- ಸಾಕ್ಷಿ ಶ್ರೀಕಾಂತ ತಿಕೋಟಿಕರ, ಕೊಪ್ಪಳ.
ರಾಮಾಯಣ ಒಂದು ದಿವ್ಯ ಚೇತನ ವಿಶೇಷ ಜೀವಯಾನದ ಚರಿತ್ರೆ. ಯಾಕೆ ರಾಮಾಯಣ ವಿಶೇಷ. ವಿಷ್ಣುವಿನ ಹತ್ತು ಅವತಾರಗಳಲ್ಲಿ ರಾಮನ ಅವತಾರ ಅತೀ ವಿಶೇಷ!! ಏಕೆ!?
ಇಂತಹದೊಂದು ಪ್ರಶ್ನೆಯೇ ಸುಂದರ!! ಶ್ರೀ ರಾಮಚಂದ್ರ ದಿವ್ಯ ಚೇತನವಾದರೂ ಒಬ್ಬ ಸಾಮಾನ್ಯ ಮನುಷ್ಯನಂತೆ ಬದುಕಿದ. ಜೀವನವಿಡೀ ಯಾವದೇ ಪವಾಡ ಮಾಡದೇ, ತನ್ನ ಅತೀಂದ್ರೀಯ ಶಕ್ತಿ ಬಳಸದೇ ಬದುಕಿದ ಮಹಾನ ಮೇಧಾವಿ!! ಸೀತೆಯನ್ನು ತನ್ನ ದೈವೀ ಶಕ್ತಿಯಿಂದ ಕ್ಷಣಾರ್ಧದಲ್ಲಿ ತರುವುದು ತಡವಿರಲಿಲ್ಲ, ಮೇಲಾಗಿ ಸೀತೆ ಭಿಕ್ಷೆಯನ್ನಿಕ್ಕುವಾಗಲೇ ರಾವಣನನ್ನು ಗುರುತಿಸಿ ಕೆಳಗುರುಳಿಸುವದು ಕಷ್ಟವಾಗಿರಲಿಲ್ಲ ಇಬ್ಬರೂ ಸಹಜ ಮಾನವರಾಗಿ ಬದುಕಿದ ಮಹಾನ್ ಚರಿತೆ.
ಮೊದಲನೆಯದಾಗಿ ರಾಮಾಯಣ ಏಕೆ ಆಯಿತು ಎಂದು ಯೋಚಿಸುವ!! ಬಹಳ ಜನರ ಸರಳ ಉತ್ತರ ರಾಮಾಯಣಕ್ಕೆ ಕಾರಣ, ಸೀತಾ ದೇವಿ, ಕೈಕೇಯಿ, ಶೂರ್ಪನಖಿ, ರಾವಣ... ಇಂತಹವರಿಂದಲೇ ರಾಮಾಯಣ ಆಯಿತೆಂದು ಹೇಳುವರು. ಆದರೆ ಇದೂ ತಪ್ಪು! ಸೂಕ್ಷ್ಮ ಅವಲೋಕನ ಮಾಡಿ!!ದಶರಥ ಮಹಾರಾಜ ತನ್ನ ಪತ್ನಿ ಕೈಕೇಯಿಗೆ ಮೂರು ವರಗಳನ್ನು ನೀಡಿದ, ಯಾವಾಗ!? ತನ್ನ ಪ್ರಾಣ ಉಳಸಿದಳು ಎಂಬ ಅತೀ ಸಂತಸದಲ್ಲಿರುವಾಗ.. ಅಂದರೆ ನಾವು ಅತೀ ಸಂತೋಷದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ, ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿರುತ್ತವೆ. ನಾವು ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಥಿತಿ ಸ್ಥಿರ ಮತ್ತು ಧೃಡವಾಗಿರಬೇಕು, ಸಮಚಿತ್ತದಿಂದ, ಸಂಯಮದಿಂದ ಬದುಕಿನ ನಿರ್ಧಾರ ತೆಗೆದುಕೊಳ್ಳದಿದ್ದರೆ ಅದು ಮುಂದೆ ಬದುಕಿನಲ್ಲಿ ನಮಗೂ ಮತ್ತು ನಮ್ಮ ಪ್ರೀತಿ ಪಾತ್ರರಿಗೂ ಮುಳುವಾಗುತ್ತದೆ. ತನಗೆ ಎಷ್ಟೇ ವಿಶ್ವಾಸ ಪ್ರಾಯ, ಪ್ರಿಯ ವ್ಯಕ್ತಿಗೆ ನೀಡಿದ ಕೆಲವು ವಿಶೇಷ ಅಧಿಕಾರ ನಮಗೆ ಘಾತಕವಾಗುವವು ಎಂದು ಒಂದೆಡೆ ಆದರೆ, ಬದಲಾಗುವ ಕಾಲದೊಂದಿಗೆ ಮನುಷ್ಯನು ಬದಲಾಗುತ್ತಾನೆ ಎಂಬ ಸತ್ಯ ಹೇಳುವುದು.
ಇನ್ನೂ ಮಂಥರೆಯ ಪಾತ್ರ, ರಾಮನನ್ನು ಎತ್ತಿ ಕೊಳ್ಳಲು ಮಂಥರೆ ಹೋದಾಗ ಅವಳನ್ನು ಅವಮಾನಿಸಿದ ಸಣ್ಣ ಕಿಡಿ ಜ್ವಾಲೆಯಾಗಿ ಹೊತ್ತಿಕೊಳ್ಳುವುದು. ಹೀಗೆ ನಾವು ಜೀವನದಲ್ಲಿ ಕೆಲವರಿಗೆ ಮಾಡಿದ ಸಣ್ಣ ಅವಮಾನ, ಕಟುನುಡಿ, ತೋರಿದ ನಿಕೃಷ್ಟ ಭಾವ ನಮಗೆ ಮುಂದೆ ಒಂದು ದಿನ ವಿಪತ್ತು ತರಬಹುದು. ಯಾರನ್ನೂ ಕನಿಷ್ಠ ಎಂದು ಪರಿಗಣಿಸಿ ಉಪೇಕ್ಷೆ ಮಾಡಬಾರದು. ಕೆಲಸದವರಾಗಲಿ, ಅಥವಾ ಮಾಡುವ ಕೆಲಸಗಳಾಗಲಿ, ಕೆಲಸಗಳಿಗೆ ಸಂಬಂಧಿಸಿದ ಶಾಸನಗಳಾಗಲಿ, ಇಷ್ಟೇ ತಾನೆ ಮುಂದೆ ಮಾಡಿದರಾಯಿತು!! ಇವರು ಕೆಲಸದವರು ನನಗೇನು ಮಾಡಿಯಾರು!? ನಾನು ಯಾರಿಗೂ ಹೆದರುವನಲ್ಲ, ಯಾರು ಏನು ನನ್ನಿಂದ ಕಿತ್ತುಕೊಂಡಾರು? ಎಂಬ ಉಢಾಪೆಯಭಾವ, ಉಪೇಕ್ಷೆಯ ಮಾತುಗಳು. ಒಂದು ಸಣ್ಣ ಮಾತ್ರೆಯಿಂದ ನಮ್ಮ ದೊಡ್ಡ ದೇಹದ (60 ಕೆ.ಜಿ) ಜ್ವರವನ್ನು ಹೇಗೆ ಪರಹರಿಸುವದೋ ಹಾಗೇ ಕೆಲವು ಸಣ್ಣ ತಪ್ಪುಗಳು ಸಂದರ್ಭ ಬಂದಾಗ ಕಾಲುತೊಡರಾಗಿ ಬೀಳಿಸುವವು. ಈ ಎಚ್ಚರಿಕೆ ಮಂಥರೆ ನಮಗೂ ನೀಡಿರುವಳು.
ಇನ್ನೂ ಲಕ್ಷ್ಮಣ ಶೂರ್ಪನಖಿಯ ಮೂಗು ಮತ್ತು ಕಿವಿ ಕುಯ್ದುವನು. ಅವಳು ಕೋಪಗೊಂಡು ರಾವಣನಿಗೆ ಚಾಡಿ ಹೇಳಿ ಕೆರಳಿಸಿದಳು.ಹೀಗೆ ನಾವು ಕೋಪದಲ್ಲಿ ಮಾಡಿದ ಕೆಲಸ ನಮಗೆ ವಿಪತ್ತು ತರುವದು, ಜೊತೆಗೆ ಪರಸ್ಥಳ, ಪರ ಜನರ ಅರಿವಿರದೇ, ಪೂರ್ವಾಪರ ಮಾಹಿತಿ ಇರದೇ ಕೋಪದ ತಾಪಕ್ಕೆ ಮಾಡಿದ ಕೆಲಸ ಕೈ ಸುಡುವುದು.ಪರಸ್ಥಳದಲ್ಲಿ ಪರಕೀಯರಲ್ಲಿ ಜಾಗೃತಿ ಅವಶ್ಯಕ. ಪರಸ್ಥಳದಲ್ಲಿ ಜಗಳ, ಶೌರ್ಯ ಪ್ರದರ್ಶನ ಅನಗತ್ಯ.ಜಿಂಕೆಯ ಬೆನ್ನು ಹತ್ತಿ ಹೋದ ರಾಮ, ಜಾನಕಿಗೆ ಜಿಂಕೆಯ ಬಗ್ಗೆ ತೀವ್ರ ವ್ಯಾಮೋಹ, ಹೀಗೆ ಒಂದು ವಸ್ತುವಿನ ಬಗ್ಗೆ, ಕ್ಷಣಾರ್ಧ ನಮ್ಮ ಮನದಲ್ಲಿ ಮೂಡಿದ ಅತೀವ ಮೋಹ, ಹಟವಾಗಿ ಪರಿಣಮಿಸಿ ಈಡೇರಿಸಲು ಬೆಂಬತ್ತಿ ನೀಗದ ನೋವಿಗೆ ಗುರಿಯಾಗುವುದು.ಮೋಹ ಎಂಬ ಮಾಯೆ ಎಲ್ಲವನ್ನೂ ಆ ಕ್ಷಣದಲ್ಲಿ ಗೌಣವಾಗಿಸುವುದು. ಆ ಆಸೆಯ ಮುಂದೆ ಎಲ್ಲವೂ ಶೂನ್ಯ ವಾಗಿಸುವುದು, ವಿಶೇಷವಾಗಿ ಇಂದಿನ ಯುವಕ, ಯುವತಿಯರು ಯಾರದೋ ಮೋಹ ದಲ್ಲಿ ಬಿದ್ದು ಪ್ರೀತಿ ಎಂದು ಮಾಯೆಯಲ್ಲಿ ಹೆತ್ತವರನ್ನು, ಸಮಾಜವನ್ನು ಧಿಕ್ಕರಿಸಿ ತಮ್ಮದೇ ದಾರಿಯಲ್ಲಿ ಸಾಗುವುದು. ಹೀಗೆ ಮೋಹದ ಬಗ್ಗೆ ಸಂಯಮವಿರಬೇಕೆಂಬ ಪಾಠ ರಾಮಾಯಣ ಹೇಳುವುದು.
ಶೂರ್ಪನಖಿಯ ಹೇಳಿದ ಚಾಡಿ ಮಾತುಗಳಿಂದ ಕೆರಳಿದ ರಾವಣ ಸೀತಾ ಅಪಹರಣದ ಯೋಜನೆ ಹಾಕುವನು. ಇಲ್ಲಿ ಅರ್ಥ ಮಾಡಿಕೊಳ್ಳುವ ಮೊದಲ ವಿಷಯ ಚಾಡಿ ಮಾತನ್ನು ಕೇಳಿ ಮನಸ್ಸನ್ನು ವಿಷ ಮಾಡಿಕೊಳ್ಳಬಾರದು, ಕೆರಳ ಬಾರದು. ಅತೀ ಕೋಪದಲ್ಲಿ ಇರುವಾಗ ನಮ್ಮ ಬುದ್ಧಿ ಶಕ್ತಿ ಶೂನ್ಯವಾಗಿರುತ್ತದೆ. ಕೋಪದಲ್ಲಿ ಕೊಂಡ ನಿರ್ಧಾರಗಳು ನೂರಕ್ಕೆ ನೂರರಷ್ಟು ತಪ್ಪಾಗಿರುತ್ತವೆ. ಕೋಪದಲ್ಲಿ ಮನುಷ್ಯ ವಿವೇಚನಾ ಶಕ್ತಿ ಕಳೆದುಕೊಳ್ಳುತ್ತಾನೆ. ಇಲ್ಲವಾದರೆ ತ್ರಿಕಾಲ ಸಂಧ್ಯಾವಂದನೆ ಮಾಡುವ ಸಾಧಕ ಪುರುಷ ರಾವಣ ಪರರ ಪತ್ನಿಯನ್ನು ಕಳವು ಮಾಡುವ ಹೀನ ವಿಚಾರ ಮಾಡುವಷ್ಟು ಹೇಯನೇ!? ಶೂರ್ಪನಖಿಯ ಚಾಡಿ ಮಾತುಗಳನ್ನು ಕೇಳಿ ಪೂರ್ವಾಪರ ವಿವೇಚನೆ ಮಾಡಿದೆ ಮಾಡಿದ ಅಚಾತುರ್ಯ. ಹೀಗೆ ನಾವು ಜೀವನದಲ್ಲಿ ಕೆಲವರು ಹೇಳಿದ ಚಾಡಿ ಮಾತುಗಳನ್ನು ಕೇಳಿ, ಒಬ್ಬರ ಬಗ್ಗೆ ನಮ್ಮ ಮನಸ್ಸಿನಲ್ಲಿ ಕಹಿ ಭಾವನೆ, ದ್ವೇಷ, ಅಸೂಯೆ ಹುಟ್ಟು ಹಾಕಿಕೊಂಡಿರುತ್ತೇವೆ.
ಪರ ಧನ, ಪರಸ್ತ್ರೀ ಎಂಬ ವಿಷ. ರಾವಣನು ಪರಸ್ತ್ರೀ ಆಮಿಷಕ್ಕೆ ಒಳಗಾಗಿ ತನ್ನ ಸರ್ವನಾಶ ಮಾಡಿಕೊಂಡನು. ಹೀಗೆ ಜೀವನದಲ್ಲಿ ಪರರ ವಸ್ತುಗಳನ್ನು ಬಯಸಿ ದುರ್ಮಾರ್ಗದಲ್ಲಿ ಪಡೆಯಲು ಹೊರಟಾಗ ಕೊನೆಗೆ ಸರ್ವನಾಶ ಆಗುವುದು. ಲಂಚ, ಇನ್ನೊಬ್ಬರ ಆಸ್ತಿ ಲಪಟಾಯಿಸುವುದು, ತನ್ನದಲ್ಲದ ಕಾರ್ಯ, ಹೆಸರು, ತಾನೇ ಮಾಡಿದೆ ಎಂದು ಹೊಗಳಿಕೊಳ್ಳುವುದು, ಮೋಸದಿಂದ ಪಡೆದದ್ದು ಎಲ್ಲವೂ ವಿನಾಶಕ್ಕೆ ನಾಂದಿ. ಇವು ನಮ್ಮನ್ನು ಮಾತ್ರ ಅಲ್ಲ, ನಮ್ಮ ಪ್ರೀತಿಪಾತ್ರರನ್ನು ದುಃಖಕ್ಕೆ ನೂಕುತ್ತವೆ.
ಸೀತಾ ಮಾತೆ ಲಕ್ಷ್ಮಣ ಬರೆದ ಗೆರೆಯನ್ನು ದಾಟುತ್ತಾಳೆ. ಏಕೆ!? ತಾನು ಭಿಕ್ಷೆ ನೀಡದಿದ್ದರೆ ಈ ಸಂನ್ಯಾಸಿ (ವೇಷಧಾರಿ ರಾವಣ) ಮುನಿದು ಶಾಪ ಕೊಡುವನು ಎಂಬ ಆತಂಕಕ್ಕೆ ಒಳಗಾಗಿ. ಹೀಗೆ ನಿಜಜೀವನದಲ್ಲಿ ಕೂಡ ನಾವು ಕೆಲವು, ಆತಂಕ ಮತ್ತು ಮೂಢನಂಬಿಕೆಗಳ ಪರಿಧಿಯಲ್ಲಿ ನಿಂತುಕೊಂಡು ನಾವು ನಮ್ಮ ಸುರಕ್ಷತೆಯನ್ನು ಬಲಿ ಕೊಡುತ್ತೇವೆ. ಭಿಕ್ಷೆಯನ್ನು ನೀಡಲು ನಿರಾಕರಿಸಿದರೆ ತಪ್ಪು, ಗೆರೆಯನ್ನು ದಾಟಿ ಬರಲು ನಿರಾಕರಿಸಿದರೆ ತಪ್ಪು ಅಲ್ಲವೇ ಅಲ್ಲ! ಹೀಗೆ ಕೆಲವೊಮ್ಮೆ ನಮ್ಮ ನಂಬಿಕೆಗಳು ಆತಂಕದ ಛಾಯೆಯಲ್ಲಿ ಮೂಢ ನಂಬಿಕೆಗಳಾಗಿ ಪರಿವರ್ತನೆಯಾಗಿ ನಮ್ಮ ವಿವೇಚನಾ ಶಕ್ತಿ ಕಳೆದುಕೊಳ್ಳುತ್ತೇವೆ. ಅದೇರೀತಿ ನಮ್ಮ ನಂಬಿಕೆ ಗಳಿಗಿಂತ ನಮ್ಮ ಸುರಕ್ಷತೆ ಮತ್ತು ಬದುಕುವ ಕ್ಷಮತೆ ಹೆಚ್ಚು ಪ್ರಾಮುಖ್ಯತೆ ಹೊಂದಿದೆ ಎಂದು ರಾಮಾಯಣ ಬೋಧಿಸುತ್ತದೆ.
ಯೋಜನೆ ಮತ್ತು ಸಂಯಮ. ಇವು ಎರಡು ವಿಶೇಷ ಶಕ್ತಿ ಗಳ ಅರಿವು ರಾಮಾಯಣ ಹೇಳಿ ಕೊಡುವುದು. ಸೀತಾ ಅಪಹರಣದ ನಂತರ, ರಾಮ ಸಂಪೂರ್ಣ ವಾಗಿ ಕುಗ್ಗಿ ಹೋಗಲಿಲ್ಲ, ಅವನಬಳಿ ಯುದ್ಧ ಮಾಡಲು ಸೈನ್ಯವಿರಲಿಲ್ಲ ಹಾಗೆಂದು ಹತಾಶೆಯಿಂದ ಕೈ ಚಲ್ಲಿ ಕೂಡಲಿಲ್ಲ.ಸಂಯಮದಿಂದ ಸೀತಾನ್ವೇಷಣೆಗೆ ಶುರುಮಾಡಿದ. ಸಮುದ್ರ ಕ್ಕೆ ಸೇತುವೆ ಕಟ್ಟುವ ಯೋಜನೆ ರೂಪಿಸಿದ, ಸಣ್ಣ ಸಣ್ಣ ಕಪಿ ಸೈನ್ಯಗಳ ಸಹಾಯದಿಂದ ಕಾರ್ಯ ರೂಪಕ್ಕೆ ತಂದು ಯಶಸ್ವಿಯಾಗಿಸಿದ. ವಿಭೀಷಣ ನ ಜೊತೆ ಕೈ ಜೋಡಿಸಿ ತಂತ್ರಗಾರಿಕೆ ರೂಪಿಸಿದ. ಇದೆಲ್ಲಾ ಸಾಧಿಸುವಾಗ ರಾಮದೇವರು ಬಳಸಿದ್ದು ತಮ್ಮ ವಿವೇಚನಾ ಶಕ್ತಿ ಇದು ಸಂಯಮದಿಂದ ಇರುವಾಗ ಮಾತ್ರ ಸಾಧ್ಯ!! ಸಂಯಮ, ಯೋಜನೆ ಮತ್ತು ತಂತ್ರಗಾರಿಕೆಯಿಂದ ಅಸಾಧ್ಯ ಕೆಲಸವನ್ನು ಸಾಧ್ಯ ಮಾಡಿದ ಶ್ರೀರಾಮ. ಇದನ್ನೇ ಇಂದು ಎಂಬಿಎ ವಿದ್ಯಾರ್ಥಿಗಳು ವ್ಯಾಸಂಗ ಮಾಡುವು, ಪ್ಲ್ಯಾನಿಂಗ, ಇಂಪ್ಲಿಮೆಂಟೇಶನ, ಮತ್ತು ಸ್ಟ್ರ್ಯಾಟಿಜಿಕ ಮ್ಯಾನೇಜ್ಮೆಂಟ್.
ಇದು ಬಹುರೂಪಿ ಕಲಾತ್ಮಕ ತಂತ್ರಗಾರಿಕೆ, ಪ್ರೀತಿ ಮತ್ತು ದಯೆಯಿಂದ ಸಕಲ ಪ್ರಾಣಿಗಳಲ್ಲಿ ಮನಸ್ಸು ಗೆದ್ದ ಶ್ರೀ ರಾಮ. ಇನ್ನೂ ಕೊನೆಯದಾಗಿ, ಅಗಸನ ಮಾತು ಕೇಳಿ ಸೀತೆಯನ್ನು ತ್ಯಜಿಸಿದ ಶ್ರೀ ರಾಮ. ಇದು ವಾಸ್ತವವಾಗಿ ಶ್ರೀರಾಮನ ಅಪನಂಬಿಕೆ ತೋರುವುದಿಲ್ಲ. ಆಡಿ ಕೊಳ್ಳುವ ಜನರ ವಾಚಾಳಿತನ ತೋರುವುದು. ನಮಗೂ ಕೆಲವೊಮ್ಮೆ ನಮ್ಮ ಬಗ್ಗೆ ಜನರು ಏನೆಂದಾರು ಎಂಬ ಭಯ ಅಥವಾ ಕೆಲವರು ನಮ್ಮ ಬಗ್ಗೆ ಮಾಡಿದ ಟೀಕೆ, ಟಿಪ್ಪಣಿ ಗಳ ಬಗ್ಗೆ ನಮ್ಮ ಮನಸ್ಸು ಕುಗ್ಗಿ, ಸಂತೋಷ ಕಮರಿ ಹೋಗುವುದು. ನಿಜ ಹೇಳಬೇಕೆಂದರೆ ಆ ಸಾಕ್ಷಾತ ಶ್ರೀ ರಾಮಚಂದ್ರನನ್ನು ಜನ ಆಡಿಕೊಳ್ಳುವುದು ಬಿಡಲಿಲ್ಲ, ಆ ದೇವರ ಸಂಯಮ ವನ್ನು ಕೆಣಕಿದವರು, ಇನ್ನೂ ನಮ್ಮಂತಹ ಹುಲುಮಾನವರ ಬಗ್ಗೆ ಆಡಿಕೊಳ್ಳುವುದು ಅತೀ ಸಹಜ. ಹೀಗೆ ಆಡುವ ಬಾಯಿಗೆ ಬಿದ್ದು ನಮ್ಮ ಮನದ ನೆಮ್ಮದಿ, ನಮ್ಮವರ ಬಗ್ಗೆ ವಿಶ್ವಾಸ ಎರಡನ್ನೂ ಕಳೆದು ಕೊಳ್ಳಬಾರದು. ಜನ ಏನೆಂದಾರು ಎಂದು ಮಕ್ಕಳನ್ನು ತೀರ ಕಟ್ಟುನಿಟ್ಟಾಗಿ ಬೆಳಸುವದು,ಜನ ನಕ್ಕಾರು ಎಂದು ಅತೀ ಆಡಂಬರ ಮಾಡುವುದು, ಸರಳತೆ ಮರೆತು ವಿಜ್ರಂಭಣೆಯಿಂದ ಮೆರೆಯುವದು,ಬೇಡದ ವಿಚಾರಗಳಿಂದ, ಮಾಡದ ತಪ್ಪಿಗೆ ಬೇರೆಯವರ ಮಾತುಗಳಿಂದ ಕೊರಗುವದು, ಇವೆಲ್ಲವನ್ನೂ ಬಿಡಲೇ ಬೇಕು. ನೋಡಿದವರು ಏನೆಂದಾರು, ಜನ ಏನೆನ್ನುವರು, ಏನಾದರೂ ಅನ್ನಲಿ ನಮ್ಮ ಆತ್ಮಕ್ಕೆ ನಮ್ಮ ಸತ್ಯ ಮತ್ತು ಸರಳತೆ ಗೊತ್ತಾದರೇ ಸಾಕು. ಇದು ಒಂದಾದರೇ, ಇನ್ನೂಂದು ವಿಷಯ ಆಡಿ ಕೊಳ್ಳುವ ಬಾಯಿ, ಸುಲಭವಾಗಿ ಮಾಡುವ ಕೆಲಸ ಚಾರಿತ್ರ್ಯ ವಧೆ!! ಹೀಗೆ ಯಾರ ಮಾತನ್ನು ಕೇಳಿ ಯಾರ ಚಾರಿತ್ರ್ಯವನ್ನೂ ಅಳೆಯಬಾರದು.
ಶ್ರೀ ರಾಮಾಯಣ ವನ್ನು ಹೀಗೆ ಬರೆಯುತ್ತಾ ಹೋದರೆ ಬೆಳೆಯುತ್ತಾ ಹೋಗುವ ಲೇಖನ, ಕುಡಿದಷ್ಟು ಮೊಗೆಯಪವ ಸಿಹಿ ನೀರಿನ ಒರತೆ, ಆಳವಾಗಿ ಯೋಚಿಸಿ ದಷ್ಟು ವಿಶಾಲವಾಗಿ ತೆರೆದುಕೊಳ್ಳುವ ಜ್ಞಾನದ ಅರಮನೆ. ಸಂಯಮ ಮತ್ತು ಸಮಯ ಮಹತ್ವ ಸಾರುವ ಗ್ರಂಥ. ಅತೀ ಕೋಪದಲ್ಲಿ, ಅತೀ ಸಂತೋಷದಿಂದ ಕೊಂಡ ನಿರ್ಧಾರಗಳು ಖಂಡಿತವಾಗಿ ತಪ್ಪಾಗಿರುತ್ತವೆ. ನಾವು ಕೋಪದಲ್ಲಿ ಮತ್ತು ಅತೀ ಸಂತೋಷ ವಾಗಿರುವಾಗ ಯಾವ ನಿರ್ಧಾರಕ್ಕೂ ಬರಬಾರದು. ಆತಂಕದಲ್ಲಿ ನಮ್ಮ ನಂಬಿಕೆಗಳ ಅಭಿಪ್ರಾಯ ತಪ್ಪಾಗಿರುತ್ತವೆ. ಸಂಯಮದಿಂದ ಯೋಜನೆ ರೂಪಿಸಿದ ಕಾರ್ಯ ಯಶಸ್ಸು ಕಾಣುವುದು. ಯಾವ ಸಣ್ಣ ಶಕ್ತಿ ಯನ್ನು ಕೂಡ ದೊಡ್ಡ ಸೈನ್ಯವಾಗಿ ಪರಿವರ್ತಿಸಿ ಗೆಲವು ಸಾಧಿಸಬಹುದು. ಕನಿಷ್ಠ ಎಂದು ಯೋಚಿಸಿ, ಕಡೆಗಣಿಸಿದ ತಪ್ಪು ನಾಳೆ ದೊಡ್ಡ ಬೆಲೆತೆರಬೇಕಾದೀತು. ಎಲ್ಲರಲ್ಲೂ ಪ್ರೀತಿ ಕಾಣುತ್ತ ಬದುಕಬೇಕು. ಚಾಡಿ ಮಾತುಗಳನ್ನು ಕೇಳಿ ಕೆರಳಿದ ಮನಸ್ಸು ವಿನಾಶಕ್ಕೆ ದಾರಿ. ಪರವಸ್ತು, ಪರಸ್ತ್ರೀ, ದುರಾಸೆಯ ಪರಮಾವಧಿ, ಅಳಿವಿನ ಹಾದಿ, ಮೋಹದಲ್ಲಿನ ಬಯಕೆ ವಿವೇಚನಾ ಶೂನ್ಯ. ಸಂಯಮ ಮತ್ತು ತಂತ್ರಗಾರಿಕೆ ಯಿಂದ ಮಾಡಿದ ಯೋಜನೆ ಫಲಕಾರಿ. ಆಡುವ ಬಾಯಿಗಳಿಗೆ ಮುಚ್ಚುವ ಕೈಗಳಿಲ್ಲ, ದೇವರನ್ನು ಬಿಡದೇ ಆಡಿ ಕೊಳ್ಳುವ ಜನ. ಹೀಗೆ ಶ್ರೀರಾಮಾಯಣ ನಮಗೆ ಬದುಕಿನಲ್ಲಿ, ಮನೆ, ಮನದಲ್ಲಿ ಬೆಳಗ ಬೇಕಾದ, ಚಿಂತನೆಯನ್ನು ಒರೆಗೆ ಹಚ್ಚಿ ತೀಡಬೇಕಾದ ಹಲವು ವಿಷಯಗಳ ದಾರಿದೀಪ.
- ಸಾಕ್ಷಿ ಶ್ರೀಕಾಂತ ತಿಕೋಟಿಕರ, ಕೊಪ್ಪಳ.
ಲೇಖಕರ ಸಂಕ್ಷಿಪ್ತ ಪರಿಚಯ:
ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. ಕೆಲವು ಕಾಲ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ ನಂತರ ಒಂದು ವಿದೇಶಿ ಕಂಪನಿಯಲ್ಲಿ ಲೆಕ್ಕದ ಕಡತಗಳನ್ನು ಪರೀಶೀಲನೆ ಮಾಡುತ್ತ, ಈಗ ಕೆಲ ತಿಂಗಳುಗಳಿಂದ ಗೃಹಿಣಿ. ಹಲವು ಪತ್ರಿಕೆಗಳಲ್ಲಿ ಹಲವಾರು ಕತೆಗಳು ಪ್ರಕಟಗೊಂಡಿವೆ. "ಪ್ರತಿ ಲಿಪಿ" ನಡೆಸುವ ಕಥಾ ಸ್ಪರ್ಧೆಯಲ್ಲಿ ಐದನೇ ಸ್ಥಾನ ಗಳಿಸಿದ ಪ್ರಶಸ್ತಿ ಬಂದಿದೆ. ಪ್ರತಿ ಲಿಪಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಕತೆ, ಕವನ, ಬರಹ ಗಝಲ್ ಗಳನ್ನು ಬರೆದಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ