ಮಂಗಳೂರು: ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಯಾವುದೇ ವಿಷಯ ಪರಿಸ್ಥಿತಿಯಲ್ಲಿ ವ್ಯಕ್ತಿಯ ದೇಹದಲ್ಲಿ ರಕ್ತ ನಷ್ಟವಾದರೆ ಮತ್ತೊಬ್ಬ ದಾನಿಯಿಂದಲೇ ರಕ್ತವನ್ನು ಪಡೆಯಬೇಕು ಎಂದು ಮಂಗಳೂರಿನ ಲಯನ್ ಹೈಲ್ಯಾಂಡ್ ಕ್ಲಬ್ನ ಪ್ರಾದೇಶಿಕ ಮುಖ್ಯಸ್ಥ ಲಯನ್ ಜಯಪ್ರಕಾಶ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಲಯನ್ಸ್ ಹೈಲ್ಯಾಂಡ್ ಕ್ಲಬ್, ಕಾಲೇಜಿನ ವಿದ್ಯರ‍್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೂತ್ ರೆಡ್ ಕ್ರಾಸ್ ವತಿಯಿಂದ ರಾಷ್ಟ್ರೀಯ ಯುವ ಜನೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ಸಾಕಷ್ಟು ಜನರ ಪ್ರಾಣ ಉಳಿಸುವ ಮಹತ್ತರವಾದ ಕಾರ್ಯವನ್ನು ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ರಕ್ತನಿಧಿಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್ ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಬದಲಾಗಿ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಯಾವುದೇ ಜಾತಿ, ಮತ, ಧರ್ಮ ಬೇಧವಿಲ್ಲದೇ ಇಂತಹ ಕಾರ್ಯಗಳಲ್ಲಿ ಕೈ ಜೋಡಿಸುವ ಮೂಲಕ ಸಮಾಜದ ಸೇವೆ ಮಾಡಬಹುದಾಗಿದೆ ಎಂದರು.
ಒಟ್ಟು 80 ಘಟಕ ರಕ್ತವನ್ನು ನಗರದ ಲೇಡಿ ಗೋಷನ್ ಆಸ್ಪತ್ರೆಯ ರಕ್ತನಿಧಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ವಹಿಸಿದ್ದರು. ಇದೇ ವೇಳೆ ಲಯನ್ಸ್ ಹೈಲ್ಯಾಂಡ್ ಕ್ಲಬ್ನ ಖಜಾಂಚಿ ರಾಮಚಂದ್ರ ಕೆ., ಕಾಲೇಜಿನ ವಿದ್ಯಾರ್ಥಿ ಸಂಘದ ಉಪನಿರ್ದೇಶಕಿ ಪ್ರೊ. ಲತಾ ಎ. ಪಂಡಿತ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಗಾಯತ್ರಿ ಎನ್. ಇದ್ದರು. ಕಾಲೇಜಿನ ರೆಡ್ ಕ್ರಾಸ್ ಘಟಕದ ಅಧಿಕಾರಿ ಡಾ. ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ