-ಪ್ರಾಣೇಶ ರಾ ಹರಿದಾಸ
17 ನೇ ಶತಮಾನದಲ್ಲಿ ಬರುವ ಶ್ರೀ ಮಹಿಪತಿದಾಸರ ಮಗ (ಸುತ) ಶ್ರೀ ಕೃಷ್ಣದಾಸರು. ಇವರು ತಂದೆಯಂತೆ ಅಪರೋಕ್ಷ ಜ್ಞಾನಿಗಳು ತಂದೆಯನ್ನೇ ಗುರುವಾಗಿ ಸ್ವೀಕರಿಸಿ ಹರಿದಾಸ ಪಥದಲ್ಲಿ ನಡೆದವರು.
ರಾಮಾಯಣದ ಸಮಗ್ರ ಮಾಹಿತಿಯನ್ನು"ಶ್ರೀ ಭಾವಾರ್ಥ ಸಪ್ತಕಾಂಡ ರಾಮಾಯಣ ಎಂಬ ಧೀರ್ಘ ಕೃತಿಯನ್ನು ರಚಿಸಿದ್ದಾರೆ. ಇದು ಸರಳ ಸುಂದರವಾಗಿ ಸಂಗೀತ ಸಂಯೋಜನೆ ಮಾಡಲು ಬರುತ್ತದೆ. ಈ ದೀರ್ಘ ಕೃತಿ ವಿಶೇಷವೆನೆಂದರೆ ಎಲ್ಲ ಹರಿದಾಸರ ದೀರ್ಘ ಕೃತಿಗಳಿಗಿಂತ ವಿಶಿಷ್ಟತೆ ಹೊಂದಿದೆ. ಇದರಲ್ಲಿ 116 ಪದ್ಯಗಳು, 158 ಶ್ಲೋಕಗಳು, 23 ಸವಾಯಿಗಳು, 3 ಚಾಮರಿಗಳು, 3 ಭಾಮಿನಿ ಷಟ್ಪದಿಗಳು, 2 ಪರಿವರ್ಧನಿಗಳು, ೧ವಾರ್ಧಕ ಷಟ್ಪದಿ, 1 ಉಗಾಭೋಗ, 1 ಮಂಗಳಾಷ್ಟಕ ಒಳಗೊಂಡಿದೆ. ಈ ಕೃತಿಯು ಛಂದೋಬದ್ಧವಾಗಿ ನವರಸಗಳಲ್ಲಿ ಅಷ್ಟ ಭಾವಗಳ ತುಂಬಿ ಪದಗಳ ಲಾಲಿತ್ಯವು ಪ್ರತಿ ಸನ್ನಿವೇಶವು ಕಣ್ಮುಂದೆ ಬರುವಂತೆ ಬರೆದಿದ್ದಾರೆ. ಎಲ್ಲ ಪ್ರಸಂಗಗಳು ಪ್ರಶಂಸನೀಯವಾಗಿ ಮೂಡಿಬ೦ದಿರುತ್ತವೆ.
ರಾಮಾಯಣವು ಕೇವಲ ಸಾಮಾನ್ಯ ಕಥೆಯಲ್ಲ: ತಾತ್ವಿಕ ಮತ್ತು ಭಕ್ತಿಯ ಅಂಶಗಳೊಂದಿಗೆ ಕಥನ ರೂಪದ ಕೀರ್ತನೆ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ. ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತ ಮತ್ತು ರಾವಣನ ಪಾತ್ರಗಳು ಸಾಂಸ್ಕೃತಿಕ ಪ್ರಜ್ಞೆಗೆ ಮೂಲಭೂತ ಪಾಠ ಹೇಳಿ ಕೊಡುತ್ತವೆ.
ಮಹಾಕಾವ್ಯ ರಾಮಾಯಣವನ್ನು ಏಳು ಕಾಂಡಗಳು 1) ಬಾಲ ಕಾಂಡ 2) ಅಯೋಧ್ಯಾ ಕಾಂಡ 3)ಅರಣ್ಯ ಕಾಂಡ 4)ಕಿಷ್ಕಿಂಧಾ ಕಾಂಡ 5)ಸುಂದರ ಕಾಂಡ 6)ಯುದ್ಧ ಕಾಂಡ 7) ಉತ್ತರ ಕಾಂಡ
ಶ್ರೀ ಕೃಷ್ಣದಾಸರು "ಶ್ರೀ ಭಾವಾರ್ಥ ಸಪ್ತಕಾಂಡ ರಚಿಸಬೇಕಾದರೆ ಸಮಸ್ತ ದೇವತಾ ಗುರುಗಳ ಮಂಗಳ ಚರಣವನ್ನು ಸ್ತುತಿಸಿ, ನಿವೇದನೆ ಮಾಡಿಕೊಂಡು ಬಾಲಕಾಂಡದಲ್ಲಿ "ಚಾಮರಿ" ಶೈಲಿಯಲ್ಲಿ ಪದ್ಯ ರಚಿಸಿದ್ದಾರೆ.
ಬಾಲ ಕಾಂಡದ 1)"ಚಾಮರಿ"ಶೈಲಿಯಲ್ಲಿ
ಒಂದು ದಿನದಿ | ಭಕುತಿಯಿಂದಲೀ
ಮುನಿಗೆ ವಂದಿಸಿ | ಕುಶನು ಸಂಧಿಸೀ
ತಂದೆ ರಾಘವಾ | ಚರಿತೆ ಮೋಘವಾ
ಕೇಳಿಸುವುದು | ಕರುಣಿಸುವುದು |1|
ಎಂದು ಕೇಳಲೀ| ಹರುಷದ್ದೇಳಲೀ
ಶಿಷ್ಯ ಬೋಧಕಾ| ಭಿಜ್ಞ ವಾಲ್ಮೀಕಾ
ತಂದು ಸುಂದರ | ಹೃದಯ ಮಂದಿರಾ |
ಮೂರ್ತಿ ರಾಮನಾ | ವಾಪ್ತ ಕಾಮನಾ || 2||
ಆಲಿಸ್ಯೆ ಮಳರು| ಬುದ್ಧಿ ವಿಮಳರು |
ಗುರು ಮಹೀಪತಿlನಂದನ ಸಾರಥಿ ॥
ಲೀಲೆ ಲವ ಕುಶಾ| ಕರ್ನ ಪೀಯೂಷ|
ಭವದ ತಾರಕಾ| ಕಲುಷ ಹಾರಕಾ||3||
ಇದು 3 ನುಡಿ ಇದೆ. ಇದರಲ್ಲಿ ಕುಶನು ತನ್ನ ಗುರುಗಳಾದ ವಾಲ್ಮೀಕಿ ಋಷಿಯಲ್ಲಿ ತನ್ನ ತಂದೆಯಾದ ರಘುವಂಶ ತಿಲಕನಾದ ತಮ್ಮ ತಂದೆ ಶ್ರೀ ರಾಮಚಂದ್ರನ ಚರಿತೆ ಹೇಳಿರಿ ಎಂದು ಕುಶನು ಕೇಳುತ್ತಾನೆ. ಆಗ ಋಷಿಗಳು ಶ್ರೀ ರಾಮನನ್ನು ಧ್ಯಾನಿಸಿ ಹೃದಯ ಮಂಟಪದಲ್ಲಿ ಸ್ಥಾಪಿಸಿ ಹೇಳುತ್ತಾರೆ. ಶ್ರೀರಾಮನ ಕಥೆ ಹೇಳುವುದರಿಂದ ಕೇಳುವುದರಿಂದ ಭವದ ಕ್ಲೇಶ ನಿಶ್ಯೇಷ ಆಗುತ್ತದೆ ಎಂದು ಹೇಳಿದ್ದಾರೆ.
2) "ಉಗಾಭೋಗ" ಶೈಲಿಯಲ್ಲಿ
ಹೊಳೆವ ಜಾವಳದ ಕುಂತಳದಿ ಅಳಿ ಕುಲ ಹಳಿವ ಥಳ ಥಳಿಪ ಮಕುಟ ಅರಳೆಲೆಯ ಪಣಿಯಾ |
ಢಳ ಢಳಿಪ ನಳಿನ ದಳ ನಯನ ನಾಶಿಕ ಸರಳ ನಳ ನಳಿಪ ಗಂಡಸ್ಥಳ ಕೂರ್ಮಗೆಣಿಯಾ ||
ಖಳ ಖಳನೆ ನಗುವ ತುಟಿಯೊಳಗೆ ವಂತ ಝಳ ಝಳಿದ ಕರ್ನ ಕುಂಡಲದ ಮಣಿಯಾ |
ಚಲುಗದ್ದದ ಕಂಬು ಕೊರಳ ಹೃದಯದಿ ಸರಳ ಹುಲಿಯುಗುರು ಪದಕ ಭಳ ಭಳನೆ ಭಾಸುವ ಖಣಿಯಾ ||1||
ಒಟ್ಟಾರೆ ಎರಡು ನುಡಿಯ ಈ ಉಗಾಭೋಗದಲ್ಲಿ ಒಂದನೇ ನುಡಿಯಲ್ಲಿ ಬಾಲ ಶ್ರೀರಾಮನ ಅಂದ ಚಂದಗಳನ್ನು ವರ್ಣಿಸಿದ್ದಾರೆ. ರಾಘವಂಶದ ಮುಕುಟ ಮಣಿ ಎಂದಿದ್ದಾರೆ, ಈ ಉಗಾಭೋಗಗಳಲ್ಲಿ ಅನುಪ್ರಾಸ ಶಬ್ದಗಳನ್ನು ಪ್ರಯೋಗಿಸಿ ವರ್ಣಿಸಿದ್ದಾರೆ.
ಇನ್ನು ಎರಡನೇ ನುಡಿಯಲ್ಲಿ ವೃತ್ತ್ಯನುಪ್ರಾಸವಾಗಿ "ರ" ವ್ಯ೦ಜನ ಉಪಯೋಗಿಸಿ ವರ್ಣಿಸಿದ್ದಾರೆ. ಬಾಲ ಮುದ್ದು ರಾಮನ ಪ್ರತಿಯೊಂದು ಆಭರಣ ಮತ್ತು ಸೌಂದರ್ಯದ ಬಗ್ಗೆ ವರ್ಣಿಸಿದ್ದಾರೆ.
3) ಮಂಗಳಾಷ್ಟಕದಲ್ಲಿ
ಇದೇ ಬಾಲಕಾ೦ಡದಲ್ಲಿ ಸೀತಾಸ್ವಯಂವರ ಗೆದ್ದು ಸೀತಾರಾಮರ ಕಲ್ಯಾಣದ ಮಂಗಳಾಷ್ಟಾಕ ರಚಿಸಿದ್ದಾರೆ. ಇದು 8 ನುಡಿ ಹೊಂದಿದೆ.
"ದಶರಥಾತ್ಮಜನಾದ ರಾಮಜಗದೀ ಜನಕಾತ್ಮಜಾಸೀತೆಯಾ । ಕುಶಲದೀ ನರಲೀಲೆಯಿಂದ ಮೆರೆದಾ ವೈವಾಹ ಸಂಗತಿಯಾ || ಉಸುರಿದಾ ಗುರು ಮಹೀಪತಿಸುತ ಕನ್ನಡಭಾಷೆ ಶ್ಲೋಕಂಗಳಂ | ವಸುಧೀಲಿ ಸ್ಮರಿಸೂವರಿಂಗೆ ಕೊಡುವಾ ರಘುನಾಥ ಜಯಮಂಗಳಂ" ।।8।
ಸೀತಾರಾಮರು ಲಕ್ಷ್ಮಿ ನಾರಾಯಣ ಸ್ವರೂಪರು, ಅನಿಯತ ಪತಿಪತ್ನಿಯರು ಭೂಮಿಯ ಖಳರನು
ಸೆದೆ ಬಡಿಯಲು ನರಲೀಲೆ ತೋರಿಸುತ್ತಾರೆ.
ಹಾಗೇ ಈ ಎಂಟು ನುಡಿಗಳುಳ್ಳ ಮಂಗಳಾಷ್ಟಕ
ಮದುವೆ ಮನೆಯಲ್ಲಿ ಅಕ್ಷತಾರೋಪಣ ಸಮಯದಲ್ಲಿ ಹೇಳುತ್ತಾರೆ.
4) ಪರಿವರ್ಧಿನಿ ಶೈಲಿಯಲ್ಲಿ
ಪರಿ ಪರಿ ಪತ್ರಫಲದ ಶಾಖಂಗಳು ನೆರವಿಗೆ ಉಪಗಾಯಿ ಸಂಡಿಗೆ ಹಪ್ಪಳು | ನೆರದಿಹ ಕೋಶಿಂಬಿರಿಗಳು ನಿಂಬಿಯ ಕೊರದರಗಾಯಿಗಳು | ಪರಡಿ ಶಾವಿಗೆ ಮಾಲತಿ ಮೊದಲಾಗಿಹ | ಪರಮಾನ್ನಂಗಳು ಫೇಣಿಗುಳೋರಿಗೆ | ನೆರೆಮಂಡಿಗೆ ಬೀಸೋರಿಗೆ ಭಕ್ಷದ ಪರವಡಿಸಿದರು |೧
ಸೀತಾರಾಮರ ಕಲ್ಯಾಣದ ವಿವಾಹ ಭೋಜನದ ಬಗ್ಗೆ ವರ್ಣಿಸಿದ್ದಾರೆ. ಇದರಲ್ಲಿ 5 ನುಡಿಗಳಿದ್ದು ಭೋಜನ ಮತ್ತು ತಾ೦ಬೂಲಾದಿಗಳ ವರ್ಣನೆ ಇದೆ.
5) ವಾರ್ಧಿಕ ಷಟ್ಪದಿಯಲ್ಲಿ
ಭೂಮಿಜಾರಮಣ ಶ್ರೀರಾಮ ಲೀಲಾಮೃತವ | ಪ್ರೇಮ ಮಿಸುನಿಯ ಪಾತ್ರೆಯೊಳು ತುಂಬಿತಂದಿಳುಹಿ | ದೀಮಹಿಯೊಳುಸಾಧು ಸಜ್ಜನರುನೋಡಿ ಶ್ರವಣದ್ವಾರದಿಂದ ಸವಿದುl ನೇಮದಿಂ ಮನತೃಪ್ತಿಯಬಡಿಸಿ ನಿಮ್ಮಸುಖ | ದಾಮಹಾದಯದಿಂದ ಸ್ವಾನಂದ ನೀಡುವುದು | ಶ್ರೀಮಹೀಪತಿಕಂದ ಬಿನ್ನವಿಸಿದನು ನಿಮಗ ಕರಮುಗಿದು ಭಾವದಿಂದಾ ॥1॥
ಒಂದೇ ನುಡಿ ಹೊಂದಿದ್ದು, ಶ್ರೀರಾಮ ಲೀಲಾಮೃತ ಹೇಳಿಕೇಳಿದವರಿಗೆ ಮನ ತೃಪ್ತಿಹೊಂದಿ ಸ್ವಾನಂದ ಸುಖ ಅನುಭವಿಸುವರು ಎಂದಿದ್ದಾರೆ.
ಅಯೋಧ್ಯಾ ಕಾಂಡದಲ್ಲಿ "ಸವಾಯಿ ಶೈಲಿ"ಯಲ್ಲಿ
ಒಳಮನಿ ಹೊಕ್ಕು ಸತಿಯನೆಬ್ಬಿಸಿ ಕಂಡನು ಕೈಕೆಯ ದುಗುಡದ ಮೊಗವ |
ಬಲಿದ ವಿಕಾರ ವಿಚಿತ್ರವಿದೇನಲೆ ಸ್ವಾನಂದಕ ವಿಘ್ನವ ಬಗೆವ ||
ತಳವನು ಮಾಡದಿರೇಳು ಸುಗುಣವತಿ ಯೋಗ್ಯವೆ ನಿನಗಿದು ಮನತ್ಯಗವ |
ಸಲಿಸುವೆ ನಿನ್ನಿಷ್ಟಾರ್ಥವ ಹೇಳನೇ ತೆರೆದಳು ಮೆಲ್ಲನೆ ದ್ರಗಯುಗವ | 1
ಇದು ಮೂರು ನುಡಿ ಒಳಗೊಂಡಿದೆ. ಒಟ್ಟಾರೆ ಈ ನುಡಿಯಲ್ಲಿ ಕೈಕೆಯ ವಿಚಿತ್ರ ವಿಕಾರವಾದ ಮಾನಸಿಕ ಸ್ಥಿತಿಯನ್ನು ವರ್ಣಿಸಿದ್ದಾರೆ.
ಅರಣ್ಯಕಾಂಡದಲ್ಲಿ "ಶ್ಲೋಕ"ದ ಶೈಲಿಯಲ್ಲಿ
ಮುಂದ ಕುಂಭಜನಾ ಆಶ್ರಮಕ ಬರಲು ಉಪಚರಿಸಿದ ರಾಮನಾ |
ತಂದು ಕೈಯಲಿ ಕೊಟ್ಟ ಶಕ್ರಧನುವಾ
ವಿಜಯಾರ್ಥಕಿದು ಕಾಮನಾ ||1||
ಬಂದರಿತ್ತಲು ಗೌತಮಿಯ ತಟಕ ಶ್ರೀಪಂಚವಟಿ ಸ್ಥಾನವೀ । ಛಂದದಾಶ್ರಮ ಮಾಡಿ ನಿಲ್ಲೆ ಸತಿಯನುಜರಿಂದ ಬಹುಮಾನದೀ ||2||
ತಿನ್ನುವ ಲಕ್ಷ್ಮಣ ಮುನ್ನವೆ ಫಲಗಳಾಯನುತ ಕೇಳರು ಈರ್ವರು ನುಡಿಗಳಾ | ಜನಪನಾಜ್ಞವ ಇಲ್ಲದೆ ಶುದ್ಧನು ಅನುದಿನಾಹಾರವ ವರ್ಜಿಸಿ ಇದ್ದನು /3
ಈ ಮೂರು ನುಡಿಯ ಶ್ಲೋಕದಲ್ಲಿ ರಾಮನು ಅಯೋಧ್ಯೆ ಬಿಟ್ಟು ಕಾಡಿಗೆ ತೆರಳಿದಾಗ ಕುಂಭಜನಾ ಆಶ್ರಮಕ್ಕೆ ಬಂದಿದ್ದು, ಗೌತಮಿ ತಟದ ಪಂಚವಟಿಯಲ್ಲಿ ಆಶ್ರಮ ಮಾಡಿದ್ದು ಮತ್ತು ಆಹಾರ ತ್ಯಜಿಸಿ ಫಲಗಳನ್ನು ಆಯ್ದು ತಿನ್ನುವುದರ ಬಗ್ಗೆ ಎರಡು ಸಾಲಿನ ಶ್ಲೋಕದ ರೂಪದಲ್ಲಿ ಹೇಳಿದ್ದಾರೆ.
ಕಿಷ್ಕಿಂಧಾ ಕಾಂಡದಲ್ಲಿ "ಭಾಮಿನಿ ಷಟ್ಟದಿ"ಯಲ್ಲಿ
ಸರಸಿಜಾಸನ ನಯನ ತೇಜವ । ಧರಿಸಿ ಜನಿಸಿದ ಋಕ್ಷರಾಜನು ಪರಮ ಮೋಹ ಕುಮಾರ ಬ್ರಹ್ಮನ ಚರಿಸುತೊಂದಿನವಾ |
ಹರಗಿರಿಗೆ ತಾ ಬಂದು ಶಾಪದ | ಸರೋವರದೊಳು ಮುಳುಗೆ ಸತಿಯಾ ॥ ಪರಿಯ ರೂಪವ ಬರಲು ಸುಂದರ ಕನ್ನಿಕೆಯ ಕಂಡು | 1
ಈ ಭಾಮಿನಿ ಷಟ್ಪದಿಯಲ್ಲಿ 6 ನುಡಿಗಳಿದ್ದು ಒಟ್ಟಾರೆ ಸಾರಾಂಶವೆಂದರೆ ಇಲ್ಲಿ ವಾಲಿ ಸುಗ್ರೀವರ ಜನನ ಮತ್ತು ಅಣ್ಣ ತಮ್ಮಂದಿರ ವೈಶಮ್ಯ ಮತ್ತು ರಾಮನು ವಾಲಿಯ ಸಂಹರಿಸಿದ್ದು ಹೇಳಿದ್ದಾರೆ.
"ಸುಂದರಕಾಂಡ"ದಲ್ಲಿ
ಶ್ರೀರಾಮಚರಿತವ ಕೇಳಿ | ಹರುಷದಲೀ ಬಾಳಿ ॥ ಪ
ಇಳಿಯೊಳು ಸುಗ್ರೀವನ ಮನೋರಥವನು । ಸಲಹುತ ಸ್ವಸ್ಥಾನದಲಿಡಲಿ ಬಳಿಕವ ರಘುಪತಿ ಸಾಹ್ಯದ ಸೇವೆಗೆ | ದಳನೆರಹಿದ ಕಿಂಧೆಯಲಿ |1
ನಾ ಆ ಹದಿನೆಂಟು ಪದ್ಮವಾನರ ದಳಪತಿ ಒದಗಿಹನಾಯಕ ಮುಖ್ಯರರಾ | ನಿದಿತದಿ ಹೆಸರವ ಹೇಳುತ್ತ ದೋರಿದ | ಮುದದಲ್ಲಿ ಸಂಗೀವ ನರಸಂಗೆ |2
ಹರುಷದಿ ಸಭೆಯಲ್ಲಿ ಕುಳಿತಿರೆ ರಘುಕುಲ | ವರಮಾತಾಡಿದನೇನಂದು | ಭರದಲಿ ಸುದ್ದಿಯ ತರಿಸಲು | ತೆರಳುವದುಚಿತವು ನೀವೆನಲು | 3
ಈ 13 ನುಡಿಯ ಪದದಲ್ಲಿ ಸುಗ್ರೀವ ಪಟ್ಟಾಭಿಷೇಕ,ಹನುಮಂತನು ಲಂಕೆಯನ್ನು ಹಾರಿ ಸೀತಾದೇವಿ ಅನ್ವೇಷಣೆಗೆ ಹೋಗಿದ್ದು, ಉಂಗುರ ಕೊಟ್ಟಿದ್ದು, ರಾಮನಿಗೆ ಭೇಟಿಯ ಕುಶಲೋಪರಿ ಮಾತುಗಳಾಡಿದ್ದು ಎಲ್ಲವೂ ವರ್ಣಿಸಿದ್ದಾರೆ.
ಯುದ್ಧಕಾಂಡದಲ್ಲಿ "ಸವಾಯಿ"ಯಲ್ಲಿ
ಅಂಬರದಲಿ ದುಂದುಭೆಗಳ ದೇವಕದಂಬವು ಮೊಳಗಿಸೆ ಹರುಷದಲೀ । ತುಂಬಿದ ಕೈಯಲ್ಲಿ ಕುಸುಮದ ಮಳೆಗರೆದಂಬುಜನಾಭನ ಹೊಗಳುತಲೀ ॥ ಪೊಂಬ್ರರಿವಾಣದಿ ಆರತಿಯತ್ತಿ ನಿತಂಬಿನಿಯರು ನಿವಾಳಿಸಲೀ | ಮುಂಬಲಿ ಕುಣಿಯಲು ಗೀತ ಸುನೃತ್ಯದಿದಂಬರವೇನೆಂದು ಬಣ್ಣಿಸಲೀ
ಇದು ಒಂದೇ ನುಡಿ, ಇದರಲ್ಲಿ ಶ್ರೀ ರಾಮನು ಯುದ್ಧದಲ್ಲಿ ರಾವಣನನ್ನು ಸಂಹರಿಸಿ ಜಯಭೇರಿ ಬಾರಿಸಿದಾಗ ಆಕಾಶದಲ್ಲಿ ಪುಷ್ಪ ವೃಷ್ಟಿ ದೇವತೆಗಳು ಹಾರೈಸುತ್ತಾರೆ. ಸುಹಾಸಿನಿಯರು ಆರತಿ ಎತ್ತಿ, ದೃಷ್ಟಿ ನಿವಾಳಿಸಿ ಗೀತೆ ನೃತ್ಯಗಳಿಂದ ಸಂಭ್ರಮಿಸುವದನ್ನು ವರ್ಣಿಸಿದ್ದಾರೆ.
ಉತ್ತರಕಾ೦ಡದಲ್ಲಿ
ಶ್ರೀರಾಮಚಂದ್ರನು ರಾವಣನ ಉತ್ತರಕ್ರಿಯೆ ಮುಗಿಸಿ, ವಿಭೀಷಣನಿಗೆ ಪಟ್ಟಾಭಿಷೇಕ ಮಾಡುತ್ತಾನೆ. ಅಹಿರಾವಣ ಮಹಿರಾವಣರ ಕಥೆಯನ್ನು ಹೇಳಿ ನಂತರ ರಾಜ್ಯ ಪರಿಪಾಲನೆ, ಸೀತೆಗೆ ಕಾಡಿಗೆ ಬಿಟ್ಟದ್ದು ಮುಂದೆ ರಾಮನ ಅವತಾರ ಸಮಾಪ್ತಿ ಬಗ್ಗೆ ಹೇಳಿ ಮುಗಿಸಿದ್ದಾರೆ.
ಶ್ರೀ ಕೃಷ್ಣ ದಾಸರು ರಚಿಸಿದ ಈ ಭಾವಾರ್ಥ ಸಪ್ತ ಕಾಂಡ ರಾಮಾಯಣದಲ್ಲಿ ಎಲ್ಲ ಕಾಂಡಗಳು ಹಾಗೂ ಕೆಲವೊಂದು ಕಾಂಡಗಳಲ್ಲಿ ಸವಾಯಿ, ಪದ, ಶ್ಲೋಕ, ಭಾಮಿನಿ, ವಾರ್ಧಕ, ಪರಿವರ್ಧನಿ, ಚಾಮರಿ ಒಳಗೊಂಡಿದೆ. ಎಲ್ಲ ತರಹದ ಸಂಗೀತ ಮಜಲುಗಳನ್ನು ಉಪಯೋಗಿಸಿಕೊಂಡು ಈ ದೀರ್ಘ ಕೃತಿಯನ್ನು ರಚಿಸಿದ್ದಾರೆ. ಈ ಕೃತಿ ಛಂದೋಬದ್ಧವಾಗಿ ಕೂಡಿದೆ. ಹಲವಾರು ದಾಸರುಗಳು ರಚಿಸಿದ ಕೃತಿಗಳಲ್ಲಿ ಈ ಕೃತಿ ವಿಶಿಷ್ಟ ವಿಭಿನ್ನ ಶೈಲಿಯಿಂದ ಕೂಡಿದೆ.
ಲೇಖಕರ ಸಂಕ್ಷಿಪ್ತ ಪರಿಚಯ:
ಶ್ರೀ ಪ್ರಾಣೇಶ ರಾ ಹರಿದಾಸ. ಶ್ರೀ ಮಹಿಪತಿ ದಾಸರ ವಂಶಸ್ಥರು, ಹವ್ಯಾಸಿ ಬರಹಗಾರರು. ಸಂಪರ್ಕ: 7975391776
ಶಿಕ್ಷಣ :- ಬಿ ಎಸ್ಸಿ, ಬಿ ಎಡ್, ಡಿ ಫಾರ್ಮ್,
ಡಿ. ಬಿ. ಎಂ, ವಿಜಯಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ