ದ.ಕ. ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ
ಮಂಗಳೂರು: 'ನಾಡಿನ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಳಗಿ ನಮ್ಮನ್ನಗಲಿ ಹೋದ ಸಾಧಕರನ್ನು ಕೇವಲ ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದರೆ ಸಾಲದು; ಅವರ ನೆನಪಿನೊಂದಿಗೆ ಅಂಥವರ ಸಾಧನೆಗಳನ್ನೂ ದಾಖಲಿಸುವಂತಾಗಬೇಕು. ಕಣ್ಮರೆಯಾದ ವಿದ್ವಾಂಸರ ಅಪ್ರಕಟಿತ ಕೃತಿಗಳನ್ನು ಪ್ರಕಟಿಸಿ ನಮ್ಮ ಸಂಸ್ಕೃತಿ ಸೌಧದ ಉಗ್ರಾಣವನ್ನು ತುಂಬಬೇಕು' ಎಂದು ಕರ್ನಾಟಕ ಜಾನಪದ- ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಿದ ದ.ಕ. ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾರ್ಚ್ 23ರಂದು ದಿನದ ಕೊನೆಯ ಗೋಷ್ಠಿಯಲ್ಲಿ ಪ್ರಧಾನ ಉಪನ್ಯಾಸ ನೀಡಿದ ಅವರು ಈಚೆಗೆ ನಿಧನರಾದ ಕರಾವಳಿಯ ಹಿರಿಯ ಸಾಧಕರನ್ನು ಸ್ಮರಿಸಿ ಮಾತನಾಡಿದರು.
ಅಗಲಿದ ಹಿರಿಯ ಜಾನಪದ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ, ಕಾದಂಬರಿಕಾರ ಕೆ.ಟಿ. ಗಟ್ಟಿ, ಶತಾಯುಷಿ ಮಿಜಾರು ಗುತ್ತು ಆನಂದ ಆಳ್ವ, ಕಥೆಗಾರ ಕೇಶವ ಕುಡ್ಲ, ಯಕ್ಷಗಾನ ರಂಗಸ್ಥಳದ ರಾಜ ಪೆರುವಾಯಿ ನಾರಾಯಣ ಶೆಟ್ಟಿ, ಪತ್ರಕರ್ತ ಮನೋಹರ ಪ್ರಸಾದ್, ರಂಗನಟ ವಿ.ಜಿ. ಪಾಲ್ ಮತ್ತು ಲೇಖಕ ನಾ.ಉಜಿರೆ ಅವರ ವಿಭಿನ್ನ ಬಗೆಯ ಸಾಧನೆಗಳನ್ನು ಪರಿಚಯಿಸಿದ ಭಾಸ್ಕರ ರೈ ಕುಕ್ಕುವಳ್ಳಿ ಅವರೆಲ್ಲರಿಗೂ ನುಡಿ ನಮನ ಸಲ್ಲಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದು ಉಪನ್ಯಾಸಕಾರರನ್ನು ಗೌರವಿಸಿದರು.
ಪರಿಷತ್ ಸದಸ್ಯ ಯು.ಸುಬ್ರಾಯ ಭಟ್ ಸ್ವಾಗತಿಸಿ, ವಂದಿಸಿದರು. ಬಳಿಕ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಬಳಗದವರಿಂದ ಪ್ರೊ. ಅಮೃತ ಸೋಮೇಶ್ವರ ವಿರಚಿತ 'ಸಪ್ತ ಮಾತೃಕೆಯರು' ನೃತ್ಯ ರೂಪಕ ಪ್ರದರ್ಶನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ