ವಿಶ್ವ ಮಹಿಳಾ ದಿನಾಚರಣೆ: ನಾಟ್ಯರಂಗ ಪುತ್ತೂರು ವತಿಯಿಂದ ಕಲಾ ಮಾತು- ನೃತ್ಯ ಸಾಂಗತ್ಯ

Upayuktha
0


ಪುತ್ತೂರು: ವಿದುಷಿ ಮಂಜುಳಾ ಸುಬ್ರಮಣ್ಯ ಇವರ ನಿರ್ದೇಶನದಲ್ಲಿ ನಡೆಯುತ್ತಿರುವ ಪುತ್ತೂರಿನ ನಾಟ್ಯಶಾಲೆ ನಾಟ್ಯ ರಂಗವು ಆಯೋಜಿಸಿದ ಕಲಾ ಮಾತಿನ ವೇದಿಕೆಯಲ್ಲಿ ವಿದುಷಿ ಪಾರ್ವತಿ ಗಣೇಶ ಭಟ್ ಹೊಸಮೂಲೆ ಇವರು ದೇವರ ನಾಮ, ಗೀಗೀಪದ, ಲಾವಣಿ ತತ್ವಪದಗಳನ್ನು ಹಾಡುತ್ತಾ, ತಮ್ಮ ಕಲಾ ಪಯಣದ ಹಾದಿಯ ಪರಿಚಯವನ್ನು ಪ್ರೇಕ್ಷಕರ ಜೊತೆ ಹಂಚಿಕೊಂಡರು 


ನಂತರ ಪುತ್ತೂರು ವಿವೇಕಾನಂದ ಪ್ರಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶೋಭಿತ ಸತೀಶ್ ಇವರು ಕಲಾ ಪ್ರಜ್ಞೆ ಮತ್ತು ತೊಡಗಿಕೊಳ್ಳುವಿಕೆಗೆ ವಯಸ್ಸಿನ ಮಿತಿ ಇರುವುದಿಲ್ಲ. ನಮ್ಮ ಸ್ವಖುಷಿಗಾಗಿ ನಾವು ಕಲಾ ಅಭ್ಯಾಸವನ್ನು ರೂಡಿಸಿಕೊಳ್ಳಬೇಕಿದೆ ಎಂದು ತಿಳಿಸುತ್ತಾ ಶಾಸ್ತ್ರೀಯ ನೃತ್ಯ, ಭಾವಾಭಿನಯವನ್ನು ಪ್ರಸ್ತುತಪಡಿಸಿದರು.



ಯಕ್ಷಗಾನ ತಾಳಮದ್ದಲೆ ಅರ್ಥ ಧಾರಿಯಾಗಿರುವ ಶ್ರೀಮತಿ ಶುಭ ಅಡಿಗ ಇವರು ಪೌರಾಣಿಕ ಪಾತ್ರಗಳಾದ ಅಂಬೆ, ಹಿಡಿಂಬೆ ಹಾಗೂ ಲಕ್ಷ್ಮಣನ ಪಾತ್ರಗಳ ಪ್ರಸ್ತುತಿಯೊಂದಿಗೆ ತಾಳಮದ್ದಲೆ ಕ್ಷೇತ್ರದಲ್ಲಿ ತಾವು ಬೆಳೆದು ಬಂದ ಬಗೆಯನ್ನು ತಿಳಿಸಿದರು. ನಾಟ್ಯರಂಗದ ನೃತ್ಯ ಗುರುಗಳೂ, ಶಾಸ್ತ್ರೀಯ ಮತ್ತು ರಂಗಭೂಮಿಯ ಸೃಜನಶೀಲ ಸಾಧ್ಯತೆಗಳನ್ನು ತಮ್ಮ ಪ್ರಯೋಗಗಳಲ್ಲಿ ಅಳವಡಿಸಿಕೊಂಡಿರುವ ಮಂಜುಳಾ ಸುಬ್ರಹ್ಮಣ್ಯ ಇವರು ರಾಧೆ, ಊರ್ಮಿಳೆ ಹಾಗೂ ಲೇಡಿ ಮ್ಯಾಕ್ ಬೆಥ್ ರಂಗ ಪ್ರಯೋಗಗಳನ್ನು ಪ್ರಸ್ತುತಪಡಿಸುತ್ತಾ ತನ್ನೆಲ್ಲ ಮಾತು, ಭಾವನೆಗಳು ಹಾಗೂ ಯೋಚನೆಗಳನ್ನು ತನ್ನವರೊಂದಿಗೆ ಮತ್ತು ಪ್ರಕೃತಿಯೊಂದಿಗೆ ತಾದಾತ್ಮ್ಯ ಗೊಳಿಸಿದ ಹೆಣ್ಣಿನ ಸ್ವಭಾವವು ಅವಳನ್ನು ಬದುಕಿನಲ್ಲಿ ಗಟ್ಟಿಗೊಳಿಸಬೇಕಿದೆ ಎಂದರು.

 


ಸಮನ್ವಯ ಹಾಗೂ ಸಮಾಪನ ಮಾತುಗಳಿಗಾಗಿ ಆಹ್ವಾನಿತರಾದ ಪುತ್ತೂರಿನ ಪ್ರಗತಿ ಆಸ್ಪತ್ರೆಯ ನಿರ್ವಹಣಾಧಿಕಾರಿಗಳಾದ ಡಾ. ಸುಧಾ ಶ್ರೀಪತಿ ರಾವ್ ಅವರು, ಮಹಿಳಾ ಕಲಾವಿದರ ವಿಭಿನ್ನ ಹಾಗೂ ವೈವಿಧ್ಯಮಯ ಪಾತ್ರ ಪ್ರಸ್ತುತಿಯಲ್ಲಿ ಇದ್ದಂತಹ ಸೂಕ್ಷ್ಮತೆಗಳು, ಬೆರಗು, ಶ್ರಮ ಹಾಗೂ ಧನಾತ್ಮಕ ಆಲೋಚನೆಗಳನ್ನು ಉಲ್ಲೇಖಿಸುತ್ತಾ ಕಲಾ ಗುಣಾತ್ಮಕತೆ ಎಲ್ಲೆಡೆಯಿಂದ ನಮ್ಮಲ್ಲಿಗೆ ಹರಿದು ಬರುವಂತಾಗಲಿ. ಇಲ್ಲಿ ಮೇಲು- ಕೀಳು, ಹೆಚ್ಚು- ಕಡಿಮೆ ಅನ್ನುವ ಭಾವಕ್ಕಿಂತಲೂ ಬಂದಂತಹ ಸವಾಲುಗಳನ್ನು ನಿರ್ವಹಿಸುವ ಶಕ್ತಿ ಹೊಂದಿರುವ ಹೆಣ್ಣು ಈ ಬಗೆಯ ಕಲಾ ಪ್ರಕಾರಗಳಲ್ಲಿ ತೊಡಗಿಕೊಳ್ಳಬೇಕಾದ ಅಗತ್ಯವನ್ನು ತಿಳಿಸಿದರು.


ಅನಂತರ ನಾಟ್ಯರಂಗದ ಮಹಿಳಾ ಕಲಾವಿದರಾದ ವಿನಿತಾ ಶೆಟ್ಟಿ, ವೀಣಾ ಪ್ರತಾಪ ಸಿಂಹ ವರ್ಮ, ಸೋನಾ ಪ್ರದೀಪ್, ಸುಪ್ರಭಾ ದಾಮೋದರ, ಮಂಜುಳಾ ಎಚ್ ಗೌಡ, ರಶ್ಮಿ ಪೂರ್ಣೇಶ್, ಶಶಿಕಲಾ ಎ ಶೆಟ್ಟಿ ಇವರಿಂದ ನೃತ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು.


ನಾಟ್ಯರಂಗದ ಪೋಷಕರಾದ ಆಶಾ ಬೆಳ್ಳಾರೆ ಹಾಗೂ ಅವನಿ ಕಾರ್ಯಕ್ರಮ ನಿರ್ವಹಿಸಿದರು. ಅಭ್ಯಾತರನ್ನು ಹಾಗೂ ಪ್ರೇಕ್ಷಕರನ್ನು ಮಂಜುಳಾ ಸುಬ್ರಮಣ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಸಾಧನದಲ್ಲಿ ಶಿವರಾಂ ಕಲ್ಮಡ್ಕ, ಬೆಳಕಿನ ನಿರ್ವಹಣೆಯಲ್ಲಿ ಪ್ರವೀಣ್ ಹಾಗೂ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಜನಾರ್ದನ ಪುತ್ತೂರು ಇವರು ಸಹಕರಿಸಿದರು. ನಾಟ್ಯರಂಗದ ಹಿರಿಕಿರಿಯ ಕಲಾವಿದರು ಹಾಗೂ ಪೋಷಕರು ಕಾರ್ಯಕ್ರಮದ ಒಟ್ಟು ವ್ಯವಸ್ಥಾ ನಿರ್ವಹಣೆಯಲ್ಲಿ ಭಾಗಿಯಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top