-ಡಾ ಎಂ ಜಿ ದೇಶಪಾಂಡೆ , ಸೇಡಮ್
ಕನ್ನಡ ಸಾಹಿತ್ಯದಲ್ಲಿ ಕೀರ್ತನೆಯೂ ಒಂದು ಪ್ರಸಿದ್ಧ ವೇದಿಕೆ. ಕಾಲಕಾಲಕ್ಕೆ ಹಲವಾರು ಕೀರ್ತನಕಾರರು ತಮ್ಮ ಸಾಹಿತ್ಯಾಭಿವ್ಯಕ್ತಿಯನ್ನು ಸಮರ್ಥವಾಗಿ ಮಾಡಿದ್ದಾರೆ. ಅಂಥವರಲ್ಲಿ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ನಿಚ್ಚಳವಾಗಿ ಮುಂಚೂಣಿಯಲ್ಲಿದ್ದಾರೆ, ಕೀರ್ತನ ಕೇಸರಿ ನಾಡೋಜ ಶ್ರೀ ಭದ್ರಗಿರಿ ಅಚ್ಯುತದಾಸರು ಕನ್ನಡ ನಾಡಿನ ಮೂಲೆಮೂಲೆ ತಿರುಗಿ ಕನ್ನಡ ಕಲಾಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದಾರೆ. ಅವರ ಕೆಲವು ಕೀರ್ತನೆಗಳು ಇಂದಿಗೂ ಎಲ್ಲರ ಸ್ಮೃತಿಪಟಲದಲ್ಲಿ ಸಜೀವವಾಗಿ ಉಳಿದಿವೆ. 'ವೀರ ಅಭಿಮನ್ಯು', 'ಭಕ್ತ ಸುದಾಮ' ಮತ್ತು 'ಪಾದುಕಾ ಪಟ್ಟಾಭಿಷೇಕ' ಇವು ಅಜರಾಮರವಾಗಿವೆ.
ಪಾದುಕಾ ಪಟ್ಟಾಭಿಷೇಕ
ಪ್ರತೀ ಕೀರ್ತನದಂತೆ ದಾಸರು ದೇವರ ನಾಮಸ್ಮರಣೆ ಮತ್ತು ಗುರು ವಂದನೆಗಳಾದ ಮೇಲೆ ಪೀಠಿಕೆಯಂತೆ ಕರ್ಮ ಮತ್ತು ಭರತನ ಕರ್ಮಯೋಗದಿಂದ ಪ್ರಾರಂಭಿಸುತ್ತಾರೆ.
ಮಾಡು ಕರ್ಮವ ಯೋಗಿಯಾಗು | ಮನುಜ | ಮಾಡು ಕರ್ಮವ ಯೋಗಿಯಾಗು | ಮನುಜ || ಮಾಡಿ ಹರಿಗರ್ಪಿಸಿ ಚರಣಕೆ ಬಾಗು | ಮಾಡು ಕರ್ಮವ ಯೋಗಿಯಾಗು || (ಮೂಲನಾರಾಯಣ)
ಹೀಗೆ ಕರ್ಮದ ಪೀಠಿಕೆಯನ್ನು ಹೇಳುತ್ತ ಭರತನ ಪಾತ್ರದ ಮುಂದಿನ ಕಥೆಯನ್ನು ಸೂಚಿಸುತ್ತಾರೆ. ಇಲ್ಲಿ ಭರತನೇ ಕಥಾನಾಯಕ. ಅಲ್ಲದೇ ತನ್ನ ಅಣ್ಣನ ಅಭಿಮಾನಿ, ಅಣ್ಣನ ಪ್ರೀತಿಗೆ ಪಾತ್ರ. ಹಾಗಾಗಿ ಅವನು ಅಣ್ಣನ ಹೆಸರಲ್ಲಿ ರಾಜ್ಯ ಆಳುವವನೇ ಹೊರತು ನೇರ ರಾಜನಲ್ಲ. ಆ ಕಾರ್ಯವನ್ನು ಬಹು ನಿಷ್ಠೆಯಿಂದ ಪೂರ್ತಿಗೊಳಿಸಿದ ಮಹಾಭಕ್ತ. ಅದಕ್ಕಾಗಿ ದಾಸರು ಆತನ ವ್ಯಕ್ತಿತ್ವಕ್ಕೆ ಪೀಠಿಕೆ ಹಾಕುತ್ತಾರೆ. 'ಹರಿಗರ್ಪಿಸದೇ ಆವ ಕರ್ಮವು ಮಾಡಿದರೂ ಅದು ಹುರಿದು ಬಿತ್ತಿದ ಬೀಜ' ಎಂದು ಗೋಪಾಲದಾಸರ ಮಾತುಗಳಂತೆ ಆ ಕರ್ಮವು ಹರಿಗರ್ಪಿಸಿದರೆ ಮಾತ್ರ ಫಲಪ್ರದವಾಗುತ್ತದೆ ಎಂದು ಮತ್ತು ಈ ರೀತಿಯಾಗಿ ನಡೆದು ತೋರಿಸಿಕೊಟ್ಟವನೇ ಭರತ ಎಂದು ಭರತನ ಪಾತ್ರದ ಪರಿಚಯ ಕೊಡುತ್ತಾರೆ.
ಗಚ್ಛತಾ ಮಾತುಲಕುಲಂ ಭರತೇನ ತದಾ$ನಘ | ಶತ್ರುಘ್ನೋ ನಿತ್ಯ ಶತ್ರುಘ್ನೋ ನೀತಃ ಪ್ರೀತಿ ಪರಸ್ಕೃತಃ || (ವಾಲ್ಮೀಕಿರಾಮಾಯಣ) ನಾಲ್ಕೂ ಅಣ್ಣತಮ್ಮಂದಿರ ವಿವಾಹವಾದ ಬಳಿಕ ಭರತಶತ್ರುಘ್ನರಿಬ್ಬರನ್ನು ಭರತನ ಸೋದರಮಾವ ಯುಧಾಜಿತ್ತುವು ವಿದ್ಯಾಭ್ಯಾಸದ ನೆಪದಿಂದ ಕೇಕಯಕ್ಕೆ ಕರೆದುಕೊಂಡು ಹೋಗುತ್ತಾನೆ. ವಶಿಷ್ಠರಿಂದ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಮುಹೂರ್ತ ನಿಶ್ಚಯವಾಗುತ್ತದೆ. ಆಮೇಲೆ ಕೈಕಯಾಮ್ಮನವರ ಕಟ್ಟಪ್ಪಣೆಯಿಂದಾಗಿ ರಾಮನ ರಾಜ್ಯಾಭಿಷೇಕ ತಪ್ಪುತ್ತದೆ. ಹದಿನಾಲ್ಕು ವರ್ಷ ವನವಾಸ ದಕ್ಕುತ್ತದೆ. ಯಾರು ಹೇಳಿದರೂ ಒಪ್ಪದೆ ವನವಾಸಕ್ಕೆ ಅಣಿಯಾಗುತ್ತಾನೆ.
ಆಗ ರಾಮ ಹೇಳುತ್ತಾನೆ : ಪಿತೃವಚನ ಪಾಲನೆಯೆ ಧರ್ಮ | ಪುತ್ರನಿಗಿದುವೆ ಪರಮ ಸತ್ಕರ್ಮ || ವರುಷ ಚತುರ್ದಶ ಹರುಷದಿ ಕಳೆವೆ | ಅರಸುತನಕೆ ಇಲ್ಲಿ ಭರತನ ಇಡುವೆ | ಧರಿಸಿ ತಾಪಸ ವೇಷದಿ ನಾನಲಿವೆ | ಮರೆಸಿ ರೂಪವನು ವನದೊಳಗಿರುವೆ || ಹಸಿವಾದೊಡೆ ಫಲಮೂಲಗಳಿಹವು | ತೃಷೆಯಾದೊಡೆ ತೊರೆ ಹರಿಯುತಲಿಹವು | ಋಷಿ ಸಹವಾಸವು ತತ್ತ್ವಚಿಂತನವು | ಕೃಶವಾಗಿಪೆ ಕಾಯ ಧರ್ಮಸಮ್ಮತವು || ಪಿತೃವಚನ ಪಾಲನೆಯೆ ಧರ್ಮ || (ಮೂಲನಾರಾಯಣ)
ಯಾರು ಎಷ್ಟು ಹೇಳಿದರೂ ರಾಮನು ಪಿತೃವಚನ ಪಾಲಿಸುವೆ ಎಂದು ಅಡವಿಗೆ ಹೊರಡುತ್ತಾನೆ. ಕರೋ ಗಂಗಾ ಜಲ ಪಾರ | ಗುಹಕಜೀ | ಕರೋ ಗಂಗಾಜಲ ಪಾರ || ಲಾವೋ ತೀರೇ ಉತಾರನ ಆಗು | ಕೊಯಿದಿನ ರಹೋ ಉದಾರ ಗುಹಕಜೀ || ತೀನ ಮೂರತಿ ಹಮ ತೀರಥ ಬಾಸಿ | ಜಾನೂ ಕಛು ಉಪಕಾರ ಗುಹಕಜೀ || (ತುಲಸೀದಾಸ) 'ಹೇ ಗುಹನೇ, ನಮ್ಮೀ ಮೂವರನ್ನು ಗಂಗಾನದಿ ದಾಟಿಸಿ ಆ ದಡಕ್ಕೆ ತಲುಪಿಸು, ಈ ಕಾರ್ಯಕ್ಕಾಗಿ ಸ್ವಲ್ಪ ಉದಾರನಾಗು, ನಿನ್ನ ಉಪಕಾರ ಮರೆಯುವದಿಲ್ಲ' ಎಂದು ರಾಮನು ನುಡಿಯುತ್ತಾನೆ.
ಮುಂದೆ ಭಾರಧ್ವಾಜರ ಆಶ್ರಮದಲ್ಲಿ ಸೀತೆಯು ಅಶ್ವತ್ಥ ವೃಕ್ಷಕ್ಕೆ ನಮಸ್ಕರಿಸುತ್ತಾಳೆ ನಮಸ್ತೇ$ಸ್ತು ಮಹಾವೃಕ್ಷ ಪಾರಯೇನ್ಮೇ ಪತಿವ್ರತಮ್ || ಕೌಸಲ್ಯಾಂ ಚೈವ ಪಶ್ಯೇಯಂ ಸುಮಿತ್ರಾಂ ಚ ಯಶಸ್ವಿನೀಮ್ || ಇತಿ ಸೀತಾಂಜಲೀಂ ಕೃತ್ವಾ ಪರ್ಯಗಚ್ಛದ್ವನಸ್ಪತಿಮ್ || (ವಾಲ್ಮೀಕಿರಾಮಾಯಣ) 'ಏ ವಟವೃಕ್ಷವೇ, ವನವಾಸ ಸುರಕ್ಷಿತವಾಗಿ ಮುಗಿದು ನಾವು ಮತ್ತೇ ತಾಯಂದಿರನ್ನು ನೋಡುವಂತೆ ಮಾಡು' ಎಂದು ನಮಸ್ಕರಿಸುತ್ತಾಳೆ.
ಮುಂದೆ ನಡೆಯುವಾಗ ಅರಮನೆಯಲ್ಲಿ ಓಡಾಡುವ ಈ ರಾಣಿಗೆ ಅಡವಿಯಲ್ಲಿ ನಡೆಯುವಂಥ ಪ್ರಸಂಗ ಬಂತಲ್ಲಾ ಎಂದು ಹೇಳುತ್ತ ತೊರವೆ ರಾಮಾಯಣದ ಈ ಷಟ್ಪದಿಯನ್ನು ಉದ್ಧರಿಸಿ ಅವಳ ಪರಿಸ್ಥಿತಿಯನ್ನು ವಿವರಿಸುತ್ತಾರೆ. ಅಡಿಗಡಿಗೆ ನಿಲ್ಲುವಳು ಕುಳ್ಳಿರುವಳು ಅಗಡಿಗಡಿಗೆ ಸುಯ್ವಳು ಬಳಲುವಳು ಬಾಯ್ಬಿಡುವಳು ಏಳುವಳು ಅಳುಕುವಳು ಬಳುಕುವಳು ಮೆಲ್ಲಡಿಯ || ಇಡಲರಿಯದಿನ್ನೆನಿತು ಕಾನನದೆಡೆಯೆನುತ ಬೆಸಗೊಂಬಳು ಈ ಪರಿ ನಡೆನಡೆದು ನಡೆಗೆಟ್ಟು ನೆಮ್ಮಿದಳು ಆತ್ಮವಲ್ಲಭನ || (ತೊರವೆರಾಮಾಯಣ)
ಬರುಬರುತ್ತ ರಾಮ ಲಕ್ಷ್ಮಣ ಮತ್ತು ಸೀತೆಯರು ಚಿತ್ರಕೂಟವನ್ನು ತಲುಪುತ್ತಾರೆ. ಅಲ್ಲಿ ಕೆಲದಿನ ತಂಗುತ್ತಾರೆ. ಹಾಗಾಗಿ ಅದರ ನೈಸರ್ಗಿಕ ವರ್ಣನೆಯನ್ನು ಕೊಡುತ್ತಾರೆ. ಚಿತ್ರಕೂಟ ಗಿರಿಶಿಖರಾ ಶಿಖರಾ | ಚಿತ್ರವಿಚಿತ್ರ ಫಲಸುಮಗಳಾಕರ || ತುಂಬಿ ಹರಿವ ನದಿ ಪುಳಿನ ಸ್ಥಳಂಗಳಿಂ | ತುಂಗತರುಗಳಾತ್ಮತಂಗ ಯೂಥದಿಂ | ಮಂಗಳ ವಿಹಗ ಸಂಘ ಸಂಗೀತದಿಂ | ಕಂಗೊಳಿಪುದು ಕನಕಾರುಣವರ್ಣದಿಂ || ಕಾಂತೆ ಕಾಣು ಕಾಂತಾರವಲ್ಲವಿದು | ಶಾಂತರಮ್ಯವಹ ಪುಣ್ಯಾರಣ್ಯವು | ಶಾಂತಿಸಹನೆ ಶಮದಮಗಳಿದ್ದವಗೆ | ಭ್ರಾಂತಿ ಏಕೆ ಮಮ ನಗರಕಧಿಕವು || ಚಿತ್ರಕೂಟ ಗಿರಿ ಶಿಖರಾ || (ಮೂಲನಾರಾಯಣ)
ಭರತ ಶತ್ರುಘ್ನರು ಅಯೋಧ್ಯೆಗೆ ಬರುತ್ತಾರೆ. ಭರತನು ತನ್ನ ತಂದೆ ದಶರಥನು ಮರಣದ ಸ್ಥಿತಿಯಲ್ಲಿದ್ದು ಹೀಗೆ 'ರಾಮಾ, ಲಕ್ಷ್ಮಣ ಹೇ ಸೀತೆ' ಎಂದು ನರಳುತ್ತಿರುತ್ತಾನೆ. ಹಾ ರಾಮ ಹಾ ರಾಮಾನುಜ ಹಾ ಹಾ ವೈದೇಹಿ ತಪಸ್ವಿನಿ | ನ ಮಾಂ ಜಾನೀತ ದುಃಖೇನ ಮ್ರಿಯಮಾಣಮನಾಥವತ್ || (ವಾಲ್ಮೀಕಿರಾಮಾಯಣ) ಇದರಿಂದ ಭರತನಿಗೆ ರಾಮಲಕ್ಷ್ಮಣಸೀತೆಯರು ಇಲ್ಲವೆಂದು ತಿಳಿಯುತ್ತದೆ. ರಾಜಾ ದಶರಥನು ಕೊನೆಗೆ ಅನಾಥನಂತೆ ಮರಣ ಹೊಂದುತ್ತಾನೆ.
ಮೇಲಣ ಉತ್ತರವಿಲ್ಲದಿರೆ ಭೂಪಾಲಕನ ಮುಖಚೇಷ್ಟೆಯನು ಮುರಿದು ಆಲಿಗಳನರಿದು ಅಕಟ ಕೆಟ್ಟೆನು ಕೆಟ್ಟೆನು ಅಕಟ ಎನುತ | (ತೊರವೆರಾಮಾಯಣ) ಯಾವುದೇ ಮಾತಿಗೆ ಉತ್ತರ ಕೊಡದೇ ದಶರಥನು ಭರತನ ಎದುರೇ ಮರಣ ಹೊಂದಿದನು.
ಆಗ ಅವನಿಗೆ ಹಿಂದಿನ ರಾತ್ರಿ ತಾನು ಕಂಡ ಕನಸ್ಸಿನ ಬಗ್ಗೆ ತನ್ನ ಮಿತ್ರರಿಗೆ ಹೇಳುತ್ತಾನೆ, ಹೊಲಸು ನಾರುವ ವಸನ ಧರಿಸಿಹ ತಿಲತಿಲಾನ್ನವ ತಿಂದು ತೇಗುತ ಕಿಲಕಿಲನೆ ನಗುತಿರ್ಪ ವದನವಿಕೀರ್ಣ ಕೇಶಚಯ | ಕಲುಷುತ ಗೋಮಯದ ಗುಂಡಿಯೊಳುರುಳಿ ಬೆಟ್ಟದೊಳು ಈಜುತೈತಹ ಮರಳಿ ತೈಲವ ಪೂಸಿಕೊಂಡಿಹ ನಗುತಲೆನ್ನಯ್ಯ || ಕಡಲೊಣಗಿ ಗ್ರಹತಾರೆ ಚಂದ್ರರು ಪೊಡವಿಗುರುಳಲು ಗಿರಿವನಂಗಳು ಸುಡುತಿಹುದ ಕಂಡು ಅಂಜಿದೆನು ಕಾರ್ಗತ್ತಲ್ಲೆಲ್ಲು || ಹುಡಿಯೊಳುರುಳಿತು ಪಟ್ಟದಾನೆಯು ಕಡೆಗೆ ಕಂಡನು ಪಿತನ ಕಾಯವ ಬಿಡದೆ ಲೇಪಿಸಿಕೊಂಡಿಹನು ಕೆಂಗಂಧಕುಸುಮಗಳ || (ತೊರವೆ ರಾಮಾಯಣ)
ದಶರಥನು ಮರಣ ಹೊಂದಿದ ಮೇಲೆ ಕೈಕೇಯಿಯು ಭರತನಿಗೆ ರಾಜನಾಗುವಂತೆ ಕೇಳಿ ಕೊಳ್ಳುತ್ತಾಳೆ. ಅದಕ್ಕೆ ಭರತನಿಗೆ ರಾಮನ ಭಾತೃವಾತ್ಸಲ್ಯವು ತನ್ನ ಅರಸುತನಕ್ಕಿಂತ ಹೆಚ್ಚಿನದಾಗಿರುತ್ತದೆ. ಅದಕ್ಕಾಗಿ ತಾಯಿಯನ್ನೇ ಹೀಗಳೆಯುತ್ತಾನೆ. ತನಗೆ ರಾಜ್ಯದ ಮೋಹವಿಲ್ಲ ಎಂದು ತಿಳಿಸುತ್ತಾನೆ. ನ ತು ಕಾಮಂ ಕರಿಷ್ಯಾಮಿ ತವಾಹಂ ಪಾಪ ನಿಶ್ಚಯೇ | ಯಯಾ ವ್ಯಸನಮಾರಬ್ಧಂ ಜೀವಿತಾಂತಕರಂ ಮಮ || (ವಾಲ್ಮೀಕಿರಾಮಾಯಣ) ತಾಯಿಯ ವಿಚಾರ ಮತ್ತು ವರ್ತನೆ ಬಗ್ಗೆ ಜಿಗುಪ್ಸೆಗೊಂಡು ಕೈಕೇಯಿಯನ್ನು ಮನಬಂದಂತೆ ಬೈಯುತ್ತಾನೆ. ಸಾತ್ವಂ ಅಗ್ನಿಂ ಪ್ರವೇಶ ವಾ ಸ್ವಯಂ ವಾ ದಂಡಕಾನ್ ವಿಶ | ರಜ್ಜುಂ ಬಂಧಾನ ವಾ ಕಂಠೇ ನಹಿ ತೇ$ನ್ಯತ್ ಪರಾಯಣಮ್ || (ವಾಲ್ಮೀಕಿರಾಮಾಯಣ) ನೀನು ಅಗ್ನಿ ಪ್ರವೇಶ ಮಾಡು ಇಲ್ಲವೇ ಹಗ್ಗವನ್ನು ನಿನ್ನ ಕುತ್ತಿಗೆ ಸುತ್ತಿಕೊಂಡು ಸಾಯಿ, ಎಂದು ಹೇಳುತ್ತ ನೆಲಕ್ಕೆ ಬೀಳುತ್ತಾನೆ.
ಮುಂದೆ ಭರತನು ತಂದೆಯ ಎಲ್ಲರೊಡನೆ ಕೂಡಿಕೊಂಡು ರಾಮನೆಡೆಗೆ ಹೊರಡುತ್ತಾನೆ, ಕರೆತರುವೆ ರಾಮನಾ ರಾಜೀವಲೋಚನನ | ಬರದಿರಲು ಹರಣ ಒಪ್ಪಿಪೆ ಚರಣಕವನ | ಧರಿಸುತಲಿ ವಲ್ಕಲವ ನಾ ಚರಿಪೆ ವನದಿ | ಧರಣಿ ಪಾಲಿಸೆ ರಾಮ ತಾ ಅಯೋಧ್ಯೆಯಲಿ | ಪರಿಪರಿಕಷ್ಟಗಳ ಅನುಭವಿಸೆ ದೇಹವನು | ದೊರೆ ರಾಮಪದಕೆ ಅಪಿಅಪೆನುಅಂತ್ಯದಲಿ || ಕರೆತರುವೆ ರಾಮನ .. .. .. (ಮೂಲನಾರಾಯಣ)
ಭರತನು ತಮ್ಮ ಕಡೆಗೆ ಬರುತ್ತಿರುವ ಸೇನೆಯನ್ನು ಕಂಡು ಲಕ್ಷ್ಮಣನು ಭರತನ ಬಗ್ಗೆ ರೋಷ ತುಂಬಿಕೊಂಡು ರಾಮನಿಗೆ ಹೀಗೆ ಎಚ್ಚರಿಸುತ್ತಾನೆ. ಆರಿಸಗ್ನಿಯನಣ್ಣ ಶೀಘ್ರದಿ ಗುಹಾಂತರದಿ ದೇವಿಯಂ ಬೈತಿಟ್ಟು ಬಾ | ಜವದಿ ತೊಡು ಕವಚಮಂ | ಚಾಪವಂ ಪಿಡಿ |… ನಿಷಂಗದಿಂ ತೆಗೆ | ನಿಶಿತನಾರಾಚ ಮೃತ್ಯುವಂ , 'ಏನ್', ಏನ್ ಏನ್ ಬರುತಿದೆ ಸೇನೆ ಕಾಲಾಳು ಹೇರಾನೆ ತೇರು ಕುದುರೆಯ ಮಾರಿಬೇನೆ | ವೈರಿಯೇ ದಿಟಂ | (ರಾಮಾಯಣದರ್ಶನಂ) ಭರತನು ರಾಮನನ್ನು ನೋಡಿ ದೇವಗೌತಮ ವಧುವಿಲಾಪ ಕೃಪಾವಲಂಬನ ಕಪಟನಾಟಕ ದೇವ ಹರಕೋದಂಡ ಚಂಡ ನಿಖಂಡ ಬಾಹುಬಲ |ದೇವ ವೈದೇಹಿ ವಿವಾಹ ಮಹಾ ವಿಭವ ಭೃಗುಜ ಪ್ರತಾಪ ಹರಾವತಾರ ವಿನೋದ ವೈಭವ ರಾಮ ನಮೋಯೆಂದ || (ತೊರವೆರಾಮಾಯಣ) ಎಂದು ನಮಸ್ಕರಿಸಿದ.
ಕೊನೆಗೆ ರಾಮನು ಅಯೋಧ್ಯೆಗೆ ಹಿಂತಿರುಗುವದಿಲ್ಲ ಎಂಬ ವಿಷಯ ಖಚಿತವಾದ ಮೇಲೆ ಆದೊಡೆಲೆ ರಾಜೇಂದ್ರ ನಿಮ್ಮಯ | ಪಾದುಕೆಯ ಕರುಣಿಪುದೋ ದೇವರ | ಪಾದವೆಂದೇ ಕಂಡು ಸೇವೆಯ ಮಾಡಿಕೊಂಡಿಹೆನು | ಕಾದಿಹೆನು ಹದಿನಾಲ್ಕು ವರುಷವು | ಮೇದಿನಿಯ ನೀವ್ ಬಾರದಿರಲು ನಿ | ವೇದಿಸುವೆನೀ ತನುವನನಲಂಗೆಂದನಾ ಭರತಾ || (ತೊರವೆರಾಮಾಯಣ) ಹೀಗೆ ರಾಮನ ಪ್ರತಿಕವಾಗಿ ಆತನ ಪಾದುಕೆಗಳನ್ನು ಪಡೆದು ಅಯೋಧ್ಯೆಗೆ ಬಂದು ಪಾದುಕೆಗಳ 'ಪಟ್ಟಾಭಿಷೇಕ' ಮಾಡಿ ತಾನು ರಾಮನ ಹೆಸರಲ್ಲಿ ರಾಜ್ಯಭಾರ ಮಾಡುತ್ತಾನೆ.
ಕೊನೆಗೆ ಮಂಗಳ ಪದ್ಯದಿಂದ ಕೀರ್ತನೆಯನ್ನು ಮುಗಿಸುತ್ತಾರೆ. ಮಂಗಳಂ ಕೋಸಲೇಂದ್ರಾಯ ಮಹನೀಯ ಗುಣಾರ್ಣವೇ | ಚಕ್ರವರ್ತಿ ತನೂಜಾಯ ಸಾರ್ವಭೌಮಾಯ ಮಂಗಳಂ || ಶ್ರೀ ರಘುರಾಮಚಂದ್ರ ಮಹಾರಾಜ ಕೀ ಜೈ ||
ಹೀಗೆ ಅವರು ತಮ್ಮ ಕೀರ್ತನೆಯಲ್ಲಿ ಮೂಲ ರಾಮಾಯಣದ ಶ್ಲೋಕಗಳನ್ನು, ತೊರವೆ ರಾಮಾಯಣ ಮತ್ತು ರಾಮಾಯಣದರ್ಶನಂ ಇವುಗಳ ಪದ್ಯಗಳನ್ನು, ಹಿಂದಿಯ ದೋಹಾಗಳನ್ನು ಯಥೇಚ್ಛವಾಗಿ ಬಳಸುತ್ತಾರೆ. ಸಾಮಯಿಕವಾಗಿ ತಮ್ಮ ರಚನೆಗಳನ್ನೂ (ಮೂಲನಾರಾಯಣ) ಉದ್ಧರಿಸುತ್ತಾರೆ. ಆ ಕಥೆಯ ಸನ್ನಿವೇಷವನ್ನು ನಮ್ಮೆದುರು ತಂದು ನಿಲ್ಲಿಸುತ್ತಾರೆ. ಅವರ ಕೀರ್ತನೆ ಕಣ್ಣಿಗೆ ಮತ್ತು ಕಿವಿಗಳಿಗೆ ಆಹ್ಲಾದ ನೀಡುತ್ತದೆ. ಅಚ್ಯುತದಾಸರ ಆ ಚಕ್ಷುರ್ಮಯವಾದ ಮತ್ತು ಶ್ರೋತ್ರಮಯವಾದ ಕೀರ್ತನೆಯನ್ನು ಹೀಗೆ ವಾಙ್ಮಯದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅದನ್ನು ಕೇಳಿಯೇ ಆನಂದಿಸಬೇಕು.
- ಡಾ. ಎಂ ಜಿ ದೇಶಪಾಂಡೆ ಸೇಡಮ್
--------------
ಲೇಖಕರ ಸಂಕ್ಷಿಪ್ತ ಪರಿಚಯ:
ಡಾ. ಎಂ ಜಿ ದೇಶಪಾಂಡೆ ಸೇಡಮ್ (75) ಬಿಎಸ್ಸಿ; ಎಂಬಿಬಿಎಸ್: ಎಂಎ (ಕನ್ನಡ) ಪಿಎಚ್‌ಡಿ (ದಾಸ ಸಾಹಿತ್ಯ), 50 ವರುಷಗಳಿಂದ ವೈದ್ಯಕೀಯ ಸೇವೆಯಲ್ಲಿದ್ದಾರೆ.
1) ಈ ಬೆಳಗು ಏಕಾಯಿತು ಕವನ ಸಂಕಲನ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪುರಸ್ಕೃತ 2) ಪೆಂಗನ ಪ್ರಸಂಗಗಳು ಹಾಸ್ಯ ಲೇಖನಗಳ ಸಂಗ್ರಹ 3) ಪೋಸ್ಟ ಮಾರ್ಟಮ್ ಸಂಕಲನ 4) ದಾಸ ಸಾಹಿತ್ಯದಲ್ಲಿ ಭಗವದ್ಗೀತೆಯ ತತ್ತ್ವಗಳು - ಪಿಎಚ್‌ಡಿ ಪ್ರಬಂಧ 5) ದಾಸ ಸಾಹಿತ್ಯದಲ್ಲಿ ವೈಜ್ಞಾನಿಕ ಅಂಶಗಳು 6) ತರಂಗಗಳು ಸ್ಥಳೀಯ ಕಥಾಸಂಗ್ರಹ ಪುಸ್ತಕದ ವಿಮರ್ಶಾ ಗ್ರಂಥ 7) ರಂಗವಿಠಲದಲ್ಲಿ (ಪ್ರಸ್ತುತ) ದಾಸಸಾಹಿತ್ಯದ ವಿಶಿಷ್ಟ ಸಾಲುಗಳು (25 ಲೇಖನಗಳು) 8) ಗೀತಾ ಚಿಂತನ 35 ಲೇಖನಗಳು
40 ನಾಟಕಗಳು, 75 ಕವಿಸಮ್ಮೇಳನಗಳು, 30 ಆಕಾಶವಾಣಿ ಗುಲ್ಬರ್ಗಾದಲ್ಲಿ ಚಿಂತನಗಳು ಪ್ರಸಾರವಾಗಿವೆ. 15 ಕೀರ್ತನಗಳು (ಅಚ್ಯುತದಾಸರಂತೆ), 1500 ಗಣಪತಿ ಭಾವಚಿತ್ರಗಳ ಸಂಗ್ರಹ, 4 ಸಲ ಗಮಕ ಕಾರ್ಯಕ್ರಮಗಳಲ್ಲಿ ವ್ಯಾಖ್ಯಾನ (ರನ್ನನ ಗದಾಯುದ್ಧ 2 ಮತ್ತು ಕುವೆಂಪು ರಾಮಾಯಣ) ರನ್ನನ ಗದಾಯುದ್ಧದ ಬಹುತೇಕ ಎಲ್ಲ ಪದ್ಯಗಳು ಕಂಠಪಾಠ, ಸೋಮೇಶ್ವರ ಶತಕದ 50 ಪದ್ಯಗಳು ಕಂಠಪಾಠ, ಮುಂದಿನ ಪ್ರಯತ್ನವಾಗಿ: 'ಗೋವಿನ ಗೀತೆ'– ಒಂದು ಅಧ್ಯಯನ ಕೃತಿ ರಚನೆಯಲ್ಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ