'ಎಸ್.ಡಿ.ಎಂ. ನೆನಪಿನಂಗಳ'ದ 11ನೇ ಕಂತಿನ ಕಾರ್ಯಕ್ರಮ, ಸಹಾಯಧನ ಹಸ್ತಾಂತರ

Upayuktha
0


ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇಂದು (ಮಾ. 28) ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) 'ಎಸ್.ಡಿ.ಎಂ. ನೆನಪಿನಂಗಳ'ದ ಹನ್ನೊಂದನೇ ಕಂತಿನ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಂಗವಾಗಿ, ಪ್ರತಿಭಾನ್ವಿತ ವಿದ್ಯಾರ್ಥಿನಿ ತೃತೀಯ ಬಿಎಸ್ಸಿಯ ಶಬಾ ಎಸ್. ಅವರಿಗೆ ಮುಖ್ಯ ಅತಿಥಿ, ಉದ್ಯಮಿ, ಪುತ್ತೂರಿನ ಆರ್.ಎಚ್. ಸೆಂಟರ್ ನ ಆಡಳಿತ ಪಾಲುದಾರ ಗೋಪಾಲ ಎಂ.ಯು. ಅವರು 5,000 ರೂ. ಸಹಾಯಧನ ಹಸ್ತಾಂತರಿಸಿದರು.


ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಶಾಲಾ ಕಾಲೇಜು ದಿನಗಳ ಅನುಭವಗಳನ್ನು ಹಂಚಿಕೊಂಡರು. ಕಾಲೇಜು ದಿನಗಳಲ್ಲಿ ಕೊನೆ ಬೆಂಚಿನ ವಿದ್ಯಾರ್ಥಿಯಾಗಿದ್ದರೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದು ಜೀವನದಲ್ಲಿ ಯಶಸ್ಸನ್ನು ಕಾಣಲು ಪೂರಕವಾಯಿತು ಎಂದು ಅವರು ಸ್ಮರಿಸಿಕೊಂಡರು.


“ಜೀವನದಲ್ಲಿ ಸರಕಾರಿ ನೌಕರಿ ಪಡೆಯುವುದೇ ಗುರಿ ಆಗುವುದಕ್ಕಿಂತ ಸ್ವಂತ ಉದ್ದಿಮೆ ಹುಟ್ಟುಹಾಕಿ ಉದ್ಯೋಗದಾತರಾಗುವುದೂ ನಮ್ಮ ಗುರಿಯಾಗಬೇಕು. ನಮ್ಮದೇ ಉದ್ದಿಮೆ ಆರಂಭಿಸಲು ಚಾಣಾಕ್ಷತೆಯ ಜೊತೆಗೆ ಭಾಷೆಯ ಮೇಲಿನ ಹಿಡಿತವೂ ಮುಖ್ಯ” ಎಂದು ಅವರು ಸಲಹೆ ನೀಡಿದರು.


“ನಾನು ಮೊದಲಿಗೆ ಸ್ವೋದ್ಯೋಗ ಪ್ರಾರಂಭಿಸಬೇಕು ಎಂದಾಗ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾಡಿದ ಸಹಾಯ ಚಿರಸ್ಮರಣೀಯ. ಅವರ ನುಡಿ ನನ್ನ ಸಾಧನೆಗೆ ಪ್ರೇರಣೆ” ಎಂದರು.


ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, “ಆಲೋಚನೆಗಳಿಂದಲೇ ಅನುಭವ. ಅನುಭವಗಳಿಂದಲೇ ಜೀವನ. ಅದಕ್ಕಾಗಿಯೇ ನೆನಪಿನಂಗಳ ಕಾರ್ಯಕ್ರಮ ನಡೆಸಲಾಗುತ್ತಿದೆ” ಎಂದರು.


ಅತಿಥಿಗಳನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಬೆಳ್ತಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಮನೋರಮಾ ಉದಯಚಂದ್ರ ಹಾಗೂ ಛಾಯಾಗ್ರಾಹಕ ಕೆ. ವಸಂತ್ ಶರ್ಮ ಮತ್ತಿತರರು ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top