-ಅಂಬ್ರಯ್ಯ ಮಠ, ಬಿದನೂರುನಗರ
ರಾಮಾಯಣ ಭರತವರ್ಷದ ಆದಿಕಾವ್ಯ. ಅದು ಶ್ರೀರಾಮಚಂದ್ರನ ಪುಣ್ಯ ಕಥೆ. ಭರತವರ್ಷದ ಎಲ್ಲಾ ತಲೆಮಾರಿನ ಜನಕ್ಕೂ ಪ್ರಿಯ ಕಥೆ. ಶ್ರೀರಾಮನ ಕಥೆಯು ಕಾವ್ಯರೂಪವನ್ನು ಪಡೆದು ಕವಿತೆಯ ಶಾಖೆಯನ್ನೇರಿ 'ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ' ಎನ್ನುವಂತೆ ರಾಮ ರಾಮ ಎಂದು ಮಧುರವಾಗಿ ಮಧುರಾಕ್ಷರವಾಗಿ ನುಡಿಯುತ್ತಿರುವ ವಾಲ್ಮೀಕಿಯೆಂಬ ಕೋಕಿಲಕ್ಕೆ ವಂದನೆ ಎಂದು ಪೂರ್ವದ ಕಾವ್ಯಪ್ರೇಮಿಯೊಬ್ಬನು ಕವಿಯನ್ನು ಪೂಜಿಸಿದನು. ಅಂತಹ ವಾಲ್ಮೀಕಿಯ ಜನ್ಮದ ಕುರಿತು ಹಲವು ಕಥೆಗಳು ಪ್ರಚಲಿತದಲ್ಲಿವೆ. ಯಾವುದು ಸತ್ಯ? ಯಾವುದು ಮಿಥ್ಯ? ಅನ್ನುವ ಜಿಜ್ಞಾಸೆ ಅಂದೂ ಇತ್ತು. ಇಂದೂ ಇದೆ. ವಾಲ್ಮೀಕಿಯ ಜನ್ಮಾಂತರಂಗವನ್ನು ಬಿಚ್ಚಿಡುವ ಆನಂದರಾಮಾಯಣ ಈ ಕುರಿತಂತೆ ಏನು ಹೇಳುತ್ತದೆಂಬುದನ್ನು ಅವಲೋಕಿಸುವುದೇ ಈ ಲೇಖನದ ಉದ್ದೇಶ.
"ಶ್ರೀಮದಾನಂದರಾಮಾಯಣೇ ರಾಜ್ಯಕಾಂಡೇ ಉತ್ತರಾರ್ಧೇ ಚತುರ್ದಶಸ್ಸರ್ಗಃ" ದಲ್ಲಿ ಬರುವ ಒಂದು ಪ್ರಸಂಗದಲ್ಲಿ ಶ್ರೀರಾಮನು ವಾಲ್ಮೀಕಿ ಮುನಿಗಳಗೆ ಪ್ರಶ್ನಿಸುತ್ತಾ-
"ಮುನಿವರ್ಯ ! ನಾನು ಹುಟ್ಟುವುದಕ್ಕೂ ಮುಂಚೆಯೇ ನೀನು ನನ್ನ ಚರಿತ್ರೆಯನ್ನು ರಚಿಸಿದೆ. ಒಪ್ಪಿಕೊಳ್ಳೋಣ. ಆದರೆ ಅದನ್ನು ನೀನು ಹೇಗೆ ತಿಳಿದೆ? ಯಾರು ನಿನಗೆ ಅದನ್ನು ಅರುಹಿದರು? ಪೂರ್ವಜನ್ಮದಲ್ಲಿ ನೀನು ಯಾರಾಗಿದ್ದೆ? ನೀನು ಯಾವ ಪುಣ್ಯವನ್ನು ಮಾಡಿದ್ದೀಯೇ?" ಎಂದು ಕೇಳುತ್ತಾನೆ.
"ಶ್ರೀರಾಮ! ನಿನ್ನ ನಾಮಗಳ ಮಹಿಮೆಯಿಂದಲೇ ನಾನು ಬ್ರಹ್ಮರ್ಷಿಯಾದೆ. ನಿನ್ನ ನಾಮವೇ ನನ್ನ ಪಾಪಗಳನ್ನೆಲ್ಲ ಪರಿಹಾರಮಾಡಿ ಪುಣ್ಯಜೀವಿಯನ್ನಾಗಿಸಿತು. ಇನ್ನು ನನ್ನ ಪೂರ್ವ ಜನ್ಮದ ಕಥೆ ಕೇಳಬಯಸಿರುವೆಯಲ್ಲ. ಅದನ್ನು ಹೇಳುತ್ತೇನೆ ಕೇಳು" ಎಂದ ವಾಲ್ಮೀಕಿ ಮುನಿಗಳು ತನ್ನ ಮೂರು ಜನ್ಮದ ಕಥೆಯನ್ನು ಈ ರೀತಿ ನಿವೇದಿಸಿಕೊಂಡರು-
ಶಂಖನೆಂಬ ಹೆಸರಿನ ಬ್ರಾಹ್ಮಣ ಯುವಕ ಪಂಪಾ ಸರೋವರ ತೀರದಲ್ಲಿದ್ದ ಗುರುಕುಲದಲ್ಲಿ ಅಧ್ಯಯನ ಮಾಡಿ, ಗುರುವಿನಿಂದ ಸರ್ವ ಸಿದ್ಧಿಗಳನ್ನು ಪಡೆದು ಅವರ ಅಪ್ಪಣೆಯ ಮೇರೆಗೆ ಅಲ್ಲಿಂದ ಹೊರಟು ಗೋದಾವರೀ ನದಿಯ ಬಳಿಗೆ ಬಂದ. ದಾರಿಯಲ್ಲಿ ಭೀಮರಥಿನದಿಯನ್ನು ದಾಟಿ ಮುಂದೆ ಸಾಗುವಾಗ ಜನರಹಿತವೂ, ಜಲರಹಿತವೂ ಮುಳ್ಳುಗಳಿಂದ ಆವೃತ್ತವಾದ ಘೋರ ಕಾನನಕ್ಕೆ ಅಡಿಯಿಟ್ಟ. ಆಗ ವೈಶಾಖ ಮಾಸ. ಬಿರುಬಿಸಿಲ ತಾಪ. ಇದೆಲ್ಲದರ ನಡುವೆ ಮಧ್ಯಾಹ್ನದ ಹೊತ್ತು ಚಾಪವನ್ನು ಧರಿಸಿದ ದುರಾಚಾರಿಯಾದ ವ್ಯಾಧನ ಆಗಮನ. ವ್ಯಾಧನೋ ದಯವಿರದ ಕಟುಕ. ಶಂಖನೋ ಕುಂಡಲಗಳನ್ನು ಧರಿಸಿದ ದೀಕ್ಷಿತ ಸೂರ್ಯ !
ತನ್ನ ಕೈಯಲ್ಲಿರುವ ಕತ್ತಿಯನ್ನು ಝಳಪಿಸುತ್ತಾ ಶಂಖನನ್ನು ಭಯಪಡಿಸುತ್ತ ಅವನಲ್ಲಿದ್ದ ಕುಂಡಲ, ಕೆರ, ಛತ್ರಿ, ವಸ್ತ್ರ, ಕಮಂಡಲಗಳನ್ನು ಕಿತ್ತುಕೊಂಡ. ಬಿಸಿಲ ಧಗೆಯಿಂದ ನೆಲ ಕಾದ ಕೆಂಡವಾಗಿತ್ತು. ಪಾದರಕ್ಷೆಯನ್ನೂ ಕಳೆದುಕೊಂಡ ಶಂಖ ಪಾದಗಳನ್ನು ಹುಲ್ಲಿನ ಮೇಲಿಡುತ್ತಾ, ಹುಲ್ಲಿಲ್ಲದಲ್ಲಿ ಕಾಲಿಗೆ ಬಟ್ಟೆಯನ್ನು ಸುತ್ತಿಕೊಂಡು ಕಷ್ಟಪಟ್ಟು ನಡೆಯುತ್ತಿದ್ದ. ಇದನ್ನು ಕಂಡ ವ್ಯಾಧನಿಗೆ ಕರುಣೆ ಬಂತೇನೋ; ತಾನು ಕಸಿದುಕೊಂಡಿದ್ದ ಅವನ ಪಾದರಕ್ಷೆಗಳನ್ನು ಹಿಂದಿರುಗಿಸಲು ನೋಡಿದ. ಆದರೆ ಅವು ಇನ್ನೇನೋ ಕಿತ್ತುಹೋಗುವಷ್ಟು ಹಳತಾಗಿದ್ದವು. ಆದುದರಿಂದ ತನ್ನಲ್ಲಿರುವ ಹೊಸ ಪಾದರಕ್ಷೆಗಳನ್ನು ಅವನಿಗಿತ್ತ. ಆಗ ಶಂಖನಿಗೆ ಆನಂದವಾಯಿತು. ಆ ಆನಂದದಲ್ಲೇ -
"ಮಹಾಶಯ ವ್ಯಾಧ! ನಿನ್ನ ಪೂರ್ವಜನ್ಮದ ಪುಣ್ಯವಿಶೇಷದಿಂದ ನಿನಗೆ ಈ ಬುದ್ಧಿ ಬಂದಿದೆ. ಈ ವೈಶಾಖದ ಬಿಸಿಲ ಬೇಗೆಯಲ್ಲಿ ಪಾದರಕ್ಷೆಗಳನ್ನು ನನಗಿತ್ತು ಉಪಕರಿಸಿದ್ದೀಯಾ. ಒಳ್ಳೆಯದಾಗಲಿ" ಎಂದ. ಶಂಖನ ಮಾತುಗಳನ್ನು ಕೇಳಿದ ವ್ಯಾಧ-
"ಹೇಳು, ನಾನು ಪೂರ್ವದಲ್ಲಿ ಮಾಡಿದ ಪುಣ್ಯವೇನು? ಆವೊತ್ತು ನಾನೇನಾಗಿದ್ದೆ?" ಎಂದು ಕುತೂಹಲದಿಂದ ಕೇಳಿದ. ಬಿಸಿಲು ಹೆಚ್ಚಾದ್ದರಿಂದ ಅವನನ್ನು ನೆರಳಿರುವ ಕಡೆಗೆ ಕರೆದೊಯ್ದ. ಅಲ್ಲಿ ಒಂದು ಸರೋವರವಿತ್ತು. ಸರೋವರದ ತಂಪಾದ ನೀರನ್ನು ಇಬ್ಬರೂ ಕುಡಿದರು. ವ್ಯಾಧ ತನ್ನಲ್ಲಿರುವ ಗೆಡ್ಡೆ ಗೆಣಸುಗಳನ್ನೂ ಶ್ರಮಹಾರಕವಾದ ಬೇಲದ ಹಣ್ಣುಗಳನ್ನೂ ಶಂಖನಿಗಿತ್ತ. ಇಬ್ಬರೂ ಖುಷಿಯಿಂದ ತಿಂದರು. ನಂತರ ಶಂಖ ಇಂತೆಂದ- "ಹಿಂದೆ ನೀನು ಶ್ರೀವತ್ಸಗೋತ್ರದಲ್ಲಿ ಹುಟ್ಟಿದ ಸ್ತಂಭನೆಂಬ ಹೆಸರಿನ ಬ್ರಾಹ್ಮಣನಾಗಿದ್ದೆ. ಆದರೆ ಬ್ರಾಹ್ಮಣನಾಗಿಯೂ ಮಹಾಪಾಪಿಯಾಗಿದ್ದೆ. ಕಾಂತಿಮಯಿಯೆಂಬ ಧರ್ಮಪತ್ನಿಯಿದ್ದೂ ಸೂಳೆಯೊಬ್ಬಳ ಸಹವಾಸಕ್ಕೆ ಬಿದ್ದೆ.
ಕಾಂತಿಮತಿಯು ತನ್ನ ಪಾತಿವ್ರತ್ಯದಿಂದ ಬ್ರಾಹ್ಮಣಾಧಮನಾದ ನಿನಗೂ ಆ ನಿನ್ನ ಸೂಳೆಗೂ ಬಹು ನಿಷ್ಠೆಯಿಂದ ಸೇವೆ ಮಾಡುತ್ತಿದ್ದಳು. ನೀವಿಬ್ಬರೂ ಮಂಚದ ಮೇಲೆ ಮಲಗಿದರೆ ಇವಳು ತನ್ನೊಳಗೆ ಇನ್ನಿಲ್ಲದಂತೆ ದುಃಖ ತುಂಬಿಕೊಂಡು ಮಂಚದ ಕೆಳಗೆ ರೋದಿಸುತ್ತ ಮಲಗಿರುತ್ತಿದ್ದಳು. ಹೀಗೆ ಬಹುಕಾಲ ಕಳೆಯಿತು. ಅದೊಂದು ದಿನ ಅಪಥ್ಯ ಪದಾರ್ಥಗಳ ಸೇವನೆಯಿಂದ ಭಗಂದರವೆಂಬ ಕ್ರೂರ ರೋಗಕ್ಕೆ ತುತ್ತಾದೆ. ಹಗಲು ರಾತ್ರಿಯೆನ್ನದೆ ರೋಗದ ಭಾದೆಯಿಂದ ನರಳುತ್ತಿದ್ದೆ. ಈ ರೋಗದಿಂದಾಗಿ ಇರುವ ಹಣವನ್ನೆಲ್ಲ ಕಳೆದುಕೊಂಡೆ. ದಟ್ಟದರಿದ್ರನಾದ ನಿನ್ನಿಂದ ಸುಖವಿಲ್ಲವೆಂದು ತಿಳಿದ ಸೂಳೆ ಮತ್ತೊಬ್ಬನನ್ನು ಕಟ್ಟಿಕೊಂಡು ಹೊರಟುಹೋದಳು. ದೀನನಾದ ನೀನು ನಿನ್ನ ಹೇಸಿ ಕಾರ್ಯಕ್ಕೆ ಮನನೊಂದು; ಎಲೈ ದೇವಿಯೇ? ನಿನ್ನ ವಿಷಯದಲ್ಲಿ ನಾನು ಬಹು ನಿಷ್ಠುರವಾಗಿ ನಡೆದುಕೊಂಡೆ. ನೀನು ಸುಂದರಿ, ಪಾವನೆಯಾಗಿದ್ದರೂ ನಿನ್ನನ್ನು ನಿರ್ಲಕ್ಷಿಸಿದೆ. ಆದರೆ ನೀನು ಮಾತ್ರ ನನ್ನ ಕೈಬಿಡದೆ ಕಾಪಾಡಿದೆ ಎಂದೆ. ಆಗ ಆ ಕಾಂತಿಮಯಿಯು ನಿನಗೆ ಕೈಮುಗಿದು "ಕಾಂತಾ! ನೀನು ಈ ರೀತಿಯಲ್ಲಿ ದೈನ್ಯತೆಯಿಂದ ದುಃಖಪಡುವುದು ಬೇಡ. ನನ್ನನ್ನು ನೋಡಿ ಲಜ್ಜಿತನಾಗುವುದೂ ಬೇಡ. ನಿನ್ನ ಮೇಲೆ ನನಗೆ ಕೋಪವೊಂದಿಷ್ಟೂ ಇಲ್ಲ. ಪೂರ್ವದಲ್ಲಿ ಮಾಡಿದ ಪಾಪಗಳೇ ಈಗ ದುಃಖರೂಪದಲ್ಲಿ ನಮ್ಮನ್ನು ಕಾಡುತ್ತವೆ. ಅದನ್ನು ಸಹಿಸುವವರೇ ಉತ್ತಮರು. ನಾನು ಪೂರ್ವಜನ್ಮದಲ್ಲಿ ಪಾಪಿಯಾಗಿದ್ದೆನು. ಈಗ ಈ ಜನ್ಮದಲ್ಲಿ ಅದನ್ನು ಅನುಭವಿಸುತ್ತಿರುವುದರಿಂದ ನನಗೆ ದುಃಖವೂ ಇಲ್ಲ. ಖೇದವೂ ಇಲ್ಲ" ಎಂದು ನಿನಗೆ ಸಮಾಧಾನ ಹೇಳಿ ನಿನಗಾವ ರೀತಿಯಿಂದಲೂ ತೊಂದರೆಯಾಗದಂತೆ ಕಾಪಾಡುತ್ತಿದ್ದಳು. ಧನವೆಲ್ಲವೂ ರೋಗದಿಂದಾಗಿ ಕಳೆದುಕೊಂಡದ್ದರಿಂದ ತನ್ನ ತಂದೆಯ ಮನೆಯಿಂದಲೂ ಬಂಧುಗಳ ಮನೆಯಿಂದಲೂ ಹಣವನ್ನು ತಂದು ನಿನ್ನನ್ನು ಸಾಕುತ್ತಿದ್ದಳು. ಆ ಕಾಂತಿಮಯಿಯು ನಿನ್ನನ್ನು ಮಹಾವಿಷ್ಣುವೆಂದೇ ಭಾವಿಸಿ ಸ್ವಲ್ಪವೂ ಬೇಸರಪಡದೆ ನಿನ್ನ ಮಲಮೂತ್ರಗಳನ್ನು ಹಗಲೂ ರಾತ್ರಿಯೆನ್ನದೆ ನಿನ್ನ ಬಳಿ ಇದ್ದು ಶುದ್ಧಿ ಮಾಡುತ್ತಿದ್ದಳು. ದುರ್ಗಂಧಪೂರಿತವಾದ ಹುಣ್ಣುಗಳಲ್ಲಿರುವ ಹುಳುಗಳನ್ನು ಕೈ ಬೆರಳಿನ ಉಗುರುಗಳಿಂದ ಒಂದಿಷ್ಟೂ ಅಸಹ್ಯಪಡದೆ ತೆಗೆದುಹಾಕುತ್ತಿದ್ದಳು. ಹಗಲು ರಾತ್ರಿಯನ್ನು ಏಕ ಮಾಡಿ ನಿನ್ನ ಸೇವೆ ಮಾಡುತ್ತಿದ್ದಳು. ಮಾತ್ರವಲ್ಲ ಗಂಡನ ದುಃಖವನ್ನು ದೂರ ಮಾಡಲು ದೇವರಲ್ಲಿ ಸದಾ ಪ್ರಾರ್ಥಿಸುತ್ತಿದ್ದಳು. ನನ್ನ ಗಂಡನಿಗೆ ಆರೋಗ್ಯವುಂಟಾದರೆ ಚಂಡಿಕೆಗೆ ಒಳ್ಳೆಯ ಅನ್ನವನ್ನೂ ಒಂದು ಕೋಣವನ್ನೂ ಬಲಿಯಾಗಿ ಅರ್ಪಿಸುತ್ತೇನೆ, ವಿನಾಯಕನಿಗೆ ಕಡುಬುಗಳನ್ನು ಸಮರ್ಪಿಸುತ್ತೇನೆ, ಶನಿವಾರದ ದಿವಸ ಉಪವಾಸವನ್ನು ಮಾಡುತ್ತೇನೆ, ಮಧುರವಾದ ಬೆಲ್ಲ, ತುಪ್ಪವನ್ನು ತಿನ್ನಲಾರೆ, ಯಾವತ್ತೂ ಎಣ್ಣೆ ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುವುದಿಲ್ಲವೆಂದು ಹರಕೆ ಕಟ್ಟಿಕೊಂಡ ಆ ಪುಣ್ಯವಂತೆ ತನ್ನ ಗಂಡ ನೂರ್ಕಾಲ ಬದುಕಲಿ ಎಂದು ಹಾರೈಸುತ್ತಿದ್ದಳು.
ವೈಶಾಖಮಾಸದ ಒಂದು ದಿನ ದೇವಲಮುನಿ ಎಂಬಾತ ಮನೆಗೆ ಬಂದ. ಆತ ತನ್ನ ಗಂಡನಿಗೆ ಚಿಕಿತ್ಸೆ ಮಾಡುವೆನೆಂದ. ಮುನಿಯೆಂದರೆ ತನ್ನ ಗಂಡ ಚಿಕಿತ್ಸೆ ಪಡೆಯಲಾರನೆಂದು ಭಾವಿಸಿ, ವೈದ್ಯ ಬಂದಿದ್ದಾನೆ, ಆತ ತಮ್ಮ ರೋಗ ಗುಣ ಮಾಡುವನು ದಯವಿಟ್ಟು ಚಿಕಿತ್ಸೆ ಪಡೆಯಿರಿ ಎಂದು ನಿನ್ನಲ್ಲಿ ಅವಳು ವಿನಂತಿಸಿಕೊಂಡಳು. ಅದಕ್ಕೆ ನೀನು ಒಪ್ಪಿದೆ. ದೇವಲ ಮುನಿಗೆ ಆತಿಥ್ಯ ನೀಡಿ ಅವನ ಕಾಲುಗಳನ್ನು ತೊಳೆದು ಆ ತೀರ್ಥವನ್ನು ತಲೆಯಮೇಲೆ ಪ್ರೋಕ್ಷಿಸಿಕೊಂಡಳು ಅಂತೆಯೇ ನಿನ್ನ ತಲೆಯ ಮೇಲೆಯೂ ಪ್ರೋಕ್ಷಿಸಿದಳು. ಮಾತ್ರವಲ್ಲ ಇದು ವೈದ್ಯ ಕೊಟ್ಟ ಔಷಧವೆಂದು ಆ ತೀರ್ಥವನ್ನೇ ಕುಡಿಸಿದಳು.
ನಂತರ ದೇವಲಮುನಿಗೆ ಕುಡಿಯಲು ಪಾನಕವನ್ನು ಮಾಡಿಕೊಟ್ಟಳು. ದಿವ್ಯಾನ್ನವನ್ನು ಉಣಬಡಿಸಿದಳು. ಲಾವಂಚದ ಬೀಸಣಿಗೆಯಿಂದ ಬೀಸಿದಳು. ಗಂಧವನ್ನು ಕೊಟ್ಟಳು. ಈ ರೀತಿಯಾಗಿ ನಿನ್ನ ಅಪ್ಪಣೆಯನ್ನು ಪಡೆದು ಅವನಿಗೆ ಆ ಬಿಸಿಲ ತಾಪವು ಹೋಗುವಂತೆ ಉಪಚರಿಸಿದಳು. ಮರುದಿನ ಸೂರ್ಯ ಹುಟ್ಟುವ ಮೊದಲೇ ಆ ಮುನಿಯು ಹೊರಟುಹೋದ. ಸ್ವಲ್ಪ ಗುಣಮುಖನಾದ ನೀನು ಕೆಲವೇ ದಿನಗಳಲ್ಲಿ ಸನ್ನಿಪಾತರೋಗಕ್ಕೆ ತುತ್ತಾದಿ. ಅದೊಮ್ಮೆ ಕಫದಿಂದ ನೀನು ಉಸಿರಾಡದಂತಾಗಿ ಹಲ್ಲನ್ನು ಬಿಟ್ಟಿದ್ದಾಗ ಆಕೆಯು ನಿನ್ನ ಬಾಯೊಳಗೆ ಬೆರಳನ್ನು ಹಾಕಿ ಕಫವನ್ನು ತೆಗೆಯುತ್ತಿರುವಾಗ ಆಕೆಯ ಬೆರಳುಗಳನ್ನು ಕಡಿದು ಕತ್ತರಿಸಿಬಿಟ್ಟೆ. ಆಕೆಯ ಕೋಮಲವಾದ ಬೆರಳಿನ ಚೂರುಗಳು ನಿನ್ನ ಬಾಯಲ್ಲೇ ಉಳಿದುಬಿಟ್ಟವು. ಆಕೆಯ ಬೆರಳನ್ನು ಕಡಿದ ಒಡನೆಯೇ ನೀನು ಪ್ರಾಣಬಿಟ್ಟೆ ಈ ಹಿಂದೆ ನೀನಿಟ್ಟುಕೊಂಡಿದ್ದ ಸೂಳೆಯ ಸ್ಮರಣೆಯೊಂದಿಗೆ!
ಕಾಂತಿಮಯಿಯು ನಿನ್ನ ಹೆಣದ ಸಂಸ್ಕಾರಕ್ಕಾಗಿ ತನ್ನ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಮಾರಿ ಬಂದ ಹಣದಿಂದ ಶ್ರೀಗಂಧದ ಸೌದೆಯನ್ನು ತಂದು ನಿನಗೆ ಚಿತೆಯನ್ನು ಸಿದ್ಧಪಡಿಸಿದಳು. ಅದರ ಮಧ್ಯದಲ್ಲಿ ನಿನ್ನ ಶವವನ್ನು ಇರಿಸಿದಳು. ಆಗ ನಿನ್ನ ಹೆಣವನ್ನು ಭುಜಗಳಿಂದ ಆಲಂಗಿಸಿಕೊಂಡಳು. ಕಾಲಿನ ಮೇಲೆ ಕಾಲನ್ನಿಟ್ಟಳು. ಮುಖದ ಮೇಲೆ ಮುಖವನ್ನಿಟ್ಟಳು. ಹೃದಯದ ಮೇಲೆ ಹೃದಯವನ್ನಿಟ್ಟಳು. ನಿನ್ನ ಗುಹ್ಯದಲ್ಲಿ ತನ್ನ ಗುಹ್ಯಸ್ಥಳವನ್ನಿಟ್ಟು ಅಗ್ನಿಸ್ಪರ್ಷ ಮಾಡಿಕೊಂಡಳು. ಇಬ್ಬರ ದೇಹಗಳೂ ಸುಟ್ಟುಭಸ್ಮವಾದವು. ದೇಹವನ್ನು ತ್ಯಜಿಸಿದ ಕಾಂತಿಮಯಿಯು ವೈಕುಂಠಕ್ಕೆ ಹೊರಟುಹೋದಳು. ನೀನು ಮಾತ್ರ ಸಾಯುವ ಕಾಲದಲ್ಲೂ ಸೂಳೆಯ ಸ್ಮರಣೆಯಲ್ಲೇ ಸತ್ತದ್ದರಿಂದ ವ್ಯಾಧರ ಹೊಟ್ಟೆಯಲ್ಲಿ ಪುನಃ ಹುಟ್ಟಿ ಬಹುಬಿಸಿಲುಳ್ಳ ಈ ಘೋರ ಕಾಡಿನಲ್ಲಿ ಹಿಂಸಾಸಕ್ತನಾಗಿ ಈ ಜನ್ಮವನ್ನು ಹೊಂದಿದೆ. ಆದರೆ ವೈಶಾಖದ ಬಿರುಬಿಸಿಲಲ್ಲಿ ಬಂದಿದ್ದ ಬ್ರಾಹ್ಮಣ ದೇವಲಮುನಿಗೆ ಪಾನಕ ಕೊಡಲು ಕಾಂತಿಮಯಿಗೆ ನೀನು ಒಪ್ಪಿಗೆಯನ್ನು ಕೊಟ್ಟದ್ದರಿಂದ ನಿನಗೆ ಒಳ್ಳೆಯ ಬುದ್ಧಿಯು ಹುಟ್ಟಿತು. ಆ ಧರ್ಮಬುದ್ಧಿಯಿಂದ ನನಗೆ ಪಾದುಕೆಗಳನ್ನು ಕೊಡಲು ನಿನಗೆ ಬುದ್ಧಿ ಬಂತು. ದೇವಲಮುನಿಯ ಪಾದೋದಕವನ್ನು ತಲೆಯಲ್ಲಿ ನೀನು ಧರಿಸಿದೆಯಾದ್ದರಿಂದ ಅದು ನಿನ್ನ ಪಾಪಗಳನ್ನೆಲ್ಲ ನಾಶಮಾಡಿತು. ಆ ಕಾರಣವಾಗಿ ಈ ವನದಲ್ಲಿಯೂ ನಿನಗೆ ನನ್ನ ಸಂಗಡ ಸೇರುವಿಕೆಯು ಬಂದು ನಿನ್ನ ಜನ್ಮವೃತ್ತಾಂತವನ್ನು ಕೇಳುವ ಬುದ್ಧಿಯು ನಿನಗುಂಟಾಯಿತು. ನೀನು ಹಿಂದಿನ ಜನ್ಮದಲ್ಲಿ ಕಚ್ಚಿದ್ದ ಬೆರಳುಗಳನ್ನು ಬಾಯಲ್ಲಿಯೇ ಇಟ್ಟುಕೊಂಡು ಸತ್ತುದರಿಂದ ನಿನಗೆ ಈ ಕಾಡಿನಲ್ಲಿ ಮಾಂಸವನ್ನು ತಿಂದು ಜೀವಿಸುವಂತಾಯಿತು.
ಇನ್ನು ನಿನಗೆ ಮುಂದಾಗುವ ವಿಷಯವನ್ನು ಹೇಳುತ್ತೇನೆ. ಕೇಳು. ಇನ್ನು ಮುಂದೆ ಕೃಣುವೆಂಬ ಋಷಿಯು ಒಂದು ಸರೋವರದ ಬಳಿಯಲ್ಲಿ ನಿರಾಹಾರಿಯಾಗಿ ತಪಸ್ಸು ಮಾಡುವನು. ತಪಸ್ಸು ಮುಗಿಯುತ್ತಿದ್ದಂತೆ ಅವನ ಕಣ್ಣಿನಿಂದ ವೀರ್ಯವು ಜಿಬುರಿನ ರೂಪದಿಂದ ಹೊರಬರುವುದು. ಹೀಗೆ ಹೊರಬರುತ್ತಲೇ ಕೆಳಗೆ ಬೀಳುವುದು. ಅದನ್ನು ಒಬ್ಬ ನಾಗಕನ್ಯೆ ನೋಡಿ ಸೇವಿಸುವಳು. ಆಗ ಅವಳಿಗೆ ಋತುಕಾಲವಾಗಿರುವುದರಿಂದ ಅವಳಲ್ಲಿ ನೀನು ಹುಟ್ಟುತ್ತೀಯೆ. ಆಗಲೂ ನಿನ್ನನ್ನು ಕಿರಾತರೇ ಪೋಷಿಸುತ್ತಾರಾದ್ದರಿಂದ ನೀನು ಕಿರಾತನೇ ಆಗುತ್ತಿ. ಈಗ ನೀನು ಈ ಪಾದರಕ್ಷೆಗಳನ್ನು ಕೊಟ್ಟ ಪುಣ್ಯದಿಂದ ಕಾಡಿನಲ್ಲಿ ಸಪ್ತ ಋಷಿಗಳ ದರ್ಶನವನ್ನು ಪಡೆಯುತ್ತಿ. ಅವರ ಅನುಗ್ರಹದಿಂದ ನೀನು ವಾಲ್ಮೀಕಿ ಋಷಿಯಾಗುತ್ತಿ. ಆಗ ನೀನು ಶ್ರೀರಾಮಚರಿತ್ರೆಯನ್ನು ಶ್ಲೋಕಗಳ ರೂಪದಲ್ಲಿ ರಚಿಸುತ್ತಿ. ವ್ಯಾಧನು ಶಂಖನಿಂದ ಕಸಿದುಕೊಂಡಿದ್ದ ಎಲ್ಲ ವಸ್ತುಗಳನ್ನೂ ಕೊಡಲು ಸಂತೋಷಗೊಂಡ ಶಂಖ ಗೌತಮೀನದಿಯ ಕಡೆಗೆ ಹೊರಟುಹೋದನು.
ಶ್ರೀ ರಾಮಾ! ಇತ್ತ ವ್ಯಾಧನು ಈ ಹಿಂದೆ ಶಂಖನು ಮಾಡಿದ ಉಪದೇಶದಂತೆ ಆ ಕಾಡಿನಲ್ಲಿಯೇ ವೈಶಾಖಮಾಸದ ಧರ್ಮಗಳನ್ನು ನಿಷ್ಠೆಯಿಂದ ಮಾಡುತ್ತ ಬಹುಕಾಲದವರೆಗೆ ಇದ್ದನು. ಈ ವ್ಯಾಧನ ಜನ್ಮವು ನಾಶವಾದ ಮೇಲೆ ಶಂಖನು ಹೇಳಿದಂತೆ ನಾನು ಕೃಣುವಿನ ಮಗನಾಗಿ ನಾಗಕನ್ನಿಕೆಯ ಹೊಟ್ಟೆಯಲ್ಲಿ ಹುಟ್ಟಿದೆನು. ಕಿರಾತರಿರುವಲ್ಲಿಯೇ ಹುಟ್ಟಿ ಕಿರಾತರಿಂದಲೇ ಪೋಷಿತನಾಗಿ ಕಿರಾತರಿಂದಲೇ ವರ್ಧಿತನಾದೆ. ನಾನು ಹುಟ್ಟಿದುದು ಬ್ರಾಹ್ಮಣನಿಂದಾದರೂ ಆಚಾರ ಮಾತ್ರ ಶೂದ್ರವಾಗಿತ್ತು. ಶೂದ್ರಾಚಾರದಲ್ಲಿದ್ದುಕೊಂಡು ನಿಯಮವನ್ನೇ ಹಿಡಿಯದ ನನಗೆ ಆ ಶೂದ್ರರಲ್ಲಿಯೇ ಮದುವೆಯಾಗಿ ಆಕೆಯಲ್ಲಿ ಅನೇಕ ಜನ ಮಕ್ಕಳನ್ನು ಪಡೆದೆ. ನಾನು ಕಳ್ಳರೊಡನೆ ಸೇರಿಕೊಂಡು ಕಳ್ಳತನವನ್ನೇ ಒಂದು ವೃತ್ತಿಯನ್ನಾಗಿಸಿಕೊಂಡೆ. ಯಾವಾಗಲೂ ಧನುರ್ಬಾಣಗಳನ್ನು ಧರಿಸಿರುವೆನಾಗಿ ಪ್ರಾಣಿಗಳಿಗೆ ಯಮಸದೃಶ್ಯನಾಗಿದ್ದೆ. ನಾಡ ಜನಗಳಿಗೆ ಸುಲಿಗೆಕೋರನಾಗಿ ಉಪದ್ರವಕಾರಿಯಾಗಿ ಬದುಕಿದೆ. ಹೀಗಿರುತ್ತಿರಲು ಒಂದು ಬಾರಿ ಆ ಕಾಡಿಗೆ ಸಪ್ತರ್ಷಿಗಳು ಬರುತ್ತಿರುವುದನ್ನು ಕಂಡೆ. ನಿಲ್ಲಿರಿ, ನಿಲ್ಲಿರಿ ಎಂಬುದಾಗಿ ಕೂಗಿಕೊಂಡೇ ಅವರನ್ನು ಹಿಡಿಯಲು ಹೋದೆ. ಅವರು-
"ಎಲೈ ದ್ವ್ವಿಜಾಧಮನೇ! ನೀನು ಯಾತಕ್ಕಾಗಿ ನಮ್ಮ ನಡೆಯನ್ನು ತಡೆದೆ?" ಎಂದು ಕೇಳಿದರು. "ಮತ್ತೇಕೆಂದು ತಿಳಿದಿರಿ? ನಿಮ್ಮಲ್ಲಿರುವ ಪದಾರ್ಥಗಳಿಗಾಗಿ. ಎಲ್ಲವನ್ನೂ ಬೇಗ ಬೇಗ ನನಗೆ ಕೊಟ್ಟು ಹೋಗಿ" ಎಂದೆ. "ಯಾರಿಗಾಗಿ ಈ ಪಾಪವನ್ನು ಮಾಡುತ್ತಿರುವೆ?" ಎಂದವರು ಕೇಳಿದರು. "ನನಗೆ ಹೆಂಡತಿ ಮಕ್ಕಳಿದ್ದಾರೆ. ಅವರು ಹಸಿದಿರುವರು. ಅವರ ಹಸಿವನ್ನು ಹಿಂಗಿಸಲು ಈ ಬೆಟ್ಟಗಾಡುಗಳಲ್ಲಿ ಸಂಚರಿಸುತ್ತಿರುವೆ" ಎಂದೆ. ಅದಕ್ಕವರು ನಗುತ್ತಾ-
"ಎಲೈ ವ್ಯಾಧನೆ! ನೀನು ನಿನ್ನ ಹೆಂಡತಿ ಮಕ್ಕಳಲ್ಲಿಗೆ ಹೋಗಿ 'ನಾನು ಪ್ರತಿದಿನದಲ್ಲಿಯೂ ಮಾಡುವ ಪಾಪಗಳೆಷ್ಟಿವೆಯೋ ಅಷ್ಟರಲ್ಲಿಯೂ ನೀವು ಎಲ್ಲರೂ ಭಾಗಿಗಳಾಗುವಿರಾ?' ಎಂಬುದಾಗಿ ಒಬ್ಬೊಬ್ಬರನ್ನೂ ಕರೆದು ಕೇಳು. ಅವರನ್ನು ಕೇಳಿ ನೀನು ಇಲ್ಲಿಗೆ ಬರುವವರೆಗೂ ನಾವು ಖಂಡಿತವಾಗಿಯೂ ಇಲ್ಲಿಯೇ ನಿನ್ನ ನಿರೀಕ್ಷೆಯಲ್ಲಿರುತ್ತೇವೆ. ನಾವು, ಇಲ್ಲಿಂದ ನೀನು ಬಂದಲ್ಲದೆ ಕದಲಲಾರೆವು. ಹಾಗೊಂದು ವೇಳೆ ಮಾಡಿದರೆ ಬ್ರಹ್ಮಹತ್ಯೆ ಮಾಡಿದರೆ ಯಾವ ಪಾಪವು ಪ್ರಾಪ್ತವಾಗುವುದೋ ಆ ಪಾಪವು ನಮಗೆ ಬರಲಿ" ಎಂದರು. ಅವರ ಶಪಥದಿಂದ ಅವರ ಮೇಲೆ ನನಗೆ ನಂಬಿಗೆ ಬಂತು.
ನಾನು ನೇರ ನನ್ನ ಗುಡಿಸಲಿಗೆ ಬಂದು ಅಲ್ಲಿರುವ ಹೆಂಡತಿ ಮಕ್ಕಳನ್ನು ಕರೆದು ಸಪ್ತರ್ಷಿಗಳು ಕೇಳಲು ಹೇಳಿದ ಪ್ರಶ್ನೆಯನ್ನು ಅವರಲ್ಲಿ ಕೇಳಿದೆ. ಅದಕ್ಕವರು 'ಪಾಪವೆಲ್ಲ ನಿನಗಿರಲಿ. ಒಳ್ಳೆಯ ಫಲ ನಮಗಿರಲಿ' ಎಂದಾಗ ನನ್ನ ತಪ್ಪಿನ ಅರಿವಾಯಿತು. ವೈರಾಗ್ಯ ಉಂಟಾಯಿತು. ಓಡುತ್ತ ಓಡುತ್ತಾ ಮುನಿಗಳೆಡೆಗೆ ಬಂದೆ. ಅವರ ದರ್ಶನವಾಗುತ್ತಿದ್ದಂತೆ ನನ್ನ ಅಂತಃಕರಣ ಶುದ್ಧವಾಯಿತು. ಧನಸ್ಸುಬಾಣಗಳನ್ನು ಬಿಸುಟು ಮುನಿಗಳಿಗೆ ಶರಣಾದೆ. ಅವರು ಶುದ್ಧಾಂತಃಕರಣವುಳ್ಳವರು. ನನಗೆ "ರಾಮ" ಎಂಬ ನಾಮವನ್ನು ಒಂದೇ ಮನಸ್ಸಿನಿಂದ ಜಪಿಸು. ನಾವು ಹಿಂದಿರುಗಿ ಬರುವವರೆಗೂ ನಾವು ಹೇಳಿದುದನ್ನು ಜಪಿಸುತ್ತಿರು ಎಂದು ಹೇಳಿ ಹೊರಟುಹೋದರು. ಅವರು ಹೇಳಿದಂತೆ ಜಪಿಸುತ್ತಾ ಬಂದೆ. ನನ್ನ ತಪಸ್ಸಿಗೆ ಸಾಕ್ಷಿ ಇರಲೆಂದು ನನ್ನ ಎದುರಿಗೆ ಒಂದು ದೊಣ್ಣೆಯನ್ನು ನೆಟ್ಟುಕೊಂಡಿದ್ದೆ. ತಪದಲ್ಲಿ ಪ್ರಪಂಚವನ್ನು ಮರೆತುಬಿಟ್ಟೆ. ಹಲವು ಕಾಲ ಕಳೆಯಿತು. ನನ್ನ ಮೇಲೆ ಹುತ್ತ ಬೆಳೆಯಿತು. ನಾ ನೆಟ್ಟ ಸಾಕ್ಷೀಭೂತ ದೊಣ್ಣೆಯು ಮರವಾಗಿತ್ತು. ಹೀಗಿರುತ್ತಿರಲು ಅದೊಂದು ದಿನ 'ಹುತ್ತದಿಂದ ಹೊರಗೆ ಬಾ' ಎಂದು ಕರೆದಂತಾಯಿತು. ಆ ಧ್ವನಿಯನ್ನು ಹಿಂದೊಮ್ಮೆ ಕೇಳಿದ್ದ ನೆನಪಾಯಿತು. ಒಡನೆಯೇ ಹೊರಕ್ಕೆ ಬಂದೆ. ಅಲ್ಲಿ ಸಪ್ತರ್ಷಿಗಳಿದ್ದರು. ನನ್ನನ್ನು ನೋಡುತ್ತಲೇ ಹರ್ಷದಿಂದ 'ವಾಲ್ಮೀಕಿ' ಎಂದವರು ಕರೆದರು.
ಎಲೈ ರಾಮನೇ! ನಾನು ನಿನ್ನ ನಾಮದ ಬಲದಿಂದ ಋಷಿಯಾಗಿ ಬದಲಾದೆ. ಒಂದು ಸಾರಿ ಶಿವನು ದೇವತೆಗಳೊಡನೆ ಕುಳಿತುಕೊಂಡು ಕೈಲಾಸದಲ್ಲಿ ಶ್ರೀರಾಮಚರಿತ್ರೆಯನ್ನು ಬ್ರಹ್ಮನಿಗೆ ಹೇಳಿದನು. ಆ ಬ್ರಹ್ಮನು ವೇದದ ವಾಕ್ಯಗಳಿಂದ ಈ ಚರಿತ್ರೆಯನ್ನು ನಾರದನಿಗೆ ಹೇಳಿದನು. ನಾರದ ನನಗೆ ಹೇಳಿದನು. ಹೀಗಿರುತ್ತರಲು ನಾನು ತಮಸಾನದಿಗೆ ಸ್ನಾನಕ್ಕೆಂದು ಹೋಗಿದ್ದಾಗ ವ್ಯಾಧನೊಬ್ಬ ಕ್ರೌಂಚ ಪಕ್ಷಿಯನ್ನು ಕೊಂದುದನ್ನು ಕಂಡೆ. ಆ ಕ್ರೌಂಚ ಪಕ್ಷಿಯ ಹೆಂಡತಿಯಾದ ಹೆಣ್ಣು ಕ್ರೌಂಚವು ಅಳುತ್ತಿರಲು ಅದನ್ನು ಸಮಾಧಾನಮಾಡಲು ಶೋಕಿಸಿದೆನು. ಆ ಶೋಕದ ಮಾತು ಮುವ್ವತ್ತೆರಡು ಅಕ್ಷರಗಳಿಂದ ಕೂಡಿ ಶ್ಲೋಕರೂಪವಾಗಿ ಪರಿಣಮಿಸಿತು. ನಾನೂ ಕೂಡ ಆ ಶ್ಲೋಕದ ರೀತಿಯನ್ನೇ ಅನುಸರಿಸಿ ನಿನ್ನ ಚರಿತ್ರೆಯನ್ನು ವರ್ಣಿಸಿದೆನು ಎಂದು ತನ್ನ ಮೂರು ಜನ್ಮದ ಪೂರ್ವ ಕಥೆಯನ್ನು ಶ್ರೀರಾಮನಿಗೆ ಸ್ವತಃ ವಾಲ್ಮೀಕಿಯೇ ಹೇಳಿದುದನ್ನು "ಶ್ರೀಮದಾದಿಕವಿ ವಾಲ್ಮೀಕಿ ವಿರಚಿತಂ ಶ್ರೀ ಆನಂದರಾಮಾಯಣಂ" ವಿವರಿಸುತ್ತದೆ.
-ಅಂಬ್ರಯ್ಯ ಮಠ. ಬಿದನೂರುನಗರ
9480402712
ಲೇಖಕರ ಸಂಕ್ಷಿಪ್ತ ಪರಿಚಯ:
ಬಿಜಾಪುರ ಜಿಲ್ಲೆಯ ತಾಳೀಕೊಟೆ ತಾಲೂಕಿನ ಕೊಡಗಾನೂರಿನಲ್ಲಿ ಹುಟ್ಟು (ಜೂನ್ 1, 1953). ತಾಯಿ ಮಲ್ಲಮ್ಮ. ತಂದೆ ಗಜದಂಡಯ್ಯ ಸ್ವಾಮಿ. ಮೊದಲ ಗುರು ತಾಯಿ. ಎರಡನೆಯ ಗುರು ಅಜ್ಜ ವೇದಮೂರ್ತಿ ಗುರುಲಿಂಗಯ್ಯ ಶಾಸ್ತ್ರಿಗಳು. ಗುಲಬರ್ಗ, ಧಾರವಾಡ, ಮೈಸೂರಿನಲ್ಲಿ ಒಂದಷ್ಟು ಕಲಿಕೆ. ಸಾಕಿ ಸಲುಹಿದ ತಾಯಿ ಕರ್ನಾಟಕ ವಿದ್ಯುತ್ ನಿಗಮ. ಬರವಣಿಗೆ ಒಂದು ಹವ್ಯಾಸ. ಬೆರಳೆಣಿಕೆಯಷ್ಟು ಕಾದಂಬರಿಗಳು, ಕಥೆಗಳು, ಪ್ರವಾಸ ಕಥನ, ಅಂಕಣ ಬರಹಗಳು ಪ್ರಕಟ. ಇತಿಹಾಸ, ಸಾಹಿತ್ಯ, ಸಂಗೀತ, ಪುಸ್ತಕದ ಗೀಳು. ಪ್ರಶಾಂತವಾದ ಮಲೆನಾಡ ಹಸಿರು ಬೆಟ್ಟಗಳ ಕಣಿವೆಯಲ್ಲಿರುವ ಐತಿಹಾಸಿಕ ಕ್ಷೇತ್ರ ಬಿದನೂರು ನಗರ ನೆಲೆವೀಡು. ಸದಾ ಅವಿತುಕೊಂಡಿರಬೇಕೆಂಬ ಕನಸು. ಕನಸು ನನಸಾಗುತ್ತಿಲ್ಲವಲ್ಲ ಎಂಬ ಕೊರಗು. ಪ್ರಕೃತಿಯ ದಿವ್ಯ ಲೀಲೆಯಲ್ಲಿ ಒಂದಾಗಿ ಹೋಗಬೇಕೆಂಬ ಮನಸು. ಸದಾ ಬೆರಗು ತುಂಬಿದ ಬದುಕು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ