- ಡಾ|| ಎ. ಕುಮುದ
ಶ್ರೀರಘುರಾಮವಿಠಲರ ಪೂರ್ವನಾಮ ಹೆಚ್.ಕೆ ಶೇಷಗಿರಿರಾಯರು. ಬೆಂಗಳೂರು. ಇವರು 19ನೇ ಶತಮಾನದವರು. ಇವರ ಪತ್ನಿ ಸೀತಮ್ಮ. (ಇಂದಿರೇಶ ವಿಠಲ) ಸಂಸಾರ ಜೀವನ ಸಾಗುತ್ತಿದ್ದಂತೆ 3 ಮಕ್ಕಳು. ಅವರಲ್ಲಿ ಇಬ್ಬರು ಹರಿಪಾದ ಸೇರಿದ್ದರು. ಉಳಿದ ಒಬ್ಬ ಗಂಡುಮಗ ನಾರಾಯಣ. ಅವನನ್ನು ಸೀತಮ್ಮ ಬಹು ಮುಚ್ಚಟೆಯಿಂದ ಸಾಕಿದಳು. ಆ ಮಗು ಚೆನ್ನಾಗಿ ಓದಿ ಎಂ.ಎ. ಪಿ.ಎಚ್.ಡಿ ಪದವಿ ಪಡೆದು ವಿದ್ಯಾವಂತನಾಗಿ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಬಾಟನಿ ಪ್ರೊಫೆಸರ್ ಆಗಿ ಅಲ್ಲೇ ನಿವೃತ್ತಿ ಹೊಂದಿದನು.
ಶೇಷಗಿರಿರಾಯರು ಹೆಚ್ಚು ಓದಿದವರಲ್ಲ. ಬರೀ ಎಸ್ ಎಸ್ ಎಲ್ ಸಿವರೆಗೆ ಮಾತ್ರ ಓದಿದ್ದರು. ಆದರೆ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸಮಾಡಿ ಅಚ್ಚುಕಟ್ಟಾಗಿ ಹಾರ್ಮೋನಿಯಂ ನುಡಿಸುವುದರಲ್ಲಿ ಆಸಕ್ತಿ ಹೊಂದಿ ಸಂಗೀತಗಾರರೆನಿಸಿದ್ದರು. ಅದೇ ಗೀಳಿನಲ್ಲಿ ಬದುಕು ಸಾರ್ಥಕ ಕಂಡು
ನಾಟಕ ರಂಗ ಪ್ರವೇಶಿಸಿದರು. ವರದಾಚಾರ್ ಕಂಪೆನಿ ಹಾಗೂ ಇನ್ನೂ ಅನೇಕ ಕಂಪೆನಿಗಳಲ್ಲಿ ಕೆಲಸ ಮಾಡಿ ಸಂಪಾದನೆಗೆ ಇಳಿದರು.
ಶೇಷಗಿರಿರಾಯರು ತಂದೆ ಮುದ್ದು ಮೋಹನವಿಠಲದಾಸರನ್ನು ತಮಗೆ 'ರಘುರಾಮವಿಠಲ. ಎಂಬ ಅಂಕಿತವನ್ನು ನೀಡುವಂತೆ ಕೇಳಿ ಪಡೆದರಂತೆ. ಅಂಕಿತ ಪಡೆದನಂತರ ಹರಿದಾಸರಾದರು. ಹೆಚ್ಚು ಹೆಚ್ಚು ಅಂಕಿತನಾಮ ಪದವನ್ನು ಪಾರಾಯಣ (ಜಪ) ಮಾಡಿ ತಮ್ಮ ಗುರುಗಳಿಗೆ ಸಮರ್ಪಿಸುತ್ತಿದ್ದರು. ತಾವು ನಾಟಕರಂಗ ಕಲೆಯಲ್ಲಿದ್ದರೂ ಎಲ್ಲಾ ಭಗವಂತನ ಸೇವೆ ಎಂದೇ ಬಾವಿಸುತ್ತಿದ್ದರು. ಸುಮಾರು 2 ಕೋಟಿ ವರೆಗೆ ಜಪ ಮಾಡಿರಬಹುದೆಂದು ಊಹಿಸಲಾಗಿದೆ. ಜಪದ ಸಂಖ್ಯೆಯನ್ನು ಪುಸ್ತಕದಲ್ಲಿ ಬರೆದಿಡುತ್ತಿದ್ದರಂತೆ. ಇವರು ರಾಮನ ಪರಮ ಭಕ್ತರು. ಏಕೆಂದರೆ ಇವರು ಶ್ರೀರಾಮನ ಮೇಲೆ ಹೆಚ್ಚು ಕೀರ್ತನೆಗಳನ್ನು
ರಚಿಸಿರುವರು. ಅಲ್ಲದೆ ಅವರ ಮನೆ ಪಡಸಾಲೆಯಲ್ಲಿ ಹಾಗೂ ದೇವರಮನೆಯಲ್ಲಿ ರಾಮದೇವರ ಭಾವಚಿತ್ರವಿತ್ತಂತೆ. ಅದನ್ನು ನೋಡಿ ಕಣ್ಣಿಗೆ ಒತ್ತಿಕೊಂಡು ಅಳುತ್ತಿದ್ದರಂತೆ. 'ನಮ್ಮ ರಾಮ ದೊಡ್ಡವನು, ಅವನಿಗೆ ಸರಿಸಮಾನರು ಯಾರೂ ಇಲ್ಲ. ಎಂಬುದು ರಘುರಾಮವಿಠಲರ ಭಾವನೆ. ಇವರದು ಅನನ್ಯವಾದ ರಾಮಭಕ್ತಿ ಎಂದು ತಿಳಿಯಬಹುದು.
ದಾಸರಿಗೆ 74 ವರ್ಷಗಳಾಗಿತ್ತು. ಅವರಿಗೆ ತಮ್ಮ ಜೀವಿತಾವಧಿಯಲ್ಲಿ ಶ್ರೀಹರಿಯನ್ನು ಅರ್ಚಿಸಿ ಪೂಜಿಸಿದುದು ತೃಪ್ತಿಯಾಗಿರಲಿಲ್ಲವೆಂದು ತೋರುತ್ತದೆ. ಆದ್ದರಿಂದ ಅವರು ಮತ್ತೆ 26 ವರ್ಷಗಳ ಆಯುಷ್ಯವನ್ನು ದಯಪಾಲಿಸುವಂತೆ ರಾಮನನ್ನು ಕೇಳಿಕೊಂಡರಂತೆ. ದಾಸರು 102 ವರ್ಷಕಾಲ ಜೀವಿಸಿದ್ದರೆಂದು ಅವರ ಒಂದು ಕೃತಿಯಿಂದ ತಿಳಿದುಬಂದಿದೆ.
ರಘುರಾಮವಿಠಲರು ರಚಿಸಿರುವ ರಾಮದೇವರ ಕೀರ್ತನೆಗಳ ಬಗ್ಗೆ ಚಿಂತನೆ:-
ಶ್ರೀರಾಮ ದಯವ ತೋರೋ| ಬೇಡುವೆ ನಿನ್ನನು||ಪ||
ರಾಮ ದಯವ ತೋರೊ ಸಾರಿ ಬೇಡುವೆ ನಿನ್ನ
ಚಾರು ಚರಣ ತೋರಿ ಪಾರುಗಾಣಿಸೋ ಎನ್ನ ||ಅ.ಪ||
ಆಯು ಕಳೆಯ ಬಂತೋ| ರಘುಕುಲ ತಿಲಕ ಎನ್ನ
ಆಯು ಕಳೆಯ ಬಂತೋ |ಆಯು ಕಳೆಯ ಬಂತೋ
ಮಾಯವು ತುಂಬಿತೋ ಮಾಯಗಾರ ಎನ್ನ ಮಾಯದಿ ಬಿಡಿಸೋ ||1||
ದೀನರಕ್ಷಕಾ ದೈನ್ಯದಿ ಬೇಡುವೆ ನಿನ್ನ ದೀನರಕ್ಷಕಾ
ದೀನರಕ್ಷಕಾ ಎನ್ನ ಮನದಲಿ ನೆಲೆಸಿ
ಧ್ಯಾನ ಮಾಡುವ ಜ್ಞಾನ ಎನಗೆ ಕೊಡೊ ||2||
ಸ್ವಾಮಿ ದಯದಿ ಕೇಳೋ ದೀನನ ಮೊರೆಯನು
ಮಮಸ್ವಾಮಿ ಕೇಳೋ ದೀನನ ಮೊರೆಯನು
ಮಮಸ್ವಾಮಿ ದಯದಿ ಕೇಳೋ ಸ್ವಾಮಿ
ಸಾರೋಪ್ಯ ಪದವಿಯ ಸಾನುರಾಗದಿ ಈಯೋ ರಘುರಾಮವಿಠಲ ||3||
ಹರಿದಾಸರುಗಳು ಶ್ರೀಹರಿಯ ಪಾದಗಳ ಮೇಲೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಈ ಕೃತಿಯು ಶ್ರೀಪಾದರಾಜರ 'ಶ್ರೀ ರಾಮಾ ನಿನ್ನ ಪಾದವ ತೋರೊ' ಎಂಬ ಕೃತಿಯನ್ನೂ ಹೋಲುತ್ತದೆ. ಹಾಗೂ ಕನಕದಾಸರ "ಕೇಶವ ನಾಮದಲ್ಲಿನ 'ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ ಚರಣ ಸ್ಮರಣೆ ಕರುಣಿಸಯ್ಯ'ಎಂಬ ಬಾವ ಕಂಡು ಬರುತ್ತದೆ. ಶ್ರೀಪುರಂದರ ದಾಸರು
ರಾಮನಾಮದ ಮಹತ್ವವನ್ನು ಈ ರೀತಿ ವರ್ಣಿಸಿದ್ದಾರೆ. 'ರಾ' ಎಂಬ ಅಕ್ಷರ ನುಡಿದ ಮಾತ್ರದಿಂದಲೇ ಯಾತನಾಮಯವಾದ ಪಾಪ ಪರಿಹಾರವಾಗುವುದೆಂದೂ, ಇನ್ನು 'ಮ' ಎಂದು ನುಡಿದರೆ ಮಾಡಿದ ಪಾಪಗಳೆಲ್ಲಾ ಹೊರಹೋಗಿ ತನುಮನಗಳನ್ನು ಶುದ್ಧಮಾಡಿ ಪವಿತ್ರಗೋಳಿಸುತ್ತದೆ ಎಂದಿದ್ದಾರೆ.
ರಘುರಾಮವಿಠಲರೂ ಕೂಡ ದೈನ್ಯತಾ ಭಾವದಿಂದ ರಾಮನನ್ನು ಪ್ರಾರ್ಥಿಸುತ್ತಿದ್ದಾರೆ. ಲೌಕಿಕ ವ್ಯಾಪಾರದಿಂದ ಪಾರುಮಾಡಿ ಸಾರೋಪ್ಯ(ನಾಲ್ಕು ವಿಧ ಮುಕ್ತಿಗಳಲ್ಲಿ ಒಂದು) ಪದವಿಯನ್ನು ನೀಡಬೇಕೆಂದೂ ತಮ್ಮ ಆಯುಷ್ಯ ಕ್ಷೀಣಿಸುತ್ತಿದೆ ಎಂಬುದಾಗಿ ರಾಮನಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ನುಡಿಯಲ್ಲಿ ದಾಸರ ಆತ್ಮನಿವೇದನಾ ಭಕ್ತಿಯನ್ನು ಕಾಣಬಹುದು.
2) ಕರೆದರೆ ಧ್ವನಿ ಕೇಳದೇ ರಘುರಾಮಚಂದ್ರಾ
ಮರುಕವಾಗದೆ ನಿನಗೆ ದಶರಥರಾಮಾ ||ಪ||
ಮರುತನಂತೆ ನಿನ್ನಾ ಸೇವಿಸಲಾರೆನು
ಭರತನಂದದಿ ನಿನ್ನಾ ಪೂಜಿಸಲಾರೆನು ||ಅ.ಪ||
ದುರುಳ ರಕ್ಕಸನು ತನ್ನಾ ಶಿಶುವನು ಪಿಡಿದು
ತೋರೋ ಶ್ರೀಹರಿ ಎನಲು
ತರಳ ಪ್ರಹ್ಲಾದನ ಕರುಣ ವಾಕ್ಯವ ಕೇಳಿ
ತ್ವರಿತದಿಂ ಸ್ಥಂಭದಿ ತೋರಲಿಲ್ಲವೇ ದೇವಾ ||1||
ಮಕರಿ ಬಾಧೆಗೆ ಸಿಲುಕಿದಾ ಕರಿರಾಜನು
ಪೊರೆಯೋ ಶ್ರೀಹರಿ ಎನಲು
ಕರಿಯ ಮೊರೆಯ ಕೇಳಿ ತ್ವರಿತದಿಂದಲಿ ಬಂದು
ಕರಿಯನುದ್ಧರಿಸಿದ ಕರಿರಾಜವರದನೇ ||2||
ವಾಮನಮೂರುತಿಯೇ ಬಲಿರಾಜನಾ
ಯಾಗಮಂಟಪವ ಸೇರಿ ಮೂರು ಪಾದಗಳಷ್ಟು
ಭೂಮಿದಾನವ ಬೇಡಿ ಬಲಿಯಮೆಟ್ಟಿದಾ
ಸಿರಿ ರಘುರಾಮವಿಠಲಾನೆ ||3||
ರಘುರಾಮವಿಠಲರು ರಾಮನನ್ನು 'ನಾನು ಕರೆದದ್ದು ನಿನಗೆ ಕೇಳಿಸಲಿಲ್ಲವೇ' ಎಂದಿರುವರು. ಅಂದರೆ ರಾಮನನ್ನು ತನ್ನ ಗೆಳೆಯನೆಂಬ ಭಾವನೆಯಿಂದ (ಸಖ್ಯ ಭಾವದಿಂದ) ಹೇಳಿರುವಂತಿದೆ.
ಅನುಪಲ್ಲವಿಯಲ್ಲಿ, ಹನುಮಂತನಂತೆ ನಿನ್ನನ್ನು ಭಕ್ತಿ ಮಾಡಲಾರೆ. ಹನುಮಂತನಾದರೋ ದಾಸನಂತೆ ರಾಮನನ್ನು ಸೇವಿಸುತ್ತಿದ್ದನು. 'ದಾಸೋಹಂ ಕೋಸಲೇಂದ್ರಸ್ಯ' ಎಂಬಂತೆ ಈಶ-ದಾಸ್ಯ ಎಂಬ ಭಾವವನ್ನು ಮೆರೆದಿದ್ದಾನೆ. ಇನ್ನು ಭರತನಿಗೆ ಮಹಾರಾಜನಾಗುವ ಅವಕಾಶ ದೊರೆತರೂ ಅದನ್ನು ಒಪ್ಪಿಕೊಳ್ಳದೆ
ರಾಮನ ಪಾದುಕೆಯನ್ನೇ ಸಿಂಹಾಸನದಲ್ಲಿಟ್ಟು ಪೂಜಿಸುತ್ತಿದ್ದನು. ಆ ರೀತಿ ನಾನು ಭಕ್ತಿ ಮಾಡಲಾರೆ. ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮೊದಲನುಡಿಯಲ್ಲಿ ಹಿರಣ್ಯ ಕಶಿಪುವು ತನ್ನ ಮಗನ ಹರಿ ಭಕ್ತಿಯನ್ನು ಒಪ್ಪದೆ ತನಗಿಂತ ದೊಡ್ಡ ದೇವರಿಲ್ಲ ಎಂದರಿತು ಮಗನನ್ನೇ ಕೊಲ್ಲಲು ಹವಣಿಸಿದನು. ಆಗ ನರಸಿಂಹ ರೂಪದಿಂದ ಅರಮನೆಯ ಕಂಭ ಒಡೆದು ಬಂದು ಪ್ರಹ್ಲಾದನನ್ನು ರಕ್ಷಿಸಿದೆ. ಗಜೇಂದ್ರನನ್ನು ಮೊಸಳೆಯ ಹಿಡಿತದಿಂದ ರಕ್ಷಿಸಿದೆ. ಶ್ರೀಹರಿಯು ವಾಮನರೂಪದಿಂದ ಬಲಿಯ ಯಾಗಮಂಟಪಕ್ಕೆ ಬಂದು ಮೂರು ಪಾದ ಭೂಮಿಯನ್ನು ಬೇಡಿ ಬಲಿಯನ್ನು ತ್ರಿವಿಕ್ರಮಾವತಾರ ತಾಳಿ ಪಾತಾಳಕೊತ್ತಿದೆ. ಎಂದು ಶ್ರೀರಾಮನ ಕಾರುಣ್ಯವನ್ನು ಬಣ್ಣಿಸಿದ್ದಾರೆ ರಘುರಾಮವಿಠಲರು.
3) ರಾಮಚಿತ್ತ ಎಲ್ಲಾ ರಾಮಚಿತ್ತಾ
ಮರ್ಮವ ತಿಳಿದು ಸತ್ಕರ್ಮಮಾಡುವಗೆಲ್ಲ ||ಪ||
ಮಡದಿ ಮಕ್ಕಳು ಎಲ್ಲಾ ರಾಮಚಿತ್ತ
ಒಡಗೂಡುದವರೆಲ್ಲಾ ರಾಮಚಿತ್ತ
ನಡು ಬಂದ ನೆಂಟರು ರಾಮಚಿತ್ತಾ
ಎನ್ನೊಡೆಯನ ಭಜಿಸುವ ಮನುಜರಿಗೆಲ್ಲಾ ||1||
ಜನರು ನಿಂದಿಪುದೆಲ್ಲಾ ರಾಮಚಿತ್ತ
ಜಿನರು ಸ್ತುತಿವುಸುದೆಲ್ಲಾ ರಾಮಚಿತ್ತ
ಜನನ ಮರಣಗಳೆಲ್ಲಾ ರಾಮಚಿತ್ತ
ಪರಮಪಾವನ್ನನ ಭಜಿಸುವವಗೆ ||2||
ಬಡತನ ಬಪ್ಪುದು ರಾಮಚಿತ್ತ
ಸಿರಿತನ ಬಪ್ಪುದು ರಾಮಚಿತ್ತ
ಸ್ಥಿರದಿಂದ ರಘುರಾಮವಿಠಲನ ಭಜಿಸುವ
ಪರಮ ಭಾಗವತರ ಸ್ಮರಣೆ ಮಾಡುವುದೆಲ್ಲಾ ||3||
'ತೇನವಿನ ತೃಣಮಪಿ ನ ಚಲತಿ' ಎಂಬಂತೆ ನರಚಿತ್ತಕ್ಕೆ ಬಂದರೂ ಹರಿ ಚಿತ್ತಕ್ಕೆ ಬಾರದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗಲಾರದು ಎಂಬುದನ್ನು ಮನವರಿಕೆ ಮಾಡಿಕೊಂಡು ಈ ಮೇಲಿನ ಕೃತಿ ರಚಿಸಿರುವಂತಿದೆ. ದಾಸರು, ಇದನ್ನು ಎಲ್ಲಾ ಶ್ರೀ ಸಾಮಾನ್ಯರೂ ಅರಿತುಕೊಳ್ಳಬೇಕೆಂಬುದೇ ದಾಸರ ಅಭಿಪ್ರಾಯ. ಮದುವೆ, ಮಕ್ಕಳು ಸೋದರ ಸೋದರಿಯರು ಬಂಧು ಬಳಗ ಒಂದು ಗುಂಪಾದರೆ ಜನರು ಪರಸ್ಪರ ಆಡಿಕೊಳ್ಳುವುದು, ನಿಂದಿಸುವುದು. ಎಲ್ಲವನ್ನೂ ಶ್ರೀಹರಿಯೇ ಮಾಡಿಮಾಡಿಸುವನು ಎಂಬುದು ಎಲ್ಲರಿಗೂ ಮನವರಿಕೆಯಾಗಬೇಕು ಎಂಬ ಕಿವಿಮಾತು ಹೇಳಿರುವಂತಿದೆ. ಶ್ರೀ ಪುರಂದರದಾಸರೂ 'ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ |ನರ ಚಿತ್ತಕೆ ಬಂದರೂ ಹರಿಚಿತ್ತ ಸತ್ಯ' ಎಂದಿರುವರು. ಹಾಗೆಯೇ ಶ್ರೀಜಗನ್ನಾಥ ದಾಸರೂ
ಮಾರಮಣನವರವರ ಯೋಗ್ಯತೆ
ಮೀರದಲೆ ಗುಣಕರ್ಮಗಳ ಅನು
ಸಾರ ನಡೆಸುವ ದೇವನಿಗೆ ವೈಷಮ್ಯವೆಲ್ಲಿಹುದೋ ||2||
'ಮಾರಮಣ ಲೋಕತ್ರಯದೊಳಿಹ
ಮೂರುವಿಧ ಜೀವರೊಳಗಿದ್ದು ವಿ
ಹಾರ ಮಾಡುವನವರ ಯೋಗ್ಯತೆ ಕರ್ಮವನನುಸರಿಸಿ ||24||
ಪರಮಾತ್ಮನಿಗೆ ಸಾತ್ವಿಕ, ರಾಜಸ, ತಾಮಸ ಗುಣಗಳಲ್ಲಾಗಲಿ, ಮೂರು ಲೋಕಗಳಲ್ಲಿರುವ ಎಲ್ಲಾ ಜೀವಿಗಳಲ್ಲೂ ಬೇಧವಾಗಲಿ, ತಾರತಮ್ಯವಾಗಲಿ ಇಲ್ಲ ಎಂಬುದನ್ನು ಜಗನ್ನಾಥದಾಸರು ಈ ರೀತಿ ನಿರೂಪಿಸಿದ್ದಾರೆ. ಇದನ್ನೇ ರಘುರಾಮ ವಿಠಲರೂ ತಮ್ಮ ಕೀರ್ತನೆಯಲ್ಲಿ ತೋರ್ಪಡಿಸಿದ್ದಾರೆ. ಇದೇ ರೀತಿ ರಾಮದೇವರ ಮೇಲೆ ಇನ್ನೂ ಅನೇಕ ಕೃತಿಗಳನ್ನು ರಘುರಾಮವಿಠಲರು ರಚಿಸಿದ್ದಾರೆ. ಅವರ ರಾಮಭಕ್ತಿ ಮೆಚ್ಚತಕ್ಕದ್ದು.
- ಡಾ|| ಎ. ಕುಮುದ
97319 03752
ಲೇಖಕಿಯ ಸಂಕ್ಷಿಪ್ತ ಪರಿಚಯ
ಡಾ|| ಎ. ಕುಮುದ ಅವರು ಬಾಲ್ಯದಿಂದಲೂ ಮೈಸೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ಬೆಳೆದವರು. ಇವರ ತಂದೆ ದಿ|| ಎಚ್, ಆರ್. ಅನಂತಸ್ವಾಮಿರಾವ್. ತಾಯಿ ದಿ|| ಅಂಬಾಬಾಯಿ. ಇವರು ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲೇ ಮುಗಿಸಿದರು. 1959ರಲ್ಲಿ ಶ್ರೀ ಸಿ. ಎಸ್ .ಗೋವಿಂದರಾವ್ ಅವರೊಡನೆ ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದರು. ನಂತರ ಟಿ ಸಿ ಎಚ್ ತರಬೇತಿ ಪಡೆದು 1966ರಲ್ಲಿ ಚಾಮರಾಜಪೇಟೆಯ ಭಾರತೀಯ ಸಂಸ್ಕೃತಿ ವಿದ್ಯಾಪೀಠದಲ್ಲಿ ಶಿಕ್ಷಕಿಯಾಗಿ 34 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ 2000ದಲ್ಲಿ ನಿವೃತ್ತಿ ಹೊಂದಿದರು. ಇವರ ಸೇವಾ ಅವಧಿಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ನಿವೃತ್ತಿಯಾದ ನಂತರ ಬೆಂಗಳೂರಿನ ವಿಜಯನಗರದ 'ಕರ್ನಾಟಕ ಹರಿದಾಸ ಸೈಂಟಿಫಿಕ್ ಸೆಂಟರ್' ಸಂಸ್ಥೆಯಿಂದ 'ಡಿಪ್ಲೊಮೊ ಇನ್ ಇಂಟಿಗ್ರೆೆಟೆಡ್ ಹರಿದಾಸ ಸಿಸ್ಟಮ್ಸ್'ಎಂಬ ಪದವಿಯನ್ನು ಪಡೆದರು. ಆದರೆ ಅಷ್ಟಕ್ಕೇ ತೃಪ್ತರಾಗದೆ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀ ಶ್ರೀಪಾದರಾಜ ಮಠದವರು ಆಗತಾನೆ ಎನ್.ಐ ವಿ ಎಸ್ ನಲ್ಲಿ ಡಾಕ್ಟರೇಟ್ ಪದವಿಗಾಗಿ ಕರೆ ಮಾಡಿರುವ ವಿಷಯ ತಿಳಿದು ಬಂತು. ಅದರ ಮೂಲಕ 'ಹರಿದಾಸ ಸಾಹಿತ್ಯದಲ್ಲಿ ಮಹಾಲಕ್ಷ್ಮಿಯ ಪರಿಕಲ್ಪನೆ' ಎಂಬ ಪ್ರೌಢ ಪ್ರಬಂಧವನ್ನು ಡಾ||ಅನಂತ ಪದ್ಮನಾಭರಾವ್ ಅವರ ಮಾರ್ಗದರ್ಶನದಲ್ಲಿ ರಚಸಿ 'ಡಾಕ್ಟರೇಟ್' ಪದವಿಯನ್ನು ಪಡೆದರು ಈ ಇಳಿವಯಸ್ಸಿನ ಕುಮುದ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಹಾಗೇ 1993ರಲ್ಲಿ 'ವಾಗ್ದೇವಿ ಮಹಿಳಾ ಸಮಾಜ' ಮತ್ತು 'ವಾಗ್ದೇವಿ ಭಜನಾ ಮಂಡಲಿಯ' ಸಂಸ್ಥಾಪಕ ಅಧ್ಯಕ್ಷಿಣಿಯಾಗಿ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ 'ಮಹಿಳೆ', 'ತಡವಿವಾಹಕ್ಕೆ ಕಾರಣ' ಹಾಗೂ ಕೆಲವು ಸಣ್ಣ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಅಲ್ಲದೆ ಶಿಶು ಗೀತೆಗಳನ್ನೂ ಬರೆದಿದ್ದಾರೆ. ಕೆಲವು ಮಾಸ ಪತ್ರಿಕೆಗಳು ಮತ್ತು ತಿರುಪತಿಯ 'ಸಪ್ತಗಿರಿ' ಮಾಸಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಮೊದಲ ಪುಸ್ತಕ 'ಭಜನ ಕುಸುಮಾವಳಿ' (ಸ್ವರಚಿತ ಕೃತಿಗಳು) ಪದುಮಾಲಯೆ ಸುಧೆ (ಸಂಕಲನ ಹಾಗೂ ಸಂಪಾದನೆ 526 ಲಕ್ಷ್ಮೀ ಕೃತಿಗಳನ್ನೊಳಗೊಂಡಿದೆ) ವಾಣಿ ಭಾರತಿ ಭಜನ ಮಂಜರಿ (ಸಂಕಲನ, ಸಂಪಾದನೆ) ಶಂಕರಾಮೃತ (ಸಂಕಲನ, ಸಂಪಾದನೆ) ಕೃಪಾನಿಧಿ ರಾಮಭಜನಾಮೃತ (ಸಿ.ಎಸ್, ಜಿ ಅವರ ಕೃತಿಗಳ ಸಂಪಾದನೆ) "ಹರಿದಾಸರ ಕೃತಿಗಳಲ್ಲಿ ಆಧ್ಯಾತ್ಮಿಕ ಚಿಂತನೆ" (ಈಗ ಬಿಡುಗಡೆಯಾಗುತ್ತಿದೆ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ