ಮನೆ ಬಿಟ್ಟು ಊರು ಬಿಟ್ಟು , ಮನೆಯವರಿಂದ ತಂದೆ ತಾಯಿ ಅಕ್ಕ ತಂಗಿಯಿಂದ ದೂರವಿರಲು ಯಾರಿಗೆ ತಾನೇ ಇಷ್ಟ ಹೇಳಿ...?
ವಿಧ್ಯಾಭ್ಯಾಸ, ವ್ಯಾಪಾರ, ಕನಸುಗಳ ಈಡೇರಿಕೆಗೆ, ನೌಕರಿಗಾಗಿ ಇಷ್ಟ ಕಷ್ಟಗಳನ್ನು ಬದಿಗಿಟ್ಟು ಬದುಕಿನ ಬಂಟಿ ಸಾಗಿಸಲು, ಹೆತ್ತವರು ಹೊಟ್ಟೆ ಬಟ್ಟೆ ಕಟ್ಟಿ ಓದಿಸಿದಕ್ಕಾದರೂ ವಿಧ್ಯಾಭ್ಯಾಸ, ನೌಕರಿಗೆಂದು ಊರು ತೊರೆಯುವವರೇನು ಕಡಿಮೆಯಿಲ್ಲ..
ಹೀಗೆ ನಾನೂ ವಿದ್ಯಾಭ್ಯಾಸ ,ನೌಕರಿಯೆಂದು ಮನೆ ತೊರೆದು ಬರೋಬ್ಬರಿ ಹದಿನೇಳು ವರ್ಷಗಳು ಕಳೆದಿವೆ..
ವರ್ಷಗಳು ಉರುಳಿದಂತೆ ಮನೆಯಿಂದ ಪರ ಊರಿಗೆ, ಪರ ಊರಿನಿಂದ ಮನೆಗೆ ಹೀಗೆ ಹಲವಾರು ಬಾರಿ ಓಡಾಟವೂ ನಡೆದಿದೆ... ವಿಧ್ಯಾಭ್ಯಾಸ, ನೌಕರಿಗಾಗಿ ಊರುಗಳು ಬದಲಾದರೂ ಹದಿನೇಳು ವರ್ಷಗಳಿಂದ ಬದಲಾಗದೇ ಉಳಿದ ಪದ್ದತಿಯೆಂದರೆ ಆಗಾಗ ಊರಿನ ಬಸ್ಸಿಗೆ ಮನೆ ಊಟ ಕಳುಹಿಸಿಕೊಡುವ ಅಮ್ಮನ ಅಭ್ಯಾಸ.
ಹಾಸ್ಟೆಲ್, ಪಿಜಿ ,ರೂಮ್ ಮಾಡಿಕೊಂಡಿರುವವರಿಗೆ ಈ ಊಟದ ಗಂಟಿನ ಮಹತ್ವ ನಿಜವಾಗಿಯೂ ತಿಳಿದಿರುತ್ತದೆ.
ಪ್ರತಿ ಬಾರಿಯೂ ಊರಿನಿಂದ ಕರೆ ಬಂದಾಗ ಎಲ್ಲರೂ ಬರುವಾಗ ನನಗೇನಾದರೂ ತೆಗೆದುಕೊಂಡು ಬಾ ಎಂದು ಹೇಳುವವರೇ.. ಆದರೆ ನನ್ನಮ್ಮ, ಸುಖಾಸುಮ್ಮನೆ ಹಣ ಖರ್ಚು ಮಾಡಬೇಡ. ನೀನು ನನಗೇನೂ ತರುವುದು ಬೇಡ. ಅಂದ ಹಾಗೆ ಕೆಲಸ ಮುಗಿದ ನಂತರ ಸಂಜೆ ಬಸ್ಸಿಗೆ ಹೊರಟುಬಿಡು ಎಂದಾಗ ಯಾಕೆ ಎಂದು ಪ್ರಶ್ನಿಸಿದರೆ ಆಕೆಯ ಉತ್ತರ ಮಜವಾಗಿರುತ್ತೆ.... "ಊಟ ಮಾಡಿಕೊಂಡು ಬೆಳಿಗ್ಗೆ ಮೊದಲ ಬಸ್ಸಿಗೇ ಹೋಗುವಂತೆ ನಿನ್ನ ಕೆಲಸಕ್ಕೆ ತೊಂದರೆಯಾಗಲ್ಲ."
ಹೌದ್ ಹೌದು ನಾಲ್ಕು ತುತ್ತು ಊಟ ಮಾಡೋದಿಕ್ಕೆ ನೂರೈವತ್ತು ಕೀಲೋ ಮೀಟರ್ ಪ್ರಯಾಣ ಮಾಡಬೇಕಾ ನಾನು ಎಂದು ಹೇಳಿ ಆಕೆಯ ಈ ಮಾತಿಗೆ ಅದೆಷ್ಟು ಬಾರಿ ನಕ್ಕಿದ್ದೇನೋ ನನಗೇ ತಿಳಿಯದು.
ಓದು, ಕೆಲಸದ ಒತ್ತಡದ ನಡುವೆ ಏಳು ತಿಂಗಳಿಂದ ಮನೆಯೆಡೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಹಾಸ್ಟೆಲ್ ನಲ್ಲಿ ಹೋಟೆಲ್ , ಮೆಸ್ ಗಳಲ್ಲಿ ಊಟ ತಿಂಡಿ ತಿಂದು ರೋಸಿಹೋದ ನನಗೆ ಅಮ್ಮ ಅದೆಷ್ಟು ಬಾರಿ ಬಸ್ಸಿಗೆ ಎನಾದರೂ ಕೊಟ್ಟು ಕಳುಹಿಸಲಾ ಎಂದ ಮಾತು ನೆನಪಾಯಿತು.
ಪ್ರತಿ ದಿನದಂತೆ ಪೋನಾಯಿಸಿದೆ.... ನಾಳೆ ಎನಾದರೂ ಕೊಟ್ಟು ಕಳುಹಿಸಲು ಸಾಧ್ಯವಾ ಎಂದೆ.. ಸಾಮಾನ್ಯವಾಗಿ ಮನೆಯಿಂದ ಎನಾದರೂ ಕೊಟ್ಟು ಕಳುಹಿಸುವ ವಿಚಾರ ಬಂದಾಗ ತಿರಸ್ಕರಿಸುವ ನಾನು.. ನಾನೇ ಮುಂದಾಗಿ ಹೇಳಿದ್ದು ಕೇಳಿಸಿಕೊಂಡ ಆಕೆ ನಾನು ಏನು ಹೇಳುತ್ತಿದ್ದೇನೆ ಎಂದು ಮೂರ್ನಾಲ್ಕು ಬಾರಿ ಕೇಳಿ ಖಾತ್ರಿ ಮಾಡಿಕೊಂಡು, ಇವತ್ತು ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ದಾನಾ ಎಂದಳು...
ಅದೇನೇ ಇರಲಿ, ನಾಳೆ ಬಸ್ಸಿಗೆ ಮನೆ ಊಟ ಬಂದು ಬಿಡಬೇಕು ಎಂದು ಹೇಳಿದೆ... ಬೆಳಿಗ್ಗೆ ಸರಿ ಸುಮಾರು 10:30ಕ್ಕೆ ಬಸ್ ಹೊರಡುತ್ತೆ. ನೀನು 10 ಗಂಟೆಗೆ ಬಸ್ ಸ್ಟ್ಯಾಂಡ್ ನಲ್ಲಿ ಇದ್ದರೆ ಸಾಕು ಎಂದೆ...
ಆ ರಾತ್ರಿ ಆಕೆ ಸರಿಯಾಗಿ ನಿದ್ರೆ ಮಾಡಿರಲಿಲ್ಲ.. ಏನೇನು ಮಾಡಿ ಕಳಿಸಬೇಕು ? ಯಾವ ಚೀಲದಲ್ಲಿ ಕೊಟ್ಟು ಕಳಿಸಬೇಕು ಅನ್ನುವ ಯೋಚನೆಯಲ್ಲಿದ್ದಳು ಎಂದು ಅದಾಗಲೇ ಮನೆಯಲ್ಲಿನ ವರದಿಗಾರರು ನನಗೆ ವರದಿ ನೀಡಿದ್ದರು.. ಊಟದ ಗಂಟು ಹಿಡಿದು ಬಸ್ ನಿಲ್ದಾಣಕ್ಕೆ ಬಂದು ಫೋನಾಯಿಸಿದಳು... ಇಲ್ಲಿ ಮೂರು ಬಸ್ ಗಳಿಗೆ ಯಾವುದಕ್ಕೆ ಕೊಡಲಿ ಎಂದಳು... ಶಿವಮೊಗ್ಗಕ್ಕೆ ಹೊರಡುವ ಹಸಿರು ಬಣ್ಣದ ಎಂಎಂಎಸ್ ಬಸ್ ಎಂದರೆ ಯಾರಾದರೂ ಹೇಳುತ್ತಾರೆ. ಹಣ ಕೊಡಬೇಡ. ನಾನೇ ಕೊಡುತ್ತೇನೆ... ಊಟದ ಗಂಟು ತಲುಪಿದ ತಕ್ಷಣ ತಿಳಿಸುವೆ ಎಂದೆ.....
ಬಸ್ಸಿಗೆ ಊಟದ ಗಂಟು ಕೊಟ್ಟ ನಂತರ ಒಂದು ಪೋನ್ ಬಂತು. ಬಸ್ ಸರಿಯಾಗಿ 1:50 ಕ್ಕೆ ಬಸ್ ನಿಲ್ದಾಣಕ್ಕೆ ಹೋಗುತ್ತದ್ದಂತೆ.. ನೀನು ಸರಿಯಾಗಿ ಅರ್ಧ ಗಂಟೆ ಮುಂಚೆ ಅಲ್ಲಿರು. ಲೇಟ್ ಮಾಡ್ಕೋ ಬೇಡ ಅಂದಳು.. ಹುಂಗುಟ್ಟಿದೆ.
ಕೆಲಸದ ಮಧ್ಯೆ ಪದೇ ಪದೇ ಪೋನ್ ಬರುತ್ತಿದ್ದದ್ದು ಕಂಡು ಸಿಟ್ಟು ನೆತ್ತಿಗೇರಿತ್ತು....
ಆಮೇಲೆ ಸರಿಯಾಗಿ 10:30ಕ್ಕೆ ಮತ್ತೋಮ್ಮೆ ಪೋನ್ ಬಂತು.. ಈಗ ಅತಿಯಾಯಿತು ಎಂದು ಸಿಟ್ಟಿನಿಂದಲೇ ಪೋನ್ ಎತ್ತಿದೆ.. ಹೇಳು ಅದೆಷ್ಟು ಸಲ ಫೋನ್ ಮಾಡೋದು ? ಊಟದ ಗಂಟು ತಲುಪಿದ ತಕ್ಷಣ ಫೋನ್ ಮಾಡುತ್ತೇನೆಂದು ಹೇಳಿದ್ದೇನಲ್ಲಾ ಎಂದು ರೇಗುವಷ್ಟರಲ್ಲೇ ಬಸ್ ಹಾರ್ನ್ ಸದ್ದಾಯಿತು.. ಇನ್ನು ಬಸ್ ನಿಲ್ದಾಣದಲ್ಲೇ ಏನು ಮಾಡುತ್ತಿದ್ದಿಯಾ ಎಂದು ಕೇಳಿದೆ...
"ಏನಿಲ್ಲ ? ಊಟದ ಗಂಟನ್ನು 9 ಗಂಟೆಗೆ ಬಸ್ ಡ್ರೈವರ್ ಗೆ ಕೊಟ್ಟಿದ್ದೆ... ನಾನು ಆ ಕಡೆ ಹೋದ ನಂತರ ಈ ಕಡೆಯಿಂದ ಬಸ್ ಬೇರೆಡೆಗೆ ಹೋದರೆ ಎಂದು ಬಸ್ ಶಿವಮೊಗ್ಗ ರೋಡ್ ಗೆ ಹೋಗೋದನ್ನೇ ನೋಡುತ್ತಾ ನಿಂತಿದ್ದೆ ಅಂದಳು..... ಅಷ್ಟರಲ್ಲೇ ನನ್ನ ಸಿಟ್ಟೆಲ್ಲಾ ಕಡಿಮೆಯಾಗಿ ನನಗೇ ತಿಳಿಯದೇ ಗಲ್ಲದ ಮೇಲೆ ಕಣ್ಣೀರು ನಿಂತಿತ್ತು... ಯಾರಿಗೂ ತಿಳಿಯದ ಹಾಗೇ ಕಣ್ಣೋರೆಸಿಕೊಂಡು ಕೆಲಸ ಮುಂದುವರೆಸಿದೆ...
ಒಂದು ಗಂಟೆಯಾಗುತ್ತಿದ್ದಂತೆಯೇ ಮತ್ತದೇ ಪೋನ್...ಬಸ್ ನಿಲ್ದಾಣಕ್ಕೆ ಹೋಗಿ ಊಟದ ಗಂಟು ತರುವವರೆಗೂ ಅಮ್ಮನ ಕಾಟ ತಪ್ಪಿದ್ದಲ್ಲ ಎಂದು ಬಸ್ ನಿಲ್ದಾಣಕ್ಕೆ ಹೋದೆ...
ಈ ಶಿವಮೊಗ್ಗ ಬಸ್ ನಿಲ್ದಾಣವೋ... ಅಬ್ಬಬ್ಬಾ ಅದೆಷ್ಟು ಬಸ್ ಗಳು, ಅದರಲ್ಲೂ ಒಂದೇ ಬಣ್ಣದ ಬಸ್ ಗಳು ಲೆಕ್ಕವೇ ಇಲ್ಲ.... ಬಂದ ಬಂದ ಬಸ್ ಗಳ ಹಿಂದೆ ಓಡುವುದು, ಅದರ ಮಧ್ಯದಲ್ಲಿ ಗಾಡಿಗಳ ಕರ್ಕಶ ಶಬ್ದ, ದೂಳೂ, ಎಲ್ಲಿ ಬಸ್ ಮಿಸ್ ಆಗಿ ಬಿಟ್ಟರೆ ನನ್ನ ಗತಿಯೇನು? ಅಮ್ಮನ ಹತ್ತಿರ ಉಳಿಗಾಲವಿಲ್ಲ .. ಬಸ್ ಇನ್ನೂ ಎಲ್ಲಿರಬಹುದು... ನಮ್ಮೂರಿನ ಬಸ್ ನಂಗೆ ಸಿಗದೇ ಹೋದರೆ? ಹೀಗೇ ಹಲವಾರು ಪ್ರಶ್ನೆಗಳು ತಲೆಯನ್ನ ಸುತ್ತುವರಿದಿದ್ದವು...
ಅಷ್ಟರಲ್ಲೇ ದೂರದಲ್ಲಿ ನಮ್ಮೂರಿನ ಬಸ್ ಕಣ್ಣಿಗೆ ಕಾಣುತ್ತಿದ್ದಂತೆಯೇ ಮನಸ್ಸಿಗೆ ಒಂದಷ್ಟು ಸಮಾಧಾನ ಸಿಕ್ಕಿತು...
ಡ್ರೈವರ್ ಗೆ ಹಣ ನೀಡಲು ಮುಂದಾದೆ.. ಅದಾಗಲೇ ಅಮ್ಮ ಹಣವನ್ನು ನೀಡಿದ್ದಳು. ಅಮ್ಮನಿಗೆ ಕರೆ ಮಾಡಿ ಊಟದ ಗಂಟು ಸಿಕ್ಕ ವಿಷಯವನ್ನು ತಿಳಿಸಿದ್ದೂ ಆಯಿತು.
ನನ್ನಿಂದ ಎತ್ತಲೂ ಅಸಾಧ್ಯವಾದ ಆ ಭಾರಿ ಗಾತ್ರದ ಊಟದ ಗಂಟನ್ನು ತೆಗೆದುಕೊಂಡು ರೂಂ ಸೇರುವಷ್ಟದಲ್ಲಿ ಸಾಕು ಸಾಕಾಗಿ ಹೋಗಿತ್ತು...
ಊಟದ ಗಂಟು ಬಿಚ್ಚುತ್ತಿದ್ದಂತೇಯೇ ರೋಟಿ, ಎಣಗಾಯಿ ಪಲ್ಯ , ನನ್ನಿಷ್ಟದ ಚಿತ್ರಾನ್ನ, ಬಗೆ ಬಗೆಯ ಉಪ್ಪಿನ ಕಾಯಿ, ಮನೆಯ ಹಿತ್ತಲ ಮಾವಿನ ಕಾಯಿ, ಚಿಕ್ಕು ಹಣ್ಣು, ಬಾದಾಮಿ ,ಗೋಡಂಬಿ, ಸಾಂಬಾರ್, ಹೋಳಿಗೆ, ಒಂದು ಬಾಟಲ್ ನಲ್ಲಿ ಹಾಲು, ಸಂಡಿಗೆ , ಹಪ್ಪಳ, ಹೆಸರೇ ಗೊತ್ತಿಲ್ಲದ ಚಟ್ನಿ ಪುಡಿಗಳು, ಹೋಳಿಗೆಗಾಗಿಯೇ ತುಪ್ಪ , ಇದಲ್ಲದೇ ಶಾಂಪೂ, ಸೋಪು, ತೆಂಗಿನೆಣ್ಣೆಯೂ ಇತ್ತು....ನಾನು ಬಕಾಸುರಿ ಎಂದುಕೊಂಡು ಬಿಟ್ಟಿದ್ದಾಳೆನೋ ನನ್ನಮ್ಮ ಎಂದು ಭಾವಿಸಿದೆ.
ತಿನ್ನಬೇಕು ಎನಿಸಿದೆಲ್ಲವನ್ನೂ ತಟ್ಟೆಗೆ ಹಾಕಿಕೊಂಡು ಕುಳಿತಿದ್ದೆ.. ಊಟದ ಡಬ್ಬಿಯ ಪಕ್ಕ ಒಂದು ಕರ್ಚೀಫ್ ಕಂಡಿತು. ತೆಗೆದು ನೋಡಿದೆ.. ಒಂದು ಕರ್ಚೀಫ್ ನೊಳಗೊಂದು ಇನ್ನೊಂದು ಕರ್ಚೀಫ್. ಅದರೊಳಗೊಂದು ಪ್ಲಾಸ್ಟಿಕ್ ಕವರ್ ಅದರಲ್ಲಿ ಸಿಕ್ಕಿದ್ದು, ಮುದುಡಿದ ಐನೂರರ ಎರಡು ನೋಟುಗಳು...... ಮುಖದ ಮೇಲೆ ಮಂದಹಾಸವೋಂದು ಮೂಡಿತ್ತು.
ನಾನೇ ದುಡಿದು ಹಣ ನೀಡಬೇಕಾದ ಈ ಸಂದರ್ಭದಲ್ಲೂ ಮುಚ್ಚಟೆಯಿಂದ ಕೂಡಿಟ್ಟ ಹಣವನ್ನು ನನಗಾಗಿ ಊಟದ ಗಂಟಿನಲ್ಲಿ ಜತನದಿಂದ ಮಡಗಿದ್ದಳು ನನ್ನಮ್ಮ....
ಅಷ್ಟರಲ್ಲೇ ತಂಗಿಯ ಕರೆ ಬಂದಿತ್ತು...
ಹೇಳೆ ? ನೆಮ್ಮದಿಯಿಂದ ತಿನ್ನೋದಿಕ್ಕೂ ಬಿಡಲ್ಲ ಎಂದು ಗೊಣಗಾಡುವಾಗ ಫೋನಿನ ಆ ತುದಿಯಲ್ಲಿದ್ದ ತಂಗಿ, ಇವತ್ತು ಒಂದು ಆಶ್ಚರ್ಯ ನಡೆದಿದೆ... ನಿನಗೆ ಊಟದ ಗಂಟು ಕೊಡೋದಿಕ್ಕೆ ಅಂತಾ ಅಮ್ಮ ಆಟೋದಲ್ಲಿ ಬಸ್ ನಿಲ್ದಾಣಕ್ಕೆ ಹೋಗಿದ್ದಳು. ಅದೂ ಹತ್ತು ರೂಪಾಯಿ ಜಾಸ್ತಿ ಕೊಟ್ಟಿದ್ದಾಳೆ ಎಂದಳು...
ಆಕೆ ಕೇವಲ ಊಟದ ಗಂಟನ್ನು ಹಣವನ್ನು ಕಳುಹಿಸಿರಲಿಲ್ಲ. ಅದರೊಂದಿಗೆ ಆಕೆಯ ಪ್ರೀತಿ, ಕಾಳಜಿ, ವಾತ್ಸಲ್ಯ, ಮಮತೆ, ಮಮಕಾರ ಎಲ್ಲವನ್ನೂ ಕಳುಹಿಸಿದ್ದಳು.
ಇಲ್ಲಿಯವರೆಗೂ ಅದೆಷ್ಟೇ ಕೆಲಸಗಳಿದ್ದರೂ, ಎಷ್ಟೇ ದೂರ ಹೋಗುವುದಿದ್ದರೂ ನಡೆದುಕೊಂಡೇ ಹೋಗುವುದು ಅಮ್ಮನ ರೂಢಿ... ನೀನು ಸುಮ್ಮನೆ ಕಿಲೋ ಮೀಟರ್ ಗಟ್ಟಲೇ ನಡೆದುಕೊಂಡು ಯಾಕೆ ಹೋಗಬೇಕು. ಒಂದು ನಲವತ್ತೋ ಐವತ್ತೋ ರೂಪಾಯಿ ಕೊಟ್ಟರೆ ಆಟೋದಲ್ಲೇ ಹೋಗಬಹುದು ಎಂದು ಅದೆಷ್ಟು ಸಲ ಹೇಳಿದರೂ... ಸುಮ್ಮನೇ ಯಾಕೆ ಹಣ ಖರ್ಚು ಮಾಡುವುದು ಎಂದು ಎಷ್ಟೇ ಬಿಸಿಲಿದ್ದರೂ ನಡೆದುಕೊಂಡೆ ಹೋಗುವ ಆಕೆ ನನಗೆ ಸರಿಯಾದ ಟೈಮಿಗೆ ಊಟದ ಗಂಟು ಕಳುಹಿಸಬೇಕು ಎಂಬ ಒಂದೇ ಕಾರಣಕ್ಕೆ ಅಂದು ಆಟೋ ಹತ್ತಿದ್ದಳು. 10:30ಕ್ಕೆ ಹೊರಡುವ ಬಸ್ಸಿಗಾಗಿ ಒಂಬತ್ತು ಗಂಟೆಯೇ ನಿಲ್ದಾಣ ತಲುಪಿದ್ದಳು.
ಈಗ ಆ ಐವತ್ತು ರೂಪಾಯಿಯನ್ನ ಸರಿದೂಗಿಸಲು ಇನ್ನೆಷ್ಟು ದಿನ ನಡೆದುಕೊಂಡೇ ಓಡಾಡುವಳೋ ತಿಳಿಯದು....
ಪೋನಿಟ್ಟ ಮರುಕ್ಷಣವೇ ದೇವರೆದುರು ಎಂದೂ ಅಳದ ನಾನು ಅಂದು ಅತ್ತು "ದೇವರೇ ನನ್ನಮ್ಮ ನನ್ನು ಚೆನ್ನಾಗಿಟ್ಟಿರು ಎಂದು ಬೇಡಿಕೊಂಡೆ....
ಆ ರಾತ್ರಿ ಹೊಟ್ಟೆ ತುಂಬಾ ಊಟ ನಾ ಮಾಡಿದ್ದೆ.... ಕಣ್ತುಂಬ ನಿದ್ದೆ ಆಕೆಯದಾಗಿತ್ತು....
ಅಮ್ಮಂದಿರು ಯಾಕೆ ಹೀಗೆ ಎನ್ನುವುದೇ ಸರ್ವ ಕಾಲಕ್ಕೂ ಉತ್ತರ ದೊರೆಯದ ಪ್ರಶ್ನೆಯಾಗಿ ಉಳಿಯಲಿದೆ..
-ಅಂಜುಮ್ ಬಿ.ಎಸ್,
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ