ಪಾದಯಾತ್ರೆ ಮೂಲಕ ಬೃಹತ್ ಮೆರವಣಿಗೆಗೆ ಸಿದ್ಧತೆ
ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಏ.4ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಅವರು ತಿಳಿಸಿದರು.
ಕೊಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಏ.4ರಂದು ಬೆಳಗ್ಗೆ ಬಂಟ್ಸ್ ಹಾಸ್ಟೆಲ್ ಪಕ್ಕದಲ್ಲಿರುವ ಲೋಕಸಭೆ ಚುನಾವಣಾ ಕಾರ್ಯಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಕಾರ್ಯಕರ್ತರು, ಬೆಂಬಲಿಗರು, ಮುಖಂಡರ ಬೃಹತ್ ಮೆರವಣಿಗೆಯೊಂದಿಗೆ ಪಕ್ಷದ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟರು ಪಾದಯಾತ್ರೆ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ ಎಂದು ಸತೀಶ್ ಕುಂಪಲ ಹೇಳಿದರು.
ಪಕ್ಷದ ಚುನಾವಣಾ ಸಿದ್ಧತೆ ಬಗ್ಗೆ ಕೆಲವು ವಿವರಗಳನ್ನು ನೀಡಿದ ಅವರು, ವಿಧಾನ ಸಭಾ ಕ್ಷೇತ್ರಗಳ ಪೈಕಿ 9 ಮಂಡಲಗಳಲ್ಲಿ61 ಮಹಾಶಕ್ತಿ ಕೇಂದ್ರದ ಸಂಘಟನಾ ವ್ಯಾಪ್ತಿಯಲ್ಲಿ ಎಲ್ಲ ಕಾರ್ಯಕರ್ತರ ಸಂಪರ್ಕ ಯಶಸ್ವಿಯಾಗಿದೆ. ಈಗಾಗಲೇ 495 ಶಕ್ತಿ ಕೇಂದ್ರಗಳನ್ನು ಯಶಸ್ವಿಯಾಗಿ ಸಂಪರ್ಕ ಮಾಡಿದ್ದೇವೆ. 1876 ಬೂತ್‌ಗಳಲ್ಲಿ ಕೂಡ ಸಭೆಗಳನ್ನು ನಡೆಸುವ ಕಾರ್ಯ ನಡೆಯುತ್ತಿದೆ. ನಮ್ಮ ಜಿಲ್ಲೆಯಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನ ಸಭಾ ಕ್ಷೇತ್ರಗಳಿಗೂ ಈಗಾಗಲೇ 8 ಮಂದಿ ಪ್ರಮುಖರನ್ನು ಪ್ರಭಾರಿಗಳನ್ನಾಗಿ ನಿಯೋಜಿಸಲಾಗಿದೆ. ಮಂಗಳೂರು ದಕ್ಷಿಣಕ್ಕೆ ರವಿಶಂಕರ ಮಿಜಾರ್, ಮಂಗಳೂರು ಉತ್ತರಕ್ಕೆ ರೂಪಾ ಡಿ. ಬಂಗೇರ, ಮೂಲ್ಕಿ ಮೂಡುಬಿದಿರೆಗೆ ಚಂದ್ರಶೇಖರ ಸಬ್ಬಲಿಗೆ, ಬೆಳ್ತಂಗಡಿಗೆ ಹರಿಕೃಷ್ಣ ಬಂಟ್ವಾಳ, ಬಂಟ್ವಾಳಕ್ಕೆ ಜಗದೀಶ್ ಶೇಣವ, ಪುತ್ತೂರಿಗೆ ಸುಲೋಚನಾ ಜಿ.ಕೆ ಭಟ್, ಸುಳ್ಯಕ್ಕೆ ಅಪ್ಪಯ್ಯ ಮಣಿಯಾಣಿ, ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ರಾಧಾಕೃಷ್ಣ ಅವರನ್ನು ಪ್ರಭಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಮಂಗಳೂರು ಉತ್ತರ, ಮೂಲ್ಕಿ -ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು ವಿಧಾನಸಭಾ ಕ್ಷೇತ್ರಗಳ ಬೂತ್ ಮಟ್ಟದ ಸಂಪರ್ಕಗಳನ್ನು ನಡೆಸಲಾಗಿದೆ. 4ನೇ ತಾರೀಕು ಲೋಕಸಭಾ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಎಲ್ಲ ಕಡೆ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆದಿದೆ. ಜಿಲ್ಲೆ ವಿವಿಧ ಪ್ರಕೋಷ್ಠಗಳ ಮೂಲಕ ವಕೀಲರ, ವೈದ್ಯರ, ವ್ಯಾಪಾರಿಗಳ, ಮೀನುಗಾರರ ಸಭೆಗಳನ್ನು ನಡೆಸಲಾಗಿದೆ. ಅಧಿಕೃತವಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು 4ರಂದು ಬೆಳ್ಗಗೆ 11 ಗಂಟೆಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೆ ಮುನ್ನ ಬಂಟ್ಸ್ ಹಾಸ್ಟೆಲಿನ ಸಮೀಪದಲ್ಲಿರುವ ಪಕ್ಷದ ಚುನಾವಣಾ ಕಾರ್ಯಾಲಯದಿಂದ ಬೆಳಗ್ಗೆ 9 ಗಂಟೆಗೆ ಕಾರ್ಯಕರ್ತರು ಬೆಂಬಲಿಗರ ಜತೆಗೆ ಬೃಹತ್ ಪಾದಯಾತ್ರೆ ನಡೆಸಲಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಬರುವ ನಿರೀಕ್ಷೆಯಲ್ಲಿದ್ದೇವೆ. ನಿರೀಕ್ಷೆಗೂ ಮೀರಿದ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸುವ ಉತ್ಸಾಹದಲ್ಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರು ವಿವರಿಸಿದರು.
ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟರ ಜತೆಗೆ ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಸಂಚಾಲಕರಾದ ಸುನಿಲ್ ಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಜಿಲ್ಲೆಯ 6 ಮಂದಿ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಈ ನಾಮಪತ್ರ ಸಲ್ಲಿಕೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮರುದಿನ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ. ಚುನಾವಣಾ ಪ್ರಚಾರಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವು ಮಂದಿ ನಾಯಕರು ಆಗಮಿಸಲಿದ್ದಾರೆ ಎಂದು ಅವರು ನುಡಿದರು.
ಏಪ್ರಿಲ್ 5ರಿಂದ ಬೂತ್ ಮಟ್ಟದಲ್ಲಿ ಮನೆ-ಮನೆ ಸಂಪರ್ಕ ಅಭಿಯಾನ ವ್ಯಾಪಕವಾಗಿ ಆರಂಭವಾಗಲಿದೆ. ಮೂರು ಹಂತದಲ್ಲಿ ಸಂಪರ್ಕ ಮಾಡುವ ಯೋಜನೆ ಇದೆ. ಏ.21ರಂದು ಮಹಾ ಅಭಿಯಾನ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸತೀಶ್ ಕುಂಪಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರು ಹಾಗೂ ಚುನಾವಣಾ ಉಸ್ತುವಾರಿಗಳಾದ ನಿತಿನ್ ಕುಮಾರ್, ಕೋಶಾಧಿಕಾರಿ ಸಂಜಯ್ ಪ್ರಭು, ರವಿಶಂಕರ ಮಿಜಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯತೀಶ್ ಅರುವಾರ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ