-ಶ್ರೀಮತಿ ಮೃಣಾಲಿನಿ. ಪಿ. ಅಗರಖೇಡ್
ಭಾರತದಲ್ಲಿ ‘ರಾಮಾಯಣ’ 2000 ವರ್ಷಗಳ ಹಿಂದೆ ಬರೆದಿರಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ಪುರಾತನ ಇತಿಹಾಸ ಉಳ್ಳ ರಾಮಕಥೆ ಭಾರತದಲ್ಲಿ ಅಷ್ಟೇ ಅಲ್ಲ ಜಗತ್ತಿನ ಬೇರೆ ಬೇರೆ ದೇಶದಲ್ಲಿಯೂ ಭಾರತದಷ್ಟೇ ಪೂಜನೀಯವಾಗಿದೆ. ಆಗ್ನೇಯ ಏಷ್ಯಾದಲ್ಲಿ ಯಾವಾಗ, ಹಿಂದೂ ಧರ್ಮ ಹಾಗೂ ಬೌದ್ಧ ಧರ್ಮ ಪ್ರಖ್ಯಾತಿ ಹೊಂದಿತೋ ಆಗ ರಾಮಾಯಣವು ಆಗ್ನೇಯ ಏಷ್ಯಾಕ್ಕೆ ತಲುಪಿತು. ಅಲ್ಲಿ ಆಗ Mon ಮತ್ತು Khemer ಎಂಬ ನಾಗರಿಕತೆಗಳು ಅಸ್ತಿತ್ವದಲ್ಲಿದ್ದವು. ಈ ನಾಗರಿಕತೆಗಳ ಮೇಲೆ ಬ್ರಾಹ್ಮಣ ಸಮುದಾಯದ ಹಾಗೂ ಹಿಂದುತ್ವದ ಪ್ರಭಾವ ಪ್ರಬಲವಾಗಿತ್ತು. ಪೌರಾಣಿಕ ಕಥೆಗಳು, ರಾಜಕಾರಣ, ಕಲೆ, ಭಾಷೆ ಮತ್ತು ಸಂಸ್ಕೃತಿಗಳ ಮೇಲೆ ಭಾರತೀಯತೆಯ ಪ್ರಭಾವ ಎದ್ದು ಕಾಣುತ್ತಿತ್ತು.
1238 ರಲ್ಲಿ ಥಾಯ್ಲೆಂಡಿನ ಮೊದಲ ಸ್ವತಂತ್ರ ಸಾಮ್ರಾಜ್ಯ ‘ಸುಖೊಥಾಯಿ’ ಹಿಂದುತ್ವದ ಪ್ರಭಾವವನ್ನು ಮುಂದುವರೆಸಿಕೊಂಡು ಹೋಯಿತು. ಬುದ್ಧ ಹಾಗೂ ಕ್ರಿಸ್ತನ ಹಾಗೆ ಇಲ್ಲಿ ರಾಮ ಸನ್ಯಾಸಿ ಆಗಿರದೆ ನಮ್ಮ ನಿಮ್ಮಂತೆ ಗೃಹಸ್ಥನಾಗಿದ್ದ, ಪ್ರೀತಿಯ ಹೆಂಡತಿ ಇದ್ದಳು, ಇಲ್ಲಿ ದಾಂಪತ್ಯದ ಪ್ರೇಮ ಅನುರಾಗಕ್ಕೆ ಆಸ್ಪದವಿತ್ತು. ರಾಮ ಅತ್ಯಂತ ಆಕರ್ಷಕವಾದ ರೂಪ ಉಳ್ಳವನಾಗಿದ್ದ, ಶೂರನಾಗಿದ್ದ, ಉಪಟಳ ಕೊಡುವ ವೈರಿಗಳಿಗೆ ದುಸ್ವಪ್ನವಾಗಿದ್ದ. ಆದರ್ಶ ಮಗ ಹಾಗು ಪತಿಯಾಗಿದ್ದ. ಅತಿಲೋಕಸುಂದರಿ ಸೀತೆಯು ಆದರ್ಶ ಪತ್ನಿಯಾಗಿದ್ದಳು, ನಿಷ್ಠಾವಂತಳಾಗಿದ್ದಳು, ಆಪ್ತ ಬಾಳ ಸಂಗಾತಿಯಾಗಿದ್ದಳು.
ರಾಮಕೀನ್ ಐತಿಹ್ಯ:
ಕ್ರಿ. ಪೂ 321 ಚಂದ್ರಗುಪ್ತ ಮೌರ್ಯ ಹಾಗೂ ಅಶೋಕನ ಕಾಲದಲ್ಲಿ, ಭಾರತೀಯ ವ್ಯಾಪಾರಿಗಳು ಅನ್ಯ ದೇಶಗಳ ಜೊತೆ ವ್ಯಾಪಾರ ಸಂಬಂಧ ಬೆಳೆಸಲು, ಬೌದ್ಧ ಧರ್ಮ ಪ್ರಚಾರ ಮಾಡಲು ಬಂಗಾಳ ಕೊಲ್ಲಿಯನ್ನು ದಾಟಿ ಬರ್ಮ, ಲಾವೋಸ್, ಥಾಯ್ಲೆಂಡ್ ದೇಶಕ್ಕೆ ವಲಸೆ ಹೋದರು. ಇನ್ನೂ ಕೆಲವರು ದಕ್ಷಿಣ ಭಾರತದಿಂದ ಇಂಡೋನೇಷಿಯಾ, ಬಾಲಿ, ಮಲಯ ದೇಶಗಳಲ್ಲಿ ನೆಲಿಸಿ, ಅಲ್ಲಿನ ಜನಾಂಗದ ಸ್ತ್ರೀಯರನ್ನು ಮದುವೆಯಾಗಿ, ಶಾಶ್ವತವಾಗಿ ಅಲ್ಲಿಯೇ ಉಳಿದುಬಿಟ್ಟರು. ಇಂತಹ ವಲಸಿಗರಿಂದ ಭಾರತೀಯ ಸಂಸ್ಕೃತಿ, ಆಚರಣೆಗಳು, ಪೌರಾಣಿಕ ಕಥೆಗಳು, ಅಲ್ಲಿನ ಜನಮಾನಸದಲ್ಲಿ ಬೀಡು ಬಿಟ್ಟವು. ಅಲ್ಲಿದ್ದ ಸಾಂಸ್ಕೃತಿಕ ಖಾಲಿತನವನ್ನು (cultural vaccum) ತುಂಬಿಸಿದವು. ಬ್ರಾಹ್ಮಣ್ಯಕ್ಕೆ ಪ್ರಾಶಸ್ತ್ಯ ದೊರಕಿತು. ರಾಜರು ಬ್ರಾಹ್ಮಣರನ್ನು ಗುರುಗಳಂತೆ ಭಾವಿಸಿ ಅವರ ಮಾತನ್ನು ಮೀರುತ್ತಿರಲಿಲ್ಲ.
ಈಗಲೂ ಕೂಡ ಥಾಯ್ ಸಂಸ್ಕೃತಿಯಲ್ಲಿ, ಭಾರತೀಯತೆ ಹಾಸು ಹೊಕ್ಕಾಗಿದೆ. ಅಲ್ಲಿನ ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಕಲೆ ನಾಟಕ, ನೃತ್ಯ, ಅಷ್ಟೇಯಾಕೆ ಅಲ್ಲಿನ ಮೂಢನಂಬಿಕೆಗಳು ಕೂಡ ಭಾರತೀಯತೆಯನ್ನು ಬಿಂಬಿಸುತ್ತವೆ. ಇದೆಲ್ಲರಕಿಂತ ಹೆಚ್ಚಾಗಿ ಅವರು ರಾಮಾಯಣವನ್ನು ಅತಿಯಾಗಿ ಮೆಚ್ಚಿ, ಅದನ್ನು ಶ್ರದ್ಧೆಯಿಂದ ಒಪ್ಪಿಕೊಂಡು, ನಾನಾ ವಿಧದಿ ಕೊಂಡಾಡಿದ್ದಾರೆ.
11 ಹಾಗೂ 12ನೇ ಶತಮಾನದಲ್ಲಿ ರಾಮಾಯಣ ಥಾಯ್ ಸಂಸ್ಕೃತಿಯಲ್ಲಿ ಬೇರೂರಿತು. ಅಲ್ಲಿ ರಾಮಾಯಣ ಪಠಣ ನಡೆಯುತ್ತಿತ್ತು ಎಂದು ‘ಖೇಮರ್’ ನಾಗರಿಕತೆಯ ಶಿಲಾ ಶಾಸನಗಳು ಹೇಳುತ್ತವೆ. ಅವರ ರಾಜಧಾನಿಯನ್ನು ‘ಅಯುಥಾ’ ಎಂದು ನಾಮಕರಣ ಮಾಡಲಾಗಿತ್ತು. ಆದರೆ 1238 ನೇ ಇಸ್ವಿಯಲ್ಲಿ, ಥಾಯ್ ರಾಜ್ಯ, ಬರ್ಮಾ ದಾಳಿಕೋರರಿಂದ ನಲುಗಿತ್ತು, ತಾಳೆಗರಿಯಲ್ಲಿ ಬರೆದಿಟ್ಟ ದಾಖಲೆಗಳನ್ನು ಸುಟ್ಟು ಬೂದಿಗೊಳಿಸಲಾಯಿತು. ಅಯೋಥಾ ಸೋತು ನಿರ್ನಾಮವಾಗಿತ್ತು. 1782 ರಲ್ಲಿ, ಮತ್ತೆ ಥಾಯ್ಲೆಂಡ್ ಪುನರ್ ಪ್ರತಿಷ್ಠಾಪನೆಯಾಗಿ ‘ಬ್ಯಾಂಕಾಕ್’ ನಗರ ರಾಜಧಾನಿಯಾಗಿ ನೇಮಕಗೊಂಡಿತು. ಬಂಗಾರದ ಎಲೆಗಳ ಮೇಲೆ ರಾಮಾಯಣದ ದೃಷ್ಟಾಂತಗಳನ್ನು ಬರೆದಿದ್ದರಂತೆ. ರಾಮಾಯಣದ ಕಥೆಗಳನ್ನಾಧರಿಸಿದ ಮುಖವಾಡದ ನೃತ್ಯಗಳು, ನಾಟಕಗಳ ಪ್ರಸ್ತುತಿ ನಡೆಯುತ್ತಿತ್ತಂತೆ. ಅಯುಥಾ ರಾಮಾಯಣವನ್ನು 1798 ಮೊದಲ ಚಕ್ರವರ್ತಿ ಮೊದಲನೆಯ ರಾಜಾ ರಾಮ (Rama) ‘ರಾಮಕಿನ್’ ರಚಿಸಿದ ಎನ್ನಲಾಗಿದೆ. ಇದರಲ್ಲಿ ಪ್ರಸ್ತುತ ನಾಲ್ಕು ಆವೃತ್ತಿಗಳು ಕ್ರೂಡೀಕರಿಸಲ್ಪಟ್ಟವು ಎಂದು ಹೇಳಲಾಗುತ್ತದೆ. Good over Evil ಅಂದರೆ ಕೆಡುಕಿನಿಂದ ಒಳಿತಿನ ಕಡೆಗೆ. ಅನೈತಿಕತೆಯಿಂದ ನೈತಿಕತೆಯ ಕಡೆಗೆ ಕರೆದುಕೊಂಡು ಹೋಗುವುದೇ ರಾಮಾಯಣ ಎಂದು ಥಾಯ್ಲೆಂಡ್ ರಾಮಾಯಣ ‘ರಾಮಕೀನ್’ ಸಾರುತ್ತದೆ. ಇದು ಕೂಡಾ ನಮ್ಮ ದೇಶದ ರಾಮ ಕಥೆಯಂತೆಯೇ ಇದೆ. ಆದರೆ ಕೆಲವೊಂದು ವ್ಯತ್ಯಾಸಗಳನ್ನು ಗುರುತಿಸಬಹುದು. ಇಲ್ಲಿನ ಪಾತ್ರವರ್ಗದ ಹೆಸರು ವಿಭಿನ್ನವಾಗಿ ಉಚ್ಛರಿಸಲ್ಪಡುತ್ತವೆ.
ರಾಮ ಮತ್ತು ಲಕ್ಷ್ಮಣರು 10 ತಲೆ ಹಾಗೂ ಇಪ್ಪತ್ತು ಕೈಗಳಿರುವ ರಾಕ್ಷಸ ರಾಜನಾದ ‘ತೋಷಕಾಂತ’ (ರಾವಣ) ಜೊತೆ ಮಹಾಯುದ್ಧ ನಡೆಯುತ್ತದೆ. ತೋಷಕಾಂತ ‘ಪ್ರ ರಾಮ’ (ಶ್ರೀ ರಾಮ) ಪತ್ನಿ ‘ನಂಗ ಸೀತಾ’ (ಸೀತೆ) ವಂಚನೆಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ. ಬಿಳಿ ವಾನರ ಸೈನ್ಯದ ಸಹಾಯದಿಂದ ರಾಮನು ತೋಷಕಾಂತನ ಮೇಲೆ ದಾಳಿ ಮಾಡಿ, ಯುದ್ಧದಲ್ಲಿ ವಿಜಯಿಯಾಗಿ ಸೀತೆಯನ್ನು, ಸೆರೆಯಿಂದ ಬಿಡಿಸಿಕೊಂಡು ಬರುತ್ತಾರೆ.
ಥಾಯ್ ಆವೃತ್ತಿ ರಾಮಾಯಣ ಜಾತಕ ಕಥೆಗಳು, ವಾಲ್ಮೀಕಿ ರಾಮಾಯಣ, ವಿಷ್ಣು ಪುರಾಣ ಮತ್ತು ಹನುಮಾನ ನಾಟಕಗಳಿಂದ ರೂಪಿತವಾಗಿದೆ ಎಂದು ಹೇಳಲಾಗುತ್ತದೆ.
ರಾಮಕೀನ್ ಕೆಲವು ಪ್ರಮುಖ ಪಾತ್ರಗಳ ಉದಾಹರಣೆ ಹೀಗಿವೆ: ಥೌತಸರೋತ್– ದಶರಥ, ನಂಗ ಕೌಸುರಿಯಾ– ಕೌಶಲ್ಯ, ಖಿತಕಿನ್– ಕಿಷ್ಕಿಂದೆ, ಫಾಲಿ ತೀರಥ– ಮಾಹಾರಾಜ ಬಾಲಿ, ಸುಕ್ರೀಪ್ – ಸುಗ್ರೀವ, ಚೋಮಫುಫನ್– ಜಾಂಬುವಂತ, ಫಿಫಕ– ವಿಭೀಷಣ.
ಥಾಯ್ಲೆಂಡ್ ನಲ್ಲಿ ರಾಮಕೀನ್ ರಾಷ್ಟ್ರೀಯ ಗ್ರಂಥವೆಂದು ಮಾನ್ಯತೆ ಪಡೆದಿದೆ. ರಾಮಕೀನ್ ರಾಮ ಸೀತೆಯರ ಅಮರ ಪ್ರೇಮದ ಸಂಕೇತವಾಗಿದೆ. ಇಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ, ದೇಗುಲಗಳಲ್ಲಿ, ಅರೆಮನೆಗಳಲ್ಲಿ ರಾಮಕೀನ್ ನಿಂದ ಆಯ್ದ ಕಥೆಗಳ ದೊಡ್ಡ ದೊಡ್ಡ ತೈಲ ವರ್ಣದ ಪೇಂಟಿಂಗ್‌ಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿನ ವಾಸ್ತು ಶಿಲ್ಪ ರಾಮಕೀನ್ ದೃಶ್ಯಗಳನ್ನು ಪ್ರತಿಬಿಂಬಿಸುತ್ತವೆ. ಥೈಲ್ಯಾಂಡಿನ ಕಲ್ಲು ಕಲ್ಲಿನಲಿ ರಾಮಾಯಣದ ಕಥೆಗಳು ರಾರಾಜಿಸುತ್ತವೆ. Wat Pra kaew ಎಂದು ಪ್ರಖ್ಯಾತಿ ಹೊಂದಿದ Emerald Temples of Buddha, Palace of Bangkok ಮುಂತಾದ ಐತಿಹಾಸಕ ಸ್ಮಾರಕಗಳಲ್ಲಿ ರಾಮಾಯಣದ ಬಿತ್ತಿ ಚಿತ್ರಗಳನ್ನು ಇಂದಿಗೂ ನೋಡಬಹುದು. ಥಾಯ್ ಜನರಲ್ಲಿ ರಾಮನ ಬಗ್ಗೆ ಇರುವ ಪ್ರೇಮಕ್ಕೆ ಈ ಅರಮನೆಗಳ ಗೋಡೆಗಳು ಸಾಕ್ಷಿಯಾಗಿವೆ. ರಾಮಾಯಣಕ್ಕೆ ಅದ್ಭುತವಾದ ದೈವಿ ಶಕ್ತಿ ಇದೆ, ಎಂದು ಥಾಯ್ ಜನರ ನಂಬಿಕೆ. ಇದನ್ನು ಸತತವಾಗಿ ಏಳು ದಿನ, ಏಳು ರಾತ್ರಿ ಪಠಣಗೈದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, ಗಂಡು ಸಂತಾನದ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.
ರಾಮಕೀನ್ ಪಠಣ ಹಾಗೂ ಶ್ರವಣದಿಂದ ದುರುಳತೆಯಿಂದ ಹೊರಬಂದು ಆತ್ಮಶುದ್ಧಿ ಪಡೆದುಕೊಳ್ಳಬಹುದು, ವ್ಯಕ್ತಿತ್ವ ವಿಕಸನವಾಗುತ್ತದೆ, ಶುದ್ಧ ಚಾರಿತ್ರ್ಯವನ್ನು ಹೊಂದಬಹುದು ಎಂದು ಇದರ ಫಲಶ್ರುತಿ ಹೇಳುತ್ತದೆ. ರಾಮ ಸೀತೆಯನ್ನು ಹುಡುಕಿಕೊಂಡು ಹೋಗುವುದು ಎಂದರೆ ರಾಮಾಯಣವನ್ನು ಓದಿದ ವ್ಯಕ್ತಿ ನಿರ್ವಾಣವನ್ನು ಹುಡುಕಿಕೊಂಡು ಹೋದಂತೆ ಎಂದು ಅರ್ಥೈಸಿಕೊಳ್ಳುತ್ತಾರೆ.
ರಾಮಾಯಣ ಹಾಗೂ ರಾಮಕೀನ್ ಕಥಾ ಹಂದರದ ಸಾಮ್ಯತೆ ಹಾಗೂ ವಿಭಿನ್ನತೆಯ ಕೆಲವು ಉದಾಹರಣೆಗಳು:
ನಮೆಗೆಲ್ಲ ಗೊತ್ತಿರುವಂತೆ ನಮ್ಮ ರಾಮಾಯಣದಲ್ಲಿ, ಹನುಮಂತ ಬಾಲಕ್ಕೆ ಹತ್ತಿದ ಬೆಂಕಿಯಿಂದ ಇಡಿ ಲಂಕಾ ಪಟ್ಟಣವನ್ನು ಸುಟ್ಟನು ಎಂದಿದೆ.
ರಾಮಕೀನ್ ಪ್ರಕಾರ ಹನುಮಂತ ತನ್ನ ವಾನರ ಸೈನ್ಯದ ಸಹಯೋಗದೊಂದಿಗೆ ಲಂಕೆಯ ಮೇಲೆ ಆಕ್ರಮಣ ಮಾಡಿದ, ಈ ಲಂಕಾ ನಗರದ ಸುತ್ತಲೂ ಒಂದು ದೊಡ್ಡ ನದಿ ಹರಿಯುತ್ತಿತ್ತು, ಹನುಮಂತ ತನ್ನ ಅಲೌಕಿಕ ಶಕ್ತಿಗಳಿಂದ ತನ್ನ ದೇಹಾಕೃತಿಯನ್ನು ದೊಡ್ಡದಾಗಿಸಿಕೊಂಡು ತಾನೆ ಒಂದು ಸೇತುವೆಯಂತೆ ಮಲಗಿಕೊಂಡನು, ತನ್ನ ಶರೀರದ ಮೇಲೆ ಹತ್ತಿ, ನಡೆದು ವಾನರರು ಲಂಕಾ ಪಟ್ಟಣವನ್ನು ಪ್ರವೇಶಿಸಿದರು ಎಂದು ಹೇಳುತ್ತಾರೆ.
ಇಲ್ಲಿ ಲಂಕಾಧಿಪತಿಯ ವ್ಯಕ್ತಿತ್ವದ ವೈಭವಿಕರಣ, ತುಸು ಅಧಿಕವಾಗಿದೆ ಎನ್ನಬಹುದು. ಅವನ ವಧೆಯ ಕಥೆಯನ್ನು ಕೇಳಿ ಕೆಲವು ಥಾಯ್ ಪಂಗಡಗಳು ದುಃಖಿಸುತ್ತವೆಯಂತೆ. ವೀರಾಧಿವೀರ ರಾವಣ ಒಬ್ಬ ಸ್ತ್ರೀಯಿಂದ ಸರ್ವನಾಶವಾದನಲ್ಲ ಎಂದು ಮರುಗುತ್ತಾರೆ. ಈ ಎಲ್ಲ ದೃಶ್ಯಗಳನ್ನು ಒಳಗೊಂಡ ಥಾಯ್ ಜನರ ‘ಖೋಣ’ ಎಂಬ ಜಾನಪದ ನೃತ್ಯರೂಪಕ ಅತ್ಯಾಕರ್ಷಕವಾಗಿರುತ್ತದೆಯಂತೆ. ಥಾಯ್ಲೆಂಡಿನ ರಾಜ ಎರಡನೆಯ ‘ರಾಮ’ ರಚಿಸಿದ ರಾಮಾಯಣದ ಕಥಾ ಭಾಗಗಳನ್ನೇ ನೃತ್ಯ ರೂಪಕ ‘ಖೋಣ’ಗಾಗಿ ಬಳಸುತ್ತಾರೆ ಎಂದು ಹೇಳಲಾಗಿದೆ.
ಖೋಣ ನೃತ್ಯರೂಪಕದಲ್ಲಿ ಬರುವ ‘ರಾಮ ಸೇತು’ ಕಥೆಯ ಪ್ರಕಾರ. ರಾಮ ಸೇತು ಕಟ್ಟಲು ಪ್ರಾರಂಭಿಸ ಬೇಕೆಂಬುವುದರಲ್ಲಿ ಹನುಮಂತ ಮತ್ತು ವಾನರ ಸೈನ್ಯದ ತುಕುಡಿ ಒಂದರ ನಡುವೆ ವಾದ ಶುರುವಾಗುತ್ತದೆ. ಸಮುದ್ರದಲ್ಲಿ ಕಲ್ಲು ಎಸೆದರೆ, ಮುಳುಗತೊಡಗುತ್ತವೆ. ಈ ವಿವಾದವನ್ನು ನಿಯಂತ್ರಿಸಲು, ಕಟ್ಟುವ ಕಾರ್ಯ ಶೀಘ್ರದಲ್ಲಿ ಮುಗಿಸಲು ಶ್ರೀರಾಮನು ಏಳು ದಿನದ ಗಡುವು ಕೊಡುತ್ತಾನೆ. ಸಮುದ್ರದಲ್ಲಿ ರಾವಣನ ಮಿತ್ರನಾದ ಮೀನುಗಳ ರಾಜ, ಮೀನುಗಳಿಗೆ ಆದೇಶಿಸಿ ಕಲ್ಲುಗಳನ್ನು ಮುಳುಗಿಸುತ್ತಿರುತ್ತಾನೆ. ಇದನ್ನು ಕಂಡು ಹಿಡಿದು ಹನುಮಂತ ಆ ಮೀನು ದೂತನಿಗೆ ಶಿಕ್ಷಿಸುತ್ತಾನೆ, ಆಗ ಮೀನುಗಳ ರಾಜ ಸೋತು ಶರಣಾಗಿ ಇವನ ಆದೇಶ ಪಾಲಿಸುತ್ತಾನೆ. ಸೇತುವೆ ನಿರ್ಮಾಣದಲ್ಲಿ ಕೈಜೋಡಿಸಿ ಕಲ್ಲುಗಳು ತೇಲುವಂತೆ ಮಾಡುತ್ತಾನೆ.
ರಾಮ-ರಾವಣರ ಸಮರದಲ್ಲಿ, ರಾಮನ ಯಾವುದೇ ಬಾಣಕ್ಕೆ ರಾವಣನು ಸಾಯಿಸುತ್ತಿರಲಿಲ್ಲ, ಹೀಗೇಕೆ ಎಂದರೆ ರಾಮಕೀನ್ ಪ್ರಕಾರ, ರಾವಣನ ಪ್ರಾಣ, ದೂರದ ಒಂದು ಋಷಿ ಆಶ್ರಮದಲ್ಲಿರುವ ಪೆಟ್ಟಿಗೆಯಲ್ಲಿರುತ್ತದೆ. ಇದನ್ನು ಹನುಮಂತ ತಾನು ರಾವಣನ ಅನುಯಾಯಿ ಎಂದು ನಂಬಿಸಿ, ರಾಮನ ವಿರುದ್ಧ ಯುದ್ಧ ಮಾಡುವ ನಟನೆ ಮಾಡುತ್ತಾನೆ, ಏತನ್ಮಧ್ಯೆ ಪ್ರಾಣ ಪೆಟ್ಟಿಗೆಯನ್ನು ಯಾರಿಗೂ ಗೊತ್ತಾಗದಂತೆ ಆಶ್ರಮದಿಂದ ಅಪಹರಿಸಿ ರಾಮನ ಹತ್ತಿರ ಕೊಟ್ಟು ಬರುತ್ತಾನೆ. ಮರುದಿನ ಯುದ್ಧದಲ್ಲಿ ರಾಮನ ಬಾಣ ಸಲೀಸಾಗ ರಾವಣನ ಎದೆಯನ್ನು ಭೇದಿಸಿ, ಅವನ ಪ್ರಾಣ ತ್ಯಾಗ ಮಾಡುತ್ತಾನೆ.
ಆದರಿಂದ ದುರುಳತನದ ಅಂತ್ಯ ಯಾವಾಗಲೂ ಆಘಾತಕಾರಿಯಾಗಿರುತ್ತದೆ, ನಮ್ಮಲ್ಲಿರುವ ಸದ್ಗುಣಗಳನ್ನು ತೊಡೆದು ಹಾಕುತ್ತವೆ, ನೈತಿಕತೆಯಿಂದ ವಿಮುಖರಾದರೆ ಸರ್ವನಾಶವಾಗುತ್ತದೆ, ಪಿತೃ ವಾಕ್ಯ ಪರಿಪಾಲನೆ, ಕೊಟ್ಟ ಮಾತಿನಂತೆ ನಡೆಯಬೇಕು, ಪ್ರಕೃತಿಯ ಪ್ರತಿ ಗೌರವ ತೋರಿಸಬೇಕು, ಮುಂತಾದ ಮೌಲ್ಯಗಳನ್ನು ರಾಮಕೀನ್ ಪ್ರತಿಪಾದಿಸುತ್ತದೆ. ಭಾರತದ ರಾಮಾಯಣದಲ್ಲಿ ಹಾಗೂ ರಾಮಕೀನ್ ಮಧ್ಯ ಮೌಲ್ಯಗಳ ಸಾಮ್ಯತೆ ಇದೆ, ಥೈ ರಾಮಾಯಣ ಕಥೆಗಳನ್ನು ತಮ್ಮ ಪರಿಭಾಷೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ತಂದಿದ್ದಾರೆ, ಜಾನಪದ ರಂಗಿನಲ್ಲಿ ಅದ್ದಿದ್ದಾರೆ ಎಂದು ತೀರ್ಮಾನಿಸಬಹುದು. ಆದರೆ ಥಾಯ್ ಜನರು ರಾಮನ ಮೌಲ್ಯಗಳನ್ನು ಆದರಿಸುತ್ತಾರೆ, ರಾಮನ ಆದರ್ಶಗಳನ್ನು ಪೂಜಿಸುತ್ತಾರೆ, ಪ್ರಶ್ನಿಸುವುದಿಲ್ಲ.
-ಶ್ರೀಮತಿ ಮೃಣಾಲಿನಿ. ಪಿ. ಅಗರಖೇಡ್.
ಬೆಂಗಳೂರು.
ಇಮೇಲ್ : mrinalini.agarkhed@gmail.com
ಲೇಖಕರ ಸಂಕ್ಷಿಪ್ತ ಪರಿಚಯ:
ಮೃಣಾಲಿನಿ. ಪಿ. ಅಗರಖೇಡ್ ಮೂಲತಃ ಬಾಗಲಕೋಟೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. MCom, MPhil ಪದವೀಧರೆ, ಕಾಮರ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದ ಅನುಭವ. ಇಂಗ್ಲಿಷ್, ಕನ್ನಡ ಹಾಗೂ ಹಿಂದಿ ಹವ್ಯಾಸಿ ಬ್ಲಾಗರ್ ಹಾಗು ಕಂಟೆಂಟ್ ರೈಟರ್. 2000 ಕ್ಕಿಂತ ಹೆಚ್ಚು ಲೇಖನಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿ ಬಹುಮಾನ ಕೂಡ ಗಳಿಸಿವೆ. ಸೌರಭ್ ದಾಸ ಸಾಹಿತ್ಯ ವಿದ್ಯಾಲಯದ ವಿದ್ಯಾರ್ಥಿನಿ. ವಿವಿಧ ದಿನ ಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಲೇಖನ ಪ್ರಕಟಗೊಂಡಿವೆ. ಎಲ್ಲ ಪ್ರಕಾರದ, ವಿಭಿನ್ನ ರೀತಿಯ ವಿಷಯಗಳನ್ನು ಬಳಸಿ ಸೃಜನಾತ್ಮಕ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ. ಆಕಾಶವಾಣಿಯಲ್ಲಿ ಎರಡು ಬಾರಿ ಟಾಕ್ ಶೋಗಳಲ್ಲಿ ಭಾಗವಹಿಸಲು ಅವಕಾಶ ದೊರಕಿತ್ತು. ಸಿನಿಮಾ ವಿಮರ್ಶೆ, ಪುಸ್ತಕ ವಿಮರ್ಶೆ, ಬರೆಯುವುದು ರಂಗೋಲಿ, ಹಾಡು, ವಿಲಾಗ್ಸ್ ಮಾಡುವ ಹವ್ಯಾಸವಿದೆ. ಪೌರಾಣಿಕ, ರಾಷ್ಟ್ರ ಭಕ್ತಿ ಹಾಗೂ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚಿನ ಒಲವು. ಸದ್ಯಕ್ಕೆ ಗೃಹಿಣಿ, ಹವ್ಯಾಸಿ ಬರಹಗಾರ್ತಿಯಾಗಿ ಮುಂದುವರೆಯಲು ಬಯಸುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ