ಪಣಜಿ: ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆಗೈಯ್ಯುತ್ತಿದ್ದಾರೆ. ಪುರುಷರಿಗೆ ಸರಿಸಮಾನರಾಗಿ ಇಂದು ಮಹಿಳೆಯರು ದುಡಿಯುತ್ತಿದ್ದಾರೆ. ಮಹಿಳೆ ಮತ್ತು ಪುರುಷರು ಸಮಾಜದಲ್ಲಿ ಸರಿಸಮಾನರಾಗಿ ಜೋಡೆತ್ತಿನಂತೆ ಸಾಗಬೇಕು. ಮಹಿಳೆ ಅಥವಾ ಪುರುಷ ಇವರಲ್ಲಿ ಯಾರೊಬ್ಬರಿಗೂ ಅಹಂ ಎಂಬುದು ಬರಬಾರದು. ಅಂದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಇಂದು ಹೊರನಾಡ ಗೋವಾದಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಸಮಾಜದ ಮುಖಾಂತರ ಇಷ್ಟೊಂದು ಸುಂದರವಾಗಿ ಮಹಿಳಾ ದಿನಾಚರಣೆ ಆಯೋಜಿಸಿರುವುದು ಶ್ಲಾಘನೀಯ ಸಂಗತಿ ಎಂದು ಕರ್ನಾಟಕ ವಿಧಾನ ಪರಿಷತ್ ಸಚಿವಾಲಯ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ನುಡಿದರು.
ಗೋವಾ ಕನ್ನಡ ಸಮಾಜ ಪಣಜಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಪಣಜಿಯ ಮೆನೆಜಿಸ್ ಬ್ರಗಾಂಜಾ ಸಭಾಗೃಹದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಇಂದು ಮಹಿಳೆಯರು ಪುರುಷರ ಸರಿಸಮಾನರಾಗಿದ್ದಾರೆ. ಆದರೆ ಈ ಹಿಂದೆ ಪರಿಸ್ಥಿತಿ ಇರಲಿಲ್ಲ. ಅಂದು ಮಹಿಳೆ ಕೆಲಸಕ್ಕೆ ಹೋದರೂ ಕೂಡ ಅತ್ಯಂಕ ಕಡಿಮೆ ವೇತನ ನೀಡಲಾಗುತ್ತಿತ್ತು. ಮಹಿಳೆ ಮತ್ತು ಪುರುಷ ಇವರಿಬ್ಬರಲ್ಲಿ ಯಾರಿಗೂ ಹೆಚ್ಚು ಕಡಿಮೆ ಎಂಬ ಬೇಧಭಾವ-ಅಹಂ ಇರಬಾರದು ಎಂದು ಕೆ.ಆರ್.ಮಹಾಲಕ್ಷ್ಮೀ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಕೊರ್ಲಿಂ ಮಾಪ್ಸಾದ ಎಸ್.ಇ.ಎಸ್.ಎಸ್ ಶ್ರೀದೋರ ಕಾಕುಲೊ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‍ಮೆಂಟ್‍ನ ಸಹಾಯಕ ಪ್ರಾಧ್ಯಾಪಕ ಡಾ.ಅಮಿತ್ ಶಾನಭೋಗ್, ಗೌರವ ಅತಿಥಿಯಾಗಿ ಪತ್ರಕರ್ತ ಗೊರೂರು ಪಂಕಜ, ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಉಪಾಧ್ಯಕ್ಷೆ ಸುಮತಿ ಜವಳಿ, ಕಾರ್ಯದರ್ಶಿ ಅರುಣಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಜೀವ ಕುಲಕರ್ಣಿ, ಸುಮಿತ್ ಕುಲಕರ್ಣಿ ದಂಪತಿಗಳಿಗೆ ಗೌರವ ಸತ್ಕಾರ ಮಾಡಲಾಯಿತು.
ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷೆ ಸುಮತಿ ಜವಳಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಅಖಿಲಾ ಕುರಂದವಾಡ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಅರುಣಕುಮಾರ ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ನಂತರ ಗೋವಾ ಕನ್ನಡ ಸಮಾಜದ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ