2024ರ ಯುಗಾದಿ ತಿಥಿ ಮತ್ತು ಮುಹೂರ್ತ
ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ ತಿಥಿ ಆರಂಭ: ಏಪ್ರಿಲ್ 08 ಮಧ್ಯಾಹ್ನ 3:20
ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ ತಿಥಿ ಅಂತ್ಯ: ಏಪ್ರಿಲ್ 09 ಮಧ್ಯಾಹ್ನ 12:00
-----------
ವೈಜ್ಞಾನಿಕ ಮತ್ತು ಖಗೋಳಿಕ ಹಿನ್ನಲೆ:
ಹೆಸರೇ ಸೂಚಿಸುವಂತೆ ಈ ಹಬ್ಬದ ಹೆಸರೇ ಯುಗಾದಿ... “ಯುಗಸ್ಯ ಆದಿಃ” ಅಂದರೆ ಯುಗದ ಆರಂಭ. ಹೊಸ ಸಂವತ್ಸರದ ಮೊದಲ ದಿನ ಎಂದಾಗುತ್ತದೆ, ಹೊಸ ವರ್ಷದ ಪ್ರಾರಂಭ ಎಂದರ್ಥ.
ಈ ದಿನದಂದೇ ವಸುಧೆ ತನ್ನನ್ನು ತಾನು ಸುತ್ತುತ್ತ ಸೂರ್ಯನ ಸುತ್ತ ಕಕ್ಷೆಯಲ್ಲಿ ತಿರುಗುವ ತನ್ನ ವಾರ್ಷಿಕ ಲೆಕ್ಕವನ್ನು ಮುಗಿಸಿ ಹೊಸ ಸುತ್ತನ್ನು ಪ್ರಾರಂಭಿಸುತ್ತಾಳೆ. ಹಾಗೇ ಭೂಮಿಯ ಉಪಗ್ರಹ ಚಂದ್ರ ಕೂಡ ಭೂಮಿಯ ಸುತ್ತ ತನ್ನ ಪಥವನ್ನು ಹೊಸತಾಗಿ ಪ್ರಾರಂಭಿಸುತ್ತಾನೆ.
1. ಅಂದರೆ
15 ದಿನಕ್ಕೆ 1 ಪಕ್ಷ ಹುಣ್ಣಿಮೆ- ಅಮವಾಸ್ಯೆ, (ಕೃಷ್ಣ, ಶುಕ್ಲ ಪಕ್ಷ), 2 ಪಕ್ಷಕ್ಕೆ 1 ಮಾಸ
(ಚೈತ್ರ, ವೈಶಾಖ,),2 ಮಾಸಕ್ಕೆ 1 ಋತು,
(ವಸಂತ, ಗ್ರೀಷ್ಮ), (ಉತ್ತರಾಯಣ, ದಕ್ಶಿಣಾಯಣ) 6 ಋತುಗಳಿಗೆ 1 ಸಂವತ್ಸರ ಇವೆಲ್ಲಾ ಅದ್ಭುತ ಲೆಕ್ಕಾಚಾರ ಎಂದು ಆಯಿತಲ್ಲವೇ…..
2. “ವಸಂತ ಋತು” ಎಂದರೆ ಅದು ನವೋಲಾಸದ ಸಂಕೇತ ಯಾಕೆಂದರೆ ಎಲೆ ಉದುರಿ ಬೋಳಾಗಿದ್ದ ಮರಗಳೆಲ್ಲ… ಹೊಸ ಚಿಗುರನ್ನು ಬಿಟ್ಟು ನಳನಳಿಸುತ್ತ…. ಭೂರಮೆಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತವೆ. ವಿಶೇಷವಾಗಿ ಮಾವು ಚಿಗುರಿ ತನ್ನ ಸುವಾಸನಾಪೂರಿತ ವಸ್ತ್ರಗಳಿಂದ ಹೊಸ ಪ್ರಪಂಚವನ್ನೇ ತೆರೆಯುತ್ತದೆ.
3. ವೈಜ್ನಾನಿಕವಾಗಿ ತಿಥಿ-, ಪಕ್ಷ-, ಮಾಸ- ಋತು,-ಸಂವತ್ಸರ ಹೀಗೆ ಎಲ್ಲವನ್ನೂ ನಮ್ಮ ಪೂರ್ವಜರು ಶತಶತಮಾನಗಳ ಹಿಂದೆಯೇ…. ಲೆಕ್ಕ ಹಾಕಿ ಪಂಚಾಂಗವನ್ನು ತಯಾರಿಸಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅವರು ಹಾಕಿಕೊಟ್ಟ ಅಧ್ಭುತ ವೈಜ್ನಾನಿಕ ದೂರದೃಷ್ಟಿ, ಅವರ ಜ್ಞಾನ ಮತ್ತು ಪ್ರಬುದ್ಧತೆಗೆ ಸಾಕ್ಷಿ.
ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು (ಪಾಡ್ಯ) ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ನೈಸರ್ಗಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ- ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.
ಐತಿಹಾಸಿಕ ಕಾರಣಗಳು: ಈ ದಿನದಂದು ರಾವಣನ ವಧೆಯಾದ ನಂತರ ಅಯೋಧ್ಯೆಗೆ ಆಗಮಿಸಿದ ಶ್ರೀರಾಮಚಂದ್ರ ಯುಗಾದಿ ದಿನದಿಂದಲೇ ನೂತನ ರಾಜ್ಯಭಾರಸೂತ್ರವನ್ನು ವಹಿಸಿಕೊಂಡನಂತೆ. ಹಾಗೂ ವಿಜಯೋತ್ಸವ ಆಚರಿಸುವಂತೆ ಮಾಡಿದನಂತೆ. ಆ ವಿಜಯದ ಸಂಕೇತವೇ ಈ ಯುಗಾದಿ ಹಬ್ಬ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದುದಾಗಿತ್ತು.
ಆಧ್ಯಾತ್ಮಿಕ ಕಾರಣಗಳು: ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು
ಚೈತ್ರ ಮಾಸಿ ಜಗದ್ಬ್ರಹ್ಮಾ ಸಸೃಜ ಪ್ರಥಮೇ ಹನಿ |
ಶುಕ್ಲಪಕ್ಷೇ ಸಮಗ್ರಂ ತು ತಥಾ ಸೂರ್ಯೋದದೇ ಸತಿ |
ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.
ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕಾರ್ಯಗಳು
ಅಭ್ಯಂಗಸ್ನಾನ: ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು.
ತೋರಣವನ್ನು ಕಟ್ಟುವುದು: ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು.
ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಶರೀರದ ಸರ್ವಾವಯವಗಳಿಗೂ ಎಣ್ಣೆ ಹಚ್ಚಿ ಮಾಡುವ ಸ್ನಾನವನ್ನು ಅಭ್ಯಂಗಸ್ನಾನವೆನ್ನುವರು. ಕೆಲವೆಡೆ, ಕಿರಿಯರೆಲ್ಲರನ್ನೂ ಒಂದೆಡೆ ಕೂಡಿಸಿ, ಅರಿಶಿನ (ಸ್ತ್ರೀಯರಿಗೆ), ಕುಂಕುಮಾದಿಗಳನ್ನು ಹಣೆಗೆ ಹಚ್ಚಿ, ನೆತ್ತಿ (ಸುಳಿಯ ಮೇಲೆ), ಮುಂಗೈ ಹಾಗೂ ಮುಂಗಾಲುಗಳ ಮೇಲೆ, ಗರಿಕೆ ಇಲ್ಲವೆ ಪುಷ್ಪ ಮುಖೇನ ಮೂರು ಮೂರು ಬಾರಿ ತೈಲವನ್ನು ಹಚ್ಚುತ್ತಾರೆ.
ಅಭ್ಯಂಗಸ್ನಾನದಿಂದ ರಜತಮೋಗುಣಗಳ ನಾಶವಾಗಿ ಸಾತ್ವಿಕಗುಣ ಉದ್ದೀಪನಗೊಳ್ಳುತ್ತದೆಂದು ಶಾಸ್ತ್ರಗಳು ಹೇಳುತ್ತವೆ.
ಈ ದಿನ ನೂತನ ವಸ್ತ್ರಧಾರಣೆ, ಪರಮಾನ್ನಾದಿ ಭಕ್ಷ್ಯವನ್ನು ದೇವರಿಗೆ ನಿವೇದಿಸಿ ನೂತನ ಪಂಚಾಂಗವನ್ನು ದೇವರಮನೆಯಲ್ಲಿ ಪಂಚಾಂಗಪಠನ-ಶ್ರವಣದೊಂದಿಗೆ ವರ್ಷದ ರಾಜ-ಮಂತ್ರಿ ಮುಂತಾದ ಸಂವತ್ಸರಫಲ ಮತ್ತು ಗ್ರಹಸ್ಥಿತಿಯನ್ನು ತಿಳಿಯಬೇಕು.
ಜೀವನದಲ್ಲಿ ಒದಗುವ ಸುಖದುಃಖಗಳ, ಕಹಿ-ಸಿಹಿಗಳ ಪ್ರತೀಕವೆನಿಸುವ ಬೇವು-ಬೆಲ್ಲಗಳನ್ನು ದೇವರಿಗೆ ನಿವೇದಿಸಿ:
ಶತಾಯುರ್ವಜ್ರದೇಹಾಯ ಸರ್ವಸಂಪತ್ಸಮೃದ್ಧಯೇ |
ಸರ್ವಾರಿಷ್ಟವಿನಾಶಾಯ ಗುಡನಿಂಬಕಭಕ್ಷಣಮ್ ||
’ಶತಾಯುಷ್ಯದ, ಗಟ್ಟಿದೇಹಕ್ಕಾಗಿ, ಸರ್ವಸಂಪತ್ಸಮೃದ್ಧಿಗಾಗಿ, ಸರ್ವಾರಿಷ್ಟನಿವೃತ್ತಿಗಾಗಿ ಬೇವು-ಬೆಲ್ಲಗಳನ್ನು ತಿನ್ನುತ್ತೇನೆ’ ಈ ಶ್ಲೋಕದ ಪಠಣದೊಂದಿಗೆ ’ಸುಖ ದುಃಖೇ ಸಮೇ ಕೃತ್ವಾ’ ಎಂಬ ಗೀತಾಚಾರ್ಯನ ಯೋಗದ ಅನುಸಂಧಾನದೊಂದಿಗೆ ಬೇವು-ಬೆಲ್ಲಗಳನ್ನು ಸ್ವೀಕರಿಸಬೇಕು.
ಹಿಂದಿನ ವರ್ಷವೆಂಬ ಕಾಲಪುರುಷನ ಮರಣ ಮತ್ತು ಹೊಸವರ್ಷದ ರೂಪದ ಶಿಶುವಿನ ಜನನಸೂಚಕ, ಈ ಸಂವತ್ಸರಾರಂಭ ಕಾಲ.
ಸಂವತ್ಸರವು ಯಜ್ಞಗಳಿಗೆ ಮೂಲ. ಅದು ಕೇವಲ ಕಾಲಪರಿಮಾಣ ಮಾತ್ರವಲ್ಲ; ಆಧ್ಯಾತ್ಮಿಕತೆಯ ಅಡಿಪಾಯವೂ ಹೌದು. ಸಂವತ್ಸರವನ್ನು ಅಶ್ವಕ್ಕೆ ಹೋಲಿಸಿ, ಒಂದು ವರ್ಷ ಪೂರ್ಣವಾಗಿ ನಡೆಯುವ ಅಶ್ವಮೇಧಯಜ್ಞ ಈ ಸಂವತ್ಸರ ಎಂದು ವೇದಗಳು ಸಾರುತ್ತವೆ.
ಎಲ್ಲರ ಜೀವನವೂ ಸುಖ-ದು:ಖ, ಲಾಭ-ನಷ್ಟ, ಮಾನ-ಅಪಮಾನ, ಜಯ-ಅಪಜಯ- ಈ ದ್ವಂದ್ವಗಳ ಸಮ್ಮಿಲನ. ಯಾರಿಗೂ ದು:ಖ, ನಷ್ಟ, ಅಪಮಾನ, ಪರಾಜಯಗಳು ಸ್ಥಿರವಲ್ಲ. ಹಾಗೆಯೇ ಸುಖ, ಲಾಭ, ಮಾನ, ಜಯಗಳು. ಇವೆಲ್ಲ ಒಂದಾದ ಮೇಲೆ ಒಂದರಂತೆ ಬಂದು ಹೋಗುತ್ತಿರುತ್ತವೆ.
ಆದ್ದರಿಂದ ಮಾನವನು ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ, ಈ ದ್ವಂದ್ವಗಳನ್ನು ಜಯಿಸಿ, ಸಮತೆ ಸಾಧಿಸಬೇಕು; ಸ್ಥಿತಪ್ರಜ್ಞನಾಗಬೇಕು- ಇದು ಯುಗಾದಿಯ ಬೇವು-ಬೆಲ್ಲಗಳ ಸಂದೇಶ.
- ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
8548998564
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ