- ಡಾ. ವಿ. ವಿ. ಗೋಪಾಲ್
ಜಗತ್ತಿನಾದ್ಯಂತ ಸಾವಿರಾರು ಜನ ಸಾವಿರಾರು ರೀತಿಗಳಲ್ಲಿ ಶ್ರೀರಾಮನ ಕಥೆಯನ್ನು ಹೆಣೆದಿದ್ದರೂ ರಾಮಕಥೆಯ ಸೃಷ್ಟಿಕತೃನೆಂಬ ಕೀರ್ತಿಗೆ ವಾಲ್ಮೀಕಿ ಮಹರ್ಷಿಯು ಮಾತ್ರ ಪಾತ್ರನು. ರಾಮಾಯಣ ಮಹಾಕಾವ್ಯದ ಸಾವಿರಾರು ಕೃತಿಗಳು, ಕಾವ್ಯಗಳು ಬಂದಿರಬಹುದು. ಅಂತಹ ಕೃತಿಗಳಲ್ಲಿ ವಾಲ್ಮೀಕಿ ರಾಮಾಯಣದ ಕಥೆಯನ್ನೂ, ಸನ್ನಿವೇಶಗಳನ್ನೂ, ಸಂಭಾಷಣೆಗಳನ್ನೂ ಮೀರಿದ ಅಂಶಗಳೂ ಇರಬಹುದು. ಏನೇ ಆಗಲಿ, ಮೂಲ ರಾಮಾಯಣವೆಂದರೆ ವಾಲ್ಮೀಕಿ ರಾಮಾಯಣವೇ.
ವಾಲ್ಮೀಕಿಯು ರಾಮಾಯಣ ಮಹಾಕಾವ್ಯದ ರಚನೆಯಲ್ಲಿ ಕಾವ್ಯದ ಎಲ್ಲ ಗುಣಗಳನ್ನೂ ಅಳವಡಿಸಿಕೊಂಡು ಶ್ರೇಷ್ಠಕಾವ್ಯವನ್ನು ರಚಿಸಿರುವುದಷ್ಟೇ ಅಲ್ಲ ಆ ಮಹಾಕಾವ್ಯದಲ್ಲಿ ಕತೆಯನ್ನು ಹೆಣೆಯುವ ಜಾಣ್ಮೆಯನ್ನು ಮತ್ತು ಸನ್ನಿವೇಶಗಳ ಸೃಷ್ಟಿಯ ವೈಶಿಷ್ಟ್ಯವನ್ನು ಮೆರೆದಿದ್ದಾನೆ. ಅಂತಹ ಸನ್ನಿವೇಶಗಳು ಇಂದಿಗೂ ಪ್ರಸ್ತುತವಾಗಿರುವುದೂ ವಿಶೇಷವೇ. ಕಾವ್ಯದ ಓಟದಲ್ಲಿ ವಾಲ್ಮೀಕಿ ಮಹರ್ಷಿಯ ಕೆಲವು ಚಿಂತನೆಗಳು ಮತ್ತು ಸೂಕ್ಷ್ಮವಾದ ಸಂಗತಿಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಅಂತಹ ಸಂಗತಿಗಳು ಓದುಗರಲ್ಲಿ ಮೂಡಬಹುದಾದ ಕೆಲವು ಪ್ರಶ್ನೆಗಳಿಗೂ ಸರಿಯಾದ ಉತ್ತರವನ್ನು ಕೊಡುತ್ತವೆ.
ಭರತನಿಗೆ ಇಲ್ಲದಿದ್ದರೂ ಅವನ ತಾಯಿಗೆ ಸಿಂಹಾಸನದ ಮೇಲೆ ವ್ಯಾಮೋಹವಿದ್ದದ್ದು, ಕೊಟ್ಟ ಮಾತಿಗೆ ಕಟ್ಟು ಬಿದ್ದು ದಶರಥನು ಮಗನನ್ನೇ ಕಾಡಿಗಟ್ಟಲು ಸಿದ್ಧನಾದದ್ದು, ಒಲಿದು ಬಂದಿದ್ದ ಸಿಂಹಾಸನವನ್ನು ತೊರೆದು ತಂದೆಯ ಮಾತನ್ನು ಉಳಿಸುವ ಸಲುವಾಗಿ ಕಾಡಿಗೆ ಹೋಗಲು ಸಿದ್ಧನಾದ ರಾಮನ ತ್ಯಾಗ, ರಾಜಕುಮಾರಿಯಾಗಿ ಬೆಳೆದು ರಾಣಿಯಾಗಿ ಮೆರೆಯಬೇಕಾಗಿದ್ದ ಸೀತೆ ಗಂಡನ ಕೂಡಾ ಅರಣ್ಯವಾಸಕ್ಕೆ ಹೊರಟು ನಿಂತಿದ್ದು, ಅನಿರೀಕ್ಷಿತವಾಗಿ ಅರಸುತನ ಒಲಿದು ಬಂದರೂ ಅದು ತನ್ನದಲ್ಲವೆಂದು ಪಕ್ಕಕ್ಕೆ ಸರಿಸಿ ವಿರಾಗಿಯಂತೆ ಬಾಳಿದ ಭರತನ ಔದಾರ್ಯ, ಪರಸತಿ ಬಯಕೆ, ಅದಕ್ಕೆ ತಕ್ಕ ಶಿಕ್ಷೆ - ಇವೆಲ್ಲ ಇದ್ದದ್ದೇ. ಇವುಗಳೆಲ್ಲವನ್ನೂ ಮೀರಿದ ಕೆಲವು ಅಂಶಗಳು ಮನಮುಟ್ಟುವಂತೆ ರೂಪುಗೊಂಡಿವೆ ವಾಲ್ಮೀಕಿ ರಾಮಾಯಣದಲ್ಲಿ.
ವನವಾಸದಲ್ಲಿದ್ದ ಸೀತೆಯ ಬಳಿ ಬಂಗಾರದ ಒಡವೆಗಳು ಹೇಗೆ ಬಂದವು?:
ನಮ್ಮಲ್ಲಿ ಸಾಮಾನ್ಯವಾಗಿ ಒಂದು ಪ್ರಶ್ನೆಯು ಹುಟ್ಟಿಕೊಳ್ಳುತ್ತದೆ. ಅದೇನೆಂದರೆ, ಸೀತಾದೇವಿಯು ನಾರುಮಡಿಯನ್ನುಟ್ಟು ಕಾಡಿಗೆ ಹೋಗಿದ್ದಳು. ಹಾಗಿರುವಾಗ ತನ್ನ ಅಪಹರಣವಾದಾಗ ಋಷಿಮೂಕ ಪರ್ವತದ ಹತ್ತಿರ ಹೋಗುವಾಗ ತನ್ನ ಒಡವೆಗಳನ್ನು ಗಂಟು ಕಟ್ಟಿ ಎಸೆದು ಹೋದಳು, ಹನುಮಂತನ ಕೈಯಲ್ಲಿ ತನ್ನ ಚೂಡಾಮಣಿಯನ್ನು ಕೊಟ್ಟು ಕಳುಹಿಸಿದಳು. ಅವು ಆಕೆಯ ಬಳಿ ಹೇಗೆ ಬಂದವು ಎಂದು ಯೋಚಿಸುವುದುಂಟು. ವಾಲ್ಮೀಕಿಯು ಈ ಪ್ರಶ್ನೆಗೆ ಸಮಂಜಸವಾದ ಉತ್ತರವನ್ನು ತನ್ನ ಕಾವ್ಯದಲ್ಲಿಯೇ ಹೆಣೆದಿಟ್ಟಿದ್ದಾನೆ.
ರಾಮ ಲಕ್ಷ್ಮಣ ಸೀತೆಯರು ಅರಣ್ಯವಾಸಕ್ಕೆಂದು ಹೊರಟು ನಿಂತಿದ್ದಾಗ ಅವರು ನಾರುಮಡಿಯನ್ನುಟ್ಟು ಹೋಗಬೇಕೆಂದು ಹೇಳುವ ಕೈಕೇಯಿ ತಾನೇ ನಾರುಮಡಿಗಳನ್ನು ತಂದು ರಾಮನ ಕೈಗೆ ಕೊಡುತ್ತಾಳೆ. ರಾಮನೇನೋ ನಿರ್ವಿಕಾರನಾಗಿ ನಾರುಮಡಿಯನ್ನುಟ್ಟು ಸಿದ್ಧನಾಗುತ್ತಾನೆ. ಆದರೆ, ಸೀತೆಗೆ ಅದನ್ನು ಉಡಲು ಬರದು. ಆಗ ರಾಮನೇ ಅವಳಿಗೂ ನಾರುಮಡಿಯನ್ನುಡಿಸುತ್ತಾನೆ. ಆಗ ವಸಿಷ್ಠರು ಕೈಕೆಯು ಕೇಳಿರುವ ವರದ ಮೇರೆಗೆ ವನವಾಸವು ರಾಮನಿಗೆ ಮಾತ್ರ ಸೂಚಿತವಾದದ್ದು. ಮೇಲಾಗಿ, ಸೀತೆಯು ಅಯೋಧ್ಯೆಯ ರಾಜ್ಯಲಕ್ಷ್ಮಿ. ಆಕೆಯು ಅರಮನೆಯಲ್ಲೇ ಇರಲಿ ಕಾಡಿನಲ್ಲೇ ಇರಲಿ ಸರ್ವಾಲಂಕಾರಭೂಷಿತೆಯಾಗಿರಬೇಕು ಎಂದು ವಾದಿಸಿ ಸೀತೆಗೆ ಒಡವೆಗಳನ್ನುಡಿಸುವಂತೆ ಮಾಡುತ್ತಾರೆ. ಆ ಒಡವೆಗಳನ್ನೇ ಆಕೆ ಋಷಿಮೂಕ ಪರ್ವತದ ಹತ್ತಿರ ಎಸೆದು ಹೋದದ್ದು.
ಮದುವೆಯ ಶಾಸ್ತ್ರಗಳನ್ನು ಕನ್ಯಾಪಿತೃವಿನ ಪದ್ದತಿಯಂತೆ ನಡೆಸುವುದು : ನಮ್ಮಲ್ಲಿ ಮದುವೆಗಳು ನಡೆಯುವಾಗ ಗಂಡಿನ ಕಡೆಯವರೂ ಹೆಣ್ಣಿನ ಕಡೆಯವರೂ ಮದುವೆಯನ್ನು ತಮ್ಮ ತಮ್ಮ ಪದ್ದತಿಯಂತೆ ಮಾಡಿಕೊಡಬೇಕು ಎಂದು ಕೇಳುವುದುಂಟು. ಆ ವಿಷಯವೇ ಒಮ್ಮೊಮ್ಮೆ ಕಗ್ಗಂಟಾಗುವುದೂ ಸ್ವಪ್ರತಿಷ್ಠೆಗಳನ್ನು ಮೆರೆಸಿಕೊಳ್ಳಲು ದಾರಿಯಾಗುವುದೂ ನಡೆದಿರುತ್ತವೆ. ಇಂತಹುದೊಂದು ಪ್ರಶ್ನೆಗೆ ಮಹಾಕವಿ ವಾಲ್ಮೀಕಿಯು ರಾಮಾಯಣ ಮಹಾಕಾವ್ಯದಲ್ಲಿ ಸರಳವಾದೊಂದು ಸೂತ್ರವನ್ನು ಸೂಚಿಸಿದ್ದಾನೆ.
ರಾಮಚಂದ್ರನು ಶಿವಧನುಸ್ಸಿಗೆ ಹೆದೆಯನ್ನು ಕಟ್ಟಲು ಹೋಗಿ ಅದು ಮುರಿದು ಹೋದಾಗ ಜನಕ ಮಹಾರಾಜನು ತಾನು ಮೊದಲೇ ಘೋಷಿಸಿದ್ದಂತೆ ಶಿವಧನುಸ್ಸನ್ನು ಹಿಡಿದೆತ್ತಿ ಹೆದೆಯೇರಿಸಲು ಶಕ್ತನಾದ ರಾಮನಿಗೆ ತನ್ನ ಮಗಳನ್ನು ಧಾರೆಯೆರೆದು ಕೊಡಲು ಮುಂದಾಗಿ ದಶರಥನಿಗೆ ಸಂದೇಶವನ್ನು ಕಳುಹಿಸುತ್ತಾನೆ. ದಶರಥನೂ ಸಪರಿವಾರದೊಂದಿಗೆ ಮಿಥಿಲೆಗೆ ಬಂದು ರಾಮ ಸೀತೆಯರ ಮದುವೆಯನ್ನು ನಡೆಸಿಕೊಡಬೇಕೆಂದು ವಿನಂತಿಸಿಕೊಳ್ಳುತ್ತಾನೆ. ದಶರಥನೂ ಜನಕ ಮಹಾರಾಜನ ಪ್ರಸ್ತಾವನೆಯನ್ನೊಪ್ಪಿ ಮಿಥಿಲೆಗೆ ಆಗಮಿಸುತ್ತಾನೆ. ನಿಶ್ಚಯಿಸಿದ ಮುಹೂರ್ತದಲ್ಲಿ ಕನ್ಯಾದಾನವನ್ನು ನೆರವೇರಿಸ ಬೇಕಾಗಿ ಬಂದಾಗ ಮದುವೆಯ ಶಾಸ್ತ್ರಗಳನ್ನು ಯಾವ ಮನೆತನದ ಪದ್ದತಿಯಂತೆ ನಡೆಸಬೇಕು ಎಂಬುದು ಚರ್ಚೆಗೆ ಬರುತ್ತದೆ. ಆಗ ದಶರಥನು ಜನಕಮಹಾರಾಜನು ಕನ್ಯಾದಾನವನ್ನು ಮಾಡುವವನೂ ದಾನವನ್ನು ಕೊಡುವವನೂ ಆಗಿರುವುದರಿಂದ ಮದುವೆಯ ಎಲ್ಲ ಶಾಸ್ತ್ರಗಳೂ ದಾನಿಯಾದ ಆತನ ಮನೆಯ ಪದ್ದತಿಯಂತೆಯೇ ನಡೆಯಬೇಕೆನ್ನುತ್ತಾನೆ.
ಯುದ್ಧದಲ್ಲಿ ಜನಬಲ ಮತ್ತು ಸಂಪತ್ತನ್ನು ಕಳೆದುಕೊಂಡ ವಿಷಯವನ್ನು ಮರೆಮಾಚುವುದು : ಬಹಳ ಹಿಂದಿನಿಂದಲೂ ಅಧಿಕಾರಕ್ಕಾಗಿ, ಸಂಪತ್ತಿಗಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ ಯುದ್ಧಗಳು ನಡೆಯುತ್ತಲೇ ಬಂದಿವೆ. ಯುದ್ಧಗಳಲ್ಲಿ ಸೋಲಾದರೂ ಗೆಲುವಾದರೂ ಸಂಪತ್ತನ್ನೂ ಸೈನಿಕರನ್ನೂ ಕಳೆದುಕೊಳ್ಳುವುದಂತೂ ಅನಿವಾರ್ಯ. ಆದರೆ, ಹಾಗೆ ಕಳೆದುಕೊಂಡವರು ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಕಳೆದು ಹೋದ ವಸ್ತು ಮತ್ತು ಜೀವಗಳ ಬಗ್ಗೆ ಮಾಹಿತಿಯನ್ನು ಮರೆಮಾಚುತ್ತಿದ್ದರು. ಅದು ಈಗಲೂ ನಡೆದಿದೆ.
2020 ರ ವರ್ಷದಲ್ಲಿ ಭಾರತ ಚೀನಾ ಗಡಿಯಲ್ಲಿ ಹಲವು ಬಾರಿ ಘರ್ಷಣೆಗಳು ನಡೆದವು. ದಿನಾಂಕ 15-06-2020 ರಂದು ಗಾಲ್ವಾನ್ ನದಿಯ ತೀರದಲ್ಲಿ ಭಾರತದ ನೆಲದ ಮೇಲೆ ಅಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿದ ಚೀನೀ ಸೈನಿಕರನ್ನು ಭಾರತೀಯ ಸೈನಿಕರು ಹೊಡೆದೋಡಿಸಿದರು. ಅಂದು ಎರಡೂ ಕಡೆಯಲ್ಲಿ ಸಾವುನೋವುಗಳು ಸಂಭವಿಸಿದವು. ಭಾರತದ ಕಡೆಯ ಎಷ್ಟು ಮಂದಿ ಸೈನಿಕರು ಹುತಾತ್ಮರಾದರೆಂಬ ಬಗ್ಗೆ ಮಾಹಿತಿಯನ್ನಂತೂ ಹಂಚಿಕೊಳ್ಳಲಾಯಿತು. ಚೀನಾ ಕಡೆಯ ಇಪ್ಪತ್ತರಿಂದ ಮೂವತ್ತೈದು ಸೈನಿಕರು ಹತರಾದರೆಂದು ವಾರ್ತಾ ಮೂಲವೊಂದು ಹೇಳಿಕೆ ನೀಡಿತು. ಮತ್ತೊಂದು ಮಾಧ್ಯಮವು ಸತ್ತವರ ಸಂಖ್ಯೆ ನಲವತ್ತೈದು ಎಂದು ಪ್ರಕಟಿಸಿತು. ಆದರೆ, ಚೀನಾ ಸರ್ಕಾರವು ಆ ಬಗ್ಗೆ ಒಮ್ಮೆಯೂ ಬಾಯಿ ಬಿಡಲೇ ಇಲ್ಲ. ತಮ್ಮ ಕಡೆಯ ಎಷ್ಟು ಮಂದಿ ಸೈನಿಕರು ಹತರಾದರೆಂದು ಹೇಳಿಕೊಂಡರೆ ತಮ್ಮ ದೇಶಕ್ಕೆ ಅವಮಾನವೆಂದು ಭಾವಿಸಿದ ಸ್ವಪ್ರತಿಷ್ಠೆಯ ದೇಶವು ಆ ವಿಷಯದಲ್ಲಿ ಮೌನಿಯಾಯಿತು.
ಇದು ಇಂದಿನದಲ್ಲ. ಸಹಸ್ರಸಹಸ್ರ ವರ್ಷಗಳಿಂದಲೂ ಯುದ್ಧದಲ್ಲಿ ಆದ ಸಾವುನೋವುಗಳನ್ನು ಗುಟ್ಟಾಗಿಡುವುದು ನಡೆದು ಬಂದಿದೆ. ರಾಮರಾವಣ ಯುದ್ಧದಲ್ಲೂ ಹೀಗೆಯೇ ಆಗಿ ರಾವಣನು ಕಳೆದುಕೊಂಡ ಸೈನ್ಯಬಲದ ಸಂಖ್ಯೆಯನ್ನು ಮುಚ್ಚಿಟ್ಟು ಅದು ಮತ್ತೆ ಬದುಕಿ ಬರುವ ಸಾಧ್ಯತೆಯ ಫಲವನ್ನೂ ಕಳೆದುಕೊಳ್ಳುತ್ತಾನೆ.
ರಾಮ-ರಾವಣ ಯುದ್ಧವು ನಡೆದಿದ್ದಾಗ ಇಂದ್ರಜಿತನು ಮೋಡಗಳ ಮರೆಯಲ್ಲಿ ನಿಂತು ಮಾಯಾಯುದ್ಧವನ್ನು ಮಾಡುತ್ತಾ ರಾಮ ಲಕ್ಷ್ಮಣರ ಮೇಲೆ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ಬಾಣಗಳ ಸುರಿಮಳೆಯನ್ನೇ ಸುರಿಸುತ್ತಾನೆ. ಬ್ರಹ್ಮಾಸ್ತ್ರಕ್ಕೆ ಗೌರವ ಸೂಚಿಸಿದ ರಾಮಲಕ್ಷ್ಮಣರು ಪ್ರತ್ಯಸ್ತ್ರ ಪ್ರಯೋಗ ಮಾಡದೆ ಬಾಣಾಘಾತ ತಿಂದು ಮೂರ್ಛಿತರಾಗುತ್ತಾರೆ.
ವಿಷಯವನ್ನು ತಿಳಿದ ಜಾಂಬವಂತನು ಹನುಮಂತನನ್ನು ಹಿಮವತ್ಪರ್ವತಕ್ಕೆ ಕಳುಹಿಸಿ ಅಲ್ಲಿ ಕೈಲಾಸ ಪರ್ವತಕ್ಕೂ ವೃಷಭ ಪರ್ವತಕ್ಕೂ ನಡುವೆ ಇರುವ ಔಷಧಿ ಪರ್ವತದಿಂದ ಅಮೃತ ಸಂಜೀವಿನಿ, ವಿಶಲ್ಯಕರಣೀ, ಸಾವಣ್ಯಕರಣೀ ಮತ್ತು ಸಂಧಾನಕರಣೀ ಎಂಬ ನಾಲ್ಕು ಮಹಾ ಔಷಧಿ ಲತೆಗಳನ್ನು ತರಿಸುತ್ತಾನೆ. ಜಾಂಬವಂತನು ಹನುಮನು ತಂದಿದ್ದ ಮೃತ ಸಂಜೀವಿನಿ, ವಿಶಲ್ಯಕರಣೀ, ಸಾವಣ್ಯಕರಣೀ, ಮತ್ತು ಸಂಧಾನಕರಣಿ ಲತೆಗಳನ್ನು ಬಿಡಿಸಿ ಬೆರೆಸಿ ರಾಮಲಕ್ಷ್ಮಣರಿಗೆ ಅದರ ವಾಸನೆಯನ್ನು ಆಘ್ರಾಣಿಸುತ್ತಾನೆ. ದಿವ್ಯವಾದ ಔಷಧಿಲತೆಗಳನ್ನು ಮೂಸಿದೊಡನೆಯೇ ರಾಮಲಕ್ಷ್ಮಣರು ಮೂರ್ಛೆ ತಿಳಿದು ಮೇಲೇಳುತ್ತಾರೆ. ಮೈಮೇಲಿನ ಗಾಯಗಳೆಲ್ಲವೂ ಮಾಯವಾಗುತ್ತವೆ. ಆಯಾಸವೂ ದೂರವಾಗಿ ಕಾಂತಿಯುತರಾಗಿಯೂ ಉತ್ಸಾಹಿಗಳಾಗಿಯೂ ಎದ್ದು ನಿಲ್ಲುತ್ತಾರೆ.
ಅದೇ ರಣಭೂಮಿಯಲ್ಲಿ ಮೃತರಾಗಿ ಬಿದ್ದಿದ್ದ ವಾನರರು ಅದೇ ಔಷಧಿಲತೆಗಳ ಕಂಪನ್ನು ಆಘ್ರಾಣಿಸಿ ಮರುಜೀವ ಹೊಂದಿ ಯುದ್ಧ ಸನ್ನದ್ದರಾಗಿ ನಿಲ್ಲುತ್ತಾರೆ. ಬದುಕುಳಿದಿದ್ದ ವಾನರ ವೀರರ ಮೈಮೇಲಿನ ಗಾಯಗಳು ವಾಸಿಯಾಗಿ ಸಚೇತನರಾಗುತ್ತಾರೆ. ಆದರೆ, ವಾನರ ವೀರರಿಂದ ಹತ್ಯೆ ಮಾಡಲ್ಪಟ್ಟ ರಾಕ್ಷಸ ಸೈನಿಕರ ಸಂಖ್ಯೆಯು ಎಷ್ಟೆಂದು ಶತ್ರುಗಳಿಗೆ ತಿಳಿದರೆ ತನ್ನ ಮಾನವು ಹೋಗುವುದೆಂದು ಹೆದರಿದ್ದ ರಾವಣನು ರಾಕ್ಷಸರ ಶವಗಳನ್ನೆಲ್ಲಾ ಸಮುದ್ರಕ್ಕೆ ಎಸೆದುಬಿಡುವಂತೆ ಆಜ್ಞೆ ಮಾಡಿದ್ದನು. ಹಾಗಾಗಿ ಮಡಿದ ರಾಕ್ಷಸ ವೀರರಲ್ಲಿ ಯಾರಿಗೂ ಮತ್ತೆ ಬದುಕುವ ಯೋಗವು ಕೂಡಿ ಬರಲಿಲ್ಲ.
ಕೈಕೇಯಿಯ ತಾಯಿಯ ಹಠದ ಸ್ವಭಾವದ ಫಲ: ಕೈಕೇಯಿಯ ಹಠದ ಸ್ವಭಾವವನ್ನು ಪುಷ್ಟೀಕರಿಸಲು ವಾಲ್ಮೀಕಿಯು ಆಕೆಯ ತಾಯಿಯೂ ಹಾಗೆಯೇ ಹಠತೊಟ್ಟು ತನ್ನ ಬಾಳನ್ನು ಹಾಳು ಮಾಡಿಕೊಂಡ ಪ್ರಸಂಗವನ್ನು ಸುಮಂತನ ಮೂಲಕ ಹೇಳಿಸುತ್ತಾನೆ.
ಕೈಕೇಯಿಯ ತಂದೆಯಾದ ಅಶ್ವಪತಿ ಮಹಾರಾಜನಿಗೆ ಸಾಧುವೊಬ್ಬನು ಎಲ್ಲ ಪ್ರಾಣಿಗಳ ಮಾತುಗಳನ್ನೂ ಅರ್ಥಮಾಡಿಕೊಳ್ಳುವ ವರವನ್ನು ಕೊಟ್ಟಿದ್ದನು. ಆದರೆ, ಯಾವುದೇ ಪ್ರಾಣಿಯ ಯಾವುದೇ ಮಾತಿನ ಅರ್ಥವನ್ನು ಆತನು ಬೇರೆ ಯಾರಿಗಾದರೂ ಹೇಳಿದನಾದರೆ ಕೂಡಲೆ ಆತನಿಗೆ ಮರಣವು ಸಂಭವಿಸುವುದೆಂದೂ ಎಚ್ಚರಿಸಿದ್ದನು. ಒಂದು ದಿನ ಇರುವೆಗಳು ಆಡಿಕೊಳ್ಳುತ್ತಿದ್ದ ಮಾತುಗಳನ್ನು ಕೇಳಿದ ರಾಜನು ಅದರಲ್ಲೇನನ್ನೋ ಗ್ರಹಿಸಿ ಗಹಗಹಿಸಿ ನಕ್ಕನು. ಜೊತೆಯಲ್ಲಿಯೇ ಇದ್ದ ಕೈಕೇಯಿಯ ತಾಯಿಯು ರಾಜನು ತನ್ನನ್ನು ನೋಡಿಯೇ ನಕ್ಕಿರಬೇಕೆಂದುಕೊಂಡು ನಗುವಿನ ಕಾರಣವನ್ನು ಕೇಳಿದಳು. ರಾಜನು ನಡೆದುದೇನೆಂದು ಹೇಳಿ ಇರುವೆಗಳು ಏನು ಮಾತನಾಡಿಕೊಂಡವು ಎಂದು ಹೇಳಿದರೆ ತಕ್ಷಣವೇ ತನಗೆ ಮೃತ್ಯುವಾಗುವುದೆಂದು ಆಕೆಗೆ ಬಿಡಿಸಿ ಹೇಳಿದನು. ರಾಣಿಯು ಆತನ ಮಾತನ್ನು ನಂಬಲಿಲ್ಲ. ಆತನು ತನ್ನನ್ನು ಹಾಸ್ಯ ಮಾಡಿ ನಕ್ಕನೆಂದೇ ಭಾವಿಸಿಕೊಂಡು ಸಾಧುವೊಬ್ಬನು ವರವನ್ನು ಕೊಟ್ಟಿರುವುದು, ಪ್ರಾಣಿಗಳ ಮಾತು ಅರ್ಥವಾಗುವುದು, ಆ ಬಗ್ಗೆ ಮತ್ತಾರಿಗಾದರೂ ಹೇಳಿದರೆ ಮರಣವುಂಟಾಗುವುದು - ಎಲ್ಲವೂ ಸುಳ್ಳೆಂದು ಹೇಳಿ ತಾನು ನಿಜ ವೃತ್ತಾಂತವನ್ನು ತಿಳಿಯಲೇ ಬೇಕೆಂದು ಹಠ ಹಿಡಿದಳು. ಕೊನೆಗೆ ರಾಜನು ಸತ್ತಾದರೂ ಸಾಯಲಿ, ತನಗೆ ಮಾತ್ರ ನಿಜವು ಗೊತ್ತಾಗಬೇಕು ಎಂದಳು. ಆ ಮಾತಿನಿಂದ ನೊಂದ ರಾಜನು ರಾಣಿಯನ್ನೇ ಪರಿತ್ಯಾಗ ಮಾಡಿಬಿಟ್ಟನು.
ದಶರಥ ಮಹಾರಾಜನ ಮಗಳು ಶಾಂತಾದೇವಿ:
ದಶರಥ ಮಹಾರಾಜನಿಗೆ ರಾಮ ಲಕ್ಷ್ಮಣ, ಭರತ, ಶತ್ರುಘ್ನರ ಜೊತೆಯಲ್ಲಿ ಶಾಂತಾದೇವಿ ಎಂಬ ಮಗಳೂ ಇದ್ದಳು. ಆತನು ತನ್ನ ಮಗಳಾದ ಶಾಂತಾದೇವಿಯನ್ನು ಅಂಗರಾಜ್ಯದ ಅಧಿಪತಿಯಾದ ರೋಮಪಾದನಿಗೆ ದತ್ತು ಮಾಡಿಕೊಟ್ಟಿದ್ದನು. ಶಾಂತಾದೇವಿಯ ಪತಿಯೇ ಮಹಾಮುನಿ ಋಷ್ಯಶೃಂಗನು. ಹಾಗಾಗಿ ಋಷ್ಯಶೃಂಗನು ದಶರಥನಿಗೂ ಅಳಿಯನಾಗಿದ್ದನು. ಯಾಗಯಜ್ಞಗಳನ್ನು ಮಾಡಿಸುವುದರಲ್ಲಿ ಋಷ್ಯಶೃಂಗನು ಹೆಸರುವಾಸಿಯಾಗಿದ್ದನು. ದಶರಥನಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿದ್ದು ಆತನೇ.
ರಾವಣನು ಲಕ್ಷ್ಮಣನನ್ನು ಎತ್ತಲಾರದೆ ಹೋದುದು: ರಾವಣ-ಲಕ್ಷ್ಮಣರ ನಡುವೆ ಭೀಕರವಾದ ಬಿಲ್ಗಾಳಗವೇ ನಡೆಯಿತು. ರಾವಣನು ತೀಕ್ಷ್ಣವಾದ ಬಾಣವೊಂದರಿಂದ ಲಕ್ಷ್ಮಣನ ಹಣೆಯ ಮೇಲೆ ಪ್ರಹರಿಸಿ ಗಾಯಗೊಳಿಸಿದನು. ಆ ಬಾಣಾಘಾತದಿಂದ ಕ್ಷಣಕಾಲ ವಿಚಲಿತನಾದ ರಾಮಾನುಜನು ರಾವಣನ ಧನುಸ್ಸನ್ನು ಕತ್ತರಿಸಿ ಅಮೋಘವಾದ ಮೂರು ಬಾಣಗಳಿಂದ ಪ್ರಹರಿಸಿ ಅವನನ್ನು ಮೂರ್ಛೆಗೊಳಿಸಿದನು. ಸ್ವಲ್ಪ ಹೊತ್ತಿನ ನಂತರ ಎಚ್ಚರಗೊಂಡ ದಾನವನು ಲಕ್ಷ್ಮಣನ ಮೇಲೆ ದಿವ್ಯವಾದ ಶಕ್ತ್ಯಾಯುಧವನ್ನು ಪ್ರಯೋಗಿಸಿದನು. ಲಕ್ಷ್ಮಣನು ಶಕ್ತ್ಯಾಯುಧವನ್ನು ಪ್ರಬಲವಾದ ಬಾಣಗಳಿಂದ ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದನಾದರೂ ಬ್ರಹ್ಮದೇವನಿಂದ ಕೊಡಲ್ಪಟ್ಟಿದ್ದ ಅದು ಲಲಕ್ಷ್ಮಣನ ಎದೆಗೆ ಬಡಿದು ಅವನನ್ನು ನೆಲಕ್ಕುರುಳಿಸಿತು. ಲಕ್ಷ್ಮಣನು ಆಯುಧಾಘಾತದಿಂದ ಪೀಡಿತನಾಗಿ ಬಿದ್ದಿದ್ದರೂ ಅವನ ಸ್ಮರಣ ಶಕ್ತಿಯು ಕಳೆದಿರಲಿಲ್ಲ. ಅಲ್ಲದೆ ಅವನ ಸತ್ವವೂ ಮಾಸಿರಲಿಲ್ಲ. ಧನುಸ್ಸು ಕೈಯಿಂದ ಜಾರಿ ನೋವಿನಿಂದ ಕೂಡಿದ್ದ ಲಕ್ಷ್ಮಣನನ್ನು ಲಂಕೆಗೆ ಹೊತ್ತೊಯ್ಯುವ ಮನಸ್ಸಿನಿಂದ ಕೂಡಿದ ರಾವಣನು ಅವನನ್ನು ಮೇಲೆತ್ತಲು ನೋಡಿದನು. ಹಿಮಗಿರಿ ಮೇರು ಮಂದ್ರ ಪರ್ವತಗಳನ್ನೇ ಎತ್ತಬಲ್ಲ ಭುಜಬಲವುಳ್ಳ ರಾವಣನಿಂದ ಲಕ್ಷ್ಮಣನನ್ನು ಅಲುಗಾಡಿಸಲೂ ಆಗಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಆಂಜನೇಯನು ವಜ್ರಮುಷ್ಠಿಯಿಂದ ರಾವಣನ ಎದೆಯ ಮೇಲೆ ಪ್ರಹಾರ ಮಾಡಿದನು. ಆ ವಜ್ರಾಘಾತಕ್ಕೆ ಸಮನಾದ ಹೊಡೆತದಿಂದ ರಾವಣನು ಬಲಗುಂದಿ ನೆಲಕ್ಕೆ ಕುಸಿದನು. ಮುಖ ಕಣ್ಣು ಕಿವಿಗಳಿಂದ ನೆತ್ತರು ಚಿಮ್ಮಿತು. ತೂರಾಡುತ್ತಾ ರಥದವರೆಗೆ ನಡೆದು ಅದನ್ನೇರಿ ಅಲ್ಲಿಯೇ ಮೂರ್ಛಿತನಾದನು. ಹನುಮಂತನು ಲಲಕ್ಷ್ಮಣನನ್ನು ಲೀಲಾಜಾಲವಾಗಿ ಹೆಗಲ ಮೇಲೆ ಹೊತ್ತು ರಾಮನಲ್ಲಿಗೆ ಕರೆತಂದು ಬಿಟ್ಟನು. ಅಷ್ಟು ಹೊತ್ತಿಗೆ ಶಕ್ತ್ಯಾಯುಧವೂ ಲಕ್ಷ್ಮಣನನ್ನು ಬಿಟ್ಟು ಹೊರಟು ಹೋಗಿತ್ತು.
ಸ್ತ್ರೀಯರಿಗೆ ಪ್ರಾಧಾನ್ಯತೆ ನೀಡಿದ ಸನ್ನಿವೇಶ: ರಾವಣ ಸಂಹಾರಾನಂತರ ಶ್ರೀರಾಮನು ಸೀತಾ ಲಕ್ಷ್ಮಣ ಸಮೇತನಾಗಿ ಪುಷ್ಪಕ ವಿಮಾನವನ್ನೇರಿ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದನು. ಜೊತೆಯಲ್ಲಿ ಹನುಮಂತ, ಸುಗ್ರೀವ, ವಿಭೀಷಣ ಮತ್ತು ವಾನರವೀರರೂ ಇದ್ದರು. ವಿಮಾನವು ಋಷ್ಯಮೂಕ ಪರ್ವತದ ಹತ್ತಿರ ಬರುತ್ತಿರುವಾಗ ಸೀತಾದೇವಿಯು ವಾನರವೀರರ ಮಾನಿನಿಯರೂ ತಮ್ಮೊಡನೆ ಅಯೋಧ್ಯೆಗೆ ಬರಬೇಕೆಂದರೂ ಅಯೋಧ್ಯೆಗೆ ಬರುವಂತೆ ಮಾಡಿದಳು.
ಗಾಯಗೊಂಡಿದ್ದ ರಾವಣನ ಮೇಲೆ ಪ್ರಹಾರ ಮಾಡೆನೆಂದ ರಾಮ : ರಾಮ-ರಾವಣರ ನಡುವೆ ನೇರ ಯುದ್ಧ ನಡೆದಿತ್ತು. ರಾವಣನು ರಥಾರೂಢನಾಗಿ ವಿಜೃಂಭಿಸಿದರೆ ಇತ್ತ ಹನುಮಂತನು ಶ್ರೀರಾಮನನ್ನು ಹೆಗಲ ಮೇಲೆ ಕೂಡಿಸಿಕೊಂಡು ರಾವಣನಿಗೆ ಎದುರಾಗಿ ನಿಂತನು. ರಾಮನು ರಾವಣನ ರಥವನ್ನು ಶ್ವೇತಛತ್ರ, ಧ್ವಜ, ಪತಾಕೆಗಳ ಸಮೇತ ನುಚ್ಚುನೂರು ಮಾಡಿದನು. ಸಾರಥಿಯನ್ನೂ ಕುದುರೆಗಳನ್ನೂ ಸಂಹರಿಸಿದನು. ರಥದಲ್ಲಿದ್ದ ಆಯುಧಗಳೆಲ್ಲಾ ಮೊದಲೇ ಪುಡಿ ಪುಡಿಯಾಗಿದ್ದವು. ವಜ್ರಾಯುಧ ಸಮಾನವಾದ ಬಾಣದಿಂದ ರಾವಣನ ವೃಕ್ಷಸ್ಥಲವನ್ನು ಪ್ರಹರಿಸಿದನು. ಸಿಡಿಲಿಗೂ ಬೆಚ್ಚದ, ವಜ್ರಾಯುಧದ ಘಾತಕ್ಕೂ ಕದಲದ ಮಹಾಶಕ್ತಿವಂತನಾದ ರಾವಣನು ರಾಮಬಾಣದ ಹೊಡೆತದಿಂದ ತತ್ತರಿಸಿದನು. ಮತ್ತೊಂದು ರಾಮಬಾಣದಿಂದ ಅವನ ಕಿರೀಟವೂ ಕತ್ತರಿಸಿ ನೆಲದ ಮೇಲೆ ಬಿದ್ದಿತು. ರಥಾಸ್ತ್ರವಿಹೀನನಾದ ರಾವಣನನ್ನು ಮತ್ತೆ ಪ್ರಹರಿಸದೆ ಬಿಟ್ಟ ರಾಮನು ಅವನನ್ನು ಕುರಿತು ಅವನು ತೀವ್ರವಾಗಿ ಗಾಯಗೊಂಡಿರುವುದರಿಂದಲೂ ಆಯಾಸಗೊಂಡಿರುವುದರಿಂದಲೂ ಅವನ ಮೇಲೆ ಮತ್ತೆ ಅಸ್ತ್ರ ಪ್ರಯೋಗ ಮಾಡುವುದಿಲ್ಲವೆಂದು ಹೇಳಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಆನಂತರ ಯುದ್ಧಕ್ಕೆ ಬರುವಂತೆ ಹೇಳಿ ಕಳುಹಿಸಿದನು. ದರ್ಪವನ್ನು ಕಳೆದುಕೊಂಡಿದ್ದ ರಾವಣನು ರಥ, ಧನುಸ್ಸು, ಕಿರೀಟ, ಅಸ್ತ್ರ ಶಸ್ತ್ರಗಳಿಲ್ಲದೆ ಲಂಕೆಗೆ ಹಿಂದಿರುಗಿದನು.
ಹೀಗೆ, ವಾಲ್ಮೀಕಿ ರಾಮಾಯಣದಲ್ಲಿ ಕುತೂಹಲಕಾರಿಯಾದ ಹಲವು ವಿಶೇಷ ವಿಷಯಗಳಿವೆ. ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಸಾವಿರ ಸಾವಿರ ಕೃತಿಗಳು ರಚನೆಯಾಗುತ್ತಾ ಹೋದಹಾಗೆ ಒಬ್ಬೊಬ್ಬ ಕವಿಯಿಂದ ಒಂದೊಂದು ಹೊಸಹೊಸ ಕಲ್ಪನೆಯ ಕುಡಿಗಳೊಡೆದು ಮೂಲ ರಾಮಾಯಣದಲ್ಲಿಲ್ಲದ ಸನ್ನಿವೆಶಗಳೆಷ್ಟೋ ಪ್ರಚಲಿತವಾಗಿವೆ. ಉದಾಹರಣೆಗೆ ವಾಲ್ಮೀಕಿ ರಾಮಾಯಣದಲ್ಲಿ ಲಕ್ಷ್ಮಣ ರೇಖೆಯ ಮಾತೇ ಇಲ್ಲ. ಇದು ಆ ರಾಮಾಯಣದನಂತರದ ಸೃಷ್ಟಿಯಲ್ಲಿ ಹುಟ್ಟಿಕೊಂಡಿರುವುದು.
ಸಾವಧಾನದಿಂದ ಓದುತ್ತಾ ಹೋದರೆ, ವಾಲ್ಮೀಕಿ ರಾಮಾಯಣದಲ್ಲಿ ಇಂತಹ ಬಹಳಷ್ಟು ಸೂಕ್ಷ್ಮ ವಿಷಯಗಳು ವಿಶೇಷ ಸಂದೇಶಗಳನ್ನು ಹೊರಚೆಲ್ಲುತ್ತವೆ. ಆ ದೃಷ್ಟಿಯಲ್ಲಿ ಮೂಲ ರಾಮಾಯಣವೆಂದರೆ ವಾಲ್ಮೀಕಿ ರಾಮಾಯಣವೇ.
ಡಾ. ವಿ. ವಿ. ಗೋಪಾಲ್
ಬಿಎಸ್‌ಸಿ, ಎಂಎ (ಕನ್ನಡ), ಪಿಹೆಚ್‌ಡಿ.
94803 17803
ಲೇಖಕರ ಸಂಕ್ಷಿಪ್ತ ಪರಿಚಯ:
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯವರು. ಕನ್ನಡದ ಬಹುತೇಕ ಎಲ್ಲ ಪ್ರಕಾರಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಹನಿಗವನ, ಕವನ, ಭಾವಗೀತೆ, ಷಟ್ಪದಿ-ರಗಳೆ ಪ್ರಯೋಗದ ಕಾವ್ಯ, ಗೇಯ ಕಾವ್ಯ, ಕತೆ, ಕಾದಂಬರಿ, ನಾಟಕ, ವಿಚಾರ ಸಾಹಿತ್ಯ. ಮಕ್ಕಳ ಸಾಹಿತ್ಯ, ಹಾಸ್ಯ ಸಾಹಿತ್ಯ, ಸಂಪಾದಕೀಯ - ಹೀಗೆ ಎಲ್ಲ ಪ್ರಕಾರಗಳಲ್ಲೂ 34 ಕೃತಿಗಳು ಪ್ರಕಟವಾಗಿವೆ. ವಿಶೇಷ ಕೃತಿಗಳು : 1. ಚಂದನಾ ಕಾವ್ಯ- ಆರೂ ಷಟ್ಪದಿಗಳು ಮತ್ತು ಮೂರೂ ರಗಳೆಗಳ ಪ್ರಯೋಗದ ಕಾವ್ಯ; 2. ಅಮೃತ ರಾಮಾಯಣ - ವಾಲ್ಮೀಕಿ ರಾಮಾಯಣದ ಸಂಕ್ಷಿಪ್ತ ಮತ್ತು ಸರಳ ರೂಪದ ಕನ್ನಡ ಗದ್ಯ ಕಾವ್ಯ; 3. ನಿತ್ಯ ಶಾಕುಂತಳೆ – ಗೇಯ ಕಾವ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ