ಶ್ರೀರಾಮ ಕಥಾ ಲೇಖನ ಅಭಿಯಾನ-96: ಶ್ರೀರಾಮಸೋದರರ ಜನನ, ಅವತಾರಾಂತ್ಯ

Upayuktha
0


- ಡಾ. ಶ್ರೀವತ್ಸ ಎಸ್, ವಟಿ. ಬೇಲೂರು.


ಸೂರ್ಯವಂಶಿ ದಶರಥನಿಗೆ ಮೂವರು ಪತ್ನಿಯರಲ್ಲಿ ಒಟ್ಟು ನಾಲ್ವರು ಪುತ್ರರು. ಇವರನ್ನು ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಎಂಬ ಕ್ರಮದಲ್ಲಿ ಗುರ್ತಿಸುತ್ತೇವೆ. ಇದರಿಂದ ಮೊದಲು ರಾಮ, ನಂತರ ಲಕ್ಷ್ಮಣ, ಆಮೇಲೆ ಭರತ, ಕೊನೆಗೆ ಶತ್ರುಘ್ನ ಈ ಕ್ರಮದಲ್ಲಿ ಈ ಸೋದರರ ಜನನವಾಯಿತು ಎಂದು ಭಾವಿಸುವಂತಾಗಿದೆ. 

ಅಷ್ಟೇ ಅಲ್ಲ; ರಾಮಾಯಣವನ್ನು ಕುರಿತ ವಿವಿಧ ಸಾಹಿತ್ಯಪ್ರಕಾರಗಳಲ್ಲಿ ವಿಷ್ಣುವು ರಾಮ, ಆದಿಶೇಷನು ಲಕ್ಷ್ಮಣ, ಆಯುಧಗಳು ಭರತ-ಶತ್ರುಘ್ನರಾಗಿ ಅವತರಿಸಿದರೆಂಬ ಕಥೆಗಳು, ಈ ನಾಲ್ವರ ಅವತಾರಾಂತ್ಯ ವಿವರಗಳಲ್ಲಿ ವರ್ಣನಾಭೇದಗಳು ಗೊಂದಲ ಮೂಡಿಸುತ್ತವೆ. 


ರಾಮಾಯಣದ ಮೂಲಕಥೆಗೆ ವಾಲ್ಮೀಕಿ ರಾಮಾಯಣವೇ ಅತಿಪುರಾತನ ಮೂಲಾಕರ. ಆದ್ದರಿಂದ ಅದರಲ್ಲಿ ರಾಮಾದಿಗಳ ಜನನ ಹಾಗೂ ಅವತಾರಾಂತ್ಯದ ಬಗ್ಗೆ ಏನು ಹೇಳಿದೆ? ಸಂಕ್ಷಿಪ್ತವಾಗಿ ಗಮನಿಸೋಣ. 

ವಾಲ್ಮೀಕಿರಾಮಾಯಣದ ಬಾಲಕಾಂಡದಲ್ಲಿ- ದಶರಥನು ಪುತ್ರಾರ್ಥಿಯಾಗಿ ಋಷ್ಯಶೃಂಗಮಹರ್ಷಿಯ ನೇತೃತ್ವದಲ್ಲಿ ಅಶ್ವಮೇಧಯಾಗವನ್ನೂ, ತದಂತ್ಯದಲ್ಲಿ ಪುತ್ರಕಾಮೇಷ್ಟಿಯನ್ನೂ ನಡೆಸುತ್ತಾನೆ. (ಸರ್ಗ14). ವಿಷ್ಣುವು ರಾವಣವಧಾನಿಮಿತ್ತ ತನ್ನನ್ನು ನಾಲ್ಕು ಭಾಗಮಾಡಿ, ದಶರಥಪುತ್ರರ ರೂಪದಲ್ಲಿ ಜನಿಸಲು (ಕೃತ್ವಾತ್ಮಾನಂ ಚತುರ್ವಿಧಂ ಪಿತರಂ ರೋಚಯಾಮಾಸ ತದಾ ದಶರಥಂ ನೃಪಮ್ | ಸ15/ಶ್ಲೋ30) ಸಂಕಲ್ಪಿಸುತ್ತಾನೆ. ಹೋಮಾಗ್ನಿಯಿಂದ ದಿವ್ಯಪ್ರಾಜಾಪತ್ಯಪುರುಷನು ಉದ್ಭವಿಸಿ ಸ್ವರ್ಣಕರಂಡದಲ್ಲಿ ಪಾಯಸರೂಪದ ವಿಷ್ಣುಚೈತನ್ಯವನ್ನು ದಶರಥನಿಗೆ `ನಿನ್ನ ಪತ್ನಿಯರಿಗೆ ಕುಡಿಸಿ ಸಂತಾನವನ್ನು ಪಡೆ’ ಎಂದು ನೀಡುತ್ತಾನೆ. ಅದನ್ನು ದಶರಥನು ತನ್ನ ಮೂವರು ಪತ್ನಿಯರಿಗೆ ಹಂಚುತ್ತಾನೆ- ಇದು ಸಾಮಾನ್ಯ ಕಥೆ.


ಆದರೆ ಆ ಹಂಚಿಕೆಯ ಪಾಲು ಕುತೂಹಲಕರವಾಗಿದೆ. ದಶರಥನು ಯಜ್ಞಪಾಯಸವನ್ನು ಮೂವರು ಪತ್ನಿಯರಿಗೂ ಸಮಪಾಲಾಗಿ ಹಂಚಲಿಲ್ಲ. ಪಟ್ಟಮಹಿಷಿ ಕೌಸಲ್ಯೆಗೆ ಅರ್ಧಭಾಗವನ್ನು ನೀಡುತ್ತಾನೆ. ಉಳಿದರ್ಧವನ್ನಾದರೂ ಇನ್ನಿಬ್ಬರಿಗೆ ಸಮವಾಗಿ ಹಂಚುತ್ತಾನೋ! ಅದೂ ಇಲ್ಲ. ಒಟ್ಟು ಪಾಯಸದ ಕಾಲುಭಾಗ (ಅರ್ಧಾರ್ಧ)ವನ್ನು ದ್ವಿತೀಯಪತ್ನಿ ಸುಮಿತ್ರೆಗೆ ನೀಡುತ್ತಾನೆ. ಉಳಿದ ಕಾಲುಭಾಗದಲ್ಲಿ ಅರ್ಧ ಅಂದರೆ ಒಟ್ಟು ಪಾಯಸದ ಎಂಟನೇ ಒಂದು ಭಾಗವನ್ನು ಕೈಕೇಯಿಗೆ ನೀಡುತ್ತಾನೆ. ಮೂವರಿಗೆ ಹಂಚಿಯೂ ಇನ್ನೂ ಎಂಟನೇ ಒಂದುಭಾಗ ಪಾಯಸ ದಶರಥನಲ್ಲೇ ಉಳಿಯಿತಲ್ಲ! ಅದನ್ನು ಮತ್ತೆ ಸುಮಿತ್ರೆಗೆ ಕೊಡುತ್ತಾನೆ. ಹೀಗೆ ಪಾಯಸದ ಹೆಚ್ಚು ಪ್ರಮಾಣ ಕೌಸಲ್ಯೆಗೆ, ಎರಡುಬಾರಿ ಸುಮಿತ್ರೆಗೆ ದೊರೆಯುತ್ತದೆ. (ಬಾಲ/ಸ16). ಅಂದರೆ ಒಟ್ಟು ದಿವ್ಯಪಾಯಸದ ಶೇಕಡಾವಾರು 50% ಕೌಸಲ್ಯೆಗೆ. 25+12.5% ಸುಮಿತ್ರೆಗೆ, ಕೇವಲ 12.5% ಮೋಹದಸತಿ ಕೈಕೇಯಿಗೆ! ತತ್ಕಾರಣ ವಿಷ್ಣುಚೈತನ್ಯದ ಪರಮೋಚ್ಚಭಾಗ ಕೌಸಲ್ಯೆಯ ಗರ್ಭಕ್ಕೆ, ಎರಡು ಹಂತಗಳಲ್ಲಿ ಸುಮಿತ್ರೆಯ ಗರ್ಭಕ್ಕೆ, ಎಂಟನೇ ಒಂದು ಭಾಗ ಕೈಕೇಯಿಯ ಗರ್ಭಕ್ಕೆ ಸಂದಾಯವಾಗುತ್ತದೆ. (ಸ17/ಶ್ಲೋ27-29) 

ರಾಮನ ಜನ್ಮದಿನವೆಂದು ಚೈತ್ರ ಶುಕ್ಲ ನವಮಿಯನ್ನು ರಾಮನವಮಿಯಾಗಿ, ಚೈತ್ರ ಶುಕ್ಲಾರಂಭದ 9 ತಿಥಿಗಳನ್ನು ವಸಂತನವರಾತ್ರಿಯಾಗಿ ಆಚರಿಸುವ ಸಂಪ್ರದಾಯ ನಮ್ಮದು. ಇದಕ್ಕೆ ಆಧಾರವೇನು? 


ರಾಮಾಯಣ ಹೀಗೆ ಹೇಳುತ್ತದೆ. (ಬಾಲ/ಸ18/ಶ್ಲೋ9,10)

ತತಶ್ಚ ದ್ವಾದಶೇಮಾಸೇ ಚೈತ್ರೇ ನಾವಮಿಕೇತಿಥೌ |

ನಕ್ಷತ್ರೇ$ದಿತಿದೈವತ್ಯೇ ಸ್ವೋಚ್ಚಸಂಸ್ಥೇಷು ಪಂಚಸು| 

ಗ್ರಹೇಷು ಕರ್ಕಟೇಲಗ್ನೇ ವಾಕ್ಪತಾವಿಂದುನಾ ಸಹ | 

ಪ್ರೋದ್ಯಮಾನೇ ಜಗನ್ನಾಥಂ ಸರ್ವಲೋಕ ನಮಸ್ಕೃತಂ|| 


ಇದರಂತೆ `ಪುತ್ರಕಾಮೇಷ್ಟಿಯ ನಂತರದ 12ನೇ ತಿಂಗಳಾದ ಚೈತ್ರ (ಶುಕ್ಲ) ನವಮಿತಿಥಿಯಂದು ಅದಿತಿ (ಪುನರ್ವಸು) ನಕ್ಷತ್ರದಲ್ಲಿ ಐದು ಗ್ರಹಗಳು ತಮ್ಮತಮ್ಮ ಸ್ವಕ್ಷೇತ್ರಗಳಲ್ಲೂ, ಗುರುವಿನೊಂದಿಗೆ ಚಂದ್ರನು ಕರ್ಕಾಟಕದಲ್ಲೂ ಇದ್ದಾಗ ಸರ್ವಲೋಕವಂದ್ಯ ಜಗದೊಡೆಯ ವಿಷ್ಣುವು ಅವತರಿಸಿದನು’. 


ಇದರಂತೆ ಶ್ರೀರಾಮನ ಜನ್ಮಕುಂಡಲಿಯನ್ನು ರಚಿಸಿದರೆ ಚೈತ್ರಮಾಸವಾದ ಕಾರಣ ಸೂರ್ಯನು ತನ್ನ ಉಚ್ಚಸ್ಥಾನವಾದ ಮೇಷರಾಶಿಯಲ್ಲಿ, ಕರ್ಕಾಟಕಲಗ್ನವಾದ ಕಾರಣ ಚಂದ್ರನು ಕಟಕದಲ್ಲಿ, ಅವನ ಜೊತೆಯೇ ಗುರುವೂ ಕಟಕದಲ್ಲಿ, ಬುಧನು ಕನ್ಯಾದಲ್ಲಿ, ಶನಿಯು ತುಲಾದಲ್ಲಿ, ಶುಕ್ರನು ಮೀನದಲ್ಲಿ ಇದ್ದರು ಎಂದಾಗುತ್ತದೆ. ಈ ಗ್ರಹ ಸಂಯೋಜನೆಯಲ್ಲಿ ಇಂದಿನ ಕಾಲಗಣನ ಪದ್ಧತಿಯ ಪ್ರಕಾರ ಕೆಲವು ಚಿಕ್ಕ ತೊಡಕುಗಳು ಕಾಣುತ್ತವೆ. ಆದರೆ ರಾಮಾಯಣಕಾಲದಿಂದ ಇಂದಿನವರೆಗೆ ಭೂಆವರ್ತನಾವಧಿಯಲ್ಲಿ ವ್ಯತ್ಯಾಸ, ಭೂಮಿ-ಚಂದ್ರರ ಅಂತರದಲ್ಲಿ ಹೆಚ್ಚಳ ಇತ್ಯಾದಿ ಕಾರಣಗಳಿಂದ ಖಗೋಳೀಯ ಗಣಿತಸೂತ್ರಗಳಲ್ಲಿ ವ್ಯತ್ಯಾಸವುಂಟಾಗುತ್ತಿದೆ. ಉದಾ: ವೇದಾಂಗಜ್ಯೋತಿಷದ ಕಾಲದಲ್ಲಿ ವರ್ಷಾರಂಭವು ಕೃತ್ತಿಕಾನಕ್ಷತ್ರದಲ್ಲಿ ಸೂರ್ಯಸಹೋದಯದಲ್ಲಿತ್ತು. ಮುಂದೆ ಮೃಗಶಿರೆಗೆ ಬಂದು ಈಗ ಚಿತ್ತಾನಕ್ಷತ್ರದಲ್ಲಿ ನಡೆಯುತ್ತಿದೆ. ಅಯನಾರಂಭದಲ್ಲಿ ಪ್ರತಿ 71ವರ್ಷಕ್ಕೆ ಒಂದು ದಿನದಷ್ಟು ವ್ಯತ್ಯಾಸವಾಗುತ್ತಿದೆ. ಇಂಥ ಖಗೋಳವಿದ್ಯಮಾನಗಳಿಂದ `ಶ್ರೀರಾಮನ ಜನನಕಾಲದ ಗ್ರಹಚಲನಗಣಿತಕ್ಕೂ, ಇಂದಿನ ಗಣಿತಕ್ಕೂ ವ್ಯತ್ಯಾಸವಿರುವ ಕಾರಣ ಇಂದಿನ ಪಂಚಾಂಗಕ್ರಮಕ್ಕೆ ಶ್ರೀರಾಮನ ಜನ್ಮಕುಂಡಲಿ ಪೂರ್ಣವಾಗಿ ಹೊಂದುವುದಿಲ್ಲ. ಅಷ್ಟುಹೊರತು ಇದರಲ್ಲಿ ಜಾತಕನಿರ್ಣಯದೋಷವಿಲ್ಲ’ ಎಂದು ಕೆಲವು ತಜ್ಞರು ವಾದಿಸಿದ್ದಾರೆ.


ಇದು ಶ್ರೀರಾಮನ ಜನನತಿಥಿಯಾಯಿತು. ಇನ್ನು ಮೂವರ ಜನನ ತಿಥಿಗಳೇನು? ಈ ನಾಲ್ವರ ಜನನದ ಸರಣಿಯೇನು? ನಡುವಿನ ಅಂತರವೆಷ್ಟು? ಎಂಬ ಕುತೂಹಲ ಮೂಡುತ್ತದಲ್ಲ! ಅದನ್ನೂ ರಾಮಾಯಣವೇ ಮುಂದಿನ ಶ್ಲೋಕಗಳಲ್ಲಿ ಸ್ಪಷ್ಟೀಕರಿಸಿದೆ. ರಾಮ ಸೋದರರನ್ನು ರಾಮ-ಲಕ್ಷ್ಮಣ-ಭರತ-ಶತ್ರುಘ್ನ ಎಂಬ ಕ್ರಮದಲ್ಲಿ ಗುರ್ತಿಸುತ್ತೇವೆ. ಮೊದಲು ಹುಟ್ಟಿದ್ದು ವಿಷ್ಣುಚೈತನ್ಯದ ಅರ್ಧಭಾಗವನ್ನು ಸೇವಿಸಿದ ಕೌಸಲ್ಯಾಗರ್ಭಸಂಜಾತ ಶ್ರೀರಾಮ; ರಾಮನ ನಂತರ ಜನಿಸಿದ್ದು ಲಕ್ಷ್ಮಣನಲ್ಲ. ಕೈಕೇಯೀತನಯ ಭರತ. ನಂತರ ಎರಡುಬಾರಿ ಪಾಯಸ ಪ್ರಾಶನ ಮಾಡಿದ ಸುಮಿತ್ರೆಗೆ ಅವಳಿ ಮಕ್ಕಳಾಗಿ ಲಕ್ಷ್ಮಣ-ಶತ್ರುಘ್ನರು; ಇದು ರಾಮಸೋದರರ ಜನನಕ್ರಮ. ವಿಷ್ಣುವಿನ ಅರ್ಧಾಂಶದಿಂದ ಮಹಾತ್ಮ ರಾಮನು ಕೌಸಲ್ಯಾಪುತ್ರನಾಗಿ (ವಿಷ್ಣೋರರ್ಧಂ ಮಹಾಭಾಗಂ ಪುತ್ರಂ) ನವಮಿಯಂದು ಜನಿಸಿದರೆ ಉಳಿದವರು ಮರುದಿನ ದಶಮಿಯಂದು ಜನಿಸಿದರು. ರಾಮನು ನವಮಿಯಂದು ಪುನರ್ವಸುನಕ್ಷತ್ರ ಕಟಕ ಲಗ್ನದಲ್ಲೂ, ನಂತರ ಕೈಕೇಯಿಯಲ್ಲಿ ಭರತನು ದಶಮಿ ಪುಷ್ಯ ನಕ್ಷತ್ರ ಮೀನ ಲಗ್ನದಲ್ಲೂ, ನಂತರ ಅಂದೇ ಆಶ್ಲೇಷಾನಕ್ಷತ್ರ ಕರ್ಕಾಟಕಲಗ್ನದಲ್ಲಿ ಸುಮಿತ್ರೆಗೆ ಅವಳಿ ಮಕ್ಕಳಾಗಿ ಲಕ್ಷ್ಮಣ-ಶತ್ರುಘ್ನರೂ ಜನಿಸಿದರು. (ಸ18,ಶ್ಲೋ11-14) ಹೀಗೆ ರಾಮನ ಹಾಗೂ ಅವನ ಮೂವರು ಸೋದರರ ಜನನಕ್ಕೆ ಒಂದೇ ದಿನದ ಅಂತರ.


ಇನ್ನು `ಆದಿಶೇಷನು ಲಕ್ಷ್ಮಣನಾಗಿ, ವೈಷ್ಣವಾಯುಧಗಳು ಭರತ-ಶತುಘ್ನರಾಗಿ ಜನಿಸಿದರು’ ಎಂಬ ಕಥೆಗಳೂ ಪ್ರಚಾರದಲ್ಲಿವೆ. ಆದರೆ ಮೂಲರಾಮಾಯಣದ ಪ್ರಕಾರ ರಾವಣಸಂಹಾರನಿಮಿತ್ತ ದೇವತೆಗಳು ವಿಷ್ಣುವನ್ನು `ನಿನ್ನ ಚತುರ್ಭಾಗಗಳಿಂದ ದಶರಥನ ಮೂವರು ಪತ್ನಿಯರಲ್ಲಿ ಪುತ್ರರಾಗಿ ಅವತರಿಸು’ (ರಾಜ್ಞೋ ದಶರಥಸ್ಯ .. ಭಾರ್ಯಾಸು ತ್ರಿಷು ಹ್ರೀ ಶ್ರೀ ಕೀತ್ರ್ಯುಪಮಾಸು ಚ ವಿಷ್ಣೋ ಪುತ್ರಮಾಗಚ್ಛ ಕೃತ್ವಾತ್ಮಾನಾಂ ಚತುರ್ವಿಧಂ-ಸ15/ಶ್ಲೋ20) ಎಂದು ಕೋರುತ್ತಾರೆ. ಅದರಂತೆ `ವಿಷ್ಣುವು ತನ್ನನ್ನು ನಾಲ್ಕುಭಾಗ ಮಾಡಿ, ದಶರಥನನ್ನು ತಂದೆಯಾಗಿಸಿ ಜನಿಸಿದನು’ (ಪದ್ಮಪಲಾಶಾಕ್ಷಃ ಕೃತ್ವಾತ್ಮಾನಾಂ ಚತುರ್ವಿಧಂ ಪಿತರಂ ರೋಚಯಮಾಸÀ ತದಾ ದಶರಥಂ ನೃಪಮ್-ಸ15/ಶ್ಲೋ30) ಎಂದೇ ಅತಿಸ್ಪಷ್ಟವಾಗಿ ದಾಖಲಿಸಿದೆ. ಹಾಗಾಗಿ ದಶರಥನ ನಾಲ್ಕುಮಕ್ಕಳೂ ವಿಷ್ಣುಚೈತನ್ಯದ ನಾಲ್ಕು ತುಣುಕುಗಳೇ ಆಗಿದ್ದಾರೆ.


ಕ್ರಮಶಃ ರಾಮ, ಭರತ, ಲಕ್ಷ್ಮಣ, ಶತ್ರುಘ್ನರ ಜನನವಾಗಿದ್ದಾದರೆ ಅವರನ್ನು ರಾಮ-ಲಕ್ಷ್ಮಣ-ಭರತ-ಶತ್ರುಘ್ನ ಎಂಬ ಕ್ರಮದಲ್ಲೇಕೆ ಗುರ್ತಿಸುತ್ತೇವೆÉ? ಇದಕ್ಕೂ ಕಾರಣವಿದೆ. ರಾಮನ ನಂತರ ಭರತನೂ, ತದನಂತರ ಸುಮಿತ್ರೆಯ ಅವಳಿಮಕ್ಕಳಾಗಿ ಲಕ್ಷ್ಮಣ-ಶತ್ರುಘ್ನರೂ ಜನಿಸಿದರು. ಆದರೂ ಜನ್ಮತಃ ರಾಮ-ಲಕ್ಷ್ಮಣರಲ್ಲಿ ಅವಿನಾಭಾವ. ರಾಮ-ಲಕ್ಷ್ಮಣರು `ತಾವು ಬೇರೆÀಬೇರೆ ಅಲ್ಲವೇಅಲ್ಲ’ ಎಂಬಂತಿದ್ದರು. ರಾಮನಿಗೆ ಲಕ್ಷ್ಮಣನು ಹೊರಜೀವ (ಬಹಿಃಪ್ರಾಣ ಇವಾಪರಃ-ಸ18/ಶ್ಲೋ29) ಲಕ್ಷ್ಮಣನಿಲ್ಲದೆ ರಾಮನಿಗೆ ಊಟ-ನಿದ್ರೆಗಳಿಲ್ಲ. (ನಚ ತೇನವಿನಾ ನಿದ್ರಾಂ ಲಭತೇ, ಮೃಷ್ಟಮನ್ನಮುಪಾನೀತಮಶ್ನಾತಿ ನಚ ತಂವಿನಾ-ಶ್ಲೋ30) ರಾಮನು ಬೇಟೆಗೆ ಹೊರಟರೆ ಲಕ್ಷ್ಮಣನೂ ಧನುರ್ಧಾರಿಯಾಗಿ ಹಿಂಬಾಲಿಸುತ್ತಿದ್ದನು.(ಶ್ಲೋ31). ವನವಾಸದಲ್ಲಿ ರಾಮನ ಛಾಯಾನುವರ್ತಿಯಾದದ್ದು, ರಾಮಸೇವೆಗಳನ್ನು ನಿರ್ವಹಿಸಿದ್ದು ಲಕ್ಷ್ಮಣನೇ.


ರಾಮನಿಗೆ ಲಕ್ಷ್ಮಣನು ಜೋಡಿಯಾದಂತೆ ಭರತನಿಗೆ ಶತ್ರುಘ್ನನು ಪ್ರಾಣಪ್ರಿಯನಾದನು (ಶ್ಲೋ32). ಸ್ವತಃ ತಾವು ಸುಮಿತ್ರೆಯ ಅವಳಿ ಮಕ್ಕಳಾದರೂ ಲಕ್ಷ್ಮಣನು ಹಿರಿಯಣ್ಣ ರಾಮನಿಗೂ, ಶತ್ರುಘ್ನನು ಎರಡನೇ ಅಣ್ಣ ಭರತನಿಗೂ ಪ್ರ್ರಿಯರಾಗಿ ರಾಮ-ಲಕ್ಷ್ಮಣರು ಒಂದು ಜೋಡಿಯೂ ಭರತ ಮತ್ತು ಶತ್ರುಘ್ನರು ಮತ್ತೊಂದು ಜೋಡಿಯೂ ಆದರು. ಇದರಿಂದ ಈ ಜೋಡಿಗಳನ್ನು ರಾಮ-ಲಕ್ಷ್ಮಣ, ಭರತ-ಶತ್ರುಘ್ನ ಎಂಬ ಕ್ರಮದಲ್ಲಿ ಗುರ್ತಿಸುವುದು ಸಂಪ್ರದಾಯವಾಯಿತು.


`ಅವತಾರಾಂತ್ಯದಲ್ಲಿ ರಾಮನು ಸರಯೂನದಿಯಲ್ಲಿ ದೇಹತ್ಯಾಗ ಮಾಡಿದನು. ಉಳಿದ ಮೂವರೂ ಸಹೋದರರು ಅವನ್ನು ಅನುಸರಿಸಿದರು’ ಎಂಬ ಕಥೆ ಬಳಕೆಯಲ್ಲಿದೆ. ಆದರೆ ರಾಮಾಯಣ (ಉತ್ತರಕಾಂಡ)ದ ಉಲ್ಲೇಖವೇ ಬೇರೆ. ರಾವಣವಧಾನಂತರ ರಾಮಾವತಾರದ ಪರಿಸಮಾಪ್ತಿನಿಮಿತ್ತ ಕಾಲಪುರುಷನ ಸಂದರ್ಶನಕ್ಕಾಗಿ ರಾಮನು ವಿಧಿಸಿದ್ದ ಏಕಾಂತವನ್ನು ದುರ್ವಾಸರ ಕಾರಣ ಲಕ್ಷ್ಮಣನು ಮುರಿದ ಪರಿಣಾಮ ರಾಮನು ಲಕ್ಷ್ಮಣನಿಗೆ ಮರಣದಂಡನೆ ವಿಧಿಸಬೇಕಾಗುತ್ತದೆ. ಆದರೆ `ಪರಿತ್ಯಾಗವು ಮರಣದಂಡನೆಗೆ ಸಮ’ (ತ್ಯಾಗೋ ವಧೋವಾ.. ಉಭಯಂ ಸಮಮ್) ಎಂಬ ರಾಜನೀತಿಯಂತೆ ರಾಮನು ಲಕ್ಷ್ಮಣನನ್ನು ಪರಿತ್ಯಜಿಸುತ್ತಾನೆ. (ವಿಸರ್ಜಯೇತ್ ತ್ವಾಂ ಸೌಮಿತ್ರೇ-ಉಕಾಂ/ಸ106/ಶ್ಲೋ13), ತಕ್ಷಣ ಲಕ್ಷ್ಮಣನು ಸರಯೂತಟಕ್ಕೆ ಬಂದು ಯೋಗಾಸನದಲ್ಲಿ ಸರ್ವೇಂದ್ರಿಯಗಳನ್ನೂ ಶ್ವಾಸವನ್ನೂ ಬಂಧಿಸುತ್ತಾನೆ. ಆಗ ಇಂದ್ರನು ಬಂದು ಲಕ್ಷ್ಮಣನನ್ನು ದೇಹಸಹಿತವಾಗಿ ಸ್ವರ್ಗಕ್ಕೆ ಒಯ್ಯುತ್ತಾನೆ. ಲಕ್ಷ್ಮಣರೂಪದಲ್ಲಿ ವಿಷ್ಣುಚೈತನ್ಯದ ಭಾಗವು ಸ್ವರ್ಗಕ್ಕೆ ಬಂದದ್ದನ್ನು (ವಿಷ್ಣೋಶ್ಚತುರ್ಭಾಗಮಾಗತಂ-ಶ್ಲೋ18) ಕಂಡು ದೇವತೆಗಳು ಹರ್ಷಿಸುತ್ತಾರೆ.


ಮುಂದೆ ರಾಮನು ಲವ-ಕುಶರಿಗೆ ಕೋಸಲದ ಉತ್ತರ-ದಕ್ಷಿಣಾರ್ಧಗಳ ಪಟ್ಟಕಟ್ಟಿ, ಹನುಮ-ವಿಭೀಷಣ-ಜಾಂಬವಾದಿಗಳಿಗೆ ಚಿರಂಜೀವಿತ್ವ-ಕರ್ತವ್ಯಗಳನ್ನು ವಿಧಿಸಿ, ಅಭಿಮಾನಿಗಳ ಸಹಿತ ಸರಯೂತಟದ ಗೋಪ್ರತಾರಘಟ್ಟದಲ್ಲಿ ಜಲಪ್ರವೇಶಕ್ಕೆ ತೊಡಗಿದರೂ, ಬ್ರಹ್ಮನ `ಭ್ರಾತೃಭಿಸ್ಸಃ.. ಪ್ರವಿಶಸ್ವ ಸ್ವಕಾಂ ತನುಮ್’ ಕೋರಿಕೆಯಂತೆ ಜಲಪ್ರವೇಶದ ಬದಲು ಸೋದರಸಹಿತ ರಾಮನು ತನ್ನ ಮೂಲ ವೈಷ್ಣವತನುವನ್ನು ಪ್ರವೇಶಿಸಿ, ಅಗೋಚರನಾಗಿ ಹಿಂದಿನಂತೆಯೇ ಸ್ವರ್ಗದಲ್ಲಿ ಪ್ರತಿಷ್ಠಿತನಾಗುತ್ತಾನೆ. (ತತಃ ಪ್ರತಿಷ್ಠಿತೋ ವಿಷ್ಣುಃ ಸ್ವರ್ಗಲೋಕೇ ಯಥಾಪುರಾ) ರಾಮನೊಂದಿಗೆ ಬಂದು ಸರಯೂನದಿಯಲ್ಲಿ ದೇಹತ್ಯಾಗ ಮಾಡಿದ ಎಲ್ಲ ಜೀವರಾಶಿಗಳನ್ನು ಬ್ರಹ್ಮನು ದೇವವಿಮಾನಗಳಲ್ಲಿ ಸಾಂತಾನಿಕ ಎಂಬ ಪುಣ್ಯಲೋಕಕ್ಕೆ ಒಯ್ಯುತ್ತಾನೆ (ಉಕಾಂ/ಸ110,111) 

ಇದು ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮಸೋದರರ ಜನನ ಹಾಗೂ ಅವತಾರಾಂತ್ಯದ ವಿವರ.

ರಾಮಾಯಣದ ನಂತರ ಸರಯೂ ನದಿಯಲ್ಲಿ ಬಹಳಷ್ಟು ನೀರು ಹರಿದಿರುವಂತೆಯೇ ರಾಮಾಯಣದ ನೂರಾರು ಅವತರಣಿಕೆಗಳೂ ಮೂಡಿಬಂದಿದ್ದು, ಅವುಗಳಲ್ಲಿ ಪ್ರಸಂಗತ್ವೇನ ವರ್ಣನಾವೈವಿಧ್ಯಗಳು ಮೈದಾಳಿವೆ ಎಂಬುದು ಇಲ್ಲಿ ಗಮನಾರ್ಹ. `ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’ ಎಂಬ ಕವಿವಾಣಿ ಸುಮ್ಮನೇ ಹುಟ್ಟಿಲ್ಲ! ಅದೇನೇ ಇದ್ದರೂ ರಾಮಾಯಣದ ಆದಿಮ ಸ್ವರೂಪಾಧ್ಯಯನಕ್ಕೆ ವಾಲ್ಮೀಕಿಗಳ ಶ್ರೀಮದ್ರಾಮಾಯಣವೇ ಮೂಲಾಧಾರ ಎಂಬುದನ್ನು ಎಂದೂ ಮರೆಯುವಂತಿಲ್ಲ.


(ಗ್ರಂಥಋಣ: ಶ್ರೀಮದ್ವಾಲ್ಮೀಕಿ ರಾಮಾಯಣ. ಪ್ರ: ಭಾರತದರ್ಶನ ಕಾರ್ಯಾಲಯ, ಬೆಂಗಳೂರು. 1, 2, 11ನೇ ಸಂಪುಟಗಳು)




- ಡಾ. ಶ್ರೀವತ್ಸ ಎಸ್. ವಟಿ, ಬೇಲೂರು. 

ದೂ.ವಾ : 9141810093


ಲೇಖಕರ ಸಂಕ್ಷಿಪ್ತ ಪರಿಚಯ:

ಡಾ. ಶ್ರೀವತ್ಸ ಎಸ್.ವಟಿ. ಹಾಸನ ಜಿಲ್ಲೆ ಬೇಲೂರು ನಿವಾಸಿ. ಎಂ.ಎ., ಕನ್ನಡ ಪದವಿ, `ಭಾರತೀಯ ವಾಙ್ಮಯದಲ್ಲಿ ಕಾಲಗಣನೆ’ ಮಹಾಪ್ರಬಂಧಕ್ಕೆ ಮೈಸೂರು ಕ.ರಾ.ಮು. ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ., ಪದವಿ, ಹಿಂದಿಯಲ್ಲಿ ರಾಷ್ಟ್ರಭಾಷಾ ವಿದ್ವಾನ್ ಪದವಿ. 

ಹಳಗನ್ನಡ ಸಾಹಿತ್ಯಾಧ್ಯಯನ-ಬೋಧನೆ, ಗಮಕ ವ್ಯಾಖ್ಯಾನ, ಶಾಸನಗಳ ಅಧ್ಯಯನ, ಅಪ್ರಕಟಿತ ಶಾಸನಗಳ ಆವಿಷ್ಕರಣ, ಲಿಪಿ-ಭಾಷೆಗಳ ಅಧ್ಯಯನ, ಶಿಲ್ಪಶಾಸ್ತ್ರ ಮುಂತಾದ ಬಗ್ಗೆ ಆಸಕ್ತಿ. ರಾಷ್ಟ್ರ-ರಾಜ್ಯಮಟ್ಟದ ವಿಚಾರಸಂಕಿರಣಗಳು, ಸಾಹಿತ್ಯ ಸಮ್ಮೇಳನಗಳು ಮುಂತಾದಲ್ಲಿ ನೂರಾರು ವಿಚಾರ ಮಂಡನೆಗಳಾಗಿವೆ.  ಉಪನ್ಯಾಸ, ಉಪನ್ಯಾಸ ಮಾಲೆಗಳಿಗಾಗಿ ಅಂತಾರಾಜ್ಯ ಮಟ್ಟದಲ್ಲಿ ಆಹ್ವಾನಿತರು. 

ಸಂಶೋಧನೆ-ಸಾಹಿತ್ಯರಚನೆಗಳಲ್ಲಿ ಅಭಿರುಚಿ. 16 ಪುಸ್ತಕಗಳು, ಸುಮಾರು 500ಕ್ಕೂ ಹೆಚ್ಚು ಬಿಡಿ ಲೇಖನಗಳು, ಲೇಖನಮಾಲೆಗಳು, ಛಾಯಾಚಿತ್ರಗಳು ಪ್ರಕಟಗೊಂಡಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣ, ಯುನೆಸ್ಕೋ ಭಾರತೀಯ ಪ್ರತಿನಿಧಿ ಮುಂತಾದವರಿಗಾಗಿ ಸಂಶೋಧನೆ- ದಾಖಲಾತಿಗಳನ್ನು ಮಾಡಿಕೊಟ್ಟಿದ್ದಾರೆ. ಮೈಸೂರು ಮಾನಸಗಂಗೋತ್ರಿಯ ಕ.ರಾ.ಮು. ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಮುಂಬಯಿಘಟಕ ಮುಂತಾದವರು ಸಂಶೋಧನಾಗ್ರಂಥಗಳನ್ನು ಬರೆಸಿ ಪ್ರಕಟಿಸಿದ್ದಾರೆ. ಅಹಮದಾಬಾದಿನ ಇಂಡಸ್ ಯೂನಿವರ್ಸಿಟಿಯು ಇವರಿಂದ ಉಪನ್ಯಾಸಮಾಲೆಯನ್ನು ಮಾಡಿಸಿ ಪ್ರಕಟಿಸಿದೆ. 

ಸಾಹಿತ್ಯ-ಸಂಶೋಧನಾದಿ ಸಾಧನೆಗಳಿಗಾಗಿ ನೂರಾರು ಸನ್ಮಾನಗಳೂ, ಕಣ್ವಶ್ರೀ (ರಾಜ್ಯಪ್ರಶಸ್ತಿ), ಕರ್ನಾಟಕ ಶಿರೋಮಣಿ (ರಾಜ್ಯಪ್ರಶಸ್ತಿ), ಸಾಲುಮರದ ತಿಮ್ಮಕ್ಕ ಹಸಿರು ಪ್ರಶಸ್ತಿ, ಅಳಸಿಂಗ ಪೆರುಮಾಳ್ ಪ್ರಶಸ್ತಿ ಮುಂತಾದ ಪ್ರಶಸ್ತಿಗಳೂ, ಸ್ವಾಧ್ಯಾಯನಿರತ, ಅನ್ವೇಷಣಾ ನಿಪುಣ, ಸಂಶೋಧನಾ ಚತುರ, ಸಂಶೋಧನಾ ಪ್ರವೀಣ, ಸಂಶೋಧನಾ ರತ್ನಾಕರ, ಕನ್ನಡ ಸಾಹಿತ್ಯಾರಾಮರತ್ನ, ಪ್ರಾಚ್ಯಸಂಸ್ಕೃತಿ ಸಂಶೋಧನಾ ಸಾರ್ವಭೌಮ ಮುಂತಾದ ಹಲವಾರು ಬಿರುದುಗಳೂ, ಬೇಲೂರು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಇವರಿಗೆ ಸಂದಿವೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top