• ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ
• ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂವತ್ತಮೂರನೇ ಉಪನ್ಯಾಸ
ಮಂಗಳೂರು: "ರಾಷ್ಟ್ರಕವಿ ರವೀಂದ್ರನಾಥ ಠಾಗೋರ್ ನುಡಿದಂತೆ, ಭಾರತವನ್ನು ತಿಳಿಯ ಬಯಸುವ ಯುವಕರು ಮೊಟ್ಟ ಮೊದಲು ಸ್ವಾಮಿ ವಿವೇಕಾನಂದರನ್ನು ಓದಬೇಕು. ಸ್ವಾಮೀಜಿ ಸಕಾರಾತ್ಮಕತೆಗಳ ಅಪರಿಮಿತ ಗಣಿ. ತ್ಯಾಗ ಮತ್ತು ಸೇವೆ ಈ ದೇಶದ ಅವಳಿ ಆದರ್ಶಗಳು. ಯುವಕರು ಕೇವಲ ಉದ್ಯೋಗಕ್ಕಾಗಿ ಸೀಮಿತಗೊಳ್ಳದೆ, ಸಾಮಾಜಿಕ ಸೇವೆಗಳಲ್ಲಿಯೂ ಭಾಗಿಯಾಗಬೇಕು. 'ನಾನು ಸುಧಾರಣೆಯಲ್ಲಿ ನಂಬುವುದಿಲ್ಲ. ಬೆಳವಣಿಗೆಯಲ್ಲಿ ನಂಬುತ್ತೇನೆ. ನಾನು ದೇವರ ಸ್ಥಾನದಲ್ಲಿ ನಿಂತು ಸಮಾಜಕ್ಕೆ ನೀನು ಹೀಗೆ ಚಲಿಸಬೇಕು. ಹಾಗಲ್ಲ ಎಂದು ಕಟ್ಟಪ್ಪಣೆ ಮಾಡಲಾರೆ. ತನ್ನ ಪಾಲಿನ ಮರಳಿನ ಕಣವನ್ನೇ ಸೇತುವೆಯ ಮೇಲೆ ಹಾಕಿ ತೃಪ್ತವಾದ ಅಳಿಲಿನಂತೆ ಶ್ರೀರಾಮನ ಸೇತುವೆಯ ಅಳಿಲು ನಾನಾಗ ಬಯಸುತ್ತೇನೆ' ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ" ಎಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯ ಪ್ರೊ. ನಂದನ್ ಪ್ರಭು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂವತ್ತಮೂರನೇ ಉಪನ್ಯಾಸದಲ್ಲಿ "ಯುವಜನತೆ ಮತ್ತು ರಾಷ್ಟ್ರ: ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಸಂದೇಶಗಳ ಮರುಶೋಧನೆ" ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.
"ಯುವಜನತೆ ಭಾರತದ ಭವಿಷ್ಯವನ್ನು ರೂಪಿಸುವ ಅಗ್ರೇಸರರು. ಆಧುನಿಕ ಸಮಾಜದ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಪರಿಹಾರವಿದೆ. ಯುವಕರು ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳ ಅಧ್ಯಯನವನ್ನು ನಡೆಸಿ ಸಮಾಜಮುಖಿ ಜೀವನವನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ- ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಕಾರ್ಯಯೋಜನೆಗಳು ಅಭಿನಂದನಾರ್ಹ" ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗೇಶ್ ಹೆಚ್ ಹೇಳಿದರು.
ರಾಮಕೃಷ್ಣ ಮಿಷನ್ ನ ಸಂಯೋಜಕರಾಗಿರುವ ಶ್ರೀ ರಂಜನ್ ಬೆಳ್ಳರ್ಪಾಡಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಕುಮಾರಿ ಕ್ಯಾಲ್ ಡಿ ಮೇಲ್ಲೋ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಶ್ರೀ ಬೆಲ್ಲಾಳ ಗೋಪಿನಾಥ ರಾವ್, ಕಾಲೇಜಿನ ಎನ್.ಎಸ್.ಎಸ್. ಘಟಕದ ಸಂಯೋಜಕರಾದ ಡಾ. ನಾರಾಯಣಸ್ವಾಮಿ, ಉಪನ್ಯಾಸಕ ವೃಂದ ಮತ್ತು ಮತ್ತು ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ