಡ ಪ್ರಾಜೆಕ್ಟ್‌ಗಳು ಸಾಕಷ್ಟಿವೆ. ಸುಸ್ಥಿರ ಪರಿಸರ ಸ್ನೇಹಿ ತಂತ್ರಜ್ಞಾನ, ಆರೋಗ್ಯ ರಕ್ಷಣೆಗೆ ನೆರವಾಗುವ ಆ್ಯಪ್‌ಗಳ ಸೃಷ್ಟಿ, ಶುದ್ಧ ಕುಡಿಯುವ ನೀರು ಕುರಿತ ಮಾಹಿತಿ ನೀಡುವ ಆ್ಯಪ್‌ಗಳ ಅಳವಡಿಕೆ ಇತ್ಯಾದಿಗಳನ್ನು ಉದಾಹರಣೆಗಳನ್ನಾಗಿ ನೀಡಬಹುದು. ಅಲ್ಲದೆ ಬಹುಮುಖ್ಯವಾಗಿ ದೇಶದ ಬೆನ್ನೆಲುಬಾಗಿರುವ ರೈತರ ಕೃಷಿ ಪ್ರಕ್ರಿಯೆಯಲ್ಲಿ ನೆರವಾಗುವ ಹೊಸ ತಂತ್ರಜ್ಞಾನವನ್ನು ನವೀನ ಅನ್ವೇಷಣೆಗಳ ಮೂಲಕ ಕಂಡುಕೊಳ್ಳಬೇಕು. ಈ ಎಲ್ಲದರಲ್ಲೂ ಕೃತಕ ಬುದ್ದಿಮತ್ತೆಯ ಸಾರ್ಥಕ ಬಳಕೆಯಾಗಬೇಕು' ಎಂದು ಅವರು ನುಡಿದರು.
ದೇಶದಾದ್ಯಂತ ಪಸರಿಸುವ ಇಪ್ಪತ್ತು ಇಂಜಿನಿಯರಿಂಗ್ ಕಾಲೇಜುಗಳಿಂದ ಒಟ್ಟು 200 ಪ್ರಾಜೆಕ್ಟ್‌ಗಳು ಸ್ಪರ್ಧಾತ್ಮಕ ಉತ್ಸವಕ್ಕೆ ಸಲ್ಲಿಕೆಯಾಗಿದ್ದವು. ಅತ್ಯಂತ ನುರಿತ ತಜ್ಞರು ಇವುಗಳನ್ನು ಪರೀಕ್ಷಿಸಿ ಕೊನೆಯ ಹಂತದ ಸ್ಪರ್ಧೆಗೆ 100 ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿದ್ದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು 9 ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರಾಜೆಕ್ಟ್ಗಳನ್ನು ನೀಡಿದ್ದಕ್ಕೆ ಪುರಸ್ಕಾರಗಳನ್ನು ಪಡೆದರು. ಅದೇರೀತಿ ವರ್ಷದ ಅತ್ಯುತ್ತಮ ಪ್ರಾಜೆಕ್ಟ್‌ಗಳ ಸಲ್ಲಿಕೆಗಾಗಿ ಮೈಸೂರಿನ ಜೆ.ಎಸ್.ಎಸ್ ವಿದ್ಯಾಲಯ ಹಾಗೂ ಬೆಂಗಳೂರು ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಪುರಸ್ಕಾರಕ್ಕೆ ಪಾತ್ರವಾದವು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ, 'ಪ್ರತಿ ಸಂಶೋಧನೆಗಳ ಪ್ರಾಜೆಕ್ಟ್‌ಗಳೂ ಅನ್ವೇಷಣೆಯನ್ನು ಆಧರಿಸಿದ ಹೊಸ ಉತ್ಪನ್ನಗಳನ್ನು ಹೊರತರುವಂತಿರಬೇಕು, ಆಗಲೇ ಅನ್ವೇಷಣೆ ಸಾರ್ಥಕ್ಯ ಪಡೆಯುತ್ತದೆ' ಎಂದರು.
ಸಿನಾಪ್ಸಿಸ್ ಸಂಸ್ಥೆಯ ಮುಖ್ಯ ಆರ್ಕಿಟೆಕ್ಟ್ ಚಂದ್ರಶೇಖರ್ ಬಿ.ಯು ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಸಂವಹನ ವಿಭಾಗದ ಮುಖ್ಯಸ್ಥ ಡಾ. ಪರಮೇಶಾಚಾರಿ ಸ್ವೀಕೃತವಾದ ಯಶಸ್ವೀ ಪ್ರಾಜೆಕ್ಟ್‌ಗಳ ಬಗ್ಗೆ ಸವಿವರ ಮಾಹಿತಿ ನೀಡಿದರು. ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್, ಪ್ರಾಧ್ಯಾಪಕರಾದ ಡಾ. ಎನ್. ರಾಜೇಶ್, ಡಾ. ತಿಮ್ಮರಾಜ ಯಾದವ್ ಹಾಗೂ ಪ್ರೊ. ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ