-ವೀಣಾ ರಮೇಶ್, ಮರವಂತೆ
ಶ್ರೀರಾಮ ಅಂದ ತಕ್ಷಣ ನಮ್ಮ ಮನಸ್ಸಲ್ಲಿ ಮೂಡುವುದು ಶಾಂತ ಸ್ವಭಾವದ ಸುಂದರ ಮೂರ್ತ ರೂಪ, ಶ್ರೀರಾಮ ಒಬ್ಬ ದೇವ ಮಹಾಪುರುಷ, ಶ್ರೀ ರಾಮ ಅನ್ನೋದೆ ಒಂದು ಭಗವತ್ ಶಕ್ತಿ, ಸಕಲ ಸಂಪನ್ನ ಗುಣಗಳ ವ್ಯಕ್ತಿತ್ವ ಹೊಂದಿದ ದೈವತ್ವದ ಪರಮ ಪ್ರಭುತ್ವ ಶ್ರೀಮನ್ ನಾರಾಯಣ, ಪ್ರಭು ಶ್ರೀರಾಮ ಅಪರೂಪದ ವ್ಯಕ್ತಿ, ಶ್ರೀರಾಮನ ಆದರ್ಶ ಇಂದಿನ ಸಮಾಜಕ್ಕೆ ಮಾರ್ಗದರ್ಶನ, ಎಲ್ಲದರಲ್ಲೂ ಶ್ರೇಷ್ಠತೆಯನ್ನು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದವನು ಶ್ರೀರಾಮ, ಒಂದು ಕಡೆ ವಾಲ್ಮೀಕಿ ಋಷಿ ಹೇಳುವಂತೆ ಪರಮ ಮಾಧುರ್ಯ ನಮ್ಮ ಶ್ರೀರಾಮ, ಅಂದರೆ ಎಲ್ಲರಿಗೂ ಆನಂದ ತೃಪ್ತಿ ಮತ್ತು ಪ್ರೀತಿಯ ನಿರಂತರ ಮೂಲ. ರಾಮನ ಮಾಧುರ್ಯವನ್ನು ಅಳವಡಿಸಿಕೊಳ್ಳುವುದರಿಂದ ನಿಜವಾದ ಪ್ರೀತಿ, ತ್ಯಾಗ, ಸದ್ಭಾವನೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಶ್ರೀರಾಮನ ಚಾರಿತ್ರ‍್ಯ ಸದಾಚಾರ, ಸಮಚಿತ್ತತೆ, ತ್ಯಾಗ, ಪ್ರತಿಯೊಬ್ಬರ ಪ್ರತಿಭೆ, ಒಳ್ಳೆಯ ಗುಣಗಳನ್ನು ಗುರುತಿಸುವ ಸಾಮರ್ಥ್ಯ, ನೈತಿಕ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಶ್ರೀರಾಮನ ಉದಾತ್ತ ಗುಣಗಳು ಅವನನ್ನು ಎತ್ತರಕ್ಕೆ ಏರಿಸಿವೆ. ತನ್ನ ನಾಯಕತ್ವದಲ್ಲಿ ಧರ್ಮಕ್ಕೆ ಹೆಚ್ಚು ಒತ್ತು ಕೊಟ್ಟು ಎಲ್ಲರನ್ನೂ ಧರ್ಮದ ನೆಲೆಗಟ್ಟಿನಲ್ಲಿ ನೋಡುವುದು ರಾಮನ ಶ್ರೇಷ್ಟ ಗುಣ . "ಧರ್ಮೋ ಹಿ ಪರಮೋ ಲೋಕೇ" ಎನ್ನುವುದು ಶ್ರೀ ರಾಮನ ಆಧಾರ ವಾಕ್ಯ. ಅಂದರೆ ಧರ್ಮವು ಜೀವನದಲ್ಲಿ ಅತ್ಯಂತ ಶ್ರೇಷ್ಟವಾದದ್ದು, ಯಶಸ್ಸಿನ ದಾರಿಯನ್ನು ತೋರುವಲ್ಲಿ ಭಗವಂತನ ಸಾಕ್ಷಾತ್ಕಾರಕ್ಕೆ ಧರ್ಮದ ಹೆಜ್ಜೆಯಲ್ಲಿ ಚಿಂತನೆ ಇದೆ. ಪರಿಹಾರ ಇದೆ.
"ಧರ್ಮೋ ರಕ್ಷತಿ ರಕ್ಷಿತ: ಧರ್ಮವನ್ನು ಪ್ರೀತಿಸುವವನು ಎಲ್ಲಾ ಧರ್ಮವನ್ನು,ಎಲ್ಲಾ ಮತದವರನ್ನು, ತನ್ನೆಲ್ಲಾ ಸಂಕುಲವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಸರ್ವಶಕ್ತನಾದ ರಘುರಾಮ ಭಕ್ತರ ಹೃದಯದಲ್ಲಿ ಅವನ ಪ್ರತಿರೂಪವನ್ನು ಸೃಷ್ಟಿಸಿ, ಪ್ರತಿಷ್ಠಾಪಿಸಿ, ಆಧ್ಯಾತ್ಮದ ಶಕ್ತಿಯ ನಿಜ ಅರಿವನ್ನು ಕೊಟ್ಟು, ಮರ್ಯಾದಾ ಪುರುಷೋತ್ತಮನನ್ನು ಇನ್ನಷ್ಟು ಬೇಕೆಂದು ಭಕ್ತರ ಹೃದಯದೊಳಗೆ ಇಟ್ಟು ಪೂಜಿಸುವಂತೆ ಮಾಡಿದವನು ರಾಮರಾಮ ಜಯರಾಂ. ಶ್ರೀ ರಾಮನ ಹೆಸರು ಉಚ್ಚರಿಸಿದರೆ ಸಾಕು ಅದೆಷ್ಟೋ ಕಷ್ಟಗಳು ನಿವಾರಣೆಯಾಗುತ್ತದಂತೆ, ಅವತಾರ ಪುರುಷ, ಆದರ್ಶ ಪುರುಷ ನಮ್ಮ ಕಲ್ಯಾಣ ರಾಮ. ಎಲ್ಲಿ ಪ್ರೀತಿ, ಕರುಣೆ, ದಯೆ, ಅನುಕಂಪ ಸಕಲ, ಸುಖ ಸಮೃದ್ಧಿಗಳು ಅಕ್ಷಯವಾಗಿ ಆ ರಾಜ್ಯದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ ಸಂಪತ್ತು ಸುಭಿಕ್ಷವಾಗಿ ನೆಲೆಸುತ್ತೋ ಆ ದೇಶ ಶ್ರೀ "ರಾಮ ರಾಜ್ಯ"ವಾಗುತ್ತೆ ಎನ್ನುವುದು ಈಗಲೂ ಜನರ ಮಾತಿನಲ್ಲಿ ನಾವು ಕೇಳಬಹುದು. ಒಂದು ದೇಶ ಅಥವಾ ರಾಜ್ಯ ಸುಭಿಕ್ಷವಾಗಿ ಇರಬೇಕೆಂದರೆ ಅಲ್ಲಿ ರಾಮನ ಆದರ್ಶ ವ್ಯಕ್ತಿತ್ವ, ನಾಯಕತ್ವದ ಗುಣ ಧರ್ಮಗಳನ್ನು ಅಳವಡಿಸಿಕೊಳ್ಳಬೇಕು, ಸತ್ಯ ನ್ಯಾಯ ಮಾರ್ಗದಲ್ಲಿ ಸಾಗಬೇಕು. ಅಲ್ಲದೆ ಶ್ರೀರಾಮ ಮರ್ಯಾದಾ ಪುರುಷೋತ್ತಮನ ಶ್ರೇಷ್ಠ ಗುಣಗಳ ಚಿಂತನೆ ಅಲ್ಲಿದೆ ಎಂದು ಅರ್ಥ.
ಶ್ರೀ ರಾಮ ಧರ್ಮಕ್ಕೆ ಹೆಚ್ಚು ಆದ್ಯತೆ ಹಾಗೂ ಗೌರವ ನೀಡುತ್ತಿದ್ದ, ತನ್ನ ಎಲ್ಲಾ ಪ್ರಜೆಗಳನ್ನು ಧರ್ಮದ ನೆಲೆಗಟ್ಟಿನಲ್ಲಿಯೇ ನೋಡುತ್ತಿದ್ದ, ಭಗವಾನ್ ಶ್ರೀರಾಮ ಸ್ವಾರ್ಥಕ್ಕಾಗಿ ಎಂದಿಗೂ ತನ್ನ ವೈಯಕ್ತಿಕ ಚಿಂತನೆಗಳನ್ನು ತನ್ನ ರಾಜ್ಯ ರಾಜಕೀಯದಲ್ಲಿ ತರಲಿಲ್ಲ. ಎಲ್ಲಿಯೂ ನಿರಂಕುಶ ಪ್ರಭುತ್ವವನ್ನು ಪ್ರಜೆಗಳ ಮೇಲೆ ಹೇರಲಿಲ್ಲ. ಪ್ರಜೆಗಳ ಹಿತ, ಅಹಿತಗಳ ನಡುವೆ ತನ್ನ ರಾಜ್ಯದಲ್ಲಿ ಸಾಮಾನ್ಯ ಪ್ರಜೆಗಳಿಗೂ ಸಕಲ ಸೌಲಭ್ಯವನ್ನು ಒದಗಿಸುವಲ್ಲಿ ಶಕ್ತನಾದ . ಧರ್ಮೋ ರಕ್ಷತಿ ರಕ್ಷಿತ: ಧರ್ಮವನ್ನು ನಾವು ಪ್ರೀತಿಯಿಂದ ಗೌರವಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ ಎನ್ನುವುದು ಶ್ರೀರಾಮನ ರಾಜ್ಯ ರಾಜಾಕಾರಣದಲ್ಲಿ ಇರುವ ಧ್ಯೇಯ ಮಂತ್ರ, ಆದ್ದರಿಂದಲೇ ಶ್ರೀರಾಮ ಸಾರ್ವಭೌಮನಂತೆ ತನ್ನ ನಾಯಕತ್ವದಲ್ಲಿ ಶ್ರೇಷ್ಟತೆ ತಂದುಕೊಂಡು ಪಟ್ಟಾಭಿ ರಾಮನಾದ "ರಾಮಾಯಣ" ಭಾರತೀಯರ ಶ್ರೇಷ್ಠ ಚಿಂತನೆಯ ಮಹಾಕಾವ್ಯ, ಈಗಲೂ ನಮ್ಮ ಹಿರಿಯರ ಮಾತಿನ ಹಿಂದಿರುವ ಮರ್ಮ. ಸುಂದರ, ಹ್ರದಯವಂತ, ಸಹನಾ ಮೂರ್ತಿ ಶ್ರೀರಾಮನನ್ನೇ ಹೆಚ್ಚು ಆದರ್ಶವಾಗಿ ನೋಡುತ್ತಾರೆ. . ಒಬ್ಬ ಪತಿಯಾಗಿ, ಒಬ್ಬ ರಾಜನಾಗಿ, ಒಬ್ಬ ದಾನಿಯಾಗಿ, ಸರಳ ವ್ಯಕ್ತಿಯಾಗಿ ಉನ್ನತ ವ್ಯಕ್ತಿತ್ವದಿಂದಲೇ ಮಹಾಪುರುಷನಾಗಿ ಅವತಾರವೆತ್ತಿದ ಶ್ರೀ ಮಹಾವಿಷ್ಣುವಿನ ಏಳನೇ ಅವತಾರವೇ ಭಗವಾನ್ ಶ್ರೀರಾಮ.
ಭಗವಾನ್ ಶ್ರೀ ರಾಮನ ತ್ಯಾಗ ಬಾವನೆಯಿಂದಲೇ ಇಂದು ಹೆಚ್ಚಾಗಿ ನಾವು ಶ್ರೀ ರಾಮನನ್ನು ಆದರ್ಶನಾಗಿ, ಭಗವತ್ ಶಕ್ತಿಯಾಗಿ ಪ್ರೀತಿಸಲು ಸಾಧ್ಯವಾಯಿತು. ಶ್ರೀರಾಮನಿಗೆ ನಾಳೆಯೇ ಪಟ್ಟಾಭಿಷೇಕದ ಸಮಾರಂಭ ಅಂದರೆ ಶ್ರೀ ರಾಮ ಕಾಡಿಗೆ ಹೋಗುವ ಸಂದರ್ಭ, ತಂದೆಗೆ ಕೊಟ್ಟ ಮಾತನ್ನು ತಾಯಿಗೆ ಕೊಟ್ಟ ವಚನವನ್ನು ಪಾಲಿಸುವ ಸಲುವಾಗಿ ತಮ್ಮ ಭರತನಿಗೆ ಪಟ್ಟ ಕಟ್ಟುವ ಅವಕಾಶವನ್ನು ನೀಡುತ್ತಾನೆ. ಸಿಂಹಾಸನ ಏರಬೇಕಿದ್ದ ರಾಮ, ಅವನ ನಿರ್ಗಮನ ಪ್ರಜೆಗಳ ಹೃದಯದಲ್ಲಿ ನೋವನ್ನೇ ತರಿಸಿತ್ತು. ಸಮಗ್ರ ದೇಶದ ಅಧಿಕಾರವನ್ನು ಯಾರು ಬಿಟ್ಟು ಕೊಡಲಾರರು, ಆದರೆ ಶ್ರೀರಾಮ ಸಂತೋಷದಿಂದ ಬಿಟ್ಟು ಸಿರಿವಂತಿಕೆಯ ವ್ಯಾಮೋಹವನ್ನು ತ್ಯಜಿಸಿ ಕಾಡಿಗೆ ತೆರಳಿದ,ಆಗ ಈ ಮಹಾನ್ ನಾಯಕನನ್ನು ಬೀಳ್ಕೊಡಲು ಈಡಿ ದೇಶವೇ ಅವನ ಹಿಂದೆ ತೆರಳಿತ್ತು, ಸುಖದ ಸುಪ್ಪತ್ತಿಗೆಯಲ್ಲಿ ಪತ್ನಿ ಸೀತೆಯೊಂದಿಗೆ ಇರಬೇಕಾದ ರಾಜಾರಾಮ ಮುಳ್ಳು ಕಂಟಿಗಳ ಮೇಲೆ ಅವನ ಸಹಧರ್ಮಿಣಿ ಸೀತಾ ಮಾತೆಯೂ ಹೆಜ್ಜೆ ಹಾಕಿದಳು .ಒಂದನ್ನು ಪಡೆಯಬೇಕಾದರೆ ಇನ್ನೊಂದು ತ್ಯಾಗ ಮಾಡಲೇ ಬೇಕು ಅದು ಜಗದ ನಿಯಮ, ಆದರೆ ಶ್ರೀರಾಮ ಯಾವ ಆಸೆಗೂ ಬಲಿಯಾಗಲಿಲ್ಲ, ತನ್ನತನವನ್ನು ಎಲ್ಲಿಯೂ ಬಿಟ್ಟು ಕೊಡಲಿಲ್ಲ, ತನ್ನ ಕರ್ತವ್ಯದ ಕಡೆಗೆ ಅವನು ಧೃಡವಾದ ನಂಬಿಕೆಯನ್ನು ಹೊಂದಿದವನು. ರಾಮಾಯಣ ಜೀವನ ಮೌಲ್ಯವನ್ನು ತಿಳಿಸುವ, ಶ್ರೀರಾಮನ ವ್ಯಕ್ತಿತ್ವವನ್ನು ಬಿಂಬಿಸುವ ಜ್ಞಾನದ ಬೆಳಕು., ಹಿಂದೂ ಧರ್ಮದ ಅದೆಷ್ಟೋ ಭಕ್ತರ ಹೃದಯ ಸಿಂಹಾಸನದಲ್ಲಿ ಶ್ರೀರಾಮ ತನ್ನ ವ್ಯಕ್ತಿತ್ವವನ್ನು ಮೆರೆದಿದ್ದಾನೆ. ಶ್ರೀರಾಮ ಒಬ್ಬ ಪರಿಪೂರ್ಣ ನೈತಿಕ, ಸಾಮಾಜಿಕ, ಆಧ್ಯಾತ್ಮಿಕ, ಗುಣಗಳ ವ್ಯಕ್ತಿತ್ವವನ್ನು ಬಿಂಬಿಸುವ ಸರಳ ವ್ಯಕ್ತಿ. .ಹಾಗಿದ್ದ ಮೇಲೆ ನಮ್ಮ ಮಕ್ಕಳಿಗೆ ಶ್ರೀರಾಮನ ಈ ಗುಣಗಳನ್ನು ಯಾಕೆ ತಿಳಿ ಹೇಳಬಾರದು, ದೇಶವನ್ನು ಒಡೆದು ಆಳಿದ ಅದೆಷ್ಟೋ ದೇಶ ಭೃಷ್ಟರನ್ನು ನಮ್ಮ ಚರಿತ್ರೆಯಲ್ಲಿ ತುಂಬಿಸಲಾಗಿದೆ, ರಾಮಾಯಣ, ಮಹಾಭಾರತದಂತ ಮಹಾಕಾವ್ಯಗಳನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತಿದರೆ ಅವರಲ್ಲಿಯೂ ಜೀವನ ಮೌಲ್ಯದ ಪಾಠ ತಿಳಿಸಿ ಕೊಟ್ಟಂತೆ ಆಗುವುದಿಲ್ಲವೇ..? ಅಲ್ಲದೆ ಯಾರಿಗೆ ಗೊತ್ತು ಮುಂದೊಂದು ದಿನ ನಮ್ಮ ಮಕ್ಕಳು ಕೂಡ ಶ್ರೀರಾಮನಂತೆ ನಾಯಕತ್ವದ ಗುಣ ಬೆಳೆಸಿ ಕೊಳ್ಳಬಹುದು..! , ಆದರ್ಶ ಜೀವನವನ್ನು ನಡೆಸಬಹುದು. ಎಲ್ಲರಿಗೂ ಮಾದರಿಯಾಗಿ ರಾಮರಾಜ್ಯವನ್ನೇ ಮತ್ತೆ ಯಾಕೆ ನೋಡುವಂತಾಗಬಾರದು,ಭ್ರಷ್ಟಾಚಾರವೇ ತುಂಬಿದ ಈ ಪ್ರಪಂಚದಲ್ಲಿ.
ನೈತಿಕ ಮೌಲ್ಯಗಳ ಜೊತೆ, ತ್ಯಾಗದ ಮನೋಭಾವ, ಸೇವಾ ಮನೋಭಾವ, ಕರುಣೆ, ಅಲ್ಲದೆ ಯೋಗ ಧ್ಯಾನಗಳಿಂದ ಮನಸ್ಸನ್ನು ಹಿಡಿತದಲ್ಲಿ ಇಟ್ಟು, ವ್ಯಾಮೋಹಗಳನ್ನು ಬಿಟ್ಟು ಅಹಿಂಸೆ, ಸತ್ಯ, ಬ್ರಹ್ಮಚರ್ಯವನ್ನು ಪಾಲಿಸಿದರೆ ನಮ್ಮಲ್ಲಿ ಶ್ರೀರಾಮನ ಗುಣಗಳನ್ನು ತಂದುಕೊಳ್ಳಬಹುದು ..! .
ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ , ರಾಮನನ್ನು ಹೀಗೇ ವಿವರಿಸುತ್ತಾರೆ, ಸತ್ಯದ, ನೈತಿಕತೆಯ ಸಾಕಾರ, ಆದರ್ಶ ಪುತ್ರ, ಆದರ್ಶಪತಿ, ಆದರ್ಶ ಪುರುಷೋತ್ತಮ ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶರಾಜ, ತನ್ನ ನಾಯಕತ್ವದ ಗುಣಗಳಿಂದ ಇಡೀ ದೇಶವನ್ನು ಸುಭಿಕ್ಷ "ರಾಮ ರಾಜ್ಯ"ವನ್ನಾಗಿ ನಿರ್ಮಾಣ ಮಾಡಿದ ಹೆಮ್ಮೆ ಶ್ರೀರಾಮನದು. ಹಾಗಿದ್ದರೆ ನಾವು ಯಾಕೆ ನಾಯಕತ್ವವನ್ನು ವಹಿಸಿ ಕೊಳ್ಳುವಲ್ಲಿ ಸೋಲುತ್ತಿದ್ದೇವೆ.? ನಮ್ಮಲ್ಲಿ ಆ ಭಗವಾನ್ ಶ್ರೀರಾಮನ ಸಾಕಾರ ಗುಣಗಳು ಯಾಕೆ ಸಾಧ್ಯವಾಗುತ್ತಿಲ್ಲ ? ಹೌದು .. ನಮ್ಮಲ್ಲಿ ಆಸೆ, ವ್ಯಾಮೋಹ ಅಧಿಕಾರದ ದಾಹ ಇದೆ, ತ್ಯಾಗ ಮನೋಭಾವನೆಯಿಂದಲೇ, ಮಾತ್ರ ನಿಸ್ವಾರ್ಥ ಸೇವೆ ನೀಡಲು ಸಾಧ್ಯ . ಶಾಂತಿ,ನೆಮ್ಮದಿ, ಪ್ರೀತಿಗಾಗಿ ಬೇರೆಲ್ಲೂ ಹುಡುಕಲು ಸಾಧ್ಯವಿಲ್ಲ ನಮ್ಮ ಕೆಲಸದಲ್ಲಿ, ನಮ್ಮ ಸೇವೆಯಲ್ಲಿ ನಾವು ಕೊಡುವ ಪ್ರೀತಿಯಲ್ಲಿ ಇದೆ.
ಶ್ರೀರಾಮನ ರಾಜಕಾರಣದಲ್ಲಿರುವ ಶ್ರೇಷ್ಟತೆಯನ್ನು ಯಾರಿಗೂ ಹೊಲಿಸಲು ಸಾಧ್ಯವಿಲ್ಲ. "ಪೌರಾನ್ ಸ್ವಜನವತ್ ನಿತ್ಯಂ ಕುಶಲಂ ಪರಿಪೃಚ್ಚತಿ" ದೇಶದ ಪ್ರಜೆಗಳನ್ನು ತನ್ನವರಂತೆ ನೋಡಿಕೊಳ್ಳುವ ರಾಮನ ಗುಣ "ರಾಮಃ ಕಾಲಸ್ಯ ಕಾರಣಂ" ಅಂದರೆ ಎಲ್ಲಾ "ಮಹಾಕಾವ್ಯ"ಗಳಲ್ಲೂ ರಾಮನ ರಾಜಕಾರಣ ಇತಿಹಾಸವಾಗಿದೆ. ಭಗವಾನ್ ಶ್ರೀ ರಾಮನ ಗುಣಗಳನ್ನು ನಾವು ಪಾಲಿಸಿದರೆ ಈ ದೇಶದಲ್ಲಿ ಕೆಟ್ಟ ಅರಾಜಕತೆ ನೆಲೆಸಲು ಸಾಧ್ಯವಿಲ್ಲ, ಅಸಭ್ಯ ಭಾಷೆ, ಸುಳ್ಳುಗಳನ್ನು ಹೇಳದೆ, ಎಂಥ ದಯನೀಯ ಸ್ಥಿತಿಯಲ್ಲಿಯೂ ಕೂಡ ತನ್ನತನವನ್ನು ಬಿಟ್ಟುಕೊಡದೆ ಶ್ರೀರಾಮನ ಹಾಗೆ ತ್ಯಾಗದ ವ್ಯಕ್ತಿಯಾಗಿ ಯಾವ ಮೋಹಗಳಿಗೂ ಬಲಿಯಾಗದೆ, ಬೇರೆಯವರಿಗೆ ನೀಡಿದ, ಮಾಡಿದ ಸಹಾಯ ಎಂದಿಗೂ ಹೇಳಿಕೊಳ್ಳಲಿಲ್ಲ ಶ್ರೀರಾಮ, ತನ್ನ ಶ್ರೇಷ್ಠತೆಯ ಬಗ್ಗೆ ಎಂದಿಗೂ ಯೋಚಿಸಲಿಲ್ಲ, ಜನರ ಕಷ್ಟ ಸುಖದಲ್ಲೂ ಭಾಗಿಯಾಗುತ್ತಾ ಉದಾತ್ತವಾದ ಗುಣಗಳೊಂದಿಗೆ ಇಂದಿಗೂ ರಾಮ ಪತೀತ ಪಾವನ ಸೀತಾರಾಮ. ಬುದ್ಧಿವಂತಿಕೆಯಲ್ಲಿ ಶ್ರೀರಾಮನದು ವೈದಿಕ ಗುರು ಬ್ರಸ್ಪತ್ತಿಗೆ ಸಮಾನ, ನ್ಯಾಯದ ವಿಷಯದಲ್ಲಿ ಭಗವಂತ ಯಮನಿಗೆ ಮತ್ತು ಶೌರ್ಯದ ಶೌರ್ಯದ ವಿಷಯದಲ್ಲಿ ಭಗವಂತ ಇಂದ್ರಿಯನಿಗೆ ಸಮಾನ. ಪಿತ್ರವಾಕ್ಯ ಪರಿಪಾಲಕನಾಗಿ , ತನ್ನ ಸುಖದ ಸುಪ್ಪತ್ತಿಗೆಯನ್ನೇ ನಯವಾಗಿ ತಿರಸ್ಕರಿಸಿ, ತನ್ನವರ ಆಸೆಯಂತೆ , ಎಲ್ಲಾ ಸುಖ ಸಾಮ್ರಾಜ್ಯವನ್ನು ತೊರೆದು ವನವಾಸದ ಹಾದಿಯಲ್ಲಿ ಹೆಂಡತಿಯೊಂದಿಗೆ ಹೆಜ್ಜೆ ಹಾಕಿದ ರಾಮ, ಯಾವ ಭೋಗದ ಆಸೆ ಅವನನ್ನು ಕಾಡಲಿಲ್ಲ. ಈ ಎಲ್ಲಾ ಗುಣಗಳಿಂದಾಗಿ ತನ್ನ ನಾಯಕತ್ವದ ಗುಣಗಳನ್ನು ಹೆಗಲಿಗೇರಿಸಿಕೊಂಡವನು ನಮ್ಮ ರಘುಪತಿ ರಾಜಾರಾಮ .
ನಾಯಕತ್ವದ ಗುಣ ಬರಬೇಕಾದರೆ, ಎಲ್ಲವನ್ನೂ ಸಮಚಿತ್ತದಿಂದ, ಸಮಾನ ಅಭಿರುಚಿಯಿಂದ, ಕಠಿಣ ಸಮಯದಲ್ಲೂ ವೀರೋಚಿತವಾದ ಕ್ಷಾತ್ರ ತೇಜವನ್ನು ಹೊಂದಿ ಸಮುಷ್ಟಿಯಿಂದ, ಸಮಯೋಚಿತ ನಿರ್ಧಾರದಿಂದ, ಮುಂದೆ ಒದಗಬಹುದಾದ ಅನಿಶ್ಚಿತ ಕಷ್ಟ ಸುಖಗಳಿಗೆ ಎದೆಯೊಡ್ಡಿ ನಾಯಕತ್ವವನ್ನು ಮುನ್ನೆಡೆಸಿಕೊಂಡು ಹೋಗಬೇಕು . ಈ ಎಲ್ಲಾ ನಾಯಕತ್ವದ ಲಕ್ಷಣಗಳಿಂದ ನಾವು ಶ್ರೀರಾಮನಂತೆ ಗೆದ್ದು ನಿಲ್ಲಬಹುದು .
-ವೀಣಾ ರಮೇಶ್ , ಮರವಂತೆ
ಹರಿ ಓಂ, 151/152
ಮೈಸೂರು ಬ್ಯಾಂಕ್ ಕಾಲೋನಿ
ಎರಡನೇ ಮುಖ್ಯ ರಸ್ತೆ,
ಸೀತಾ ಸರ್ಕಲ್ ಬೆಂಗಳೂರು , ಬನಶಂಕರಿ ಮೊದಲನೇ ಹಂತ
ಬೆಂಗಳೂರು 560050
ಮೊಬೈಲ್: 63630 30423
ಇಮೇಲ್: sheshaveena@gmail.com
ಲೇಖಕರ ಸಂಕ್ಷಿಪ್ತ ಪರಿಚಯ:
ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ವೀಣಾ ರಮೇಶ್, ಪ್ರಸ್ತುತ ಬೆಂಗಳೂರಿನ ಮೈಸೂರು ಬ್ಯಾಂಕ್ ಕಾಲೋನಿಯ ನಿವಾಸಿ. ವೃತ್ತಿಯಲ್ಲಿ ಯೋಗ ಶಿಕ್ಷಕಿ. ಜತೆಗೆ ಸಾಹಿತ್ಯ ಕೃಷಿಯನ್ನೂ ನಡೆಸಿದ್ದಾರೆ. ಒಂದು ಮುಂಜಾವಿನ ಬೆಳಗು- ಕವನ ಸಂಕಲನ ಪ್ರಕಟಗೊಂಡಿದೆ. ಇತರ ಪ್ರಕಟಿತ ಕೃತಿಗಳು-
1. ಹೊಸ ಬಾಳಿಗೆ ನೀ ಜೊತೆಯಾದೆ (ಕಥಾ ಸಂಕಲನ), 2. ಭುವನ ಮನೋಹರಿ (ಪ್ರಬಂಧಗಳು), 3. ಮೌನ ಮಾತಾದಾಗ (ಪ್ರಬಂಧಗಳು), 4. ನಿನ್ನೊಳಿದೆ ನನ್ನ ಮನಸ್ಸು (ಕಥಾ ಸಂಕಲನ),
ಅಲ್ಲದೆ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಮಂಡ್ಯದ ಕಸ್ತೂರಿ ಸಿರಿಗನ್ನಡ ವೇದಿಕೆ, ರಾಜ್ಯ ಮಟ್ಟದ ಕಾವ್ಯ ಸಮ್ಮೇಳನದಲ್ಲಿ, ಬೆಂಗಳೂರಿನ ಸುಧರ್ಮ ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಕವಿಗೋಷ್ಠಿ, ಕುವೆಂಪು ಕನ್ನಡ ಸಂಘದ ವತಿಯಿಂದ ಕವಿಗೋಷ್ಠಿ, ಸುಧರ್ಮ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಸಾವಿತ್ರಿಬಾಯಿ ಪುಲೆ ಅವರ ವಿಚಾರ ಸಂಕಿರಣದಲ್ಲಿ ಕವಿಗೋಷ್ಠಿ, ಕನ್ನಡ ಸಂಸ್ಕೃತ ಸಾಹಿತ್ಯ ವೇದಿಕೆ ತಾತಗುಣಿ, ಜರಗನಹಳ್ಳಿ ಬೆಂಗಳೂರು ಇವರು ನಡೆಸಿದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ