ಶ್ರೀರಾಮ ಕಥಾ ಲೇಖನ ಅಭಿಯಾನ-99: ರಾಮಾಯಣದಲ್ಲಿ ಕಾಣುವ ಭೌಗೋಳಿಕ ಹಾಗೂ ವೈಜ್ಞಾನಿಕ ಮಾಹಿತಿಗಳು

Upayuktha
0


-ಡಾ. ಜಯಂತಿ ಮನೋಹರ್


ಶ್ರೀ ರಾಮಚಂದ್ರನ ಸಮಕಾಲೀನರಾದ ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಾಯಣ ಮಹಾಕಾವ್ಯ ಭಾರತದ ಅಂತಃಸತ್ವ. ಶ್ರೀ ರಾಮ ಈ ಭೂಮಿಯ ಮೇಲೆ ನಡೆದಾಡಿದ ಸಂಗತಿ ನಮಗೆ ಎಂದಿಗೂ ಒಂದು ಪ್ರಶ್ನೆಯಾಗಿ ಕಾಣುವುದಿಲ್ಲ. ವಿಶಾಲ ಭಾರತದ ಉದ್ದಗಲದಲ್ಲಿ ಹಾಗೂ ಶ್ರೀಲಂಕೆಯಲ್ಲಿ, ರಾಮಾಯಣದ ಘಟನೆಗಳೊಂದಿಗೆ ಸೇರಿರುವ ಸ್ಥಳಗಳು, ಶಾಸನ, ನಾಣ್ಯಗಳ ಮೇಲಿನ ಬರಹಗಳಲ್ಲಿ ಹಾಗೂ ಭೂಪಟಗಳಲ್ಲಿ ಕಾಣುವ ಮಾಹಿತಿಗಳು ರಾಮಚಂದ್ರನ ಐತಿಹಾಸಿಕ ಸತ್ಯವನ್ನು ತೆರೆದು ತೋರುತ್ತಿವೆ. ಆದರೆ ಕೆಲವು ಇತಿಹಾಸತಜ್ಞರು ರಾಮಾಯಣವನ್ನು ಕಾಲ್ಪನಿಕ ಕಥಾನಕಗಳ ಚೌಕಟ್ಟಿನಲ್ಲಿ ಸೇರಿಸಿ, ರಾಮನನ್ನು ಇತಿಹಾಸದಿಂದ ಹೊರಗಿಟ್ಟದ್ದು ಕಾಣುತ್ತದೆ. ಈ ಪ್ರವೃತ್ತಿ ಪ್ರಾರಂಭವಾದದ್ದನ್ನು 1813 ರಲ್ಲಿ ಬ್ರಿಟಿಷರಿಂದ ಪ್ರಕಟವಾದ  ಜೇಮ್ಸ್ ಮಿಲ್ ಮತ್ತು ಚಾರ್ಲ್ಸ್ ಗ್ರಾಂಟ್ ಎಂಬ ಲೇಖಕರು ಬರೆದ “ಹಿಸ್ಟರಿ ಆಫ್‌  ಇಂಡಿಯಾ” ಎಂಬ ಹೊತ್ತಿಗೆಯಲ್ಲಿ ಗುರುತಿಸಬಹುದು. ಭಾರತದ ಬಹುತೇಕ ಕೃತಿಗಳನ್ನು `ಮಿಥಿಕಲ್’ ಅಂದರೆ, `ಕಾಲ್ಪನಿಕ ಕಥಾನಕಗಳು’ ಎಂಬ ಪಟ್ಟಿಗೆ ಸೇರಿಸಿದ್ದ ಈ ಹೊತ್ತಿಗೆ, ಇಂಗ್ಲೆಂಡಿನ ಹೆಲಿಬರಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ಭಾರತಕ್ಕೆ ಬರುವ ಇಂಗ್ಲಿಷ್ ಆಡಳಿತಗಾರರಿಗೆ ಪ್ರಮುಖ ಪಠ್ಯವಾಗಿತ್ತು.


ಭಾರತದಲ್ಲಿ ರಚಿತವಾದ ಕೃತಿಗಳಲ್ಲಿ `ಭೂಮಿಯು ಸೃಷ್ಟಿಯಾದ ದಿನಾಂಕಕ್ಕಿಂತಲೂ ಹಿಂದಿನ ಕಾಲಘಟ್ಟದ ವಿದ್ಯಮಾನಗಳು ಇವೆ' ಎನ್ನುವುದು ಅವರು ಕೊಟ್ಟಿರುವ ಕಾರಣಗಳಲ್ಲಿ ಪ್ರಮುಖವಾದದ್ದು! ಕ್ರಿಸ್ತ ಪೂರ್ವ 4004 (ಬಿ.ಸಿ) ಅಕ್ಟೋಬರ್ 23ನೇ ದಿನಾಂಕದಂದು ಬೆಳಿಗ್ಗೆ 9 ಗಂಟೆಗೆ ಭೂಮಿಯ ಸೃಷ್ಟಿಯಾಯಿತು ಎಂದು ಐರ್‌ಲ್ಯಾಂಡಿನ ಆರ್ಕ್ ಬಿಷಪ್, ರೆವರೆಂಡ್ ಜೇಮ್ಸ್ ಉಶರ್ ಯಾವುದೇ ಆಧಾರವಿಲ್ಲದೆ ಹೇಳಿದ್ದಾನೆ.  ಹೀಗೆ ಆ ಬಿಷಪ್‌ ಯಾದೃಚ್ಛಿಕವಾಗಿ ಹೇಳಿರುವುದು ಕ್ರಿಶ್ಚಿಯನ್ನರ ಧಾರ್ಮಿಕ ನಂಬಿಕೆ.

 

ಹಾಗಾಗಿ, ಅದಕ್ಕಿಂತಲೂ ಹಿಂದಿನ ಕಾಲಘಟ್ಟದಲ್ಲಿ ಭಾರತದಲ್ಲಿ ರಚಿತವಾಗಿರುವ ಕೃತಿಗಳಲ್ಲಿ ಸತ್ಯ ಸಂಗತಿಗಳಿರಲು ಸಾಧ್ಯವಿಲ್ಲ ಎನ್ನುತ್ತಾ ರಾಮ– ಕೃಷ್ಣರು ಕೇವಲ ಕಾಲ್ಪನಿಕ ಎನ್ನುವುದು ಅವರ ವಾದ. ಇಂತಹ ಹುಂಬತನದ ವಾದದೊಂದಿಗೆ, ಆಧಾರವೇ ಇಲ್ಲದೆ ಅವರು ಸೃಷ್ಟಿಸಿದ ಆರ್ಯ- ದ್ರಾವಿಡ ಜನಾಂಗಗಳು ಎನ್ನುವ ಮಿಥ್ಯಾವಾದವೂ ಕುಸಿದಿದೆ. ಆದರೆ, ಅಂತಹ ವಿಪರೀತ ನಿಲುವನ್ನು ಹೊಂದಿರುವವರು ಈಗಲೂ ನಮ್ಮ ನಡುವೆ ಕಾಣಿಸುತ್ತಾರೆ.


ಸ್ಥಳ ಪುರಾಣಗಳು- ನಾಸಿಕ

ಅಯೋಧ್ಯೆಯ ರಾಜನಾದ ದಶರಥನ ಮಗ ರಾಮಚಂದ್ರ ನಮ್ಮ ಊರಿನ ಮೂಲಕವೇ ಹಾದು ಹೋದ ಎನ್ನುವ ಸಾವಿರಾರು ಊರುಗಳು ಇಲ್ಲಿವೆ.  ಇಲ್ಲೇ ಸೀತೆ ಸ್ನಾನ ಮಾಡಿದಳು ಎಂದು ಹೇಳುವ ಸಾವಿರಾರು ಕೆರೆಗಳು-ನದೀತಟಗಳು ಜನಮಾನಸದಲ್ಲಿ ಸಾವಿರಾರು ಪೀಳಿಗೆಗಳಿಂದಲೂ ಉಳಿದುಬಂದಿವೆ. ಅದರಲ್ಲೂ ರಾಮ ನಡೆದಾಡಿದ್ದ ವಿವಿಧ ಸ್ಥಳಗಳ ಹೆಸರುಗಳಲ್ಲಿಯೂ ಅಂದಿನ ನೆನಪು ಇಂದಿಗೂ ಗಾಢವಾಗಿ ಉಳಿದುಬಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ನಾಸಿಕ್. ರಾಮನನ್ನು ಮೋಹಿಸಿ ಬಂದ ಶೂರ್ಪಣಖೆಯ ಮೂಗನ್ನು ಲಕ್ಷ್ಮಣ ಕತ್ತರಿಸಿದ್ದು ಅಂದಿನ ಪಂಚವಟಿಯಲ್ಲಿ. ಸಂಸ್ಕೃತದಲ್ಲಿ  ನಾಸಿಕಾ ಎಂದರೆ ಮೂಗು. ಹಾಗಾಗಿ ಅಂದಿನ ಪಂಚವಟಿ ಆ ಘಟಣೆಯ ನೆನಪಿನಲ್ಲಿ `ನಾಸಿಕ್' ಎಂದು ಪ್ರಸಿದ್ಧವಾಗಿದೆ. 


ಪಂಚವಟಿಯಲ್ಲಿ ಘಟಿಸಿದ ಸಂಪೂರ್ಣ ಸೂರ್ಯಗ್ರಹಣ 

ಲಕ್ಷ್ಮಣ ಶೂರ್ಪಣಖೆಯ ಮೂಗನ್ನು ಕತ್ತರಿಸಿದ ನಂತರ, ಅವಳು  ಅಲ್ಲಿಯೇ ಇದ್ದ ತನ್ನ ಅಣ್ಣಂದಿರಾದ ಖರ-ದೂಷಣರ ಬಳಿ ಹೋಗಿ ರಾಮ ಲಕ್ಷ್ಮ್ಮಣರ ವಿರುದ್ಧ ಯುದ್ಧ ಹೂಡಲು ಪ್ರೇರೇಪಿಸುತ್ತಾಳೆ. ಅಂತೆಯೇ ಅಲ್ಲಿಗೆ ಹೋದ ಖರ-ದೂಷಣರು ತಮ್ಮ ಪರಾಕ್ರಮವನ್ನು ಹೇಳುತ್ತಾ ರಾಮನನ್ನು ಯುದ್ಧಕ್ಕೆ ಆಹ್ವಾನಿಸುತ್ತಾರೆ. ಯುದ್ಧಕ್ಕೆ ಮೊದಲು  ನಡೆಯುವ ಮಾತಿನ ಚಕಮಕಿಯಲ್ಲಿ, ಇಳಿ ಮಧ್ಯಾಹ್ನದ ವೇಳೆ ಕಾಣಿಸುತ್ತಿದ್ದ ನಕ್ಷತ್ರಗಳ ಬಗ್ಗೆ ಇರುವ ವಿವರದಿಂದಾಗಿ ಅಲ್ಲಿ  ಒಂದು ಗ್ರಹಣ ಘಟಿಸಿದ್ದು ತಿಳಿಯುತ್ತದೆ.


ಪ್ಲಾನಿಟೇರಿಯಂ ತಂತ್ರಾಂಶದ ಕೊಡುಗೆಯಿಂದಾಗಿ, ಅಂದು, ದಿನಾಂಕ, ಪೂರ್ವ ಪ್ರಸಕ್ತ ಶಕೆ 5077, ಅಕ್ಟೋಬರ್ 7 ಎಂದು ತಿಳಿಯುತ್ತದೆ. ವಾಲ್ಮೀಕಿಗಳು ಹೇಳುವ ಕಾವ್ಯಮಯವಾದ ವಿವರಗಳಿಗೆ ಹೊಂದಿಕೆಯಾಗುವ ಸಂಪೂರ್ಣ ಸೂರ್ಯಗ್ರಹಣ ಅಲ್ಲಿ ಮಧ್ಯಾಹ್ನ 3.10 ಗಂಟೆಗೆ, ನಡೆಯಿತೆಂದೂ ತಿಳಿದುಬರುತ್ತದೆ. ಇದನ್ನು ವಾಲ್ಮೀಕಿಗಳು ಕಾವ್ಯಭಾಷೆಯಲ್ಲಿ ಹೇಳುತ್ತಾರೆ- "ಸಂಧ್ಯಾಕಾಲದ ಕೆಂಪುವರ್ಣವು ಎಲ್ಲೆಡೆ ಹರಡುತ್ತಲಿತ್ತು. ಕೆಂಪು ವರ್ಣದ ಮೂಲೆಗಳಿದ್ದ ಕಪ್ಪು ವರ್ಣದ ಚಕ್ರದಿಂದ ಸೂರ್ಯ ಮರೆಯಾಗಿದ್ದ. ಹಗಲಿನ ಸಮಯವಾಗಿದ್ದರೂ, ಸಂಧ್ಯಾಕಾಲದಂತೆ ತೋರತೊಡಗಿತು. ಸೂರ್ಯನು ರಾಹುಗ್ರಸ್ತನಾಗಿದ್ದರಿಂದ ತನ್ನ ಬೆಳಕನ್ನೂ ಹಾಗೂ ಪ್ರಖರತೆಯನ್ನೂ ಕಳೆದುಕೊಂಡಿದ್ದ. ಹಲವಾರು ಪಶು ಪಕ್ಷಿಗಳು ರಾತ್ರಿಯಾದಂತೆ ಶಬ್ದ ಮಾಡುತ್ತಿದ್ದವು" (ರಾಮಾಯಣ: 3.23.1, 3.23.3, 3.23.9, 3.23.12, 3.29.23). ವಾಲ್ಮೀಕಿಗಳು ಮುಂದುವರೆದು-`ತನ್ನ ಸೈನ್ಯದ ಮಧ್ಯದಲ್ಲಿ, ಖರ, ಆಕಾಶದಲ್ಲಿ ಗ್ರಹಗಳ ಮಧ್ಯೆ ಮಂಗಳನಂತೆ ಕಾಣಿಸುತ್ತಿದ್ದ' ಎನ್ನುತ್ತಾರೆ. ಇದೂ ಕೂಡ ಆಗ ಅಲ್ಲಿದ್ದ ಗ್ರಹಗಳ ಯಥಾ  ಸ್ಥಿತಿಯನ್ನು ತಿಳಿಸುತ್ತಿದೆ.


ಮಹರ್ಷಿ ಶರಭಂಗರ ಆಶ್ರಮದ ಬಳಿ ಕಾಣುವ ವಿಮಾನ 

ರಾಮಾಯಣದಲ್ಲಿ ಹೆಚ್ಚು ಪರಿಚಿತವಾಗಿರುವ ರಾವಣನ ಪುಷ್ಪಕವಿಮಾನದೊಂದಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಹಲವಾರು ವಿಮಾನಗಳ ವರ್ಣನೆ ಕಾಣುತ್ತದೆ.


ರಾಮ ಲಕ್ಷ್ಮಣ ಸೀತೆಯರು, ವನವಾಸದ ಸಮಯದಲ್ಲಿ ಮಹರ್ಷಿ ಶರಭಂಗರನ್ನು ಕಾಣಲು ಹೊರಡುತ್ತಾರೆ. ಆಶ್ರಮ ಸಮೀಪಿಸುತ್ತಿದ್ದಂತೆಯೇ ಅದ್ಭುತ ದೃಶ್ಯವೊಂದನ್ನು ಕಂಡ ರಾಮನ ವರ್ಣನೆಯನ್ನು ವಾಲ್ಮೀಕಿಗಳು ವಿವರವಾಗಿ ತಿಳಿಸುತ್ತಾರೆ. “ಉರಿಯುವ ಸೂರ್ಯನಂತೆ ಅಂತರಿಕ್ಷದಲ್ಲಿ ನಿಂತಿರುವ ರಥದಿಂದ ಹೊರಬಂದ ದೇವೇಂದ್ರ ಭೂಮಿಯನ್ನು ತಾಗದೆ ಆಕಾಶದಲ್ಲಿಯೇ ನಿಂತು ಮಹರ್ಷಿ ಶರಭಂಗರೊಂದಿಗೆ ಮಾತನಾಡುತ್ತಿದ್ದಾನೆ. ಹಸಿರು ಬಣ್ಣದ ದಿವ್ಯಾಶ್ವಗಳನ್ನು ಹೂಡಿರುವ ಆ ರಥದ ಇಕ್ಕೆಲಗಳಲ್ಲಿ ಅಮೂಲ್ಯ ಆಭರಣಗಳನ್ನು ಧರಿಸಿರುವ ನೂರಾರು ಜನ ದಿವ್ಯ ಪುರುಷರ ಕೊರಳಲ್ಲಿ ಹಾರಗಳು ಹೊಳೆಯುತ್ತಿವೆ. ಎಲ್ಲರೂ ಇಪ್ಪತ್ತೈದು ವರ್ಷ ವಯಸ್ಸಿನ ಜವ್ವನಿಗರು.”



ಅಲ್ಲಿ, ರಾಮ ಕಂಡ ಇಂದ್ರ ಹಾಗೂ ಅವನೊಂದಿಗಿದ್ದ ದೇವತೆಗಳ ವಿಶಿಷ್ಟ ಲಕ್ಷಣಗಳನ್ನೂ ವಾಲ್ಮೀಕಿಗಳು ಹೇಳುತ್ತಾರೆ. ಭೂಮಿಗೆ ಪಾದಗಳು ಸೋಕದಿರುವುದು (ಭೂಮಿಯ ಗುರುತ್ವಾಕರ್ಷಣೆಯನ್ನು ಮೀರಿ ನಿಲ್ಲುವುದು), ಕಣ್ಣು ಮಿಟುಕಿಸದಿರುವುದು, ಬಾಡದಿರುವ ಹೂವಿನ ಹಾರಗಳನ್ನು ಧರಿಸಿರುವುದು, ಬೆವರು ಬರದಿರುವುದು, ನೆರಳು ಬೀಳದಿರುವುದು ದೇವತೆಗಳ ಐದು ವಿಶಿಷ್ಟ ಲಕ್ಷಣಗಳೆಂಬ ವಿಚಾರ ನಮ್ಮ ಹಲಾವಾರು ಗ್ರಂಥಗಳಲ್ಲಿ ಕಾಣಸಿಗುತ್ತದೆ. ನಳ-ದಮಯಂತಿಯರ ಕಥೆಯಲ್ಲಿಯೂ ಸ್ವಯಂವರದಲ್ಲಿ, ನಳನಂತೆಯೇ ಕಾಣುತ್ತಿದ್ದ ದೇವತೆಗಳಲ್ಲಿ ಈ ಲಕ್ಷಣಗಳನ್ನು ಕಂಡು, ದಮಯಂತಿ ನಳನನ್ನು ಗುರುತಿಸುತ್ತಾಳೆ.


ಹಾಗೆಯೇ, ನಮ್ಮ ವೇದಕಾಲದಿಂದ ಪುರಾಣಕಾಲದವರೆಗೆ ಅಂತರಿಕ್ಷದಲ್ಲಿ ಹಾರಾಡುವ ವಿಮಾನಗಳ ಪ್ರಸ್ತಾಪ ವಿಪುಲವಾಗಿ ಕಾಣುತ್ತದೆ. ಮನುಕುಲದ ಅತ್ಯಂತ ಹಿಂದಿನ ಕಾಲಘಟ್ಟದ ವೇದಗಳಲ್ಲಿ ವರ್ಣಿತವಾಗಿರುವ ‘ವಾಯುರಥ’, ‘ಪತಂಗರಥ’ ಹಾಗೂ ಅಂತರಿಕ್ಷಗಳಲ್ಲಿ ಚಲಿಸುವ ನಾವೆಗಳು ಇಂದಿನ ವಿಮಾನಗಳನ್ನು ಹೋಲುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ, ಇಂದಿನ ವೈಜ್ಞಾನಿಕ ಯುಗ ಒಪ್ಪುವಂತಹ ಯಾವುದೇ ಪುರಾವೆಗಳು ಇದುವರೆಗೆ ದೊರೆತಿಲ್ಲ.



`ರಾಮಸೇತು'- ವೈಜ್ಞಾನಿಕ– ತಾಂತ್ರಿಕ ಪುರಾವೆಗಳು:

ವಾಲ್ಮೀಕಿ ರಾಮಾಯಣದಲ್ಲಿರುವಂತೆ, ಲಂಕೆಯಲ್ಲಿ ರಾಮ- ರಾವಣರ ನಡುವೆ ಮಹಾಯುದ್ಧ ನಡೆದು ವಿಜಯಿಯಾದ ರಾಮ, ಅಲ್ಲಿಂದ ಅಯೋಧ್ಯೆಗೆ ಪುಷ್ಪಕ ವಿಮಾನದಲ್ಲಿ ಪಯಣಿಸುವಾಗ, ಕೆಳಗೆ ಕಂಡ ಸೇತುವೆಯನ್ನು `ನಳಸೇತು' ಎಂದು ಹೆಸರಿಸಿ, ಸೀತೆಗೆ ತೋರಿಸುತ್ತಾನೆ.  ಮುಂದೆ ಇದು `ರಾಮಸೇತು' ಎಂದು ಪ್ರಖ್ಯಾತವಾಗಿ ನಮ್ಮ ಹಲವಾರು ಕಾವ್ಯೇತಿಹಾಸಿಕ ಗ್ರಂಥಗಳಲ್ಲಿ ಹಾಗೂ ಶಾಸನವೇ ಮೊದಲಾದ ಹಲವಾರು ಚಾರಿತ್ರಿಕ ಮಾಹಿತಿಗಳಲ್ಲಿ ಕಾಣಸಿಗುತ್ತದೆ.  ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ತಯಾರಿಸಿದ ಭೂಪಟಗಳಲ್ಲಿ ಇದರ ಉಲ್ಲೇಖವಿದೆ. 

ಎನ್ಸೈಕ್ಲೋಪೀಡಿಯಾ ಬ್ರಿಟಾನಿಕದಲ್ಲಿ, “ರಾಮಸೇತು ಎಂದೂ ಕರೆಯುವ ಆಡಮ್ಸ್ ಬ್ರಿಡ್ಜ್, ಶ್ರೀಲಂಕೆಯ ವಾಯುವ್ಯ ಭಾಗದ ಸಮೀಪವಿರುವ ಮನ್ನಾರ್ ದ್ವೀಪಗಳು ಮತ್ತು ಭಾರತದ ದಕ್ಷಿಣ ಕರಾವಳಿಯಲ್ಲಿರುವ ರಾಮೇಶ್ವರಂ ಮಧ್ಯೆ 30 ಮೈಲಿ (48 ಕಿ.ಮೀ), ಉದ್ದವಿದ್ದು, ವಾಯುವ್ಯದ ಪಾಲ್ಕ್ ಸ್ಟ್ರೇಟ್‌ ಇಂದ ನೈಋತ್ಯದಲ್ಲಿ ಮನ್ನಾರ್ ಕೊಲ್ಲಿಯನ್ನು ಪ್ರತ್ಯೇಕಿಸುತ್ತದೆ" ಎಂಬ ಉಲ್ಲೇಖ ಕಾಣುತ್ತದೆ. 1902 ರಲ್ಲಿ, ಸಿ.ಡಿ.ಮಕೆಲೀನ್ ವರದಿ ಹಾಗೂ ಪ್ರ.ಶ. 1480ರಲ್ಲಿ ಏಶಿಯಾಟಿಕ್ ಸೊಸೈಟಿಯಲ್ಲಿ ದಾಖಲಾಗಿರುವ ಸಂಗತಿಯಂತೆ, ಈ ಸೇತುವೆ, ಮೂರು ಭಾಗವಾಗಿ ಮುರಿಯುವವರೆಗೂ ರಾಮೇಶ್ವರದಿಂದ ಶ್ರೀಲಂಕೆಗೆ ಹೋಗುವ ಕಾಲು ನಡಿಗೆಯ ದಾರಿಯಾಗಿ ಉಪಯೋಗದಲ್ಲಿತ್ತು ಎನ್ನುವುದು ತಿಳಿಯುತ್ತದೆ.  

ನಾಸಾದ (NASA) ಉಪಗ್ರಹ ತೆಗೆದ ಛಾಯಾ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುವ ಈ ಸೇತುವೆಯ ಚಿತ್ರಗಳು ಹೋದ ದಶಕದಲ್ಲಿ ಭಾರತೀಯರಲ್ಲಿ ಸಂಚಲನವನ್ನು ಮೂಡಿಸಿತು. ಆದರೆ, ಈ ಸೇತುವೆ ಮಾನವನಿರ್ಮಿತವಲ್ಲ ಇದು ಸಾಗರದಲ್ಲಿ ಸ್ವಾಭಾವಿಕವಾಗಿ ನಿರ್ಮಾಣವಾಗಿರುವ ಲೈಮ್ ಶೋಲ್‌ಗಳ ಜೋಡಣೆಯಷ್ಟೇ ಎನ್ನುತ್ತಾ ರಾಮನಿಗೂ ಈ ಸೇತುವೆಗೂ ಇರುವ ಸಂಬಂಧವನ್ನು ನಿರಾಕರಿಸಿ ಇದನ್ನು ಪೂರ್ಣವಾಗಿ ಒಡೆಯುವ ಹುನ್ನಾರವೂ ನಡೆಯಿತು. ಈಗ ವೈಜ್ಞಾನಿಕ ಪರೀಕ್ಷೆಗಳನ್ನು ಮಾಡಿ ರಾಮಸೇತುವನ್ನು ಮಾನವ ನಿರ್ಮಿತ ಎಂದು ಹೇಳುತ್ತಿರುವುದು ಡಿಸ್ಕವರಿ ಚಾನೆಲ್ ಎಂಬ ವಿದೇಶೀ ಸಂಸ್ಥೆ. ಪ್ರಪಂಚದೆಲ್ಲೆಡೆ ಬಳಕೆ ಇರುವ ಕಾರ್ಬನ್ ಡೇಟಿಂಗ್ ಎನ್ನುವ ವಿಧಾನದಿಂದ ರಾಮಸೇತುವಿನ ಮೇಲೆ ಈಗ ಕಾಣುತ್ತಿರುವ 

ಕಲ್ಲುಗಳನ್ನು ಪರೀಕ್ಷಿಸಿ ಇದು ೭೦೦೦ ವರ್ಷಗಳಷ್ಟು ಹಳೆಯದು ಎಂದು ಹಾಗೂ ಈ ಕಲ್ಲುಗಳನ್ನು ಬೇರೆಲ್ಲಿಂದಲೋ ತಂದು ಅಲ್ಲಿಗೆ ಹಾಕಲಾಗಿದೆ ಎಂದು ಅವರ ವರದಿ ಹೇಳುತ್ತಿದೆ. 


ಶಿಶಿರ ಪರ್ವತ- ಬೃಹತ್ ತ್ರಿಶೂಲ (TRIDENT) ಚಿಹ್ನೆ:

ಇಂದು ವಿಮಾನದಲ್ಲಿ ಪಯಣಿಸುವಾಗ ಪಿಸ್ಕೋ ಉಪಸಾಗರದ ತೀರದ ಮೇಲೆ ಕಂಡುಬರುವ, ಶಿಲೆಯಲ್ಲಿ ಕೊರೆದಿರುವ ತ್ರಿಶೂಲಾಕಾರದಂತೆ ಕಾಣುವ (TRIDENT) ಒಂದು ಶಿಲಾ ಸ್ತಂಭದ ಎತ್ತರ  820 ಅಡಿಗಳು ಹಾಗೂ ಹೊಳೆಯುತ್ತಿರುವ ಅದರ ಮೂರು ಶೂಲಗಳ ಉದ್ದ 121/2 

ಅಡಿಗಳು. ಇದನ್ನು ಯಾರು, ಎಂದು ಹಾಗೂ ಯಾವ ಉದ್ದೇಶದಿಂದ ಅಲ್ಲಿ ನಿರ್ಮಿಸಿದರು ಎನ್ನುವುದು ಇಂದಿನ ವಿದ್ವಾಂಸರಿಗೆ ಸವಾಲಾಗಿರುವ ವಿಚಾರ.  ಆದರೆ, ಈ ಆಕೃತಿಯ ಪ್ರಸ್ತಾಪವನ್ನು ರಾಮಾಯಣದ ಕಿಷ್ಕಿಂಧಾ (ಸ.40.53-54) ಕಾಂಡದಲ್ಲಿ ಕಾಣಬಹುದು.


ಸೀತಾಮಾತೆಯನ್ನು ಹುಡುಕಬೇಕಾದ ತಾಣಗಳ ವಿವರವನ್ನು ಹೇಳುವ ಸುಗ್ರೀವ ಪೂರ್ವದಿಕ್ಕಿನಲ್ಲಿರುವ ಪರ್ವತಾಗ್ರದಲ್ಲಿ ತ್ರಿಮೂರ್ತಿಗಳು ನಿರ್ಮಿಸಿರುವ ಮೂರು ಶಿಖರಗಳುಳ್ಳ ಕನಕಮಯ ತಾಳಧ್ವಜವನ್ನು ಕುರಿತು ಹೇಳುತ್ತಾನೆ.

 

ತ್ರಿಶಿರಾಃ ಕಾಂಚನಃ ಕೇತುಸ್ತಾಲಸ್ತಸ್ಯ ಮಹಾತ್ಮನಃ |

ಸ್ಥಾಪಿತಃ ಪರ್ವತಸ್ಯಾಗ್ರೇ ವಿರಾಜತಿ ಸವೇದಿಕಃ || 40-53|| 

ಪೂರ್ವಸ್ಯಾಂ ದಿಶಿ ನಿರ್ಮಾಣಂ ಕೃತಂ ತತ್‌ ತ್ರಿದಶೇಶ್ವರೈಃ |

ತತಃ ಪರಂ ಹೇಮಮಯಃ ಶ್ರೀಮಾನುದಯಪರ್ವತಃ || 40-54 ||


ಸಾಗರೋತ್ತರ ನಾಡುಗಳಲ್ಲಿ ರಾಮಾಯಣದ ಅನುಬಂಧ:

ರಾಮಾಯಣದ ಕಾಲಘಟ್ಟದಲ್ಲಿಯೇ ಸಾಗರೋತ್ತರ ನಾಡುಗಳೊಂದಿಗೆ ಸಂಪರ್ಕವಿದ್ದ ಸಂಗತಿಯನ್ನು ಮಹರ್ಷಿ ವಾಲ್ಮೀಕಿಗಳು ಹೇಳುತ್ತಾರೆ. ರಾವಣನಿಂದ ಅಪಹೃತಳಾದ ಸೀತೆಯನ್ನು ಹುಡುಕಲು ತನ್ನ ಸೈನ್ಯವನ್ನು ಕಳುಹಿಸುವ ಸಮಯದಲ್ಲಿ ಸುಗ್ರೀವನು ಸಾಗರದಾಚೆಯ ಅನೇಕ ನಾಡುಗಳ ವಿವರ ಕೊಡುತ್ತಾ, “ಸಪ್ತ ರಾಜ್ಯಗಳ ಸೊಬಗನ್ನು ಹೊಂದಿರುವ ಯವ (ಜಾವಾ) ದ್ವೀಪಗಳನ್ನೂ, ಹೇರಳವಾದ ಚಿನ್ನದ ಗಣಿಗಳಿಂದ ಕೂಡಿರುವ ಸುವರ್ಣ ದ್ವೀಪಗಳನ್ನೂ (ಸುಮಾತ್ರಾ) ಹೆಸರಿಸುತ್ತಾನೆ." 


ಯತ್ನವಂತೋ ಯವದ್ವೀಪಮ್ ಸಪ್ತ ರಾಜ್ಯೋಪಶೋಭಿತಮ್ ।

ಸುವರ್ಣ ರೂಪ್ಯಕಮ್ ದ್ವೀಪಮ್ ಸುವರ್ಣಾಕಾರ ಮಂಡಿತಮ್ ।। 4-40-30 ರಾಮಾಯಣ: ಕಿಷ್ಕಿಂಧಾಕಾಂಡ


ಸಂಸ್ಕೃತದಲ್ಲಿ ‘ಯವ’ ಎಂದರೆ ‘ಬಾರ್ಲಿ’. ‘ಬಾರ್ಲಿ’ಯ ಆಕಾರದಲ್ಲಿರುವುದರಿಂದ ‘ಯವ’ ಎಂದು ಕರೆಯುತ್ತಿದ್ದ ಆ ಪ್ರದೇಶವೇ ಈಗ ‘ಜಾವಾ’ ಹಾಗೂ ‘ಸುವರ್ಣ ದ್ವೀಪ’ವೆಂದು ಅಲ್ಲಿ ಹೇಳಿರುವುದು ‘ಸುಮಾತ್ರಾ’ ಎಂದು ಗುರುತಿಸಬಹುದು. ಹೀಗೆ, ಸಿಂಹ ಪುರ- ಸಿಂಗಾಪೂರ್, ಕಂಬಜರ ನಾಡು - ಕಾಂಬೋಡಿಯಾ ಆಗಿ ಬದಲಾದ ಅನೇಕ ಹೆಸರುಗಳನ್ನು ಗಮನಿಸಬಹುದು.  ನಮ್ಮ ಹಲವಾರು ಪುರಾಣ ಗ್ರಂಥಗಳಲ್ಲಿ ಹಾಗೂ ಆರ್ಯಭಟ ಮುಂತಾದ ಖಗೋಳ ಶಾಸ್ತ್ರಜ್ಞರ ಗ್ರಂಥಗಳಲ್ಲಿ ಭಾರತದ ಹೊರಗಿರುವ ಅನೇಕ ನಾಡುಗಳ ವರ್ಣನೆ ಕಂಡುಬರುತ್ತದೆ.   ಅಲ್ಲಿಯೇ, ಬರ್ಮಾ(ಮ್ಯಾನ್‌ಮಾರ್ - ಬ್ರಹ್ಮದೇಶ) ಹಾಗೂ ಇನ್ನಿತರ ಪ್ರದೇಶಗಳ ವಿವರವೂ ಕಾಣುತ್ತದೆ.


ಸಾಗರೋತ್ತರ ನಾಡುಗಳಲ್ಲಿ ರಚಿತ ರಾಮಾಯಣಗಳು:

ರಾಮಾಯಣದಲ್ಲಿ ರಾಮನ ಸೈನ್ಯ ಸಮುದ್ರವನ್ನು ದಾಟುವುದು ಒಮ್ಮೆ ಮಾತ್ರ. ಆದರೆ, ಈ ನಮ್ಮ ರಾಮಾಯಣದ ಕಥಾನಕ ಹಲವಾರು ಸಮುದ್ರಗಳನ್ನು ದಾಟಿ ಸಾವಿರಾರು ಮೈಲಿ ದೂರ ಪಯಣಿಸಿದೆ. ರಾಮಕಥೆ ಹಾಡಾಗಿ ಹರಿದು ಹೋದಕಡೆಯಲ್ಲೆಲ್ಲಾ ಆಯಾ ಪ್ರದೇಶದ ರಾಜರು, ರಾಜ ರಾಮನ ಆದರ್ಶವನ್ನು ಇಟ್ಟುಕೊಂಡು ತಮ್ಮ ನಾಡನ್ನು ರಾಮರಾಜ್ಯವನ್ನಾಗಿಸಲು ಪ್ರಯತ್ನಿಸಿದರು. ರಾಮಕಥೆ ಸಂಚರಿಸಿದ ನಾಡುಗಳಲ್ಲಿ ಆಯಾ ದೇಶ – ಭಾಷೆ - ಸಂಸ್ಕೃತಿಗಳೊಂದಿಗೆ ಸಮ್ಮಿಳಿತಗೊಂಡಿದೆ. ಆಗ್ನೇಯ ರಾಷ್ಟ್ರಗಳಲ್ಲಿ ರಚಿತವಾಗಿರುವ ರಾಮಾಯಣಗಳ ಅಧ್ಯಯನ ಹಲವು ರೋಚಕ ವಿಚಾರಗಳನ್ನು ತಿಳಿಸುತ್ತದೆ. ಥಾಯ್ ಲ್ಯಾಂಡಿನ `ರಾಮ್ ಕೀನ್' (ರಾಮಕೀರ್ತಿ), ಮಯನ್ಮಾರಿನ (ಬರ್ಮಾ) ರಾಮತ್ಯಾಗಿನ್ ಮತ್ತು ಮಹಾ ರಾಮ, ಕಾಂಬೋಡಿಯಾದ ರಾಮ್ ಖೇರ್, ಲಾವೋ ದೇಶದ "ರಾಮಾಯಣ - ಫ್ರ ಲಕ್ ಫ್ರ ಲಾಮ್ (ಲಕ್ಷ್ಮಣ- ರಾಮ)" `ಪಲಕ್ ಪಲಂಗ್', `ರಾಮಜಾತಕ', ಮಲಯಾದ ಹಿಕಾಯತ್ ಸೇರಿ ರಾಮ  ಹಾಗೂ ಇಂಡೋನೇಷಿಯಾದ `ಕಾಕವಿನ್ ರಾಮಾಯಣ'ಗಳು ಪ್ರಖ್ಯಾತವಾಗಿವೆ.  ರಾಮ- ಲಕ್ಷ್ಮಣ- ಸೀತೆ- ಮಾರುತಿ- ರಾವಣರು ಸಂಕೇತಿಸುವ ತತ್ತ್ವಗಳ ಆಳಕ್ಕಿಳಿದು ಹಲವಾರು ಹೊಸ ಆಯಾಮಗಳಲ್ಲಿ ರಾಮಾಯಣಗಳು ಸೃಷ್ಟಿಯಾಗಿರುವುದನ್ನು ಗಮನಿಸಬಹುದು. ವಾಲ್ಮೀಕಿರಾಮಾಯಣದ ಪ್ರಧಾನ ಅಂಶಗಳನ್ನು ಹೊಂದಿರುವ ಈ ಮರುಕಥನಗಳಲ್ಲಿ ಹಲವು ಮಾರ್ಪಾಡುಗಳು ಹಾಗೂ ಸೇರ್ಪಡೆಗಳು ಕಾಣುತ್ತವೆ.


ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ| 

ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ||

"ಎಲ್ಲಿಯವರೆಗೆ ಪರ್ವತಗಳು ಭೂಮಿಯ ಮೇಲೆ ನಿಂತಿರುವುದೋ ಹಾಗೂ ನದಿಗಳು ಹರಿಯುತ್ತಿರುವುದೋ ಅಲ್ಲಿಯವರೆಗೂ ರಾಮಾಯಣದ ಕಥಾನಕ ಲೋಕಗಳಲ್ಲಿ ಪ್ರಚಾರವಾಗುತ್ತಿರುತ್ತದೆ".




- ಡಾ.ಜಯಂತಿ ಮನೋಹರ್

ವೇದಾರ್ಥ ಚಿಂತಕರು ಮತ್ತು

ಭಾರತೀಯ ಸಾಂಸ್ಕೃತಿಕ ಪರಂಪರೆಯ ಸಂಶೋಧಕರು 

8618108010



ಲೇಖಕರ ಸಂಕ್ಷಿಪ್ತ ಪರಿಚಯ

 

ಋಗ್ವೇದದ ಸಂಕೇತಾರ್ಥಗಳು ಕುರಿತು ಪಿ ಎಚ್ ಡಿ ಪದವಿ ಪಡೆದಿದ್ದಾರೆ. ವಿದೇಶಿಯರಿಗೆ ಕನ್ನಡ ಭಾಷೆ ಕಲಿಸಿದ್ದಾರೆ. ಹಲವಾರು ಅಂತರ ರಾಷ್ಟೀಯ ವೇದಿಕೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಕನ್ನಡ, ಇಂಗ್ಲೀಷ್‌ ನಲ್ಲಿ ಹಲವಾರು ಪುಸ್ತಕಗಳ ರಚನೆ. ವಿದೇಶಗಳಲ್ಲಿ ಪ್ರಚುರವಾಗಿರುವ ನಮ್ಮ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ,  ಬರಹಗಳಲ್ಲಿ ತೊಡಗಿದ್ದಾರೆ ಮತ್ತು  ಉಪನ್ಯಾಸಗಳನ್ನು ನೀಡುತ್ತಿದ್ದಾರೆ.

ಕಾರ್ಯ ಕ್ಷೇತ್ರ:1.ದೇಶ ವಿದೇಶಗಳಲ್ಲಿ ಕನ್ನಡ ಭಾಷಾ ಶಿಕ್ಷಣ- ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿದ್ವತ್ ಪ್ರಬಂಧಗಳ ಮಂಡನೆ. 

2.  ಋಗ್ವೇದವನ್ನು ಏಕೆ ಓದಬೇಕು ? ಜ್ಞಾನನಿಧಿ ಋಗ್ವೇದದ ಪರಿಚಯ (ಅನುವಾದ) ಅಗ್ನಿ ಮಂತ್ರಗಳು- ಋಗ್ವೇದದ ಪ್ರಥಮ ಅಷ್ಟಕದ ಮಂತ್ರಗಳು (ಅನುವಾದ), ರಾವಣಾಸುರನ ಕಣಸು- ಕುವೆಂಪುರವರ ರಾಮಾಯಣ ದರ್ಶನಂ ಆಧಾರಿತ ನಾಟಕ.,. ಭಾರತೀಯ ಚಿಂತನೆಯಲ್ಲಿ ಮನೋವೈಜ್ಞಾನಿಕ ತತ್ತ್ವಗಳು, ಸೀತಾಂತರಂಗ- ಕಾದಂಬರಿ. ಸೀತೆಯ ದೃಷ್ಟಿಯಲ್ಲಿ ರಾಮಾಯಣದ ಪ್ರಮುಖ ಸಂಗತಿಗಳ ಹಿನ್ನೋಟ, ಸಿದ್ಧಾಂಜನ ಭಾಗ-1 - ಕಪಾಲಿ ಶಾಸ್ತ್ರಿರಚಿತ ಋಗ್ವೇದ ಮಂತ್ರಗಳ ಆಧ್ಯಾತ್ಮಿಕ ವ್ಯಾಖ್ಯಾನ (ಅ), ಸಿಂಬಾಲಿಸಮ್ ಆಫ್ ಋಗ್ವೇದ- ಸಾಮಾಜಿಕ, ನೈತಿಕ ಹಾಗೂ ಆಧ್ಯಾತ್ಮಿಕ ವಿಚಾರಗಳು,ಗ್ಲೋರಿ ಆಫ್ ಶಂಕರ – ಸಂಕಲನ, ಸಾಗರದಾಚೆ ಹರಡಿರುವ ಭಾರತೀಯ ಸಂಸ್ಕೃತಿ, ಥಾಯ್ಲ್ಯಾಂಡ್- ಕಾಂಬೋಡಿಯಾ - ಇಂಡೋನೇಷಿಯಾ – ಜಪಾನ್ ಪುಸ್ತಕ ಪ್ರಕಟಣೆ, ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಲೇಖನಗಳು/ಅಂಕಣ ಬರಹಗಳನ್ನು ಬರೆದಿದ್ದಾರೆ.

3. ಸಂಶೋಧನೆ: ವೇದ ಸಾಹಿತ್ಯ, ಪೌರಾಣಿಕ ಕಥನಗಳ ಒಳನೋಟ, ದೇಶ-ವಿದೇಶಗಳಲ್ಲಿ ರಚಿತ ರಾಮಾಯಣಗಳು.4. ಸಾಮಾಜಿಕ ಹಾಗೂ ಶೈಕ್ಷಣಿಕ ಮೌಲ್ಯಗಳ ಸಾಕ್ಷ್ಯಚಿತ್ರ ನಿರ್ಮಾಣ, ನಿರ್ದೇಶನ ಮಾಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top